ವೀರಶೈವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವೀರಶೈವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಾರ್ಚ್ 22, 2025

ವೀರಶೈವ ಧರ್ಮದಲ್ಲಿ ಅಂತಿಮ ಯಾತ್ರೆ

ಅಂತಿಮಯಾತ್ರೆಯಲ್ಲಿ ಆ ನಾಲ್ಕು ಜನ!
ವೀರಶೈವಧರ್ಮದಲ್ಲಿ ವೃಷಭೇಶ್ವರನಿಗೆ ಪ್ರಮುಖ ಸ್ಥಾನವಿದೆ. ವೀರಭದ್ರನಿಂದ "ವೀರಶೈವ" ಪದ ಹುಟ್ಟಿದೆಯೆಂದು, ಅವನೇ ವೀರಶೈವ ಧರ್ಮದ ಸ್ಥಾಪಕನೆಂದು ಕೆಲವರು ಹೇಳುವುದುಂಟು. ಒಂದು ವಿಧದಲ್ಲಿ ಅದು ಸರಿ ಎನಿಸಿದರೂ ವೀರಭದ್ರ ಪ್ರಮಥಗಣಗಳಲ್ಲಿ ಒಬ್ಬ; ಮೊದಲಿಗನಲ್ಲ. ವೃಷಭೇಶ್ವರನೇ ಪ್ರಮಥಗಣಗಳಲ್ಲಿ ಮೊದಲಿಗ; ಪ್ರಮಥಗಣಾಧಿಪತಿ. ಆದ್ದರಿಂದಲೇ  ವೀರಶೈವಧರ್ಮವನ್ನು "ವೃಷಭಧರ್ಮ" ಎಂಬ ಹೆಸರಿನಿಂದಲೂ ಕರೆಯುವುದುಂಟು. ಈ ವೃಷಭೇಶ್ವರನ ಕುರಿತು "ಯಾವುದು ವೀರಶೈವಧರ್ಮಧ್ವಜ?" ಎಂಬ ಶೀರ್ಷಿಕೆಯ ಅಡಿಯಲ್ಲಿ ಹಲವು ವಿಚಾರಗಳನ್ನು ಹಿಂದೊಮ್ಮೆ ತಿಳಿಸಿದ್ದೇವೆ. ಅಂದು ನಮ್ಮ ಜನನ,ಜೀವನ,ಮರಣಗಳಲ್ಲಿ ವೃಷಭನ ಪಾತ್ರ ಏನು ಎಂಬುದನ್ನು ನೋಡಿದ್ದೇವೆ. ಈಗ ಮತ್ತೊಂದು ವಿಚಾರವನ್ನು ನೋಡೋಣ. 

 ವೃಷಭನು "ಶಿವ"ವಾಹಕನಷ್ಟೇ ಅಲ್ಲ, "ಶವ"ವಾಹಕನೂ ಹೌದು. ಅದು ಹೇಗೆ? 

ನಮ್ಮ ಬದುಕು ಹೇಗಿರಬೇಕೆಂದರೆ ನಾವು ಸತ್ತಾಗ ನಮ್ಮ ದೇಹವನ್ನು ನಾಲ್ಕು ಜನ ಪ್ರೀತಿಯಿಂದ ಹೊತ್ತುಕೊಂಡು ಹೋಗುವಂತಿರಬೇಕೇ ವಿನಹ ಎತ್ತಿ ಬಿಸಾಕುವಂತಿರಬಾರದು. ಅಂತಹ ಶಿವಮಯ ಬದುಕು ನಮ್ಮದಾಗಬೇಕು. ವೀರಶೈವಧರ್ಮದಲ್ಲಿ ಲಿಂಗದೀಕ್ಷೆಯನ್ನು ಪಡೆದ ವ್ಯಕ್ತಿ ತನ್ನ ಅಂಗಗುಣಗಳನ್ನು ತ್ಯಜಿಸಿ ಲಿಂಗಗುಣಗಳನ್ನು ಅಳವಡಿಸಿಕೊಳ್ಳಬೇಕಾಗಿರುತ್ತದೆ. ಅವನು ದೇಹವನ್ನು ಕಳಚುವುದರೊಳಗೆ  "ಸರ್ವಾಂಗಲಿಂಗಿ"ಯಾಗಬೇಕು. ಅಂಗ ಲಿಂಗವಾಗಬೇಕು. ಆದ್ದರಿಂದಲೇ ಲಿಂಗವಂತನು ದೇಹ ತೊರೆದಾಗ ಆ ದೇಹಕ್ಕೆ "ಪಾರ್ಥಿವಶರೀರ"ಎಂದು ಕರೆಯುವುದಿಲ್ಲ; "ಲಿಂಗಶರೀರ"ಎಂದು ಕರೆಯುತ್ತಾರೆ. ಇಂತಹ ಲಿಂಗಶರೀರವನ್ನು ಮನೆಯಿಂದ ರುದ್ರಭೂಮಿಗೆ ಒಯ್ಯುವಾಗ  ಯಜಮಾನನು ಲಿಂಗವಂತರಾದ ನಾಲ್ಕು ಜನರನ್ನು ಕರೆದು, ಅವರಿಗೆ ವೃಷಭೇಶ್ವರನ ನಾಲ್ಕು ಹೆಸರುಗಳಿಂದ ಅರ್ಥಾತ್ ಮಹೋಕ್ಷ- ವೃಷಭ- ನಂದೀ-ನಂದಿಕೇಶ್ವರ ಎಂಬ  ಹೆಸರುಗಳಿಂದ ವರಿಸಿ, ವಿಭೂತಿವೀಳ್ಯ, ವಸ್ತ್ರಗಳನ್ನು ಕೊಟ್ಟು "ಲಿಂಗಶರೀರವನ್ನು ಹೊರಲು ಮತ್ತು ಗರ್ತವನ್ನು ಅಗಿಯಲು" ಪ್ರಾರ್ಥಿಸುವನು. ಯಜಮಾನನ ಪ್ರಾರ್ಥನೆಯಂತೆ ವೃಷಭಸ್ವರೂಪರಾದ ಆ ನಾಲ್ಕು ಜನರು "ವೃಷಭನು ಶಿವನನ್ನು ಹೊತ್ತುಕೊಂಡು ಹೋಗುವಂತೆ" ಲಿಂಗಶರೀರವನ್ನು ರುದ್ರಭೂಮಿಗೆ ಒಯ್ಯುತ್ತಾರೆ.

ಜನವರಿ 16, 2025

ಶ್ರೀ ಜಗದ್ಗುರು ಪಂಚಾಚಾರ್ಯರು ಲಿಂಗೋದ್ಭವರು

    ಚತುರ್ಯುಗಗಳಲ್ಲಿಯೂ ಶ್ರೀ ಜಗದಾಚಾರ್ಯರು ಲಿಂಗೋದ್ಭವರಾಗಿಯೇ ಅವತರಿಸಿದರು. ಇವರಲ್ಲಿ ಶ್ರೀ ಜ. ರೇವಣಸಿದ್ಧೇಶ್ವರರು ಕೊನಲುಪಾಕ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರದಿಂದ, ಶ್ರೀ ಜಗದ್ಗುರು ಮರುಳಾರಾಧ್ಯರು ವಟಕ್ಷೇತ್ರ ಶ್ರೀ ಸಿದ್ಧೇಶ್ವರಲಿಂಗದಿಂದ, ಶ್ರೀ ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲ ಮಲ್ಲಿಕಾರ್ಜುನ ಲಿಂಗದಿಂದ, ಶ್ರೀ ಜಗದ್ಗುರು ಏಕೋರಾಮಾರಾಧ್ಯರು ಶ್ರೀ ಹಿಮವತ್ಕೇದಾರ ರಾಮನಾಥಲಿಂಗದಿಂದ ಶ್ರೀ ಜಗದ್ಗುರು ವಿಶ್ವಾರಾಧ್ಯರು ಶ್ರೀ ಕಾಶೀ ವಿಶ್ವೇಶ್ವರ ಲಿಂಗದಿಂದ ಉದ್ಭವಿಸಿದ್ದಲ್ಲದೇ ಆಯಾಯ ಲಿಂಗಗಳಲ್ಲಿಯೇ ಅಡಗಿದರು. 
ಪಂಚತತ್ವ ಹಾಗೂ ಪಂಚಪೀಠಗಳು.
    ಭೂಮಿ, ಜಲ, ಅಗ್ನಿ, ವಾಯು, ಆಕಾಶ ಈ ಪಂಚತತ್ವಗಳಿಂದಲೇ ಮಾನವನನ್ನು ಈಶ್ವರನು ನಿರ್ಮಿಸಿರುವನು. ಮಾನವರ ಉದ್ಧಾರಕ್ಕಾಗಿ ಅವತರಿಸಿದ ಶ್ರೀ ಪಂಚಾಚಾರ್ಯರಿಗೆ ಈ ಪಂಚತತ್ವಗಳೇ ಪಂಚಪೀಠಗಳಾಗಿ ಪರಿಣಮಿಸಿದವು. ಈ ತತ್ವಗಳಲ್ಲಿ ಪೃಥ್ವಿತತ್ವವೇ ರಂಭಾಪುರೀ ವೀರಪೀಠವಾಗಿಯೂ, ಜಲತತ್ವವೇ ಉಜ್ಜಯಿನಿ ಸದ್ಧರ್ಮಪೀಠವಾಗಿಯೂ, ಅಗ್ನಿ ತತ್ವವೇ ಕೇದಾರ ವೈರಾಗ್ಯ ಪೀಠವಾಗಿಯೂ ವಾಯು ತತ್ವವೇ ಶ್ರೀಶೈಲ ಸೂರ್ಯಪೀಠವಾಗಿಯೂ, ಆಕಾಶ ತತ್ವವೇ ಕಾಶೀ ಜ್ಞಾನಪೀಠವಾಗಿಯೂ ಪರಿಣಮಿಸಿವೆ.
    ಆದುದರಿಂದ ಈ ಐದು ತತ್ವಗಳು ಪೀಠಾಚಾರ್ಯರಿಗೆ ಪಂಚಪೀಠಗಳೆನಿಸಿ ಇಂದಿನವರೆಗೂ ಐದು ಭಾಗಗಳಲ್ಲಿ ಸುಶೋಭಿಸುತ್ತಿವೆ. ಇವುಗಳಲ್ಲಿ ವೀರ ಪೀಠವು ರಂಭಾಪುರಿ ಕ್ಷೇತ್ರದಲ್ಲಿಯೂ, ಸದ್ಧರ್ಮ ಪೀಠವು ಉಜ್ಜಯಿನಿ ಕ್ಷೇತ್ರದಲ್ಲಿಯೂ, ಸೂರ್ಯಪೀಠವು ಶ್ರೀಶೈಲ ಕ್ಷೇತ್ರದಲ್ಲಿಯೂ, ವೈರಾಗ್ಯ ಪೀಠವು ಕೇದಾರ ಕ್ಷೇತ್ರದಲ್ಲಿಯೂ, ಜ್ಞಾನ ಪೀಠವು ಕಾಶೀ ಕ್ಷೇತ್ರದಲ್ಲಿಯೂ ವಿರಾಜಮಾನಗಳಾಗಿವೆ. 
ಐದು ಬಗೆಯ ವರ್ತನೆ 
    ಶ್ರೀ ಜಗದ್ಗುರು ಪಂಚಾಚಾರ್ಯರು ಇಹಪರದಲ್ಲಿ ಮನುಷ್ಯನಿಗೆ ಸುಖಶಾಂತಿಯನ್ನು ಕೊಡುವ ಐದು ಬಗೆಯ ವರ್ತನೆಯನ್ನು ಅನುಗ್ರಹಿಸಿರುವರು. ಮಾನವನು ಈ ಐದು ಬಗೆಯ ವರ್ತನೆಗಳಿಂದಲೇ ತನ್ನ ಕಲ್ಯಾಣವನ್ನೇ ಸಾಧಿಸುತ್ತ ಬಂದಿರುವನು. 
    ವೀರವೃತ್ತಿಧಾರ್ಮಿಕ ವರ್ತನೆವೈರಾಗ್ಯಸಮದೃಷ್ಟಿ (ವಿವೇಕ)ಜ್ಞಾನ ಇವೇ ಐದು ಬಗೆಯ ವರ್ತನೆಗಳು. ಇವು ಪೀಠಾಚಾರ್ಯರಿಂದ ದೊರೆಯುವ ದಿವ್ಯ ಪ್ರಸಾದಗಳು ಮತ್ತು ಮುಕ್ತಿಯನ್ನು ಪಡೆಯುವ ಸಾಧನಗಳು.
    ಸದ್ವರ್ತನೆಗೆ ವೀರವೃತ್ತಿ ಬೇಕು. ಆ ವೀರವೃತ್ತಿಯನ್ನು ರಂಭಾಪುರಿ ವೀರ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ರೇಣುಕಾಚಾರ್ಯರಿಂದಲೂ, ಆ ಸದ್ವರ್ತನೆ ನೆಲೆಗೊಳ್ಳಬೇಕಾದರೆ ಧರ್ಮವೃತ್ತಿಬೇಕು ಆ ಧಾರ್ಮಿಕ ವರ್ತನೆಯನ್ನು ಉಜ್ಜಯಿನಿ ಸದ್ಧರ್ಮ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ದಾರುಕಾಚಾರ್ಯರಿಂದಲೂ, ಕ್ಷಣಿಕ ಸುಖಭೋಗಕ್ಕೆ ಮಾರುಹೋಗದೆ ಜಗತ್ತನ್ನು ಶಿವಮಯವಾದದ್ದೆಂದು ತಿಳಿದು ಪರಮಾತ್ಮನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸಲು ವೈರಾಗ್ಯವೃತ್ತಿ ಬೇಕು. ಈ ವೈರಾಗ್ಯ ವೃತ್ತಿಯನ್ನು ಕೇದಾರ ವೈರಾಗ್ಯ ಸಿಂಹಾಸನ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರಿಂದಲೂ, ಈ ಮೂರರ ಪ್ರಭಾವದಿಂದ ವಿವೇಕವುಂಟಾಗಿ ಸೂರ್ಯನಂಥ ಸಮದೃಷ್ಟಿವುಂಟಾಗುವುದು. ಈ ಸಮದೃಷ್ಟಿಯನ್ನು ಶ್ರೀಶೈಲ ಸೂರ್ಯಸಿಂಹಾಸನ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಪಂಡಿತಾರಾಧ್ಯರಿಂದಲೂ, ಮೇಲ್ಕಂಡ ನಾಲ್ಕರ ಪ್ರಭಾವದಿಂದಲೇ ಪರಿಪೂರ್ಣ ಅರಿವು, ದಿವ್ಯ ಜ್ಞಾನವುಂಟಾಗುವುದು ಈ ಜ್ಞಾನವನ್ನು ಶ್ರೀ ಜಗದ್ಗುರು ಕಾಶೀ ಜ್ಞಾನ ಪೀಠಾಧಿಪತಿಗಳಾದ ವಿಶ್ವಾರಾಧ್ಯರಿಂದಲೂ ಪಡೆಯಬೇಕಾಗಿದೆ. ಈ ಐದುಬಗೆಯ ವರ್ತನೆಗಳು ನಮ್ಮಲ್ಲಿ ಸದಾಕಾಲವೂ ಸ್ಥಿರ ಸ್ಥಿರವಾಗಿ ನೆಲಿಸಲೆಂಬ ಸದಾಶಯದಿಂದಲೇ ಪಂಚ ಪೀಠಾಧಿಪತಿಗಳನ್ನು ಜಗದ್ಗುರುಗಳೆಂದು ನಾವು ಆರಾಧಿಸುತ್ತ ಗೌರವಿಸುತ್ತ ಬಂದಿರುವೆವು.
    ಈ ಮಹಾಚಾರ್ಯರ ಗುರುಪೀಠಗಳ ಗುರುಪರಂಪರೆಯು ಕೃತಯುಗದ ಆರಂಭದಿಂದ ಇಂದಿನವರೆಗೂ ಓತಪ್ರೋತವಾಗಿ ಸಾಗಿಬಂದಿರುವುದುಸರ್ವರಿಗೂ ಪ್ರತ್ಯಕ್ಷವೇ ಇದೆ.
    ಶಿವಾಜ್ಞೆಯಂತೆ, ಈ ಪೂಜ್ಯಪಾದರು ಭೂಲೋಕದಲ್ಲಿ ಅವತರಿಸಿ ಭೂಮಂಡಲವನ್ನು ಶಿವಮಯವನ್ನಾಗಿ ಮಾಡಿದವರು ಈ ಮಹಾಚಾರ್ಯರು ನಾಸ್ತಿಕ ಮತಗಳನ್ನು ಖಂಡಿಸುತ್ತ ಶಿವನೇ ಸರ್ವೋತ್ತಮನೆಂದೂ, ಶಿವನಿಗಿಂತ ಶ್ರೇಷ್ಠವಾದ ವಸ್ತು ಈ ಜಗತ್ತಿನಲ್ಲಿ ಬೇರೊಂದಿಲ್ಲವೆಂದೂ, ಈ ಆಗಾಧ ಪ್ರಪಂಚವು ಶಿವನಿಂದಲೇ ಉತ್ಪನ್ನವಾಯಿತೆಂದೂ, ಪ್ರತಿಯೊಬ್ಬರೂ ಶಿವನ ಪೂಜಾ ಧ್ಯಾನಾದಿಗಳಿಂದ ಕೈವಲ್ಯ ಪದವಿಯನ್ನು ಪಡೆಯಬೇಕೆಂದೂ ಬೋಧಿಸುತ್ತ ಜಗತ್ತಿನಲ್ಲಿ ಶಿವಭಕ್ತಿ ಬೀಜವನ್ನು ಬಿತ್ತಿದವರು. ಭರತ ಖಂಡದಲ್ಲಿರುವ ಪ್ರತಿಯೊಂದು ಗ್ರಾಮ ಪಟ್ಟಣಗಳಲ್ಲಿಯ ಶಿವಮಂದಿರಗಳೇ ಕಾಣುತ್ತಿವೆ. ಆದುದರಿಂದಲೇ ಶೃತಿಗಳೂ ಸಹ ಭಸ್ಮವಿಲ್ಲದ ಹಣೆಗೂ, ಶಿವಾಲಯವಿಲ್ಲದ ಗ್ರಾಮಕ್ಕೂ ಧಿಕ್ಕಾರವಿರಲೆಂದು ಸಾರಿರುವವು.
ಮೂ: ಶ್ರೀ ಪಂ, ವಿರೂಪಾಕ್ಷಶಾಸ್ತ್ರಿಗಳು ಆರಾಧ್ಯಮಠ. ಸುಣಕಲ್ಲಬಿದರಿ


ವೀರಶೈವ ಸಿದ್ಧಾಂತದ ನೆಲೆ ಹಾಗೂ ಹಿನ್ನೆಲೆ

       ನಮ್ಮ ಭಾರತ ದೇಶದಲ್ಲಿ ವೇದೋಪನಿಷತ್ತುಗಳ ತರುವಾಯ ಪಡ್ಡದರ್ಶನಗಳು ಜನ್ಮ ತಾಳಿದವು. ಸಾಂಖ್ಯವು ಕಪಿಲ ಮುನಿಯಿಂದಲೂ, ಯೋಗವು ಪತಂಜಲಿಯಿಂದಲೂ, ನ್ಯಾಯವು ಗೌತಮನಿಂದಲೂ, ವೈಶೇಷಿಕವು ಕಣಾದ ಮುನಿಯಿಂದಲೂ, ಪೂರ್ವ ಮೀಮಾಂಸೆಯು ಜೈಮಿನಿಯಿಂದಲೂ, ಉತ್ತರ ಮೀಮಾಂಸೆಯು ವ್ಯಾಸ ಮುನಿಯಿಂದಲೂ ರಚಿತವಾದವು. ಇವುಗಳಲ್ಲಿ ಉತ್ತರ ಮೀಮಾಂಸೆಯನ್ನು ಆಧರಿಸಿ ಅನೇಕ ಆಚಾರ್ಯರು ತಮ್ಮ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಶಂಕರಾಚಾರ್ಯರು ಆದ್ವೈತ ಸಿದ್ಧಾಂತವನ್ನೂ, ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತವನ್ನೂ, ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನೂ ಸ್ಥಾಪಿಸಿದ್ದಾರೆ. ಅಂತೆಯೇ, ಈ ಎಲ್ಲ ಆಚಾರ್ಯರಿಗಿಂತಲೂ ಪೂರ್ವದಲ್ಲಿಯೇ ರೇಣುಕಾದಿ ಪಂಚಾಚಾರ್ಯರು ಶಿವಾದ್ವೈತ ಸಿದ್ಧಾಂತವನ್ನು ಸ್ಥಾಪಿಸಿ, ಆ ತತ್ವವನ್ನು ಪ್ರಚಾರ ಮಾಡಲು ಭಾರತದ ನಾನಾ ಭಾಗಗಳಲ್ಲಿ ಅಂದರೆ ಕೇದಾರ, ಕಾಶೀ, ಉಜ್ಜಯನಿ, ಶ್ರೀಶೈಲ, ರಂಭಾಪುರಿ ಸ್ಥಳಗಳಲ್ಲಿ ಪಂಚ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ನಾಸ್ತಿಕ ಮತವನ್ನು ಖಂಡಿಸಿ, ಅಂದಿನ ಜೀವನದಲ್ಲಿ ಆಸ್ತಿಕ ಭಾವನೆಯನ್ನು ನೆಲೆಗೊಳಿಸಿ ಉದ್ಧರಿಸಿದ್ದಾರೆ. ಈ ಪಂಚ ಮಹಾಪೀಠಗಳೂ, ಆ ಪರಂಪರೆಯ ಮಹಾನ್ ಗುರುಗಳೂ ಇಂದಿಗೂ ಇದ್ದಾರೆ.

    ವೀರಶೈವ ಸಿದ್ಧಾಂತಕ್ಕೆ-ಶಿವಾದ್ವೈತ, ಶಾಂಭವ ಮತ, ಶಕ್ತಿ ವಿಶಿಷ್ಟಾದ್ವೈತ, ಭೇದಾ-ಭೇದ ಮತ, ಸಮನ್ವಯ ದರ್ಶನ ಇತ್ಯಾದಿ ಪಾರಿಭಾಷಿಕ ಶಬ್ದಗಳನ್ನು ಪ್ರಯೋಗಿಸುತ್ತಾರೆ. ವೀರಶೈವ ಮತ ಸ್ಥಾಪನಾಚಾರ್ಯರ ಹಾಗೂ ಅವರ ಸಿದ್ಧಾಂತದ ವಿಷಯವು ಆಗಮಗಳಲ್ಲಿಯೇ ನಮಗೆ ದೊರೆಯುತ್ತದೆ.

    ವೀರಶೈವರಿಗೆ ಆಗಮಗಳೇ ಪ್ರಮಾಣ ಗ್ರಂಥಗಳಾಗಿವೆ. ವಾತುಲಾಗಮ, ಸ್ವಯಂಭುವ, ಸುಪ್ರಭೇದ, ಪರಮೇಶ್ವರ, ವೀರಾಗಮಗಳಲ್ಲಿ ವೀರಶೈವ ಮತವು ಹೃದಯಂಗಮವಾಗಿ ಪ್ರತಿಪಾದಿತವಾಗಿದೆ.

    ವಾತುಲಾಗಮದ ಉತ್ತರ ಭಾಗದಲ್ಲಿ ಷಟಸ್ಥಲ ತತ್ವವು ವಿಸ್ತಾರವಾಗಿ ಪ್ರತಿಪಾದಿಸಲ್ಪಟ್ಟಿದೆ. ಆಗಮಗಳ ಪ್ರಕಾರ, ಸಪ್ತ ಶೈವಗಳಲ್ಲಿ ವೀರಶೈವವೂ ಒಂದಾಗಿದೆ. ಪ್ರಾಚೀನ ಕಾಲದಲ್ಲಿ ಶೈವ ಧರ್ಮದ ಪ್ರಭೇದಗಳಾಗಿದ್ದ ಕಾಳಾಮುಖ, ಲಕುಲೀಶ, ಪಾಶುಪತ ಮೊದಲಾದವುಗಳು ಕಾಲಕ್ರಮದಲ್ಲಿ ವೀರಶೈವದಲ್ಲಿಯೇ ವಿಲೀನವಾದವು. ವೀರಶೈವವು ಶೈವಧರ್ಮದ ಪರಿಪೂರ್ಣ ವಿಕಾಸದ ಫಲವಾಗಿದೆ.

    "ಪರಮೇಶ್ವರನು ವೇದಗಳನ್ನು ಬ್ರಹ್ಮನಿಗೂ ಆ ವೇದಾರ್ಥವನ್ನೇ ಆಗಮರೂಪವಾಗಿ ಪಾರ್ವತೀದೇವಿಗೂ ಉಪದೇಶಿಸಿದ್ದಾನೆ” ಎನ್ನುವ ಮಾತಿನ ಅರ್ಥವು ವೇದಗಳ ವ್ಯಾಖ್ಯಾನವೇ ಆಗಮಗಳು ಎಂದಾಗುತ್ತದೆ. ಅಲ್ಲದೆ ವೇದದಷ್ಟೇ ಆಗಮಗಳೂ ಪೂಜ್ಯವಾದವುಗಳಾಗಿವೆ.

    ವೇದಗಳಲ್ಲಿ ಕಂಡು ಬರುವ ಕೆಲವು ವಿಷಯಗಳು ಆಗಮದಲ್ಲಿಯೂ ಕಂಡು ಬರುತ್ತವೆ. ಉದಾಹರಣೆಗಾಗಿ “ಭೂತೈನ ಪ್ರಮದಿತಂ” “ಅಗ್ನಿರಿತಿ ಭಸ್ಮ'' ಇತ್ಯಾದಿ ಯಜುರಥರ್ವಣ, ಶ್ರುತಿಗಳಲ್ಲಿ ಹೇಳಿದ ವಿಭೂತಿ ರುದ್ರಾಕ್ಷ ಧಾರಣವನ್ನು ಆಗಮಗಳೂ ಪ್ರತಿಪಾದಿಸುತ್ತವೆ. ಯಜುರಾರಣ್ಯದೊಳಗಿನ ಸದ್ಯೋಜಾತಾದಿ ಪಂಚ ಬ್ರಹ್ಮ ಮಂತ್ರಗಳನ್ನು ಕೆಲವು ಶಿವಾಗಮಗಳು ನಿರೂಪಿಸುತ್ತವೆ. ವೇದಗಳಲ್ಲಿ ಬರುವ ವರ್ಣ, ಪದ, ಮಂತ್ರ, ಕಲಾ, ಭುವನ, ತತ್ವರೂಪವಾದ ಷಡತ್ತ್ವಗಳನ್ನು ಕೆಲವು ಆಗಮಗಳು ಪ್ರತಿಪಾದಿಸುತ್ತವೆ. ''ಯಾತೇರುದ್ರಶಿವಾ ತನೂ.... ಪವಿತ್ರಂತೆ....” ಇತ್ಯಾದಿ ಶೃತಿಗಳಲ್ಲಿ ಹೇಳಲ್ಪಟ್ಟ ಶಿವಲಿಂಗ ಧಾರಣವನ್ನೂ ಶೃತಿಗಳಲ್ಲಿ ಉಕ್ತವಾದ ಪಶು-ಪತಿ-ಪಾಶ ಎಂಬ ವಿಷಯಗಳನ್ನೂ ಕ್ರಿಯಾ-ಚರ್ಯಾ-ಯೋಗ-ಜ್ಞಾನವೆಂಬ ನಾಲ್ಕು ಪಾದಗಳನ್ನೂ ಶಿವಾಗಮಗಳು ಪ್ರತಿಪಾದಿಸುತ್ತವೆ. ಶಿವಲಿಂಗ ಪ್ರತಿಷ್ಠಾಪನ-ಅಷ್ಟಾವರಣ ಪಂಚಾಚಾರ-ಷಟಸ್ಥಲ, ಲಿಂಗಾಂಗ ಸಾಮರಸ್ಯಾದಿ ವಿಷಯಗಳನ್ನೂ ಆಗಮಗಳಲ್ಲಿ ಕಾಣುತ್ತೇವೆ. ಆದುದರಿಂದ ವೇದಾಗಮಗಳ ವ್ಯವಹಾರ ಸ್ವಲ್ಪು ಹೆಚ್ಚು ಕಡಿಮೆ ಒಂದೇ ಆಗಿದೆ. ಮಹಾನ್ ಸಂಶೋಧಕರೂ ಪಂಡಿತರೂ ಆದ ಶ್ರೀಮಾನ್ ಶಂ. ಬಾ. ಜೋಷಿ ಅವರು ತಮ್ಮ 'ಶಿವರಹಸ್ಯ' ಗ್ರಂಥದಲ್ಲಿ “ವೇದಗಳಲ್ಲಿಯೇ-ವೀರಶೈವ ಧರ್ಮದ ಬೇರುಗಳಿವೆ'' ಎಂದು ಪ್ರತಿಪಾದಿಸಿದ್ದಾರೆ.

    ಹೀಗೆ, ವೇದಾಗಮಗಳ ಹಿನ್ನೆಲೆ ಪಡೆದು ಬಂದ ಸನಾತನ ತತ್ವಗಳನ್ನು ಪಂಚಾಚಾರ್ಯರು ಶಿವಾದ್ವೈತ ಸಿದ್ಧಾಂತದಲ್ಲಿ ನೆಲೆಗೊಳಿಸಿದರು-ಎನ್ನುವ ವಿಷಯವು ನಮಗೆ ದೊರೆತ ಭಾಷ್ಯಗಳಿಂದ ಚನ್ನಾಗಿ ವ್ಯಕ್ತವಾಗುತ್ತದೆ.

    ಶಿವಾದ್ವೈತ ಸಿದ್ಧಾಂತ ಪ್ರತಿಪಾದನೆಗಾಗಿಯೇ ಅಚಾರ್ಯರಿಂದ ಭಾಷ್ಯಗಳು ಬರೆಯಲ್ಪಟ್ಟಿವೆ. 'ರೇಣುಕ ಭಾಷ್ಯ' 'ದಾರುಕ ಭಾಷ್ಯ' 'ಪಂಡಿತಾರಾಧ್ಯ ಭಾಷ್ಯ' 'ವಿಶ್ವಾರಾಧ್ಯ ಭಾಷ್ಯ' 'ವೇದ ಭಾಷ್ಯ' 'ನೀಲಕಂಠ ಭಾಷ್ಯ' 'ಶ್ರೀಕರ ಭಾಷ್ಯ' ಶ್ರುತಿ ಸಾರ ಭಾಷ್ಯಗಳು ಇತ್ಯಾದಿ ಭಾಷ್ಯಗಳಲ್ಲಿ ಶಂಕರ, ಮಧ್ವ, ರಾಮಾನುಜ ಭಾಷ್ಯಗಳಿಗಿಂತ ಪೂರ್ವವೇ ವೀರಶೈವ ಭಾಷ್ಯಗಳು ರಚಿಸಲ್ಪಟ್ಟವು-ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ಪರಮತೀಯರ ದಾಳಿಯಿಂದಲೋ, ನಮ್ಮವರ ಅಸಡ್ಡೆ, ಅಜ್ಞಾನದಿಂದಲೋ, ವೀರಶೈವ ಧರ್ಮದ ದೌರ್ಭಾಗ್ಯದಿಂದಲೋ ಮೇಲ್ಕಂಡ ಎಲ್ಲ ಭಾಷ್ಯಗಳೂ ನಮಗೆ ದೊರೆಯುವದಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ.

    ಶ್ರೀ ಜ. ರೇಣುಕ ಭಗವತ್ಪಾದರಿಂದ ಶಿವಾದ್ವೈತ ಸಿದ್ಧಾಂತದ ಉಪದೇಶವನ್ನು ಪಡೆದವರು ಆಗಸ್ತ್ಯ ಮಹರ್ಷಿಗಳು. ಇವರೇ ಪಟ್ಟದ ಶಿಷ್ಯರು. ಗುರು-ಶಿಷ್ಯರ ಸಂವಾದ ರೂಪದಲ್ಲಿರುವ 'ರೇಣುಕ ಗೀತೆ' ಅಥವಾ 'ಸಿದ್ಧಾಂತ ಶಿಖಾಮಣಿ'ಯು ಶಿವಾದ್ವೈತ ಸಿದ್ಧಾಂತದ ಸಾರ ಸಂಗ್ರಹವಾಗಿದೆ. ಇದು 'ಭಗವದ್ಗೀತೆಗೆ ಸರಿ ಸಮವಾದ ಧರ್ಮ ಗ್ರಂಥವಾಗಿದೆ. ಹಿಂದೂ ಧರ್ಮವನ್ನು ಅರಿಯಲು 'ಭಗವದ್ಗೀತೆ' ಹೇಗೆ ಆಧಾರವೋ ಹಾಗೆ, ವೀರಶೈವ ಧರ್ಮದ ಅಂತರಂಗವನ್ನರಿಯಲು ಸಿದ್ಧಾಂತ ಶಿಖಾಮಣಿ ಒಂದೇ ಸಾಕು. ವೀರಶೈವ ದರ್ಶನವನ್ನು ಕಾವ್ಯರೂಪದಲ್ಲಿ ಕಲಾತ್ಮಕವಾಗಿ ವಿವರಿಸುವ ಏಕೈಕ ಕೃತಿ ಸಿದ್ಧಾಂತ ಶಿಖಾಮಣಿ.

    ಅಗಸ್ಯ ಮಹರ್ಷಿಗಳು ಬ್ರಹ್ಮ ಸೂತ್ರಗಳ ಮೇಲೆ ವೀರಶೈವ ಸಿದ್ಧಾಂತ ಪರವಾಗಿ ವೃತ್ತಿಯನ್ನೂ ಬರೆದಿದ್ದಾರೆ. ಈ ಸೂತ್ರ ವೃತ್ತಿಯು ಕುಂಭಕೋಣದಲ್ಲಿ ಮುದ್ರಣವಾಗಿದೆ. ಈ ಸೂತ್ರ ವೃತ್ತಿಯ ವಿಷಯವಾಗಿ ಶ್ರೀಪತಿ ಪಂಡಿತರು ತಾವು ರಚಿಸಿರುವ ಶ್ರೀಕರ ಭಾಷ್ಯದ ಆರಂಭದಲ್ಲಿ 'ಅಗಸ್ತ್ಯಮುನಿ ಚಂದ್ರೇಣ ಕೃತಾಂ ವೈಯಾಸಿಕೀಂ ಶುಭಾಂ | ಸೂತ್ರ ವೃತ್ತಿಂ ಸಮಾಲೋಕ್ಯ, ಕೃತಂ, ಭಾಷ್ಯಂ ಶಿವಂ ಕರಂ' ಎಂದು ಅಪ್ಪಣೆ ಕೊಡಿಸಿದ್ದಾರೆ. ಅಂದರೆ, ಅಗಸ್ತ್ಯ ಮಹರ್ಷಿಗಳ ಬ್ರಹ್ಮ ಸೂತ್ರ ವೃತ್ತಿಯೇ ತಮ್ಮ ಭಾಷ್ಯಕ್ಕೆ ಆಧಾರವೆಂದು ಅವರ ಅಭಿಪ್ರಾಯ, ಬಸವ ಪಂಡಿತಾರಾಧ್ಯರು ಶಿಕ್ಷಾವಲ್ಲೀ - ಭೃಗುವಲ್ಲೀ ಈ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆಯುವ ಪ್ರಾರಂಭದಲ್ಲಿ "ವೇದವ್ಯಾಸಂ ಸೂತ್ರಕಾರಂ ದೂರ್ವಾಸಂ ವೃತ್ತಿ ಕಾರಕಂ | ಭಾಷ್ಯ ಕೃತ್ ಪಂಡಿತಾರಾಧ್ಯಂ ಪ್ರಪದ್ಯೇ ಪಾಶ ಮುಕ್ತಯೇ ||” ಅಂದರೆ ಬ್ರಹ್ಮ ಸೂತ್ರಗಳನ್ನು ರಚಿಸಿದ ವ್ಯಾಸರನ್ನೂ, ಈ ಸೂತ್ರಗಳಿಗೆ ಭಾಷ್ಯವನ್ನು ಬರೆದ ಪಂಡಿತಾರಾಧ್ಯರನ್ನೂ, ವೃತ್ತಿಯನ್ನು ಬರೆದ ದೂರ್ವಾಸ 'ಮಹರ್ಷಿಗಳನ್ನೂ ಪಾಶಬಂಧ ವಿಮೋಚನೆಗಾಗಿ ಆಶ್ರಯಿಸುತ್ತೇನೆಂದು ಮಂಗಲವನ್ನು ಮಾಡಿದ್ದಾರೆ. ದೂರ್ವಾಸ ಮಹರ್ಷಿಗಳು ವೀರಶೈವ ಸಿದ್ಧಾಂತ ಪರವಾಗಿ ಸೂತ್ರ ವೃತ್ತಿಯನ್ನು ರಚಿಸಿದ್ದಲ್ಲದೆ ಉಪನಿಷತ್ತುಗಳಿಗೂ ಭಾಷ್ಯವನ್ನು ಬರೆದಂತೆ ಕಂಡು ಬರುತ್ತದೆ. ಉಪಮನ್ಯು ಶಿವಾಚಾರ್ಯರು, ಶಿವನ ಡಮರುಗದಿಂದ ಉದಿಸಿದ ಅ. ಇ. ಎಣ್ ಮೊದಲಾದ ಹದಿನಾಲ್ಕು ಸೂತ್ರಗಳ ಮೇಲೆ ಶಿವಾದ್ವೈತ ಸಿದ್ಧಾಂತ ಪರವಾದ ವೃತ್ತಿಯನ್ನು ರಚಿಸಿದ್ದಾರೆ. ಉಪಮನ್ಯು ಶಿವಾಚಾರ್ಯರು "ರಚಿಸಿದ ಶಿವಾದ್ವೈತ ವೃತ್ತಿಗೆ ಶ್ರೀ ನಂದಿಕೇಶ್ವರ ಶಿವಾಚಾರ್ಯರು ಟೀಕೆಯನ್ನು ಬರೆದಿದ್ದಾರೆ. ಈ ಗ್ರಂಥವು 'ನಂದಿಕೇಶ್ವರ ಕಾರಿಕಾ' ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕಾಳಹಸ್ತಿ ಶಿವಾಚಾರ್ಯರು ದಶೋಪನಿಷತ್ತುಗಳ ಮೇಲೆ ಲಿಂಗಧಾರಣ ಪರವಾದ ಭಾಷ್ಯವನ್ನು ರಚಿಸಿದ್ದಾರೆ.

    ಶ್ರೀ ವೆಂಕಟಲಕ್ಷ್ಮಣರಾವ್ ಎಂ.ಎ., ಅವರು ರಚಿಸಿದ 'ಹಿಂದೂದೇಶ ಕಥಾ ಸಂಗ್ರಹ' 'ಹಿಂದೂ ಮಹಾಯುಗ' ಎನ್ನುವ ಗ್ರಂಥದ ೮೨ ನೇ ಪುಟದಲ್ಲಿ ಶಂಕರ, ರಾಮಾನುಜ, ಮಧ್ವರು ರಚಿಸಿದ ಭಾಷ್ಯಗಳಿಗೆ ಪೂರ್ವದಲ್ಲಿ ನೀಲಕಂಠ ಶಿವಾಚಾರ್ಯರು ಹಾಗೂ ವೀರಶೈವ ಪೂರ್ವಾಚಾರರು ಭಾಷ್ಯವನ್ನು ರಚಿಸಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಚತುರ್ವೇದ ಪಾರಂಗತನಾದ ಶಿವಪೂಜಾ ಶಿವಯೋಗೀಂದ್ರರು ಪ್ರಾಚೀನ ವಿದ್ವಾಂಸರು, ತನ್ನ 'ಶ್ರುತಿಸಾರ ಭಾಷ್ಯಂ' ಎಂಬ ಗ್ರಂಥದಲ್ಲಿ ನಾಲ್ಕು ವೇದಗಳಲ್ಲಿನ ೭೫ ಮಹಾಮಂತ್ರಗಳಿಗೆ ವೀರಶೈವ ಸಿದ್ಧಾಂತದ ಪರವಾಗಿ ವ್ಯಾಖ್ಯಾನವನ್ನು ಬರೆದಿದ್ದಾರೆ. ವೀರಶೈವವು ವೇದ ಪ್ರತಿಪಾದಿತವೆಂದೂ ಸಿದ್ಧಮಾಡಿದ್ದಾರೆ. ನಂದಿಕೇಶ್ವರ ಶಿವಾಚಾರ್ಯರು ತಮ್ಮ ಲಿಂಗಧಾರಣ ಚಂದ್ರಿಕೆ'ಯಲ್ಲಿ ವೇದ, ಆಗಮ, ಪುರಾಣ ಸ್ಮೃತಿಗಳಿಂದ ಆಧಾರ ಪಡೆದು ಲಿಂಗಧಾರಣದ ಪ್ರಾಚೀನತೆ ಹಾಗೂ ಅದರ ಹಿರಿಮೆ-ಗರಿಮೆಗಳನ್ನು ಪ್ರತಿಪಾದಿಸುತ್ತಾರೆ. ಹರದತ್ತಾಚಾರನ “ಚತುರ್ವೇದ ಸಾರ ಸಂಗ್ರಹ” 'ವೀರಶೈವಾನಂದ ಚಂದ್ರಿಕೆ' ಇತ್ಯಾದಿ ಗ್ರಂಥಗಳಲ್ಲೂ ವೀರಶೈವದ ಪ್ರಾಚೀನ ಹಿನ್ನೆಲೆಯನ್ನು ಕಾಣುತ್ತೇವೆ. ಗುಬ್ಬಿ ಮಲ್ಲಣಾರ್ಯನ "ವಾತುಲಾಗಮ" ವೀರಶೈವ ವ್ಯಾಖ್ಯಾನವೂ, ವೃಷಭ ಪಂಡಿತನ 'ಮಹಾನಾರಾಯಣೋಪನಿಷತ್' ಭಾಷ್ಯವೂ, ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಅಲ್ಲದೆ ಸಿದ್ಧಾಂತ ಶಿಖೋಪನಿಷತ್, ವೀರಲೈಂಗ್ಯೋಪನಿಷತ್, ಲಿಂಗಧಾರಣೋಪನಿಷತ್ತುಗಳಲ್ಲಿಯೂ ವೀರಶೈವ ಸಿದ್ಧಾಂತವು ಪ್ರತಿ ಪಾದಿತವಾಗಿದೆ.

    ಅಸಂಖ್ಯಾತ ಋಷಿಗಳು ವೀರಶೈವ ದೀಕ್ಷೆಯನ್ನು ಪಡೆದು ಮೋಕ್ಷಗಾಮಿಗಳಾದರು ಎಂದು ವ್ಯಾಸರು ತಮ್ಮ ಪುರಾಣಗಳಲ್ಲಿ ಹೇಳುತ್ತಾರೆ. ವ್ಯಾಸ - ಮಹರ್ಷಿಗಳು ಕಾಶೀ ಜಗದ್ಗುರು ಪೀಠಾಧಿಪತಿಗಳಾಗಿದ್ದ ಘಂಟಾಕರ್ಣ ಶಿವಾಚಾರ್ಯರಿಂದಲೂ ಧರ್ಮೋಪದೇಶವನ್ನು ಹೊಂದಿದ ವಿಷಯ ಕಾಶೀ ಖಂಡದಲ್ಲಿ ವ್ಯಾಸ ಕಾಶಿಯಲ್ಲಿರುವ ಶಿಲಾ ವಿಗ್ರಹಗಳಿಂದ ಸ್ಪಷ್ಟವಾಗುತ್ತದೆ. ಶಂಕರಾಚಾರ್ಯರು ಶ್ರೀ ರೇಣುಕ ಭಗವತ್ಪಾದರಿಂದ ಚಂದ್ರ ಮೌಳೀಶ್ವರ ಲಿಂಗವನ್ನು ಪಡೆದು ಹಿಮಾಚಲಕ್ಕೆ ಹೋಗಿ ನಿಶ್ಚಲ ಮನಸ್ಕರಾಗಿ, ಶಿವಾರ್ಚನೆ ಮಾಡಿ ಶಿವ ಸಾಯುಜ್ಯವನ್ನು ಪಡೆದ ವಿಷಯ 'ಗುರುವಂಶ ಕಾವ್ಯ', 'ನಾದಚಿಂತಾಮಣಿ', 'ಶಂಕರ ವಿಜಯ'ದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಅಲ್ಲದೆ ಶೃಂಗೇರಿ ಮತ್ತು ರಂಭಾಪುರಿಯ ನಡುವಿನ ಪ್ರದೇಶದಲ್ಲಿ ಶ್ರೀ ರೇಣುಕ ಭಗವತ್ಪಾದರು ಶ್ರೀ ಶಂಕರಾಚಾರರಿಗೆ ಚಂದ್ರಮೌಳೀಶ್ವರ ಲಿಂಗವನ್ನಿತ್ತು ತತ್ತ್ವೋಪದೇಶ ಮಾಡಿದ ಪುಣ್ಯಸ್ಥಾನವೆಂದು ಒಂದು ದೇವಾಲಯದಲ್ಲಿ ಶಾಸನವಿದೆಯೆಂದೂ ಗುರು - ಶಿಷ್ಯ ಭಾವವನ್ನು ಸೂಚಿಸುವ ಎರಡು ಶಿಲಾಮೂರ್ತಿಗಳಿವೆ ಎಂದೂ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ವಿದ್ಯಾರಣ್ಯ ಸ್ವಾಮಿಗಳೂ ರೇಣುಕಾಚಾರ್ಯ ಪರಂಪರೆಯ ಗುರುಗಳಿಂದ ಒಂದು ಶಿವಲಿಂಗವನ್ನು ಪಡೆದರೆಂದು 'ಕೆಳದಿ ನೃಪವಿಜಯ'ದಲ್ಲಿ ಹೇಳಿದೆ. ಹೀಗೆ ಪಂಚಾಚಾರ್ಯರಿಂದ ಪ್ರವರ್ತಕವಾದ ಈ ವೀರಶೈವ ಸಿದ್ಧಾಂತವನ್ನು ಅನೇಕ ಅನ್ಯಮತಾಚಾರ್ಯರೂ ಋಷಿಗಳೂ ಶಿವಶರಣರೂ ಅನುಷ್ಠಾನ ಮಾಡಿ ಧನ್ಯರಾಗಿದ್ದಾರೆ.

    ವೀರಶೈವ ತತ್ವದ ಹಿನ್ನೆಲೆಯನ್ನು ಇನ್ನೂ ವಿವಿಧ ಆಧಾರಗಳಿಂದ ಸ್ಪಷ್ಟಪಡಿಸಬಹುದು. ಉದಾಹರಣೆಗಾಗಿ

ಕಿರಣಾಗಮದಲ್ಲಿ
“ಸ್ಥೂಲಾಂಗೇ ತ್ವಿಷ್ಟಲಿಂಗಂತು ಯೋ ನಧಾರಯತೇ ದ್ವಿಜಃ |”

ವಾತುಲಾಗಮದಲ್ಲಿ
“ಯಃ ಪೂಜಯತಿ ಲಿಂಗಾಂಗ ಧ್ಯಾನ್ಯಾಸಕ್ತ ಧಿಯಂ ದ್ವಿಜಂ ।
ಪುನರ್ಭವೋ ನತಸ್ಯಾಪ್ತಿ ಸತ್ಯಂ ಸತ್ಯಂ ಮಯೋದಿತಂ ||"

ಮನುಸ್ಮೃತಿಯಲ್ಲಿ
“ಶಿವಧ್ಯಾನ ರತೋ ಭೂತ್ವಾ ಶಿವಲಿಂಗಾಂಗ ಸಂಯುತಃ !”

ಗೌತಮ ಸ್ಮೃತಿಯಲ್ಲಿ
“ಮುಖೇ ಮಂತ್ರೋಹೃದಿ ಧ್ಯಾನಂ ಮಸ್ತಕೇ ಲಿಂಗಧಾರಣಂ!”

ಪದ್ಮ ಪುರಾಣದಲ್ಲಿ
“ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿಚ "

ಲಿಂಗಪುರಾಣದಲ್ಲಿ
“ಧಾರಯಂತಿ ಅಲಕಾಗ್ರೇಷು ಶಿವಲಿಂಗಮಹರ್ನಿಶಂ |

ಸ್ಕಾಂದ ಪುರಾಣದಲ್ಲಿ
“ಬ್ರಹ್ಮ ವಿಷ್ಣ್ವಾದಯೋ ದೇವಾ ಮುನಯೋ ಗೌತಮಾದಯಃ |
ಧಾರಯಂತಿ ಸದಾಲಿಂಗಮುತ್ತ ಮಾಂಗೇ ವಿಶೇಷತಃ ||”

ಮಹಾಭಾರತದಲ್ಲಿ
“ಕಿಮಾಹ್ರ ಭಕರತ ಶ್ರೇಷ್ಠಾ ವಿಪ್ರಾಃ ಪಾತ್ರಂ ಸನಾತನಂ |
ಲಿಂಗಿನಂ ಬ್ರಾಹ್ಮಣಂ ಚೈವ ಬ್ರಾಹ್ಮಣಂ ಚಾಪ್ಯಲಿಂಗಿನಂ ||"

ಇತ್ಯಾದಿ

    ವೀರಶೈವ ಸಿದ್ಧಾಂತವನ್ನು ವೇದಾಗಮಗಳ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ದರ್ಶನ ಗ್ರಂಥಗಳಲ್ಲಿ ಶ್ರೀಕರ ಭಾಷ್ಯ, ಕ್ರಿಯಾಸಾರ, ಶಿವಾದ್ವೈತ ಮಂಜರೀ, ಸಿದ್ಧಾಂತ ಶಿಖಾಮಣಿ, ಅನುಭವ ಸೂತ್ರಂ, 'ಲಿಂಗಧಾರಣ ಚಂದ್ರಿಕೆ' 'ಶಿವಾಧಿಕ್ಯ ಶಿಖಾಮಣಿ', 'ವೇದಾಂತ ಸಾರ' ವೀರಶೈವ ಚಿಂತಾಮಣಿ, 'ವೀರಶೈವಾನಂದ ಚಂದ್ರಿಕೆ' 'ಶಿವಾದ್ವೈತ ಪರಿಭಾಷಾ' ಕೇನೋಪನಿಷತ್, ಸಿದ್ಧಾಂತ ಶಿಖೋಪನಿಷತ್ (ಶಾಂಕರೀ ವ್ಯಾಖ್ಯಾ), ಕೈವಲ್ಯೋಪನಿಷತ್ (ಸದಾಶಿವಭಾಷ್ಯ), ಶೃತಿಸಾರ ಭಾಷ್ಯ ಇವುಗಳು ಪ್ರಸಿದ್ಧ ಹಾಗೂ ಪ್ರಮಾಣ ಗ್ರಂಥಗಳಾಗಿವೆ. ಈ ಎಲ್ಲ ಧಾರ್ಮಿಕ ಗ್ರಂಥಗಳನ್ನು ಅಭ್ಯಸಿಸಿದಾಗ ವೀರಶೈವ ಸಿದ್ಧಾಂತದ-ನೆಲೆ-ಹಿನ್ನೆಲೆ ಹಾಗೂ ಅದರ ಬೆಲೆ ಅರಿವಾಗುತ್ತದೆ. ಈ ದಿಶೆಯಲ್ಲಿ ಇನ್ನೂ ಪ್ರಾಮಾಣಿಕ ವಿದ್ವಾಂಸರು ಸಾಕಷ್ಟು ಸಂಶೋಧನೆ ನಡೆಸಬೇಕಾಗಿದೆ.

ಮೂಲ: ಪಂ. ವೇ, ಷಣ್ಮುಖಯ್ಯ ಅಕ್ಕೂರಮಠ,

ಜುಲೈ 12, 2023

ವೀರಶೈವ ಗೋತ್ರ ಪುರುಷ ಶ್ರೀ ವೀರಭದ್ರೇಶ್ವರ

    ಮೂಲತಃ ವೀರಭದ್ರನು ಶಿವಸಂಸ್ಕೃತಿಯ ಮೂಲಪುರುಷ. ಅಂತೆಯೇ ಶಿವನ ಪೂಜಕರೆಲ್ಲರಿಗೂ ಆರಾಧ್ಯ ದೈವ. ಹಾಗೆಯೆ ವೀರಭದ್ರನು ವೀರಶೈವನು. ವೀರಶೈವನೆಂದರೆ ಲಿಂಗಾಯತ. ಲಿಂಗವನ್ನು ಶರೀರದಮೇಲೆ ಧರಿಸಿದವನೇ ವೀರಶೈವ ಲಿಂಗಾಯತ. ಸ್ಕಂದ ಪುರಾಣದಲ್ಲಿ ಜಡೆಯಲ್ಲಿ (ಶಿರದಲ್ಲಿ) ಲಿಂಗವನ್ನು ಧರಿಸಿದವ ವೀರಭದ್ರ ಎಂದು ಹೇಳಿದೆ. ಹರಪ್ಪ ಮೊಹೆಂಜೋದಾರೋದಲ್ಲಿ ಸಿಕ್ಕ ಶಿಲ್ಪದಲ್ಲಿ ಪಶುಪತಿಯ ಪ್ರತಿಮೆ ಇದ್ದು ಅದರ ತಲೆಯಲ್ಲಿ  ಲಿಂಗವಿದೆ. ರಾಘವಾಂಕನು ವೀರಭದ್ರನನ್ನು ‘ನಿಡುಜಡೆ ಮುಡಿ ನಡುನೆತ್ತಿಯ ಲಿಂಗಂ’ ಎಂದು ವರ್ಣಿಸಿದ್ದಾನೆ. ಸ್ಕಂದ ಪುರಾಣದಲ್ಲಿ ‘ಲಿಂಗಾಂಕಿತ ಜಟಾಧರಂ’ ಎಂದು ವರ್ಣಿಸಿದೆ. ಪಶುಪತಿ ಎಂದರೆ ಶಿವ, ರುದ್ರ. ಶಿವನ ಮಾನಸಪುತ್ರ ರುದ್ರನ ಪುತ್ರನಾದ ವೀರಭದ್ರನೂ ಸಿಂಧೂ ಸಂಸ್ಕೃತಿಯ ದ್ರಾವಿಡ ಜನಾಂಗದ ಶ್ರೇಷ್ಠ ಪುರುಷ. ವೀರಭದ್ರನ ಪರಂಪರೆ ಸಂಪ್ರದಾಯಗಳು ಬಹು ಪ್ರಾಚೀನ ಕಾಲದಿಂದಲೇ ನಡೆದುಕೊಂಡು ಬಂದಿರುವುದು ಈ ದೇಶದಲ್ಲಿ ಅಷ್ಟೇ ಅಲ್ಲ ನೇಪಾಳ ಮುಂತಾದ ನೆರೆಯ ರಾಷ್ಟ್ರಗಳಲ್ಲಿಯೂ ಇದೆ. ವೀರಶೈವ ಪಂಚಪೀಠಗಳು ಪ್ರಾಚೀನ ವೀರಭದ್ರ ಸಂಸ್ಕೃತಿಯನ್ನು ಅಳವಡಿಸಿಕೊಂಡು ಇಂದಿಗೂ ಪಾಲಿಸಿಕೊಂಡುಬಂದಿವೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಅಲ್ಲಿ ವೀರಭದ್ರನ ಪೂಜೆಯಿಲ್ಲದೆ ಯಾವ ವಿಶಿಷ್ಟ ಕಾರ್ಯಕ್ರಮಗಳೂ ಜರುಗುವುದಿಲ್ಲ. ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಕೇದಾರ ಪೀಠದ ಜಗದ್ಗುರುಗಳು ಪೀಠಾರೋಹಣ ಮಾಡುವಾಗ ವೀರಭದ್ರನ ಪೂಜೆ ಮಾಡಿಯೇ ಮುಂದಿನ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ವೀರಭದ್ರನನ್ನು ಮನೆ ದೇವರೆಂದು ಅಸಂಖ್ಯಾತ ಭಕ್ತರು ಪೂಜಿಸುತ್ತಾರೆ. ಆದ್ದರಿಂದ ಮನೆಮನೆಗಳಲ್ಲಿಯೂ ಕೂಡ ಯಾವುದೇ ಶುಭಕಾರ್ಯವಿದ್ದರೂ ವೀರಭದ್ರನ ಪೂಜೆ ಆಗಲೇ ಬೇಕು. ಮದುವೆ ಮುನ್ನಾದಿನ ಗುಗ್ಗಳ ಪೂಜೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಸಾಂಪ್ರದಾಯಿಕವಾಗಿ ಇಂದಿಗೂ ತಪ್ಪದೇ ಆಚರಿಸುತ್ತಾರೆ. ಇವೆಲ್ಲವೂ ವೀರಭದ್ರನ ಸಂಸ್ಕೃತಿ ಆಚರಣೆಗಳು ಅನೂಚಾನವಾಗಿ ನಡೆದುಕೊಂಡು ಬಂದುದಕ್ಕೆ ಸಾಕ್ಷಿಯಾಗಿವೆ.

     ವೀರಭದ್ರನ ಉಲ್ಲೇಖ ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಳೆಯ ಕಾಲದಲ್ಲಿ ಮುಳಬಾಗಿಲು ಮುಡಿಯನೂರು ತಾಮ್ರ ಶಾಸನದಲ್ಲಿ ಸಿಗುತ್ತದೆ. ವೀರಶೈವ ಗಣಂಗಳನ್ನು ಮಂಡ್ಯಜಿಲ್ಲೆ ಮರಡೀಪುರ (1280) ಶಾಸನ ಹೆಸರಿಸಿದ್ದು ಅದರಲ್ಲಿ ಪ್ರಾಚೀನ ಕಾಲದ ಬಾಳಾಕ್ಷರ, ಅಕ್ಷರೇಶ್ವರ, ನಂದೀನಾಥ, ನಂದಿ, ಮಹಾಕಾಳ, ಬೃಂಗಿನಾಥ, ಮುಂತಾದ ಗಣಂಗಳ ಸ್ಥಾನದಲ್ಲಿ ವೀರಭದ್ರನನ್ನು ಹೆಸರಿಸಿದ್ದು ವಿಶೇಷವಾಗಿದೆ. ಇದರಿಂದ ವೀರಭದ್ರ ಐತಿಹಾಸಿಕ ವೀರಪುರುಷ ಅಷ್ಟೇ ಅಲ್ಲ, ಅವನು ಗಣಾಚಾರಿ, ವೀರಮಾಹೇಶ್ವರ ಎಂದು ತಿಳಿದುಬರುತ್ತದೆ.  
ವೀರಭದ್ರನ ದಕ್ಷ ಸಂಹಾರ ಪ್ರಸಂಗ ವೀರಭದ್ರನ ಅನೇಕ ಗುಣಗಳನ್ನು ವ್ಯಕ್ತಪಡಿಸುತ್ತದೆ. ತಂದೆ ಮತ್ತು ಹಿರಿಯರ ಆಜ್ಞಾಪಾಲಕನಾಗಿ, ದುಷ್ಟರನ್ನು ತಕ್ಕರೀತಿಯಲ್ಲಿ ದಂಡಿಸಿದ ವೀರನಾಗಿ, ಯುದ್ಧವೀರನಾಗಿ ಜನಾಂಗ ಸಾಮರಸ್ಯಕ್ಕಾಗಿ ಶ್ರಮಿಸಿದ ತಂದೆ ರುದ್ರನ ಕಾರ್ಯವನ್ನು ವಿಫಲ ಮಾಡುತ್ತಿರುವ ಗರ್ವಿಷ್ಠರನ್ನು ಶಿಕ್ಷಿಸಿ ಪಾಠ ಕಲಿಸಿದವನಾಗಿ,  ಯಜ್ಞ ಸಂಸ್ಕೃತಿಯ ವಿನಾಶಕನಾಗಿ, ದಕ್ಷನ ಪತ್ನಿಯ ಮೊರೆಗೆ ಕರುಣೆತೋರಿದ ಕರುಣಾಮೂರ್ತಿಯಾಗಿ, ಶೌರ್ಯ ಮತ್ತು ಶುಭಮಂಗಲಗಳ ಸಾಕಾರಮೂರ್ತಿಯಾಗಿ ಕಂಗೊಳಿಸಿದ್ದಾನೆ. ವೀರ ಮತ್ತು ಭದ್ರ ಎಂಬ ಹೆಸರಿನಲ್ಲಿಯೇ ಈ ಅರ್ಥವಂತಿಕೆ ಅಡಗಿರುವುದನ್ನು ಕಾಣಬಹುದು. ಅನ್ಯಾಯವನ್ನು ಎಂದಿಗೂ ಸಹಿಸಿಕೊಳ್ಳದೆ ಅದನ್ನು ಪ್ರತಿಭಟಿಸಿ “ವೀರ’ತನವನ್ನು ಮೆರೆಯಬೇಕೆಂಬುದು, ಜೊತೆಗೆ “ವೀರ’’ ಗುಣವನ್ನು ಮಂಗಲ’ಕ್ಕಾಗಿ , “ಭದ್ರ”ತೆಗಾಗಿ ಉಪಯೋಗಿಸುವುದೇ “ವೀರ”ತ್ವದ ಸರಿಯಾದ ಲಕ್ಷಣ ಎಂಬುದನ್ನೂ “ವೀರಭದ್ರ” ಎಂಬ ಪದ ಸಾರುತ್ತದೆ.

      ಪ್ರಾಗೈತಿಹಾಸಿಕ ವೀರಭದ್ರನನ್ನು ಅವನ ವೈಶಿಷ್ಟ್ಯವನ್ನು ಕಣ್ಣ ಮುಂದೆ ಕಟ್ಟುವಂತೆ ಅಕ್ಷರಲೋಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹಿಡಿದಿಟ್ಟಿದ್ದರೆ, ಚಿತ್ರ ಪ್ರಪಂಚ ವೈವಿಧ್ಯಮಯವಾದ ಚಿತ್ರವಿಚಿತ್ರವಾಗಿ ಚಿತ್ರಿಸಿದೆ. ಜನಪದರು ತಮ್ಮ ಸಹಜವಾದ ಹಾಡು, ಒಡಪು, ಬಯಲಾಟ, ಮಾಧ್ಯಮಗಳಲ್ಲಿ ಅಷ್ಟೇ ಅಲ್ಲ ನಿತ್ಯಾಚರಣೆಗಳಲ್ಲಿಯೂ ವೀರಭದ್ರ ಸಂಸ್ಕೃತಿಯನ್ನು ಜೀವಂತವಾಗಿ ಇಟ್ಟಿದ್ದಾರೆ. ಕಲಾವಿದರು, ಶಿಲ್ಪಿಗಳು, ಶಾಸನರಚಕರು ವೀರಭದ್ರನನ್ನು ತಮ್ಮದೇ ಆದ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ವೀರಭದ್ರನನ್ನು ಕಂಡರಿಸಿದ್ದಾರೆ. ಇದರಿಂದ ವೀರಭದ್ರನು ಬರೀ ಮೂರ್ತಿಯೆಂದು ಸ್ಥಾವರವೆಂದು ಪೂಜೆಗೊಳ್ಳುವುದಿಲ್ಲ ಜನಮನದ ನಿತ್ಯಬದುಕಿನ ಶಕ್ತಿದೇವನಾಗಿ ಜಂಗಮಸ್ವರೂಪನಾಗಿದ್ದಾನೆ. ಬುಡುಗ-ಬೇಡ ಜಂಗಮರೆಂಬ ಆಂಧ್ರದ ವೀರಶೈವರು ಶ್ರೀ ವೀರಭದ್ರಸ್ವಾಮಿಯ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ. ಇವರು ಜಂಗಂ ಕಥೆಯನ್ನು ಹೇಳುತ್ತಾರೆ. ಶ್ರೀ ವೀರಭದ್ರ ಸಂಪ್ರದಾಯದಲ್ಲಿ ಅಗ್ನಿಕುಂಡ ಮಾಡಿ ಅಗ್ನಿಯನ್ನು ತುಳಿಯುವ ದಕ್ಷಯಜ್ಞ ನಾಶದ ಆಚರಣೆಯನ್ನು ಬುಡುಗ, ಬೇಡಜಂಗಮರು ಈಗಲೂ ಆಂಧ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರು ದೊಡ್ಡದಾದ ಖಡ್ಗವೊಂದನ್ನು ಹಿಡಿದುಕೊಂಡು ದಕ್ಷಯಜ್ಞವನ್ನು ಕೆಡಿಸುವ ವೀರ ಒಡಪುಗಳನ್ನು ಜೋರಾಗಿ ಕೂಗುತ್ತಾ ಚೂಪಾದ ಶೂಲಗಳನ್ನು ನಾಲಿಗೆಯಲ್ಲಿ, ದೇಹದ ಮೇಲೆ ಚುಚ್ಚಿಕೊಳ್ಳುತ್ತಾ ದೊಡ್ಡದಾದ ಅಗ್ನಿಕುಂಡವನ್ನು ಹಾರುತ್ತ ಕುಂಡದ ಆಚೆ ಬದಿಯಲ್ಲಿ ಇಟ್ಟ ದಕ್ಷನ ಮೂರ್ತಿಯನ್ನು ಕತ್ತರಿಸಿ ಹಾಕುತ್ತಾರೆ. ಆಂಧ್ರದ ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಿಲ್ಲೆಗಳಲ್ಲಿ ಈ  ಜಂಗಮರು ವೀರಭದ್ರಾಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಜಂಗಮರು ವೀರಭದ್ರ ಆಚರಣೆಯನ್ನು ಆಚರಿಸುವಾಗ ಹೇಳುವ ಒಡಪುಗಳಲ್ಲಿನ ವಿಷಯ ರಾಚೋಟಿ ವೀರಭದ್ರೇಶನಿಗೆ ಹೆಚ್ಚು ಅನ್ವಯವಾಗುತ್ತವೆ. ಅವರ ಒಡಪುಗಳಲ್ಲಿರುವ “ಸುರರಾತಿಭಂಗಾ”, “ಸೌಜನ್ಯರತ್ನಾಕರಾ”, “ಶ್ಯಾಮ ಮಹಾದಿವ್ಯವೇಷಾ”, “ಭಕ್ತಾಪೋಷಾ”, “ದಯಾವಾರ್ಥಿ” ಎಂಬ ಶಬ್ದಗಳನ್ನು ನೋಡಿದರೆ - ರಾಚೋಟಿ ವೀರಭದ್ರಸ್ವಾಮಿಯ ಸೌಮ್ಯ ರೂಪವನ್ನೇ ವರ್ಣಿಸುತ್ತಿರುವಂತೆ ತೋರುತ್ತದೆ. ಖಡ್ಗವನ್ನು ಹಿಡಿದು ವೀರಾವೇಶದಿಂದ ದಕ್ಷನ ಸಂಹಾರ ಮಾಡಿದರೂ ವೀರೇಶನು ಸೌಮ್ಯನೂ, ಭಕ್ತಾನುಗ್ರಹಿಯೂ ಎಂಬುದನ್ನು ತೋರಿಸುತ್ತಾರೆ. ರಾಚೋಟಿ ಹೊರತಾಗಿ ಅನ್ಯ ಭಾಗಗಳಲ್ಲಿ ವಿಶೇಷವಾಗಿ ವೀರ ರೌದ್ರಾವತಾರವೇ ಹೆಚ್ಚು. ಸೌಮ್ಯ ವೀರೇಶನ ವರ್ಣನೆ ತೀರ ಕಡಿಮೆ. ರಾಚೋಟಿ ವೀರಭದ್ರಸ್ವಾಮಿ ಸಂಪೂರ್ಣಾನಂದ ಪೂರ್ಣನೂ ಸಂತೃಪ್ತಿ ಸಮಾಧಾನ ಶಾಂತ ಚಿತ್ತನೂ ಆಗಿ ಕಂಗೊಳಿಸಿದ್ದಾನೆ. ಯಜ್ಞನಾಶದ ನಂತರ ಸಕಲರಿಗೂ ಸನ್ಮಂಗಳನ್ನು ಉಂಟು ಮಾಡುವುದಕ್ಕಾಗಿ ಭಕ್ತಾನುರಾಗಿ ಸಂಪ್ರೀತಿಯಿಂದ ರಾಚೋಟಿಯಲ್ಲಿ ನೆಲೆಸಿದ್ದು ವಿಶೇಷವಾಗಿದೆ. ಅಂತೆಯೇ ರಾಚೋಟಿ ವೀರಭದ್ರಸ್ವಾಮಿಗೆ ನಾಲ್ಕು ಕೈಗಳಿಲ್ಲ. ಕಾಲು ಮುಂದಿಟ್ಟಿಲ್ಲ. ರುಂಡ ಮಾಲೆಯಿಲ್ಲ. ಕೈಯಲ್ಲಿ ಖಡ್ಗವೊಂದನ್ನು ಬಿಟ್ಟರೆ ತ್ರಿಶೂಲಾದಿ ಅಸ್ತ್ರಗಳು ಇಲ್ಲ. ಅಂತೆಯೆ ದಕ್ಷ ಬ್ರಹ್ಮನು ಕೂಡ ಶ್ರೀ ವೀರಭದ್ರಸ್ವಾಮಿಯ ಕಾಲ ಬಳಿ ಕೆಳಗೆ ಭಕ್ತಿಯಿಂದ ಕುರಿದಲೆಯವನಾಗಿ ಕೈಮುಗಿದು ಕುಳಿತಿದ್ದಾನೆ.
 ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ವೀರಭದ್ರನ ಪ್ರತಿಮೆಯನ್ನೇ ತೆಗೆದುಕೊಂಡರೆ ಅವನು ಬೇರೆ ದೇವರುಗಳಂತೆ ಮೂರ್ತಿಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಖಡ್ಗ ತ್ರಿಶೂಲ ಮುಂತಾದ ಆಯುಧಗಳು, ರುಂಡಮಾಲೆ, ಶಿರದಲ್ಲಿ ವ್ಯಾಳಾಸುರ ಶಿರೋಭೂಷಣ, ಆಭರಣಗಳು, ಇವಲ್ಲದೆ ವೀರಭದ್ರನು ವಿಶಿಷ್ಟರೀತಿಯಲ್ಲಿ ನಿಂತ ಭಂಗಿ, (ಸಾಮಾನ್ಯವಾಗಿ ದೇವರುಗಳು ಕುಳಿತ ಭಂಗಿಯಲ್ಲಿರುತ್ತವೆ ಇಲ್ಲವೆ ನೇರವಾಗಿ ನಿಂತಭಂಗಿಯಲ್ಲಿ ಇರುತ್ತವೆ) ಇವೆಲ್ಲವೂ ವೀರಭದ್ರನ ವೀರಾಗ್ರ ರೀತಿ ಮತ್ತು ಅದ್ಭುತ ಶಕ್ತಿ ಸಂಕೇತಗಳಾಗಿ ತೋರುತ್ತವೆ. ವೀರಭದ್ರನ ಇನ್ನೊಂದು ವಿಶೇಷವೆಂದರೆ ವೀರಗುಣವಷ್ಟೇ ಅಲ್ಲ ಅವನಲ್ಲಿ ಭದ್ರತ್ವ ಅಂದರೆ ರಕ್ಷಣೆಮಾಡುವವನ ಆತ್ಮವಿಶ್ವಾಸ ಮತ್ತು ವೀರತ್ವದಲ್ಲೂ ಶಾಂತತ್ವ ಶುಭತ್ವಗಳ ಸಮ್ಮಿಳಿತವಾಗಿರುವುದು. ಈ ಬಗೆಯ ಬಹು ಅರ್ಥವುಳ್ಳ ಮೂರ್ತಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪರೂಪವೆಂದೇ ಹೇಳಬೇಕು. ಇನ್ನು ತಾಮ್ರ ಬೆಳ್ಳಿ ಬಂಗಾರ ಮುಂತಾದ ಲೋಹಗಳಲ್ಲಿ ವೀರಭದ್ರನನ್ನು ಮೂರ್ತಿಗೊಳಿಸಿ, ಫಲಕಗೊಳಿಸಿ ಮನೆಯ ಜಗುಲಿ, ಮಾಡುಗಳಲ್ಲಿ, ಪುರವಂತರ ಎದೆಯಲ್ಲಿ, ಕೊರಳಿನಲ್ಲಿ, ಪಲ್ಲಕ್ಕಿಯಲ್ಲಿ ಇಟ್ಟು ಪ್ರದರ್ಶಿಸುವ ಪೂಜಿಸುವ ಭಕ್ತರಿಗೂ ಲೆಕ್ಕವಿಲ್ಲ. 

        ವೀರಭದ್ರನ ಒಡಪುಗಳಲ್ಲಿ `ಆಹಾಹಾ ಸರ್ಪಾ' ಎಂಬ ಮಾತು ಬರುತ್ತದೆ. ವೀರಭದ್ರ ಸರ್ಪಕುಲ ಅಂದರೆ ನಾಗಕುಲದವ. ನಾಗರು ದ್ರಾವಿಡ ಪಣಿಯರು. (ಪಣಿ=ಫಣಿ, ನಾಗರಹೆಡೆ) (ವೀರಪಣಿ+ಜ = ವೀರಬಣಿಜರು ಎಂದರೆ ವೀರಬಣಜಿಗರು, ವೀರಬಣಂಜುಗಳು ಪ್ರಾಯಃ ವೀರಭದ್ರನ ನಾಗಕುಲಕ್ಕೆ ಸಂಬಂಧಿಸಿದ ದ್ರಾವಿಡರು. ಶೂರರಾದ ಇವರು ಪರ್ವತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಅಲೆದು ಜನರಿಗೆ ಬೇಕಾದ ವಸ್ತುಗಳನ್ನು ಒದಗಿಸುತ್ತಿದ್ದರು. ಅಂತೆಯೆ ಇವರು ಮುಂದೆ ಪಣಿ+ಕ = ವಣಿಕ ಪಣಿ+ಜ ವಣಿಜ, ವಾಣಿಜ್ಯ (ವ್ಯಾಪಾರಿ) ಮಾಡುವವರೆನಿಸಿರಬೇಕು. ಇಂದಿಗೂ ಬಹಳಷ್ಟು ಬಣಜಿಗರಿಗೆ ವೀರಭದ್ರನು ಮನೆದೇವರಾಗಿ ಇರುವುದನ್ನು ಕಾಣಬಹುದು) ಶಿವನು ರೌದ್ರಾವತಾರ ತಾಳಿ ರುದ್ರನೆನಿಸಿದ, ಅವನು ರುದ್ರಾವತಾರಿಯಾದಾಗ ಹುಟ್ಟಿದವನೇ ವೀರಭದ್ರ. ಕರ್ನಾಟಕದ ಕೆಲವು ವೀರಭದ್ರ ಶಿಲ್ಪಗಳಲ್ಲಿ ವೀರಭದ್ರನು ಕೈಯಲ್ಲಿ ನಾಗರಹಾವನ್ನು ಹಿಡಿದ ದೃಶ್ಯವನ್ನು ಕಾಣಬಹುದು.
ವೀರಭದ್ರನನ್ನು ವೀರಮಾಹೇಶ್ವರ ಎಂದು ವೀರಾಗಮ ವರ್ಣಿಸಿದೆ-
`ವೀರಮಾಹೇಶ್ವರಾಚಾರ ವೀರಭದ್ರಾಯತೇ ನಮ:
ಆಶೇಷ ಪ್ರಮಥಾಚಾರ ಗುರೂಣಾಂ ಗುರವೇ ನಮ:’
 ಎಂಬ ಶ್ಲೋಕದಲ್ಲಿ ವೀರಭದ್ರ ವೀರಮಾಹೇಶ್ವರನಷ್ಟೇ ಅಲ್ಲ ಅವರೆಲ್ಲರಿಗೂ ಗುರು ಎಂದೂ ಅಂಥ ಗುರುವಿನ ಗುರುವಿಗೆ ನಮಸ್ಕಾರ ಎಂದೂ ಹೇಳಿದೆ. ವೀರಶೈವರಲ್ಲಿ ಜಂಗಮರಿಗೆ ವೀರಮಾಹೇಶ್ವರ ಎಂಬ ಪದದ ಬಳಕೆ ವೀರಭದ್ರನಿಂದ ಬಂದಿರಬಹುದನೋ ಎನಿಸುತ್ತದೆ. 

      12ನೇ ಶತಮಾನದ ಉರಿಲಿಂಗಪೆದ್ದಿ ಒಬ್ಬ ಶ್ರೇಷ್ಠ ದಲಿತ ಶಿವಶರಣ. ಅವನು ವೇದಾಗಮಗಳನ್ನೂ ಆಳವಾಗಿ ಅಭ್ಯಾಸಮಾಡಿದವನು. ಅವನು ವೀರಭದ್ರನನ್ನು ಶ್ರೇಷ್ಠ ಸದ್ಭಕ್ತ ಶಿವಶರಣರ ಸಾಲಿನಲ್ಲಿಟ್ಟು ಗೌರವದಿಂದ ಸ್ಮರಿಸಿದ್ದಾನೆ. ಕೆಲವು ಶರಣರು ವೀರಭದ್ರನನ್ನು ಪೂಜಿಸುವುದ್ಯಾಕೆ ? ಎಂದು ಪ್ರಶ್ನಿಸಿರಬಹುದು. ಅದಕ್ಕೆ ಉತ್ತರವಾಗಿ ಉರಿಲಿಂಗಪೆದ್ದಿ ಸುದೀರ್ಘವಾದ ವಿವರಣೆಯನ್ನು ಉದಾಹರಣೆಗಳನ್ನು ನೀಡಿ  ‘ಮಹಾಶರಣರಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು’ ನೀವೇಕೆ ಇವರಲ್ಲಿ ಅವಿಶ್ವಾಸ ಮಾಡಿ ಕೆಡುತ್ತೀರಿ ? ಎಂದು ಕೇಳುತ್ತಾನೆ. (ವಚನಸಂಖ್ಯೆ 1596) ಇಲ್ಲಿ ಉರಿಲಿಂಗಪೆದ್ದಿ ಬಹು ಸ್ವಾರಸ್ಯಕರವಾಗಿ ವೀರಭದ್ರಾದಿ ಗಣಗಳ ಬಗ್ಗೆ ಹೇಳುತ್ತಾನೆ. ಸಂದೇಹ ಬೇಡ, ಪುರಾತನ ಶರಣರು ಶಿವನ ಗಣಂಗಳಲ್ಲಿ ಸದ್ಭಕ್ತಿಯನ್ನು ಮಾಡಿ ಮುಕ್ತಿಯನ್ನು ಪಡೆದಿದ್ದಾರೆ. ನೀವೂ ಕೂಡ ನಂಬಿರಿ, ವಿಶ್ವಾಸದಿಂದ ಅವರಲ್ಲಿ ಭಕ್ತಿ ಮಾಡಿರಿ ದಿಟವೋ ಸೆಟೆಯೋ ಎಂಬ ಸಂಶಯದಲ್ಲಿ ಬೀಳಬೇಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುವ ವಚನ ಇದಾಗಿದೆ. ಸ್ವಾರಸ್ಯವೆಂದರೆ ಚೆನ್ನಬಸವಣ್ಣ ಮುಂತಾದ ಕೆಲವು ಶರಣರು ಏಕದೇವೋಪಾಸನೆಯ ನಿಷ್ಠೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳಿದ ವಚನಗಳಲ್ಲಿ ಬೇರೆ ದೇವತೆಗಳನ್ನು ಹೆಸರಿಸುವಾಗ ವೀರಭದ್ರನ ಹೆಸರನ್ನೂ ಸೇರಿಸಿದ್ದಾರೆ. ಇದರಿಂದ ಲಿಂಗವನ್ನಲ್ಲದೆ ಬೇರೇನನ್ನೂ ಪೂಜಿಸಬಾರದೆಂಬುದು ಅಲ್ಲಿನ ಅರ್ಥ. ಇದು ಬಾಹ್ಯದೃಷ್ಟಿಯಲ್ಲಿ ಸರಿಯಾದರೂ ವೀರಭದ್ರನೇ ಲಿಂಗವಾಗಿರುವುದರಿಂದ ವೀರಭದ್ರನ ಪೂಜೆಯೂ ಲಿಂಗಪೂಜೆಯೇ ಆಗುತ್ತದೆ. ಶಿವನೇ ತನ್ನ ಜಡೆಮುಡಿಯಿಂದ ವೀರಭದ್ರನನನ್ನು ಸೃಷ್ಟಿಮಾಡಿ ಉಗ್ರರೂಪತಾಳಿ ದಕ್ಷಬ್ರಹ್ಮನ ಸಂಹಾರಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಇದನ್ನು ಬಸವಣ್ಣನವರೂ ತಮ್ಮ ವಚನಗಳಲ್ಲಿ ಸ್ಪಷ್ಟೀಕರಿಸಿದ್ದಾರೆ. 

“ಕೂಡಲಸಂಗಮ ದೇವನು ದಕ್ಷನ ಕೆಡಿಸಿದುದ ಮರೆದಿರಲ್ಲಾ”

“ವಿಷವಟ್ಟಟಿಸುಡುವಲ್ಲಿ ವೀರಭದ್ರ ಬಡಿವಲ್ಲಿ
ಕೂಡಲ ಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು”

"ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ
ಸುರರೆಲ್ಲ ನೆರೆದು ಬಂದ ಬಾಯ ನೋಡಾ. 
ಬಾಯ ತಪ್ಪಿಸಿ ಉಣಬಂದ ದೈವದ 
ಬೆಂದ ಬಾಯ ನೋಡಾ. 
ಉಣ್ಣದೆ ಉಡದೆ ಹೊಗೆಯ 
ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ ಕೂಡಲಸಂಗಮದೇವಾ"

"ಅಂದಾ ತ್ರಿಪುರವನುರುಹಿದಾತ ವೀರ, 
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ, 
ಕಡುಗಲಿ ನರಸಿಂಹನನುಗಿದಾತ ವೀರ, 
ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ,"

ಬಸವಣ್ಣನವರ ವಚನಗಳಲ್ಲಿ ವೀರಭದ್ರನು ಯಜ್ಞಸಂಸ್ಕೃತಿಯನ್ನು ನಾಶಮಾಡುವಲ್ಲಿ ವಹಿಸಿದ ವೀರೋಚಿತ ಕಾರ್ಯದ ಪ್ರಶಂಸೆಯನ್ನು ಕಾಣುತ್ತೇವೆ. ವೀರಶೈವವನ್ನು ವಿರೋಧಿಗಳಿಂದ ರಕ್ಷಿಸಿದ ಬಗೆಯನ್ನು ಬಸವಣ್ಣನವರು ಎತ್ತಿ ಹಿಡಿದಿದ್ದಾರೆ. ಅಲ್ಲದೆ ವೀರಭದ್ರನನ್ನು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಪ್ರಶಂಸಿಸಿದ್ದಾರೆ.
ಹೀಗೆ ವೀರಭದ್ರನ ಚರಿತ್ರೆ ಮಹತ್ವ ಬಹು ಪ್ರಾಚೀನ ಕಾಲದಿಂದಲೇ ಸಾಗಿ ಬಂದಿದೆ. ಭಕ್ತರ ಹೃದಯದ ಕಣ್ಮಣಿಯಾಗಿ ಅವರ ಕಷ್ಟಪರಿಹಾರಕನಾಗಿ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದ ವೀರಭದ್ರನ ಜಯಂತಿಯನ್ನು ಪ್ರತಿವರ್ಷ ಭಾದ್ರಪದ ಮಾಸದ ಮೊದಲನೆಯ ಮಂಗಳವಾರ  ಆಚರಿಸಲಾಗುತ್ತಿದೆ. ಅಂದು ವೀರಭದ್ರನ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಆ ಶುಭದಿನದಂದು ವೀರಭದ್ರನ ಸ್ಮರಣೆ ಆರಾಧನೆ ಮಾಡಿ ಪುನೀತರಾಗೋಣ.

 --ಡಾ.ಸಂಗಮೇಶ ಸವದತ್ತಿಮಠ