March 30, 2026

ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ, ತಪ್ಪೇ?

"ಗುರು ಬ್ರಹ್ಮ ಗುರು ವಿಷ್ಣು:
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ"
 
ನಾನು ಒಮ್ಮೆ ಚಾಲನಾ ಪರವಾನಗಿ ಪಡೆಯಲು ಹೋಗಿದ್ದೆ. ಅಲ್ಲಿದ್ದ ಅಧಿಕಾರಿ ಒಂದೆರಡು ಚಾಲನಾ ನಿಯಮಗಳ ಪ್ರಶ್ನೆಗಳನ್ನು ಕೇಳಿ ನಂತರ, "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ?" ಎಂದು ಕೇಳಿದರು. ಆಗ ನನಗೆ ನಿತ್ಯ ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮೇಲಿನ ಶ್ಲೋಕ ನೆನಪಾಗಿ, "ಗುರು ದೊಡ್ಡವನು" ಎಂದೆನು. ಆಗ ಅಧಿಕಾರಿಯು "ಗುಡ್, ಪರೀಕ್ಷೆ ಪಾಸ್ ಆದೆ, ನಡಿ" ಎಂದು ಪರವಾನಗಿ ದಯಪಾಲಿಸಿದರು. ಹೇಗೂ ಸೀಲು ಒತ್ತಿ ಸಹಿ ಮಾಡಿ ಆಗಿದೆಯೆಲ್ಲ ಎಂದು, "ತಾವು ಕೇಳಿದ ಪ್ರಶ್ನೆ ಇಲ್ಲಿ ಅವಶ್ಯವೇ" ಎಂದು ಕೇಳಿದೆ. ಅದಕ್ಕೆ ಆ ಅಧಿಕಾರಿ, "ಇದು ಭಾರತದ ಪ್ರತಿಯೊಂದು ಮಜಲಿನಲ್ಲಿಯೂ ಕೇಳಬೇಕಾದ ಪ್ರಶ್ನೆ, ನಡಿ" ಎಂದರು.
 
ಭಾರತದ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತ ಮಿಗಿಲಾದ ಸ್ಥಾನಮಾನವನ್ನು ಕೊಡಲಾಗಿದೆ. ಈ ಮಹತ್ವವನ್ನು ಹಿಂದೂ ಪ್ರಬೇಧದ ಎಲ್ಲಾ ಮತಧರ್ಮಗಳೂ ಪಾಲಿಸುತ್ತವೆ. ಪುರಂದರದಾಸರು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಪದ ಹಾಡಿದ್ದಾರೆ.
 
ಇನ್ನು ಇದೇ ರೀತಿ ವೀರಶೈವ ಲಿಂಗವಂತರಲ್ಲಿ ಹಿಂದೂ ಪ್ರಬೇಧದ ಇತರೆಲ್ಲಾ ಮತಪಂಥಗಳಿಗಿಂತ ಗುರುವಿಗೆ ಅತ್ಯಂತ ಹಿರಿಯ ಸ್ಥಾನವನ್ನು ಕೊಡಲಾಗಿದೆ. 
 
ಶೂನ್ಯಪೀಠದ ಶೂನ್ಯಾಧ್ಯಕ್ಷ ಅಲ್ಲಮನು, 
"ಶ್ರೀಗುರುವೆ ಎನಗೆ ಕಾಯವು, ಶ್ರೀಗುರುವೆ ಎನಗೆ ಪ್ರಾಣವು,
ಶ್ರೀಗುರುವೆ ಎನಗೆ ಇಹವು, ಶ್ರೀಗುರುವೆ ಎನಗೆ ಪರವು,
ಶ್ರೀಗುರುವೆ ಎನಗೆ ಗತಿಯು, ಶ್ರೀಗುರುವೆ ಎನಗೆ ಮತಿಯು,
ಶ್ರೀಗುರುಪಾದವೆ ಎನಗೆ ಘನತರ ಮುಕ್ತಿಗೆ ಕಾರಣವು.
ಗುಹೇಶ್ವರ ಗುಹೇಶ್ವರಾ, ನಿಮ್ಮಾಣೆ ಇದು ಸತ್ಯ." ಎಂದಿದ್ದಾನೆ.
 
ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನು,
 
"ಪರುಷವಿದ್ದುದ ಕಂಡು ಪರಿಣಾಮಬಡುವರು,
ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು.
ಅರಿದರಿದು ಗುರುಶಿಷ್ಯಸಂಬಂಧವು,
ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು.
ಕುರುಹು ಘನವೋ? ಲಿಂಗ ಘನವೋ? ಅರಿವುಳ್ಳವರು ಹೇಳಿರೆ.
ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ
ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ
ಅವನಂದೇ ದೂರ." 
 
ಎಂದು ಲಿಂಗಕ್ಕಿಂತ ಗುರುವೇ ಪ್ರಮುಖ ಎಂದಿದ್ದಾನೆ.
 
ಭಕ್ತಿ ಭಂಡಾರಿ ಬಸವಣ್ಣನು,
 
"ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು." 
 
ಎಂದು ಗುರುಪಥಕ್ಕಿಂತ ಮಿಗಿಲಾದ ಯಾವ ಪಥವೂ ಸಲ್ಲದು ಎಂದಿದ್ದಾನೆ.
 
ಇನ್ನು ಆಗಮಗಳಲ್ಲಿ, "ಮಹಾಲಿಂಗವೇ ಗುರುವಿನ ಅನುಗ್ರಹದಿಂದ ಕರಸ್ಥಲಕ್ಕೆ ಬಂದು ಇಷ್ಟಲಿಂಗವಾಗಿದೆ, ಪ್ರಾಣದಲ್ಲಿ ಪ್ರಾಣಲಿಂಗವೆನಿಸಿದೆ, ಭಾವದಲ್ಲಿ ಭಾವಲಿಂಗವೆನಿಸಿದೆ. ಶ್ರೀಗುರುವು ಜೀವನಿಗೆ ದೀಕ್ಷೆ ನೀಡುವಾಗ ಅವನಲ್ಲಿ ಕಂಡುಬರುವ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಭೇದಗಳನ್ನು ವಿಶ್ಲೇಷಿಸಿ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ಕಲ್ಪಿಸಿ ಅವುಗಳಲ್ಲಿ ಕ್ರಮವಾಗಿ ಈ ಲಿಂಗಗಳನ್ನು ಸ್ಥಾಪಿಸುವನು. ಕಾರಣ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ ಮತ್ತು ಭಾವಲಿಂಗದಲ್ಲಿ ಭಾವಯೋಗವನ್ನು ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗವೆಂಬುದು ಶೈವಾಗಮದ ಸಿದ್ಧಾಂತ. ಅದೇ ಶಿವಾರಾಧನೆಯ ಕ್ರಮ ಎನ್ನಲಾಗಿದೆ. 
 
ಹೀಗೆ ಹಿಂದೂ ಪ್ರಭೇದಗಳಲ್ಲಿ, ವಚನಗಳಿಗೆ ಮೂಲವಾದ ಆಗಮಗಳಲ್ಲಿ ಮತ್ತು ಸಿದ್ಧಾಂತ ಶಿಖಾಮಣಿಯಲ್ಲಿ ಸಹ ಗುರುವನ್ನು ಶಿವನ ಸಾಕ್ಷಾತ್ ಸ್ವರೂಪವೆನ್ನುತ್ತ ಜ್ಞಾನದಾಯಕ ಮತ್ತು ಲಿಂಗ-ಜಂಗಮದೊಂದಿಗೆ ಆತ್ಮನ ಉದ್ಧಾರಕನೆಂದು ಬಣ್ಣಿಸಲಾಗಿದೆ.  ಗುರು, ಲಿಂಗ, ಜಂಗಮ ಎಂಬ ತ್ರಿವಿಧ ಸಂಪತ್ತಿನಲ್ಲಿ ಗುರುವೇ ಪ್ರಥಮ ಮತ್ತು ಶ್ರೇಷ್ಠವೆಂದು ಪ್ರತಿಪಾದಿಸಲಾಗಿದೆ.
 
ಹಾಗಾಗಿಯೇ ಲಿಂಗವಂತ ವೀರಶೈವರಲ್ಲಿ ಸಕಲ ಅರಿವು, ಕಲಿಕೆ (ಜ್ಞಾನ)ಯಿಂದ ಬಯಲು (ಮುಕ್ತಿ)ಗೆ ಗುರುಕಾರುಣ್ಯವೇ ಅಂತಿಮವಾಗಿದೆ. ಈ ಕಾರಣವಾಗಿಯೇ ಲಿಂಗೋದ್ಭವ (ಗರ್ಭದಲ್ಲಿರುವಾಗಲೇ ಕೊಡುವ ಲಿಂಗದೀಕ್ಷೆ)ದಿಂದ ಲಿಂಗೈಕ್ಯರಾಗಿ ಅಂತಿಮ ಸಂಸ್ಕಾರ ಪಡೆಯುವಾಗಲೂ ಗುರುವೇ ಪರಮವಾಗಿದ್ದಾನೆ. ವೀರಶೈವ ಲಿಂಗವಂತ ಮತದ ಎಲ್ಲಾ ಧರ್ಮಗ್ರಂಥಗಳ ಮುಖೇನ ಸಹ "ಗುರುವೇ ಪರಮೋಚ್ಚ" ಎಂದು ಹೇಳಲಾಗಿದೆ.
 
ಹೀಗಿರುವಾಗ ಅಖಂಡ ವೀರಶೈವ ಮತವನ್ನು ಅವಹೇಳಿಸುತ್ತಾ, ಕೆಲವು ಲಿಂಗಾಹತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ಈ ಚಿತ್ರ! ಇಲ್ಲಿ ವೀರಶೈವ ಧರ್ಮಗುರುಗಳಾದ ರಂಭಾಪುರಿ ಜಗದ್ಗುರುಗಳ ಪಾದಪೂಜೆಯ ಚಿತ್ರವನ್ನು ತಿರುಚಿ "ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ" ಎಂದು ಅವಹೇಳಿಸಿ ಲಕ್ಷಾಂತರ ಭಕ್ತರ ಭಾವನೆಗಳನ್ನು ಕೆಣಕಲಾಗಿದೆ. ಪಾದಪೂಜೆಯ ಒಂದು ಕ್ರಮವಾಗಿ ಸ್ವಾಮಿಗಳ ಕಾಲಿಗೆ ಪುಷ್ಪಾರ್ಚನೆ ಮಾಡುತ್ತಿರುವ ಚಿತ್ರವನ್ನು ಹಿಡಿದು ವಿಚಿತ್ರ ವಿಕಾರವಾಗಿ ಸಮಾಜದಲ್ಲಿ ಧಾರ್ಮಿಕ ದ್ವೇಷ ಹರಡುತ್ತಿವೆ. 
 
ಹೀಗೆ ಅವಹೇಳಿಸುವವರಿಗಾಗಿಯೇ ಬಸವಣ್ಣನು,
 
“ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಭಿಮಾನವೆಂಬ
ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ”
ಎಂದಿದ್ದಾನೆ.
 
ಅಂತೆಯೇ ಗುರುಸ್ವರೂಪಿ ಜಂಗಮನ ಕುರಿತು,
 
“ಗುರು ಮುನಿದಡೆ ಒಂದು ದಿನ ತಾಳುವೆ,
ಲಿಂಗ ಮುನಿದಡೆ ದಿನವರೆ ತಾಳುವೆ.
ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ”
 
ಎಂದೂ ಬಸವಣ್ಣನು ಹೇಳಿದ್ದಾನೆ.
 
ಮಡಿವಾಳ ಮಾಚಿದೇವನು ಗುರುವಿನ ಪ್ರಾಮುಖ್ಯತೆಯನ್ನು ಹೀಗೆ ವರ್ಣಿಸಿದ್ದಾನೆ:

"ಅರಿದಲ್ಲದೆ ಗುರುವ ಕಾಣಬಾರದು.
ಅರಿದಲ್ಲದೆ ಲಿಂಗವ ಕಾಣಬಾರದು.
ಅರಿದಲ್ಲದೆ ಜಂಗಮವ ಕಾಣಬಾರದು.
ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ
ಎನಗೆ ಸ್ವಾಯತವಾಯಿತ್ತಾಗಿ,
ಭಿನ್ನವಿಲ್ಲ ಕಾಣಾ ಕಲಿದೇವರದೇವ." 

ಹೀಗೆ ಈ ಲಿಂಗಾಹತಿಗಳೊಪ್ಪದ ಆಗಮ, ಸಿದ್ಧಾಂತ ಶಿಖಾಮಣಿಗಳ ಹೊರತಾಗಿಯೂ ವಚನಸಾಹಿತ್ಯದಲ್ಲಿಯೇ ಗುರುವಿನ ಮಹತ್ವ, ಮತ್ತು ಲಿಂಗಕ್ಕಿಂತ ಗುರುವೇ ಮುಖ್ಯ ಎಂಬ ಧಾರ್ಮಿಕ ನೀತಿಯೇ ವಿಜೃಂಬಿಸಿದೆ. ಇಷ್ಟೆಲ್ಲಾ ಇದ್ದೂ ಅರಿವಿಲ್ಲದ ಅರಿವುಗೇಡಿಗಳು ಅರಿತಿಹೆವೆಂದೆಡೆ ಇವರಿಗೇನು ಲಿಂಗ ಸ್ವಾಯತವಾಗುವುದು? ಹಾಗಾಗಿಯೇ ಇವರು ಲಿಂಗಾಹತರು! ಇವರೆಲ್ಲರೂ ಬಸವಣ್ಣ, ಲಿಂಗಾಯತ, ಲಿಂಗದ ಬಗ್ಗೆ ಮಾತನಾಡಲು ಅನರ್ಹರು.

ಇನ್ನು ಅಸಲಿಗೆ ಈ ಲಿಂಗಾಹತಿಗಳು ಆರೋಪಿಸುವಂತೆ ಲಿಂಗದ ಮೇಲೆ ಕಾಲನ್ನೇ ಇಟ್ಟಿದ್ದರೂ ಅದು ವೀರಶೈವ ಲಿಂಗವಂತ ಧರ್ಮಾನುಷ್ಠಾನದ ಭಾಗವೇ ಆಗಿದೆ! ಇದನ್ನು ಶೂನ್ಯಪೀಠವನ್ನು ಏರಿದ್ದ ಅಲ್ಲಮ, ಚೆನ್ನಬಸವಣ್ಣ , ಸಿದ್ಧರಾಮೇಶ್ವರರಾದಿಯಾಗಿ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಹೀಗೆಯೇ ಮಾಡಬೇಕೆಂದು ಹೇಳಿದ್ದಾರೆ. ಸಾಕ್ಷ್ಯವಾಗಿ ಚೆನ್ನಬಸವಣ್ಣನ ವಚನ ಹೀಗಿದೆ:

"ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ
ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ,
ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು
ಅಂಗುಲಗಳಲ್ಲಿ
ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ
ಮೂರು ವೇಳೆ ಸ್ಪರ್ಶನವ ಮಾಡಿ,
ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು
ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು.
ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು.
ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.
ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ
ಸ್ಪರ್ಶನೋದಕವೆನಿಸುವುದು.
ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು.
ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ
ಅಪ್ಯಾಯನೋದಕವೆನಿಸುವುದು.
ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.
ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು
ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು.
ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು
ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_
ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು
ಅರಿದು ಆಚರಿಸುವುದು.
ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ."

ಅದೇ ರೀತಿ ಗುರುಸಿದ್ಧದೇವರ ವಚನ ಹೀಗಿದೆ:

"ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು
ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ
ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ,
ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ
ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ
ಜಂಗಮದೀಕ್ಷಾಪಾದೋದಕವ ತುಂಬಿ,
ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ,
ನವಧಾನ್ಯ, ನವಸೂತ್ರ, ವಿಭೂತಿವೀಳ್ಯೆ,
ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ
ಷೋಡಶೋಪಚಾರಂಗಳಿಂದೊಪ್ಪುವ
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ
ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ
ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ,
ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ,
ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ
ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ,
ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ
ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ,
ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ
ಗಣಸಾಕ್ಷಿಯಾಗಿ ಶ್ರೀ ಗುರುದೇವನು
ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ,
"ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ,"
ಆ ಪಂಚಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ
ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ
ಆ ಕಲಶಂಗಳೈದರಲ್ಲಿ ತೆಗೆದುಕೊಂಡು
ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ
ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ,
ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ
ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು,
ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ
ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ
ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ."

ಬಸವಾದಿ ಶರಣರೇ "ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ..." ಎಂದಿರುವಾಗ ಈ ಲಿಂಗಾಹತಿಗಳು ಯಾವ ಬಸವ, ಯಾವ ಶರಣ, ಯಾವ ವಚನ, ಯಾವ ಲಿಂಗಾಯತದ ಬಗ್ಗೆ ಮಾತನಾಡುತ್ತಿದ್ದಾರೆ?!?!

ಅಂದು ನನಗೆ "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ" ಎಂದು ಕೇಳಿ ಚಾಲನಾ ಪರವಾನಗಿ ನೀಡಿದಂತೆ ಇಂದು ಗುರು, ಲಿಂಗ, ಜಂಗಮ, ಬಸವಣ್ಣ, ವಚನ, ಲಿಂಗಾಯತದ ಬಗ್ಗೆ ಮಾತನಾಡುವ ಅರ್ಹತಾ ಪತ್ರ ಅತ್ಯವಶ್ಯವಾಗಿದೆ. ಏನೊಂದರಿಯದೆ ಎಂತೆಂದರಿಯದೆ ಕೇವಲ "ಬಸವಪರ ಸಂಘಟನೆಗಳು"ಎಂದರೆ ಅವು ಭಕ್ತಿ ಭಂಡಾರಿ ಬಸವಣ್ಣನ ಹೆಸರಿನ ಸಂಘಟನೆಗಳಲ್ಲ! ಅವು ಕೇವಲ ಬೀಜವಿರದ ತುಡುಗು ದನಗಳ ಸಂಘಗಳು. ಬಸವ ದಟ್ ಬಸವ ದಿಸ್ ಎಂದು ಎಲ್ಲೆಲ್ಲಿಯೂ ಬುಲ್ ಶಿಟ್ ಹಾಕಿ ಸಮಾಜವನ್ನು ಕಲುಷಿತಗೊಳಿಸುತ್ತಿರುವ ಈ ದನಗಳ ಬಗ್ಗೆ ಸಮಾಜ ಎಚ್ಚರಗೊಂಡು ಪಾಠ ಕಲಿಸುವ ತುರ್ತು ಇಂದು ಅಖಂಡ ವೀರಶೈವ ಲಿಂಗಾಯತ ಸಮಾಜದ ಮುಂದಿದೆ.
 
~ ರವಿ ಹಂಜ್.

March 26, 2026

ಸದಯಂ ಹೃದಯಂ ಯಸ್ಯ

ಸದಯಂ ಹೃದಯಂ ಯಸ್ಯ" ಎಂಬುದು ನೀತಿಶಾಸ್ತ್ರದ ಪ್ರಸಿದ್ಧ ಶ್ಲೋಕದ ಭಾಗವಾಗಿದ್ದು, ದಯಾಪರತೆ, ಸತ್ಯ ಮತ್ತು ಪರಹಿತ ಚಿಂತನೆಯ ಮಹತ್ವವನ್ನು ಸಾರುತ್ತದೆ. ಇದರ ಪೂರ್ಣ ರೂಪ:

"ಸದಯಂ ಹೃದಯಂ ಯಸ್ಯ, ಭಾಷಿತಂ ಸತ್ಯಭೂಷಿತಂ | ಕಾಯಃ ಪರಹಿತೇ ಯಸ್ಯ, ಕಲಿಃ ಕುರ್ವೀತ ತಸ್ಯ ಕಿಮ್ ||"

ಯಾರ ಹೃದಯದಲ್ಲಿ ದಯೆ, ನಾಲಿಗೆಯಲ್ಲಿ ಸತ್ಯ ಮತ್ತು ದೇಹವು ಇತರರ ಸೇವೆಗೆ ಮೀಸಲಾಗಿರುತ್ತದೆಯೋ, ಅಂಥವನನ್ನು ಕಲಿಯುಗವು (ಕಲಿಪುರುಷ) ಬಾಧಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥ.

ಶ್ಲೋಕದ ವಿವರಣೆ:
ಸದಯಂ ಹೃದಯಂ ಯಸ್ಯ: ಯಾರ ಹೃದಯದಲ್ಲಿ ದಯೆ/ಕರುಣೆ ತುಂಬಿದೆಯೋ.

ಭಾಷಿತಂ ಸತ್ಯಭೂಷಿತಂ: ಯಾರ ಮಾತು ಸತ್ಯದಿಂದ ಕೂಡಿರುತ್ತದೆಯೋ (ಸತ್ಯವೇ ಆಭರಣವಾಗಿದೆಯೋ).

ಕಾಯಃ ಪರಹಿತೇ ಯಸ್ಯ: ಯಾರ ಶರೀರವು ಇತರರ ಹಿತಕ್ಕಾಗಿ (ಸೇವೆಗಾಗಿ) ಮೀಸಲಾಗಿದೆಯೋ.

ಕಲಿಃ ಕುರ್ವೀತ ತಸ್ಯ ಕಿಮ್: ಅಂಥವನಿಗೆ ಕಲಿಪುರುಷನು (ದುಷ್ಟ ಶಕ್ತಿ/ಕಲಿಯುಗದ ದೋಷಗಳು) ಏನು ತಾನೇ ಮಾಡಬಲ್ಲನು?.

ಸಾರಾಂಶವೆಂದರೆ, ಯಾರ ಹೃದಯವು ದಯೆಯಿಂದ ಕೂಡಿರುವುದೋ,ಯಾರ ಮಾತು ಸತ್ಯದಿಂದ ಕೂಡಿರುವುದೋ, ಯಾರ ದೇಹವು ಇತರರಿಗಾಗಿ, ಇತರರ ಒಳಿತಿಗಾಗಿ ಇರುವುದೋ ಅವರನ್ನು ಹೃದಯವಂತರು, ದೇವಮಾನವರು ಎನ್ನಬಹುದು.

ಹೃದಯಹೀನರಾಗದೆ, ಹೃದಯವಂತರಾಗೋಣ, ದೀರ್ಘಾಯುಷ್ಯವಂತರಾಗಿ, ಮಾನವತೆಯ ಪ್ರತಿರೂಪವಾಗಿ ಬಾಳಿ ಬದುಕೋಣ.

ಒಂಟಿತನ

ಓರ್ವ ಇಂದಿನ ಭಾನುವಾರದ ಪತ್ರಿಕೆಯಲ್ಲಿ ಮುದ್ರಣ ಜಾಹೀರಾತನ್ನು ಓದಿದ..‌
ಫ್ಲಾಟ್... ಕೇವಲ 30 ಲಕ್ಷಕ್ಕೆ.
ಐಷಾರಾಮಿ ಪ್ರದೇಶ, 
ದಾರಿಯಲ್ಲಿ...
 ಶಾಪಿಂಗ್ ಮಾಲ್‌ಗಳು ಥಿಯೇಟರ್‌ಗಳು..  ಆ ಯುವಕ ಜಾಹೀರಾತನ್ನು ಓದಿದನು. 
ಅವನು ಫ್ಲಾಟ್ ನೋಡಲು ತನ್ನ ಹೆಂಡತಿಯೊಂದಿಗೆ ಆ ಪೊಶ್ ಪ್ರದೇಶದ ಸೊಸೈಟಿಗೆ ಪ್ರವೇಶಿಸಿದನು. ಇಡೀ ಆ ಪ್ಲಾಟ್ ಸೊಸೈಟಿ, ಆ ಸ್ಥಳ, ಅಲ್ಲಿನ ನಿವಾಸಿಗಳು ಜನರು ... ಎಲ್ಲವನ್ನೂ ಎಚ್ಚರಿಕೆಯಿಂದ ನೋಡಿದರು ... ಪ್ರವೇಶಿಸುವಿಕೆ ಕೂಡ ಚೆನ್ನಾಗಿತ್ತು ... ತುಂಬಾ ಸುಸಜ್ಜಿತ ಮತ್ತು ಮಾಡರ್ನ್  ಸಮಾಜದಲ್ಲಿ ಸುಂದರ  ಫ್ಲಾಟ್ ..

ಮೂರನೇ ಮಹಡಿಯಲ್ಲಿ ಫ್ಲಾಟ್ ಸಂಖ್ಯೆ 303 ರ ಕಾಲಿಂಗ್ ಬೆಲ್ ರಿಂಗಣಿಸಿತು. ಅಜ್ಜಿಯೊಬ್ಬರು ಫ್ಲಾಟ್‌ನ ಬಾಗಿಲು ತೆರೆದು ಇಡೀ ಫ್ಲಾಟ್ ಅನ್ನು ತೋರಿಸಿದರು .. 
ಗ್ಯಾಲರಿ... ಅಡುಗೆ ಮನೆ... 🍒 ಫರ್ನಿಚರ್... ಪ್ಯಾಸೇಜ್... ಎಲ್ಲವೂ ಗಾಜಿನಂತೆ ಸ್ಪಷ್ಟ.
  
ಒಳಗಿನ ಕೋಣೆಯಲ್ಲಿ ವಯಸ್ಸಾದ  ಮುಪ್ಪಿನ ಬಿಳಿ ಕೂದಲಿನ ಓರ್ವರು  ವಿಕಲಚೇತನ ಮಹಿಳೆ ವೀಲ್ ಚೇರ್ ಮೇಲೆ ಕುಳಿತಿದ್ದರು...

"ನಮಸ್ತೆ, ಈ ಫ್ಲಾಟ್ ಖರೀದಿ ಮಾಡುವ ಅಂತಾ ಬಂದಿದ್ದೇವೆ ಇದರ ಬೆಲೆ ಎಷ್ಟು!?" ಎಂದು ಯುವಕ ಕೇಳಿದೆ.
"ಮೊದಲು ನನ್ನನ್ನು ಅಜ್ಜಿ ಎಂದು ಕರೆಯಬೇಡಿ ನಾನು ಅಮೃತ ಶರ್ಮಾ. ಪತ್ರಿಕೆಯಲ್ಲಿ ಬೆಲೆ ಬರೆಯಲಾಗಿದೆ...ಆದರೆ  ಬೇಕಾದರೆ ಇನ್ನೂ ಎರಡು ಮೂರು ಲಕ್ಷ ಕಡಿಮೆ ಮಾಡಿ ಕೊಡುವೆ ನೋಡಿ.. ಕುಳಿತುಕೊಳ್ಳಿ..‌"
ಆಗ ಆ ಮಹಿಳೆ ಕೂಗುತ್ತಾ ಹೇಳಿದಳು, ಚಹಾ ತಂದ ಈ ಹುಡುಗಿಗೆ  ಹೇಳಿದಳು ಇವರಿಗೆ  ಚಾಕಲೇಟ್ ತಂದು ಕೊಡು. "ಶಾಂತಿಯಿಂದ ಕುಳಿತುಕೊಳ್ಳಿ.. ಆಗ ಇದೆಲ್ಲ ನಡೆಯುತ್ತದೆ.." ಕ್ರಮೇಣ ಮಾತುಕತೆ ಸಾಗಿತು... ಉದ್ಯೋಗ... ಫ್ಲಾಟ್ ಇತಿಹಾಸ... ಕುಟುಂಬದ ವಿಷಯಗಳು, ಬದುಕಿನ ಬವಣೆಗಳು ಹವ್ಯಾಸಗಳು, ಜೀವನದ ರಹಸ್ಯಗಳು... ಯೌವನದ ಹವ್ಯಾಸಗಳು..  ಚರ್ಚೆ ನಂತರ ಕೆಲವು ಹಳೆಯ ಆಲ್ಬಂಗಳತ್ತ ಸಾಗಿತು...

ಯುವಕನಿಗೆ ತಾವು ಬಂದು ಬಹಳ‌ ಸಮಯ ಆಯಿತು ಎಂದು ಅನಿಸಿತು. ಎರಡು ಗಂಟೆಗೂ ಹೆಚ್ಚು ಕಾಲ ಅವರು ಮಾತನಾಡಿದರು.. ಯುವಕ ಮತ್ತು ಅವನ ಹೆಂಡತಿ ಎಚ್ಚರಗೊಂಡರು.
ಆಯಿತು, ಬರುತ್ತೇವೆ ಎಂದು ಹೇಳಿ ಹಿಂದೆ ತಿರುಗಿ ಬಂದರು. ಅಂತಹ ಸುಂದರವಾದ ಫ್ಲಾಟ್, ಉತ್ತಮ ಸ್ಥಳ, ಬೆಲೆ ಕೂಡ ತುಂಬಾ ಅಗ್ಗವಾಗಿದೆ ಆದರೂ ಯಾಕೆ ಇದು ಇನ್ನೂ ಮಾರಾಟವಾಗಿಲ್ಲ!? ಯುವ ದಂಪತಿಗಳು ತಮ್ಮಲ್ಲಿಯೇ ಪ್ರಶ್ನಿಸಿಕೊಂಡರು.
ನಾನು ಭದ್ರತಾ ಸಿಬ್ಬಂದಿಯನ್ನು ಕೇಳುತ್ತೇನೆ .. ಎಂದ ಆತ.
ಸೆಕ್ಯೂರಿಟಿ ಗಾರ್ಡ್ ಎಲೆ ಅಡಿಕೆ ಜೊತೆ ತಂಬಾಕು ಉಜ್ಜುತ್ತಾ ಹೇಳಿದ...
ಆ ಅಜ್ಜಿ ತನ್ನ ಸಮಯ ಕಳೆಯಲು ಈ ರೀತಿ ಮಾಡುತ್ತಾರೆ. ಯಾರೂ ಬರದಿದ್ದರೆ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಜನರನ್ನು ಆಹ್ವಾನಿಸುತ್ತಾಳೆ...ಕೆಲವೊಮ್ಮೆ ಫ್ರಿಡ್ಜ್ ಮಾರುತ್ತಾಳೆ... ಕೆಲವೊಮ್ಮೆ ಅಲ್ಮೆರಾ ಮಾರುತ್ತಾಳೆ... ಕೆಲವೊಮ್ಮೆ ಡೈನಿಂಗ್ ಟೇಬಲ್.. ಹೀಗೆ ಜಾಹಿರಾತು ಕೊಟ್ಟು ಬಂದವರ ಬಳಿ ಸುಮ್ಮನೆ ಟೈಮ್ ಪಾಸ್ ಮಾಡುತ್ತಾಳೆ... ಎಲ್ಲರಿಗೂ ಒಳ್ಳೆಯ ಊಟವನ್ನು ಉಣಬಡಿಸುತ್ತಾಳೆ. .. ನಿಮಗೂ ಆಕೆ  ಆ ದುಬಾರಿ ವಿದೇಶಿ ಚಾಕಲೇಟ್ ತಿನ್ನಿಸಿರಬೇಕು.... ಅವಳ ಮಗ ವಿದೇಶದಿಂದ ಕಳುಹಿಸುತ್ತಾನೆ. ಆತ ವಿದೇಶದಲ್ಲಿ ಯಾವುದೋ ದೊಡ್ಡ ಕಂಪನಿಯಲ್ಲಿ ದೊಡ್ಡ ನೌಕರಿ ಇದೆ. ಕೋಟಿ, ಕೋಟಿ ಸಂಬಳ. ಇಲ್ಲಿಗೆ ಬರುವುದಿಲ್ಲ. ಮನೆಗೆ ಯಾರೂ ಬರುವುದಿಲ್ಲ ಅಜ್ಜಿಗೆ ಬೇಸರ!! ಒಂಟಿ ಜೀವನ, ಮಾತನಾಡಲು ಹರಟೆ ಹೊಡೆಯುತ್ತಾ ಕೂರಲು ತಮ್ಮವರು ಯಾರೂ ಇಲ್ಲ.. 
ಆಗಾಗ ಸುಮ್ಮನೆ ಈ ರೀತಿ ಜಾಹೀರಾತು ಹಾಕಿ ಮನೆ ಖರೀದಿಗೆಂದು ಬಂದವರ ಜೊತೆ ಹರಟೆ ಹೊಡೆಯುತ್ತಾ ಕೂರುತ್ತಾರೆ.. ಪುಷ್ಕಳ ಭೋಜನ ವ್ಯವಸ್ಥೆ ಮಾಡಿಸಿ ಕಳುಹಿಸುತ್ತಾರೆ ಅಷ್ಟೇ.. ನೀವು ಇದನ್ನು *ಟೈಂಪಾಸ್*⏰ ಎಂದು ಕರೆಯಿರಿ ಅಥವಾ... *ಒಂಟಿತನಕ್ಕೆ ಮದ್ದು*...!!🧮

> *ಹೇಳದೇ ಉಳಿದ ಮಾತು:*
🔽
> ಈಗ ಒಬ್ಬ ಮನುಷ್ಯನಿಗೆ ಎಲ್ಲಾ *ಸೌಲಭ್ಯಗಳಿವೆ*... ಆದರೆ ಅವನ ಜೊತೆ ಸ್ವಲ್ಪ ಹೊತ್ತು ಕೂರಲು ಯಾರೂ ಇರುವುದಿಲ್ಲ.. ಇದು ಶ್ರೀಮಂತಿಕೆಯು ಸೃಷ್ಟಿಸಿದ ಬಡತನ !! 😪

ಲೈಫ್ ಜೊತೆ ಒಂದು ಸೆಲ್ಫಿ 🤳

ನಮಸ್ಕಾರದಿಂದ ಆಯುಷ್ಯವೂ ವೃದ್ಧಿಯಾಗುತ್ತದೆ

ಮಾರ್ಕಂಡೇಯ ಮುನಿಗಳು ದೀರ್ಘಾಯುಷಿಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.

ಮೃಕಂಡು ಮನಿಗಳ ಮಗನಿಗೆ  9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."

*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| 
ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥

ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.

ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.

ಕಾಲ ಕಳೆಯಿತು.....

ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.

ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.

ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.

ಪ್ರದಕ್ಷಿಣ ನಮಸ್ಕಾರ

ಮಂದಿರಗಳಲ್ಲಿ,ಅಗ್ನಿಗೆ,ಅಶ್ವತ್ಥವೃಕ್ಷಕ್ಕೆ,ತುಳಸಿಗೆ ಸುತ್ತುವರಿದು ನಮಸ್ಕಾರ ಮಾಡುತ್ತೇವೆ.ಅದೇ ಪ್ರದಕ್ಷಿಣೆ ನಮಸ್ಕಾರ ಅಥವಾ ಪರಿಕ್ರಮ. ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸುವುದು ಪದ್ಧತಿ.ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಬೇಕು.ದೇವರ ಅಭಿಮುಖವಾಗಿ ನಿಂತರೆ ಎಡಭಾಗ ಯಾವುದಾಗುವುದೋ ಅಲ್ಲಿಂದ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.ಪ್ರದಕ್ಷಿಣೆಯನ್ನು ಮಾಡುವಾಗ ಮೌನದಿಂದ,ಸ್ತೋತ್ರಗಳನ್ನು ಪಠಿಸುತ್ತಾ,ಪ್ರಾರ್ಥಿಸುತ್ತಾ,ಏಕಾಗ್ರತೆಯಿಂದ ಪ್ರದಕ್ಷಿಣೆ ನಮಸ್ಕಾರವನ್ನು ಸಲ್ಲಿಸಬೇಕು.

ಒಂದು ವೃತ್ತಕ್ಕೆ ಒಂದು ಕೇಂದ್ರಬಿಂದುವಿರಲೇಬೇಕು. ಭಗವಂತನಿಂದ ರಚಿತವಾದ ಈ ಪ್ರಪಂಚ ಒಂದು ವೃತ್ತ(Circle). ಇಲ್ಲಿ ಕೇಂದ್ರಬಿಂದು (Center Point) ಪರಮಾತ್ಮ.ಕೇಂದ್ರಬಿಂದುವಿಲ್ಲದೇ ವೃತ್ತವಿಲ್ಲ.ಪರಮೇಶ್ವರನ ಅಸ್ತಿತ್ವವಿಲ್ಲದೇ ಲೋಕವಿಲ್ಲ. ಹಾಗಾಗಿ ಆ ಕೇಂದ್ರಬಿಂದುವಿನ ಸುತ್ತ ಭಕ್ತಿಯಿಂದ ಸುತ್ತಲೇಬೇಕು.ಹಾಗೇ ಸುತ್ತುವಾಗ ನಮ್ಮ ಕರ್ಮ ಹಾಗೂ ಚಿಂತನೆಗಳು ಕೇಂದ್ರಬಿಂದುವಾದ ಭಗವಂತನಲ್ಲಿ ಲೀನವಾಗುತ್ತವೆ.ಕೇಂದ್ರಬಿಂದು ಯಾವಾಗಲೂ ಸ್ಥಿರ.ಸೌರಮಂಡಲದಲ್ಲಿ ಸೂರ್ಯನೇ ಕೇಂದ್ರಬಿಂದು.ಆತನ ಸುತ್ತಲೂ ಉಳಿದ ಗ್ರಹಗಳು ಸುತ್ತುತ್ತಿರುತ್ತವೆ.ಹಾಗೇ ಪ್ರಪಂಚದಲ್ಲಿ ಭಗವಂತನೇ ಕೇಂದ್ರಬಿಂದು,ಹಾಗಾಗಿ ನಾವು ಭಗವಂತನ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂದು ತಿಳಿಯುತ್ತದೆ. ಕೇಂದ್ರಬಿಂದುವಿಲ್ಲದೇ ವೃತ್ತವನ್ನು ರಚಿಸಲು ಸಾಧ್ಯವಿಲ್ಲ.ಹಾಗೇ ನಮ್ಮ ಶರೀರದ ಕೇಂದ್ರಬಿಂದು ಮನಸ್ಸು.ಮನಸ್ಸಿನಲ್ಲಿ ಭಗವಂತನಿರದಿದ್ದರೆ ಶಾಂತಿ,ನೆಮ್ಮದಿ ದೊರಕುವುದಿಲ್ಲ.ಮನದಲ್ಲಿ ಭಗವಂತ ನೆಲೆಗೊಳ್ಳಲಿ ಎಂದು ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.ವೃತ್ತದಲ್ಲಿರುವ ಪ್ರತಿಯೊಂದು ಬಿಂದುವೂ ಕೇಂದ್ರಬಿಂದುವಿಗೆ ಸರಿಸಮಾನವಾಗಿರುತ್ತದೆ.ಹಾಗೇ ನಾವೆಲ್ಲೇ ಇರಲಿ,ಏನನ್ನೇ ಮಾಡಲಿ ಅದು ಕೇಂದ್ರಬಿಂದುವಾದ ಭಗವಂತನಿಗೆ ಹತ್ತಿರವಾಗಿಯೇ ಇರುತ್ತದೆ.ಆತನ ದಯೆಯಿಲ್ಲದೇ ಏನನ್ನೂ ಸಾಧಿಸಲಾಗದು. ಹಾಗೇ ದೇವಾಲಯದ ಪರಿಸರ ಶಾಂತ ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಪ್ರದಕ್ಷಿಣೆಯ ಸಮಯದಲ್ಲಿ ಆ ಸಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ ಶರೀರ ಚೈತನ್ಯಮಯವಾಗುತ್ತದೆ ಹಾಗೇ ಮಾನಸಿಕ ಶಾಂತಿಯೂ ಸಿಗುತ್ತದೆ.ಎಲ್ಲ ಜಂಜಾಟಗಳನ್ನು ಮರೆತು ಭಗವಂತನ ಸನ್ನಿಧಿಯಲ್ಲಿ ತುಸುಹೊತ್ತು ಕಳೆದರೆ ನವೋಲ್ಲಾಸ ಸಿಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.
ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.
ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ
.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಅಥವಾ 5 ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.
ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.
ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

 "ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||"

(ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು.

March 19, 2026

ದೀಪಾವಳಿ ಮತ್ತು ಜ್ಯೋತಿಷ್ಯ

ಭಾದ್ರಪಸದ ಮಾಸದ ಪಿತೃ
ಪಕ್ಷದಲ್ಲಿ ಪಿತೃಗಳಿಗೆ ಋಣ  ಕಾರ್ಯ 
ಮಾಡಿದ ಮೇಲೆ ......ರವಿ ಹಾಗೂ ಚಂದ್ರರು ಮುಂದಿನ ರಾಶಿಯಾದ ತುಲಾಗೆ ಬರುತ್ತಾರೆ..
ರವಿಯು - *ಪಿತೃ* ಲೋಕಕ್ಕೆ ಕಾರಕ
ಚಂದ್ರನು -  *ಚಂದ್ರ*  ಲೋಕಕ್ಕೆ ಕಾರಕ
*ರವಿ* - ತಂದೆಯ ಕಡೆಯ ಮರಣ ಹೊಂದಿದ ಪುರುಷ  ಪಿತೃಗಳು
*ಚಂದ್ರ* - ತಾಯಿಯ ಕಡೆ ಮರಣ ಹೊಂದಿದ ಸ್ತ್ರೀ ಯರ ಪಿತೃಗಳು

ತುಲಾದಲ್ಲಿ ರವಿ ನೀಚನಾಗಿ ಚಂದ್ರನೊಂದಿಗೆ ಅಮಾವಾಸ್ಯೆ ಬಂದರೆ ಅದು ರವಿ ಹಾಗು ಚಂದ್ರರಿಗೆ *ಶಕ್ತಿ ಹೀನ* ವಾಗುವ ಪರಿಸ್ತಿತಿ ..
ಅಂದರೆ  ಪಿತೃದೇವತೆಗಳು ಪಂಚಭೂತವಾದ ಭೂಮಿಯ ಜಗತ್ತಿನಲ್ಲಿ ಶಕ್ತಿಹೀನರಾಗಿ  ಬಲ ಕಳೆದುಕೊಂಡು ತಮ್ಮ ಲೋಕವಾದ ಪಿತೃಲೋಕಕ್ಕೆ ತೆರಳುತ್ತಾರೆ.ಪಿತೃಗಳು ಅವರ ಲೋಕಕ್ಕೆ ಶಾಂತರಾಗಿ ಹೋದರೆ ಇಲ್ಲಿರುವ ಅವರ ವಂಶಸ್ಥರಿಗೆ   *ಶಾಪವಿಮೋಚನೆಯಾಗುತ್ತದೆ* ಕಷ್ಡ ಕಾರ್ಪಣ್ಯ ಬಗೆಹರಿದು ನಿವಾರಣೆಯಾಗಿ *ಹಣ ಸುಖ ಸೌಭಾಗ್ಯಗಳು* ಲಭಿಸುತ್ತವೆ.. 

ಸುಖ - ಹಣಕ್ಕೆ ಕಾರಕ- ಶುಕ್ರ ಶುಕ್ರನ ಅಧಿದೇವತೆ  - ಲಕ್ಷ್ಮೀ  
ವ್ಯವಹಾರ ಚೆನ್ನಾಗಿ ನಡೆದರೆ ಅಪಾರ ಹಣ ಪ್ರಾಪ್ತಿ. ತುಲಾ ರಾಶಿಯು ವ್ಯವಹಾರದ ರಾಶಿಯಾಗಿದೆ ವ್ಯವಹಾರಕ್ಕೆ ಪ್ರತೀಕವಾದ ತಕ್ಕಡಿ ಅದರ ಸಂಕೇತವಾಗಿದೆ. ಅದರ ಸಂಕೇತವಾಗಿ ಅಮಾವಾಸ್ಯೆಯಲ್ಲಿ *ಲಕ್ಷ್ಮಿಪೂಜೆ* ಆಚರಿಸಲಾಗುತ್ತದೆ.

ಪಿತೃಗಳ ಆತ್ಮವು 
*ಜ್ಯೋತಿಯ*
 ರೂಪದಲ್ಲಿ ಇರುತ್ತದೆ . ಆ ಜ್ಯೋತಿಯು ಪಿತೃಲೋಕಕ್ಕೆ ತೆರಳುವ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.
 
💐 *ಸೂರ್ಯ + ಚಂದ್ರ ಸಂಯೋಗ*.
ಸಂಯೋಗವಾಗುವುದು ಚಿತ್ತಾ ನಕ್ಷತ್ರದಲ್ಲಿ... ಚಿತ್ತಾ ನಕ್ಷತ್ರವು  ವಿಶ್ವಕರ್ಮನ ನಕ್ಷತ್ರ
*ವಾಸ್ತುಶಿಲ್ಪ ವಿದ್ಯೆಯ* ಅಧಿದೇವತೆ. ಈ ವಿದ್ಯೆಯು *ಬೆಳಕು ಹಾಗೂ ಜ್ಯೋತಿಯ* ಸಂಕೇತವಾಗಿದೆ.ನೈಸರ್ಗಿಕ *ಬೆಳಕಿನ ಗ್ರಹಗಳಾದ ರವಿ ಹಾಗೂ ಚಂದ್ರರು ವಿದ್ಯೆ ಎಂಬ ಬೆಳಕಿನೊಡನೆ  ಚಿತ್ತಾ ನಕ್ಷತ್ರದಲ್ಲಿ ಸಂಯೋಗವಾಗುವುದರಿಂದ ಅದರ  ಸಂಕೇತವಾಗಿ ದೀಪ* ಹಚ್ಚಲಾಗುತ್ತದೆ.

💐 *ರಾಕ್ಷಸ ಹಾಗು ದೇವತೆಗಳು*
ತುಲಾರಾಶಿಯ ಒಡೆಯ ಶುಕ್ರ ರಾಕ್ಷಸರ ಪಕ್ಷ  .ಸೂರ್ಯ ಚಂದ್ರರು  ದೇವತೆಗಳ ಪಕ್ಷ. ಅಸುರತ್ವ ನಿಗ್ರಹಿಸಲು ಬೇಕಾದ ಶಕ್ತಿಯನ್ನು  ವಿದ್ಯೆಯು ನೀಡುತ್ತದೆ
ಅದರ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.

💐 *ರಾಮಾಯಣ..ಹಾಗೂ ದೀಪಾವಳಿ* 
ರವಿ - ರಾಮ 
ಚಂದ್ರ -ಸೀತೆ
ಸೀತೆಯನ್ನು ಅಸುರನಾದ ರಾವಣ ಶನಿ ಅಪಹರಿಸುತ್ತಾನೆ ಅಪಹರಣ ಆರನೇ ಮನೆ . 
ನಂತರ ರಾಮನು ಹನುಮಂತ ಹಾಗೂ ವಾನರರ ಕುಜ ನ ಸಹಾಯ ಪಡೆದು ಯುದ್ದ ಮಾಡಿ ರಾವಣನನ್ನು ವಧೆ ಮಾಡುತ್ತಾನೆ.ವಧೆ ಹಾಗೂ ಯುದ್ದವು  "ಅಷ್ಡಮ " ಅಂದರೆ " ವೃಶ್ಚಿಕ" . ವೃಶ್ಚಿಕಕ್ಕೆ ವ್ಯಯ ರಾಶಿ ತುಲಾ 
ಸೀತೆಯನ್ನು ರಾಮನು ಅಯೋದ್ಯೆಗೆ ಕರೆತರುವಾಗ ತುಲಾರಾಶಿಯ ಅಮಾವಾಸ್ಯೆ ಆಗಿದ್ದಾಗ ಅವರಿಗೆ ದಾರಿ ಕಾಣಲೆಂದು ಪ್ರಜೆಗಳು *ದೀಪ* ಹಚ್ಚಿ ಇಟ್ಟಿದ್ದರು.

💐 *ಭಾಗವತ ಹಾಗು ದೀಪಾವಳಿ*
 ನರಕಾಸುರನ ವಧೆ
ನರಕಾಸುರನ  ನರಕದ ಮನೆ ಅಷ್ಟಮ ಅಂದರೆ ವೃಶ್ಚಿಕ ರಾಶಿ ನರಕಾಸುರನ್ನು ವಧೆ ಮಾಡಿದ್ದು 

ಕೃಷ್ಣ ವೃಶ್ಚಿಕಕ್ಕೆ ಮಾರಕ
ಸ್ತಾನವಾದ ವೃ಼ಷಭ ರಾಶಿಯ  ಸಂಜಾತ
ವಧೆಗೆ ಆರಿಸಿಕೊಂಡ ದಿನ ತುಲಾರಾಶಿಯ ಅಮಾವಾಸ್ಯೆ ಕಾರಣ ವೃಶ್ಚಿಕಕ್ಕೆ ತುಲಾ *ದ್ವಾದಶ* ವ್ಯಯ .ಅಂದರೆ ನಾಶ .ನರಕದ ಅಧಿಪತಿಗೆ ನಾಶದ  ದಿನವನ್ನಾಗಿ ಆರಿಸಿ *ವಧೆ* ಮಾಡಿದ ಕೃಷ್ಣ
ರಾಕ್ಷಸರು - *ಕತ್ತಲೆ ಸಂಕೇತ ಅಸುರತ್ವ ನಾಶವಾದರೆ ಅದು ಬೆಳಕು ಆ ಕಾರಣ ಇಂದು ದೀಪ* ಹಚ್ಚುತ್ತಾರೆ.

ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ *ಅಭೀಂದ್ರ*🙏🏻🙏🏻🙏🏻🙏🏻

March 13, 2026

ಜಾತಕದಲ್ಲಿ ಅಸ್ತಂಗತ ಗ್ರಹದ ಫಲ

ಅಂಗ ಅಂದ್ರೆ ಶರೀರ. ಅಸ್ತ ಅಂದ್ರೆ ಅಡಗಿ ಕುಳಿತುಕೊಳ್ಳುವುದು. (ಸುಟ್ಟು ಹೋಗುವುದು ಅಲ್ಲ). 

ಆಂಗ್ಲ ಭಾಷೆಯ ಶಬ್ದ Combustion ನ್ನು ಜನರು ಅಪಾರ್ಥ ಮಾಡಿಕೊಂಡು ಗ್ರಹ ಸೂರ್ಯನ ಅತಿ ಹತ್ತಿರದ ಡಿಗ್ರಿಯಲ್ಲಿ ಇರುವಾಗ ಸುಟ್ಟು ಹೋಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ(It is nothing but a misconception)

ಸೂರ್ಯ ಆಸ್ತವಾಗಿದೆ ಅಂತ ನಾವು ಹೇಳುತ್ತೇವೆ ಅಂದರೆ ಸೂರ್ಯ ಪಶ್ಚಿಮದಲ್ಲಿ ಮುಳುಗಿದ್ದಾನೆ ಅಂತ ಅರ್ಥ ಸೂರ್ಯ ಸುಟ್ಟು ಹೋಗಿದ್ದಾನೆ ಅಂತ ಅರ್ಥವೇನು ಅಲ್ಲ!!!

ಒಂದು ಗ್ರಹ ಸೂರ್ಯನ ಹಿಂದೆ ಮುಂದೆ ಅಥವಾ ಸೂರ್ಯನ ಯುತಿಯಲ್ಲಿದ್ದಾಗ ಅಸ್ತವಾಗಬಹುದು ಆದರೆ ಒಂದು ನಿರ್ದಿಷ್ಟ ಡಿಗ್ರಿಯ ಒಳಗಡೆ ಇರಬೇಕು.

ಒಂದು ಗ್ರಹವನ್ನು ಸುಟ್ಟು ಹಾಕುವ ಶಕ್ತಿ ಮಂಗಳ ಗ್ರಹಕ್ಕೆ ಮಾತ್ರ ಇರುವುದು, ಬೇರೆ ಗ್ರಹಗಳಿಗೆ ಆ ಸಾಮರ್ಥ್ಯವಿಲ್ಲ. ಕೇತು ಗ್ರಹಕ್ಕೂ ಸಹ ಆ ಶಕ್ತಿ ಇದೆ. 

ಕುಜ ಬೆಂಕಿಯ ಮೂಲಕ ಸುಟ್ಟು ಹಾಕಿದರೆ, ಕೇತು ಜನರ ಕಣ್ಣಿಗೆ ಕಾಣದ ಬೆಂಕಿಯಿಂದ ಗ್ರಹವನ್ನು ಸುಟ್ಟುಹಾಕುವ ಸಾಮರ್ಥ್ಯವನ್ನು ಹೊಂದಿದೆ...

ಅಮಾವಾಸ್ಯೆ ದಿನ ಚಂದ್ರ ಸೂರ್ಯನಿಂದ  12° ಡಿಗ್ರಿ ಒಳಗಡೆ ಬಂದರೆ ಚಂದ್ರ ಸಹ ಸೂರ್ಯನಿಂದ ಆಸ್ತವಾಗುತ್ತದೆ. 

ಅಮಾವಾಸ್ಯೆ ದಿನ ಜನಿಸಿದವರು ದೇವಸ್ಥಾನಕ್ಕೆ ಹೋಗಿ ಯಾವ ಪೂಜೆ ಮಾಡಿದರು ಪ್ರತಿಫಲ ಕಡಿಮೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಪೂಜೆ ಮಾಡಿದರು ಫಲ ದೊರೆಯುವುದಿಲ್ಲ. ಕಾರಣವೇನು? 

ಅಮಾವಾಸ್ಯೆ ದಿನ ಹುಟ್ಟಿದವರು ದೇವಸ್ಥಾನಕ್ಕೆ ಹೋಗದೆ ಗಿಡಗಳ ಬಳಿ ಹೋಗಿ ಪೂಜೆ ಮಾಡಬೇಕು ಮತ್ತು ನಿವೇದನೆ ಮಾಡಿಕೊಳ್ಳಲಿ. ಯಾವ ಗಿಡ? 

ಬಿಲ್ವಪತ್ರದ ಗಿಡದ ಬಳಿ ಹೋಗಿ ಶಿವನನ್ನು ಬೇಡಿಕೊಳ್ಳಿ. 

ಕದಂಬ ಗಿಡದ ಬಳಿ ಹೋಗಿ ಶ್ರೀ ಕೃಷ್ಣನನ್ನು ಬೇಡಿಕೊಳ್ಳಿ. 

Neem Tree ಬಳಿ ಹೋಗಿ ಕಾಳಿ ದೇವಿಯ ಆರಾಧನೆ ಮಾಡಿದರೆ ದೇವಿಯ ಆಶೀರ್ವಾದ ಸಿಗುತ್ತದೆ.

ಈಗ ಈ ಗಿಡಗಳು ಸಹಾಯ ಮಾಡದಿದ್ದರೆ ಅಮಾವಾಸ್ಯೆ ದಿನ ಹುಟ್ಟಿದವರನ್ನು ರಕ್ಷಿಸುವವರು ಯಾರು? 

ಸೂರ್ಯನ ಸ್ವಲ್ಪ ಹಿಂದೆ ಹೋಗಿ ಗೃಹ ಆಸ್ತವಾಗಿದ್ದಾರೆ, ಗಿಡಗಳ ಸಹಾಯ ಪಡೆಯಬೇಕು.

ಸೂರ್ಯನ ಸ್ವಲ್ಪ ಮುಂದೆ ಹೋಗಿ ಗ್ರಹ  ಅಸ್ತವಾಗಿದ್ದಾರೆ ನದಿಯ ತೀರದಲ್ಲಿ ಹೋಗಿ ಬೇಡಿಕೊಳ್ಳಬೇಕು. 

ಲಗ್ನ ಸಹ ಕೆಲವೊಮ್ಮೆ  ಆಸ್ತವಾಗುತ್ತದೆ. ಲಗ್ನದಿಂದ ಸೂರ್ಯ ಸಪ್ತಮದಲ್ಲಿದ್ದರೆ ಲಗ್ನ  ಆಸ್ತವಾಗಿದೆ ಅಂತ ಅರ್ಥ. ಆದರೆ ಲಗ್ನದ ಡಿಗ್ರಿ ಸಮೀಪದಲ್ಲಿ ಸೂರ್ಯನ ಡಿಗ್ರಿ ಇರಬೇಕು.  ನೀವೇ ಕಳೆದು ಹೋಗಿದ್ದೀರಿ ಅಂತ ಅರ್ಥ. 

ಆತ್ಮಕಾರಕನನ್ನು ಸಹ ಅದೇ ರೀತಿ ನೋಡಬೇಕು. ಆತ್ಮಕಾರಕ ಯಾವಾಗಲೂ ರವಿಯಿಂದ ಆಸ್ತವಾಗಿರಬಾರದು. ಆತ್ಮಕಾರಕ ಆಸ್ತವಾಗಿರುವಾಗಲೂ ಸಹ ನೀವು ಮಾಡಿರ ಪೂಜೆಗೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. 

ನೀವು ಯಾರ ಮೇಲೆಯಾದರೂ ಸಿಟ್ಟಾದಾಗ ನೀವು ಹೊರಗಿನಿಂದ ಸುಡುತ್ತೀರಿ (Outburst) ಅದು ಕುಜ. 

ಕೆಲವೊಮ್ಮೆ ಸಿಟ್ಟನ್ನು ಒಳಗೇ ನುಂಗಿಕೊಳ್ಳುತ್ತೀರಿ ಅದು ಕೇತು ( ಸ್ತ್ರೀ ಗ್ರಹ). 

ನೀವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಲು ಯಾವಾಗ ಶುರು ಮಾಡುತ್ತೀರಿ ಅವಾಗ ನೀವು ಮೋಕ್ಷಕ್ಕೆ ತೀರ ಹತ್ತಿರವಾಗುತ್ತಿದ್ದೀರಿ ಅಂತ ಅರ್ಥ. ಆದ್ದರಿಂದ ಜಲರಾಶಿಗಳನ್ನು ಮೋಕ್ಷ ತ್ರಿಕೋಣ ಅಂತ ಹೇಳುತ್ತೇವೆ. ಮೋಕ್ಷಕಾರಕ ಕೇತು ಅಂದರೆ ನಿಮ್ಮನ್ನು ಒಳಗಿನಿಂದ ಸುಡುವ ಬೆಂಕಿ. *ಆದ್ದರಿಂದ ಕೇತು ಜಲ ನವಂಶದಲ್ಲಿದ್ದಾಗ ಜಾತಕರು ಮೋಕ್ಷಕ್ಕೆ ಅತ್ಯಂತ ಹತ್ತಿರವಾಗುತ್ತಾರೆ* ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಕೇತು ನಮಾಂಶದಲ್ಲಿ ಜಲ ರಾಶಿಯಲ್ಲಿದೆ.

ಮುಹೂರ್ತ ನಿರ್ಣಯದಲ್ಲಿ ಉಪಗ್ರಹ ದೋಷ ಮತ್ತು ಪರಿಣಾಮಗಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಹೂರ್ತ ನಿರ್ಣಯದ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ದೋಷಗಳಲ್ಲಿ “ಉಪಗ್ರಹ ದೋಷ”ವೂ ಒಂದು. ಮುಹೂರ್ತ ಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ನಕ್ಷತ್ರ ಸಂಬಂಧಗಳಿಂದ ಈ ದೋಷ ಉಂಟಾಗುತ್ತದೆ. ವಿಶೇಷವಾಗಿ ರವಿ ಮತ್ತು ಚಂದ್ರರ ನಕ್ಷತ್ರಸ್ಥಿತಿ ಈ ದೋಷವನ್ನು ನಿರ್ಧರಿಸುತ್ತದೆ.

*💠 ಉಪಗ್ರಹ ದೋಷ ಎಂದರೇನು*
ಮುಹೂರ್ತ ಶಾಸ್ತ್ರದಲ್ಲಿ ರವಿ ಇರುವ ನಕ್ಷತ್ರದಿಂದ ಚಂದ್ರ ಇರುವ ನಕ್ಷತ್ರದವರೆಗೆ ಎಣಿಕೆ ಮಾಡಲಾಗುತ್ತದೆ.
ಈ ಎಣಿಕೆಯಲ್ಲಿ ಚಂದ್ರನು ಕೆಳಗಿನ ಸಂಖ್ಯೆಗಳ ನಕ್ಷತ್ರಗಳಲ್ಲಿ ಇದ್ದರೆ ಅದನ್ನು ಉಪಗ್ರಹ ದೋಷ ಎಂದು ಪರಿಗಣಿಸಲಾಗುತ್ತದೆ.

ರವಿ ನಕ್ಷತ್ರದಿಂದ ಚಂದ್ರ ಈ ಸಂಖ್ಯೆಯ ನಕ್ಷತ್ರಗಳಲ್ಲಿ ಇದ್ದರೆ ದೋಷ ಉಂಟಾಗುತ್ತದೆ:

5, 7, 8, 10, 14, 15, 18, 19, 21, 22, 23, 24, 25

ಈ ರೀತಿ ರವಿ ಮತ್ತು ಚಂದ್ರರ ನಡುವಿನ ನಕ್ಷತ್ರ ಸಂಬಂಧ ಕಂಡುಬಂದರೆ ಆ ದಿನವನ್ನು ಉಪಗ್ರಹ ದೋಷದಿಂದ ದೋಷಿತ ದಿನ ಎಂದು ಶಾಸ್ತ್ರ ಹೇಳುತ್ತದೆ. ಇಂತಹ ಸಮಯದಲ್ಲಿ ಪ್ರಮುಖ ಶುಭ ಕಾರ್ಯಗಳನ್ನು ಕೈಗೊಳ್ಳುವುದನ್ನು ಸಾಮಾನ್ಯವಾಗಿ ತಪ್ಪಿಸಲು ಸೂಚಿಸಲಾಗಿದೆ.

💠 *ಶ್ಲೋಕ :*
ಉಪಗ್ರಹೇಷು ಲತ್ತಾಯಾಂ ತಥಾ ಚಂಡಾಯುಧಾಹೃಯೇ।
ಗ್ರಹೋಸ್ತಿ ಯತ್ ಪ್ರಮಾಣಾಂಶೇ ವಿದ್ಧಾಂಶಸ್ತತ್ ಪ್ರಮಾಣಿತಃ॥
— ಮೂಹೂರ್ತ ದೀಪಿಕಾ

*ಅರ್ಥ :*
ರವಿ ಯಾವ ನಕ್ಷತ್ರದ ಯಾವ ಚರಣದಲ್ಲಿ ಇರುವನೋ, ಅದೇ ಕ್ರಮದ ನಕ್ಷತ್ರದ ಅದೇ ಚರಣದಲ್ಲಿ ಚಂದ್ರ ಇದ್ದರೆ ಮಾತ್ರ ಉಪಗ್ರಹ ದೋಷ ಉಂಟಾಗುತ್ತದೆ. ಉಳಿದ ಚರಣಗಳಿಗೆ ಈ ದೋಷ ಅನ್ವಯಿಸುವುದಿಲ್ಲ.

*ಉದಾಹರಣೆಗೆ:*
ರವಿ ಅಶ್ವಿನಿ ನಕ್ಷತ್ರದ 1ನೇ ಚರಣದಲ್ಲಿ ಇದ್ದಾನೆ ಎಂದು ಪರಿಗಣಿಸೋಣ.

ಅಶ್ವಿನಿಯಿಂದ ಎಣಿಸಿದಾಗ 5ನೇ ನಕ್ಷತ್ರ ಮೃಗಶಿರಾ ಆಗುತ್ತದೆ.

*ಈ ಸಂದರ್ಭದಲ್ಲಿ:*
ಚಂದ್ರನು ಮೃಗಶಿರಾ 1ನೇ ಚರಣದಲ್ಲಿ ಇದ್ದರೆ ಮಾತ್ರ ಉಪಗ್ರಹ ದೋಷ ಉಂಟಾಗುತ್ತದೆ.

ಮೃಗಶಿರಾದ 2ನೇ, 3ನೇ, 4ನೇ ಚರಣಗಳಲ್ಲಿ ಇದ್ದರೆ ಉಪಗ್ರಹ ದೋಷ ಇರುವುದಿಲ್ಲ.

ಅಂದರೆ, ದೋಷವು ಸಂಪೂರ್ಣ ನಕ್ಷತ್ರಕ್ಕೆ ಅಲ್ಲ; ಅದೇ ಚರಣಕ್ಕೆ ಮಾತ್ರ ಅನ್ವಯಿಸುತ್ತದೆ.

💠 *ಶ್ಲೋಕ : 2*
ಯಾವದಂಶಸ್ಥಿತೇ ಸೂರ್ಯೇ ತಾವದಂಶೇ ನಿಶಾಕರೇ।
ವರ್ಜಯೇತ್ ಸೂರ್ಯಜೋ ದೋಷಃ ಶೇಷಂ ಕರ್ಮ ಶುಭಂ ಭವೇತ್॥
— ಗರ್ಗಾಚಾರ್ಯ

ಅರ್ಥ :
ರವಿ ಮತ್ತು ಚಂದ್ರರು ಒಂದೇ ಅಂಶದಲ್ಲಿ (degree) ಇದ್ದರೆ ಉಪಗ್ರಹ ದೋಷ ಉಂಟಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಉಳಿದ ಕಾರ್ಯಗಳನ್ನು ಶುಭವಾಗಿ ಮಾಡಬಹುದು ಎಂದು ಶಾಸ್ತ್ರ ಹೇಳುತ್ತದೆ.

*💠 ಉಪಗ್ರಹ ದೋಷದ ಪರಿಣಾಮಗಳು*
ಜ್ಯೋತಿಷ್ಯ ಗ್ರಂಥಗಳ ಪ್ರಕಾರ ಉಪಗ್ರಹ ದೋಷದ ಪರಿಣಾಮಗಳು ಈ ರೀತಿಯಾಗಿರಬಹುದು:

• ವ್ಯಕ್ತಿಯಲ್ಲಿ ವೈರಾಗ್ಯ ಭಾವನೆ ಹೆಚ್ಚಾಗುವುದು
• ಸಂಸಾರ ಜೀವನದಲ್ಲಿ ಆಸಕ್ತಿ ಕಡಿಮೆಯಾಗುವುದು
• ಆಧ್ಯಾತ್ಮಿಕ ಚಿಂತನೆ ಮತ್ತು ಧಾರ್ಮಿಕ ಮನೋಭಾವ ಹೆಚ್ಚಾಗುವುದು
• ಕೆಲ ಸಂದರ್ಭಗಳಲ್ಲಿ ಸಂಸಾರ ವಿಮುಖ ಸ್ಥಿತಿ ಉಂಟಾಗಬಹುದು

ಇದರಿಂದ ವ್ಯಕ್ತಿಯ ಮನಸ್ಸು ಸಾಮಾನ್ಯ ಲೋಕ ಜೀವನಕ್ಕಿಂತ ಆಧ್ಯಾತ್ಮಿಕ ಜೀವನದತ್ತ ಹೆಚ್ಚು ಆಕರ್ಷಿತವಾಗುತ್ತದೆ ಎಂದು ಶಾಸ್ತ್ರಗಳು ಸೂಚಿಸುತ್ತವೆ.

*💠 ಮುಹೂರ್ತದಲ್ಲಿ ಉಪಗ್ರಹ ದೋಷದ ಪರಿಗಣನೆ*
ಮುಹೂರ್ತ ಶಾಸ್ತ್ರದಲ್ಲಿ ಕೆಳಗಿನ ಪ್ರಮುಖ ಕಾರ್ಯಗಳಲ್ಲಿ ಉಪಗ್ರಹ ದೋಷವನ್ನು ವಿಶೇಷವಾಗಿ ಪರಿಶೀಲಿಸಲಾಗುತ್ತದೆ:

• ವಿವಾಹ ಮುಹೂರ್ತ
• ಗೃಹ ಪ್ರವೇಶ
• ಉಪನಯನ
• ನಾಮಕರಣ
• ದೇವಾಲಯ ಪ್ರತಿಷ್ಠೆ
• ಹೊಸ ಕಾರ್ಯಾರಂಭ

ಈ ಕಾರ್ಯಗಳಲ್ಲಿ ಸಾಧ್ಯವಾದಷ್ಟು ಉಪಗ್ರಹ ದೋಷ ಇರುವ ಸಮಯವನ್ನು ತಪ್ಪಿಸುವುದು ಶ್ರೇಯಸ್ಕರ ಎಂದು ಮುಹೂರ್ತ ಗ್ರಂಥಗಳು ಸೂಚಿಸುತ್ತವೆ.

*💠 ಸಂಕ್ಷಿಪ್ತವಾಗಿ*
ಉಪಗ್ರಹ ದೋಷವು ರವಿ ಮತ್ತು ಚಂದ್ರರ ನಕ್ಷತ್ರ ಸಂಬಂಧದಿಂದ ಉಂಟಾಗುವ ಒಂದು ಮುಹೂರ್ತ ದೋಷ. ಆದರೆ ಇದು ಎಲ್ಲಾ ಚರಣಗಳಿಗೆ ಅನ್ವಯಿಸುವುದಿಲ್ಲ. ರವಿ ಇರುವ ಚರಣಕ್ಕೆ ಹೊಂದಿಕೊಂಡ ಚರಣದಲ್ಲಿ ಚಂದ್ರ ಇದ್ದಾಗ ಮಾತ್ರ ದೋಷ ಉಂಟಾಗುತ್ತದೆ ಎಂಬುದು ಶಾಸ್ತ್ರದ ಸೂಕ್ಷ್ಮ ನಿಯಮ.

*ಶ್ರೀ ಗುರುರಾಜಾಚಾರ್ಯ ಜೋಶಿ ತಾಳಿಕೋಟೆ

March 6, 2026

ಕೋಟಿ ಗಳಿಸಿ ಮನೆ ಮೇಲೊಂದು ಮನೆ

ಅದ್ಭುತವಾದ ಕಥೆ ಇದು ಎಲ್ಲರೂ ತಪ್ಪದೇ ಓದಿರಿ….. ಈ ಕಥೆಯನ್ನು ಓದಿದ ಕೆಲವರಲ್ಲಾದರೂ ಬದಲಾವಣೆ ಯಾಗುತ್ತದೆ. 

    ನಿಜವಾಗಿಯೂ ಇದೊಂದು ಕಣ್ಣು ತೆರೆಸುವಂತಹ ಅದ್ಭುತವಾದ ನೀತಿಕಥೆ. ಒಂದಾನೊಂದು ನಗರದಲ್ಲಿ ಲಕ್ಷ್ಮೀಪತಿ ಎಂಬ ವ್ಯಕ್ತಿ ಇದ್ದನು. ಆತನಿಗೆ ಒಂದು ಸಂಕಲ್ಪವಿದೆ. ಅವರ ಮನೆಯ ಹತ್ತಿರದಲ್ಲಿ ಒಂದು ಸುಂದರವಾದ ಭವನವಿದೆ. ಯಾರದು ಆ ಮನೆ ಎಂದು ಕೇಳಿದರೆ ಯಾರೋ ಕೋಟ್ಯಾಧಿಪತಿಯ ಮನೆ ಎಂಬ ಉತ್ತರ ಬರುತ್ತದೆ. ಆಗ ಅಂದು ಕೊಳ್ಳುತ್ತಾನೆ ಈ ನಗರದಲ್ಲಿರುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ತಾನೂ ಸೇರಬೇಕು ಎಂದು. ಅದಕ್ಕಾಗಿ ಆತನು ಯುವಕನಾಗಿದ್ದಾಗಿನಿಂದಲೂ ತುಂಬಾ ಕಷ್ಟಪಡುತ್ತಿದ್ದನು. ಹಗಲು ರಾತ್ರಿ ದುಡಿಯುತ್ತಿದ್ದನು. ಸಂಪಾದನೆ ಮಾಡುವುದೇ ಸರ್ವಸ್ವವೆಂದು ಭಾವಿಸಿ ದುಡಿಯುತ್ತಿದ್ದನು.

    40 ವರ್ಷದೊಳಗೆ ಕೋಟ್ಯಾಧಿಪತಿಯಾದನು. ಒಂದು ಕೋಟಿಯ ನಂತರ ಇನ್ನೊಂದು ಕೋಟಿ ಹೀಗೆ 50 ವರ್ಷದೊಳಗೆ ಎಷ್ಟೋ ಕೋಟಿಗಳ ಹಣ ಸಂಪಾದನೆ ಮಾಡಿದ. ಹಿಂದೆ ತಾನು ನೋಡಿದ ಬಂಗಲೆಯಂತಹ 2-3 ಬಂಗಲೆಗಳನ್ನು ಕಟ್ಟಿಸಿದನು. ಆದರೂ ತೃಪ್ತಿಯಾಗಲಿಲ್ಲ. ಈಗಿರುವ ಮನೆಗಳಲ್ಲದೆ, ನಗರದ ಮಧ್ಯಭಾಗದಲ್ಲಿ ತನ್ನ ಶ್ರೀಮಂತಿಕೆಯನ್ನು ಜನರಿಗೆ ತಿಳಿಯುವಂತೆ ಮಾಡಲು ಇಂದ್ರ ಭವನದಂತಹ ಒಂದು ಮನೆಯನ್ನು ಕಟ್ಟಿಸಬೇಕೆಂದು ಅದಕ್ಕಾಗಿ ಮತ್ತಷ್ಟು ಕಷ್ಟಪಟ್ಟು ದುಡಿದನು.

    ಅಂದುಕೊಂಡದ್ದನ್ನು ಸಾಧಿಸಿದನು ಲಕ್ಷ್ಮೀಪತಿ. ನಗರದ ಮಧ್ಯದಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಅದ್ಭುತವಾದ ಭವನವನ್ನು ಕಟ್ಟಿಸಿದನು.  ಅದರ ಗೃಹಪ್ರವೇಶದ ದಿನದಂದು ನಗರದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಆಹ್ವಾನಿಸಿದನು. ಒಂದೊಂದು ದೇಶಕ್ಕೆ ಸಂಬಂದಿಸಿದ ಒಂದೊಂದು ವೈಶಿಷ್ಠತೆಗಳೆಲ್ಲವನ್ನು ಒಂದೇ ಕಡೇ ಹೊಂದಿಸಿದಂತೆ ಆ ಮನೆ ಇರುವುದರಿಂದ ಎಲ್ಲರೂ ಅಬ್ಬಾ! ಎಂದು ಆಶ್ಚರ್ಯಪಟ್ಟರು. ಶಭಾಷ್ ಎಂದು ಲಕ್ಷ್ಮೀಪತಿಯನ್ನು ಅಭಿನಂದಿಸಿದರು.

    ಬಂದಿದ್ದ ಅತಿಥಿಗಳೆಲ್ಲರೂ ಹೋದ ಮೇಲೆ, ಲಕ್ಷ್ಮೀಪತಿ ಮಲಗುವ ಕೋಣೆಗೆ ಹೋಗಿ ಹಾಸಿಗೆ ಮೇಲೆ ಹಾಗೆಯೇ ಮಲಗಿದನು. ಹೆಂಡತಿ ಮಕ್ಕಳು ಇನ್ನೂ ಪೋನ್ ನಲ್ಲಿ ಎಲ್ಲರೊಂದಿಗೆ ಮಾತಾಡುತ್ತಿದ್ದರು. ಮನೆಯ ವೈಭೋಗದ ಬಗ್ಗೆ, ಅಥಿತಿಗಳ ಕಾಮೆಂಟಗ’ಗಳ ಬಗ್ಗೆ, ಮನೆಗೆ ಆದ ಖರ್ಚಿನ ಬಗ್ಗೆ ಅವರು ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಲಕ್ಷ್ಮೀಪತಿಗೆ ಯಾಕೋ ಇಂದು ಕಣ್ತುಂಬ ನಿದ್ದೆ ಹೋಗಬೇಕೆನ್ನಿಸಿತು.

    ನಿಧಾನವಾಗಿ ಕಣ್ಣು ಮುಚ್ಚುತ್ತಿರುವಾಗ “ನಾನು ಹೋಗುತ್ತೇನೆ” ಎಂದು ಯಾರೋ ಕಿವಿಯಲ್ಲಿ ಹೇಳಿದಂತಾಯಿತು. ಕಣ್ಣು ತೆರೆದು ನೋಡಿದರೆ ಏನೂ ಕಾಣಿಸಲಿಲ್ಲ. ಎಲ್ಲಾ ಕತ್ತಲೆಯಂತಿದೆ. ಯಾರು? ಎಂದನು…. ಲಕ್ಷ್ಮೀಪತಿ. ಆದರೂ ತನ್ನ ಧ್ವನಿಗೆ ಪ್ರತಿಧ್ವನಿ ನೀಡಿದಂತೆ ಆಯಿತು. ನಾನು ನಿನ್ನ ಆತ್ಮ , ನಾನು ಹೋಗುತ್ತಿದ್ದೇನೆ ಎಂದು  ಕೇಳಿ ಬಂದಿತು.

    ಅದೇನು, ನೀನು ಹೋದರೆ ನಾನು ಸತ್ತು ಹೋಗ್ತೀನಿ ಅಲ್ವಾ! ಎಂದು ಗಾಬರಿಯಾದನು ಲಕ್ಷ್ಮೀಪತಿ. ಹೌದು ಎಂದು ಪ್ರತಿಧ್ವನಿಸಿತು. ಆಗ ಆತ್ಮ ಬೇಡ ಹೋಗಬೇಡ! ನೋಡು ಎಷ್ಟು ಸುಂದರವಾದ ಮನೆಯನ್ನು ಕಟ್ಟಿಸಿದ್ದೇನೆ. ಎಷ್ಟು ಹಣ ಸಂಪಾಧನೆ ಮಾಡಿದ್ದೆನೆ. ನೋಡು ಇವೆಲ್ಲಾ ನಿನಗೋಸ್ಕರನೇ ಅಲ್ವಾ! ನಿನ್ನನ್ನು ಸುಖಪಡಿಸುವುದಕ್ಕೆ ಅಲ್ವಾ, ನಿನ್ನ ತೃಪ್ತಿಗಾಗಿಯೇ ಅಲ್ವಾ. ಇರು ನನ್ನಲ್ಲಿದ್ದು ಇವೆಲ್ಲವನ್ನು ಅನುಭವಿಸು ಎಂದನು ಲಕ್ಷ್ಮೀಪತಿ. ಅನುಭವಿಸಬೇಕಾ….? ಹೇಗೆ ಅನಿಭವಿಸಲಿ….? ನಿನ್ನ ಶರೀರಕ್ಕೆ ಡಯಾಬೀಟಿಸ್ ಇರುವುದರಿಂದ ಸಿಹಿ ತಿನ್ನಲು ಆಗುವುದಿಲ್ಲ, ನಿನ್ನ ಶರೀರಕ್ಕೆ BP ಇರುವುದರಿಂದ ಉಪ್ಪು ಕಾರವನ್ನು ತಿನ್ನುವುದಕ್ಕೆ ಆಗುವುದಿಲ್ಲ, ಅದರ ಮೇಲೆ ಇಷ್ಟುವೂ ಇಲ್ಲ. ಇನ್ನೂ ಇಷ್ಟವಾದದ್ದೂ ಏನೂ ತಿನ್ನಲಾರೆ ಏಕೆಂದರೆ ನಿನ್ನ ಶರೀರಕ್ಕೆ ಜೀರ್ಣಮಾಡಿಕೊಳ್ಳಲು ಆಗುವುದಿಲ್ಲ. ನಿನ್ನ ಶರೀರವು ಒಟ್ಟಾರೆಯಾಗಿ ಕಣ್ಣಿನಿಂದ ಕಾಲಿನ ಏರೆಗೂ ಒಂದು ರೀತಿಯ ರೋಗಗಳ ಹುತ್ತವಾಗಿದೆ.

    ಆ ಹೊಟ್ಟೆ ನೋಡು ಹೇಗೆ ಮುಂದಕ್ಕೆ ಬಂದಿದೆ. ಹೆಜ್ಜೆ ತೆಗೆದು ಮರು ಹೆಜ್ಜೆಹಾಕುವುದಕ್ಕೆ ನೀನು ಎಷ್ಟು ಆಯಾಸ ಪಡುತ್ತೀಯಾ ಎಂಬುದು ನಮ್ಮಿಬ್ಬರಿಗೂ ಗೊತ್ತು. ನೀನೇ ಹೇಳು ನಿನ್ನ ಶರೀರದಲ್ಲಿ ಹೇಗಿರಲಿ…? ಅಲ್ಲಲ್ಲಿ ಶಿಥಿಲವಾಗಿರುವ ಮನೆಯಲ್ಲಿ ಯಾರಾದ್ರು ಇರ್ತಾರಾ…? ನೀನು ಕಟ್ಟಿಸಿದ ಸುಂಧರವಾದ ಮನೆಯಿಂದ ನನಗೇನು ಸಂಬಂಧ…? ನಾನಿರುವುದು ನಿನ್ನ ಶರೀರದಲ್ಲಿ, ಅದೇ ನನ್ನ ನಿವಾಸಸ್ಥಳ. ನನ್ನ ಮನೆಗೆ ಇರುವ ಒಂಭತ್ತು ದ್ವಾರಗಳಿಗೂ ಸಮಸ್ಯೆಗಳೇ, ನನಗೆ ರಕ್ಷಣೆ ಇಲ್ಲ, ಸುಖವಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ, ನಿನಗೆ ಮೊದಲಿಗೆ ಬಂದತಹ ಖಾಯಿಲೆ, ಹಣದ ಖಾಯಿಲೆ ‌.

    ಹಣದ ಖಾಯಿಲೆ ನಿನಗೆ ಬಂದಂದಿನಿಂದ, ನನ್ನನು ಒಮ್ಮೆಯಾದರೂ ನಿದ್ದೆ ಮಾಡಲು ಬಿಟ್ಟಿದ್ದೀಯಾ…? ನಾನಿರುವ ಶರೀರಕ್ಕೆ ಸ್ವಲ್ಪವಾದರೂ ವಿಶ್ರಾಂತಿ ನೀಡಿದ್ದೀಯಾ….? ಪ್ರತೀಕ್ಷಣವೂ ಇನ್ನೊಬ್ಬನಿಗೆ ಪೈಪೋಟಿಯಾಗಿ ನನ್ನಲ್ಲಿ ಅಸೂಯೆಯನ್ನು ತುಂಬಿದ್ದೀಯಾ…? ಇನ್ನೊಬ್ಬನನ್ನು ಹಿಂದೆ ತಳ್ಳಲು ನನ್ನಿಂದ ಕುತಂತ್ರಗಳನ್ನು ಮಾಡಿಸಿದೆ. ಎಷ್ಟೋ ಸಾರಿ ನನ್ನನ್ನು ಹಗೆಯಿಂದ, ಹೊಟ್ಟೆಕಿಚ್ಚಿನಿಂದ, ಎಷ್ಟು ನೋಯಿಸಿದೆಯೋ ಒಂದುಸಾರಿ ನೆನಪುಮಾಡಿಕೋ… ರೋಗಗಳು ಆವರಿಸಿದರೂ, ಎಂದಾದರೂ ಗಮನ ಹರಿಸಿದೆಯಾ? ಯೋಚನೆ ಮಾಡಿ ನೋಡು. ಇನ್ನೂ ಒಂದು ಕ್ಷಣವೂ ನಾನು ನಿನ್ನ ಶರೀರದಲ್ಲಿ ಇರುವುದಿಲ್ಲ. ನಾನು ಹೋಗುತ್ತಿದ್ದೇನೆ…!” ಎಂದು ಆ ರಾತ್ರಿ ತಾನು ಸಂಪಾದನೆ ಮಾಡಿರುವ ಲಕ್ಷ್ಮೀಯನ್ನು ಇಲ್ಲಿಯೇ ಬಿಟ್ಟು ಲಕ್ಷ್ಮೀಪತಿ ಸ್ವರ್ಗಕ್ಕೋ ನರಕಕ್ಕೋ ಯಾವುದೋ ಒಂದು ಲೋಕಕ್ಕೆ ಕಾಣದಂತಹ ಲೋಕಕ್ಕೆ ಹೋಗಿಬಿಟ್ಟನು.

    ಇಂದು ಪ್ರತಿ ಮನುಷ್ಯನಿಗೂ ನಾಳೆಯ ಬಗ್ಗೆ ಆಲೋಚನೆ ಅಧಿಕವಾಗಿದೆ. ಆದ್ದರಿಂದ ಈ ದಿನ, ಈ ಕ್ಷಣವನ್ನು ಆನಂದದಿಂದ ಅನಿಭವಿಸುವುದನ್ನು ಮರೆತಿದ್ದಾನೆ. ದೇವರು ಕೊಟ್ಟ ಆರೋಗ್ಯವೇ ಮಹಾಭಾಗ್ಯ ಎಂಬ ವಿಷಯವನ್ನು ಮರೆತು, ಮನುಷ್ಯ ಸೃಷ್ಠಿಸಿಕೊಂಡ ಹಣವನ್ನೇ ಭಾಗ್ಯವೆಂದುಕೊಳ್ಳುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ರೋಗಗಳನ್ನು ಬರಲೆಂದು ಆಹ್ವಾನ ನೀಡಿ,  ಅವು ಬಂದಾಗ ಖರ್ಚು ಮಾಡಲು ಕಷ್ಟಪಟ್ಟು ಹಣಸಂಪಾದನೆ ಮಾಡುತ್ತಿದ್ದಾನೆ. ನಮ್ಮ ಅವಶ್ಯಕತೆಗಳನ್ನು ನೀಗಿಸಿಕೊಳ್ಳಲು ಕಷ್ಟಪಡಬೇಕು. ಆನಂದಿಸಲು ಕಷ್ಟಪಡಬೇಕು. ನಾವು ಇರುವ ಜೀವನಕ್ಕಾಗಿ ಕಷ್ಟಪಡಬೇಕು. ಅಷ್ಟೇ ಆಗಲಿ ನಾವು ಹೋದ ನಂತರದ ಜೀವನಕ್ಕಾಗಿ ಕಷ್ಟ ಪಡುವುದರಲ್ಲಿ ಏನಾದರೂ ಅರ್ಥವಿದೆಯೇ….?             

ಕೃಪೆ:-ಮುಖ ಪುಸ್ತಕ.
ಸಂಗ್ರಹ:- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ

March 5, 2026

ಬ್ರೇಕ್ ಇರುವುದು ಕಾರು ನಿಲ್ಲಿಸುವುದಕ್ಕಲ್ಲ

ಅದು ಪಿಯುಸಿಯ ಒಂದು ಕ್ಲಾಸ್. ಭೌತಶಾಸ್ತ್ರ ಉಪನ್ಯಾಸಕ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದರು: ನಮ್ಮ ಕಾರುಗಳಲ್ಲಿ ಬ್ರೇಕ್‍ಗಳು ಯಾಕಿರ್ತವೆ ಅಂತ ಹೇಳಿನೋಡೋಣ.
ಎಲ್ಲ ಮಕ್ಕಳಿಗೆ ವಿಚಿತ್ರ ಅನಿಸಿತು.. ಇದೆಂಥ ಪ್ರಶ್ನೆ ಅಂತ. ಒಬ್ಬ ವಿದ್ಯಾರ್ಥಿ ಕೂಡಲೇ ಎದ್ದು ನಿಂತು ಹೇಳಿದ: ಸರ್ ಬ್ರೇಕುಗಳಿರುವುದು  ಕಾರನ್ನು ನಿಲ್ಲಿಸಲು.
ಇನ್ನೊಬ್ಬ ಹೇಳಿದ: ಕಾರಿನ ವೇಗವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು.
ಒಬ್ಬ ವಿದ್ಯಾರ್ಥಿ ಅಪಘಾತ ಆಗುವುದನ್ನು ತಪ್ಪಿಸಲಿಕ್ಕೆ.. ಡಿಕ್ಕಿ ಹೊಡೆಯೋದು ತಪ್ಪುತ್ತದೆ ಎಂದು ಹೇಳಿದ.
ಹೀಗೆ ವಿದ್ಯಾರ್ಥಿಗಳು ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಎಲ್ಲರ ಉತ್ತರಗಳೂ ಬಹುತೇಕ ಒಂದೇ ರೀತಿ ಇದ್ದವು.
ಆಗ ಉಪನ್ಯಾಸಕರು ತಾವೇ ಉತ್ತರ ನೀಡಲು ಮುಂದಾದರು.
`ನೀವೆಲ್ಲ ಸರಿಯಾದ ಉತ್ತರಗಳನ್ನೇ ನೀಡಿದ್ದೀರಿ. ನಿಮ್ಮ ಯೋಚನಾ  ಶಕ್ತಿ ನನಗೆ ಖುಷಿಯಾಯಿತು. ಆದರೆ, ಇದಕ್ಕಿಂತಲೂ ಮಿಗಿಲಾದ ದೊಡ್ಡ ಕಾರಣವೊಂದಿದೆ'-ಎಂದು ಹೇಳಿದಾಗ ವಿದ್ಯಾರ್ಥಿಗಳಿಗೆ ಅಚ್ಚರಿ. ಇನ್ನೇನಿರುತ್ತದೆ ಅಂತ.

ಬ್ರೇಕ್ ಇರುವುದು ಕಾರನ್ನು ಅತ್ಯಂತ ವೇಗವಾಗಿ ಓಡಿಸಲಿಕ್ಕೆ !
ಹೀಗೆಂದು ಪವನ್ ಪ್ರಸಾದ್ ಹೇಳಿದಾಗ ವಿದ್ಯಾರ್ಥಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು. ಕ್ಲಾಸಿನಲ್ಲಿ ಒಂದು ಗಾಢ ಮೌನ. ಯಾಕೆಂದರೆ, ಯಾರು ಕೂಡಾ ಈ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ವೇಗವಾಗಿ ಹೋಗಲು ಬೇಕಿರುವುದು ಎಕ್ಸಿಲೇಟರ್ ಅಲ್ವಾ? ಬ್ರೇಕ್ ಹೇಗಾಗ್ತದೆ ಎಂಬ ಪ್ರಶ್ನೆ ಅವರೆಲ್ಲರನ್ನೂ ಕಾಡಿತು.
ಉಪನ್ಯಾಸಕರು ತಾವೇ ಉತ್ತರಿಸಲು ಶುರು ಮಾಡಿದರು.
ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಕಾರಿಗೆ ಬ್ರೇಕೇ ಇಲ್ಲ ಅಂತಿದ್ರೆ ನೀವು ಕಾರನ್ನು ಎಷ್ಟು ವೇಗವಾಗಿ ಓಡಿಸುತ್ತೀರಿ? ಬ್ರೇಕ್ ಫೇಲ್ ಆಗಿರೋ ಕಾರು ಕೊಡ್ತೇನೆ ಅಂತಿಟ್ಕೊಳ್ಳಿ.
ವೇಗ ಬಿಡಿ, ಒಂದು ಮೀಟರ್ ಮುಂದೆ ಕೂಡಾ ಹೋಗುವುದಿಲ್ಲ ಅಲ್ವೇ? ಒಂದು ಕಾರನ್ನು ವೇಗವಾಗಿ ಓಡಿಸಲು ನಮಗೆ ಧೈರ್ಯ ನೀಡುವುದು ಅದಕ್ಕೊಂದು ಬ್ರೇಕ್ ಇದೆ ಎನ್ನುವ ನಂಬಿಕೆ ಅಲ್ವೇ? ಏನೇ ಆದರೂ ಬ್ರೇಕ್ ಇದೆ ಎನ್ನುವ ನಂಬಿಕೆಯಿಂದ ಅಲ್ಲವೇ ಕಾರನ್ನು 100, 200 ಕಿ.ಮೀ. ವೇಗದಲ್ಲಿ ಓಡಿಸುವುದು?
ಮುಂದುವರಿಸಿ.... ನಮ್ಮ ಬದುಕಿನಲ್ಲೂ ಅಷ್ಟೆ ಕೆಲವೊಂದು ಬ್ರೇಕ್‍ಗಳಿರ್ತವೆ. ಹೆತ್ತವರು, ಶಿಕ್ಷಕರು, ಸ್ನೇಹಿತರು ಎಲ್ಲರೂ ನಮ್ಮನ್ನು ಪ್ರಶ್ನೆ ಮಾಡ್ತಾರೆ. ಎಲ್ಲಿ ಹೋಗ್ತಾ ಇದ್ದೀಯಾ, ಏನ್ಮಾಡ್ತಾ ಇದೀಯಾ, ಮುಂದೇನು ಮಾಡ್ತೀಯಾ ಅಂತೆಲ್ಲ. ಇದೆಲ್ಲ ನಮಗೆ ಕಿರಿಕಿರಿ ಅನಿಸ್ತಾ ಇರ್ತದೆ. ಇದೆಲ್ಲ ನಮಗೆ ಅಡೆತಡೆ ಎಂದೇ ನಾವು ಭಾವಿಸುತ್ತೇವೆ.
ಆದರೆ, ಇವೇ ಪ್ರಶ್ನೆಗಳು ನಾವು ಹೋಗ್ತಾ ಇರುವ ದಾರಿ ಸರಿ ಇದೆಯಾ? ಎಷ್ಟು ವೇಗವಾಗಿ ಹೋಗ್ತಾ ಇದೇವೆ (ಹೋಮ್ ವರ್ಕ್ ಕಂಪ್ಲೀಟ್ ಆಯ್ತಾ?), ದಾರಿ ತಪ್ಪಿದ್ದೇವಾ ಎನ್ನುವುದನ್ನು ಅವಲೋಕನ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತವೆ.
 ನಾವು ಬ್ರೇಕ್ ಅಂದುಕೊಂಡಿದ್ದು ನಿಜದಲ್ಲಿ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತಾ ಇರುತ್ತದೆ. ತಪ್ಪಿದ್ದರೆ ಸರಿ ಮಾಡಿಕೊಳ್ಳಲು ಅವಕಾಶ ಕೊಡುತ್ತದೆ. ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಎಲ್ಲೂ ಆಕ್ಸಿಡೆಂಟ್ ಆಗದಂತೆ ನೋಡಿಕೊಳ್ಳುತ್ತದೆ.
ಅಂತ ಹೇಳಿ ಉಪನ್ಯಾಸಕರು ಮಕ್ಕಳ ಮುಖ ಮುಖ ನೋಡಿದರು. ಹೌದಲ್ವಾ ಅನ್ನುವ ಅಚ್ಚರಿ ಮಕ್ಕಳ ಮುಖದಲ್ಲಿತ್ತು.

#ಓದಿದ್ದು

March 3, 2026

ದಶಾಸಂಧಿ ಶಾಂತಿಗಳು

ದಶಾಸಂಧಿ ಕಾಲವು ಯಾವಾಗ ಬರುತ್ತದೆ ?
 
ದಕ್ಷಿಣಭಾರತದಲ್ಲಿ ಪ್ರಸಿದ್ಧವಾಗಿರುವುದು ವಿಂಶೋತ್ತರೀ ದಶಾ ಪದ್ಧತಿ. ನಾಕ್ಷತ್ರ ದಶಾ ,ಉಡುದಶಾ ಎಂದರೂ ಇದೇ ದಶಾಪದ್ಧತಿಯೇ ಆಗಿದೆ. ಇದು  ಜ್ಯೋತಿಷ ಶಾಸ್ತ್ರದ ಅಷ್ಟಾದಶ ಪ್ರವರ್ತಕರಲ್ಲಿ ಒಬ್ಬರಾದ ಪರಾಶರ ಮಹರ್ಷಿ ಪ್ರೋಕ್ತವಾದದ್ದು. ಇಲ್ಲಿ ರವಿಯಿಂದ ಶುಕ್ರನವರೆಗೆ ಒಂಭತ್ತು ದಶೆಗಳಿದ್ದು ಈ ದಶೆಗಳ ವಿರಾಮಕಾಲವೇ ದಶಾಸಂಧಿ ಕಾಲಗಳಾಗಿವೆ.

ಈ ದಶಾಸಂಧಿಕಾಲಗಳು ಅಶುಭಪ್ರದವೇ ?  ಈ ಕುರಿತು ಜ್ಯೋತಿಷ ಶಾಸ್ತ್ರದ ಮೂಲಗ್ರಂಥಗಳು ಏನು ಹೇಳುತ್ತವೆ ?

ಪ್ರಶ್ನಮಾರ್ಗ ಗ್ರಂಥವು ಎಲ್ಲಾ ದಶೆಗಳ ಅಂತ್ಯವು ಅಶುಭವೆಂದೂ, ದೋಷಪ್ರದವಾಗಿದ್ದರೆ ಮತ್ತೂ ಅಶುಭಪ್ರದವೆಂದು ಹೇಳುತ್ತದೆ. ಎರಡು, ಮೂರಕ್ಕಿಂತಲೂ ಅಧಿಕ ದಶಾಪದ್ಧತಿಗಳ ದಶಾಂತ್ಯವೂ ಏಕಕಾಲಕ್ಕೆ ಬಂದರೆ ಕಷ್ಟಪ್ರದವೆಂದು ಹೇಳಿದೆ.  ಅನೇಕ ಪ್ರಮಾಣಗ್ರಂಥಗಳಲ್ಲಿ ದಶಾನಾಥಗ್ರಹವು 6 8 12 ರಲ್ಲಿದ್ದರೆ, ಈ ಭಾವಗಳ ಅಧಿಪತಿಗಳ ಜೊತೆಗಿದ್ದರೆ, ಈ ಗ್ರಹವೇ 6 8 12 ರ ಅಧಿಪತಿಯಾಗಿದ್ದರೆ, ನೀಚಕ್ಷೇತ್ರ, ಶತ್ರುಕ್ಷೇತ್ರದಲ್ಲಿದ್ದರೆ, ಪಾಪಗ್ರಹ ಆಗಿದ್ದರೆ.........ಹೀಗೆ ಅನೇಕ ನಿಮಿತ್ತವನ್ನು ಹೇಳಿ ಆ ಸ್ಥಿತಿಯಿದ್ದಾಗ ಆ ದಶೆಯಲ್ಲಿ ವ್ಯಕ್ತಿಗೆ ಅಶುಭ ಫಲಗಳು  ಸಂಭವಿಸುತ್ತವೆಯೆಂದು ಹೇಳಿವೆ.  ಇವು ಆ ಗ್ರಹನದಶೆಯ ಆರಂಭದಿಂದ ಅಂತ್ಯದವರೆಗೂ ಸಂಭವಿಸಬಹುದಾದ ಅನಿಷ್ಟಗಳಾಗಿವೆ. ಇದರಲ್ಲಿ ದಶಾಸಂಧಿಕಾಲವೂ ಸೇರಿದೆ. 

ಅನಿಷ್ಟಪ್ರದ ದಶೆಯೆಂದು ಕಂಡುಬಂದಾಗ  ಶಾಂತಿ ಮಾಡಬೇಕೇ ?  ಯಾವಾಗ ಶಾಂತಿಯನ್ನು ಮಾಡಬೇಕು ?

ಆಯಾ ಗ್ರಹಸೂಚಿತ ಅನಿಷ್ಟವನ್ನು ವ್ಯಕ್ತಿಯು ಅನುಭವಿಸಬೇಕಾಗಿರುವುದರಿಂದ ಆ ಅನಿಷ್ಟವನ್ನು ಕಡಿಮೆ ಮಾಡಿಕೊಳ್ಳಲು ದಶೆಯ ಆರಂಭದಲ್ಲೇ ಶಾಂತಿಯನ್ನು ಮಾಡಬೇಕು. ಯಾವ ಶಾಂತಿಯನ್ನು ಮಾಡಬೇಕೆಂಬುದರ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ    ಹೇಳಿರುವುದು ಸ್ವಲ್ಪ‌ ಮಾತ್ರ.   ವೈದಿಕ ಪ್ರಯೋಗ ಗ್ರಂಥಗಳನ್ನು, ತಂತ್ರಶಾಸ್ತ್ರದ  ಗ್ರಂಥಗಳನ್ನು ಆಶ್ರಯಿಸಿ ಜ್ಯೋತಿಷಿಯು ಯಾವ ಶಾಂತಿಯೆಂದು ನಿರ್ಧರಿಸಿ ಹೇಳಬೇಕಾಗುತ್ತದೆ. ಶಾಂತಿಯೆಂದರೆ ಜಪ, ಪೂಜೆ, ಹೋಮ, ಸ್ತುತಿ ಇತ್ಯಾದಿ ಯಾವುದೂ ಆಗಬಹುದು. ಈ ಶಾಂತಿಗಳಲ್ಲಿ ನವಗ್ರಹ ಶಾಂತಿ, ಪ್ರತ್ಯೇಕ ಗ್ರಹಶಾಂತಿ, ವೇದ ಮತ್ತು ತಂತ್ರಗಳಲ್ಲಿ ಪ್ರೋಕ್ತವಾದ ಮೃತ್ಯುಂಜಯ ಹೋಮ, ರುದ್ರಹೋಮವೇ ಮುಂತಾದ ತತ್ತದ್ದೇವತಾ ಅನುಷ್ಠಾನಗಳು ಸೇರಿವೆ.  ದಶಾಸಂಧಿಯಲ್ಲೂ ಆ ಗ್ರಹನು ಅರಿಷ್ಟಸೂಚಕನಾಗಿದ್ದರೆ ಸಂಧಿಕಾಲಕ್ಕೆ ಮುಂಚಿತವಾಗಿ ಶಾಂತಿಯನ್ನು ಮಾಡಬೇಕು. ಇದು ಎಲ್ಲಾ ಒಂಭತ್ತು ದಶೆಗಳ ಸಂಧಿಕಾಲಕ್ಕೂ ಅನ್ವಯಿಸುತ್ತದೆ. 

ಇಲ್ಲಿ ಕುಜ -ರಾಹು / ರಾಹು -ಬೃಹಸ್ಪತಿ / ಶುಕ್ರ -  ಆದಿತ್ಯ ಗ್ರಹಗಳು ಪರಸ್ಪರ ವಿರೋಧಿಗಳಾದ್ದರಿಂದ ಆ ಕಾಲದಲ್ಲಿ ಮಾತ್ರ ಸಂಧಿಶಾಂತಿ ಹೋಮವನ್ನು ಹೇಳಿದ್ದಾರಲ್ಲವೇ ? ಇದೇ ಸತ್ಯವೆಂದು ಕಾಣುತ್ತದೆ.  ಈ ಕುರಿತು ಜ್ಯೋತಿಷ ಗ್ರಂಥಗಳು ಏನು ಹೇಳಿವೆ ?

ಬೃಹಜ್ಜಾತಕ, ಜಾತಕ ಪಾರಿಜಾತ, ಫಲದೀಪಿಕಾ, ಸಾರಾವಲೀ,  ಉತ್ತರ ಕಾಲಾಮೃತ ಮುಂತಾದ ಜ್ಯೋತಿಷದ ಪ್ರಮಾಣ ಗ್ರಂಥಗಳಲ್ಲಿ ಈ ಮೂರು ದಶಾಸಂಧಿಗಳು ಮಾತ್ರ ವಿಶೇಷ ಅನಿಷ್ಟಪ್ರದವೆಂಬ ಉಕ್ತಿಯೇ ಇಲ್ಲ. ವಿಂಶೋತ್ತರೀ ದಶಾಪದ್ಧತಿಯನ್ನು ಹೇಳಿದ ಪರಾಶರ ಹೋರೆಯಲ್ಲಿಯೇ ಈ ಮೂರು ದಶಾಂತ್ಯಗಳು ಮಾತ್ರ ಅಶುಭಪ್ರದವೆಂಬ ಉಲ್ಲೇಖವಿಲ್ಲ. ಅಲ್ಲದೆ ದಶಾನಾಥ, ಭುಕ್ತಿನಾಥರ ಪರಸ್ಪರ ಸಂಬಂಧಗಳಿಂದ ಇಷ್ಟ, ಅನಿಷ್ಟ ಫಲಗಳನ್ನು ಹೇಳಿದ್ದಾರೆಯೇ ಹೊರತು ಎರಡು ದಶಾಧಿಪತಿಗಳ ಪರಸ್ಪರ ಸಂಬಂಧದಿಂದ ಶುಭಾಶುಭ ಫಲಗಳನ್ನು ಪ್ರಮಾಣ ಗ್ರಂಥಗಳು ಹೇಳಿಲ್ಲ! ರಾಹು ಛಾಯಾಗ್ರಹನಾದ್ದರಿಂದ ಆತನ ಶತೃತ್ವ, ಮಿತ್ರತ್ವಗಳೂ ಪ್ರಧಾನವಲ್ಲ. ಬಹುಗ್ರಂಥಗಳು ಸಪ್ತಗ್ರಹಗಳ ಶತೃತ್ವ, ಮಿತ್ರತ್ವಗಳನ್ನು ಮಾತ್ರ ಹೇಳಿವೆ. ಎರಡು ದಶಾನಾಥರ ಪರಸ್ಪರ ಸಂಬಂಧದಿಂದ ಫಲವನ್ನು ಹೇಳಿಲ್ಲವಾದ್ದರಿಂದ ಈ ಮೂರು ದಶಾಸಂಧಿಗಳಿಗೆ ಈ ಶತೃತ್ವ, ಮಿತ್ರತ್ವಗಳು  ಅನ್ವಯಿಸುವುದಿಲ್ಲ.

ಈ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ಸಂಧಿಶಾಂತಿ ಹೋಮಗಳ ಬಗ್ಗೆ ಪ್ರಾಚೀನ ಗ್ರಂಥಗಳು ಏನು ಹೇಳುತ್ತವೆ ?

ಶಾಂತಿಯ ಕುರಿತಾದ ಪ್ರಾಚೀನ ಗ್ರಂಥಗಳಾದ ಶಾಂತಿಸಾರ, ಶಾಂತಿರತ್ನ, ಶಾಂತಿ ಮಯೂಖ ಹಾಗೂ ಪ್ರಸಿದ್ಧ ಪ್ರಯೋಗ ಗ್ರಂಥಗಳಾದ ವಿಧಾನ ಪಾರಿಜಾತ, ಪ್ರಯೋಗ ಪಾರಿಜಾತ, ಋಗ್ವೇದೀಯ ಬ್ರಹ್ಮಕರ್ಮಸಮುಚ್ಚಯ,  ಹಿರಣ್ಯಕೇಶೀಯ ಬ್ರಹ್ಮಕರ್ಮಸಮುಚ್ಚಯ ಮುಂತಾದ ವುಗಳಲ್ಲಿ ಈಗ ಪ್ರಚಲಿತದಲ್ಲಿರುವ ಸಂಧಿಶಾಂತಿ ಹೋಮಗಳು ಪ್ರೋಕ್ತವಾಗಿಲ್ಲ.  ಈ ಗ್ರಂಥಗಳು ನವಗ್ರಹಶಾಂತಿ ಹೋಮವನ್ನು ಹೇಳಿವೆ. ಜ್ಯೋತಿಷದ ಕೆಲವು ಗ್ರಂಥಗಳಲ್ಲಿ, ಶಾಂತಿ ಮತ್ತು ಪ್ರಯೋಗ ಗ್ರಂಥಗಳಲ್ಲಿಯೂ ಸಹ  ಗ್ರಹವು ದುಃಸ್ಥವಾಗಿದ್ದಾಗ ಪ್ರತ್ಯೇಕ ಗ್ರಹಶಾಂತಿಯನ್ನು ವಿಧಿಸಿರುವುದು ಕಂಡುಬರುತ್ತದೆ. . "ಯಶ್ಚ ಯಸ್ಯ ಯದಾ ದುಃಸ್ಥಃ ಸ ತಂ ಯತ್ನೇನ ಪೂಜಯೇತ್*" ಎಂಬ ಯಾಜ್ಞವಲ್ಕ್ಯ ಸ್ಮೃತಿವಾಕ್ಯವೂ ಕೂಡ ಇದನ್ನು ಪುಷ್ಟೀಕರಿಸುತ್ತದೆ. ಈ ಯಾವ ಗ್ರಂಥಗಳೂ ಸುಸ್ಥ ಗ್ರಹನಿಗೆ ಶಾಂತಿಯನ್ನು ಮಾಡಲು ಹೇಳಿಲ್ಲ ಎಂಬುದು ಗಮನಾರ್ಹ. (ನವಗ್ರಹಶಾಂತಿ ಮಾಡಬಹುದು)
ಈ ಪ್ರತ್ಯೇಕ ಗ್ರಹಶಾಂತಿಗಳನ್ನು ಅನಿಷ್ಟಸೂಚಕ ಗ್ರಹದ ದಶೆಯ ಆರಂಭದಲ್ಲೇ ಮಾಡಬೇಕು. ದಶೆಯ ಸಂಧಿಕಾಲದಲ್ಲಿಯೂ ಮುಂಚಿತವಾಗಿ ಮಾಡಬಹುದು. ಇದು ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ದಶಾಸಂಧಿಗಳಿಗೆ ಮಾತ್ರ ಅನ್ವಯವಲ್ಲ. ಎಲ್ಲ ದಶೆಗಳಿಗೂ ಸಮಾನವಾಗಿ ಅನ್ವಯ. ಇನ್ನು  ಬೋಧಾಯನ ಗೃಹ್ಯಸೂತ್ರದಲ್ಲಿ ನವಗ್ರಹ ಪೂಜೆ ಮತ್ತು ನವಗ್ರಹಶಾಂತಿಯೂ ಸಹ ಉಕ್ತವಾಗಿದ್ದು ಅಲ್ಲಿ ಒಂದೋ, ಎರಡೋ ಗ್ರಹರು ವಿಷಮಸ್ಥರಾಗಿರುವಾಗ ಆ ಗ್ರಹಗಳನ್ನು ಮಾತ್ರ ಅರ್ಚಿಸುವಂತಿಲ್ಲ. ಎಲ್ಲಾ ಗ್ರಹರನ್ನೂ ಅರ್ಚಿಸಬೇಕು ಎಂಬ ನಿರ್ದೇಶವಿದೆ. ಇಲ್ಲಿ ನವಗ್ರಹಶಾಂತಿಯ ಅನಂತರ ಪುನಃ ಅನಿಷ್ಟಸ್ಥಿತ ಗ್ರಹರನ್ನು ಮಾತ್ರ ಅರ್ಚಿಸುವಂತಿಲ್ಲ. ಆಗಲೂ ಎಲ್ಲ ಗ್ರಹರನ್ನೂ ಅರ್ಚಿಸಬೇಕು. ಆಗ ನವಗ್ರಹಶಾಂತಿ ಪೂರ್ವಕ ನವಗ್ರಹಶಾಂತಿ ಮಾಡಬೇಕಾಗುತ್ತದೆ. 

ಪ್ರಾಚೀನವಾದ  ಶಾಂತಿ ಮತ್ತು ಪ್ರಯೋಗ ಗ್ರಂಥಗಳಲ್ಲಿ ಈ ಮೂರು ಸಂಧಿಶಾಂತಿ ಹೋಮಗಳನ್ನು ಹೇಳದಿದ್ದರೂ ಈಗ ರೂಢಿಯಲ್ಲಿರುವ ಮೂರು ಸಂಧಿಶಾಂತಿ ಹೋಮಗಳು ಶೌನಕ ಮಹರ್ಷಿಯ ವಚನಗಳನ್ನು ಆಧರಿಸಿಯೇ ರೂಪುಗೊಂಡಿವೆಯಲ್ಲವೇ ?

    ಶೌನಕೀಯವಾದ ಮೂಲಗ್ರಂಥಗಳಲ್ಲಿ ಈ ಸಂಧಿಶಾಂತಿ ಹೋಮಗಳ ವಿಧಿ ಇರುವುದು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಪ್ರಸಿದ್ಧ ಮತ್ತು ಬೃಹತ್ ಗ್ರಂಥವಾದ ವಿಧಾನ ಪಾರಿಜಾತದಲ್ಲಿ ಗ್ರಹಯಜ್ಞವು ಬಹು ವಿಸ್ತಾರವಾಗಿ ಉಕ್ತವಾಗಿದ್ದು ಅದರಲ್ಲಿ ನವಗ್ರಹಶಾಂತಿ ಕುರಿತಾದ ಶೌನಕೀಯ ವಚನಗಳು ಲಭ್ಯವಿದೆ. ನಿತ್ಯ, ನೈಮಿತ್ತಿಕ ಮತ್ತು ಕಾಮ್ಯವಾಗಿ ನವಗ್ರಹಶಾಂತಿಯನ್ನು ಶೌನಕ ಮಹರ್ಷಿಗಳು ಹೇಳಿದ್ದು ಗ್ರಹರ ಉಗ್ರಚೇಷ್ಟೆಯಲ್ಲಿ (ಅನಿಷ್ಟಸ್ಥಿತಿಯಲ್ಲಿ) ನವಗ್ರಹಶಾಂತಿಯನ್ನು  ಹೇಳಿದ್ದಾರೆ. ಅದೇ ವಿಧಾನಪಾರಿಜಾತದಲ್ಲಿ -  ಪುತ್ರಿಯ ವಿವಾಹ ಸಂದರ್ಭದಲ್ಲಿ ಮತ್ತು ಪುತ್ರನ ಉಪನಯನ ಸಮಯದಲ್ಲಿ ಗುರುಬಲ ಹಾಗೂ ರವಿಬಲ ಇಲ್ಲದಿದ್ದರೆ ಕ್ರಮವಾಗಿ  ಬೃಹಸ್ಪತಿ ಶಾಂತಿಹೋಮ ಮತ್ತು ರವಿಶಾಂತಿ ಹೋಮಗಳನ್ನು ಶೌನಕ ಋಷಿಪ್ರೋಕ್ತವೆಂದೇ  ಉಲ್ಲೇಖಿಸಿದ್ದಾರೆ. ಈ ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿಗಳನ್ನು ಪ್ರಯೋಗ ಪಾರಿಜಾತ ಮತ್ತು ಶಾಂತಿರತ್ನ ಗ್ರಂಥಗಳೂ ಕೂಡ ಶೌನಕಪ್ರಣೀತವೆಂದೇ ಹೇಳಿವೆ. ಪಾಂಡುರಂಗ ವಾಮನ ಕಾಣೆಯವರು "ಧರ್ಮಶಾಸ್ತ್ರದ ಇತಿಹಾಸ" ಗ್ರಂಥದಲ್ಲಿ ಶೌನಕೀಯವಾದ ಕೆಲವು ಗ್ರಂಥಗಳ ಪಟ್ಟಿಯನ್ನು ಕೊಟ್ಟಿದ್ದು ಅವುಗಳಲ್ಲಿ ನವಗ್ರಹಶಾಂತಿ ಮತ್ತು ಬೃಹಸ್ಪತಿ ಶಾಂತಿ ವಿಧಿಗಳು ಉಕ್ತವಾಗಿವೆಯೆಂದು ಬರೆದಿದ್ದಾರೆ. ಈ ಎಲ್ಲ ಆಧಾರಗಳಿಂದ ನವಗ್ರಹಶಾಂತಿ, ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿ ವಿಧಾನಗಳನ್ನು ಶೌನಕರು ಹೇಳಿದ್ದಾರೆಂದು ವಿಶ್ವಾಸವಿಡಬಹುದಾಗಿದೆ. ವಿಧಾನಪಾರಿಜಾತದಲ್ಲಿ ಶೌನಕೋಕ್ತ ಆದಿತ್ಯ ಶಾಂತಿಯ ತುದಿಯಲ್ಲಿ "ಏವಂ ಯೋ ಯೋ ಗ್ರಹೋ ದುಷ್ಟಸ್ತತ್ತಚ್ಛಾಂತಿಂ ಸಮಾಚರೇತ್" ಎಂಬ ವಾಕ್ಯವಿದೆ. ಆದಿತ್ಯ ಶಾಂತಿಯ ಕ್ರಮದಲ್ಲಿಯೇ ಯಾವ ಯಾವ ಗ್ರಹರು ದುಷ್ಟರಾಗಿದ್ದಾರೆಯೋ ಆ ಗ್ರಹದ ಶಾಂತಿ ಮಾಡಿರಿ ಎಂದು ನಿರ್ದೇಶನವಿದೆ. ಇಲ್ಲಿ ವಿವಾಹ/ಉಪನಯನಗಳಲ್ಲಿ ಅನಿಷ್ಟಸ್ಥಿತ ಗ್ರಹರಿಗೆ ಶಾಂತಿಯನ್ನು ಹೇಳಿದ್ದು  ಇದು ಉಪನಯನ ವಿವಾಹಗಳ ಆರಂಭದಲ್ಲಿ ಮಾಡುವುದಾಗಿದೆ. ಹೀಗೆ ವಿವಾಹ, ಉಪನಯನಗಳಲ್ಲಿ ಗುರುಬಲ, ರವಿಬಲ, ಇತರ ಗ್ರಹಬಲ ಇಲ್ಲದಿದ್ದಾಗ / ದುಷ್ಟಸ್ಥಾನ ಸ್ಥಿತರಾಗಿದ್ದಾಗ ಮಾತ್ರ ಪ್ರತ್ಯೇಕ ಗ್ರಹಶಾಂತಿಯನ್ನು ಹೇಳಿದ ಶೌನಕ ಮಹರ್ಷಿಗಳು ಸೂತ್ರಕಾರರೂ, ಜ್ಯೋತಿಷ ಶಾಸ್ತ್ರ ಪ್ರವರ್ತಕರೂ ಆಗಿ -  ಕುಜರಾಹುದಶಾಸಂಧಿಯಲ್ಲಿ ಕುಜ/ಚಂದ್ರ/ರಾಹುಗ್ರಹರ, ರಾಹುಬೃಹಸ್ಪತಿ ದಶಾಸಂಧಿಯಲ್ಲಿ ರಾಹು/ಕುಜ/ಗುರುಗ್ರಹರ, ಶುಕ್ರಾದಿತ್ಯ ದಶಾಸಂಧಿಯಲ್ಲಿ ಶುಕ್ರ/ಕೇತು/ರವಿಗ್ರಹರ ಇಷ್ಟಾನಿಷ್ಟ ಸ್ಥಿತಿ ಎಲ್ಲವನ್ನೂ ಬದಿಗೊತ್ತಿ ಆ ಗ್ರಹರು ಅನಿಷ್ಟಪ್ರದರೆಂದೇ ಪರಿಗಣಿಸಿ ಶಾಂತಿಯೊಂದನ್ನು ಬರೆದಿರಲು ಸಾಧ್ಯವೇ ? ಸಾಧ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ.  ಈಗ ನಡೆಯುತ್ತಿರುವ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ 
    ಸಂಧಿಶಾಂತಿಗಳು  ಜಾತಕದಲ್ಲಿ ಆ ಆ  ಗ್ರಹರು ಇಷ್ಟಸ್ಥಾನದಲ್ಲಿದ್ದಾರೋ, ಅನಿಷ್ಟ ಸ್ಥಾನದಲ್ಲಿದ್ದಾರೋ ಯಾವುದನ್ನೂ ನೋಡದೆ ಆ ಗ್ರಹರು ಅನಿಷ್ಟಪ್ರದರೆಂದೇ ಪರಿಗಣಿಸಿ ಶಾಂತಿಯನ್ನು ಮಾಡುವುದಾಗಿದೆ. ಜ್ಯೋತಿಷದಲ್ಲಿ ಗ್ರಹರ ಇಷ್ಟಾನಿಷ್ಟ ಸ್ಥಿತಿ ನೋಡಿಯೇ ಪ್ರತ್ಯೇಕ ಗ್ರಹಶಾಂತಿಯನ್ನು ನಿರ್ದೇಶಿಸಬೇಕಾಗುತ್ತದೆ. ಇಲ್ಲಿ ಮೂರೂ ಸಂಧಿಶಾಂತಿಗಳಲ್ಲಿ ಬರುವ ಮೂರು ಮೂರು ಗ್ರಹರಲ್ಲಿ ಯಾರು ಅನಿಷ್ಟಪ್ರದ ಗ್ರಹವೋ ಆ ಗ್ರಹಕ್ಕೆ ಮಾತ್ರ ಶಾಂತಿಯನ್ನು ಮಾಡಬೇಕು. ಅದನ್ನು ಜ್ಯೋತಿಷಿಗಳು ಸೂಚಿಸಬೇಕಾಗುತ್ತದೆ.  ಆಗ ಇದನ್ನು ಸಂಧಿಶಾಂತಿ ಹೋಮವೆಂದು ಕರೆಯುವಂತಿಲ್ಲ. ಆಯಾ ಗ್ರಹದಶಾಂತಿಯೆಂದೇ ಕರೆಯಬೇಕು. 
    ರಾಹುಬೃಹಸ್ಪತಿ ಸಂಧಿಶಾಂತಿ ಪ್ರಯೋಗದಲ್ಲಿ ಲಭಿಸುವ ಶೌನಕೋಕ್ತವೆಂದು ಹೇಳಲಾದ ಶ್ಲೋಕಗಳ ತುದಿಯಲ್ಲಿ ಇತ್ಯಾದಿ ಎಂದು ಇರುವುದರಿಂದ ಮುಂದಿನ ಭಾಗ ಇದೆಯೆಂದೇ ಅರ್ಥ. ಮುಂದೊಂದು ದಿನ ಅದು ಪೂರ್ತಿಯಾಗಿ ಲಭಿಸೀತು. ಲಭಿಸಿದರೂ ಕೂಡ - ಗ್ರಹರು ಅನಿಷ್ಟಸ್ಥಾನದಲ್ಲಿದ್ದರೆ  ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿ, ಉಳಿದ  ಗ್ರಹಶಾಂತಿಯನ್ನು ವಿಧಿಸಿದ ಶೌನಕ ಮಹರ್ಷಿಯ ವಾಕ್ಯಗಳು ಪ್ರಾಚೀನ ಗ್ರಂಥಗಳಲ್ಲಿ ಲಭಿಸುವುದರಿಂದ/ ಶೌನಕೋಕ್ತವಾದ ಹಲವು ಶಾಂತಿಗಳು ಈ ಗ್ರಂಥಗಳಲ್ಲಿ ಲಭಿಸುವುದರಿಂದ/ ಈ ಮೂರು ಸಂಧಿಶಾಂತಿಗಳು ಆ ಗ್ರಂಥಗಳಲ್ಲಿ. ಎಲ್ಲಿಯೂ ಇಲ್ಲದಿರುವುದರಿಂದ - ಇದು ಆ ವಾಕ್ಯಗಳ ವಿರುದ್ಧವಾಗಿ ಗ್ರಹರ ಇಷ್ಟಾನಿಷ್ಟ ಸ್ಥಿತಿಯನ್ನು ಪರಿಗಣಿಸದೆ ಶಾಂತಿಯನ್ನು ಹೇಳುವ ಶ್ಲೋಕಗಳಾಗುವುದರಿಂದ ಶೌನಕಪ್ರೋಕ್ತವೆಂದು ಹೇಳಲಾಗದು. ಶೌನಕರ ಹೆಸರಿನಲ್ಲಿ ಪಂಡಿತರೊಬ್ಬರು  ಶ್ಲೋಕರಚನೆ ಮಾಡಿ ಸೇರಿಸಿದ್ದಾರೆ ಎಂದೇ ಖಚಿತವಾಗಿ ಊಹಿಸಬಹುದಾಗಿದೆ. ಶೌನಕರು ಹೇಳಿಲ್ಲದ ವಾಕ್ಯಗಳನ್ನು ಶೌನಕರದ್ದೆಂದು ನಂಬಿ ಅದಕ್ಕೊಂದು ಪ್ರಯೋಗ ವಿಧಾನ ಸಿದ್ಧವಾಗಿ 75 -100 ವರ್ಷಗಳಿಂದೀಚೆಗೆ ಪ್ರಚಲಿತಕ್ಕೆ ಬಂದಿದೆಯಷ್ಟೆ. ಪ್ರತ್ಯೇಕ ಗ್ರಹಶಾಂತಿ ವಿಧಾನವೆಂದು ಪರಿಗಣಿಸಲಿಕ್ಕೂ ಕೂಡ ಅದರಲ್ಲಿ ಹಲವಾರು ತೊಡಕುಗಳಿವೆ.   ಇತ್ತ ಜ್ಯೋತಿಷದ ನಿಯಮಗಳನ್ನು ಅನುಸರಿಸದೆ, ಅತ್ತ ಶೌನಕರ ವಚನಗಳನ್ನೂ ಅನುಸರಿಸದೆ, ಗೃಹ್ಯಸೂತ್ರವನ್ನೂ ಅನುಸರಿಸದೆ ರಚಿಸಿರುವ ಶಾಂತಿಯಾಗಿದೆ. ಶೌನಕ ಮಹರ್ಷಿಗಳು ಗ್ರಹರ ದುಃಸ್ಥಾನ ಸ್ಥಿತಿ, ಸುಸ್ಥಾನಸ್ಥಿತಿ ಯಾವುದನ್ನೂ ಪರಿಗಣಿಸದೆ  ಮೂರುಸಂಧಿಶಾಂತಿ ಹೋಮಗಳನ್ನು ರಚಿಸಿರಲಾರರು ಎಂಬುದೇ ನನ್ನ ಅಭಿಪ್ರಾಯವಾಗಿದೆ.

ಸಂಧಿಶಾಂತಿ ಹೋಮವನ್ನು ಮಾಡುವ ಉದ್ದೇಶವೇನು ?

ಸಂಧಿಕಾಲವು ಅಶುಭಪ್ರದವೆಂದು ಶಾಸ್ತ್ರಕಾರರು ಹೇಳಿರುವುದರಿಂದ ಆ ಕಾಲದಲ್ಲಿ ಅಪಮೃತ್ಯುವೋ, ರೋಗಬಾಧೆಯೋ, ಅಪಘಾತವೋ, ಉದ್ಯೋಗದಲ್ಲಿ ಸಂಕಷ್ಟವೋ,. ಕುಟುಂಬದ ಸದಸ್ಯರಿಗೆ ತೊಂದರೆಯೋ ಯಾವುದಾದರೂ ಆಗಬಹುದಾಗಿದೆ. ಈ ಅನಿಷ್ಟಗಳನ್ನು ಕಡಿಮೆ ಮಾಡಿಕೊಳ್ಳುವುದೇ ದಶಾಸಂಧಿಶಾಂತಿಯ ಪ್ರಧಾನ ಉದ್ದೇಶ.

ಈ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ದಶಾಸಂಧಿಗಳಲ್ಲಿ ಮಾತ್ರ ಶಾಂತಿಹೋಮವನ್ನು ಮಾಡುವುದು  ಬಲವಾಗಿ ಆಚರಣೆಯಲ್ಲಿ ಇರುವುದರಿಂದ ಜ್ಯೋತಿಷಿಗಳು ಹೆಚ್ಚಿನ ಸಂದರ್ಭಗಳಲ್ಲಿ ಶಾಂತಿಹೋಮವನ್ನು ಸೂಚಿಸಲೇಬೇಕಾಗುತ್ತದೆ. ಆಗ ಯಾವ ಶಾಂತಿಯನ್ನು ಮಾಡುವುದುತ್ತಮ?

ಗ್ರಹರ ವಿಷಮಸ್ಥಿತಿಗೆ ಬೋಧಾಯನ ಗೃಹ್ಯಸೂತ್ರದಲ್ಲಿ ನವಗ್ರಹಾರಾಧನೆ  ಹೇಳಿರುವುದರಿಂದ ಮೊದಲಿಗೆ ನವಗ್ರಹಶಾಂತಿಯನ್ನು ಮಾಡುವುದುತ್ತಮ. ಅನಂತರ ದುಃಸ್ಥಗ್ರಹರಿಗೆ ಮಾತ್ರ ಪ್ರತ್ಯೇಕ ಹೋಮ ಮಾಡಬಹುದು. ನವಗ್ರಹಶಾಂತಿಯನ್ನೇ ಮಾಡಿದ ಮೇಲೆ ಪ್ರತ್ಯೇಕ ಗ್ರಹಶಾಂತಿಯನ್ನೋ, ಸಂಧಿಶಾಂತಿ ಹೋಮವನ್ನೋ ಮಾಡುವುದರ ಬದಲು  ಬೋಧಾಯನಾಚಾರ್ಯರು ಹೇಳಿರುವ ದೂರ್ವಾಮೃತ್ಯುಂಜಯ ಶಾಂತಿ ಮತ್ತು ಮಹಾಮೃತ್ಯುಂಜಯ ಶಾಂತಿ ಹಾಗೂ ಶಾಂತಿಕಾಮ ಆಯುಷ್ಯಕಾಮಕ್ಕೆ ಹೇಳಿದ ರುದ್ರಜಪ, ರುದ್ರಾಭಿಷೇಕ, ರುದ್ರಹೋಮಗಳು, ಶಂಕರಾಚಾರ್ಯರ ಪ್ರಪಂಚಸಾರ ತಂತ್ರದಲ್ಲಿ ಪ್ರೋಕ್ತವಾದ ತ್ರ್ಯಂಬಕ ಹೋಮ, ಮೃತ್ಯುಂಜಯ ಹೋಮ, ಶತಾಕ್ಷರೀ ಹೋಮ ಮುಂತಾದ ಹೋಮಗಳು , ಅಪಮೃತ್ಯುನಿವಾರಣದ್ವಾರಾ ಆಯುಃಪ್ರದ ಮಂತ್ರಗಳ, ಆಪನ್ನಿವಾರಕ ಮಂತ್ರಗಳ ಅನುಷ್ಠಾನ ಇವೇ ಮುಂತಾದ್ದನ್ನು ಆಚರಿಸುವುದು  ವಿಹಿತವೆಂದು ನನ್ನ ಅಭಿಪ್ರಾಯ.  ಈ ಶಾಂತಿಗಳಲ್ಲಿ ಪಾಪ, ಅಪಮೃತ್ಯು, ರೋಗ, ಆಪನ್ನಿವಾರಕ ಮಂತ್ರಗಳೂ, ಆಯುಃಪ್ರದ ಮಂತ್ರಗಳೂ ವಿಶೇಷವಾಗಿವೆ. ದೂರ್ವೆ ಇತ್ಯಾದಿ ಆಯುಃಪ್ರದ ದ್ರವ್ಯಗಳ ಹೋಮವೂ ಇದೆ. ಪ್ರಮಾಣಗ್ರಂಥಪ್ರೋಕ್ತವಾದುದೂ ಆಗಿದೆ.  ದೋಷಗಳ ಬಲಾಬಲಕ್ಕೆ ಅನುಸಾರವಾಗಿ ಯಾವ ಶಾಂತಿಯೆಂದು ನಿರ್ಧರಿಸುವುದು ಜ್ಯೋತಿಷಿಯ ಕರ್ತವ್ಯವಾಗಿರುತ್ತದೆ.


ರವೀಂದ್ರ ಶರ್ಮಾ ಕೋಣನಕಟ್ಟೆ.
                         

ಬಣ್ಣಗಳ ರಹಸ್ಯ

ಶಿವನಿಂದ ಪಾರ್ವತಿಗೆ ಬಣ್ಣಗಳ ರಹಸ್ಯ
ಪೂರ್ವ ಕಾಲದಲ್ಲಿ ಪಾರ್ವತಿಯು ಶಿವನಿಗೆ "ಸ್ವಾಮಿ, ನೀವು ಭೂಲೋಕದಲ್ಲಿ ಸಂಚರಿಸುತ್ತಿರುವಾಗ ಅಲ್ಲಿನ ಜನರ ನಡವಳಿಕೆಗಳನ್ನು ಗಮನಿಸಿರಬಹುದು. ಅವರು ಏಕೆ ಹೀಗೆ ವಿವಿಧ ರೀತಿಯಲ್ಲಿ ವರ್ತಿಸುತ್ತಾರೆ? ಕೆಲವರು ಸದಾ ಸಂತೋಷವಾಗಿರುತ್ತಾರೆ, ಇನ್ನು ಕೆಲವರು ದುಃಖಿತರಾಗಿರುತ್ತಾರೆ. ಕೆಲವರು ಪ್ರೀತಿಯಿಂದ ಇತರರನ್ನು ಕಾಣುತ್ತಾರೆ, ಕೆಲವರು ದ್ವೇಷದಿಂದ ವರ್ತಿಸುತ್ತಾರೆ. ಇದಕ್ಕೆ ಕಾರಣವೇನು?" ಎಂದು ಪ್ರಶ್ನಿಸಿದಳು.

ಶಿವನು ಪಾರ್ವತಿಯ ಪ್ರಶ್ನೆಗೆ ಮೆಚ್ಚಿ, ಅವಳಿಗೆ ಒಂದು ವಿಶೇಷವಾದ ಉತ್ತರವನ್ನು ನೀಡಲು ನಿರ್ಧರಿಸಿದ. ಅವನು ತನ್ನ ಮೂರನೇ ನೇತ್ರವನ್ನು ತೆರೆದು ಒಂದು ಅದ್ಭುತವಾದ ದೃಶ್ಯಾವಳಿಯನ್ನು ಸೃಷ್ಟಿಸಿ, "ಪಾರ್ವತೀ, ನೋಡು. ಇದೇ ಬಣ್ಣಗಳ ಲೋಕ" ಎಂದು ಶಿವನು ಹೇಳಿದ.

ಪಾರ್ವತಿಯ ಮುಂದೆ ಒಂದು ಅದ್ಭುತ ಲೋಕವೇ ತೆರೆದುಕೊಂಡಿತು. ಅಲ್ಲಿ ಎಲ್ಲೆಡೆ ಬಣ್ಣಗಳೇ ಬಣ್ಣಗಳು. ಕೆಂಪು, ಹಸಿರು, ಹಳದಿ, ನೀಲಿ, ಕೇಸರಿ, ಬಿಳಿ, ಕಪ್ಪು - ಹೀಗೆ ಅಸಂಖ್ಯಾತ ಬಣ್ಣಗಳು ತುಂಬಿದ್ದವು. ಆ ಬಣ್ಣಗಳು ಕೇವಲ ವರ್ಣಗಳಾಗಿರದೆ, ಅವುಗಳಲ್ಲಿ ಜೀವಕಳೆ ಇತ್ತು. ಪ್ರತಿಯೊಂದು ಬಣ್ಣವೂ ಒಂದು ನಿರ್ದಿಷ್ಟ ಭಾವನೆಯನ್ನು ಸೂಸುತ್ತಿತ್ತು.

*ಶಿವನು ಆ ಬಣ್ಣಗಳ ಬಗ್ಗೆ ವಿವರಿಸಲಾರಂಭಿಸಿದನು*:--
*ಕೆಂಪು ಬಣ್ಣ*:-- ಇದು ಪ್ರೀತಿಯ ಸಂಕೇತ. ಪ್ರೇಮಿಗಳ ಹೃದಯದಲ್ಲಿ ಹರಿಯುವ ಭಾವನೆ ಇದು. ತ್ಯಾಗ, ಶೌರ್ಯ, ಉತ್ಸಾಹಗಳನ್ನೂ ಇದು ಸೂಚಿಸುತ್ತದೆ. ನಿನ್ನಲ್ಲಿರುವ ಮಾತೃಪ್ರೀತಿಯೂ ಕೆಂಪು ಬಣ್ಣದಿಂದಲೇ ಪ್ರಕಟವಾಗುತ್ತದೆ, ಪಾರ್ವತೀ.

*ಹಸಿರು ಬಣ್ಣ*:-- ಇದು ಹೊಸ ಚಿಗುರಿನ ಸಂಕೇತ. ಪ್ರಕೃತಿಯಲ್ಲಿ ಹೊಸ ಜೀವನದ ಆರಂಭವನ್ನು ಇದು ತೋರಿಸುತ್ತದೆ. ಸಮೃದ್ಧಿ, ಫಲವತ್ತತೆ, ಶಾಂತಿ - ಇವೆಲ್ಲವೂ ಹಸಿರಿನ ಲಕ್ಷಣಗಳು. ಭೂಲೋಕದ ರೈತನು ತನ್ನ ಹೊಲದಲ್ಲಿ ಹಸಿರು ಬೆಳೆಯನ್ನು ಕಂಡಾಗ ಅನುಭವಿಸುವ ಸಂತೋಷವೇ ಬೇರೆ.

*ಹಳದಿ ಬಣ್ಣ*:-- ಇದು ಸಂತೋಷದ ಸಂಕೇತ. ಜ್ಞಾನ, ವಿದ್ಯೆ, ಐಶ್ವರ್ಯಗಳನ್ನೂ ಇದು ಸೂಚಿಸುತ್ತದೆ. ಸೂರ್ಯನ ಕಿರಣಗಳಲ್ಲಿರುವ ಹಳದಿ ಬಣ್ಣವು ಜೀವನದಲ್ಲಿ ಬೆಳಕನ್ನು ತರುತ್ತದೆ. ನಿನ್ನ ಪುತ್ರ ಕಾರ್ತಿಕೇಯನ ಜ್ಞಾನದ ಕಾಂತಿಯೂ ಹಳದಿಯೇ.

*ನೀಲಿ ಬಣ್ಣ*:-- ಇದು ಶಾಂತಿ ಮತ್ತು ಗಾಂಭೀರ್ಯದ ಸಂಕೇತ. ಆಕಾಶದ ಅಪಾರತೆಯನ್ನು, ಸಾಗರದ ಅಗಾಧತೆಯನ್ನು ಇದು ತೋರಿಸುತ್ತದೆ. ನನ್ನ ಕಂಠವೂ ನೀಲಿಯಾಗಿರುವುದು ಸರ್ವವನ್ನೂ ತನ್ನಲ್ಲಿ ಅಡಗಿಸಿಕೊಳ್ಳುವ ಸಾಮರ್ಥ್ಯದ ಸಂಕೇತ.

*ಕೇಸರಿ ಬಣ್ಣ*:--ಇದು ತ್ಯಾಗ ಮತ್ತು ಧೈರ್ಯದ ಸಂಕೇತ. ಸೂರ್ಯೋದಯದ ಕಾಂತಿಯು ಮನುಷ್ಯನಿಗೆ ಹೊಸ ದಿನದ ಸಂದೇಶವನ್ನು ನೀಡುತ್ತದೆ. ಸನ್ಯಾಸಿಗಳು ಧರಿಸುವ ವಸ್ತ್ರದ ಬಣ್ಣವೂ ಇದೇ ಆಗಿದೆ - ಇದು ವೈರಾಗ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ.

*ಬಿಳಿ ಬಣ್ಣ*:-- ಇದು ಪವಿತ್ರತೆ ಮತ್ತು ಶುದ್ಧತೆಯ ಸಂಕೇತ. ಹಿಮದಂತೆ ಶುಭ್ರವಾದ ಈ ಬಣ್ಣವು ಸತ್ಯದ ಪ್ರತೀಕ. ನಿರ್ಮಲ ಮನಸ್ಸಿನ ಸಂಕೇತವೂ ಇದೇ.

*ಕಪ್ಪು ಬಣ್ಣ*:-- ಇದು ರಹಸ್ಯ ಮತ್ತು ಆಳದ ಸಂಕೇತ. ರಾತ್ರಿಯ ಕತ್ತಲೆಯಲ್ಲಿ ಅಡಗಿರುವ ನಕ್ಷತ್ರಗಳಂತೆ, ಕಪ್ಪು ಬಣ್ಣದಲ್ಲಿ ಅನೇಕ ಸಾಧ್ಯತೆಗಳು ಅಡಗಿವೆ. ಕಾಲವನ್ನೂ ನಾನು ಕಪ್ಪು ಬಣ್ಣದಲ್ಲೇ ಪ್ರತಿನಿಧಿಸುತ್ತೇನೆ.

ಶಿವನ ಮಾತುಗಳನ್ನು ಕೇಳಿದ ಪಾರ್ವತಿಗೆ ಅಚ್ಚರಿಯಾಯಿತು. "ಸ್ವಾಮಿ, ಇಷ್ಟೊಂದು ಸುಂದರವಾದ ಬಣ್ಣಗಳನ್ನು ಸೃಷ್ಟಿಸಿದ್ದೀರಿ. ಆದರೆ ಭೂಲೋಕದ ಜನರಿಗೆ ಈ ಬಣ್ಣಗಳ ಮಹತ್ವ ತಿಳಿದಿದೆಯೇ?" ಎಂದು ಕೇಳಿದಳು.

ಶಿವನು ನಗುತ್ತಾ "ಪಾರ್ವತೀ, ಭೂಲೋಕದ ಜನರಿಗೆ ಸ್ವಲ್ಪಮಟ್ಟಿಗೆ ಈ ಬಣ್ಣಗಳ ಮಹತ್ವ ತಿಳಿದಿದೆ. ಅವರು ವಸಂತ ಋತುವಿನಲ್ಲಿ ಬರುವ ಫಾಲ್ಗುಣ ಪೂರ್ಣಿಮೆಯ ದಿನದಂದು ಬಣ್ಣಗಳ ಹಬ್ಬವನ್ನು ಆಚರಿಸುತ್ತಾರೆ. ಅದಕ್ಕೆ 'ರಂಗ ಪಂಚಮಿ' ಎಂದು ಹೆಸರು. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅವರು ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ" ಎಂದು ಹೇಳಿದ.

"ಆದರೆ ಸ್ವಾಮಿ, ಬಣ್ಣಗಳನ್ನು ಎರಚಿಕೊಳ್ಳುವುದರಿಂದ ಅವರಿಗೆ ಏನು ಪ್ರಯೋಜನ?" ಎಂದು ಪಾರ್ವತಿಯು ಕೇಳಿದಾಗ "ಪ್ರಿಯೆ, ಬಣ್ಣಗಳನ್ನು ಎರಚಿಕೊಳ್ಳುವುದು ಕೇವಲ ಆಟವಲ್ಲ. ಅದರ ಹಿಂದೆ ಒಂದು ಗಹನ ಅರ್ಥವಿದೆ. ಜೀವನದಲ್ಲಿ ವಿವಿಧ ಭಾವನೆಗಳು ಬರುತ್ತವೆ - ಪ್ರೀತಿ, ಸಂತೋಷ, ಶಾಂತಿ, ಉತ್ಸಾಹ, ತ್ಯಾಗ, ಜ್ಞಾನ. ಆದರೆ ಮನುಷ್ಯನು ತನ್ನೊಳಗೆ ಈ ಭಾವನೆಗಳನ್ನು ಬೆಳೆಸಿಕೊಳ್ಳಲು ಮರೆತುಬಿಡುತ್ತಾನೆ. ಆಗ ಅವನು ಬಾಹ್ಯ ಬಣ್ಣಗಳ ಮೂಲಕ ಈ ಆಂತರಿಕ ಭಾವನೆಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ." ಎಂದು ಶಿವ ವಿವರಿಸಿದ.

"ಅದರ ಅರ್ಥವೇನು?" ಎಂದು ಪಾರ್ವತಿಯು ಕುತೂಹಲದಿಂದ ಕೇಳಿದಳು. "ನೋಡು, ಒಬ್ಬನು ಇನ್ನೊಬ್ಬನಿಗೆ ಕೆಂಪು ಬಣ್ಣವನ್ನು ಎರಚಿದಾಗ, ಅವನು "ನಿನ್ನ ಮೇಲೆ ನನಗೆ ಪ್ರೀತಿಯಿದೆ" ಎಂಬ ಸಂದೇಶವನ್ನು ಕೊಡುತ್ತಾನೆ. ಹಸಿರು ಬಣ್ಣವನ್ನು ಎರಚಿದಾಗ "ನಿನ್ನ ಜೀವನದಲ್ಲಿ ಹೊಸ ಚಿಗುರು ಬೆಳೆಯಲಿ" ಎಂದು ಆಶೀರ್ವದಿಸುತ್ತಾನೆ. ಹಳದಿ ಬಣ್ಣವನ್ನು ಎರಚಿದಾಗ "ನೀನು ಸದಾ ಸಂತೋಷವಾಗಿರು" ಎಂದು ಹಾರೈಸುತ್ತಾನೆ. ಹೀಗೆ ಪ್ರತಿಯೊಂದು ಬಣ್ಣವೂ ಒಂದು ಭಾವನೆಯ ಸಂಕೇತವಾಗುತ್ತದೆ.

ಪಾರ್ವತಿಯು ಶಿವನ ಮಾತುಗಳನ್ನು ಕೇಳಿ ಬಹಳ ಸಂತೋಷಪಟ್ಟಳು. "ಸ್ವಾಮಿ, ಈ ಬಣ್ಣಗಳ ಹಬ್ಬವನ್ನು ನಾನೂ ನೋಡಬೇಕೆನಿಸುತ್ತದೆ" ಎಂದಳು. ಅದಕ್ಕೆ ಶಿವನು ಒಪ್ಪಿ, ತನ್ನ ದಿವ್ಯದೃಷ್ಟಿಯನ್ನು ಪಾರ್ವತಿಗೆ ನೀಡಿದ. ಪಾರ್ವತಿಯು ಭೂಲೋಕದಲ್ಲಿ ನಡೆಯುತ್ತಿರುವ ರಂಗ ಪಂಚಮಿ ಹಬ್ಬವನ್ನು ನೋಡಿದಳು. ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಬಣ್ಣಗಳಲ್ಲಿ ಮಿಂದೆದ್ದಿದ್ದರು. ಎಲ್ಲೆಡೆ ಸಂತೋಷದ ವಾತಾವರಣವಿತ್ತು. ಯಾರೂ ಯಾರನ್ನೂ ಜಾತಿ, ಮತ, ವರ್ಗ, ಬಣ್ಣದ ಭೇದವೆಂದು ನೋಡುತ್ತಿರಲಿಲ್ಲ. ಎಲ್ಲರೂ ಒಂದಾಗಿ ಬಣ್ಣಗಳಾಡುತ್ತಿದ್ದರು.

"ಇದು ನಿಜಕ್ಕೂ ಅದ್ಭುತವಾಗಿದೆ, ಸ್ವಾಮಿ! ಬಣ್ಣಗಳು ಜನರನ್ನು ಒಂದುಗೂಡಿಸುತ್ತಿವೆ" ಎಂದು ಪಾರ್ವತಿಯು ಉದ್ಗರಿಸಿದಳು. ಶಿವನು "ಹೌದು, ಪಾರ್ವತೀ. ಬಣ್ಣಗಳು ಮನುಷ್ಯರನ್ನು ಒಂದುಗೂಡಿಸುತ್ತವೆ. ಅವು ಜೀವನದಲ್ಲಿ ವೈವಿಧ್ಯತೆಯನ್ನು ತರುತ್ತವೆ. ಪ್ರತಿಯೊಂದು ಬಣ್ಣಕ್ಕೂ ಒಂದು ಮಹತ್ವವಿದೆ, ಒಂದು ಸಂದೇಶವಿದೆ. ಈ ಬಣ್ಣಗಳ ಹಬ್ಬವನ್ನು 'ಹೋಳಿ' ಎಂದೂ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು 'ರಂಗ ಪಂಚಮಿ' ಎಂದು ಐದು ದಿನಗಳ ಕಾಲ ಆಚರಿಸುತ್ತಾರೆ. ಐದು ದಿನಗಳು ಐದು ಪ್ರಮುಖ ಭಾವನೆಗಳನ್ನು ಸಂಕೇತಿಸುತ್ತವೆ - ಪ್ರೀತಿ, ಸಂತೋಷ, ಶಾಂತಿ, ಧೈರ್ಯ, ಮತ್ತು ಜ್ಞಾನ." ಎಂದು ಹೇಳಿದ.

ಅಂದಿನಿಂದ, ಶಿವ-ಪಾರ್ವತಿಯರು ಪ್ರತಿವರ್ಷವೂ ಫಾಲ್ಗುಣ ಪೂರ್ಣಿಮೆಯಂದು ಭೂಲೋಕದ ಜನರು ಆಚರಿಸುವ ರಂಗ ಪಂಚಮಿ ಹಬ್ಬವನ್ನು ವೀಕ್ಷಿಸುತ್ತಾರೆಂಬ ಭಕ್ತರ ನಂಬಿಕೆ. ಈ ಹಬ್ಬವು ಬಣ್ಣಗಳ ಮೂಲಕ ಜೀವನದ ವಿವಿಧ ಭಾವನೆಗಳನ್ನು ಆಚರಿಸುವ, ಸಂಭ್ರಮಿಸುವ, ಮತ್ತು ಹಂಚಿಕೊಳ್ಳುವ ಒಂದು ಮಾರ್ಗವಾಗಿದೆ.

ಪ್ರತಿಯೊಂದು ಬಣ್ಣವೂ ಜೀವನದ ಒಂದು ಮಗ್ಗುಲನ್ನು ಪ್ರತಿನಿಧಿಸುತ್ತದೆ ಎಂಬ ಈ ಕಥೆಯು, ರಂಗ ಪಂಚಮಿ ಅಥವಾ ಹೋಳಿ ಹಬ್ಬಕ್ಕೆ ಒಂದು ವಿಶಿಷ್ಟ ಆಯಾಮವನ್ನು ನೀಡುತ್ತದೆ. ಕೇವಲ ಬಣ್ಣಗಳಾಟವಲ್ಲ, ಅದು ಜೀವನದ ಸಂಭ್ರಮದ ಆಚರಣೆ - ಇದೇ ಈ ಕಥೆಯ ಸಂದೇಶ.

ವಾದವನ್ನು ಯಾರೊಂದಿಗೆ ಮಾಡಬೇಕು?

ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಕತ್ತೆಯೊಂದು , ಹುಲಿಗೆ ಹೇಳಿತು: 

"ಹುಲ್ಲಿನ ಬಣ್ಣ ನೀಲಿ".

ಹುಲಿ ಉತ್ತರಿಸಿತು:

"ಇಲ್ಲ, ಹುಲ್ಲು ಹಸಿರು ಬಣ್ಣದ್ದು."

ಚರ್ಚೆಯ ಬಿಸಿ ಯದ್ವಾತದ್ವಾ ಏರಿತು.

ವಾದ ಬಗೆ ಹರಿಯುವ ಸೂಚನೆ ಕಾಣದೆ ಇದ್ದಾಗ ಇಬ್ಬರು ಸೇರಿ ಒಂದು ಮಧ್ಯಸ್ಥಿಕೆಗೆ ಒಪ್ಪಿಸಲು ನಿರ್ಧಾರ ಮಾಡಿದರು.

ಇದಕ್ಕಾಗಿ ಕಾಡಿನ ರಾಜನಾದ ಸಿಂಹದ ಮೊರೆ ಹೋರಟರು.

ಸಿಂಹರಾಜ ತನ್ನ ಸಿಂಹಾಸನದ ಮೇಲೆ ಗಂಭೀರವದನನಾಗಿ ವಿರಾಜಮಾನನಾಗಿದ್ದ. 

ಸಿಂಹವನ್ನು ದೂರದಿಂದ ನೋಡುತ್ತಲೇ ಕತ್ತೆರಾಯ ಕೂಗಲು ಪ್ರಾರಂಭಿಸಿತು:

"ಓ ಮಹಾಪ್ರಭುಗಳೇ, ನೀವೇ ಹೇಳಿ, ಹುಲ್ಲಿನ ಬಣ್ಣ ನೀಲಿ ಎಂಬುದು ನಿಜವಲ್ಲವೇ?".

ತಡಮಾಡದಲೇ ಸಿಂಹ ಉತ್ತರಿಸಿತು:

"ಹೌದು ,ನಿಜ, ಹುಲ್ಲು ನೀಲಿ ಬಣ್ಣದ್ದು."

ಕತ್ತೆಗೆ ಎಲ್ಲಿಲ್ಲದ ಖುಷಿ, ಆತುರದಿಂದ ಮುಂದುವರಿದು ಹೇಳಿತು:

"ಇಲ್ಲಿ ನೋಡಿ ಮಹಾಸ್ವಾಮಿ ಈ ಹುಲಿಯಪ್ಪ ನನ್ನ ಮಾತನ್ನು ಒಪ್ಪುವುದಿಲ್ಲ, ವಿರೋಧಿಸುತ್ತಾನೆ ಮತ್ತು ನನಗೆ ಕಿರಿಕಿರಿ ಉಂಟುಮಾಡುತ್ತಿದ್ದಾನೆ, ದಯವಿಟ್ಟು ಇವನನ್ನು ಶಿಕ್ಷಿಸಿ."

ಆಗ ಸಿಂಹರಾಜನು ಘೋಷಿಸಿದನು:

"ಹುಲಿಗೆ 5 ವರ್ಷಗಳ ಕಾಲ ವಾಗ್ದಂಡನೆಯ (ಮೌನದಿಂದ ಇರಬೇಕು ಎಂಬ) ಶಿಕ್ಷೆ ನೀಡಲಾಗಿದೆ, ಇದನ್ನು ಹುಲಿ ಪಾಲಿಸತಕ್ಕದ್ದು."

ಕತ್ತೆಗೆ ಯುದ್ಧಗೆದ್ದ ಸಂಭ್ರಮ. ಹರ್ಷಚಿತ್ತದಿಂದ  "ಹುಲ್ಲಿನ ಬಣ್ಣ ನೀಲಿ , ಹುಲ್ಲಿನ ಬಣ್ಣ ನೀಲಿ"…ಎನ್ನುತ್ತಾ ಇನ್ನಷ್ಟು ಪ್ರಾಣಿಗಳಿಗೆ ತನ್ನ ಮಾತನ್ನು ಹೇಳುತ್ತಾ, ಜಿಗಿ ಜಿಗಿದು ಕೇಕೆ ಹಾಕುತ್ತಾ ಕತ್ತೆ ಓಡಿ ಹೋಯಿತು.

ಇತ್ತ ಹುಲಿ ತನ್ನ ಶಿಕ್ಷೆಯನ್ನು ಒಪ್ಪಿಕೊಂಡಿತು, 

ಆದರೆ

"ಮಹಾಸ್ವಾಮಿ ನಿಮಗೂ ಗೊತ್ತು , ಹುಲ್ಲಿನ ಬಣ್ಣ ಹಸಿರು. ಅದಾಗ್ಯೂ ನೀವು ನನ್ನನ್ನು ಏಕೆ ಶಿಕ್ಷಿಸಿದ್ದೀರಿ?" 

ಎಂದು ಸಿಂಹವನ್ನು ಅಮಾಯಕ ಹುಲಿ, ಮುಗ್ಧವಾಗಿ ಕೇಳಿತು,

ಸಿಂಹ ಉತ್ತರಿಸಿತು:

"ಹುಲಿಯಪ್ಪಾ ವಾಸ್ತವವಾಗಿ, ಹುಲ್ಲಿನ ಬಣ್ಣ ಹಸಿರು."

ಹುಲಿ ಕೇಳಿತು:

"ಅದೇ ಪ್ರಭುವೇ, ನಾನು ಹೇಳಿದ್ದು ಅದನ್ನೇ. ಹಾಗಾದರೆ ನೀವು ನನ್ನನ್ನು ಏಕೆ ಶಿಕ್ಷಿಸುತ್ತಿದ್ದೀರಿ?". ಹುಲಿ ಸ್ವಲ್ಪ ಗಟ್ಟಿದನಿಯಿಂದಲೇ ಕೇಳಿತು.

ಆಗ,

ಸಿಂಹ ಉತ್ತರಿಸಿತು:

"ಹುಲ್ಲಿನ ಬಣ್ಣ ನೀಲಿಯೋ ಅಥವಾ ಹಸಿರೋ ಎಂಬುದು ತಳಬುಡವಿಲ್ಲದ  ಪ್ರಶ್ನೆ.

ಇಂತಹ ಯಕಃಶ್ಚಿತ್‌ ಪ್ರಶ್ನೆಯನ್ನು ಇಟ್ಟುಕೊಂಡು, ಹೋಗಿ ಹೋಗಿ ಕತ್ತೆಯೊಂದಿಗೆ ಜಗಳವಾಡುತ್ತಾ ಸಮಯ ಹಾಳು ಮಾಡುತ್ತಿದ್ದೀಯಾ, ಅದೂ ಅಲ್ಲದೆ ಆ ವಾದವನ್ನು ನನ್ನ ಬಳಿಗೆ ಎಳೆತಂದು ನನ್ನ ಕ್ಷಣಗಳನ್ನು ಸವೆಸಿದೆಯಲ್ಲಾ, ಇದೆಲ್ಲಾ ನಿನ್ನಂತಹ ಧೀರ ಬುದ್ಧಿ ಜೀವಿಗಳಿಗೆ ತಕ್ಕುದಾದುದಲ್ಲ. ಅದಕ್ಕೇ ಈ ಶಿಕ್ಷೆ, ಇನ್ನೊಮ್ಮೆ ಇಂತಹ ಅಚಾತುರ್ಯ ಘಟಿಸಕೂಡದು, ಎಚ್ಚರಿಕೆ!”. ಎಂದು ಸಿಂಹ ಘರ್ಜಿಸಿತು.

ಕಟುಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ಇರದ ಮೂರ್ಖರೊಂದಿಗೆ ವಾದಮಾಡುವುದು ಅತ್ಯಂತ ಕೆಟ್ಟದ್ದು. ಅದರಿಂದ ಅಮೂಲ್ಯ ಸಮಯ ವ್ಯರ್ಥವಾಗುವುದು.

ಆ ಮೂರ್ಖರಿಗೆ ಸತ್ಯಕ್ಕಿಂತ ಅವರ ನಂಬಿಕೆ ಮತ್ತು ಭ್ರಮೆಗಳ ಗೆಲುವುಗಳ ಬಗ್ಗೆ ಮಾತ್ರ ಒಲವಿರುತ್ತದೆ. 

ಹಾಗಾಗಿ

ಅರ್ಥವಿಲ್ಲದ ವಾದಗಳಿಗಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ…

ನೀವು ಎಷ್ಟೇ ದಾಖಲೆ ಮತ್ತು ಪುರಾವೆಗಳನ್ನು ಪ್ರಸ್ತುತಪಡಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ, ಅವರಿಗೆ ತಿಳಿ ಹೇಳುವ ದುಸ್ಸಾಹಸಕ್ಕೆ ಕೈ ಹಾಕದಿರಿ.

ಅಹಂಕಾರ, ದ್ವೇಷ ಮತ್ತು ಅಸಮಾಧಾನಗಳಿಂದ ಕುರುಡಾಗಿರುವ ಮೂರ್ಖ ಜನತೆ, ಸರಿಯಾಗಲೊಲ್ಲರು.

ತಮ್ಮದೇ ತಪ್ಪಿದ್ದರು ತಾವೇ ಸರಿ ಎಂದು ಬೀಗುವವರ ಮುಂದೆ ನಿಮ್ಮ ಪಾಂಡಿತ್ಯದ ಪ್ರದರ್ಶನ ಅನವಶ್ಯಕ.

"ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಅದುವೇ ಯಶಸ್ಸಿನ ಗುಟ್ಟ. 

ನಿಮ್ಮ ಶಾಂತಿ ಮತ್ತು ನೆಮ್ಮದಿಗಳು ಅತ್ಯಂತ ಮೌಲ್ಯಯುತವಾದವುಗಳು, ಅವುಗಳಿಗೆ ಧಕ್ಕೆಯಾಗುವುದು ಬೇಡ. ‌