ನೀತಿಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೀತಿಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಏಪ್ರಿಲ್ 16, 2026

ಒಂದು ಹಣತೆ‌

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು
ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು.
” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”
ಆ ಭರವಸೆಯ ಬೆಳಕು ನಿಮ್ಮದಾಗಲಿ

ಮಾರ್ಚ್ 27, 2026

ಸಮಯದ‌ ಮಹತ್ವ

        ಮೊನ್ನೆ ಗೆಳೆಯರು ಒಂದು ಕಡೆ ಸೇರೋಣ ಅಂತ ಪ್ಲಾನ್ ಮಾಡಿದ್ವಿ. ಅದರಲ್ಲಿ ಕೆಲವರು‘ನಾನು ತುಂಬಾ ಬ್ಯುಸಿ’ ಎಂದರು ಹಾಗೂ ಕೆಲವರು ‘ಬದುಕೇ ಬೋರ್ ಎದ್ದು ಹೋಗಿದೆ . ಹೇಗೆ ಟೈಂಪಾಸ್ ಮಾಡೋದು ಗೊತ್ತೇ ಅಗ್ತಿಲ್ಲ’ ಒಳ್ಳೆಯದು ಆಯ್ತು ಎಂದರು. ನಿಮ್ಮಲ್ಲೋ ಇಂತ ಹಳಹಳಿಸುವ ಸ್ನೇಹಿತರು ಇದ್ದೇ ಇರುತ್ತಾರೆ. ಸಮಯದ ಮಹತ್ವ ಅರಿತವರು ಈ ಎರಡೂ ಮಾತನ್ನು ಎಂದಿಗೂ ಹೇಳುವುದಿಲ್ಲ.ಒಂದು ದಿನಕ್ಕೆ 24 ಗಂಟೆಗಳು ಎಂಬುದು ಎಲ್ಲರಂತೆ ಅವರಿಗೂ ಗೊತ್ತಿರುತ್ತೆ. ಆದರೆ ಇರುವ 24 ಗಂಟೆಯನ್ನು ಸದುಪಯೋಗ ಪಡಿಸಿಕೊಳ್ಳುವ ವಿಧಾನ ತಿಳಿಯದೇ ಅವರು ಒದಾಡುತ್ತಿರುತ್ತಾರೆ.ಸಮಯ ನಿರ್ವಹಣೆ ಒಂದು ಕಲೆ. ಸಮಯವನ್ನು ಪಳಗಿಸಿಕೊಂಡವರಿಗೆ ಅದು ನಂಬಿಕಸ್ಥ ಸಹಾಯಕ. ಸ್ವೇಚ್ಛಾಚಾರದಿಂದ ವರ್ತಿಸಿದವರಿಗೆ ಸಮಯವೇ ಮಾರಕ. ನಿಮಗೂ & ನಮಗೂ ಒಂದು ದಿನದಲ್ಲಿರುವುದು ಕೇವಲ ಇಪ್ಪತ್ನಾಲ್ಕು ತಾಸುಗಳು ಮಾತ್ರ. ಇವುಗಳಲ್ಲೇ ನಮ್ಮ ಉದ್ಯೋಗ, ಯಾವುದೇ ವೃತ್ತಿ, ಮನೆಕೆಲಸ, ಮಕ್ಕಳ ಪೋಷಣೆ, ಇನ್ನಿತರ ಜವಾಬ್ದಾರಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರ ಬದುಕಿನಲ್ಲೂ ದಿನದ ಬಹುಭಾಗ ಈ ಮುಖ್ಯ ಕಾರ್ಯಗಳಿಗಾಗಿಯೇ ವಿನಿಯೋಗವಾಗುತ್ತದೆ. ಇದರ ಜತೆಗೆ ಮನೆಗೆ ಸಂಬಂಧಿಸಿದ ಕೆಲಸಗಳು ಮತ್ತು ನಿತ್ಯಬದುಕಿಗೆ ಅಗತ್ಯವಿರುವ ವಸ್ತು, ಸಲಕರಣೆ ಮುಂತಾದವನ್ನು ಹೊಂದಿಸಿಕೊಳ್ಳುವತ್ತ ಗಮನಹರಿಸಬೇಕು. ವೈಯಕ್ತಿಕ ಆಸಕ್ತಿ, ಅಭಿರುಚಿಗಳಿಗೂ ಆದ್ಯತೆ ನೀಡಬೇಕು. ಗೆಳೆಯರು, ಬಂಧು-ಬಳಗದವರೊಡನೆ ಒಡನಾಟ, ಅವರುಗಳ ಮನೆಗೆ ಹೋಗಿಬರುವುದನ್ನೂ ಮಾಡಬೇಕು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿಗಳ ಯೋಗಕ್ಷೇಮವನ್ನೂ ಕಡೆಗಣಿಸುವಂತಿಲ್ಲ. ಇನ್ನು ದಿನನಿತ್ಯದ ಅನೇಕಾನೇಕ ಕೆಲಸಗಳಲ್ಲಿ ಕೆಲವಂತೂ ತುರ್ತಾಗಿ ಮಾಡಬೇಕಾಗಿರುವಂಥಾದ್ದು ಇರುತ್ತವೆ. ಈ ಎಲ್ಲ ಸಂದರ್ಭಗಳಲ್ಲೂ ನಮ್ಮಲ್ಲಿ ಅನೇಕರನ್ನು ಬಹಳವಾಗಿ ಕಾಡುವಂಥಾದ್ದು ಸಮಯದ ಸಮಸ್ಯೆ. ಸಮಯವೇ ಸಾಕಾಗುತ್ತಿಲ್ಲವೆಂಬ ಕೊರಗು ಅನೇಕ ಸಂದರ್ಭಗಳಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕಾಡುತ್ತಿರುತ್ತದೆ.
    ಸಮಯ ಉಳಿತಾಯ ದೃಷ್ಟಿಯಿಂದ ಸಮಯದ ಆಯ್ಕೆ ಮತ್ತು ಹಂಚಿಕೆ ಬಹಳ ಮುಖ್ಯವಾದದ್ದು. ಸಮಯವನ್ನು ನಿಶ್ಚಿತವಾದ ಯೋಜನೆಗೆ ತಕ್ಕಂತೆ ಅನಿರೀಕ್ಷಿತ ಆಗುಹೋಗುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಬೇಕು. ನೀವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗಿಕೊಳ್ಳುವವರೆಗೆ ಯಾವ್ಯಾವ ಕೆಲಸಗಳನ್ನು ಮಾಡಬೇಕೆಂಬುದರ ಬಗ್ಗೆ ಪೂರ್ವಯೋಜಿತ ಕಲ್ಪನೆ ನಿಮಗಿರಬೇಕಾಗುತ್ತದೆ. ಇದರಲ್ಲಿ ನಿಮ್ಮ ಕಚೇರಿಯಲ್ಲಿ ಉದ್ಯೋಗ ನಿರ್ವಹಣೆ ಅಥವಾ ಬದುಕು ನಿರ್ವಹಣೆ ಕಾಯಕಕ್ಕೆ ಪ್ರಥಮ ಆದ್ಯತೆ ಇರಲಿ. ಜತೆಗೆ ನಿಮ್ಮ ಇನ್ನಿತರ ಕೆಲಸ ಕಾರ್ಯಗಳು, ವ್ಯಾಯಾಮ, ಪೂಜೆ, ಸಂಜೆಯ ವಾಕಿಂಗ್, ಬ್ಯಾಂಕ್-ಅಂಚೆ ಕಚೇರಿಗೆ ಹೋಗಿ ಬರುವುದು, ಗೆಳೆಯ ಅಥವಾ ಸಂಬಂಧಿಕರ ಮನೆಗೆ ಹೋಗಿಬರುವುದು, ಕುಟುಂಬದೊಡನೆ ಸಮಯ ಕಳೆಯುವುದು -ಇತ್ಯಾದಿ. ಈ ಎಲ್ಲ ಕೆಲಸಗಳಿಗೂ ವೇಳೆಯನ್ನು ನಿಗದಿಪಡಿಸಿಕೊಂಡುಬಿಡಿ. ಅದೇ ರೀತಿ ಉದ್ಯೋಗ ನಿರ್ವಹಣೆಯಲ್ಲಿ ಯಾವ್ಯಾವ ಕೆಲಸಗಳನ್ನು ಅಥವಾ ಫೈಲುಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ಧರಿಸಿ ಅದಕ್ಕೆ ವೇಳೆಯನ್ನು ಕೂಡ ಮುಂಚಿತವಾಗಿಯೇ ನಿಗದಿ ಮಾಡಿಟ್ಟುಬಿಡಿ.
    ಪ್ರತಿ ಮುಂಜಾನೆ ಏಳುತ್ತಿದ್ದಂತೆ ಎಲ್ಲರಿಗೂ ಸಮಾನವಾಗಿ ಸಿಗುವ 24 ಗಂಟೆಗಳ ಸಮಯವನ್ನು ಸಮರ್ಥವಾಗಿ ನಿರ್ವಹಿಸಲು ಚೈತನ್ಯಭರಿತ ಉತ್ಸಾಹ ಇರಬೇಕು; ನಿರ್ದಿಷ್ಟವಾದ ಗುರಿಯನ್ನು ಸಾಧಿಸಲು ಸಕಾರಾತ್ಮಕ ಮನೋಭಾವ ಇರಬೇಕು; ಎಲ್ಲಕ್ಕಿಂತ ಹೆಚ್ಚಾಗಿ, ಸಮಯವನ್ನು ಸೂಕ್ತವಾಗಿ ಬಳಸಲು ಯೋಜನಾ ಶಕ್ತಿ ಮತ್ತು ಅದನ್ನು ಪರಿಪಾಲಿಸುವ ಶಿಸ್ತು ಇರಬೇಕು. ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರಾಗಿದ್ದ ಸರ್‌ಎಂ.ವಿಶ್ವೇಶ್ವರಯ್ಯನವರು `ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ' ಎಂದು ಹೇಳಿದ್ದಾರೆ. ಹೆಸರಾಂತ ಲೇಖಕ ಸ್ಟೀಫನ್ ಕೋವಿ, ಸಮಯದ ನಿರ್ವಹಣೆಯ ತತ್ವ, ಸಿದ್ಧಾಂತಗಳ ಬಗ್ಗೆ ಕೂಲಂಕಷವಾಗಿ ತಮ್ಮ ಪುಸ್ತಕಗಳಲ್ಲೂ, ಲೇಖನಗಳಲ್ಲೂ ಕೆಳಕಂಡಂತೆ ವಿವರಿಸಿದ್ದಾರೆ:

ಹಾಗಾದರೆ ಮೊದಲು ನಿಮ್ಮ ಒಟ್ಟು ಕೆಲಸವನ್ನು ಈ ಕೆಳಗಿನಂತೆ ವಿಂಗಡಿಸಿ :-

ಭಾಗ 1 - ಇದು ಮುಖ್ಯವಾದ ತುರ್ತು ಕೆಲಸಗಳಿಗಾಗಿ. ಈ ಭಾಗದ ಕಾರ್ಯಗಳಿಗೆ ತಕ್ಷಣ ಗಮನಕೊಡಬೇಕು, ಸಮಯದ ಎಲ್ಲೆ ಮೀರುವ ಮೊದಲೇ ಮಾಡಿಮುಗಿಸಬೇಕು.
ಭಾಗ 2 - ಇದು ಮುಖ್ಯವಾದರೂ ತುರ್ತಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳಿಗೂ ಒಂದು ಸಮಯದ ಎಲ್ಲೆ ಇದ್ದೇ ಇದೆ. ಉದಾ: ಪ್ರಾಜೆಕ್ಟನ್ನು ಈ ವಾರದ ಕೊನೆಯಲ್ಲಿ ಮಾಡಬೇಕು.
ಭಾಗ 3 - ಇದು ಮುಖ್ಯವಲ್ಲದಿದ್ದರೂ, ತ್ವರೆಯ ಕಾರ್ಯಗಳಿಗಾಗಿ. ಅಷ್ಟೇನೂ ಮುಖ್ಯವಲ್ಲದಿದ್ದರೂ ಈ ಕಾರ್ಯಗಳನ್ನು ತಕ್ಷಣ ಮಾಡಿಮುಗಿಸಬೇಕು.
ಭಾಗ 4 - ಇದು ಮುಖ್ಯವೂ ಅಲ್ಲದ ತುರ್ತೂ ಅಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳು ಕೇವಲ ಮನೋರಂಜನೆಗಾಗಿ.

ಸಮಯವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪಳಗಿಸಿಕೊಳ್ಳಲು ೧೫ ಅತ್ಯುತ್ತಮ ಸೂತ್ರಗಳು:
1) ಚಿಕ್ಕ ಲಿಸ್ಟ್ ಬರೆದುಕೊಳ್ಳಿ:
ಎಲ್ಲವನ್ನೂ ನೆನಪಿನ ಶಕ್ತಿಗೇ ಹೊರಿಸುವುದು ದೊಡ್ಡ ತಪ್ಪು. ಮಾಹಿತಿಯ ಮಹಾಪೂರದಿಂದ ಮಿದುಳು ಕೆಲವು ಸಂಗತಿಗಳನ್ನು ಸಮಯಕ್ಕೆ ಸರಿಯಾಗಿ ನೆನಪಿಸುವುದಿಲ್ಲ. ಒಂದು ಚೀಟಿ ಅಥವಾ ಪುಟಾಣಿ ಪುಸ್ತಕದಲ್ಲಿ ಇಂದು ಮಾಡಬೇಕಾದ ಎಲ್ಲ ಕೆಲಸಗಳನ್ನು ಮುಂಜಾನೆಯೇ ಬರೆದಿಟ್ಟುಕೊಳ್ಳುವುದು ಸಮಯ ನಿರ್ವಹಣೆಯ ಮೊದಲ ಸೂತ್ರ.
2) ಪ್ರಯಾರಿಟಿ :
ಒಂದು ಸಲ ದಿನದ ಎಲ್ಲ ಕೆಲಸಗಳನ್ನು ಗುರುತು ಹಾಕಿಕೊಂಡ ನಂತರ ಆದ್ಯತೆಯನ್ನು ನಿರ್ಧರಿಸಿ. ತಕ್ಷಣ ಮಾಡಬೇಕಾದ ಕೆಲಸ, ಇಂದೇ ಮಾಡಬೇಕಾದ ಕೆಲಸ, ರಾತ್ರಿಯೊಳಗೆ ಮುಗಿಸಬೇಕಾದ ಕೆಲಸ, ನಾಳೆ ಮಾಡಿದರೂ ಪರವಾಗಿಲ್ಲ ಎನ್ನುವ ಕೆಲಸಗಳಿಗೆ ಪ್ರತ್ಯೇಕವಾಗಿ ನಿಮಗೆ ಗೊತ್ತಿರುವ ಸಂಕೇತ ನೀಡಿ ಗುರುತು ಮಾಡಿಟ್ಟುಕೊಳ್ಳಿ.
3) ವಾರದ ವೇಳಾಪಟ್ಟಿ ಇರಲಿ:
ವಾರದ ರಜೆಯ ದಿನದಲ್ಲಿ ಮುಂದಿನ ವಾರದ ಕೆಲಸಗಳ ಬಗ್ಗೆ ಆಲೋಚಿಸಿ ಒಂದು ಪಟ್ಟಿ ಮಾಡಿಕೊಳ್ಳಿ. ಅಸೈನ್ಮೆಂಟ್ ಡೆಡ್ಲೈನ್ಗಳು, ಪರೀಕ್ಷೆಯ ದಿನಾಂಕಗಳು, ಆರೋಗ್ಯ ತಪಾಸಣೆ, ಕ್ರೀಡಾದಿನ ಇತ್ಯಾದಿ ಸಂಗತಿಗಳನ್ನು ಗಮನಿಸಿ ಇಡೀ ವಾರದ ಕಾರ್ಯಕ್ರಮ ಪಟ್ಟಿ ತಯಾರಿಸಿಕೊಳ್ಳಿ.
4) ನೆನಪಿನ ಪುಸ್ತಕ ಇರಲಿ:
ಕಿಸೆಯಲ್ಲಿ ಸದಾಕಾಲವೂ ನೆನಪಿನ ಪುಸ್ತಕ ಹಾಗೂ ಒಂದು ಪೆನ್ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ನಮ್ಮ ತಲೆಗೆ ಬ್ರಿಲಿಯಂಟ್ ಐಡಿಯಾಗಳು ಹೊಳೆಯುತ್ತವೆ. ಅದನ್ನು ತಕ್ಷಣ ಗುರುತು ಮಾಡಿಕೊಳ್ಳಲು ಹಾಗೂ ದಿನದ ಕೆಲಸಗಳು ಎಷ್ಟು ಹಿಂದುಳಿದಿವೆ ಎಂಬುದನ್ನು ಗಮನಿಸಲು ಇದರಿಂದ ಅನುಕೂಲ.
5) ಯೋಚಿಸಿ ಕೆಲಸ ಮಾಡಿ:
ಕೆಲಸ ಮಾಡಿದ ನಂತರ ಯೋಚಿಸುವುದು ಒಂದು ಬಗೆ. ಯೋಚಿಸಿ ಕೆಲಸ ಮಾಡುವುದು ಮತ್ತೊಂದು ಬಗೆ. ಜೀವನದಲ್ಲಿ ಎಷ್ಟು ಸಲ ನಾವು ‘ಈ ಬೇಡದ ಕೆಲಸಕ್ಕಾಗಿ ಎಷ್ಟು ಟೈಂ ವೇಸ್ಟ್ ಮಾಡಿದೆ ಛೇ’ ಎಂದುಕೊಂಡಿರುವುದ್ಲಿಲ. ಕೆಲಸ ಪ್ರಾರಂಭಿಸುವ ಮೊದಲು ಒಂದು ಕ್ಷಣ ಯೋಚಿಸಿದ್ದರೆ ಹಲವು ಗಂಟೆಗಳು ಉಳಿಯುತ್ತಿದ್ದವು.
6) ಆಗಲ್ಲ ಎನ್ನಿ:
ಎಲ್ಲರಿಗೂ ಒಳ್ಳೆಯವರಾಗಬೇಕೆಂಬ ಮನೋಭಾವ ಹಲವರಲ್ಲಿ ರುತ್ತದೆ. ‘ಇಲ್ಲ’ ಎನ್ನಲು ಬರುವುದಿಲ್ಲ ಎಂಬ ಒಂದೇ ಕಾರಣದಿಂದ ಬೇಡದ ಕೆಲಸಗಳಿಗೆ ಸಮಯ ವ್ಯಯಿಸುತ್ತಿರುತ್ತಾರೆ. ಇಂಥವರು ತಮ್ಮ ಸ್ವಭಾವ ಬದಲಿಸಿಕೊಂಡು ನಗುನಗುತ್ತಲೇ ‘ಇಲ್ಲ... ಆಗಲ್ಲ... ಕ್ಷಮಿಸಿ’ ಎಂದು ಹೇಳುವುದನ್ನು ಅಗತ್ಯವಾಗಿ ಕಲಿಯಬೇಕು.
7) ಸತತ ಬದಲಾವಣೆ ಅಗತ್ಯ:
ವೇಗವಾಗಿ ಕೆಲಸ ಮಾಡುವುದನ್ನು ಸತತವಾಗಿ ಕಲಿಯಬೇಕು. ಟೈಪಿಂಗ್ ಕಲಿಯಲು ಸೇರಿದವರು ಒಂದು ವರ್ಷದ ನಂತರವೂ ಅಕ್ಷರ ಹುಡುಕುತ್ತಿದ್ದರೆ ಅದಕ್ಕೆ ಏನನ್ನಬೇಕು? ಈ ಉದಾಹರಣೆ ಜೀವನದ ಎಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಯಾವುದೇ ಕೆಲಸದಲ್ಲಿ ನಾವು ಪಳಗಿದಂತೆ ಕೆಲಸ ಮಾಡುವ ವೇಗ ಹೆಚ್ಚಾಗಲೇಬೇಕು. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಅಗತ್ಯ.
8) ಮೌಲ್ಯಮಾಪನ:
ನಿಮ್ಮ ಬದುಕಿನ ೨೪ ಗಂಟೆ ಹೇಗೆ ಕಳೆಯುತ್ತಿದೆ ಎಂಬ ಬಗ್ಗೆ ಆಗಾಗ ಪರಿಶೀಲಿಸುವುದು ಅಗತ್ಯ. ನಿಮ್ಮ ದಿನಚರಿಯಲ್ಲಿ ಬೇಡದ ಸಂಗತಿಗಳ್ದಿದರೆ ಅದನ್ನು ಗುರುತಿಸಿ ತೆಗೆದುಹಾಕಿ ಸಮಯ ಉಳಿಸಲು ಇದು ಸಹಾಯ ಮಾಡುತ್ತದೆ.
9) ದಿನಚರಿ ಇರಲಿ:
‘ಸಮಯದ ಉಳಿಕೆಯೇ- ಸಮಯದ ಗಳಿಕೆ’ ಎಂಬುದು ದಿನಚರಿಯ ಮುಖ್ಯ ಸೂತ್ರ. ಬದುಕಿನ ಬಂಡಿ ಹಳಿ ತಪ್ಪದಂತೆ ಕಾಪಾಡಲು ದಿನಚರಿ ಅತ್ಯಗತ್ಯ. ನೀವು ಒಂದು ದಿನವನ್ನು ಹೇಗೆ ಕಳೆಯುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಬರೆದಿಟ್ಟುಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಗುರಿ ನಿಮ್ಮಿಂದ ಎಷ್ಟು ದೂರವಿದೆ. ಅದನ್ನು ತಲುಪಲು ಏನು ಮಾಡಬೇಕು ಎಂಬುದು ನಿಮಗೇ ಹೊಳೆಯುತ್ತದೆ.
10) ಚಟ ಬಿಡಿ:
ನಿಮ್ಮ ಸಮಯ ಕದಿಯುವ ಹರಟೆ, ಕುಡಿತ, ಧೂಮಪಾನ, ಚಾಡಿ ಹೇಳುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಮೊದಲಾದ ದುರಭ್ಯಾಸಗಳನ್ನು ನೀವೇ ಗುರುತಿಸಿಕೊಳ್ಳಿ. ಒಂದು ದಿನದ್ಲಲಿ ಇವಕ್ಕೆ ಸರಾಸರಿ ಎಷ್ಟು ಸಮಯ ವ್ಯಯವಾಗುತ್ತಿದೆ ಲೆಕ್ಕಾಹಾಕಿ. ದೃಢ ನಿರ್ಧಾರದಿಂದ, ಅಗತ್ಯ ಬ್ದಿದರೆ ಹಿರಿಯ ಸಲಹೆಯಿಂದ ಇವನ್ನು ಗ್ಲೆಲಲು ಯತ್ನಿಸಿ.
11) ಇನ್ನೊಬ್ಬರ ಕೆಲಸ ಬೇಡ:
ನಾನೊಬ್ಬ ಹೀರೋ ಆಗಬೇಕು ಎಂಬ ಭ್ರಮೆಯಿಂದ ಇನ್ನೊಬ್ಬರ ಕೆಲಸ ಮಾಡುವುದನ್ನು ಕೆಲವರು ರೂಢಿಸಿಕೊಳ್ಳುತ್ತಾರೆ. ಈ ಜಗತ್ತಿನ್ಲಲಿ ಅವರವರ ಕೆಲಸ ಅವರವರೇ ಮಾಡಬೇಕು. ನೀವು ಬೇಕಾದರೆ ಇನ್ನೊಬ್ಬರಿಗೆ ಸಹಾಯ ಮಾತ್ರ ಮಾಡಬಹುದು. ಆದರೆ ಅವರ ಹೊಣೆಯನ್ನು ನಿಮ್ಮ ಹೆಗಲಿಗೆ ಹೊತ್ತುಕೊಳ್ಳಬೇಡಿ. ಇನ್ನೊಬ್ಬರ ಕೆಲಸಗಳನ್ನೇ ಮಾಡುತ್ತ್ದಿದರೆ ನಿಮ್ಮ ಕೆಲಸಗಳಿಗೆ ಸಮಯ ಉಳಿಯುವುದಿಲ್ಲ.
12) ಭವಿಷ್ಯದ ಪುಟಗಳು:
1 ವರ್ಷದ ನಂತರ ನಿಮ್ಮ ಬದುಕು ಹೇಗಿರಬೇಕು? 3 ವರ್ಷದ ನಂತರ ಹೇಗಾಗಬೇಕು? ಎಂಬ ಬಗ್ಗೆ ನಿಮ್ಮದೇ ಆದ ಕನಸುಗಳಿರಲಿ. ಎಲ ಕನಸುಗಳನ್ನು ಬರೆದಿಟ್ಟುಕೊಂಡು ಅವುಗಳತ್ತ ಮುನ್ನುಗ್ಗಲು ಯತ್ನಿಸಿ. ಪ್ರತಿ ಮುಂಜಾನೆ ನಿಮ್ಮ ಕನಸಿನ ಹಾದಿಯ್ಲಲಿ ಎಷ್ಟು ದೂರ ಕ್ರಮಿಸ್ದಿದೀರಿ ಎಂಬುದನ್ನು ಪರಿಶೀಲಿಸಿ. ನಿಮಗೆ ಗೊತ್ತ್ತಿಲ್ಲದೇ ನಿಮ್ಮ ದಿನಚರಿ ಬದಲಾಗುತ್ತೆ.
13) ಪರ್ಫೆಕ್ಟ್ ಮಂತ್ರ ಎಲೆಡೆ ಬೇಡ:
ಒಂದು ಎಸ್ಎಂಎಸ್ ಕಳಿಸಲು 5 ನಿಮಿಷ, ಈ ಮೇಲ್ಗೆ 15 ನಿಮಿಷ ವ್ಯಯಿಸುವುದು ದಡ್ಡತನವ್ಲಲವೇ? ಎಲದರ್ಲಲಿಯೂ ಪರ್ಫೆಕ್ಟ್ ಆಗಿರಬೇಕೆಂಬ ಹಠ ಬೇಡ. ಯಾವುದು ಎಷ್ಟು ಶ್ರದ್ಧೆ ಬಯಸುತ್ತದೆಯೋ ಅದಕ್ಕೆ ಅಷ್ಟು ಶ್ರದ್ಧೆ ನೀಡಿದರೆ ಸಾಕು.
14) ಆದ್ಯತೆ ಮುಖ್ಯ:
ಪರೀಕ್ಷೆ ಹತ್ತಿರ ಇದಾಗ ಗಂಟೆಗಟ್ಟಲೆ ಕೇರಂಬೋರ್ಡ್ ಆಡುವುದು, ಮಾರನೇ ದಿನ ರನ್ನಿಂಗ್ ರೇಸ್ನ್ಲಲಿ ಓಡಬೇಕು ಅಂದ್ರೆ ಇವತ್ತು ಮ್ಯೂಚ್ಯುಯಲ್ ಫಂಡನ ಎನ್ಎವಿ ಲೆಕ್ಕ ಹಾಕುತ್ತಾ ಕೂರುವುದು ಎಷ್ಟು ಸರಿ. ಈ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯವಿದೆ ಅಲವೇ? ಮೊದಲು ಮಾಡಬೇಕಾದ ಕೆಲಸ ಮೊದಲು ಮಾಡಿ.
15) ಬೇಡದ ಕೆಲಸಗಳು:
ಚೆನ್ನಾಗಿ ಮಾಡಲು ಬರುತ್ತದೆ ಎಂಬ ಒಂದೇ ಕಾರಣಕ್ಕೆ ಬೇಡದ ಕೆಲಸಗಳನ್ನು ಮಾಡುವುದು ಎಷ್ಟು ಸರಿ? ಚೆನ್ನಾಗಿ ಕಸಗುಡಿಸಲು ಬರುತ್ತದೆ ಎಂದು ಬೀದಿಯೆಲ್ಲಾ ಕಸ ಗುಡಿಸಲು ಸಾಧ್ಯವೇ? ಬದುಕಿನ್ಲಲೂ ಅಷ್ಟೇ ಚೆನ್ನಾಗಿ ಬರುತ್ತೆ, ನನಗಿಷ್ಟ ಎಂಬ ಎರಡೇ ನೆಪದಿಂದ ಎಷ್ಟೋ ಪ್ರತಿಫಲವೇ ಇಲದ- ಬೇಡದ ಕೆಲಸಗಳನ್ನು ಗುಡ್ಡೆ ಹಾಕಿಕೊಂಡು ಬ್ಯುಸಿಯಾಗಿರುತ್ತೇವೆ.
ಕೊನೆ ಮಾತು :ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರಾಗಿದ್ದ ಸರ್ಎಂ.ವಿಶ್ವೇಶ್ವರಯ್ಯನವರು `ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ' ಎಂದು ಹೇಳಿದ್ದಾರೆ. ಎಷ್ಟೊಂದು ನಿಜವಲ್ವಾ? ಯೋಚಿಸಿರಿ.

ಸಿಂಹ ಮತ್ತು ನರಿ

ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು. ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು:
"ನನಗೇನಾದರು ತಿನ್ನಲು ತಂದುಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ."
ನರಿ ನೇರವಾಗಿ ಒಂದು ಕತ್ತೆಯ ಬಳಿ ಹೋಗಿ ಹೇಳಿತು:
"ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ, ಬಾ ನನ್ನ ಜೊತೆ."
ನರಿಯ ಮಾತನ್ನು ನಂಬಿದ ಕತ್ತೆ ಸಿಂಹದ ಬಳಿ ಹೋಯಿತು.

ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಹಾರಿ ಆಕ್ರಮಿಸಿತು, ಕತ್ತೆಯ ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು...

ನಂತರ ಕತ್ತೆ ಮತ್ತೆ ತನ್ನನ್ನು ಭೇಟಿಯಾದ ನರಿಯೊಂದಿಗೆ ಕೇಳಿತು, "ನೀನು ನನಗೆ ಮೋಸ ಮಾಡಿಬಿಟ್ಟೆ ಅಲ್ವಾ?...! "

ನರಿ ಹೇಳಿತು: "ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು" ಎಂದು.
ಆಗ ಕತ್ತೆ ನರಿಯ ಮಾತು ಸತ್ಯವಾಗಿರಬಹುದು ಎಂದು ಭಾವಿಸಿ ನರಿಯ ಜೊತೆ ಮತ್ತೆ ಸಿಂಹದ ಬಳಿ ಹೋಯಿತು...

ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಅದರ ಬಾಲವನ್ನು ಕತ್ತರಿಸಿ ಹಾಕಿತು..!,
ಕತ್ತೆ ಮತ್ತೊಮ್ಮೆ ಕಷ್ಟಪಟ್ಟು ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು "ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!...

ನರಿ ಹೇಳಿತು: "ಅಯ್ಯೋ ಪೆದ್ದುಮುಂಡೇದು, ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಅನುಕೂಲ ಆಗಬೇಕಾಗಿ ತಾನೇ ನಿನ್ನ ಬಾಲವನ್ನು ಕತ್ತರಿಸಿದ್ದು"...

ಬಹಳ ಬುದ್ಧಿವಂತಿಕೆಯಿಂದ ಮಾತನಾಡಿದ ನರಿಯು ಕತ್ತೆ ವಾಪಸ್ ಸಿಂಹದ ಬಳಿ ಹೋಗುವಂತೆ ಮನವೊಲಿಸಿತು .....
ಈಗ ಸಿಂಹ ಕತ್ತೆಯನ್ನು ಹಿಡಿದು ಕೊಂದು ತಿಂದು ಹಾಕಿತು...!

ನಂತರ
ಸಿಂಹ ನರಿಯೊಂದಿಗೆ ಹೇಳಿತು: "ನೀನು ಒಳ್ಳೆಯ ಕೆಲಸ ಮಾಡಿದೆ, ವೆಲ್ ಡನ್, ಇನ್ನು ಹೋಗಿ ಇದರ ಚರ್ಮ ಸುಲಿದು ತಾ".....

ನರಿ ಕತ್ತೆಯ ಚರ್ಮ ಸುಲಿದು,,,
ಕತ್ತೆಯ ಮೆದುಳನ್ನು ತಿಂದು,,,
ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು...

ಸಿಂಹ ಕೋಪದಿಂದ ಕೇಳಿತು,:
"ಇದರ ಮೆದುಳು ಎಲ್ಲಿ...?"

ನರಿ ಉತ್ತರಿಸಿತು:
"ಅದಕ್ಕೆ ಮೆದುಳು ಎಂಬುದು ಇರಲಿಲ್ಲ ಪ್ರಭು... ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ವಾಪಸ್ ಬರ್ತಿತ್ತಾ???...!!!

ಸ್ನೇಹಿತರೇ...

ಒಮ್ಮೆ ಯೋಚಿಸಿ, ನಾವು ಎಂಥವರ ಜೊತೆ ಬದುಕುತ್ತಿದ್ದೇವೆ ?
ಪ್ರತಿ ದಿನ, ಪ್ರತಿ ಕ್ಷಣ ಯಾರನ್ನು ನಂಬಿ ಯಾರ ಬಳಿ ಹೋಗುತ್ತಿದ್ದೇವೆ ?
ಹಾಗಾದರೆ ನಮ್ಮಲ್ಲಿ ಮೆದುಳು ಉಂಟಾ ?

ನಮ್ಮಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ.
"ಚಂದಾಮಾಮ" ಕಥೆ ಇದು...!

ಮಾರ್ಚ್ 26, 2026

ಸದಯಂ ಹೃದಯಂ ಯಸ್ಯ

ಸದಯಂ ಹೃದಯಂ ಯಸ್ಯ" ಎಂಬುದು ನೀತಿಶಾಸ್ತ್ರದ ಪ್ರಸಿದ್ಧ ಶ್ಲೋಕದ ಭಾಗವಾಗಿದ್ದು, ದಯಾಪರತೆ, ಸತ್ಯ ಮತ್ತು ಪರಹಿತ ಚಿಂತನೆಯ ಮಹತ್ವವನ್ನು ಸಾರುತ್ತದೆ. ಇದರ ಪೂರ್ಣ ರೂಪ:

"ಸದಯಂ ಹೃದಯಂ ಯಸ್ಯ, ಭಾಷಿತಂ ಸತ್ಯಭೂಷಿತಂ | ಕಾಯಃ ಪರಹಿತೇ ಯಸ್ಯ, ಕಲಿಃ ಕುರ್ವೀತ ತಸ್ಯ ಕಿಮ್ ||"

ಯಾರ ಹೃದಯದಲ್ಲಿ ದಯೆ, ನಾಲಿಗೆಯಲ್ಲಿ ಸತ್ಯ ಮತ್ತು ದೇಹವು ಇತರರ ಸೇವೆಗೆ ಮೀಸಲಾಗಿರುತ್ತದೆಯೋ, ಅಂಥವನನ್ನು ಕಲಿಯುಗವು (ಕಲಿಪುರುಷ) ಬಾಧಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥ.

ಶ್ಲೋಕದ ವಿವರಣೆ:
ಸದಯಂ ಹೃದಯಂ ಯಸ್ಯ: ಯಾರ ಹೃದಯದಲ್ಲಿ ದಯೆ/ಕರುಣೆ ತುಂಬಿದೆಯೋ.

ಭಾಷಿತಂ ಸತ್ಯಭೂಷಿತಂ: ಯಾರ ಮಾತು ಸತ್ಯದಿಂದ ಕೂಡಿರುತ್ತದೆಯೋ (ಸತ್ಯವೇ ಆಭರಣವಾಗಿದೆಯೋ).

ಕಾಯಃ ಪರಹಿತೇ ಯಸ್ಯ: ಯಾರ ಶರೀರವು ಇತರರ ಹಿತಕ್ಕಾಗಿ (ಸೇವೆಗಾಗಿ) ಮೀಸಲಾಗಿದೆಯೋ.

ಕಲಿಃ ಕುರ್ವೀತ ತಸ್ಯ ಕಿಮ್: ಅಂಥವನಿಗೆ ಕಲಿಪುರುಷನು (ದುಷ್ಟ ಶಕ್ತಿ/ಕಲಿಯುಗದ ದೋಷಗಳು) ಏನು ತಾನೇ ಮಾಡಬಲ್ಲನು?.

ಸಾರಾಂಶವೆಂದರೆ, ಯಾರ ಹೃದಯವು ದಯೆಯಿಂದ ಕೂಡಿರುವುದೋ,ಯಾರ ಮಾತು ಸತ್ಯದಿಂದ ಕೂಡಿರುವುದೋ, ಯಾರ ದೇಹವು ಇತರರಿಗಾಗಿ, ಇತರರ ಒಳಿತಿಗಾಗಿ ಇರುವುದೋ ಅವರನ್ನು ಹೃದಯವಂತರು, ದೇವಮಾನವರು ಎನ್ನಬಹುದು.

ಹೃದಯಹೀನರಾಗದೆ, ಹೃದಯವಂತರಾಗೋಣ, ದೀರ್ಘಾಯುಷ್ಯವಂತರಾಗಿ, ಮಾನವತೆಯ ಪ್ರತಿರೂಪವಾಗಿ ಬಾಳಿ ಬದುಕೋಣ.

ಒಂಟಿತನ

ಓರ್ವ ಇಂದಿನ ಭಾನುವಾರದ ಪತ್ರಿಕೆಯಲ್ಲಿ ಮುದ್ರಣ ಜಾಹೀರಾತನ್ನು ಓದಿದ..‌
ಫ್ಲಾಟ್... ಕೇವಲ 30 ಲಕ್ಷಕ್ಕೆ.
ಐಷಾರಾಮಿ ಪ್ರದೇಶ, 
ದಾರಿಯಲ್ಲಿ...
 ಶಾಪಿಂಗ್ ಮಾಲ್‌ಗಳು ಥಿಯೇಟರ್‌ಗಳು..  ಆ ಯುವಕ ಜಾಹೀರಾತನ್ನು ಓದಿದನು. 
ಅವನು ಫ್ಲಾಟ್ ನೋಡಲು ತನ್ನ ಹೆಂಡತಿಯೊಂದಿಗೆ ಆ ಪೊಶ್ ಪ್ರದೇಶದ ಸೊಸೈಟಿಗೆ ಪ್ರವೇಶಿಸಿದನು. ಇಡೀ ಆ ಪ್ಲಾಟ್ ಸೊಸೈಟಿ, ಆ ಸ್ಥಳ, ಅಲ್ಲಿನ ನಿವಾಸಿಗಳು ಜನರು ... ಎಲ್ಲವನ್ನೂ ಎಚ್ಚರಿಕೆಯಿಂದ ನೋಡಿದರು ... ಪ್ರವೇಶಿಸುವಿಕೆ ಕೂಡ ಚೆನ್ನಾಗಿತ್ತು ... ತುಂಬಾ ಸುಸಜ್ಜಿತ ಮತ್ತು ಮಾಡರ್ನ್  ಸಮಾಜದಲ್ಲಿ ಸುಂದರ  ಫ್ಲಾಟ್ ..

ಮೂರನೇ ಮಹಡಿಯಲ್ಲಿ ಫ್ಲಾಟ್ ಸಂಖ್ಯೆ 303 ರ ಕಾಲಿಂಗ್ ಬೆಲ್ ರಿಂಗಣಿಸಿತು. ಅಜ್ಜಿಯೊಬ್ಬರು ಫ್ಲಾಟ್‌ನ ಬಾಗಿಲು ತೆರೆದು ಇಡೀ ಫ್ಲಾಟ್ ಅನ್ನು ತೋರಿಸಿದರು .. 
ಗ್ಯಾಲರಿ... ಅಡುಗೆ ಮನೆ... 🍒 ಫರ್ನಿಚರ್... ಪ್ಯಾಸೇಜ್... ಎಲ್ಲವೂ ಗಾಜಿನಂತೆ ಸ್ಪಷ್ಟ.
  
ಒಳಗಿನ ಕೋಣೆಯಲ್ಲಿ ವಯಸ್ಸಾದ  ಮುಪ್ಪಿನ ಬಿಳಿ ಕೂದಲಿನ ಓರ್ವರು  ವಿಕಲಚೇತನ ಮಹಿಳೆ ವೀಲ್ ಚೇರ್ ಮೇಲೆ ಕುಳಿತಿದ್ದರು...

"ನಮಸ್ತೆ, ಈ ಫ್ಲಾಟ್ ಖರೀದಿ ಮಾಡುವ ಅಂತಾ ಬಂದಿದ್ದೇವೆ ಇದರ ಬೆಲೆ ಎಷ್ಟು!?" ಎಂದು ಯುವಕ ಕೇಳಿದೆ.
"ಮೊದಲು ನನ್ನನ್ನು ಅಜ್ಜಿ ಎಂದು ಕರೆಯಬೇಡಿ ನಾನು ಅಮೃತ ಶರ್ಮಾ. ಪತ್ರಿಕೆಯಲ್ಲಿ ಬೆಲೆ ಬರೆಯಲಾಗಿದೆ...ಆದರೆ  ಬೇಕಾದರೆ ಇನ್ನೂ ಎರಡು ಮೂರು ಲಕ್ಷ ಕಡಿಮೆ ಮಾಡಿ ಕೊಡುವೆ ನೋಡಿ.. ಕುಳಿತುಕೊಳ್ಳಿ..‌"
ಆಗ ಆ ಮಹಿಳೆ ಕೂಗುತ್ತಾ ಹೇಳಿದಳು, ಚಹಾ ತಂದ ಈ ಹುಡುಗಿಗೆ  ಹೇಳಿದಳು ಇವರಿಗೆ  ಚಾಕಲೇಟ್ ತಂದು ಕೊಡು. "ಶಾಂತಿಯಿಂದ ಕುಳಿತುಕೊಳ್ಳಿ.. ಆಗ ಇದೆಲ್ಲ ನಡೆಯುತ್ತದೆ.." ಕ್ರಮೇಣ ಮಾತುಕತೆ ಸಾಗಿತು... ಉದ್ಯೋಗ... ಫ್ಲಾಟ್ ಇತಿಹಾಸ... ಕುಟುಂಬದ ವಿಷಯಗಳು, ಬದುಕಿನ ಬವಣೆಗಳು ಹವ್ಯಾಸಗಳು, ಜೀವನದ ರಹಸ್ಯಗಳು... ಯೌವನದ ಹವ್ಯಾಸಗಳು..  ಚರ್ಚೆ ನಂತರ ಕೆಲವು ಹಳೆಯ ಆಲ್ಬಂಗಳತ್ತ ಸಾಗಿತು...

ಯುವಕನಿಗೆ ತಾವು ಬಂದು ಬಹಳ‌ ಸಮಯ ಆಯಿತು ಎಂದು ಅನಿಸಿತು. ಎರಡು ಗಂಟೆಗೂ ಹೆಚ್ಚು ಕಾಲ ಅವರು ಮಾತನಾಡಿದರು.. ಯುವಕ ಮತ್ತು ಅವನ ಹೆಂಡತಿ ಎಚ್ಚರಗೊಂಡರು.
ಆಯಿತು, ಬರುತ್ತೇವೆ ಎಂದು ಹೇಳಿ ಹಿಂದೆ ತಿರುಗಿ ಬಂದರು. ಅಂತಹ ಸುಂದರವಾದ ಫ್ಲಾಟ್, ಉತ್ತಮ ಸ್ಥಳ, ಬೆಲೆ ಕೂಡ ತುಂಬಾ ಅಗ್ಗವಾಗಿದೆ ಆದರೂ ಯಾಕೆ ಇದು ಇನ್ನೂ ಮಾರಾಟವಾಗಿಲ್ಲ!? ಯುವ ದಂಪತಿಗಳು ತಮ್ಮಲ್ಲಿಯೇ ಪ್ರಶ್ನಿಸಿಕೊಂಡರು.
ನಾನು ಭದ್ರತಾ ಸಿಬ್ಬಂದಿಯನ್ನು ಕೇಳುತ್ತೇನೆ .. ಎಂದ ಆತ.
ಸೆಕ್ಯೂರಿಟಿ ಗಾರ್ಡ್ ಎಲೆ ಅಡಿಕೆ ಜೊತೆ ತಂಬಾಕು ಉಜ್ಜುತ್ತಾ ಹೇಳಿದ...
ಆ ಅಜ್ಜಿ ತನ್ನ ಸಮಯ ಕಳೆಯಲು ಈ ರೀತಿ ಮಾಡುತ್ತಾರೆ. ಯಾರೂ ಬರದಿದ್ದರೆ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಜನರನ್ನು ಆಹ್ವಾನಿಸುತ್ತಾಳೆ...ಕೆಲವೊಮ್ಮೆ ಫ್ರಿಡ್ಜ್ ಮಾರುತ್ತಾಳೆ... ಕೆಲವೊಮ್ಮೆ ಅಲ್ಮೆರಾ ಮಾರುತ್ತಾಳೆ... ಕೆಲವೊಮ್ಮೆ ಡೈನಿಂಗ್ ಟೇಬಲ್.. ಹೀಗೆ ಜಾಹಿರಾತು ಕೊಟ್ಟು ಬಂದವರ ಬಳಿ ಸುಮ್ಮನೆ ಟೈಮ್ ಪಾಸ್ ಮಾಡುತ್ತಾಳೆ... ಎಲ್ಲರಿಗೂ ಒಳ್ಳೆಯ ಊಟವನ್ನು ಉಣಬಡಿಸುತ್ತಾಳೆ. .. ನಿಮಗೂ ಆಕೆ  ಆ ದುಬಾರಿ ವಿದೇಶಿ ಚಾಕಲೇಟ್ ತಿನ್ನಿಸಿರಬೇಕು.... ಅವಳ ಮಗ ವಿದೇಶದಿಂದ ಕಳುಹಿಸುತ್ತಾನೆ. ಆತ ವಿದೇಶದಲ್ಲಿ ಯಾವುದೋ ದೊಡ್ಡ ಕಂಪನಿಯಲ್ಲಿ ದೊಡ್ಡ ನೌಕರಿ ಇದೆ. ಕೋಟಿ, ಕೋಟಿ ಸಂಬಳ. ಇಲ್ಲಿಗೆ ಬರುವುದಿಲ್ಲ. ಮನೆಗೆ ಯಾರೂ ಬರುವುದಿಲ್ಲ ಅಜ್ಜಿಗೆ ಬೇಸರ!! ಒಂಟಿ ಜೀವನ, ಮಾತನಾಡಲು ಹರಟೆ ಹೊಡೆಯುತ್ತಾ ಕೂರಲು ತಮ್ಮವರು ಯಾರೂ ಇಲ್ಲ.. 
ಆಗಾಗ ಸುಮ್ಮನೆ ಈ ರೀತಿ ಜಾಹೀರಾತು ಹಾಕಿ ಮನೆ ಖರೀದಿಗೆಂದು ಬಂದವರ ಜೊತೆ ಹರಟೆ ಹೊಡೆಯುತ್ತಾ ಕೂರುತ್ತಾರೆ.. ಪುಷ್ಕಳ ಭೋಜನ ವ್ಯವಸ್ಥೆ ಮಾಡಿಸಿ ಕಳುಹಿಸುತ್ತಾರೆ ಅಷ್ಟೇ.. ನೀವು ಇದನ್ನು *ಟೈಂಪಾಸ್*⏰ ಎಂದು ಕರೆಯಿರಿ ಅಥವಾ... *ಒಂಟಿತನಕ್ಕೆ ಮದ್ದು*...!!🧮

> *ಹೇಳದೇ ಉಳಿದ ಮಾತು:*
🔽
> ಈಗ ಒಬ್ಬ ಮನುಷ್ಯನಿಗೆ ಎಲ್ಲಾ *ಸೌಲಭ್ಯಗಳಿವೆ*... ಆದರೆ ಅವನ ಜೊತೆ ಸ್ವಲ್ಪ ಹೊತ್ತು ಕೂರಲು ಯಾರೂ ಇರುವುದಿಲ್ಲ.. ಇದು ಶ್ರೀಮಂತಿಕೆಯು ಸೃಷ್ಟಿಸಿದ ಬಡತನ !! 😪

ಲೈಫ್ ಜೊತೆ ಒಂದು ಸೆಲ್ಫಿ 🤳

ನಮಸ್ಕಾರದಿಂದ ಆಯುಷ್ಯವೂ ವೃದ್ಧಿಯಾಗುತ್ತದೆ

ಮಾರ್ಕಂಡೇಯ ಮುನಿಗಳು ದೀರ್ಘಾಯುಷಿಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.

ಮೃಕಂಡು ಮನಿಗಳ ಮಗನಿಗೆ  9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."

*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| 
ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥

ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.

ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.

ಕಾಲ ಕಳೆಯಿತು.....

ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.

ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.

ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.

ಪ್ರದಕ್ಷಿಣ ನಮಸ್ಕಾರ

ಮಂದಿರಗಳಲ್ಲಿ,ಅಗ್ನಿಗೆ,ಅಶ್ವತ್ಥವೃಕ್ಷಕ್ಕೆ,ತುಳಸಿಗೆ ಸುತ್ತುವರಿದು ನಮಸ್ಕಾರ ಮಾಡುತ್ತೇವೆ.ಅದೇ ಪ್ರದಕ್ಷಿಣೆ ನಮಸ್ಕಾರ ಅಥವಾ ಪರಿಕ್ರಮ. ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸುವುದು ಪದ್ಧತಿ.ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಬೇಕು.ದೇವರ ಅಭಿಮುಖವಾಗಿ ನಿಂತರೆ ಎಡಭಾಗ ಯಾವುದಾಗುವುದೋ ಅಲ್ಲಿಂದ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.ಪ್ರದಕ್ಷಿಣೆಯನ್ನು ಮಾಡುವಾಗ ಮೌನದಿಂದ,ಸ್ತೋತ್ರಗಳನ್ನು ಪಠಿಸುತ್ತಾ,ಪ್ರಾರ್ಥಿಸುತ್ತಾ,ಏಕಾಗ್ರತೆಯಿಂದ ಪ್ರದಕ್ಷಿಣೆ ನಮಸ್ಕಾರವನ್ನು ಸಲ್ಲಿಸಬೇಕು.

ಒಂದು ವೃತ್ತಕ್ಕೆ ಒಂದು ಕೇಂದ್ರಬಿಂದುವಿರಲೇಬೇಕು. ಭಗವಂತನಿಂದ ರಚಿತವಾದ ಈ ಪ್ರಪಂಚ ಒಂದು ವೃತ್ತ(Circle). ಇಲ್ಲಿ ಕೇಂದ್ರಬಿಂದು (Center Point) ಪರಮಾತ್ಮ.ಕೇಂದ್ರಬಿಂದುವಿಲ್ಲದೇ ವೃತ್ತವಿಲ್ಲ.ಪರಮೇಶ್ವರನ ಅಸ್ತಿತ್ವವಿಲ್ಲದೇ ಲೋಕವಿಲ್ಲ. ಹಾಗಾಗಿ ಆ ಕೇಂದ್ರಬಿಂದುವಿನ ಸುತ್ತ ಭಕ್ತಿಯಿಂದ ಸುತ್ತಲೇಬೇಕು.ಹಾಗೇ ಸುತ್ತುವಾಗ ನಮ್ಮ ಕರ್ಮ ಹಾಗೂ ಚಿಂತನೆಗಳು ಕೇಂದ್ರಬಿಂದುವಾದ ಭಗವಂತನಲ್ಲಿ ಲೀನವಾಗುತ್ತವೆ.ಕೇಂದ್ರಬಿಂದು ಯಾವಾಗಲೂ ಸ್ಥಿರ.ಸೌರಮಂಡಲದಲ್ಲಿ ಸೂರ್ಯನೇ ಕೇಂದ್ರಬಿಂದು.ಆತನ ಸುತ್ತಲೂ ಉಳಿದ ಗ್ರಹಗಳು ಸುತ್ತುತ್ತಿರುತ್ತವೆ.ಹಾಗೇ ಪ್ರಪಂಚದಲ್ಲಿ ಭಗವಂತನೇ ಕೇಂದ್ರಬಿಂದು,ಹಾಗಾಗಿ ನಾವು ಭಗವಂತನ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂದು ತಿಳಿಯುತ್ತದೆ. ಕೇಂದ್ರಬಿಂದುವಿಲ್ಲದೇ ವೃತ್ತವನ್ನು ರಚಿಸಲು ಸಾಧ್ಯವಿಲ್ಲ.ಹಾಗೇ ನಮ್ಮ ಶರೀರದ ಕೇಂದ್ರಬಿಂದು ಮನಸ್ಸು.ಮನಸ್ಸಿನಲ್ಲಿ ಭಗವಂತನಿರದಿದ್ದರೆ ಶಾಂತಿ,ನೆಮ್ಮದಿ ದೊರಕುವುದಿಲ್ಲ.ಮನದಲ್ಲಿ ಭಗವಂತ ನೆಲೆಗೊಳ್ಳಲಿ ಎಂದು ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.ವೃತ್ತದಲ್ಲಿರುವ ಪ್ರತಿಯೊಂದು ಬಿಂದುವೂ ಕೇಂದ್ರಬಿಂದುವಿಗೆ ಸರಿಸಮಾನವಾಗಿರುತ್ತದೆ.ಹಾಗೇ ನಾವೆಲ್ಲೇ ಇರಲಿ,ಏನನ್ನೇ ಮಾಡಲಿ ಅದು ಕೇಂದ್ರಬಿಂದುವಾದ ಭಗವಂತನಿಗೆ ಹತ್ತಿರವಾಗಿಯೇ ಇರುತ್ತದೆ.ಆತನ ದಯೆಯಿಲ್ಲದೇ ಏನನ್ನೂ ಸಾಧಿಸಲಾಗದು. ಹಾಗೇ ದೇವಾಲಯದ ಪರಿಸರ ಶಾಂತ ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಪ್ರದಕ್ಷಿಣೆಯ ಸಮಯದಲ್ಲಿ ಆ ಸಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ ಶರೀರ ಚೈತನ್ಯಮಯವಾಗುತ್ತದೆ ಹಾಗೇ ಮಾನಸಿಕ ಶಾಂತಿಯೂ ಸಿಗುತ್ತದೆ.ಎಲ್ಲ ಜಂಜಾಟಗಳನ್ನು ಮರೆತು ಭಗವಂತನ ಸನ್ನಿಧಿಯಲ್ಲಿ ತುಸುಹೊತ್ತು ಕಳೆದರೆ ನವೋಲ್ಲಾಸ ಸಿಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.
ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.
ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ
.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಅಥವಾ 5 ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.
ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.
ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

 "ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||"

(ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಮಾರ್ಚ್ 6, 2026

ಕೋಟಿ ಗಳಿಸಿ ಮನೆ ಮೇಲೊಂದು ಮನೆ

ಅದ್ಭುತವಾದ ಕಥೆ ಇದು ಎಲ್ಲರೂ ತಪ್ಪದೇ ಓದಿರಿ….. ಈ ಕಥೆಯನ್ನು ಓದಿದ ಕೆಲವರಲ್ಲಾದರೂ ಬದಲಾವಣೆ ಯಾಗುತ್ತದೆ. 

    ನಿಜವಾಗಿಯೂ ಇದೊಂದು ಕಣ್ಣು ತೆರೆಸುವಂತಹ ಅದ್ಭುತವಾದ ನೀತಿಕಥೆ. ಒಂದಾನೊಂದು ನಗರದಲ್ಲಿ ಲಕ್ಷ್ಮೀಪತಿ ಎಂಬ ವ್ಯಕ್ತಿ ಇದ್ದನು. ಆತನಿಗೆ ಒಂದು ಸಂಕಲ್ಪವಿದೆ. ಅವರ ಮನೆಯ ಹತ್ತಿರದಲ್ಲಿ ಒಂದು ಸುಂದರವಾದ ಭವನವಿದೆ. ಯಾರದು ಆ ಮನೆ ಎಂದು ಕೇಳಿದರೆ ಯಾರೋ ಕೋಟ್ಯಾಧಿಪತಿಯ ಮನೆ ಎಂಬ ಉತ್ತರ ಬರುತ್ತದೆ. ಆಗ ಅಂದು ಕೊಳ್ಳುತ್ತಾನೆ ಈ ನಗರದಲ್ಲಿರುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ತಾನೂ ಸೇರಬೇಕು ಎಂದು. ಅದಕ್ಕಾಗಿ ಆತನು ಯುವಕನಾಗಿದ್ದಾಗಿನಿಂದಲೂ ತುಂಬಾ ಕಷ್ಟಪಡುತ್ತಿದ್ದನು. ಹಗಲು ರಾತ್ರಿ ದುಡಿಯುತ್ತಿದ್ದನು. ಸಂಪಾದನೆ ಮಾಡುವುದೇ ಸರ್ವಸ್ವವೆಂದು ಭಾವಿಸಿ ದುಡಿಯುತ್ತಿದ್ದನು.

    40 ವರ್ಷದೊಳಗೆ ಕೋಟ್ಯಾಧಿಪತಿಯಾದನು. ಒಂದು ಕೋಟಿಯ ನಂತರ ಇನ್ನೊಂದು ಕೋಟಿ ಹೀಗೆ 50 ವರ್ಷದೊಳಗೆ ಎಷ್ಟೋ ಕೋಟಿಗಳ ಹಣ ಸಂಪಾದನೆ ಮಾಡಿದ. ಹಿಂದೆ ತಾನು ನೋಡಿದ ಬಂಗಲೆಯಂತಹ 2-3 ಬಂಗಲೆಗಳನ್ನು ಕಟ್ಟಿಸಿದನು. ಆದರೂ ತೃಪ್ತಿಯಾಗಲಿಲ್ಲ. ಈಗಿರುವ ಮನೆಗಳಲ್ಲದೆ, ನಗರದ ಮಧ್ಯಭಾಗದಲ್ಲಿ ತನ್ನ ಶ್ರೀಮಂತಿಕೆಯನ್ನು ಜನರಿಗೆ ತಿಳಿಯುವಂತೆ ಮಾಡಲು ಇಂದ್ರ ಭವನದಂತಹ ಒಂದು ಮನೆಯನ್ನು ಕಟ್ಟಿಸಬೇಕೆಂದು ಅದಕ್ಕಾಗಿ ಮತ್ತಷ್ಟು ಕಷ್ಟಪಟ್ಟು ದುಡಿದನು.

    ಅಂದುಕೊಂಡದ್ದನ್ನು ಸಾಧಿಸಿದನು ಲಕ್ಷ್ಮೀಪತಿ. ನಗರದ ಮಧ್ಯದಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಅದ್ಭುತವಾದ ಭವನವನ್ನು ಕಟ್ಟಿಸಿದನು.  ಅದರ ಗೃಹಪ್ರವೇಶದ ದಿನದಂದು ನಗರದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಆಹ್ವಾನಿಸಿದನು. ಒಂದೊಂದು ದೇಶಕ್ಕೆ ಸಂಬಂದಿಸಿದ ಒಂದೊಂದು ವೈಶಿಷ್ಠತೆಗಳೆಲ್ಲವನ್ನು ಒಂದೇ ಕಡೇ ಹೊಂದಿಸಿದಂತೆ ಆ ಮನೆ ಇರುವುದರಿಂದ ಎಲ್ಲರೂ ಅಬ್ಬಾ! ಎಂದು ಆಶ್ಚರ್ಯಪಟ್ಟರು. ಶಭಾಷ್ ಎಂದು ಲಕ್ಷ್ಮೀಪತಿಯನ್ನು ಅಭಿನಂದಿಸಿದರು.

    ಬಂದಿದ್ದ ಅತಿಥಿಗಳೆಲ್ಲರೂ ಹೋದ ಮೇಲೆ, ಲಕ್ಷ್ಮೀಪತಿ ಮಲಗುವ ಕೋಣೆಗೆ ಹೋಗಿ ಹಾಸಿಗೆ ಮೇಲೆ ಹಾಗೆಯೇ ಮಲಗಿದನು. ಹೆಂಡತಿ ಮಕ್ಕಳು ಇನ್ನೂ ಪೋನ್ ನಲ್ಲಿ ಎಲ್ಲರೊಂದಿಗೆ ಮಾತಾಡುತ್ತಿದ್ದರು. ಮನೆಯ ವೈಭೋಗದ ಬಗ್ಗೆ, ಅಥಿತಿಗಳ ಕಾಮೆಂಟಗ’ಗಳ ಬಗ್ಗೆ, ಮನೆಗೆ ಆದ ಖರ್ಚಿನ ಬಗ್ಗೆ ಅವರು ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಲಕ್ಷ್ಮೀಪತಿಗೆ ಯಾಕೋ ಇಂದು ಕಣ್ತುಂಬ ನಿದ್ದೆ ಹೋಗಬೇಕೆನ್ನಿಸಿತು.

    ನಿಧಾನವಾಗಿ ಕಣ್ಣು ಮುಚ್ಚುತ್ತಿರುವಾಗ “ನಾನು ಹೋಗುತ್ತೇನೆ” ಎಂದು ಯಾರೋ ಕಿವಿಯಲ್ಲಿ ಹೇಳಿದಂತಾಯಿತು. ಕಣ್ಣು ತೆರೆದು ನೋಡಿದರೆ ಏನೂ ಕಾಣಿಸಲಿಲ್ಲ. ಎಲ್ಲಾ ಕತ್ತಲೆಯಂತಿದೆ. ಯಾರು? ಎಂದನು…. ಲಕ್ಷ್ಮೀಪತಿ. ಆದರೂ ತನ್ನ ಧ್ವನಿಗೆ ಪ್ರತಿಧ್ವನಿ ನೀಡಿದಂತೆ ಆಯಿತು. ನಾನು ನಿನ್ನ ಆತ್ಮ , ನಾನು ಹೋಗುತ್ತಿದ್ದೇನೆ ಎಂದು  ಕೇಳಿ ಬಂದಿತು.

    ಅದೇನು, ನೀನು ಹೋದರೆ ನಾನು ಸತ್ತು ಹೋಗ್ತೀನಿ ಅಲ್ವಾ! ಎಂದು ಗಾಬರಿಯಾದನು ಲಕ್ಷ್ಮೀಪತಿ. ಹೌದು ಎಂದು ಪ್ರತಿಧ್ವನಿಸಿತು. ಆಗ ಆತ್ಮ ಬೇಡ ಹೋಗಬೇಡ! ನೋಡು ಎಷ್ಟು ಸುಂದರವಾದ ಮನೆಯನ್ನು ಕಟ್ಟಿಸಿದ್ದೇನೆ. ಎಷ್ಟು ಹಣ ಸಂಪಾಧನೆ ಮಾಡಿದ್ದೆನೆ. ನೋಡು ಇವೆಲ್ಲಾ ನಿನಗೋಸ್ಕರನೇ ಅಲ್ವಾ! ನಿನ್ನನ್ನು ಸುಖಪಡಿಸುವುದಕ್ಕೆ ಅಲ್ವಾ, ನಿನ್ನ ತೃಪ್ತಿಗಾಗಿಯೇ ಅಲ್ವಾ. ಇರು ನನ್ನಲ್ಲಿದ್ದು ಇವೆಲ್ಲವನ್ನು ಅನುಭವಿಸು ಎಂದನು ಲಕ್ಷ್ಮೀಪತಿ. ಅನುಭವಿಸಬೇಕಾ….? ಹೇಗೆ ಅನಿಭವಿಸಲಿ….? ನಿನ್ನ ಶರೀರಕ್ಕೆ ಡಯಾಬೀಟಿಸ್ ಇರುವುದರಿಂದ ಸಿಹಿ ತಿನ್ನಲು ಆಗುವುದಿಲ್ಲ, ನಿನ್ನ ಶರೀರಕ್ಕೆ BP ಇರುವುದರಿಂದ ಉಪ್ಪು ಕಾರವನ್ನು ತಿನ್ನುವುದಕ್ಕೆ ಆಗುವುದಿಲ್ಲ, ಅದರ ಮೇಲೆ ಇಷ್ಟುವೂ ಇಲ್ಲ. ಇನ್ನೂ ಇಷ್ಟವಾದದ್ದೂ ಏನೂ ತಿನ್ನಲಾರೆ ಏಕೆಂದರೆ ನಿನ್ನ ಶರೀರಕ್ಕೆ ಜೀರ್ಣಮಾಡಿಕೊಳ್ಳಲು ಆಗುವುದಿಲ್ಲ. ನಿನ್ನ ಶರೀರವು ಒಟ್ಟಾರೆಯಾಗಿ ಕಣ್ಣಿನಿಂದ ಕಾಲಿನ ಏರೆಗೂ ಒಂದು ರೀತಿಯ ರೋಗಗಳ ಹುತ್ತವಾಗಿದೆ.

    ಆ ಹೊಟ್ಟೆ ನೋಡು ಹೇಗೆ ಮುಂದಕ್ಕೆ ಬಂದಿದೆ. ಹೆಜ್ಜೆ ತೆಗೆದು ಮರು ಹೆಜ್ಜೆಹಾಕುವುದಕ್ಕೆ ನೀನು ಎಷ್ಟು ಆಯಾಸ ಪಡುತ್ತೀಯಾ ಎಂಬುದು ನಮ್ಮಿಬ್ಬರಿಗೂ ಗೊತ್ತು. ನೀನೇ ಹೇಳು ನಿನ್ನ ಶರೀರದಲ್ಲಿ ಹೇಗಿರಲಿ…? ಅಲ್ಲಲ್ಲಿ ಶಿಥಿಲವಾಗಿರುವ ಮನೆಯಲ್ಲಿ ಯಾರಾದ್ರು ಇರ್ತಾರಾ…? ನೀನು ಕಟ್ಟಿಸಿದ ಸುಂಧರವಾದ ಮನೆಯಿಂದ ನನಗೇನು ಸಂಬಂಧ…? ನಾನಿರುವುದು ನಿನ್ನ ಶರೀರದಲ್ಲಿ, ಅದೇ ನನ್ನ ನಿವಾಸಸ್ಥಳ. ನನ್ನ ಮನೆಗೆ ಇರುವ ಒಂಭತ್ತು ದ್ವಾರಗಳಿಗೂ ಸಮಸ್ಯೆಗಳೇ, ನನಗೆ ರಕ್ಷಣೆ ಇಲ್ಲ, ಸುಖವಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ, ನಿನಗೆ ಮೊದಲಿಗೆ ಬಂದತಹ ಖಾಯಿಲೆ, ಹಣದ ಖಾಯಿಲೆ ‌.

    ಹಣದ ಖಾಯಿಲೆ ನಿನಗೆ ಬಂದಂದಿನಿಂದ, ನನ್ನನು ಒಮ್ಮೆಯಾದರೂ ನಿದ್ದೆ ಮಾಡಲು ಬಿಟ್ಟಿದ್ದೀಯಾ…? ನಾನಿರುವ ಶರೀರಕ್ಕೆ ಸ್ವಲ್ಪವಾದರೂ ವಿಶ್ರಾಂತಿ ನೀಡಿದ್ದೀಯಾ….? ಪ್ರತೀಕ್ಷಣವೂ ಇನ್ನೊಬ್ಬನಿಗೆ ಪೈಪೋಟಿಯಾಗಿ ನನ್ನಲ್ಲಿ ಅಸೂಯೆಯನ್ನು ತುಂಬಿದ್ದೀಯಾ…? ಇನ್ನೊಬ್ಬನನ್ನು ಹಿಂದೆ ತಳ್ಳಲು ನನ್ನಿಂದ ಕುತಂತ್ರಗಳನ್ನು ಮಾಡಿಸಿದೆ. ಎಷ್ಟೋ ಸಾರಿ ನನ್ನನ್ನು ಹಗೆಯಿಂದ, ಹೊಟ್ಟೆಕಿಚ್ಚಿನಿಂದ, ಎಷ್ಟು ನೋಯಿಸಿದೆಯೋ ಒಂದುಸಾರಿ ನೆನಪುಮಾಡಿಕೋ… ರೋಗಗಳು ಆವರಿಸಿದರೂ, ಎಂದಾದರೂ ಗಮನ ಹರಿಸಿದೆಯಾ? ಯೋಚನೆ ಮಾಡಿ ನೋಡು. ಇನ್ನೂ ಒಂದು ಕ್ಷಣವೂ ನಾನು ನಿನ್ನ ಶರೀರದಲ್ಲಿ ಇರುವುದಿಲ್ಲ. ನಾನು ಹೋಗುತ್ತಿದ್ದೇನೆ…!” ಎಂದು ಆ ರಾತ್ರಿ ತಾನು ಸಂಪಾದನೆ ಮಾಡಿರುವ ಲಕ್ಷ್ಮೀಯನ್ನು ಇಲ್ಲಿಯೇ ಬಿಟ್ಟು ಲಕ್ಷ್ಮೀಪತಿ ಸ್ವರ್ಗಕ್ಕೋ ನರಕಕ್ಕೋ ಯಾವುದೋ ಒಂದು ಲೋಕಕ್ಕೆ ಕಾಣದಂತಹ ಲೋಕಕ್ಕೆ ಹೋಗಿಬಿಟ್ಟನು.

    ಇಂದು ಪ್ರತಿ ಮನುಷ್ಯನಿಗೂ ನಾಳೆಯ ಬಗ್ಗೆ ಆಲೋಚನೆ ಅಧಿಕವಾಗಿದೆ. ಆದ್ದರಿಂದ ಈ ದಿನ, ಈ ಕ್ಷಣವನ್ನು ಆನಂದದಿಂದ ಅನಿಭವಿಸುವುದನ್ನು ಮರೆತಿದ್ದಾನೆ. ದೇವರು ಕೊಟ್ಟ ಆರೋಗ್ಯವೇ ಮಹಾಭಾಗ್ಯ ಎಂಬ ವಿಷಯವನ್ನು ಮರೆತು, ಮನುಷ್ಯ ಸೃಷ್ಠಿಸಿಕೊಂಡ ಹಣವನ್ನೇ ಭಾಗ್ಯವೆಂದುಕೊಳ್ಳುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ರೋಗಗಳನ್ನು ಬರಲೆಂದು ಆಹ್ವಾನ ನೀಡಿ,  ಅವು ಬಂದಾಗ ಖರ್ಚು ಮಾಡಲು ಕಷ್ಟಪಟ್ಟು ಹಣಸಂಪಾದನೆ ಮಾಡುತ್ತಿದ್ದಾನೆ. ನಮ್ಮ ಅವಶ್ಯಕತೆಗಳನ್ನು ನೀಗಿಸಿಕೊಳ್ಳಲು ಕಷ್ಟಪಡಬೇಕು. ಆನಂದಿಸಲು ಕಷ್ಟಪಡಬೇಕು. ನಾವು ಇರುವ ಜೀವನಕ್ಕಾಗಿ ಕಷ್ಟಪಡಬೇಕು. ಅಷ್ಟೇ ಆಗಲಿ ನಾವು ಹೋದ ನಂತರದ ಜೀವನಕ್ಕಾಗಿ ಕಷ್ಟ ಪಡುವುದರಲ್ಲಿ ಏನಾದರೂ ಅರ್ಥವಿದೆಯೇ….?             

ಕೃಪೆ:-ಮುಖ ಪುಸ್ತಕ.
ಸಂಗ್ರಹ:- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ

ಮಾರ್ಚ್ 5, 2026

ಬ್ರೇಕ್ ಇರುವುದು ಕಾರು ನಿಲ್ಲಿಸುವುದಕ್ಕಲ್ಲ

ಅದು ಪಿಯುಸಿಯ ಒಂದು ಕ್ಲಾಸ್. ಭೌತಶಾಸ್ತ್ರ ಉಪನ್ಯಾಸಕ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದರು: ನಮ್ಮ ಕಾರುಗಳಲ್ಲಿ ಬ್ರೇಕ್‍ಗಳು ಯಾಕಿರ್ತವೆ ಅಂತ ಹೇಳಿನೋಡೋಣ.
ಎಲ್ಲ ಮಕ್ಕಳಿಗೆ ವಿಚಿತ್ರ ಅನಿಸಿತು.. ಇದೆಂಥ ಪ್ರಶ್ನೆ ಅಂತ. ಒಬ್ಬ ವಿದ್ಯಾರ್ಥಿ ಕೂಡಲೇ ಎದ್ದು ನಿಂತು ಹೇಳಿದ: ಸರ್ ಬ್ರೇಕುಗಳಿರುವುದು  ಕಾರನ್ನು ನಿಲ್ಲಿಸಲು.
ಇನ್ನೊಬ್ಬ ಹೇಳಿದ: ಕಾರಿನ ವೇಗವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು.
ಒಬ್ಬ ವಿದ್ಯಾರ್ಥಿ ಅಪಘಾತ ಆಗುವುದನ್ನು ತಪ್ಪಿಸಲಿಕ್ಕೆ.. ಡಿಕ್ಕಿ ಹೊಡೆಯೋದು ತಪ್ಪುತ್ತದೆ ಎಂದು ಹೇಳಿದ.
ಹೀಗೆ ವಿದ್ಯಾರ್ಥಿಗಳು ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಎಲ್ಲರ ಉತ್ತರಗಳೂ ಬಹುತೇಕ ಒಂದೇ ರೀತಿ ಇದ್ದವು.
ಆಗ ಉಪನ್ಯಾಸಕರು ತಾವೇ ಉತ್ತರ ನೀಡಲು ಮುಂದಾದರು.
`ನೀವೆಲ್ಲ ಸರಿಯಾದ ಉತ್ತರಗಳನ್ನೇ ನೀಡಿದ್ದೀರಿ. ನಿಮ್ಮ ಯೋಚನಾ  ಶಕ್ತಿ ನನಗೆ ಖುಷಿಯಾಯಿತು. ಆದರೆ, ಇದಕ್ಕಿಂತಲೂ ಮಿಗಿಲಾದ ದೊಡ್ಡ ಕಾರಣವೊಂದಿದೆ'-ಎಂದು ಹೇಳಿದಾಗ ವಿದ್ಯಾರ್ಥಿಗಳಿಗೆ ಅಚ್ಚರಿ. ಇನ್ನೇನಿರುತ್ತದೆ ಅಂತ.

ಬ್ರೇಕ್ ಇರುವುದು ಕಾರನ್ನು ಅತ್ಯಂತ ವೇಗವಾಗಿ ಓಡಿಸಲಿಕ್ಕೆ !
ಹೀಗೆಂದು ಪವನ್ ಪ್ರಸಾದ್ ಹೇಳಿದಾಗ ವಿದ್ಯಾರ್ಥಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು. ಕ್ಲಾಸಿನಲ್ಲಿ ಒಂದು ಗಾಢ ಮೌನ. ಯಾಕೆಂದರೆ, ಯಾರು ಕೂಡಾ ಈ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ವೇಗವಾಗಿ ಹೋಗಲು ಬೇಕಿರುವುದು ಎಕ್ಸಿಲೇಟರ್ ಅಲ್ವಾ? ಬ್ರೇಕ್ ಹೇಗಾಗ್ತದೆ ಎಂಬ ಪ್ರಶ್ನೆ ಅವರೆಲ್ಲರನ್ನೂ ಕಾಡಿತು.
ಉಪನ್ಯಾಸಕರು ತಾವೇ ಉತ್ತರಿಸಲು ಶುರು ಮಾಡಿದರು.
ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಕಾರಿಗೆ ಬ್ರೇಕೇ ಇಲ್ಲ ಅಂತಿದ್ರೆ ನೀವು ಕಾರನ್ನು ಎಷ್ಟು ವೇಗವಾಗಿ ಓಡಿಸುತ್ತೀರಿ? ಬ್ರೇಕ್ ಫೇಲ್ ಆಗಿರೋ ಕಾರು ಕೊಡ್ತೇನೆ ಅಂತಿಟ್ಕೊಳ್ಳಿ.
ವೇಗ ಬಿಡಿ, ಒಂದು ಮೀಟರ್ ಮುಂದೆ ಕೂಡಾ ಹೋಗುವುದಿಲ್ಲ ಅಲ್ವೇ? ಒಂದು ಕಾರನ್ನು ವೇಗವಾಗಿ ಓಡಿಸಲು ನಮಗೆ ಧೈರ್ಯ ನೀಡುವುದು ಅದಕ್ಕೊಂದು ಬ್ರೇಕ್ ಇದೆ ಎನ್ನುವ ನಂಬಿಕೆ ಅಲ್ವೇ? ಏನೇ ಆದರೂ ಬ್ರೇಕ್ ಇದೆ ಎನ್ನುವ ನಂಬಿಕೆಯಿಂದ ಅಲ್ಲವೇ ಕಾರನ್ನು 100, 200 ಕಿ.ಮೀ. ವೇಗದಲ್ಲಿ ಓಡಿಸುವುದು?
ಮುಂದುವರಿಸಿ.... ನಮ್ಮ ಬದುಕಿನಲ್ಲೂ ಅಷ್ಟೆ ಕೆಲವೊಂದು ಬ್ರೇಕ್‍ಗಳಿರ್ತವೆ. ಹೆತ್ತವರು, ಶಿಕ್ಷಕರು, ಸ್ನೇಹಿತರು ಎಲ್ಲರೂ ನಮ್ಮನ್ನು ಪ್ರಶ್ನೆ ಮಾಡ್ತಾರೆ. ಎಲ್ಲಿ ಹೋಗ್ತಾ ಇದ್ದೀಯಾ, ಏನ್ಮಾಡ್ತಾ ಇದೀಯಾ, ಮುಂದೇನು ಮಾಡ್ತೀಯಾ ಅಂತೆಲ್ಲ. ಇದೆಲ್ಲ ನಮಗೆ ಕಿರಿಕಿರಿ ಅನಿಸ್ತಾ ಇರ್ತದೆ. ಇದೆಲ್ಲ ನಮಗೆ ಅಡೆತಡೆ ಎಂದೇ ನಾವು ಭಾವಿಸುತ್ತೇವೆ.
ಆದರೆ, ಇವೇ ಪ್ರಶ್ನೆಗಳು ನಾವು ಹೋಗ್ತಾ ಇರುವ ದಾರಿ ಸರಿ ಇದೆಯಾ? ಎಷ್ಟು ವೇಗವಾಗಿ ಹೋಗ್ತಾ ಇದೇವೆ (ಹೋಮ್ ವರ್ಕ್ ಕಂಪ್ಲೀಟ್ ಆಯ್ತಾ?), ದಾರಿ ತಪ್ಪಿದ್ದೇವಾ ಎನ್ನುವುದನ್ನು ಅವಲೋಕನ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತವೆ.
 ನಾವು ಬ್ರೇಕ್ ಅಂದುಕೊಂಡಿದ್ದು ನಿಜದಲ್ಲಿ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತಾ ಇರುತ್ತದೆ. ತಪ್ಪಿದ್ದರೆ ಸರಿ ಮಾಡಿಕೊಳ್ಳಲು ಅವಕಾಶ ಕೊಡುತ್ತದೆ. ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಎಲ್ಲೂ ಆಕ್ಸಿಡೆಂಟ್ ಆಗದಂತೆ ನೋಡಿಕೊಳ್ಳುತ್ತದೆ.
ಅಂತ ಹೇಳಿ ಉಪನ್ಯಾಸಕರು ಮಕ್ಕಳ ಮುಖ ಮುಖ ನೋಡಿದರು. ಹೌದಲ್ವಾ ಅನ್ನುವ ಅಚ್ಚರಿ ಮಕ್ಕಳ ಮುಖದಲ್ಲಿತ್ತು.

#ಓದಿದ್ದು

ಮಾರ್ಚ್ 3, 2026

ವಾದವನ್ನು ಯಾರೊಂದಿಗೆ ಮಾಡಬೇಕು?

ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಕತ್ತೆಯೊಂದು , ಹುಲಿಗೆ ಹೇಳಿತು: 

"ಹುಲ್ಲಿನ ಬಣ್ಣ ನೀಲಿ".

ಹುಲಿ ಉತ್ತರಿಸಿತು:

"ಇಲ್ಲ, ಹುಲ್ಲು ಹಸಿರು ಬಣ್ಣದ್ದು."

ಚರ್ಚೆಯ ಬಿಸಿ ಯದ್ವಾತದ್ವಾ ಏರಿತು.

ವಾದ ಬಗೆ ಹರಿಯುವ ಸೂಚನೆ ಕಾಣದೆ ಇದ್ದಾಗ ಇಬ್ಬರು ಸೇರಿ ಒಂದು ಮಧ್ಯಸ್ಥಿಕೆಗೆ ಒಪ್ಪಿಸಲು ನಿರ್ಧಾರ ಮಾಡಿದರು.

ಇದಕ್ಕಾಗಿ ಕಾಡಿನ ರಾಜನಾದ ಸಿಂಹದ ಮೊರೆ ಹೋರಟರು.

ಸಿಂಹರಾಜ ತನ್ನ ಸಿಂಹಾಸನದ ಮೇಲೆ ಗಂಭೀರವದನನಾಗಿ ವಿರಾಜಮಾನನಾಗಿದ್ದ. 

ಸಿಂಹವನ್ನು ದೂರದಿಂದ ನೋಡುತ್ತಲೇ ಕತ್ತೆರಾಯ ಕೂಗಲು ಪ್ರಾರಂಭಿಸಿತು:

"ಓ ಮಹಾಪ್ರಭುಗಳೇ, ನೀವೇ ಹೇಳಿ, ಹುಲ್ಲಿನ ಬಣ್ಣ ನೀಲಿ ಎಂಬುದು ನಿಜವಲ್ಲವೇ?".

ತಡಮಾಡದಲೇ ಸಿಂಹ ಉತ್ತರಿಸಿತು:

"ಹೌದು ,ನಿಜ, ಹುಲ್ಲು ನೀಲಿ ಬಣ್ಣದ್ದು."

ಕತ್ತೆಗೆ ಎಲ್ಲಿಲ್ಲದ ಖುಷಿ, ಆತುರದಿಂದ ಮುಂದುವರಿದು ಹೇಳಿತು:

"ಇಲ್ಲಿ ನೋಡಿ ಮಹಾಸ್ವಾಮಿ ಈ ಹುಲಿಯಪ್ಪ ನನ್ನ ಮಾತನ್ನು ಒಪ್ಪುವುದಿಲ್ಲ, ವಿರೋಧಿಸುತ್ತಾನೆ ಮತ್ತು ನನಗೆ ಕಿರಿಕಿರಿ ಉಂಟುಮಾಡುತ್ತಿದ್ದಾನೆ, ದಯವಿಟ್ಟು ಇವನನ್ನು ಶಿಕ್ಷಿಸಿ."

ಆಗ ಸಿಂಹರಾಜನು ಘೋಷಿಸಿದನು:

"ಹುಲಿಗೆ 5 ವರ್ಷಗಳ ಕಾಲ ವಾಗ್ದಂಡನೆಯ (ಮೌನದಿಂದ ಇರಬೇಕು ಎಂಬ) ಶಿಕ್ಷೆ ನೀಡಲಾಗಿದೆ, ಇದನ್ನು ಹುಲಿ ಪಾಲಿಸತಕ್ಕದ್ದು."

ಕತ್ತೆಗೆ ಯುದ್ಧಗೆದ್ದ ಸಂಭ್ರಮ. ಹರ್ಷಚಿತ್ತದಿಂದ  "ಹುಲ್ಲಿನ ಬಣ್ಣ ನೀಲಿ , ಹುಲ್ಲಿನ ಬಣ್ಣ ನೀಲಿ"…ಎನ್ನುತ್ತಾ ಇನ್ನಷ್ಟು ಪ್ರಾಣಿಗಳಿಗೆ ತನ್ನ ಮಾತನ್ನು ಹೇಳುತ್ತಾ, ಜಿಗಿ ಜಿಗಿದು ಕೇಕೆ ಹಾಕುತ್ತಾ ಕತ್ತೆ ಓಡಿ ಹೋಯಿತು.

ಇತ್ತ ಹುಲಿ ತನ್ನ ಶಿಕ್ಷೆಯನ್ನು ಒಪ್ಪಿಕೊಂಡಿತು, 

ಆದರೆ

"ಮಹಾಸ್ವಾಮಿ ನಿಮಗೂ ಗೊತ್ತು , ಹುಲ್ಲಿನ ಬಣ್ಣ ಹಸಿರು. ಅದಾಗ್ಯೂ ನೀವು ನನ್ನನ್ನು ಏಕೆ ಶಿಕ್ಷಿಸಿದ್ದೀರಿ?" 

ಎಂದು ಸಿಂಹವನ್ನು ಅಮಾಯಕ ಹುಲಿ, ಮುಗ್ಧವಾಗಿ ಕೇಳಿತು,

ಸಿಂಹ ಉತ್ತರಿಸಿತು:

"ಹುಲಿಯಪ್ಪಾ ವಾಸ್ತವವಾಗಿ, ಹುಲ್ಲಿನ ಬಣ್ಣ ಹಸಿರು."

ಹುಲಿ ಕೇಳಿತು:

"ಅದೇ ಪ್ರಭುವೇ, ನಾನು ಹೇಳಿದ್ದು ಅದನ್ನೇ. ಹಾಗಾದರೆ ನೀವು ನನ್ನನ್ನು ಏಕೆ ಶಿಕ್ಷಿಸುತ್ತಿದ್ದೀರಿ?". ಹುಲಿ ಸ್ವಲ್ಪ ಗಟ್ಟಿದನಿಯಿಂದಲೇ ಕೇಳಿತು.

ಆಗ,

ಸಿಂಹ ಉತ್ತರಿಸಿತು:

"ಹುಲ್ಲಿನ ಬಣ್ಣ ನೀಲಿಯೋ ಅಥವಾ ಹಸಿರೋ ಎಂಬುದು ತಳಬುಡವಿಲ್ಲದ  ಪ್ರಶ್ನೆ.

ಇಂತಹ ಯಕಃಶ್ಚಿತ್‌ ಪ್ರಶ್ನೆಯನ್ನು ಇಟ್ಟುಕೊಂಡು, ಹೋಗಿ ಹೋಗಿ ಕತ್ತೆಯೊಂದಿಗೆ ಜಗಳವಾಡುತ್ತಾ ಸಮಯ ಹಾಳು ಮಾಡುತ್ತಿದ್ದೀಯಾ, ಅದೂ ಅಲ್ಲದೆ ಆ ವಾದವನ್ನು ನನ್ನ ಬಳಿಗೆ ಎಳೆತಂದು ನನ್ನ ಕ್ಷಣಗಳನ್ನು ಸವೆಸಿದೆಯಲ್ಲಾ, ಇದೆಲ್ಲಾ ನಿನ್ನಂತಹ ಧೀರ ಬುದ್ಧಿ ಜೀವಿಗಳಿಗೆ ತಕ್ಕುದಾದುದಲ್ಲ. ಅದಕ್ಕೇ ಈ ಶಿಕ್ಷೆ, ಇನ್ನೊಮ್ಮೆ ಇಂತಹ ಅಚಾತುರ್ಯ ಘಟಿಸಕೂಡದು, ಎಚ್ಚರಿಕೆ!”. ಎಂದು ಸಿಂಹ ಘರ್ಜಿಸಿತು.

ಕಟುಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ಇರದ ಮೂರ್ಖರೊಂದಿಗೆ ವಾದಮಾಡುವುದು ಅತ್ಯಂತ ಕೆಟ್ಟದ್ದು. ಅದರಿಂದ ಅಮೂಲ್ಯ ಸಮಯ ವ್ಯರ್ಥವಾಗುವುದು.

ಆ ಮೂರ್ಖರಿಗೆ ಸತ್ಯಕ್ಕಿಂತ ಅವರ ನಂಬಿಕೆ ಮತ್ತು ಭ್ರಮೆಗಳ ಗೆಲುವುಗಳ ಬಗ್ಗೆ ಮಾತ್ರ ಒಲವಿರುತ್ತದೆ. 

ಹಾಗಾಗಿ

ಅರ್ಥವಿಲ್ಲದ ವಾದಗಳಿಗಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ…

ನೀವು ಎಷ್ಟೇ ದಾಖಲೆ ಮತ್ತು ಪುರಾವೆಗಳನ್ನು ಪ್ರಸ್ತುತಪಡಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ, ಅವರಿಗೆ ತಿಳಿ ಹೇಳುವ ದುಸ್ಸಾಹಸಕ್ಕೆ ಕೈ ಹಾಕದಿರಿ.

ಅಹಂಕಾರ, ದ್ವೇಷ ಮತ್ತು ಅಸಮಾಧಾನಗಳಿಂದ ಕುರುಡಾಗಿರುವ ಮೂರ್ಖ ಜನತೆ, ಸರಿಯಾಗಲೊಲ್ಲರು.

ತಮ್ಮದೇ ತಪ್ಪಿದ್ದರು ತಾವೇ ಸರಿ ಎಂದು ಬೀಗುವವರ ಮುಂದೆ ನಿಮ್ಮ ಪಾಂಡಿತ್ಯದ ಪ್ರದರ್ಶನ ಅನವಶ್ಯಕ.

"ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಅದುವೇ ಯಶಸ್ಸಿನ ಗುಟ್ಟ. 

ನಿಮ್ಮ ಶಾಂತಿ ಮತ್ತು ನೆಮ್ಮದಿಗಳು ಅತ್ಯಂತ ಮೌಲ್ಯಯುತವಾದವುಗಳು, ಅವುಗಳಿಗೆ ಧಕ್ಕೆಯಾಗುವುದು ಬೇಡ. ‌

ಫೆಬ್ರವರಿ 25, 2026

ನಿಶ್ಚಯ ಮತ್ತು ನಂಬಿಕೆ

    ಒಂದು ಸಲ ದೇವರ್ಷಿ ನಾರದರು ಹೋಗ್ತಾ ಇದ್ರು. ಒಬ್ಬ ಮನುಷ್ಯ, ಆಲದ ಮರದ ಕೆಳಗೆ ತಪಸ್ಸು ಮಾಡುತ್ತಿದ್ದ.  ನಾರದರನ್ನು ಕಂಡು," ಮಹರ್ಷಿಗಳೇ  ನನಗೆ ಜೀವನದಿಂದ ಯಾವಾಗ ಮುಕ್ತಿ ಸಿಗತ್ತೆ" ಎಂದು ಕೇಳಿದನು. ನಾರದರು ಅವನು ತಪಸ್ಸು ಮಾಡುತ್ತಿದ್ದ ಮರದ ಮೇಲೆ ನೋಡಿದರು. ನಂತರ ಅವನಿಗೆ "ನೋಡಪ್ಪ ನೀನು ಕೂತಿದಿಯಲ್ಲ, ಈ ಆಲದ ಮರದಲ್ಲಿ ಎಷ್ಟು ಎಲೆಗಳು ಇದೆಯೋ ಅಷ್ಟು ಜನ್ಮ ನಿನಗೆ ಇದೆ. ಅಷ್ಟು ಜನ್ಮಗಳು ಮುಗಿದಮೇಲೆ ನಿನಗೆ ಮುಕ್ತಿ ಸಿಗುತ್ತೆ" ಅಂದರು. ಅವನು ಹೇಳಿದ ಅಯ್ಯೋ ಕರ್ಮ, ಇನ್ನೂ ಅಷ್ಟು ಜನ್ಮಗಳಿದಾವೆ, ನಾನ್ಯಾಕೆ ಕಷ್ಟಪಟ್ಟು ತಪಸ್ಸು ಮಾಡ್ಲಿ. ಸುಮ್ಮನೆ ಮನೆಗೆ ಹೋಗೋದೇ  ವಾಸಿ.  ಹೀಗೆ ತಪಸ್ಸು ಮಾಡುವುದರಿಂದ  ಯಾವ ಪ್ರಯೋಜವು ಇಲ್ಲ. ಹೀಗೆ ಅಂದ್ಕೊಂಡು  ತಪಸ್ಸು ಬಿಟ್ಟೆದ್ದು ತನ್ನ ಮನೆಕಡೆ ನಡೆದ.

    ನಾರದರು  ಹಾಗೆ ಮುಂದೆ ಹೋಗ್ತಾ ಇದ್ರು. ಇನ್ನೊಬ್ಬ ವ್ಯಕ್ತಿ ಹುಣಸೆ ಗಿಡದ ಕೆಳಗೆ ಕುಳಿತು ತಪಸ್ಸು ಮಾಡ್ತಿದ್ದ. ನಾರದ್ರು  ಬಂದ್ಕೂಡ್ಳೆ, "ಮಹರ್ಷಿಗಳೇ, ನನ್ನ ಜನ್ಮ ಯಾವಾಗ ಮುಗಿ ಯುತ್ತೆ, ಪುನರ್ಜನ್ಮಾನೇ  ಇಲ್ಲದಂತಾಗುವುದು ಯಾವಾಗ" ಎಂದು ಕೇಳಿದ. ಪುನಃ ನಾರದರು  ತಪಸ್ಸು ಮಾಡ್ತಿದ್ದ  ಮರದ ಮೇಲೆ ನೋಡಿ, "ನೀನು ಯಾವ ಮರದ ಕೆಳಗೆ  ಕೂತಿದ್ಯೊ, ಆ ಮರದ ಎಲೆಗಳು ಎಷ್ಟು ಇದೆಯೋ, ಅಷ್ಟು ಜನ್ಮ ನಿನಗೆ ಇದೆ. ಆಮೇಲೆ ನಿನಗೆ “ಮುಕ್ತಿ” ಎಂದರು.
ಈ ಮಾತನ್ನು ಕೇಳಿ, ಆ ಮನುಷ್ಯ ಸಂತೋಷದಿಂದ ಕುಣಿ ಯಲು ಶುರುಮಾಡಿದ. ನಾರದರಿಗೆ  ಆಶ್ಚರ್ಯವಾಯ್ತು. ಅಯ್ಯೋ ಇವ್ನಾ, ಇವನು ಕೂತಿರೊ ಮರ ಹುಣಸೇಮರ ಇದ್ರಲ್ಲಿ  ಇರೊದೆಲ್ಲ ಸಣ್ಣ ಸಣ್ಣ ಎಲೆಗಳು,ಒಂದೊಂದು  ರೆಂಬೆಗಳಲ್ಲೂ  ಸಾವಿರಾರು  ಎಲೆಗಳಿವೆ. ಇವನ್ಯಾಕೆ ಇಷ್ಟೊಂದು ಖುಷಿ  ಪಡ್ತಿದಾನೆ. ಅಂದ್ಕೊಂಡ, ನಾರದ್ರು ಅವನನ್ನು ಏಕೆ ಹೀಗೆ ಕುಣಿಯುವೆ ಎಂದು ಕೇಳಿದರು, ಅದಕ್ಕೆ ಮಹರ್ಷಿಗಳೇ ಸದ್ಯ ಒಂದಲ್ಲ ಒಂದು ದಿವಸ ಈ ಜನುಮ ಮುಗಿಯುತ್ತೆ ಅಂತ ಖುಷಿಯಾಯಿತು ಎಂದ. ಅವನಲ್ಲಿ ಆ ನಂಬಿಕೆ ಇತ್ತು.

    ಮೊದಲ ಮನುಷ್ಯ ಕುಳಿತ ಆಲದ ಮರದ ಎಲೆಗಳು  ದೊಡ್ಡದಿರುತ್ತೆ. ಆದ್ರೂ ಅವನಿಗೆ ಆ ನಂಬಿಕೆ ಮತ್ತು ನಿಶ್ಚಯ ಇರಲಿಲ್ಲ. ಹಾಗಾಗಿ ಅವನು ಎದ್ಹೋಗ್ಬಿಟ್ಟ.  ಎರಡನೇ ಮನುಷ್ಯ ಕುಳಿತ ಹುಣಸೆ ಮರದಲ್ಲಿ, ಆಲದ ಮರಕ್ಕಿಂತ  ಎರಡುಪಟ್ಟು  ಸಣ್ಣಸಣ್ಣ ಎಲೆಗಳು ಇದ್ದರೂ,  ಈತನ ನಿಶ್ಚಯ ಮತ್ತು ನಂಬಿಕೆ ಗಟ್ಟಿಯಾಗಿತ್ತು. ಈ ಜೀವನ ನಂದಲ್ಲ  ಭಗವಂತನದು ಎಂದು ಅವನು ತಿಳಿದಿದ್ದ. ಹಾಗಾಗಿ ಸಂತೋಷಗೊಂಡ.

" ಮಾಂ ಚಿ ಯೋ  ವ್ಯಭಿಚಾರೇಣ, ಭಕ್ತಿ ಯೋಗೇನ ಸೇವತೇ, ಸ  ಗುಣಾನ್ ಸಮತೀ ತ್ಯೈತಾನ್ ಬ್ರಹ್ಮ ಭೂಯಾಯ ಕಲ್ಪತೇ!"
ಅರ್ಥ:- ಯಾವನೋ  ನನ್ನನ್ನು ಅನನ್ಯ, ಪರಮ ಪ್ರೇಮ ಲಕ್ಷಣವಾದ ,ಅವ್ಯಭಿಚಾರೀ   ಭಕ್ತಿ ಯೋಗದಿಂದ ಸೇವಿಸುತ್ತಾನೋ  ಅವನು ಈ ಗುಣಗಳನ್ನು ಮೀರಿ ಬ್ರಹ್ಮಸ್ವರೂಪವನ್ನು ಹೊಂದಲು ಸಮರ್ಥನಾಗುತ್ತಾನೆ.

ಅಪರಿಚಿತನ ಕೊನೆಯ ಪಯಣ

    ನಾನು ಒಬ್ಬ ಕಾರು ಚಾಲಕ. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ವಾರ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಒಬ್ಬ ವಯಸ್ಸಾದ ವ್ಯಕ್ತಿ ನನ್ನ ಟ್ಯಾಕ್ಸಿ ಏರಿದರು. ಬಿಳಿ ಕುರ್ತಾ, ದೋತಿ, ದಣಿದ ಕಣ್ಣುಗಳು—ಆದರೆ ಅವರ ಧ್ವನಿಯಲ್ಲಿ ಒಂದು ವಿಚಿತ್ರವಾದ ದೃಢತೆ ಇತ್ತು. ಅವರು ಕಾರು ಹತ್ತಿದ ತಕ್ಷಣ ಹೀಗೆಂದರು: "ಇಂದು ರಾತ್ರಿ ನೀನು ನನ್ನನ್ನು ಐದು ಸ್ಥಳಗಳಿಗೆ ಕರೆದೊಯ್ಯಬೇಕು. ನಾನು ನಿನಗೆ 5000 ರೂಪಾಯಿ ನಗದು ಕೊಡುತ್ತೇನೆ. ಆದರೆ ಪಯಣ ಮುಗಿಯುವವರೆಗೂ 'ಏಕೆ?' ಎಂದು ಪ್ರಶ್ನಿಸಬಾರದು." ಅವರು ಒಂದು ಚೀಟಿಯನ್ನು ನನ್ನ ಕೈಗಿಟ್ಟರು. ಅದರಲ್ಲಿ ಐದು ವಿಳಾಸಗಳಿದ್ದವು.

​ಮೊದಲ ನಿಲ್ದಾಣ
ದಕ್ಷಿಣ ಕೋಲ್ಕತ್ತಾದ ಒಂದು ಹಳೆಯ ಮನೆ. ನಾನು ಕಾರು ನಿಲ್ಲಿಸಿದೆ. ಅವರು ಕೆಳಗಿಳಿಯಲಿಲ್ಲ. ಕಿಟಕಿಯ ಗಾಜು ಇಳಿಸಿ ಸುಮ್ಮನೆ ಆ ಮನೆಯನ್ನು ದಿಟ್ಟಿಸಿ ನೋಡಿದರು. ಹತ್ತು ನಿಮಿಷ ಕಳೆದವು. ಅವರ ಕಣ್ಣುಗಳಿಂದ ನೀರು ಹರಿಯುತ್ತಿತ್ತು, ಆದರೆ ಸದ್ದಿರಲಿಲ್ಲ. "ಹೋಗೋಣ... ಮುಂದಿನ ಜಾಗಕ್ಕೆ," ಎಂದರು.

​ಎರಡನೇ ನಿಲ್ದಾಣ
ಒಂದು ಪ್ರಾಥಮಿಕ ಶಾಲೆ. ಗೇಟ್ ಲಾಕ್ ಆಗಿತ್ತು. ಒಳಗೆ ಕತ್ತಲಲ್ಲಿ ಆಟದ ಮೈದಾನವಿತ್ತು. ಅವರು ಕೆಳಗಿಳಿದು ಮೆಲ್ಲನೆ ಅಲ್ಲಿನ ಉಯ್ಯಾಲೆಯ ಬಳಿ ಹೋದರು. ಅದರ ಮೇಲೆ ಕುಳಿತು ಮೃದುವಾಗಿ ತೂಗಿದರು. ಇಪ್ಪತ್ತು ನಿಮಿಷಗಳ ನಂತರ ಮರಳಿ ಬಂದರು. "ನಾನು ಇಲ್ಲಿ 43 ವರ್ಷ ಪಾಠ ಮಾಡಿದ್ದೇನೆ. ಅದು ನನ್ನ ಜೀವನದ ಅತ್ಯುತ್ತಮ ಸಮಯವಾಗಿತ್ತು."

​ಮೂರನೇ ನಿಲ್ದಾಣ
ಒಂದು ಸಣ್ಣ ಹಳೆಯ ಕಾಫಿ ಹೌಸ್. ಅವರು ಒಳಗೆ ಹೋಗಿ ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದರು. ಮೂಲೆಯ ಟೇಬಲ್‌ನಲ್ಲಿ ಒಬ್ಬರೇ ಕುಳಿತರು. ಚಹಾವನ್ನು ಮುಟ್ಟಲೇ ಇಲ್ಲ. ಸುಮ್ಮನೆ ಸುತ್ತಲೂ ನೋಡುತ್ತಿದ್ದರು. ಹದಿನೈದು ನಿಮಿಷಗಳ ನಂತರ ಮಂದಸ್ಮಿತರಾಗಿ ಹಿಂತಿರುಗಿದರು. "ನಾನು ಮೊದಲ ಬಾರಿಗೆ ಉಮಾದೇವಿಯನ್ನು ಭೇಟಿಯಾಗಿದ್ದು ಇಲ್ಲೇ. 1969ರಲ್ಲಿ."

​ನಾಲ್ಕನೇ ನಿಲ್ದಾಣ
ನಿಮ್ತಾಲ ಚಿತಾಗಾರ. ಅವರು ಕೆಳಗಿಳಿದರು. ಒಂದು ನಾಮಫಲಕದ ಮುಂದೆ ನಿಂತು ಯಾವುದೋ ಮಂತ್ರ ಪಠಿಸಿದಂತೆ ಪಿಸುಗುಟ್ಟುತ್ತಿದ್ದರು. ಅರ್ಧ ಗಂಟೆಯ ನಂತರ ಮರಳಿದಾಗ ಅವರ ಕಣ್ಣುಗಳು ಕೆಂಪಾಗಿದ್ದವು. "ಅವಳು ಹೋಗಿ ಮೂರು ವರ್ಷಗಳಾದವು."

​ಐದನೇ ನಿಲ್ದಾಣ
ಒಂದು ದೊಡ್ಡ ಸರ್ಕಾರಿ ಆಸ್ಪತ್ರೆ. ಅವರು ಕಾರನ್ನು ನಿಲ್ಲಿಸಲು ಹೇಳಿದರು. ನಂತರ ನನ್ನನ್ನು ನೋಡಿ ಹೀಗೆಂದರು: "ಈಗ ನಾನು ನಿನಗೆ ಕಾರಣ ಹೇಳುತ್ತೇನೆ. ನನಗೆ ನಾಲ್ಕನೇ ಹಂತದ ಕ್ಯಾನ್ಸರ್ ಇದೆ. ಡಾಕ್ಟರ್ ಹೇಳಿದ್ದಾರೆ ಇನ್ನೇನು ಕೆಲವು ವಾರಗಳು... ಅಥವಾ ಕೆಲವು ದಿನಗಳಷ್ಟೇ ಬಾಕಿ ಅಂತ. ಇಂದು ರಾತ್ರಿ ನನ್ನ ಇಡೀ ಜೀವನವನ್ನು ಕೊನೆಯ ಬಾರಿಗೆ ಒಮ್ಮೆ ನೋಡಬೇಕೆಂದುಕೊಂಡಿದ್ದೆ."
​ನಾನು ಸ್ಟೀರಿಂಗ್ ವೀಲ್ ಮೇಲೆ ತಲೆಯಿಟ್ಟು ಅಳಲು ಪ್ರಾರಂಭಿಸಿದೆ. 

ಅವರು ಹೇಳಿದರು:
"ಆ ಮನೆ—ನನ್ನ ಮಕ್ಕಳನ್ನು ಬೆಳೆಸಿದ ಜಾಗ. 
ಆ ಶಾಲೆ—ನನ್ನ ಜೀವನದ ಉದ್ದೇಶವನ್ನು ಕಂಡುಕೊಂಡ ಜಾಗ. 
ಆ ಕಾಫಿ ಹೌಸ್—ನಾನು ಪ್ರೀತಿಯಲ್ಲಿ ಬಿದ್ದ ಜಾಗ. 
ಆ ಚಿತಾಗಾರ—ನನ್ನವಳಿಗೆ ಕೊನೆಯ ವಿದಾಯ ಹೇಳಿದ ಜಾಗ ಮತ್ತು 
ಈ ಆಸ್ಪತ್ರೆ—ಇಲ್ಲಿ ನಾನು ಇಂದು ದಾಖಲಾಗುತ್ತಿದ್ದೇನೆ. ನಾನು ಮತ್ತೆ ಮನೆಗೆ ಮರಳುವುದಿಲ್ಲ."

​ಅವರು 5000 ರೂಪಾಯಿಗಳನ್ನು ಬಲವಂತವಾಗಿ ನನ್ನ ಕೈಗಿಟ್ಟರು. "ಧನ್ಯವಾದಗಳು. ನನ್ನ ಜೀವನವನ್ನು ಮತ್ತೊಮ್ಮೆ ನೋಡಲು ನೀನು ಸಹಾಯ ಮಾಡಿದೆ. ನನ್ನನ್ನು ಪ್ರೀತಿಯಿಂದ ನಡೆಸಿಕೊಂಡ ನನ್ನ ಜೀವನದ ಕೊನೆಯ ಅಪರಿಚಿತ ವ್ಯಕ್ತಿ ನೀನು." ನಾನು ಅದನ್ನು ತೆಗೆದುಕೊಳ್ಳಲು ಇಷ್ಟಪಡಲಿಲ್ಲ. "ಬೇಡ ತಾತಾ, ಇದನ್ನು ನಾನು ಸ್ವೀಕರಿಸಲಾರೆ," ಎಂದೆ. ಅವರು ಹೇಳಿದರು, "ತೆಗೆದುಕೋ. ಇದನ್ನು ಕೊಡಲು ನನಗೆ ಯಾರೂ ಇಲ್ಲ. ನನ್ನ ಮಕ್ಕಳು ನನ್ನ ಜೊತೆ ಮಾತನಾಡುವುದಿಲ್ಲ. ಯಾವ ಸ್ನೇಹಿತರೂ ಉಳಿದಿಲ್ಲ. ನೀನು ನನಗೆ ಮೂರು ಗಂಟೆಗಳ ಕಾಲಾವಕಾಶ ನೀಡಿದ್ದೀಯ. ಮೂರು ಗಂಟೆಗಳ ಮಾನವೀಯತೆ. ಇದು ಹಣಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು."  ತಮ್ಮ ಸಣ್ಣ ಸೂಟ್‌ಕೇಸ್ ಹಿಡಿದು ಅವರು ಆಸ್ಪತ್ರೆಯ ಒಳಗೆ ಹೋದರು.

​ಮಾರನೇ ದಿನ ನಾನು ಮತ್ತೆ ಆ ಆಸ್ಪತ್ರೆಗೆ ಅವರನ್ನು ನೋಡಲು ಹೂವಿನ ಗುಚ್ಛದೊಂದಿಗೆ ಹೋದೆ.  ಅವರು ಮಂದಹಾಸ ಬೀರಿದರು. "ನೀನು ಬಂದೆಯಾ?" ಇಂದು ಕೇಳಿದರು "ನಿಮ್ಮನ್ನು ಹಾಗೆಯೇ ಬಿಟ್ಟು ಬರಲು ಮನಸ್ಸು ಬರಲಿಲ್ಲ." ಎಂದೆ 
​ನಾವು ಎರಡು ಗಂಟೆಗಳ ಕಾಲ ಮಾತನಾಡಿದೆವು. ಅವರ ಪತ್ನಿ ಉಮಾದೇವಿ, ಅವರ ವಿದ್ಯಾರ್ಥಿಗಳು ಮತ್ತು ದೂರಾದ ಮಕ್ಕಳ ಬಗ್ಗೆ ಹರಟೆ ಹೊಡೆದೆವು. 

ನಾನು ಪ್ರತಿದಿನ ಹೋಗಲಾರಂಭಿಸಿದೆ. ಚಹಾ ತೆಗೆದುಕೊಂಡು ಹೋಗುತ್ತಿದ್ದೆ, ಪತ್ರಿಕೆ ಓದಿ ಹೇಳುತ್ತಿದ್ದೆ. ಕೆಲವೊಮ್ಮೆ ಸುಮ್ಮನೆ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ಒಂದು ದಿನ ಅವರು ಹೇಳಿದರು, "ನಾನು ಒಬ್ಬಂಟಿಯಾಗಿ ಸಾಯುತ್ತೇನೆ ಎಂದುಕೊಂಡಿದ್ದೆ. ಆದರೆ ನೀನು ಈಗ ಇಲ್ಲಿದ್ದೀಯ. ಕೊನೆಯಲ್ಲಿ ಒಬ್ಬ ಅಪರಿಚಿತನೇ ಜೊತೆಯಾಗಿ ಕುಟುಂಬದಂತಾದನು—ಇದೇ ನನ್ನ ಸೌಭಾಗ್ಯ." ನಾನು ಅವರ ಕೈ ಹಿಡಿದು ಹೇಳಿದೆ, "ನೀವು ಒಬ್ಬಂಟಿಯಲ್ಲ."

​ಮರುದಿನ ಬೆಳಗಿನ ಜಾವ 3:17ಕ್ಕೆ ಅವರು ನಿಧನರಾದರು. ನಾನು ಅಲ್ಲಿಯೇ ಅವರ ಕೈ ಹಿಡಿದು ಕುಳಿತಿದ್ದೆ. ಅವರ ಕೊನೆಯ ಮಾತುಗಳೆಂದರೆ, "ಎಲ್ಲರಿಗೂ ಹೇಳು... ಅಪರಿಚಿತರನ್ನು ಗಮನಿಸಿ ನೋಡಿ ಅಂತ. ನಾವೆಲ್ಲರೂ ಎಲ್ಲೋ ಹೊರಟಿದ್ದೇವೆ. ಕೆಲವರು ವೇಗವಾಗಿ, ಕೆಲವರು ನಿಧಾನವಾಗಿ. ದಾರಿಯುದ್ದಕ್ಕೂ ದಯೆ ತೋರಿಸಿ. ನೀನು ಹಾಗೆಯೇ ಇದ್ದೆ. ನನ್ನ ಕೊನೆಯ ದಿನಗಳನ್ನು ನೀನು ಸುಂದರಗೊಳಿಸಿದೆ."
​ಮಾನಿಟರ್‌ನ ಶಬ್ದ ನಿಂತು ನೇರ ಗೆರೆಯಾಯಿತು.

​ಅವರ ಅಂತ್ಯಕ್ರಿಯೆಯಲ್ಲಿ ಕೇವಲ ಆರು ಜನರಿದ್ದರು. ನಾನು, ಮೂವರು ದಾದಿಯರು (nurses), ಒಬ್ಬ ವಕೀಲ ಮತ್ತು ಅವರ ಒಬ್ಬ ಹಳೆಯ ವಿದ್ಯಾರ್ಥಿ. 

43 ವರ್ಷಗಳ ಬೋಧನೆ. 
52 ವರ್ಷಗಳ ದಾಂಪತ್ಯ. 
81 ವರ್ಷಗಳ ಜೀವನ. ಕೇವಲ ಆರು ಜನ.

​ನಾನು ಅಂದುಕೊಂಡೆ: ಅವರು ನನಗೆ ಕಲಿಸಿದ್ದು—
ಪ್ರತಿಯೊಬ್ಬ ಅಪರಿಚಿತನೂ ಯಾರೋ ಒಬ್ಬರ ಇಡೀ ಪ್ರಪಂಚವಾಗಿರುತ್ತದೆ.
ಪ್ರತಿಯೊಬ್ಬ ಪ್ರಯಾಣಿಕನೂ ಒಂದು ಕಥೆ.
ಪ್ರತಿಯೊಬ್ಬ ವ್ಯಕ್ತಿಯೂ ಬದುಕುತ್ತಿದ್ದಾನೆ, ಸಾಯುತ್ತಿದ್ದಾನೆ, ಯಾರಾದರೂ ತನ್ನನ್ನು ಗಮನಿಸಲಿ ಎಂದು ಕಾಯುತ್ತಿದ್ದಾನೆ.

ಅವರು ತಮ್ಮ ಜೀವನದ ಹಾದಿಯಲ್ಲಿ ನನ್ನನ್ನು ಕರೆದೊಯ್ದಿದ್ದಕ್ಕಾಗಿ 5000 ರೂಪಾಯಿ ನೀಡಿದರು. ಆದರೆ ಅವರು ನನಗೆ ಕಲಿಸಿದ ಪಾಠ ಅದಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು. ಮಾನವೀಯತೆ ಎಂಬುದು ಹೆಚ್ಚುವರಿ ಗುಣವಲ್ಲ, ಅದೇ ಅಸಲಿ ಬದುಕು.

​ಇಂದಿಗೂ ನಾನು ಆ 5000 ರೂಪಾಯಿಗಳನ್ನು ಖರ್ಚು ಮಾಡದೆ ನನ್ನ ಕಾರಿನಲ್ಲೇ ಇಟ್ಟಿದ್ದೇನೆ. ಏಕೆಂದರೆ ಪ್ರತಿ ಪ್ರಯಾಣಿಕನೂ ತನ್ನ ಕೊನೆಯ ಪಯಣದಲ್ಲಿರಬಹುದು. ಪ್ರತಿಯೊಬ್ಬ ಅಪರಿಚಿತನೂ ತನ್ನ ಕೊನೆಯ ವಿದಾಯ ಹೇಳುತ್ತಿರಬಹುದು. ಹಾಗಾಗಿ ಈಗ ನಾನು ಚಾಲನೆ ಮಾಡುವ ರೀತಿಯೇ ಬದಲಾಗಿದೆ. ನಾನು ಕೇಳುತ್ತೇನೆ, ಆಲಿಸುತ್ತೇನೆ, ಜನರನ್ನು ಗಮನಿಸುತ್ತೇನೆ. ಒಬ್ಬ ವಯಸ್ಸಾದ ಶಿಕ್ಷಕ ತನಗಾಗಿ ಒಂದು ಸುಂದರವಾದ ಸಂತೋಷದ ರಾತ್ರಿಯನ್ನು ಬಯಸಿದ್ದರು, ಒಬ್ಬ ಅಪರಿಚಿತ ಅದನ್ನು ನೀಡಿದ್ದ.

​ನಾವು ಕೂಡ ಅಂತಹ ವ್ಯಕ್ತಿಯಾಗೋಣ. ನಾವು ಭೇಟಿಯಾಗುವ ಯಾರಾದರೂ ತಮ್ಮ ಜೀವನದ ಕೊನೆಯ ಪಯಣದಲ್ಲಿರಬಹುದು. ಅಂತವರ ಜೀವನವನ್ನು ಸುಂದರಗೊಳಿಸೋಣ.

ಮನುಷ್ಯರಾಗಿ ಹುಟ್ಟಿದ ಮೇಲೆ ಮಾನವೀಯತೆ ಮರೆತರೆ ಹೇಗೆ ??

ಇದು ಅದಾವ ಚಾಲಕನ ಸ್ವ ಅನುಭವವೋ ಅಥವಾ ಅದಾವ ಕತೆಗಾರನ ಕಲ್ಪನೆಯೋ ಕಾಣೆ ಇಂಗ್ಲೀಷಿನಲ್ಲಿ ಓದಿದ್ದನ್ನು ಕೊಂಚ ಬದಲಿಸಿ ಸದುದ್ದೇಶದಿಂದ ಒಂದು ಒಳ್ಳೆ ಸಂದೇಶ ಕೊಡುವ ಉದ್ದೇಶದಿಂದ ಇಲ್ಲಿ ಹಂಚಿಕೊಂಡಿರುವೆ 

*ಕೃಪೆ : ಫೇಸ್ಬುಕ್* 
*ಅನುಪಮ ಅರುಲಿಕೆ ಅವರ ವಾಲ್ ನಿಂದ... 

ದೇವರಿಗೆ ಧನ್ಯವಾದಗಳು

    ಇಕಹಾರ್ಟ್ ಅಂತ ಒಬ್ಬರು ಜಪಾನ್ ದೇಶದ ಸಂತರಿದ್ದರು. ಅವರಿಗೆ ಒಮ್ಮೆ ದೇವಿ ಪ್ರತ್ಯಕ್ಷಳಾದಳು. ಸಂತ ಸುಮ್ಮನೆ ಕೈಮುಗಿದು ನಿಂತಿದ್ದ. ಅವರ ಸ್ನೇಹಿತರು "ದೇವರು ಪ್ರತ್ಯಕ್ಷ ಆಗಿದ್ದಾರೆ. ಏನಾದರೂ ಕೇಳು" ಎಂದರು. ಅದಕ್ಕೆ ಇಕಹಾರ್ಟ್ "ನಾನು ದೇವಸ್ಥಾನದ ಒಳಕ್ಕೆ ಬರುವಾಗ ಪಾದರಕ್ಷೆ ಬಿಡ್ತಾರಲ್ಲ, ಅಲ್ಲಿಯೇ ಕೇಳುವುದನ್ನು ಬಿಟ್ಟು ಬಂದಿದ್ದೇನೆ" ಎಂದ. ಅದಕ್ಕೆ ಸ್ನೇಹಿತರು "ಕೇಳುವುದು ಬಿಟ್ಟಿದ್ದೀಯ ಅಂದ ಮೇಲೆ ದೇವಸ್ಥಾನಕ್ಕೆ ಯಾಕೆ ಬಂದೆ ?" ಎಂದು ಪ್ರಶ್ನಿಸಿದರು. ದೇವರ ಹತ್ತಿರ ಏನಾದರೂ ಕೇಳುವುದಕ್ಕಾಗಿಯೇ ದೇವಸ್ಥಾನಕ್ಕೆ ಹೋಗಬೇಕು ಎನ್ನುವುದು ನಂಬಿಕೆ. 

    ಸ್ನೇಹಿತರ ಪ್ರಶ್ನೆಗೆ ಇಕಹಾರ್ಟ್, "ನಾನು ದೇವರಲ್ಲಿ ಏನಾದರೂ ಕೇಳಲು ಬಂದಿಲ್ಲ. ನನಗೆ ಇಷ್ಟೊಂದು ಸುಂದರವಾದ ಜೀವನ ಕೊಟ್ಟಿದ್ದಾನಲ್ಲ. ಅದಕ್ಕೆ ಅವನಿಗೆ ಧನ್ಯವಾದ ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ.

    ದೇವರಿಗೆ ನಾವು ಧನ್ಯವಾದ ಹೇಳಬೇಕು. ಎಷ್ಟೋ ಜನರಿಗೆ ಉಣ್ಣಲು ಅನ್ನವೇ ಇಲ್ಲ. ಭಿಕ್ಷೆ ಬೇಡಿ ತಿನ್ನುತ್ತಾರೆ. ಆದರೆ ನನ್ನ ಡೈನಿಂಗ್ ಟೇಬಲ್ ಮೇಲೆ ಅನ್ನ ಇದೆಯಲ್ಲ. ಅದಕ್ಕಾಗಿಯಾದರೂ ನಾನು ದೇವರಿಗೆ ಕೃತಜ್ಞನಾಗಿರಬೇಕು. ಎಷ್ಟೋ ಮಂದಿಗೆ ನಡೆಯಲು ಕಾಲುಗಳೇ ಇಲ್ಲ. ನನಗೆ ನಡೆಯುವುದಕ್ಕೆ ಸದೃಢವಾದ ಕಾಲುಗಳನ್ನು ನೀಡಿದ್ದಾನಲ್ಲ. ಅದಕ್ಕೆ ಉಪಕೃತನಾಗದಿದ್ದರೆ ಹೇಗೆ ಹೇಳಿ? 

    ನಾವು ದೇವಸ್ಥಾನಕ್ಕೆ ಹೋಗುವಾಗ ಪಟ್ಟಿ ಹಿಡಿದುಕೊಂಡೇ ಹೋಗಿರುತ್ತೇವೆ. ಈ ಜೀವನ ದೇವರು ಕೊಟ್ಟ ಭಿಕ್ಷೆ. ಅದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಲು ದೇವಾಲಯಕ್ಕೆ ಹೋಗಬೇಕೇ ವಿನಃ  ಏನನ್ನೋ ಕೇಳುವುದಕ್ಕಲ್ಲ. ಸಮುದ್ರದ ನೀರು ಉಪ್ಪು. ಸಮುದ್ರದ ನೀರನ್ನೇ ನಮ್ಮ ಬಾಯಲ್ಲಿ ಹಾಕಿದ್ದರೆ ನಡೆಯುತ್ತದೆಯೇ ?  ಉಪ್ಪು ನೀರು ಮೇಲೆ ತೆಗೆದುಕೊಂಡು ಹೋಗಿ ಮಳೆಯ ಮೂಲಕ ನಮ್ಮ ಬಾಯಿಗೆ ಸಿಹಿ ನೀರು ಹಾಕಿದ್ದಾನೆ. ಅದಕ್ಕೆ ಧನ್ಯವಾದ ಹೇಳು ದೇವನಿಗೆ. ಬಸ್ಸು ತುಂಬಿತ್ತು ಅಂದರೆ ದುಡ್ಡು ಕೊಡ್ತೀನಿ ಅಂದರೂ ಹತ್ತಿಸಿಕೊಂಡು ಹೋಗಲ್ಲ. ಕೆಳಕ್ಕೆ ಇಳಿ ಅಂತಾರೆ. ಟಿಕೆಟ್ ಇಲ್ಲದೆ ನಮಗೆ ಇಲ್ಲಿ ಇರಲು ದೇವರು ಒಂದು ಅವಕಾಶ ಕೊಟ್ಟಿದ್ದಾನಲ್ಲ, ಅದಕ್ಕೆ ಒಂದು ಧನ್ಯವಾದ ಹೇಳಬೇಕು. ವಾಹನಕ್ಕೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್‌ ಬಂಕಿಗೇ  ಹೋಗಬೇಕು. ಆದರೆ ನಮ್ಮ ಮೂಗು ಇರುವಲ್ಲಿಗೇ ಗಾಳಿ ತಂದು ಇಟ್ಟಿದ್ದಾನಲ್ಲ. ಅದಕ್ಕೆ ದೇವರಿಗೆ ಒಂದು ಧನ್ಯವಾದ ಹೇಳಬೇಕು. ಮಣ್ಣು ತಿಂದರೆ ಹಣ್ಣು ತಿಂದ ಹಾಗೆ ಆಗುವುದಿಲ್ಲ. ಆದರೆ, ಹಣ್ಣು ಬಂದಿದ್ದೂ ಮಣ್ಣಿನಿಂದ. ಇಂತಹ ಮ್ಯಾಜಿಕ್ ಮಾಡಿದ ದೇವರಿಗೆ ಧನ್ಯವಾದ ಹೇಳದಿದ್ದರೆ ಹೇಗೆ?

ಫೆಬ್ರವರಿ 24, 2026

ವೃದ್ಧ ತಂದೆಯ ವಿನಂತಿ ....

ಚಿತೆಗೆ ಬೆಂಕಿ ಹಚ್ಚುವಾಗ ಕೈ ಕಂಪಿಸದಿರಲಿ : ವೃದ್ಧ ತಂದೆಯ ವಿನಂತಿ ....   

              ಪುಣೆಯಲ್ಲಿನ ದೊಡ್ಡ ಸ್ಮಶಾನ .  ಸಂಜೆ 3:00 ಗಂಟೆ .  ರೋಹನ್ (35), ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಯ ಉಪಾಧ್ಯಕ್ಷ, ತನ್ನ ವಿಮಾನದಿಂದ ಇಳಿದು ನೇರವಾಗಿ ಸ್ಮಶಾನಕ್ಕೆ ಬಂದಿದ್ದ.
                ಅವರ ತಂದೆ ಸದಾಶಿವರಾವ್ (75) ಹಿಂದಿನ ದಿನ ರಾತ್ರಿ ಕೊನೆಯುಸಿರೆಳೆದಿದ್ದರು . ರೋಹನ್ ದುಬಾರಿ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದುಕೊಂಡು ರೇ-ಬ್ಯಾನ್ ಸನ್‌ಗ್ಲಾಸ್ ಧರಿಸಿದ್ದ. ಅವನು ಬೆವರುತ್ತಿದ್ದ ಮತ್ತು ನಿರಂತರವಾಗಿ ತನ್ನ ಗಡಿಯಾರವನ್ನು ಪರಿಶೀಲಿಸುತ್ತಿದ್ದ.       

                 "ಮೋಕ್ಷ ಈವೆಂಟ್ ಮ್ಯಾನೇಜ್ಮೆಂಟ್" 
(ಅಂತ್ಯಕ್ರಿಯೆ ಸೇವಾ ಸಂಸ್ಥೆ) ದ ಸುಮಿತ್ ಅಲ್ಲಿ ನಿಂತಿದ್ದ. ಸುಮಿತ್ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದ. ಉರುವಲುಗಳನ್ನು ಜೋಡಿಸಲಾಗಿತ್ತು, ಪುರೋಹಿತರನ್ನು ಕರೆಯಲಾಗಿತ್ತು, ಮತ್ತು ಸದಾಶಿವರಾವ್ ಅವರ ದೇಹವನ್ನು ಸ್ನಾನ ಮಾಡಿಸಿ ಸಿದ್ಧಪಡಿಸಲಾಗಿತ್ತು.
            ರೋಹನ್  ತನ್ನ ತಂದೆಯ ಮುಖವನ್ನು ನೋಡಿದ. ಒಂದು ಹನಿ ಕಣ್ಣೀರು ಅಥವಾ ಎರಡು ಅವನ ಕಣ್ಣು
ಗಳಿಂದ ಉರುಳಿತು. 
                  ಅವನು ಸುಮಿತ್‌ಗೆ ಕೇಳಿದ: "ಮಿಸ್ಟರ್ ಸುಮಿತ್, ಎಲ್ಲವೂ ಸಿದ್ಧವಾಗಿದೆ, ಸರಿ? ನನಗೆ ಸಂಜೆ 6 ಗಂಟೆಗೆ ಹಿಂದಿರುಗುವ ವಿಮಾನವಿದೆ. ನಾಳೆ ನನಗೆ ಪ್ರಮುಖ ಸಭೆ ಇದೆ. ಇದನ್ನು ಬೇಗ ಮುಗಿಸಿ." 
             ಸುಮಿತ್ ಆಶ್ಚರ್ಯಚಕಿತನಾದ. ಈ ಮಗನನ್ನು ಬೆಳೆಸಿದ ತಂದೆಗೆ ಮೂರು ಗಂಟೆಗಳ ಕಾಲಾವಕಾಶವೂ ಸಿಗಲಿಲ್ಲವೇ? ಸುಮಿತ್ ಚಪ್ಪಾಳೆ ತಟ್ಟಿದ. ಆಚರಣೆಗಳನ್ನು ನೆರವೇರಿಸಲಾಯಿತು. 
             ರೋಹನ್ ಚಿತೆಗೆ ಬೆಂಕಿ ಹಚ್ಚಿದ. ಹೊಗೆ ಆಕಾಶಕ್ಕೆ ಏರಿತು. ರೋಹನ್ ಸುಮಿತ್‌ಗೆ ಬದಿಯಲ್ಲಿ ಕರೆದು ತನ್ನ ಚೆಕ್‌ಬುಕ್ ತೆಗೆದ. "ಸುಮಿತ್, ಧನ್ಯವಾದಗಳು. ನೀವು ಉತ್ತಮ ವ್ಯವಸ್ಥೆ ಮಾಡಿದ್ದೀರಿ. ನಿಮ್ಮ ಬಿಲ್ ಎಷ್ಟು? 50,000? 1,00,000? ಮೊತ್ತವನ್ನು ಹೇಳಿ, ನಾನು ಚೆಕ್ ಬರೆಯುತ್ತೇನೆ. ನಾನು ಮತ್ತೆ ಬರಲು ಸಾಧ್ಯವಾಗುವುದಿಲ್ಲ. ಚಿತಾಭಸ್ಮವನ್ನು ವಿಸರ್ಜಿಸುವುದನ್ನೂ ನೀವು ನೋಡಿಕೊಳ್ಳಿ." 
             ಸುಮಿತ್ ವಿಚಿತ್ರವಾದ ನಗೆ ನಗುತ್ತಾ ರೋಹನ್‌ನತ್ತ ನೋಡಿದ. "ಸರ್, ಪಾವತಿಸಲು ಏನೂ ಇಲ್ಲ. ನಿಮ್ಮ ಬಿಲ್ ಈಗಾಗಲೇ ಪಾವತಿಸಲಾಗಿದೆ." 
                    ರೋಹನ್ ಗೊಂದಲಕ್ಕೊಳಗಾದ. "ಪಾವತಿಸಲಾಗಿದೆಯೇ? ಯಾರು ಪಾವತಿಸಿದರು? ನನ್ನ ಚಿಕ್ಕಪ್ಪ?" 
           ಸುಮಿತ್ ಉತ್ತರಿಸಿದ: "ಇಲ್ಲ ಸರ್. ಐದು ವರ್ಷಗಳ ಹಿಂದೆ, ಸದಾಶಿವರಾವ್ (ನಿಮ್ಮ ತಂದೆ) ನಮ್ಮ ಕಚೇರಿಗೆ ಬಂದಿದ್ದರು. ಅವರು ತುಂಬಾ ಅನಾರೋಗ್ಯದಿಂದ ಇದ್ದರು. ಅವರು ಕಷ್ಟದಿಂದ ನಡೆಯುತ್ತಿದ್ದರು. ಅವರು ನಮ್ಮನ್ನು ಕೇಳಿದರು, 'ನಿಮ್ಮ ಪ್ಯಾಕೇಜ್ ಏನು? ನನ್ನ ಮಗನಿಗೆ ಯಾವುದೇ ತೊಂದರೆಯಾಗದಂತೆ ನೀವು ಎಲ್ಲವನ್ನೂ ನೋಡಿಕೊಳ್ಳುತ್ತೀರಾ?' 
                   ನಾವು ಅವರಿಗೆ ಪ್ಯಾಕೇಜ್ ವಿವರಗಳನ್ನು ಹೇಳಿದೆವು. ಆ ದಿನವೇ ಅವರು ಮುಂಗಡವಾಗಿ 50,000 ರೂಪಾಯಿಗಳನ್ನು ಠೇವಣಿ ಇತ್ತರು. ಮತ್ತು ಅವರು ನನಗೆ ಈ ಪತ್ರವನ್ನು ನೀಡಿದರು. ಅವರು ನನಗೆ ಹೇಳಿದರು, 'ನನ್ನ ಮಗ ಬಂದಾಗ, ಈ ಪತ್ರವನ್ನು ಅವನಿಗೆ ಕೊಡಿ. ಮತ್ತು ಅವನು ಬರದಿದ್ದರೆ, ನೀವು ನನ್ನ ಅಂತ್ಯಕ್ರಿಯೆಯನ್ನು ನೋಡಿಕೊಳ್ಳಿ.'" 
           ಸುಮಿತ್ ರೋಹನ್‌ಗೆ ಪತ್ರವನ್ನು ನೀಡಿದ.  ಕಂಪಿಸುತ್ತಿರುವ ಕಂಪಿಸುತ್ತಿರುವ ಕೈಗಳಿಂದ  ರೋಹನ್ ಅದನ್ನು ತೆರೆದ.
                    ತಂದೆಯ ಅಸ್ಪಷ್ಟ ಕೈಬರಹದಲ್ಲಿ ಬರೆಯಲಾಗಿತ್ತು:  "ಪ್ರಿಯ ರೋಹನ್, ನನ್ನ ಮಗ, ನೀನು ತುಂಬಾ ಬ್ಯುಸಿ ಎಂದು ನನಗೆ ಗೊತ್ತು. ಅಮೆರಿಕದಲ್ಲಿ, ನೀನು ಉಸಿರಾಡಲು ಸಮಯವಿಲ್ಲ. ನಿನಗೆ ನನ್ನ ಸಾವು ತಿಳಿದಾಗ, ನೀನು ತುಂಬಾ ತಳಮಳಗೊಳ್ಳುತ್ತೀಯೆಂದು ನನಗೆ ಗೊತ್ತು. 'ನನಗೆ ರಜೆ ಸಿಗುತ್ತದೆಯೇ? ಟಿಕೆಟ್ ಸಿಗುತ್ತದೆಯೇ? ನನ್ನ ಸಭೆಯ ಬಗ್ಗೆ ಏನು?' — ಈ ಪ್ರಶ್ನೆಗಳು ನಿನ್ನನ್ನು ಕಾಡುತ್ತವೆ. ಮಗ, ನಿನ್ನ ಸಮಯ ಮತ್ತು ನಿನ್ನ ವೃತ್ತಿಜೀವನ ತುಂಬಾ ಮುಖ್ಯ. ನಾನು ನಿನ್ನನ್ನು ಬೆಳೆಸಿದ್ದು ನೀನು ಜಗತ್ತನ್ನು ಜಯಿಸುವುದಕ್ಕಾಗಿ. ಒಬ್ಬ ವೃದ್ಧನ ಶವಕ್ಕಾಗಿ ನೀನು ನಷ್ಟ ಅನುಭವಿಸಬೇಡ. ಆದ್ದರಿಂದ ನಾನು ನನ್ನ ಸಾವಿಗೆ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದೇನೆ. ನಾನು ಏಜೆನ್ಸಿಗೆ ಶುಲ್ಕ ಪಾವತಿಸಿದ್ದೇನೆ. ಅವರು ಅದನ್ನು ನೋಡಿಕೊಳ್ಳುತ್ತಾರೆ. ನೀನು ಬಂದರೆ ಒಳ್ಳೆಯದು, ಬಾರದಿದ್ದರೆ ನನಗೆ ಕೋಪ ಬರುವುದಿಲ್ಲ. ನಿನ್ನಲ್ಲಿ ಒಂದೇ ಒಂದು ವಿನಂತಿ... ನೀನು ಚಿಕ್ಕವನಾಗಿದ್ದಾಗ ನಾನು ನಿನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ, ನಾನು ನಿನ್ನ ಕೈಯನ್ನು ಬಿಡುತ್ತಿರಲಿಲ್ಲ. ಇಂದು, ನೀನು ನನ್ನ ಚಿತೆಗೆ ಬೆಂಕಿ ಹಚ್ಚುವಾಗ, ನಿನ್ನ ಕೈ ಕಂಪಿಸಬಾರದು. ಬೇಗ ಹಿಂತಿರುಗಿ ಹೋಗು . ನಿನ್ನ ಹೆಂಡತಿ ಕಾಯುತ್ತಿದ್ದಾಳೆ. 
                  ನಿನ್ನ, ಬಾಬಾ.
ಪತ್ರವನ್ನು ಓದಿದ ನಂತರ, ಚೆಕ್‌ಬುಕ್ ರೋಹನ್‌ನ ಕೈಯಿಂದ ಕೆಸರಿನಲ್ಲಿ ಜಾರಿತು. ಉರುವಲು ಸುಡುವ ಶಬ್ದ ತುಂಬಿದ್ದ ಶ್ಮಶಾನದಲ್ಲಿ... ರೋಹನ್‌ನ ಅಹಂಕಾರ ಮತ್ತು ವೃತ್ತಿಜೀವನದ ಮೇಲಿನ ಹೆಮ್ಮೆ ಬೂದಿಯಾಯಿತು. 
                  ಅವನು ತನ್ನ ಮೊಣಕಣಗಳ ಮೇಲೆ ಬಿದ್ದ. "ಬಾಬಾ...! ನನ್ನನ್ನು ಕ್ಷಮಿಸು, ಬಾಬಾ!" 
          ರೋಹನ್ ಸುಮಿತ್‌ನ ಪಾದಗಳನ್ನು ಹಿಡಿದುಕೊಂಡ. "ಸುಮಿತ್, ನಾನು ಅಮೆರಿಕಕ್ಕೆ ಹಿಂತಿರುಗಲು ಬಯಸುವುದಿಲ್ಲ! ನಾನು ನನ್ನ ತಂದೆಯೊಂದಿಗೆ ಇರಲು ಬಯಸುತ್ತೇನೆ! ನಾನು ಲಕ್ಷಾಂತರ ಗಳಿಸಿದೆ, ಆದರೆ ನಾನು ಭಿಕ್ಷುಕನಾದೆ! ನನ್ನ ತಂದೆ, ತಮ್ಮ ಸಾವಿನ ಸಮಯದಲ್ಲೂ, ನನ್ನ ಸಭೆಯ ಬಗ್ಗೆ ಯೋಚಿಸಿದರು... ಮತ್ತು ನಾನು ಅವರ ಅಂತ್ಯಕ್ರಿಯೆಯ ವೆಚ್ಚದ ಬಗ್ಗೆ ಚೌಕಾಸಿ ಮಾಡುತ್ತಿದ್ದೆ?"
                    ಆ ದಿನ, ರೋಹನ್ ತನ್ನ ವಿಮಾನ ಏರಲಿಲ್ಲ . ಅವನು ಸುಡುತ್ತಿರುವ ಚಿತೆಯ ಮುಂದೆ ಇಡೀ ರಾತ್ರಿ ಕುಳಿತಿದ್ದ. 
         ಏಕೆಂದರೆ ಅವನಿಗೆ ಅಂತಿಮವಾಗಿ ಅರ್ಥವಾಯಿತು— "ಪ್ರಿಪೇಡ್" ಎಂದರೆ ಸಿಮ್ ಕಾರ್ಡ್‌ಗೆ... ಆದರೆ ತಂದೆಯ ಪ್ರೀತಿಗೆ ಯಾವುದೇ ಪ್ರಿಪೇಡ್ ಇಲ್ಲ. ತಂದೆಯ ಪ್ರೀತಿ ಅಪರಿಮಿತ — ಮತ್ತು ಯಾವುದೇ ಕರೆನ್ಸಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ. ⸻ ನೀನು ಜಗತ್ತಿನಲ್ಲಿ ಎಷ್ಟೇ ದೊಡ್ಡವನಾಗಿದ್ದರೂ, ಎಷ್ಟು ಹಣ ಸಂಪಾದಿಸಿದರೂ... ನಿನ್ನನ್ನು ಡೈಪರ್‌ಗಳಲ್ಲಿ ಸುತ್ತಿದ ಪೋಷಕರು ಅಂತಿಮ ಪ್ರಯಾಣದಲ್ಲಿ ನಿನ್ನನ್ನು ಬಯಸಿದಾಗ, ಅಸುಕುಳಿಯಬೇಡ. ಅಂತ್ಯಕ್ರಿಯೆಯನ್ನು ಏಜೆನ್ಸಿ ಮಾಡಬಹುದು. ಆದರೆ ಕಣ್ಣೀರು... ಅದನ್ನು ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ಅದು ರಕ್ತದಿಂದ ಬರಬೇಕು. 

#ಶ್ರೀಕಾಂತ್ ಕಾಮತ್

ಫೆಬ್ರವರಿ 20, 2026

ಮರಣದ ಮಹತ್ವ

    ಊರ ಹೊರಗಿನ ಮರದ ಕೆಳಗೆ  ಸದಾ ಧ್ಯಾನಸ್ಥರಾಗಿ ಕುಳಿತಿರುವ  ಒಬ್ಬ ಋಷಿಯ ಬಳಿಗೆ , ಒಬ್ಬ ರಾಜ ಹೋಗಿ,  ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ, ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ, ಎಂದು ಕೇಳಿದ.

  ಆಗ ಋಷಿಗಳು, ರಾಜ ಇಲ್ಲಿರುವ  ಎರಡು   ಮಹಾ ಪರ್ವತಗಳನ್ನು ದಾಟಿದ ನಂತರ , ಅಲ್ಲಿ ಒಂದು ಸರೋವರವಿದೆ,ಅದರ ನೀರನ್ನು ಕುಡಿದಾಗ, ನೀನು ಅಮರನಾಗುವೆ, ಎಂದು ಹೇಳಿದರು.

    ಋಷಿಗಳು ಹೇಳಿದಂತೆ ಎರಡು ಪರ್ವತಗಳನ್ನು ದಾಟಿದ ನಂತರ ರಾಜ ,ಒಂದು ಸರೋವರವನ್ನು ಕಂಡ. ಇನ್ನೇನು ಅದರಲ್ಲಿನ ನೀರು ಬಾಚಿ ಕುಡಿಯಬೇಕೆಂದು ಕೊಂಡಾಗ,ಯಾರೋ  ಜೋರಾಗಿ ನರಳುತ್ತಿರುವಂತ  ಶಬ್ದ ಕೇಳಿಸಿತು. ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಅಲ್ಲೊಬ್ಬ ಅತ್ಯಂತ ದುರ್ಬಲ ವ್ಯಕ್ತಿಯನ್ನು ಕಂಡನು.ಆ ವ್ಯಕ್ತಿ ನರಳುತ್ತಿರುವ ಕಾರಣವನ್ನು  ರಾಜ ಕೇಳಿದಾಗ,  ಆತ ,ನಾನು  ಈ ಸರೋವರದ ನೀರನ್ನು ಕುಡಿದು ಅಮರನಾದೆ, ನನಗೆ ನೂರು ವರ್ಷ ತುಂಬಿದ ನಂತರ ‌ನನ್ನ ಮಗ ನನ್ನನ್ನು ಮನೆಯಿಂದ ಆಚೆ ಓಡಿಸಿದ,ಕಳೆದ ಐವತ್ತು ವರ್ಷಗಳಿಂದ  ನಾನು ಹೀಗೇ  ಇಲ್ಲೇ, ನರಳುತ್ತಾ ಮಲಗಿದ್ದೇನೆ, ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಮಗ  ಈಗ ತೀರಿಕೊಂಡಿದ್ದಾನೆ, ನನ್ನ ‌ಮೊಮ್ಮಕ್ಕಳೂ ಈಗ ‌ವೃದ್ದರಾಗಿದ್ದಾರೆ, ಸಾಯಬೇಕೆಂದುಕೊಂಡು ನಾನು, ಅನ್ನ ,ನೀರು  ಸೇವಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ, ಆದರೂ ಕೂಡ ನಾನಿನ್ನು ಬದುಕಿದ್ದೇನೆ, ಎಂದು ದುಃಖಿಸುತ್ತಾ ಹೇಳಿದ.

    ರಾಜನಿಗೆ ಅವನನ್ನು ನೋಡಿ, ಅಯ್ಯೋ, ಅನ್ನಿಸಿತು, ಆದರೆ ಅವನಿಗೊಂದು ‌ಆಲೋಚನೆ ಬಂತು. ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ,ಆಗ ಸರಿ ಹೋಗಬಹುದು, ಎಂದುಕೊಂಡು, ಇದಕ್ಕೆ ಪರಿಹಾರವನ್ನು ಋಷಿಗಳ ಬಳಿ ಕಂಡುಕೊಳ್ಳಲು ಅವನು ಪುನಃ ಅವರ ಬಳಿಗೆ  ಹೋಗಿ, ಗುರುಗಳೇ ನನಗೆ ಅಮರತ್ವದೊಂದಿಗೆ ಯೌವ್ವನವನ್ನು ಕೂಡಾ ಹೇಗೆ ಪಡೆಯುವುದೆಂಬುದನ್ನು ದಯವಿಟ್ಟು ತಿಳಿಸಿಕೊಡಿ ಎಂದು ಕೇಳಿದನು.

    ಆಗ ಋಷಿಗಳು, ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು  ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣುತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ ಎಂದು ಹೇಳಿದರು.

    ಆಗ ರಾಜನಿಗೆ ಬಹಳ ಸಂತೋಷವಾಯಿತು .ಋಷಿಗಳು  ಹೇಳಿದಂತೆ, ಪರ್ವತವನ್ನು ದಾಟಿ, ಹಳದಿ ಹಣ್ಣಿನಿಂದ ತುಂಬಿದ ಮರದತ್ತ ಹೋದ. ಆತ ಒಂದು ಹಣ್ಣನ್ನು ಕಿತ್ತು ತಿನ್ನಲು ಹೋದಾಗ, ಅವನಿಗೆ ಯಾರೋ, ಜೋರಾಗಿ  ಕಿರುಚಾಡುತ್ತಾ ಜಗಳ ವಾಡುತ್ತಿರುವಹಾಗೆ, ಭಾಸವಾಯಿತು. ಹಣ್ಣು ತಿನ್ನುವುದನ್ನು ಬಿಟ್ಟು, ಶಬ್ದ ಬಂದ ಕಡೆ ಹೋಗಿ ನೋಡಿದಾಗ, ನಾಲ್ವರು ಯುವಕರು ಜೋರಾಗಿ ವಾದ ಮಾಡುತ್ತಾ ಜಗಳವಾಡುತ್ತಿದ್ದರು. ಅವರು ಏಕೆ ಹೀಗೆ ಹೊಡೆದಾಡುತ್ತಿದ್ದಾರೆ ಎಂದು ರಾಜ ಕೇಳಿದ. 
   ಆಗ ಒಬ್ಬ ಹೇಳಿದ, ನನಗೀಗ ಇನ್ನೂರೈವತ್ತು ವರ್ಷವಾಗಿದೆ, ಮತ್ತು ನನ್ನ ಬಲಭಾಗದಲ್ಲಿರುವ ವ್ಯಕ್ತಿ, ಆತ ನನ್ನ ತಂದೆ, ಅವನಿಗೆ ಮುನ್ನೂರು ವರ್ಷವಾಗಿದೆ, ಅವರು ಇನ್ನೂ ನನ್ನ ಪಾಲಿನ ಆಸ್ತಿಯನ್ನು ನನಗೆ ನೀಡುತ್ತಿಲ್ಲ, ಎಂದು ಹೇಳಿದ.
    ರಾಜ ಬಲಭಾಗದಲ್ಲಿರುವ ವ್ಯಕ್ತಿಯನ್ನು ಏಕೆಂದು ಕೇಳಿದಾಗ, ಆತ , ಮುನ್ನೂರೈವತ್ತು ವರ್ಷ ವಯಸ್ಸಿನ ನನ್ನ ತಂದೆ ಇನ್ನೂ ಬದುಕಿದ್ದಾರೆ,  ಆತ ನನ್ನ ಪಾಲನ್ನು ನನಗೇ  ನೀಡಿಲ್ಲ, ಇನ್ನು ನಾನು ನನ್ನ ಮಗನಿಗೆ ಹೇಗೆ ಕೊಡಲಿ,ಎಂದ. ಮುನ್ನೂರೈವತ್ತರ ಯುವಕ,ನಾನೂರು ವರ್ಷ ವಯಸ್ಸಿನ ತನ್ನ ತಂದೆಯನ್ನು ತೋರಿಸಿ, ಅದೇ ದೂರನ್ನು ಹೇಳಿದನು.

   ಹೀಗೆ ಆಸ್ತಿಗಾಗಿ , ನಮ್ಮ ಅಂತ್ಯವಿಲ್ಲದ ಹೋರಾಟವನ್ನು ನೋಡಿ ಗ್ರಾಮಸ್ಥರು, ನಮ್ಮನ್ನು  ಹಳ್ಳಿಯಿಂದ ಹೊರಗೆ ಹಾಕಿದ್ದಾರೆ, ಎಂದು ಅವರೆಲ್ಲರೂ ರಾಜನಿಗೆ ತಿಳಿದರು. 

   ಇದನ್ನು ಕೇಳಿದ ರಾಜ ಅಘಾತಕ್ಕೊಳಗಾಗಿ,  ಸದ್ಯ!  ನಾನಿನ್ನೂ ಹಣ್ಣನ್ನು ತಿನ್ನಲಿಲ್ಲವಲ್ಲಾ!  ಎಂದುಕೊಂಡು,ಋಷಿಯ ಬಳಿಗೆ ಪುನಹ ಓಡಿ  ಹೋದ. ನನಗೆ ಸಾವಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ಗುರುಗಳೇ ಎಂದು ಅವರ ಪಾದಗಳಿಗೆ  ಎರಗಿದನು.

    ಋಷಿಗಳು ನಗುತ್ತಾ, ಸಾವು ಅಸ್ತಿತ್ವದಲ್ಲಿರುವುದರಿಂದ, ಜಗತ್ತಿನಲ್ಲಿ ಇನ್ನೂ ಪ್ರೀತಿ ವಿಶ್ವಾಸವಿದೆ. ಅಮರತ್ವವನ್ನು ಪಡೆಯಲು ಪ್ರಯತ್ನಿಸುವ ಬದಲು, ಬದುಕಿರುವಷ್ಟು ದಿನವೂ ಪ್ರತಿಕ್ಷಣವನ್ನೂ ಸಂತೋಷದಿಂದ, ಆನಂದದಿಂದ ಜೀವಿಸುವುದನ್ನು  ಕಲಿಯಿರಿ, ಆಗ  ಇಡೀ ಜಗತ್ತೇ ಜಗಮಗಿಸುತ್ತಿರುತ್ತದೆ. ಎಂದು ಹೇಳಿದರು.

ಫೆಬ್ರವರಿ 18, 2026

ದುರ್ಜನರಿಗೆ ಸುಖ - ಸಜ್ಜನರಿಗೆ ದುಃಖ

ನಾವು ಸಾಮಾನ್ಯವಾಗಿ ಕೇಳುವ ಪ್ರಶ್ನೆ: "ನಾನು ಒಳ್ಳೆಯದನ್ನು ಮಾಡಿದರೆ ನನಗೆ ಸುಖ ಸಿಗಬೇಕಲ್ಲವೇ?"
ಆದರೆ ನಮ್ಮ ಋಷಿಗಳು ಹೇಳುತ್ತಾರೆ: "ನಿನಗೆ ಸುಖ ಬೇಕೋ ಅಥವಾ ಬಿಡುಗಡೆ (ಮೋಕ್ಷ) ಬೇಕೋ?"
ಏಕೆಂದರೆ,  ತತ್ವಶಾಸ್ತ್ರದ ಪ್ರಕಾರ, ಪಾಪ ಮತ್ತು ಪುಣ್ಯಗಳೆರಡೂ "ಬಂಧನಗಳೇ".

*💠ಚಿನ್ನದ ಸರಪಳಿ vs ಕಬ್ಬಿಣ ಸರಪಳಿ*
ಈ ಅದ್ಭುತವಾದ ತತ್ವವನ್ನು ಅರ್ಥಮಾಡಿಕೊಳ್ಳಿ:
 *⭐ಪಾಪ*: ಇದು "ಕಬ್ಬಿಣದ ಸರಪಳಿ". ಇದು ನಮ್ಮನ್ನು ನರಕ ಅಥವಾ ಕಷ್ಟ ಎಂಬ ಜೈಲಿನಲ್ಲಿ ಬಂಧಿಸುತ್ತದೆ.

 *⭐ಪುಣ್ಯ*: ಇದು "ಚಿನ್ನದ ಸರಪಳಿ". ಇದು ನಮ್ಮನ್ನು ಸ್ವರ್ಗ ಅಥವಾ ಭೂಮಿಯ ಮೇಲಿನ ಭೋಗ ಎಂಬ ಅರಮನೆಯಲ್ಲಿ ಬಂಧಿಸುತ್ತದೆ.
ಕಬ್ಬಿಣದ ಸರಪಳಿಯಲ್ಲಿದ್ದರೆ ಕೈ ನೋಯುತ್ತದೆ, ಚಿನ್ನದ ಸರಪಳಿಯಲ್ಲಿದ್ದರೆ ಕೈಗೆ ಅಂದವಾಗಿ ಕಾಣುತ್ತದೆ. ಆದರೆ ಎರಡೂ ಸರಪಳಿಗಳೇ! ಎರಡೂ ನಮ್ಮನ್ನು ಕಟ್ಟಿಹಾಕುತ್ತವೆ.
ಪಾಪ ಮಾಡಿದವನು ಕಷ್ಟ ಅನುಭವಿಸಲು ಮತ್ತೆ ಹುಟ್ಟಬೇಕು. ಪುಣ್ಯ ಮಾಡಿದವನು ಆ ಪುಣ್ಯದ ಫಲವನ್ನು (ಸುಖವನ್ನು) ಅನುಭವಿಸಲು ಮತ್ತೆ ಹುಟ್ಟಬೇಕು. ಹುಟ್ಟು-ಸಾವುಗಳ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

*💠ಜ್ಞಾನಿಯ ದೃಷ್ಟಿ:*
ನಿಜವಾದ ಭಕ್ತ ಅಥವಾ ಜ್ಞಾನಿಯು ದೇವರಿಗೆ "ನನಗೆ ಸುಖ ಕೊಡು" ಎಂದು ಕೇಳುವುದಿಲ್ಲ. "ನನ್ನ ಈ ಎರಡೂ ಸರಪಳಿಗಳನ್ನು ಕತ್ತರಿಸಿ ನನ್ನನ್ನು ಸ್ವತಂತ್ರನನ್ನಾಗಿ (ಮೋಕ್ಷ) ಮಾಡು" ಎಂದು ಕೇಳುತ್ತಾನೆ.
ಅದಕ್ಕಾಗಿಯೇ, ಪುಣ್ಯವಂತರಿಗೆ ದೇವರು ಕಷ್ಟಗಳನ್ನು ಕೊಟ್ಟು, ಅವರ ಕರ್ಮಗಳನ್ನು ವೇಗವಾಗಿ ಕಳೆದು, ಸರಪಳಿಗಳನ್ನು ಮುರಿದು ತನ್ನತ್ತ ಕರೆದುಕೊಳ್ಳುತ್ತಾನೆ.

*💠ಸುಖ-ದುಃಖಗಳನ್ನು ಮೀರಿದ ಸ್ಥಿತಿ*
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ "ಯುದ್ಧ ಮಾಡು" ಎಂದು ಹೇಳಿದನೇ ಹೊರತು "ಗೆಲ್ಲು" ಎಂದು ಹೇಳಲಿಲ್ಲ. ಜೀವನದಲ್ಲಿ ನಾವು ಹೇಗಿರಬೇಕು ಎಂಬುದಕ್ಕೆ ಇದೊಂದು ಮಹಾಮಂತ್ರ.

 *🕉️ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ* |
 *ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ* || 
(ಭಗವದ್ಗೀತೆ ೨.೩೮)


ಸುಖ ಮತ್ತು ದುಃಖವನ್ನು, ಲಾಭ ಮತ್ತು ನಷ್ಟವನ್ನು, ಜಯ ಮತ್ತು ಅಪಜಯವನ್ನು *"ಸಮ"* ನಾಗಿ (ಒಂದೇ ಎಂದು) ಭಾವಿಸು. ನಂತರ ಯುದ್ಧ ಮಾಡು (ಕರ್ತವ್ಯ ಮಾಡು). ಆಗ ನಿನಗೆ ಯಾವ ಪಾಪವೂ ಅಂಟುವುದಿಲ್ಲ.

ಪಾಪಿಗಳು ಸುಖ ಬಂದಾಗ ಹಿಗ್ಗುತ್ತಾರೆ, ದುಃಖ ಬಂದಾಗ ಕುಗ್ಗುತ್ತಾರೆ. ಆದರೆ ಪುಣ್ಯವಂತರು (ಜ್ಞಾನಿಗಳು) ಕಷ್ಟ ಬಂದಾಗಲೂ ನಗುತ್ತಾರೆ. "ನನ್ನ ಹಳೆಯ ಸಾಲ ತೀರುತ್ತಿದೆ" ಎಂಬ ಸಮಾಧಾನ ಅವರಲ್ಲಿರುತ್ತದೆ.
ಜೀವನದ ಗುರಿ "ಸುಖವಾಗಿರುವುದು" ಅಲ್ಲ, ಜೀವನದ ಗುರಿ "ಸ್ಥಿತಪ್ರಜ್ಞ" (ಶಾಂತವಾಗಿ) ಆಗಿರುವುದು.

*💠ಭೋಗವೇ ರೋಗ*
ಪಾಪಿಗಳು ಅನುಭವಿಸುವ ಇಂದ್ರಿಯ ಸುಖಗಳು ವಾಸ್ತವವಾಗಿ ದುಃಖದ ತಾಯಂದಿರು ಎಂದು ಕೃಷ್ಣ ಎಚ್ಚರಿಸುತ್ತಾನೆ.

 *🕉️ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ* |
*ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ* || (ಭಗವದ್ಗೀತೆ ೫.೨೨)
 

ಇಂದ್ರಿಯಗಳ ಸಂಪರ್ಕದಿಂದ ಹುಟ್ಟುವ ಭೋಗಗಳು (ಸುಖಗಳು) "ದುಃಖದ ಯೋನಿಗಳೇ" (ದುಃಖಕ್ಕೆ ಜನ್ಮ ನೀಡುವ ತಾಯಂದಿರೇ) ಆಗಿವೆ. ಅವುಗಳಿಗೆ ಆದಿ (ಆರಂಭ) ಮತ್ತು ಅಂತ್ಯವಿದೆ. ಬುದ್ಧಿವಂತನಾದವನು ಅವುಗಳಲ್ಲಿ ರಮಿಸುವುದಿಲ್ಲ (ಸಂತೋಷ ಪಡುವುದಿಲ್ಲ).
ಪಾಪಿಗಳು "ಸುಖ" ಎಂದುಕೊಂಡಿರುವುದು, ಬೆಂಕಿಯ ಜ್ವಾಲೆಯನ್ನು ಕಂಡು ಆಕರ್ಷಿತವಾದ ಪತಂಗದಂತೆ (Butterfly). ಅದು ಮುಟ್ಟಲು ಸುಂದರ, ಆದರೆ ಮುಟ್ಟಿದರೆ ಸಾವು. ಪುಣ್ಯವಂತರಿಗೆ ದೇವರು ಆ ಸುಖವನ್ನು ನಿರಾಕರಿಸುವ ಮೂಲಕ, ಅವರನ್ನು ಆ ಬೆಂಕಿಯಿಂದ ರಕ್ಷಿಸುತ್ತಿದ್ದಾನೆ.

*💠ಜೈಲಿನ ಉದಾಹರಣೆ*
ನಾವು ಈ ಭೂಮಿ ಎಂಬ ಜೈಲಿನಲ್ಲಿರುವ ಕೈದಿಗಳು

 ✨ ಪಾಪಿಗಳು: "ಎ-ಕ್ಲಾಸ್"  ಕೈದಿಗಳಂತೆ. ಅವರಿಗೆ ಜೈಲಿನಲ್ಲಿ ಟಿವಿ, ಒಳ್ಳೆ ಊಟ, ಹಾಸಿಗೆ ಸಿಗಬಹುದು (ಅವರ ಹಿಂದಿನ ಪುಣ್ಯದಿಂದ). ಅವರು ಜೈಲಿನಲ್ಲೇ ಇರಲು ಇಷ್ಟಪಡುತ್ತಾರೆ.

 ✨ ಪುಣ್ಯವಂತರು: ಸಾಧಾರಣ ಕೈದಿಗಳಂತೆ ಕಷ್ಟಪಡುತ್ತಿರಬಹುದು. ಆದರೆ ಅವರ ನಡತೆ  ಚೆನ್ನಾಗಿದೆ ಎಂದು ಜೈಲರ್ (ದೇವರು) ಅವರನ್ನು "ಬಿಡುಗಡೆ"  ಮಾಡಲು ನಿರ್ಧರಿಸಿದ್ದಾನೆ.
ಯಾರು ಅದೃಷ್ಟವಂತರು?
ಜೈಲಿನಲ್ಲಿ  ತಿನ್ನುತ್ತಾ ಅಲ್ಲೇ ಕೊಳೆಯುವವನೋ? ಅಥವಾ ಕಷ್ಟಪಟ್ಟರೂ ಜೈಲಿನಿಂದ ಶಾಶ್ವತವಾಗಿ ಬಿಡುಗಡೆಯಾಗಿ ಮನೆಗೆ (ದೇವಲೋಕಕ್ಕೆ) ಹೋಗುವವನೋ?
ನಿಶ್ಚಯವಾಗಿಯೂ ಬಿಡುಗಡೆ ಹೊಂದುವವನೇ ಅದೃಷ್ಟವಂತ. ಪುಣ್ಯವಂತರ ಕಷ್ಟವು ಆ ಬಿಡುಗಡೆಯ ಪ್ರಕ್ರಿಯೆ.


 ❇️ ಬ್ಯಾಂಕ್ ಬ್ಯಾಲೆನ್ಸ್: ಪಾಪಿಗಳು ಹಳೆಯ ಪುಣ್ಯವನ್ನು ಖರ್ಚು ಮಾಡುತ್ತಿದ್ದಾರೆ . ಪುಣ್ಯವಂತರು ಹಳೆಯ ಪಾಪವನ್ನು ತೀರಿಸುತ್ತಿದ್ದಾರೆ .
 ❇️ ಕಾಲದ ಅಂತರ : ಬೀಜ ಬಿತ್ತಿದ ತಕ್ಷಣ ಮರವಾಗುವುದಿಲ್ಲ. ಕರ್ಮಫಲಕ್ಕೆ ಸಮಯ ಬೇಕು.
 ❇️ ಅಗ್ನಿಪರೀಕ್ಷೆ: ಪುಣ್ಯವಂತನು ಚಿನ್ನದಂತೆ. ಬೆಂಕಿಯಲ್ಲಿ ಬೆಂದಷ್ಟೂ ಶುದ್ಧವಾಗುತ್ತಾನೆ.
 ❇️ ಆಸುರೀ ಸುಖ: ಪಾಪಿಗಳ ಸುಖವು ಮಾನಸಿಕ ರೋಗವಿದ್ದಂತೆ. ಅದು ಶಾಂತಿಯಿಲ್ಲದ ಭೋಗ.
 ❇️ ದೈವಿಕ ಚಿಕಿತ್ಸೆ: ಕಷ್ಟವೆಂಬುದು ಆತ್ಮಕ್ಕೆ ಮಾಡುವ ಶಸ್ತ್ರಚಿಕಿತ್ಸೆ .
 ❇️ ಋಣಾನುಬಂಧ: ನಾವು ಮಾಡಿದ ಸಣ್ಣ ತಪ್ಪುಗಳಿಗೂ ಲೆಕ್ಕ ಚುಕ್ತವಾಗಲೇಬೇಕು (ಮಾಂಡವ್ಯ ಋಷಿಯಂತೆ).
 ❇️ ವಿಚಿತ್ರ ಅನುಗ್ರಹ: ದೇವರು ಭಕ್ತನ ಅಹಂಕಾರ ಮುರಿಯಲು ಅವನ ಸಂಪತ್ತನ್ನು ಕಸಿದುಕೊಳ್ಳುತ್ತಾನೆ.
 ❇️ ವಿನಾಶದ ಹಾದಿ: ಪಾಪಿಗಳ ಏಳಿಗೆಯು, ಬಲೂನ್ ಒಡೆಯುವ ಮುನ್ನ ಉಬ್ಬಿದಂತೆ (ನಹುಷನಂತೆ).
 ❇️ ಶ್ರೇಯಸ್ vs ಪ್ರೇಯಸ್: ಪುಣ್ಯವಂತರು 'ಒಳ್ಳೆಯದನ್ನು' ಆರಿಸಿಕೊಂಡರೆ, ಪಾಪಿಗಳು 'ಇಷ್ಟವಾಗುವದನ್ನು' ಆರಿಸಿಕೊಳ್ಳುತ್ತಾರೆ.
 ❇️ ಮೋಕ್ಷ: ಅಂತಿಮವಾಗಿ, ಕಷ್ಟಗಳು ನಮ್ಮನ್ನು ಪ್ರಪಂಚದಿಂದ ವಿರಕ್ತರನ್ನಾಗಿ ಮಾಡಿ, ದೇವರ ಕಡೆಗೆ ತಿರುಗಿಸುತ್ತವೆ.

ಆದ್ದರಿಂದ, ಜೀವನದಲ್ಲಿ ಕಷ್ಟ ಬಂದಾಗ "ನಾನೇನು ತಪ್ಪು ಮಾಡಿದೆ?" ಎಂದು ಕೇಳಬೇಡಿ. "ದೇವರೇ, ನನ್ನ ಯಾವ ಹಳೆಯ ಸಾಲ ತೀರಿಸುತ್ತಿದ್ದೀಯಾ ತೀರಿಸು, ನನಗೆ ಶಕ್ತಿ ಕೊಡು" ಎಂದು ಪ್ರಾರ್ಥಿಸಿ.
ಪಾಪಿಗಳ ಸುಖವನ್ನು ಕಂಡು ಅಸೂಯೆ ಪಡಬೇಡಿ. ಅದು ಬಿರುಗಾಳಿಗೆ ಮುಂಚಿನ ಶಾಂತಿ.
ಧರ್ಮದ ಹಾದಿ ಕಷ್ಟವಾಗಿದ್ದರೂ, ಅದು ಶಾಶ್ವತ ಶಾಂತಿಯ ಮನೆಗೆ ಕರೆದೊಯ್ಯುತ್ತದೆ.

ಮಂಜುನಾಥ ಶರ್ಮ 

ಫೆಬ್ರವರಿ 13, 2026

ಜೀವನದ ಕಠೋರ ಸತ್ಯಗಳು

ನನ್ನ ತಲೆ ನೋಯುತ್ತಿದೆ ಎಂದು..
medical shop ಗೆ ಹೋದೆ.
ಔಷಧಿ ಅಂಗಡಿ ಮಾಲಕ..
ಅಂಗಡಿಯಲ್ಲಿ ಇರಲಿಲ್ಲ..
ಕೇಳಿದೆ... ಅಂಗಡಿ ಮಾಲಕ ಎಲ್ಲಿ..?*

ಅಂಗಡಿಯ ನೌಕರ ಹೇಳಿದ..
ಮಾಲೀಕರ ತಲೆ ನೋಯುತ್ತಿದೆ..
ಶುಂಠಿಯ ಕಷಾಯ ಕುಡಿಯಲು 
ಮನೆಗೇ ಹೋಗಿದ್ದಾರೆ..
ನಾನು ನನ್ನ ಕೈಯಲ್ಲಿಯೇ ತಲೆ ನೋವಿನ ಮಾತ್ರೆ ನೋಡುತ್ತಲೇ ನಿಂತೆ.....

ನನ್ನ ತಾಯಿಯ BP , sugar ಹೆಚ್ಚಾಗಿದೆ ಎಂದು ,ವೈದ್ಯರ ಬಳಿ ಹೋದೆ..
ಸುಮಾರು ಒಂದು ಅರ್ಧ ಘಂಟೆವರೆಗೆ ಕಾಯ್ದೆ..
ವೈದ್ಯರು ಬಂದರು..
ನನ್ನಮ್ಮನ ಪ್ರಕೃರ್ತಿ ತಪಾಸಣೆ ಮಾಡಿ.. ಉದ್ದವಾದ prescription ಕೊಟ್ಟರು.

ನಾನು , ಕೇಳಿದೆ..
ಡಾಕ್ಟ್ರೆ..ನಿಮಗೆ BP.. ಸುಗರ ಇದೆಯಾ..?
ಛೆ.. ಇಲ್ಲವೇ ಇಲ್ಲ..
ನಾನು ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡುತ್ತೇನೆ..
ಎಲ್ಲಿಂದ ಬರಬೇಕು..BP, sugar.. ನನಗೆ..
ನಾ..ಅವರು ಕೊಟ್ಟ prescription ನೋಡುತ್ತಾ ನಿಂತೆ...

ಒಮ್ಮೆ ನನ್ನದೇ ಬಿಳಿ ಕೂದಲು..
ಕಪ್ಪು ಮಾಡಲು ಹೋದೆ 
ಒಂದು men's parlour ಗೆ..

ಕೂದಲು trim and conditioning...
(, ಕೂದಲಿಗೆ ಕಪ್ಪು ಬಣ್ಣದ ಲೇಪನ)
ಕೂದಲು ಕಪ್ಪು ಮಾಡುವಾಗ..
ಆ barber ನ ಕೂದಲು ಕಡೆ 
ದೃಷ್ಟಿ ಹಾಯಿಸಿದೆ..
ಹೊಳೆಯುವ ಕಪ್ಪು ಕೂದಲು..
ನೀನ್ಯಾವ dye ಉಪಯೋಗ ಮಾಡುತ್ತಿ..?
ಎಂದು ಕೇಳಲು...
ಛೆ.. ನನಗೇಕೆ ಬೇಕು ಡೈ..?
ಕೊಬ್ಬರಿ ಎಣ್ಣೆಗೆ ಕರ್ಪೂರ ಸೇರಿಸಿ 
ಕೂದಲಿಗೆ ಹಚ್ಚಲು..
ನಾನು ಅವನು ನನ್ನ ಕೈಗೆ ಕೊಟ್ಟ parlour Bill ನೋಡುತ್ತಾ ನಿಂತೆ..

ನನಗೊಮ್ಮೆ ಗಟ್ಟಿಯಾದ ಹಾಲು ಬೇಕಿತ್ತು..
ಹೋದೆ ಒಬ್ಬ ಗೌಳಿಯ ಮನೆಗೆ..
ಅನೇಕ ಜೆರ್ಸಿ ಆಕಳು ಇದ್ದವು..
ಹಾಲು ಕೊಡುತ್ತಾ..
ಗಟ್ಟಿಯಾದ creamy milk..
ಒಂದು ಮೂಲೆಯಲ್ಲಿ ... ದೇಶೀಯ ತಳಿಯ  ಗೋವುಗಳೂ
ನೋಡಿದೆ..
ಗೌಳಿಗನಿಗೆ ಕೇಳಿದೆ..
ಅದೇಕೆ ಸಾಕಿರುವಿ ಆ ದೇಶೀಯ ಆಕಳನ್ನು..?
ಸರ... ಅವುಗಳ ಹಾಲನ್ನೇ ನಾನು ಉಪಯೋಗ ಮಾಡ್ತ ಇರೋದು 
ನನ್ನ ಮನೆಗೆ..
ನಾನು ಆ ಗೌಳಿ ಯ ಜೆರ್ಸಿ ಆಕಳಿಂದ ಪಡೆದ ಗಟ್ಟಿ ಹಾಲಿನ ಪಾತ್ರೆಯನ್ನು ನೋಡುತ್ತಾ ನಿಂತೆ....

ಒಮ್ಮೆ ಶಹರದ ಪ್ರಸಿದ್ಧ ಹೋಟೆಲ್ಗೆ ಹೋದೆ.. ಊಟಕ್ಕೆಂದು..
ಊಟ ಆಯಿತು..bill ಕೊಡಲು
Hotel ಮಾಲಿಕನ ಟೇಬಲ್ ಗೆ ಹೋದೆ..
ಒಬ್ಬ ಆಳು...
ಸರ.. ನಿಮ್ಮ ಊಟ ...ಎಂದು ಒಂದು tiffin ಕ್ಯಾರಿಯರ್ ತಂದಿಟ್ಟ ಮಾಲಿಕನ ಹತ್ತಿರ..
ನಾ ಕೇಳಿದೆ... ಹೊಟೆಲ್ ಮಾಲೀಕರಿಗೆ..
ಈ ಟಿಫಿನ್ ಕ್ಯಾರಿಯರ್ ಊಟ ಯಾರಿಗೆ...?
ಸರ್..ಅದು ನನ್ನೂಟ..
ಮನೆಯಿಂದ ತರಿಸಿದ್ದು..
ನಾ.. ನನ್ನ ಕೈಯಲ್ಲಿದ್ದ ಹೋಟೆಲ್ bill ನೋಡುತ್ತಾ ನಿಂತೆ....
ಒಂದು ದಿನ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಇತ್ತು ನಮ್ಮ ಮನೆಯಲ್ಲಿ. ಹೊರಗಡೆ ಒಬ್ಬ ಭಿಕ್ಷುಕ ಅಮ್ಮಾ ತಾಯಿ ಎನಾದರೂ ಭಿಕ್ಷೆ ಹಾಕಿ ಎಂದು ಕೂಗಿದ. ನಾನು ತುಂಬಾ ಬಿಸ್ಹೀ ಇದ್ದೆ. ಮುಂದೆ ಹೋಗು ಎಂದು ಗದರಿಸಿದೆ.
ನಂತರ ಪೂಜೆ ಮಾಡುತ್ತಿರುವಾಗ ಶ್ರೀ ಸತ್ಯನಾರಾಯಣ ಸ್ವಾಮಿ ಫೋಟೋ ದಲ್ಲಿ ಇದ್ದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರು ನಕ್ಕಂತೆ ಭಾಸವಾಯಿತು.
ಭಗವಂತನು ಎಲ್ಲಾ ಸೌಲಭ್ಯಗಳನ್ನು ಸೌಭಾಗ್ಯವನ್ನು ಈ ನಮ್ಮ ಜೀವನ,ಭೂಲೋಕ, ಪ್ರಕೃತಿ ಯಲ್ಲಿ ಖಂಡಿತ ನಮಗೆ ಕೊಟ್ಟಿದ್ದಾನೆ. ಆದರೆ ಅದನ್ನು ಉಪಯೋಗಿಸಿಕೊಂಡು ಲಾಭ ಪಡೆಯುವುದರಲ್ಲಿ ನಮಗೆ ಕಷ್ಟ ಮತ್ತು ಅಸಡ್ಡೆ.

ಹೀಗೆಯೇ...
ಕೆಲವು ಉದಾಹರಣೆಗಳು..
ಈ ಜೀವನದ...
ಕಠೋರ ಸತ್ಯಗಳು..

ತಾಯಿಗೆ ಒಂದು ಜೊತೆ ಪಾದರಕ್ಷೆ ಕೊಡಿ

ಸಾಯಂಕಾಲ ಎಂಟು ಗಂಟೆಯ ಸಮಯ, ಪಾದರಕ್ಷೆಯ ಅಂಗಡಿಯವ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅಂಗಡಿಯನ್ನು ಮುಚ್ಚಬೇಕು ಎನ್ನುವಾಗ, ಇಪ್ಪತ್ತರ ಹರೆಯದ ಹುಡುಗ ಒಳಗೆ ಬಂದ. ಮಾಲೀಕ ಆತನನ್ನು ಮತ್ತು ಆತನ ಕಾಲನ್ನು ನೋಡಲು ಆತ  ಸುಂದರವಾದ ಪಾದರಕ್ಷೆಯನ್ನು ಹಾಕಿಕೊಂಡಿದ್ದ.  ನೋಡಲು ಹಳ್ಳಿಯವನಂತೆ ಕಂಡರೂ ಓದು ಬರಹ ಬಲ್ಲವನಂತಿದ್ದ.

ಮಾಲೀಕ  "ಸರ್ ಏನಾಗಬೇಕಿತ್ತು" ಎನ್ನಲು, ಆ ಯುವಕ "ನನ್ನ ತಾಯಿಗೆ ಒಂದು ಜೊತೆ ಪಾದರಕ್ಷೆ ಬೇಕಾಗಿತ್ತು."

ಸರಿ ಅವರೆಲ್ಲಿ ಎನ್ನಲು ಆತ ಅವರು  ಊರಲ್ಲಿದ್ದಾರೆ ಎಂದ.
ಸರಿ ಹಾಗಾದರೆ ನಿಮಗೆ ಯಾವ ಸೈಜಿನ ಪಾದರಕ್ಷೆ ಬೇಕು ಎನ್ನಲು ಯುವಕನು, ತನ್ನ ಪರ್ಸ್ ತೆಗೆದು ಅದರಿಂದ ಸುಂದರವಾದ ಬಿಳಿ ಹಾಳೆಯನ್ನು ತೆಗೆದು ಮಾಲೀಕನ ಮುಂದೆ ಇಟ್ಟ.

ಅದರಲ್ಲಿ ಎರಡು ಪಾದದ ನಕ್ಷೆ ಇತ್ತು. "ಇದು ನನ್ನ ತಾಯಿಯ ಪಾದದ ನಕ್ಷೆ, ನಾನು ಪಾದರಕ್ಷೆ ಖರೀದಿಸುವುದು ಅವರಿಗೆ ಗೊತ್ತಿಲ್ಲ" ಎಂದ.

ಮಾಲೀಕ ನೋಡಿ,  "ಸರಿ ನಿಮಗೆ ಎಷ್ಟು ಬೆಲೆಯ ಪಾದರಕ್ಷೆ ಬೇಕು" ಎನ್ನಲು ಆ ಯುವಕ "ಇದು ನನ್ನ ಮೊದಲನೆಯ ಸಂಬಳ... ನನಗೆ 12 ಸಾವಿರ ಬರುತ್ತದೆ. ಅದರಲ್ಲಿ ಅದು ಇದು ಎಂದು ಹೋಗಿ ಕೈಗೆ 10 ಸಾವಿರ ಬರುತ್ತದೆ. ಅದರಲ್ಲಿ 3 ಸಾವಿರ ಮನೆಗೆ ಕೊಡಬೇಕು... ಈಗ ಒಳ್ಳೆಯ ಪಾದರಕ್ಷೆಯನ್ನು  ಕೊಡಿ. ಬೆಲೆ ಒಂದು ವಿಚಾರವೇ ಅಲ್ಲ. ನನ್ನ ತಾಯಿ  ಕೂಲಿ ಕೆಲಸ ಮಾಡುತ್ತಾರೆ. ಅವರೆಂದೂ ಪಾದರಕ್ಷೆ ಹಾಕಿದವರಲ್ಲ. ಕಲ್ಲು ಮುಳ್ಳುಗಳಲ್ಲಿ ಬರಿಗಾಲಲ್ಲಿ ನಡೆದು ಕಷ್ಟಪಟ್ಟು ದುಡಿದು ನನ್ನನ್ನು ಓದಿಸಿ ಕೆಲಸ ಸಿಗುವಂತೆ ಮಾಡಿದ ದೇವರು. ಅವರಿಗೆ ಸರಿಯಾಗುವ ಪಾದರಕ್ಷೆ ಕೊಡಿ" ಎಂದನು.

ಮಾಲೀಕ ಒಂದು ಜೊತೆ ಒಳ್ಳೆಯ ಪಾದರಕ್ಷೆಯನ್ನು ಕೊಟ್ಟು ಇದರ ಬೆಲೆ 800 ರೂಪಾಯಿಗಳು ಎನ್ನುತ್ತಲೇ ಗಿರಾಕಿ ಸಂತೋಷದಿಂದ ಅದನ್ನು ಪ್ಯಾಕ್ ಮಾಡಲು ಹೇಳಿ ತನ್ನ ಮೊದಲ ಸಂಬಳದಿಂದ ಅದನ್ನು ಕೊಟ್ಟು ಸಂತಸದಿಂದ  ಅಂಗಡಿಯಿಂದ ಹೊರಡಲನುವಾದ.

ಆಗ ಮಾಲೀಕ,  "ಅಯ್ಯ ನಿಮಗೆ ಅಭ್ಯಂತರ ಇಲ್ಲವಾದರೆ ನನಗೆ ಆ ಪಾದರಕ್ಷೆಯ ನಕ್ಷೆ ಬರೆದ ಕಾಗದವನ್ನು ಕೊಡಿ" ಎಂದ. ಯುವಕ ಅದನ್ನು ಕೊಡಲು, ಅಂಗಡಿಯ ಮಾಲೀಕ ಮತ್ತೊಂದು ಜೊತೆ ಸುಂದರವಾದ ಪಾದರಕ್ಷೆಯನ್ನು ಕೊಟ್ಟು "ಇದನ್ನು ನಿಮ್ಮ ತಾಯಿಯವರಿಗೆ, ಅಂದರೆ ನನ್ನ ತಂಗಿಗೆ ನನ್ನ ಉಡುಗೊರೆಯಾಗಿ ಕೊಡಿ. ನಿಮ್ಮಂತ ಒಳ್ಳೆಯ ಹುಡುಗನನ್ನು ಹೆತ್ತು ಸರಿದಾರಿಯಲ್ಲಿ ಬೆಳೆಸಿದ ಅವರು ಮಹಾತಾಯಿ." ಎಂದನು.

ಯುವಕನು ಅದನ್ನು ಸಂತಸದಿಂದ ಪಡೆದು ಹೊರಟ ನಂತರ ಅಂಗಡಿಯಲ್ಲಿದ್ದ ಕೆಲಸದ ಹುಡುಗ ಮಾಲೀಕನನ್ನು ಒಂದು ವಿಧವಾಗಿ ನೋಡಿದ. 
ಆಗ ಮಾಲೀಕನು,  "ನೋಡು ಈ ನಕ್ಷೆಯನ್ನು ನಾವು ದಿನಾಲು ಪೂಜೆ ಮಾಡುವ ದೇವರ ಮೂರ್ತಿಯ ಬಳಿಯಿಡು. ಇದು ಮಹಾಲಕ್ಷ್ಮಿಯ ಪಾದಗಳು. ಇದಕ್ಕೆ ಪೂಜೆ ಮಾಡಿದರೆ ನಮ್ಮ ವ್ಯಾಪಾರ ವ್ಯವಹಾರ ವೃದ್ಧಿಯಾಗಬಹುದು.  ಎಷ್ಟು ಜನ ತಾಯಂದಿರು ಮಕ್ಕಳಿಗೆ ಸರಿದಾರಿ ತೋರಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡುತ್ತಾರೋ ಆ ನಾಡು ದೇಶ ಅಭಿವೃದ್ಧಿಯಾಗುತ್ತದೆ" ಎಂದನು.


ಫೆಬ್ರವರಿ 12, 2026

ಸ್ವರ್ಗದಿಂದ ಮಣ್ಣು

ಅಂದು ತರಗತಿಗೆ ಬಂದ ಶಿಕ್ಷಕಿ, ಮಕ್ಕಳ ಸಂಸ್ಕಾರವನ್ನ
ಪರೀಕ್ಷೆ ಮಾಡಬೇಕೆಂದು ಕೊಂಡರು..!!

ತರಗತಿಯಲ್ಲಿದ್ದ ಮಕ್ಕಳಿಗೆ ನಾಳೆ ಬರುವಾಗ *ಸ್ವರ್ಗದಿಂದ ಮಣ್ಣು* ತರಬೇಕೆಂದು ಹೇಳಿದರು.

ಹಲವಾರು ಮಕ್ಕಳಿಗೆ ಸ್ವರ್ಗ ಎಂದರೆ ಏನು ಎಂದೇ ತಿಳಿದಿರಲಿಲ್ಲ,

ಮನೆಗೆ ಹೋದ ಮಕ್ಕಳು ತಮ್ಮ ಪೋಷಕರ ಬಳಿ ಶಿಕ್ಷಕಿ ಹೇಳಿದ ಮಾತು ಹೇಳಿದರು..

ಪೋಷಕರು "ನಿಮ್ಮ ಶಿಕ್ಷಕಿಗೆ ತಲೆ ಕೆಟ್ಟಿದೆ, ಸ್ವರ್ಗದಿಂದ
ಮಣ್ಣು ತರಲು ಸಾಧ್ಯವೇ ಇಲ್ಲಾ..!
ಪುರಾಣಗಳ ಪ್ರಕಾರ ನಾವು ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಬೇಕಾದಾಗೆಲ್ಲ ಹೋಗಿ ಬರಲು ಅದೇನು ಪಕ್ಕದ ಊರೇ" ಎಂದು ಕೋಪದಿಂದ ಉತ್ತರ ನೀಡಿದರು......!!

ಮಕ್ಕಳು ಅಳುತ್ತಾ ಹೇಳಿದರು,
"ನಮ್ಮ ಶಿಕ್ಷಕಿ ಹೇಳಿದ ಕೆಲಸ ಮಾಡದೇ ಹೋದರೆ ನಮಗೆ ಶಿಕ್ಷೆ ನೀಡುವರು, ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುದಿಲ್ಲ" ಎಂದು ಹಠ ಹಿಡಿದರು.....!!

ಪೋಷಕರಿಗೆ ಏನು ಹೇಳಬೇಕೆಂದು ತಿಳಿಯದೆ ಮಕ್ಕಳ ಕಣ್ಣೀರು ಒರೆಸುತ್ತಾ,
"ನಾಳೆ ನಿಮ್ಮ ಜೊತೆ ನಾವೂ ಶಾಲೆಗೆ ಬರುತ್ತೇವೆ, ನಿಮ್ಮ ಶಿಕ್ಷಕಿ ಜೊತೆ ನಾವು ಮಾತನಾಡುತ್ತೇವೆ" ಅಂತ ಹೇಳಿ, ಹೇಗೊ ಸಮಾಧಾನ ಮಾಡಿದರು.....!!

ಎಂದಿನಂತೆ ಮಕ್ಕಳು ಶಾಲೆಗೆ ಬಂದರು, ಮಕ್ಕಳ ಜೊತೆಯಲ್ಲಿ ಪೊಷಕರೂ ಸಹ ಶಾಲೆಗೆ ಬಂದರು
ಶಾಲೆಯಲ್ಲಿ ಈಗ ಗದ್ದಲದ ವಾತಾವರಣ,
ಎಲ್ಲಾ ಪೋಷಕರು ಶಿಕ್ಷಕಿಯನ್ನು ಮನಬಂದಂತೆ ಅವಮಾನಿಸ ತೊಡಗಿದರು.....!

ಆದರೆ ಶಿಕ್ಷಕಿ ಮಾತ್ರ ಹೆದರಲಿಲ್ಲ,
ಎಲ್ಲಾ ಮಕ್ಕಳಿಗೂ ಸಾಲಾಗಿ ನಿಲ್ಲುವಂತೆ ಹೇಳಿದರು.

ನಿಂತ ಮಕ್ಕಳಿಗೆ ಕೇಳಿದರು, ನಿಮಗೆ ಯಾರಿಗೂ ಸ್ವರ್ಗದಿಂದ ಮಣ್ಣು ತರಲು ಸಾಧ್ಯವಾಗಲಿಲ್ಲವೇ..!?

ಪೋಷಕರು ಮತ್ತೆ ಕೋಪಗೊಂಡರು, ಮಕ್ಕಳು ಇಲ್ಲಾ
ಎಂದು ಹೇಳಿದರು....!!

ಅಷ್ಟರಲ್ಲಿ ಆ ಸಾಲಿನಲ್ಲಿದ್ದ ಒಬ್ಬ ಬಾಲಕ ಮುಂದೆ ಬಂದು,
"ಟೀಚರ್ ನಾನು ತಂದಿದ್ದೇನೆ ಸ್ವರ್ಗದಿಂದ ಮಣ್ಣನ್ನು"
ಎಂದು ಕೈಲಿದ್ದ ಚೀಲವನ್ನು ತೋರಿಸಿದನು....!!

ಈ ಹುಡುಗನ ಮಾತು ಕೇಳಿದ ಅಲ್ಲಿದ್ದ ಬೇರೆ ಮಕ್ಕಳ ಪೋಷಕರು ಆಶ್ಚರ್ಯಗೊಂಡು, ಕೋಪದಿಂದ
ಆ ಚೀಲವನ್ನು ಕಿತ್ತುಕೊಂಡು ಆ ಮಣ್ಣನ್ನು ನೋಡಿ ಹೇಳಿದರು,

"ಇದು ಸಾಮಾನ್ಯ ಮಣ್ಣು ಇದು ಎಲ್ಲಿ ಬೇಕಾರೂ ಸಿಗುತ್ತೆ ಇದನ್ನು ಸ್ವರ್ಗದ ಮಣ್ಣು ಎಂದು ಹೇಗೆ ಹೇಳುತ್ತೀಯಾ"...!?

ಎಂದು ಕೋಪದಲ್ಲಿ ಒಂದೆರಡು ಏಟು ಕೂಡ ಹಾಕಿದರು.

ಆಗ ಶಿಕ್ಷಕಿ ಮುಂದೆ ಬಂದು ಆ ಹುಡುಗನನ್ನು ಬಿಡಿಸಿ ಅಳುತಿದ್ದ ಆ ಹುಡುಗನನ್ನು ಕೇಳಿದರು..

"ಈ ಮಣ್ಣನ್ನು ನೀನು ಎಲ್ಲಿಂದ ತಂದೆ, ನೀನು ನಿಜವಾಗಿ ಸ್ವರ್ಗಕ್ಕೆ ಹೋಗಿದ್ದೆಯಾ..!?"

ಹುಡುಗ ಕಣ್ಣು ಒರೆಸುತ್ತಾ ನುಡಿದನು,

"ಟೀಚರ್ ಈ ಮಣ್ಣು ನನ್ನ ತಾಯಿಯ ಕಾಲಿನ ಕೆಳಗಿದ್ದ ಮಣ್ಣು"
ಎಂದನು......!!

ಆ ಹುಡುಗನ ಮಾತು ಕೇಳಿದ ಅಲ್ಲಿದ್ದ ಬೇರೆ ಮಕ್ಕಳ ಪೋಷಕರು ಈಗ ಕಣ್ಣಲ್ಲಿ ನೀರು ತುಂಬಿಕೊಂಡು
ಕ್ಷಮೆ ಯಾಚಿಸಿದರು.....!!

ಮಕ್ಕಳಿಗೆ ಶಿಕ್ಷಣದ ಜೊತೆ
ಸಂಸ್ಕಾರದ ಜ್ಞಾನವನ್ನೂ ಕಲಿಸ ಬೇಕು.

ಇಲ್ಲವಾದರೆ,

*ಬುದ್ದಿ* *ಬೆಳೆಯುತ್ತೇ* *ವಿನಃ*
*ಸಂಸ್ಕಾರ ಬೆಳೆಯಲ್ಲ*...!!

ವಾಟ್ಸಪ್ ಸಂದೇಶದ ಮೂಲಕ ಸಿಕ್ಕಿದ ಒಂದು ಲೇಖನ ನನ್ನ ಮನ ಮುಟ್ಟಿತು.
ಇದನ್ನು ಬರೆದವರು ಯಾರೇ ಆಗಿರಲಿ ಅವರಿಗೆ ನನ್ನದೊಂದು  ನಮಸ್ಕಾರ.