ಸುಭಾಷಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸುಭಾಷಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಾರ್ಚ್ 26, 2026

ಸದಯಂ ಹೃದಯಂ ಯಸ್ಯ

ಸದಯಂ ಹೃದಯಂ ಯಸ್ಯ" ಎಂಬುದು ನೀತಿಶಾಸ್ತ್ರದ ಪ್ರಸಿದ್ಧ ಶ್ಲೋಕದ ಭಾಗವಾಗಿದ್ದು, ದಯಾಪರತೆ, ಸತ್ಯ ಮತ್ತು ಪರಹಿತ ಚಿಂತನೆಯ ಮಹತ್ವವನ್ನು ಸಾರುತ್ತದೆ. ಇದರ ಪೂರ್ಣ ರೂಪ:

"ಸದಯಂ ಹೃದಯಂ ಯಸ್ಯ, ಭಾಷಿತಂ ಸತ್ಯಭೂಷಿತಂ | ಕಾಯಃ ಪರಹಿತೇ ಯಸ್ಯ, ಕಲಿಃ ಕುರ್ವೀತ ತಸ್ಯ ಕಿಮ್ ||"

ಯಾರ ಹೃದಯದಲ್ಲಿ ದಯೆ, ನಾಲಿಗೆಯಲ್ಲಿ ಸತ್ಯ ಮತ್ತು ದೇಹವು ಇತರರ ಸೇವೆಗೆ ಮೀಸಲಾಗಿರುತ್ತದೆಯೋ, ಅಂಥವನನ್ನು ಕಲಿಯುಗವು (ಕಲಿಪುರುಷ) ಬಾಧಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥ.

ಶ್ಲೋಕದ ವಿವರಣೆ:
ಸದಯಂ ಹೃದಯಂ ಯಸ್ಯ: ಯಾರ ಹೃದಯದಲ್ಲಿ ದಯೆ/ಕರುಣೆ ತುಂಬಿದೆಯೋ.

ಭಾಷಿತಂ ಸತ್ಯಭೂಷಿತಂ: ಯಾರ ಮಾತು ಸತ್ಯದಿಂದ ಕೂಡಿರುತ್ತದೆಯೋ (ಸತ್ಯವೇ ಆಭರಣವಾಗಿದೆಯೋ).

ಕಾಯಃ ಪರಹಿತೇ ಯಸ್ಯ: ಯಾರ ಶರೀರವು ಇತರರ ಹಿತಕ್ಕಾಗಿ (ಸೇವೆಗಾಗಿ) ಮೀಸಲಾಗಿದೆಯೋ.

ಕಲಿಃ ಕುರ್ವೀತ ತಸ್ಯ ಕಿಮ್: ಅಂಥವನಿಗೆ ಕಲಿಪುರುಷನು (ದುಷ್ಟ ಶಕ್ತಿ/ಕಲಿಯುಗದ ದೋಷಗಳು) ಏನು ತಾನೇ ಮಾಡಬಲ್ಲನು?.

ಸಾರಾಂಶವೆಂದರೆ, ಯಾರ ಹೃದಯವು ದಯೆಯಿಂದ ಕೂಡಿರುವುದೋ,ಯಾರ ಮಾತು ಸತ್ಯದಿಂದ ಕೂಡಿರುವುದೋ, ಯಾರ ದೇಹವು ಇತರರಿಗಾಗಿ, ಇತರರ ಒಳಿತಿಗಾಗಿ ಇರುವುದೋ ಅವರನ್ನು ಹೃದಯವಂತರು, ದೇವಮಾನವರು ಎನ್ನಬಹುದು.

ಹೃದಯಹೀನರಾಗದೆ, ಹೃದಯವಂತರಾಗೋಣ, ದೀರ್ಘಾಯುಷ್ಯವಂತರಾಗಿ, ಮಾನವತೆಯ ಪ್ರತಿರೂಪವಾಗಿ ಬಾಳಿ ಬದುಕೋಣ.

ಜನವರಿ 24, 2025

ಪ್ರಜೆಗಳ ನೆಮ್ಮದಿಯೇ ಸುಭಿಕ್ಷ ರಾಷ್ಟ್ರದ ಮೂಲ

ಪ್ರಜೆಗಳಿಗೆ ಒಳಿತು ಮಾಡದೇ ರಾಜನು ದೇವತಾಕಾರ್ಯಗಳನ್ನು ನಡೆಸಿ ಪ್ರಯೋಜನವೇನು?

ಕಿಂ ದೇವಕಾರ್ಯಾಣಿ ನರಾಧಿಪಸ್ಯ ಕೃತ್ವಾ ವಿರೋಧಂ ವಿಷಯಸ್ಥಿತಾನಾಮ್। 
ತದ್ದೇವಕಾರ್ಯಂ ಜಪಯಜ್ಞಹೋಮಾಃ ಯಸ್ಯಾಶ್ರುಪಾತಾ ನ ಪತಂತಿ ರಾಷ್ಟ್ರೇ॥

ಯಾವನ ರಾಜ್ಯದಲ್ಲಿ ಪ್ರಜೆಗಳು ಕಣ್ಣೀರು ಸುರಿಸುವುದಿಲ್ಲವೋ ಅದೇ ದೇವಕಾರ್ಯ. ಅದೇ ಯಜ್ಞ, ಅದೇ ಹೋಮ. ಪ್ರಜೆಗಳನ್ನು ತನ್ನ ಮಕ್ಕಳಂತೆ ಸಂರಕ್ಷಿಸುವುದು ರಾಜನ ಕರ್ತವ್ಯ. ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅವರ ಬೇಕು, ಬೇಡಗಳ ಕಡೆ ಗಮನಹರಿಸಬೇಕು. ಈ ಕಾರ್ಯ ಸುಗಮವಾಗಿ ಸಾಗಲು ಧಾರ್ಮಿಕ, ಆಧ್ಯಾತ್ಮಿಕ ಬದುಕಿನ ಸ್ಪರ್ಶವಿದ್ದರೆ ಒಳಿತು. ಧಾರ್ಮಿಕ ಕಾರ್ಯವೆಲ್ಲವೂ ಲೋಕ ಕಲ್ಯಾಣಾರ್ಥವಾಗಿರಬೇಕು. ಆದರೆ ರಾಜನಾದವನು ಪ್ರಜೆಗಳ, ದೇಶದ ಹಿತಕಾರ್ಯ ನಿರ್ಲಕ್ಷಿಸಿ ಕೇವಲ ಹೋಮ, ಹವನ, ಪೂಜೆ ಮುಂತಾದ ದೇವತಾಕಾರ್ಯ ಮಾಡುತ್ತಾ, ಪ್ರಜೆಗಳು ಕಣ್ಣೀರಿಡುವಂತೆ ಮಾಡಿದರೆ, ರಾಜನು ಕರ್ತವ್ಯಲೋಪ ಮಾಡಿದಂತಾಗುವುದು.

Dr̤ Ganapathi Hegade

ಜನವರಿ 23, 2025

ಒಳ್ಳೆಯ ಮಾತುಗಳನ್ನೇ ಆಡೋಣ

ನಮಗೆ ಮಾತಾಡುವ ಸಾಮರ್ಥ್ಯವಿದೆ, ಅವಕಾಶವಿದೆ ಎಂದ ಮಾತ್ರಕ್ಕೆ ಏನೇನೋ ಮಾತನಾಡಬಾರದು. ಒಳ್ಳೆಯ ಮಾತುಗಳನ್ನೇ ಆಡಬೇಕು.

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ।
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ|

ಮಾತಾಡುವ ಶಕ್ತಿಯನ್ನು ಭಗವಂತ ಮನುಷ್ಯನಿಗೆ ದಯಪಾಲಿಸಿದ್ದಾನೆ. ಇಂತಹ ಅಪೂರ್ವ ಅವಕಾಶ ಅನ್ಯ ಜೀವಿಗಳಿಗಿಲ್ಲ.
ದೈವದತ್ತವಾದ ಈ ಅವಕಾಶವನ್ನು ಅಷ್ಟೇ ಗೌರವದಿಂದ ಬಳಸಿಕೊಳ್ಳಬೇಕು.
ಆಡುವ ಮಾತುಗಳು ಸುಲಲಿತವಾಗಿ, ಚೆನ್ನಾಗಿರಬೇಕು, ಹೃದ್ಯವಾಗಿರಬೇಕು, ಇತರರಿಗೆ ಬೇಗ ಅರ್ಥವಾಗುವಂತಿರಬೇಕು. ಮೃದುವಾಗಿರಬೇಕು, ಸತ್ಯವಾದ ಮಾತುಗಳನ್ನೇ ಆಡಬೇಕು.
ನಮ್ಮ ಮಾತು ಇತರರಿಗೆ ಆತ್ಮೀಯತೆಯನ್ನು ಹುಟ್ಟಿಸುವಂತಿರಬೇಕು.
ಯಾಕೆಂದರೆ ಒಳ್ಳೆಯ ಮಾತನ್ನಾಡುವುದರಿಂದ ಎಲ್ಲರೂ ಸಂತಸಪಡುತ್ತಾರೆ.
ಆದ್ದರಿಂದ ಒಳ್ಳೆಯ ಮಾತುಗಳನ್ನೇ ಆಡಬೇಕು. ನಮಗೆ ಮಾತಿಗೇನೂ ಬಡತನವಿಲ್ಲವಲ್ಲ! 

ಜುಲೈ 12, 2023

ಧರ್ಮದಿಂದ ಗಳಿಸಬೇಕು

*ಅಲಬ್ಧಮೀಹೇದ್ಧರ್ಮೇಣ* 

*ಲಬ್ಧಂ ಯತ್ನೇನ ಪಾಲಯೇತ್ |*
*ಪಾಲಿತಂ ವರ್ಧಯೇನ್ನಿತ್ಯಂ* 

*ವೃದ್ಧಂ ಪಾತ್ರೇಷು ನಿಕ್ಷಿಪೇತ್ ||*
_(ಮಹರ್ಷಿಯಾಜ್ಞವಲ್ಕ್ಯವಚನ)_

_*(ಧರ್ಮೇಣ)* ಧರ್ಮದಿಂದ, *(ಅಲಬ್ಧಮ್)* ಈಗಾಗಲೇ ಲಭಿಸದಿರುವ ಹೊಸದನ್ನು, *(ಈಹೇತ್)* ಸಂಪಾದಿಸಲು ತೊಡಗಬೇಕು. *(ಲಬ್ಧಮ್)* ಸಂಪಾದಿಸಿದ್ದನ್ನು, *(ಯತ್ನೇನ)* ಪ್ರಯತ್ನಪೂರ್ವಕವಾಗಿ, *(ಪಾಲಯೇತ್)* ರಕ್ಷಿಸಬೇಕು. *(ಪಾಲಿತಮ್)* ರಕ್ಷಿಸಿದ್ದನ್ನು, *(ನಿತ್ಯಂ ವರ್ಧಯೇತ್)* ದಿನವೂ / ಯಾವಾಗಲೂ ನ್ಯಾಯಮಾರ್ಗದಲ್ಲಿ ಹೆಚ್ಚಿಸಬೇಕು. *(ವೃದ್ಧಮ್)* ಹಾಗೆ ಹೆಚ್ಚಿಸಿದ್ದನ್ನು, *(ಪಾತ್ರೇಷು)* ಯೋಗ್ಯರಲ್ಲಿ / ಪಾತ್ರರಲ್ಲಿ, *(ನಿಕ್ಷಿಪೇತ್)* ಹಂಚಬೇಕು._

_ಸಂಪಾದನೆಗೆ ಧರ್ಮಮಾರ್ಗವೆಂದರೆ ನ್ಯಾಯವಾದ ದುಡಿತ. ಯಾವುದು ನ್ಯಾಯ, ಯಾವುದು ಅನ್ಯಾಯವೆಂದು ಪ್ರತಿಯೊಬ್ಬನ ಅಂತಃಸಾಕ್ಷಿಗೂ ತಿಳಿದಿರುತ್ತದೆ. ಆದರೆ ಕಾಮ ಕ್ರೋಧಗಳ ಉಲ್ಬಣತೆಯಿಂದ ತಪ್ಪನ್ನೆಸಗುತ್ತಾನೆ. ಒಟ್ಟಿನಲ್ಲಿ ಇನ್ನೊಬ್ಬರ ಹಿತಕ್ಕೆ ಧಕ್ಕೆಯಾಗದಿರುವ ಮಾರ್ಗ ನ್ಯಾಯವೆಂಬುದು ಸಾಮಾನ್ಯ ನಿಯಮ._

_ಸಂಪಾದನೆ, ವರ್ಧನೆ, ವಿನಿಯೋಗ- ಇವಿಷ್ಟು ಧರ್ಮಮೂಲವಾಗಿರಬೇಕು ಎಂಬುದು ನೀತಿಯ ತಿರುಳು. ಮೊದಲನೆಯದಾದ ಸಂಪಾದನೆಯಲ್ಲಿ ಅಧರ್ಮ ಇಣುಕಿತೆಂದರೆ ಉಳಿದವುಗಳಿಗೆ ಅದರ ಅಂಟು ತಪ್ಪಿದ್ದಲ್ಲ. ಸಾಲದ ಸಂಪಾದನೆ ದುಡಿತದಿಂದ ಬಂದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸಾಲ ಅನಿವಾರ್ಯವಾದರೂ ಅದರ ಪಾಲನೆ ಮೊದಲಾದ ಮೂರು ಹೇಗೆ ನಡೆಯುತ್ತವೆ ಎಂಬುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಇದು ವ್ಯಕ್ತಿಗೆ ಅನ್ವಯಿಸುವಂತೆ ರಾಷ್ಟ್ರಕ್ಕೂ ಅನ್ವಯಿಸುತ್ತದೆ. *ಉತ್ತಮಂ ಸ್ವಾರ್ಜಿತಂ ವಿತ್ತಮ್*. ತಾನೇ ನ್ಯಾಯಯುತ ದುಡಿಮೆಯಿಂದ ಸಂಪಾದಿಸಿದ ಹಣವೇ ಉತ್ತಮ._

_ಸಂಪಾದಿಸಿದರೆ ಕರ್ತವ್ಯ ಮುಗಿಯಲಿಲ್ಲ. ಅದನ್ನು ರಕ್ಷಿಸಿ ಬೆಳೆಸಬೇಕು. ಆಮೇಲೆ
*ವೃದ್ಧಂ ಪಾತ್ರೇಷು ನಿಕ್ಷಿಪೇತ್*- "ಯೋಗ್ಯಪಾತ್ರದಲ್ಲಿ ಅದನ್ನು ಹಂಚಬೇಕು." ಸಂಪಾದನೆಗೆ ವಿನಿಯೋಗದಲ್ಲಿ ಮುಕ್ತಾಯ. *ಆದಾನಂ ಹಿ ವಿಸರ್ಗಾಯ* -- ಸಂಪಾದನೆ / ಸ್ವೀಕಾರವು ಕೊಡುವುದಕ್ಕೇ ಆಗಿದೆ. ಇದು ಒಂದು ನಿಯಮ._

_ಮೇಲಿನ ಶ್ಲೋಕದಲ್ಲಿನ ವಿಷಯ, ವಿದ್ಯೆಗೂ ಸಂಬಂಧಿಸುತ್ತದೆ. ವಿದ್ಯೆಯನ್ನು ಸಂಪಾದಿಸಿ, ರಕ್ಷಿಸಿ, ಬೆಳೆಸಿ, ಅರ್ಹನಾದ ಶಿಷ್ಯನಿಗೆ ಬೋಧಿಸಬೇಕು. ಉಪಾಧ್ಯಾಯನಲ್ಲದವನೂ ತನ್ನ ವಿದ್ಯೆಗೆ ಅನುಗುಣವಾಗಿ ಜನೋಪಯುಕ್ತ ಕಾರ್ಯವನ್ನು ಮಾಡಿದರೆ ಸಾಲವನ್ನು / ಋಷಿಋಣವನ್ನು ತೀರಿಸಿದಂತೆ._

_ಹಣವನ್ನು ಬಿಟ್ಟರೆ ಪ್ರಿಯವಾದದ್ದು ಕೀರ್ತಿ. ಧನಪಿಶಾಚಕ್ಕಿಂತ ಕೀರ್ತಿಶನಿಯ ಕಾಟ ಹೆಚ್ಚಿನದು. ಭೃಷ್ಟಾಚಾರದಿಂದ ಹಣವನ್ನು ಸೇರಿಸಿದಂತೆ ದುಷ್ಟಾಚಾರದಿಂದ ಕೀರ್ತಿಯನ್ನು ಗಳಿಸಿದವರೂ ಉಂಟು. ಹಣವನ್ನು ಮನುಷ್ಯನು ಬಚ್ಚಿಡುತ್ತಾನೆ, ಕೀರ್ತಿಯನ್ನು ಮಾತ್ರ ಎಲ್ಲೆಲ್ಲಿಯೂ ಹಂಚಲು ಆಶಿಸುತ್ತಾನೆ. ವಿದ್ಯೆ, ಧನ, ಕೀರ್ತಿ- ಯಾವುದೇ ಆಗಲಿ ಆರ್ಜನೆಯ ಮಾರ್ಗ ಶುದ್ಧವಾದರೆ ಉಳಿದವೂ ಶುದ್ಧವಾಗಿರುತ್ತವೆ._

_ಇಲ್ಲದಿದ್ದರೆ, *"ದಾನಂ ಭೋಗೋ ನಾಶಸ್ತಿಸ್ರೋ, ಗತಯೋ ಭವನ್ತಿ ವಿತ್ತಸ್ಯ | ಯೋ  ದದಾತಿ ನ ಭುಙ್ಕ್ತೇ, ತಸ್ಯ ತೃತೀಯಾ ಗತಿರ್ಭವತಿ ||"* — ಅಂದರೆ, ಹಣಕ್ಕೆ ದಾನ, ಭೋಗ, ನಾಶವೆಂದು ೩ ವಿಧದ ಗತಿಯಿರುವುದು. ಯಾರು ಇತರರಿಗೆ ದಾನವೂ ಮಾಡದೆ, ತಾನೂ ಭೋಗಿಸದಿರುವನೋ ಅಂಥವರ ಹಣಕ್ಕೆ ನಾಶವೆಂಬ ೩ನೇ ಗತಿಯಾಗುತ್ತದೆ. ಹಾಗಾಗಿ ಸೋಮಾರಿಯಾಗದೇ, ಧರ್ಮಮಾರ್ಗದಲ್ಲಿ ಹೆಚ್ಚು ಸಂಪಾದಿಸಬೇಕು. ಹಾಗೆ ಸಂಪಾದಿಸಿದ್ದನ್ನು ನ್ಯಾಯಯುತವಾಗಿ, ಜಾಗರೂಕತೆಯಿಂದ ಉಳಿಸಿ ಬೆಳೆಸಬೇಕು. ಬೆಳೆಸಿದ್ದರ ಒಂದು ಭಾಗವನ್ನು ಯೋಗ್ಯರಿಗೆ ಹಂಚಬೇಕು ಎಂಬುದಿದರ ಸಂದೇಶ.

ಜೂನ್ 16, 2022

ನಮಸ್ಕಾರಗಳನ್ನು ಯಾವ ಸಂದರ್ಭದಲ್ಲಿ ಮಾಡಬಾರದು?

ಯಾವಯಾವ ಸಂದರ್ಭಗಳಲ್ಲಿ
ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! 
(  ಸಂಗ್ರಹಿಸಿದ್ದು )

ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣನೇ ಮೊದಲಾದ ಗುರು-ಹಿರಿಯರಿಗೆ ನಮಸ್ಕಾರ ಮಾಡಬಾರದು. ಇದು ಯಾವ ಸಂದರ್ಭದಲ್ಲಿ ಎಂದರೆ

ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |
ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ ||
ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |
ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

ಅಂದರೆ  ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರುತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪಾವಿಷ್ಟನಾಗಿರುವಾಗ ನಮಸ್ಕರಿಸಬಾರದು. 

ಅದರಲ್ಲೂ ಕೋಪಾವಿಷ್ಟನಾಗಿರುವಾಗ ಮಾತ್ರ ಅವಶ್ಯವಾಗಿ ನಮಸ್ಕರಿಸಲೇಬಾರದು. ಎಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲವೇ ದೊರಕುವ ಸಾಧ್ಯತೆಯಿರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಯಾರೇ ಇರಲಿ ನಮಸ್ಕರಿಸಬಾರದು. 

ಇಷ್ಟೇ ಅಲ್ಲದೇ!

ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |
ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಿಮ್ಮ ಗುರುಗಳಿಗೆ ನಮಸ್ಕಾರ ಮಾಡಬಾರದು. ಎಕೆಂದರೆ ಸಭೆಯಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆಯಿರುವ ನಿಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಗುರುಗಳನ್ನು, ಜ್ಞಾನಿಗಳನ್ನು ತಿರಸ್ಕರಿಸಿದಂತಾಗುತ್ತದೆ. ಆಗ ನಿಮ್ಮ ಗುರುಗಳಿಗೆ ನಮಸ್ಕರಿಸುವ ಆತುರದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು.!

ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ.