June 16, 2022

ನಮಸ್ಕಾರಗಳನ್ನು ಯಾವ ಸಂದರ್ಭದಲ್ಲಿ ಮಾಡಬಾರದು?

ಯಾವಯಾವ ಸಂದರ್ಭಗಳಲ್ಲಿ
ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! 
(  ಸಂಗ್ರಹಿಸಿದ್ದು )

ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣನೇ ಮೊದಲಾದ ಗುರು-ಹಿರಿಯರಿಗೆ ನಮಸ್ಕಾರ ಮಾಡಬಾರದು. ಇದು ಯಾವ ಸಂದರ್ಭದಲ್ಲಿ ಎಂದರೆ

ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |
ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ ||
ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |
ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

ಅಂದರೆ  ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರುತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪಾವಿಷ್ಟನಾಗಿರುವಾಗ ನಮಸ್ಕರಿಸಬಾರದು. 

ಅದರಲ್ಲೂ ಕೋಪಾವಿಷ್ಟನಾಗಿರುವಾಗ ಮಾತ್ರ ಅವಶ್ಯವಾಗಿ ನಮಸ್ಕರಿಸಲೇಬಾರದು. ಎಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲವೇ ದೊರಕುವ ಸಾಧ್ಯತೆಯಿರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಯಾರೇ ಇರಲಿ ನಮಸ್ಕರಿಸಬಾರದು. 

ಇಷ್ಟೇ ಅಲ್ಲದೇ!

ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |
ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಿಮ್ಮ ಗುರುಗಳಿಗೆ ನಮಸ್ಕಾರ ಮಾಡಬಾರದು. ಎಕೆಂದರೆ ಸಭೆಯಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆಯಿರುವ ನಿಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಗುರುಗಳನ್ನು, ಜ್ಞಾನಿಗಳನ್ನು ತಿರಸ್ಕರಿಸಿದಂತಾಗುತ್ತದೆ. ಆಗ ನಿಮ್ಮ ಗುರುಗಳಿಗೆ ನಮಸ್ಕರಿಸುವ ಆತುರದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು.!

ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ.

No comments:

Post a Comment

If you have any doubts. please let me know...