March 3, 2026

ವಾದವನ್ನು ಯಾರೊಂದಿಗೆ ಮಾಡಬೇಕು?

ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಕತ್ತೆಯೊಂದು , ಹುಲಿಗೆ ಹೇಳಿತು: 

"ಹುಲ್ಲಿನ ಬಣ್ಣ ನೀಲಿ".

ಹುಲಿ ಉತ್ತರಿಸಿತು:

"ಇಲ್ಲ, ಹುಲ್ಲು ಹಸಿರು ಬಣ್ಣದ್ದು."

ಚರ್ಚೆಯ ಬಿಸಿ ಯದ್ವಾತದ್ವಾ ಏರಿತು.

ವಾದ ಬಗೆ ಹರಿಯುವ ಸೂಚನೆ ಕಾಣದೆ ಇದ್ದಾಗ ಇಬ್ಬರು ಸೇರಿ ಒಂದು ಮಧ್ಯಸ್ಥಿಕೆಗೆ ಒಪ್ಪಿಸಲು ನಿರ್ಧಾರ ಮಾಡಿದರು.

ಇದಕ್ಕಾಗಿ ಕಾಡಿನ ರಾಜನಾದ ಸಿಂಹದ ಮೊರೆ ಹೋರಟರು.

ಸಿಂಹರಾಜ ತನ್ನ ಸಿಂಹಾಸನದ ಮೇಲೆ ಗಂಭೀರವದನನಾಗಿ ವಿರಾಜಮಾನನಾಗಿದ್ದ. 

ಸಿಂಹವನ್ನು ದೂರದಿಂದ ನೋಡುತ್ತಲೇ ಕತ್ತೆರಾಯ ಕೂಗಲು ಪ್ರಾರಂಭಿಸಿತು:

"ಓ ಮಹಾಪ್ರಭುಗಳೇ, ನೀವೇ ಹೇಳಿ, ಹುಲ್ಲಿನ ಬಣ್ಣ ನೀಲಿ ಎಂಬುದು ನಿಜವಲ್ಲವೇ?".

ತಡಮಾಡದಲೇ ಸಿಂಹ ಉತ್ತರಿಸಿತು:

"ಹೌದು ,ನಿಜ, ಹುಲ್ಲು ನೀಲಿ ಬಣ್ಣದ್ದು."

ಕತ್ತೆಗೆ ಎಲ್ಲಿಲ್ಲದ ಖುಷಿ, ಆತುರದಿಂದ ಮುಂದುವರಿದು ಹೇಳಿತು:

"ಇಲ್ಲಿ ನೋಡಿ ಮಹಾಸ್ವಾಮಿ ಈ ಹುಲಿಯಪ್ಪ ನನ್ನ ಮಾತನ್ನು ಒಪ್ಪುವುದಿಲ್ಲ, ವಿರೋಧಿಸುತ್ತಾನೆ ಮತ್ತು ನನಗೆ ಕಿರಿಕಿರಿ ಉಂಟುಮಾಡುತ್ತಿದ್ದಾನೆ, ದಯವಿಟ್ಟು ಇವನನ್ನು ಶಿಕ್ಷಿಸಿ."

ಆಗ ಸಿಂಹರಾಜನು ಘೋಷಿಸಿದನು:

"ಹುಲಿಗೆ 5 ವರ್ಷಗಳ ಕಾಲ ವಾಗ್ದಂಡನೆಯ (ಮೌನದಿಂದ ಇರಬೇಕು ಎಂಬ) ಶಿಕ್ಷೆ ನೀಡಲಾಗಿದೆ, ಇದನ್ನು ಹುಲಿ ಪಾಲಿಸತಕ್ಕದ್ದು."

ಕತ್ತೆಗೆ ಯುದ್ಧಗೆದ್ದ ಸಂಭ್ರಮ. ಹರ್ಷಚಿತ್ತದಿಂದ  "ಹುಲ್ಲಿನ ಬಣ್ಣ ನೀಲಿ , ಹುಲ್ಲಿನ ಬಣ್ಣ ನೀಲಿ"…ಎನ್ನುತ್ತಾ ಇನ್ನಷ್ಟು ಪ್ರಾಣಿಗಳಿಗೆ ತನ್ನ ಮಾತನ್ನು ಹೇಳುತ್ತಾ, ಜಿಗಿ ಜಿಗಿದು ಕೇಕೆ ಹಾಕುತ್ತಾ ಕತ್ತೆ ಓಡಿ ಹೋಯಿತು.

ಇತ್ತ ಹುಲಿ ತನ್ನ ಶಿಕ್ಷೆಯನ್ನು ಒಪ್ಪಿಕೊಂಡಿತು, 

ಆದರೆ

"ಮಹಾಸ್ವಾಮಿ ನಿಮಗೂ ಗೊತ್ತು , ಹುಲ್ಲಿನ ಬಣ್ಣ ಹಸಿರು. ಅದಾಗ್ಯೂ ನೀವು ನನ್ನನ್ನು ಏಕೆ ಶಿಕ್ಷಿಸಿದ್ದೀರಿ?" 

ಎಂದು ಸಿಂಹವನ್ನು ಅಮಾಯಕ ಹುಲಿ, ಮುಗ್ಧವಾಗಿ ಕೇಳಿತು,

ಸಿಂಹ ಉತ್ತರಿಸಿತು:

"ಹುಲಿಯಪ್ಪಾ ವಾಸ್ತವವಾಗಿ, ಹುಲ್ಲಿನ ಬಣ್ಣ ಹಸಿರು."

ಹುಲಿ ಕೇಳಿತು:

"ಅದೇ ಪ್ರಭುವೇ, ನಾನು ಹೇಳಿದ್ದು ಅದನ್ನೇ. ಹಾಗಾದರೆ ನೀವು ನನ್ನನ್ನು ಏಕೆ ಶಿಕ್ಷಿಸುತ್ತಿದ್ದೀರಿ?". ಹುಲಿ ಸ್ವಲ್ಪ ಗಟ್ಟಿದನಿಯಿಂದಲೇ ಕೇಳಿತು.

ಆಗ,

ಸಿಂಹ ಉತ್ತರಿಸಿತು:

"ಹುಲ್ಲಿನ ಬಣ್ಣ ನೀಲಿಯೋ ಅಥವಾ ಹಸಿರೋ ಎಂಬುದು ತಳಬುಡವಿಲ್ಲದ  ಪ್ರಶ್ನೆ.

ಇಂತಹ ಯಕಃಶ್ಚಿತ್‌ ಪ್ರಶ್ನೆಯನ್ನು ಇಟ್ಟುಕೊಂಡು, ಹೋಗಿ ಹೋಗಿ ಕತ್ತೆಯೊಂದಿಗೆ ಜಗಳವಾಡುತ್ತಾ ಸಮಯ ಹಾಳು ಮಾಡುತ್ತಿದ್ದೀಯಾ, ಅದೂ ಅಲ್ಲದೆ ಆ ವಾದವನ್ನು ನನ್ನ ಬಳಿಗೆ ಎಳೆತಂದು ನನ್ನ ಕ್ಷಣಗಳನ್ನು ಸವೆಸಿದೆಯಲ್ಲಾ, ಇದೆಲ್ಲಾ ನಿನ್ನಂತಹ ಧೀರ ಬುದ್ಧಿ ಜೀವಿಗಳಿಗೆ ತಕ್ಕುದಾದುದಲ್ಲ. ಅದಕ್ಕೇ ಈ ಶಿಕ್ಷೆ, ಇನ್ನೊಮ್ಮೆ ಇಂತಹ ಅಚಾತುರ್ಯ ಘಟಿಸಕೂಡದು, ಎಚ್ಚರಿಕೆ!”. ಎಂದು ಸಿಂಹ ಘರ್ಜಿಸಿತು.

ಕಟುಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ಇರದ ಮೂರ್ಖರೊಂದಿಗೆ ವಾದಮಾಡುವುದು ಅತ್ಯಂತ ಕೆಟ್ಟದ್ದು. ಅದರಿಂದ ಅಮೂಲ್ಯ ಸಮಯ ವ್ಯರ್ಥವಾಗುವುದು.

ಆ ಮೂರ್ಖರಿಗೆ ಸತ್ಯಕ್ಕಿಂತ ಅವರ ನಂಬಿಕೆ ಮತ್ತು ಭ್ರಮೆಗಳ ಗೆಲುವುಗಳ ಬಗ್ಗೆ ಮಾತ್ರ ಒಲವಿರುತ್ತದೆ. 

ಹಾಗಾಗಿ

ಅರ್ಥವಿಲ್ಲದ ವಾದಗಳಿಗಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ…

ನೀವು ಎಷ್ಟೇ ದಾಖಲೆ ಮತ್ತು ಪುರಾವೆಗಳನ್ನು ಪ್ರಸ್ತುತಪಡಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ, ಅವರಿಗೆ ತಿಳಿ ಹೇಳುವ ದುಸ್ಸಾಹಸಕ್ಕೆ ಕೈ ಹಾಕದಿರಿ.

ಅಹಂಕಾರ, ದ್ವೇಷ ಮತ್ತು ಅಸಮಾಧಾನಗಳಿಂದ ಕುರುಡಾಗಿರುವ ಮೂರ್ಖ ಜನತೆ, ಸರಿಯಾಗಲೊಲ್ಲರು.

ತಮ್ಮದೇ ತಪ್ಪಿದ್ದರು ತಾವೇ ಸರಿ ಎಂದು ಬೀಗುವವರ ಮುಂದೆ ನಿಮ್ಮ ಪಾಂಡಿತ್ಯದ ಪ್ರದರ್ಶನ ಅನವಶ್ಯಕ.

"ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಅದುವೇ ಯಶಸ್ಸಿನ ಗುಟ್ಟ. 

ನಿಮ್ಮ ಶಾಂತಿ ಮತ್ತು ನೆಮ್ಮದಿಗಳು ಅತ್ಯಂತ ಮೌಲ್ಯಯುತವಾದವುಗಳು, ಅವುಗಳಿಗೆ ಧಕ್ಕೆಯಾಗುವುದು ಬೇಡ. ‌

No comments:

Post a Comment

If you have any doubts. please let me know...