“ಸು” ಹಾಗೂ “ಅಸ್” ಶಬ್ದಗಳಿಂದ ಕೂಡಿದ ಶಬ್ದ ಸ್ವಸ್ತಿಕ.”ಸು” ಎಂದರೆ ಶುಭ,ಕಲ್ಯಾಣ ಹಾಗೂ ಮಂಗಳಕರ.”ಅಸ್” ಎಂದರೆ ಅಸ್ತಿತ್ವ.”ಸ್ವಸ್ತಿಕ” ಎಂದರೆ ಮಂಗಳಮಯದಿಂದ ಕೂಡಿದ್ದು.
ನಮ್ಮ ಸಂಸ್ಕೃತಿಯ ಮಂಗಳಕಾರ್ಯಗಳು ಸ್ವಸ್ತಿವಾಚನದ ಮೂಲಕ ಪ್ರಾರಂಭವಾಗುತ್ತವೆ. “ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನ ಪೂಷಾ ವಿಶ್ವದೇವಾಃ | ಸ್ವಸ್ತಿ ನ ಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದದಾತು || (ಮಹಾನ್ ಕೀರ್ತಿಶಾಲಿ ಇಂದ್ರ ನಮಗೆ ಒಳಿತನ್ನು ಮಾಡಲಿ,ಜ್ಞಾನಸ್ವರೂಪ ಪೂಷಾದೇವ ನಮಗೆ ಮಂಗಳವನ್ನುಂಟು ಮಾಡಲಿ,ಭಗವಾನ್ ಗರುಡ ನಮಗೆ ಕಲ್ಯಾಣವನ್ನುಂಟುಮಾಡಲಿ,ಬೃಹಸ್ಪತಿ ದೇವ ನಮ್ಮನ್ನು ರಕ್ಷಿಸಲಿ) ಹೀಗೆ ಸೃಷ್ಟಿಯಲ್ಲಿರುವ ಸಮಸ್ತ ದೇವಾನುದೇವತೆಗಳು ನಮ್ಮನ್ನು ಪೋಷಿಸಲಿ ಎಂದು ಸಾರುತ್ತದೆ ಸ್ವಸ್ತಿ ಸೂಕ್ತ. ಸಹಸ್ರಾರು ವರ್ಷಗಳ ಹಿಂದೆಯೇ ಸ್ವಸ್ತಿಕ ರೂಪವನ್ನು ಕಂಡುಹಿಡಿದವರು ನಮ್ಮ ಋಷಿಮುನಿಗಳು.ಸ್ವಸ್ತಿಕದಲ್ಲಿರುವ ರೇಖೆಗಳು ಏಕಮೇವ ಅದ್ವಿತೀಯ ಬ್ರಹ್ಮನನ್ನು ಪ್ರತಿಪಾದಿಸುತ್ತವೆ.
ನಾಲ್ಕು ಬಿಂದುಗಳು ಭಗವಾನ್ ವಿಷ್ಣುವಿನ ನಾಲ್ಕು ಕೈಗಳನ್ನು ಪ್ರತಿನಿಧಿಸುತ್ತವೆ.ಭಗವಾನ್ ವಿಷ್ಣು ತನ್ನ ನಾಲ್ಕು ಭುಜಗಳಿಂದ ನಾಲ್ಕು ದಿಕ್ಕುಗಳನ್ನು ಸಂರಕ್ಷಿಸುತ್ತಾನೆ.ನಮ್ಮ ಸನಾತನಧರ್ಮದ ಪ್ರತೀಕ ಸ್ವಸ್ತಿಕ.ದೇವಾನುದೇವತೆಗಳ ಶಕ್ತಿ ಹಾಗೂ ಮನುಷ್ಯನ ಮಂಗಳಮಯ ಕಾಮನೆಗಳ ಸಂಗಮವೇ ಸ್ವಸ್ತಿಕ.ಸರ್ವಾಂಗಗಳಲ್ಲೂ ಮಂಗಳಮಯ ತೇಜಸ್ಸನ್ನು ಹೊಂದಿರುವ ಶುಭಕರ ಚಿಹ್ನೆ ಸ್ವಸ್ತಿಕ.
ಅನೇಕ ದೇಶಗಳಲ್ಲಿ ಇಂದಿಗೂ ಸ್ವಸ್ತಿಕವನ್ನು ರಾಜಚಿಹ್ನೆಯಾಗಿ ಅಥವಾ ಮಂಗಲಮಯಚಿಹ್ನೆಯನ್ನಾಗಿ ಗೌರವಿಸಲಾಗುತ್ತಿದೆ.
ಭಾರತೀಯ ಸಂಸ್ಕೃತಿಯಲ್ಲಿ ವಿವಾಹ,ದೀಪಾವಳಿ,ಸರಸ್ವತಿ,ಗಣೇಶ ಪೂಜೆಗಳಲ್ಲಿ,ಗೃಹಪ್ರವೇಶ,ಮಂದಿರಗಳ ಪ್ರವೇಶದ್ವಾರದಲ್ಲಿ,ಹಲವು ಮಂಗಳ ಕಾರ್ಯಗಳಲ್ಲಿ ಸ್ವಸ್ತಿಕಚಿಹ್ನೆಯನ್ನು ಬಳಸಲಾಗುತ್ತದೆ.ಸ್ವಸ್ತಿಕದಿಂದ ಮನೆಯಲ್ಲಿ ಅನ್ನ,ವಸ್ತ್ರ,ವೈಭವಕ್ಕೆಂದೂ ಕೊರತೆ ಬರುವುದಿಲ್ಲವೆಂಬ ನಂಬಿಕೆಯಿದೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು..
ಪ್ರದೀಪ ಹೆಗಡೆ .
No comments:
Post a Comment
If you have any doubts. please let me know...