Rugveda ಋಗ್ವೇದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Rugveda ಋಗ್ವೇದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಡಿಸೆಂಬರ್ 27, 2022

ಹಿರಣ್ಯ ಗರ್ಭ

ಕಸ್ಮೈ ದೇವಾಯ ಹವಿಷಾ ವಿಧೇಮ

ಹಿರಣ್ಯಗರ್ಭ ಸೂಕ್ತ ಎಂದೇ ಪ್ರಸಿದ್ಧಿ ಪಡೆದ ಈ ಸೂಕ್ತದ ದ್ರಷ್ಟಾರ ಮಹರ್ಷಿ ಪ್ರಜಾಪತಿಯ ಮಗನಾದ ಹಿರಣ್ಯಗರ್ಭನು. ಇದು ಋಗ್ವೇದದ ಹತ್ತನೇ ಮಂಡಲದ 121ನೇ ಸೂಕ್ತ. 

ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ ||

ಈ ಬ್ರಹ್ಮಾಂಡದ ಸೃಷ್ಟಿಯ ಆದಿಯಲ್ಲಿ ಹಿರಣ್ಯಗರ್ಭ ಎನ್ನುವ ಹೆಸರನ್ನು ಪಡೆದಿದ್ದ ಪ್ರಜಾಪತಿಯು ಒಬ್ಬನೇ ಇದ್ದನು. ಈತನಿಂದಲೇ ಬ್ರಹ್ಮಾಂಡದ ಎಲ್ಲವೂ ಜನ್ಮ ತಳೆದವು. ಈ ಹಿರಣ್ಯಗರ್ಭನು ವಿಶಾಲವಾದ ಭೂಮ್ಯಂತರಿಕ್ಷಗಳೆಲ್ಲವನ್ನೂ ತಾನು ಹೊಂದಿದ್ದಾನೆ. ಅಂದರೆ ಇವನೇ ಎಲ್ಲವಕ್ಕೂ ಮೂಲ. ಇವನ ಮುಖ್ಯ ಗುಣವೇ ಉದಾರತೆ ಅಥವಾ ದಾನ. ಅಂತಹ ಪ್ರಜಾಪತಿಗೆ ಹವಿಸ್ಸುಗಳನ್ನು ಕೊಡೋಣ. ಇಲ್ಲಿ ಕಸ್ಮೈ ಎನ್ನುವುದು ಪ್ರಜಾಪತಿಯನ್ನು ಕುರಿತಾಗಿ.
"ಪ್ರಜಾಪತಿರ್ವೈ ಹಿರಣ್ಯ ಗರ್ಭಃ" ಇದು ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಬರುವ ಮಂತ್ರ. ಈ ಬ್ರಹ್ಮಾಂಡದ ರಚನೆಯ ಆರಂಭದಲ್ಲಿ ಜಗತ್ತು ಒಂದು ಮೊಟ್ಟೆಯ ಆಕಾರದಲ್ಲಿತ್ತು. ಅದೂ ಸಹ ಪ್ರಜಾಪತಿಯ ಹೊಟ್ಟೆಯಲ್ಲಿತ್ತು. ಅದು ಅಲ್ಲಿ ಚಿನ್ನದಂತೆ ಹೊಳೆಯುತ್ತಾ ಪ್ರಕಾಶಮಾನವಾಗಿತ್ತು. ಅಂತಹ ಪ್ರಕಾಶಮಾನವಾದ ಹಿರಣ್ಯಾಂಡವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡದ್ದಕ್ಕಾಗಿ ಪ್ರಜಾಪತಿಯನ್ನು ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ. ಈ ಜಗತ್ತು ಮೊದಲು ಅವ್ಯಕ್ತವಾಗಿತ್ತು, ಅತ್ಯಂತ ಸೂಕ್ಷವಾದ ಕಣವೊಂದರಿಂದ ಆಮೇಲೆ ವ್ಯಕ್ತವಾಯಿತು ಎನ್ನುವ ಅತ್ಯಂತ ದೊಡ್ದ ಅರ್ಥವನ್ನು ಕೊಡುತ್ತದೆ. “ಸೋ ಕಾಮಯತ ಬಹುಸ್ಯಾಂ ಪ್ರಜಾಯಾಯೇತಿ” ಎನ್ನುವ ತೈತ್ತಿರೀಯ ಉಪನಿಷತ್ತಿನ ವಾಕ್ಯವೂ ಸಹ ಇದನ್ನೇ ಹೇಳುತ್ತದೆ. ಪ್ರಜಾಪತಿಯ ಗರ್ಭದಲ್ಲಿ ಅವ್ಯಕ್ತ ಸ್ವರೂಪದಲ್ಲಿದ್ದು, ಚಿನ್ನದಂತೆ ಪ್ರಕಾಶಮಾನವಾಗಿ ಕಾಣಿಸಿಕೊಂಡಿರುವುದು ಈ ಜಗತ್ತು ಆದುದರಿಂದ ಪ್ರಜಾಪತಿಯನ್ನು ಮತ್ತು ಈ ಜಗತ್ತನ್ನು ಹಿರಣ್ಯಗರ್ಭ ಎನ್ನುವುದಾಗಿ ಹೇಳಲಾಗುತ್ತದೆ. ಹೌದು ಇಲ್ಲಿ ಇನ್ನೊಂದು ಜಿಜ್ಞಾಸೆ ನಮ್ಮನ್ನು ಕಾಡುತ್ತದೆ. ಈ ಮೇಲಿನ ಋಕ್ಕಿನ ಮುಂದಿನ ಭಾಗದಲ್ಲಿ ಭೂತಸ್ಯ ಜಾತಃ ಪತಿರೇಕ ಆಸೀತ್’ ಎನ್ನುತ್ತದೆ. ಪತಿ ಎನ್ನುವುದು ಒಡೆಯನಿಗೆ. ವ್ಯಕ್ತವಲ್ಲದ ಸ್ಥಿತಿಯಲ್ಲಿದ್ದ ಜಗತ್ತಿನಲ್ಲಿ ಪ್ರಜಾಪತಿಯೊಬ್ಬನಿದ್ದಾಗ ಆತ ಒಡೆಯನಾಗಲು ಸಾಧ್ಯವೇ ? ಅಂದರೆ ಈ ಹಿರಣ್ಯಗರ್ಭನ ಉದರದಲ್ಲಿ ಬ್ರಹ್ಮಾಂಡದ ಸಕಲ ಚರಾಚರಗಳು ಕುಳಿತಿದ್ದವು ಅವುಗಳನ್ನು ನಿಯಂತ್ರಿಸಿಕೊಂಡಿದ್ದವ ಪ್ರಜಾಪತಿ ಅಥವಾ ಹಿರಣ್ಯಗರ್ಭ. ಆದುದರಿಂದ “ಭೂತಸ್ಯ ಜಾತಃ ಪತಿರೇಕಃ” ‘ಸ ದಾಧಾರ ಪೃಥಿವೀಂ ದ್ಯಾಮುತೇಮಾಂ’ ಈ ಹಿರಣ್ಯಗರ್ಭನಿಂದಲೇ ಅಸ್ತಿತ್ವವನ್ನು ಪಡೆದ ಈ ಭೂಮಿ ಅಂತರಿಕ್ಷ ಮತ್ತು ದೇವಲೋಕಗಳಿಗೆ ಇವನೇ ಆಧಾರವಾಗಿ ಇರುವುದರಿಂದ ಇವನನ್ನೇ ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ. 
___________________________________________________________________
ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ| ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ| ಪೃಥಿವ್ಯಾ ಓಷಧಯಃ| ಓಷಧೀಭ್ಯೋ ಅನ್ನಃ| ಅನ್ನಾತ್ ಪುರುಷಃ|| ತೈತ್ತಿರೀಯ ಉಪನಿಷದ್|| 2:1:2
ಮೂಲ: ಸದ್ಯೋಜಾತರು
#ಕಸ್ಮೈ_ದೇವಾಯ

ಮೇ 17, 2020

ನೀರಿನ ಕುರಿತಾಗಿ ಅಧ್ಯಯನ ಮಾಡಿದ ಋಷಿ ಅಂಬರೀಷ

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ


ಅಂಬರೀಷ ಎನ್ನುವವನು ಪುರಾಣದಲ್ಲಿ ರಾಜನಾಗಿ ಕಾಣಸಿಗುತ್ತಾನೆ. ಅಂಬರೀಷನ ಕಥೆ ಬಹಳ ರೋಚಕವಾಗಿ ಸಿಗುತ್ತದೆ. ಆದರೆ ಇದು ರಾಜವನೊಬ್ಬನ ಕಥೆಯಲ್ಲ, ನೀರಿನ ಕುರಿತಾಗಿ ಅಧ್ಯಯನ ಮಾಡಿದ್ದ ಋಷಿಯೊಬ್ಬನ ಕುರಿತಾಗಿ. ತ್ವಷ್ಟ್ರನ ಮಗನಾದ ತ್ರಿಶಿರಾ ಅಥವಾ ಅಂಬರೀಷನ ಕುರಿತಾಗಿರುವುದು. ಈತನನ್ನು ಸಿಂಧುದ್ವೀಪ ಎನ್ನುವುದಾಗಿ ಕರೆಯಲಾಗುತ್ತದೆ. ಈತ ಇಂದ್ರನಿಗಾಗಿ ನೀರನ್ನು ಶೊಧಿಸಿದ ಅಥವಾ ನೀರನ್ನು ಬಳಸಿದ ಕುರಿತಾಗಿರುವುದು. ಹಿಂದೆ ಇಂದ್ರನು ವಿಶ್ವರೂಪಾಚಾರ್ಯ ಎನ್ನುವ ತನ್ನ ಪುರೋಹಿತನನ್ನೇ ಸಂಹಾರ ಮಾಡುತ್ತಾನೆ. ಆಗ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬರುತ್ತದೆ ಆಗ ಇಂದ್ರ ತ್ವಷ್ಟ್ರನ ಮಗನಾದ ಸಿಂಧುದ್ವೀಪ ಎನ್ನುವ ಋಷಿಯನ್ನು ಪುರೋಹಿತನನ್ನಾಗಿ ಬಲಸಿಕೊಂಡು ತನ್ನ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಸಿಂಧುದ್ವೀಪ ಋಷಿಯು ಪಾಪಪರಿಹಾರಾರ್ಥವಾಗಿ ನೀರನ್ನು ಕುರಿತು ಜಪಮಾಡಿ ಪಾಪ ಪರಿಹಾರವನ್ನು ಮಾಡಿಕೊಡುತ್ತಾನೆ. ಹಾಗಾದರೆ ಪಾಪ ಪರಿಹಾರಾರ್ಥವಾದ ಆ ನೀರನ್ನು ಹೇಗೆ ಪ್ರಾರ್ಥಿಸಿದ ಎನ್ನುವುದನ್ನು ಗಮನಿಸೋಣ. ನೀರು, ಗಾಳಿ ಮತ್ತು ಬೆಂಕಿ ಇವು ಮೂರೂ ಮನುಷ್ಯನಿಗೆ ಅತ್ಯವಶ್ಯಕವಾದವು. ಇವುಗಳಲ್ಲಿ ಒಂದರ ಕೊರತೆ ಉಂಟಾದರೂ ಬದುಕು ಅಲ್ಲೋಲ ಕಲ್ಲೋಲ ನಿಶ್ಚಿತ. ಅದರಲ್ಲೂ ನೀರು ಮತ್ತು ಬೆಂಕಿ ಒಂದಕ್ಕೊಂದು ಪೂರಕ ಮತ್ತು ನೀರಿನಲ್ಲಿಯೂ ಬೆಂಕಿಯ ಅಂಶ ಇದೆ ಎನ್ನುವುದು ಈ ಋಷಿಯ ಅಭಿಪ್ರಾಯ. ಪ್ರತಿಯೊಂದು ಜೀವಿಯೂ ನೀರಿಗಾಗಿ ಹಾತೊರೆಯುತ್ತದೆ. ಈ ಹಿಂದೆ ಕಪ್ಪೆಯ ಕುರಿತಾಗಿ ಬರೆದಾಗಲೂ ಅಲ್ಲಿ ನೀರನ್ನು ನೋಡಿ ಕಪ್ಪೆ ಕೂಗುತ್ತದೆ ಎಂದು ಬರೆದಿದ್ದೆ.


ಹೌದು. ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಈ ಸೂಕ್ತದ ದೃಷ್ಟಾರ. ಈತನನ್ನು ಅಂಬರೀಷ ಎಂತಲೂ, ಸಿಂಧುದ್ವೀಪ ಅಥವಾ ತ್ರಿಶಿರಾ ಎನ್ನುವುದು ಈ ಋಷಿಗಿರುವ ಹೆಸರುಗಳು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.
ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಈ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ ಗಂಗೇಚ ಯಮುನೇ ಚೈವ ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.


ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||
ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ಸಾಯಂಕಲ ಮಾಡಿದರೆ ಹಗಲಿನಲ್ಲಿ ಗೊತ್ತಗದೇ ಘಟಿಸಿದ ಪಾಪಕಾರ್ಯದ ಪರಿಮರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೀಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.


ಆಪೋ ಹಿ ಷ್ಠಾ ಮಯೋಭುವಸ್ತಾ ನ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || ಎನ್ನುವ ಈ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು ಈ ನೀರು ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ಇದರಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೇ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಈ ಋಕ್ಕಿನಲ್ಲಿ ಹೇಳಲಾಗಿದೆ.


ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.


ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ಚ ನಃ || ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.


ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ಶಂ ನೋ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಈ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

ಮೇ 10, 2020

ಬ್ರಹ್ಮರ್ಷಿಗಳಾದ ವಿಶ್ವಾಮಿತ್ರರು, ಕೊನೆಗೂ ಈಡೇರಿದ ತಪಸ್ಸು....


ಕೊನೆಗೂ ಈಡೇರಿದ ತಪಸ್ಸು:
ಬ್ರಹ್ಮರ್ಷಿಗಳಾದ ವಿಶ್ವಾಮಿತ್ರರು.

ಏನೋ ಸುಗಂಧ. ಮೈ ಉರಿಯೆಲ್ಲ ತಂಪಾದಂತೆ. ಅನಿರ್ವಚನಿಯಾನಂದ. "ನನ್ನ ತಪೋ ಭಂಗಕ್ಕೆ ಮತ್ತಾವ ಸಂಚೋ?". ಕಣ್ಣು ತೆರೆಯಲೇ ಸಿದ್ಧವಿಲ್ಲ. ಆದರೆ ಕಂಡದ್ದೇನು? ಊರಗಲದ ಕಮಲ. ಅದರಲ್ಲಿ ಪೂರ್ವ ಪರಿಚಿತ ಚತುರ್ಮುಖ ಬ್ರಹ್ಮ. ಶ್ವೇತ ಗಡ್ಡ ನೊರೆನೊರೆಯಾಗಿ ಅಲುಗಾಡುತ್ತಿದ್ದರೆ, ಜಪಮಣಿಯ ಬಲ ಕರವೆತ್ತಿ ಅಭಯ ಪ್ರದಾನ. ಲಗುಬಗೆಯಿಂದ ಕಣ್ಬಿಟ್ಟು ದಿಗ್ಗನೆದ್ದು ಸಾಷ್ಟಾಂಗ ಮಾಡಿದರು ವಿಶ್ವಾಮಿತ್ರರು. ಇಂದ್ರೇತ್ಯಾದಿಗಳೆಲ್ಲಾ ಬ್ರಹ್ಮನ ಅಕ್ಕಪಕ್ಕದಲ್ಲಿ ನಿಂತಿದ್ದಾರೆ. 

"ಮಗು ವಿಶ್ವಮಿತ್ರ, ಬಹಳ ಕಷ್ಟ ಪಟ್ಟೆ. ಕಷ್ಟ ಪಟ್ಟರೆ ತಾನೇ ಫಲ? ಛಲಕ್ಕೆ, ಸಾಹಸಕ್ಕೆ, ಸಂಕಲ್ಪ ಸಾಧನೆಗೆ ಜನ ನಿನ್ನನ್ನು ಅನುಸರಿಸಬೇಕು. ನಿನ್ನ ಒಳ್ಳೆಯತನದಿಂದ ನಿನ್ನ ಪುಣ್ಯಸಂಪತ್ತನ್ನೆಲ್ಲ ಪರೋಪಕಾರಕ್ಕಾಗಿ ವ್ಯಯಿಸಿಬಿಟ್ಟೆ. ಮತ್ತೆ ಮತ್ತೆ ಬಿದ್ದರೂ ಎದ್ದೆ. ಎದೆಗುಂದದೆ ಮುನ್ನುಗ್ಗಿದೆ, ಗೆದ್ದೆ. ಮೊನ್ನೆಯಷ್ಟೇ ಸೂರ್ಯ ಹೇಳಲು ಬಂದಿದ್ದ, ನೀನು ಅವನನ್ನು ಸಾಕ್ಷಾತ್ಕರಿಸಿಕೊಂಡೆ ಎಂದು. ಅವನ ಆ ಸವಿತೃ ಮಂತ್ರ ಜಗದ್ವಿಖ್ಯಾತವಾಗಲಿ. ಅದೇ ಜನರು ಮಾಡುವ ಸಂಧ್ಯಾವಂದನೆಯಲ್ಲಿ ಪ್ರಧಾನಾಂಗವಾಗಲಿ. ಅದೇ ಬ್ರಹ್ಮೋಪದೇಶಕ್ಕೆ ನಾಂದಿಯಾಗಲಿ. ಈ ಜಗತ್ತು ಪ್ರಳಯ ಆಗುವ ತನಕ ಕೋಟಿ ಕೋಟಿ ಜನರು ಪ್ರತಿ ನಿತ್ಯ ಅರ್ಘ್ಯ ಅರ್ಪಿಸುವಾಗಲೆಲ್ಲ ನಿನ್ನ ಹೆಸರನ್ನು ಸ್ಮರಿಸಿಕೊಳ್ಳಲಿ. ಬೇರಾವ ದಾರ್ಶನಿಕ ಋಷಿಗೂ ಇರದಷ್ಟು ಮಾನ್ಯತೆ ನಿನಗೆ, ನೀನೇ ದರ್ಶಿಸಿದ  "ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್"  ಎಂಬೀ ಮಂತ್ರದಿಂದ ದೊರಕಲಿ. ಇದರಿಂದಲೇ ಮಂತ್ರದ್ರಷ್ಟಾರನೆಂಬ ಜಗದ್ವಿಖ್ಯಾತಿಯನ್ನು ಪಡೆ. ನಿನ್ನನ್ನು ಗಗನದೆತ್ತರಕ್ಕೊಯ್ದ ಆ ಛಂದಸ್ಸು "ಗಾಯತ್ರೀ" ಎಂಬುದು ವೇದಮಾತೆಯೆಂದೇ ಪ್ರಖ್ಯಾತವಾಗಲಿ. ವೇದಾದಿಯಲ್ಲೆಲ್ಲ ಅದೇ ಛಂದಸ್ಸು ವಿಜೃಂಭಿಸಲಿ. "

ತಾನೇನು ಮಾಡಬೇಕು, ಏನು ಮಾತನಾಡಬೇಕು ಎಂದು ತೋಚದೇ ಕೈ ಮುಗಿದು ನಿಂತಿದ್ದ ವಿಶ್ವಮಿತ್ರರಿಗೆ, ಬ್ರಹ್ಮ ತನ್ನ ವರದ ಕೊನೆಯೆಂಬಂತೆ ವಿಶ್ವಮಿತ್ರರ ಬಯಕೆಗೆ ಒಲಿದ ಮುಕ್ತಾಫಲವನ್ನಿತ್ತ; " ಬ್ರಹ್ಮರ್ಷಿ ವಿಶ್ವಮಿತ್ರ! ನಿನಗೆ ಸ್ವಾಗತ. ನಿನ್ನ ಕಠಿಣ, ದೀರ್ಘ, ಅಸ್ಖಲಿತ ತಪಶ್ಚರ್ಯೆಗೆ ನಾನು ಮೆಚ್ಚಿದ್ದೇನೆ. ದೇವತೆಗಳು ಒಡಂಬಟ್ಟಿದ್ದಾರೆ. ಎಷ್ಟೆಂದು ಕೇಳಬೇಡ, ಅತ್ಯಂತ ದೀರ್ಘ ಆಯುಷ್ಶವನ್ನು ನಿನಗೆ ಕೊಟ್ಟಿರುವೆ. ನಿನಗೆ ಶುಭವಾಗಲಿ, ನಿನಗೆ ಮಂಗಳವಾಗಲಿ. ನೀನೆಲ್ಲಿ ಹೋಗಬೇಕೆನ್ನುವೆಯೋ, ಎಲ್ಲಿ ನೆಲೆಸಬೇಕೆನ್ನುವೆಯೋ, ಅದು ನಿನಗೆ ಈಡೇರಲಿ. ಶುಭಂ ಅಸ್ತು"

ಬ್ರಹ್ಮರ್ಷೇ ಸ್ವಾಗತಂ ತೇ ಅಸ್ತು ತಪಸಾಸ್ಮ ಸುತೋಷಿತಾಃ|

ದೀರ್ಘಂ ಆಯುಶ್ಚ ತೇ ಬ್ರಹ್ಮನ್ ದದಾಮಿ ಸ ಮರುತ್ ಗಣಃ || 

ಸ್ವಸ್ತಿ ಪ್ರಾಪ್ನೋಹಿ ಭದ್ರಂ ತೇ ಗಚ್ಛ ಸೌಮ್ಯ ಯಥಾ ಸುಖಂ| 

ಮತ್ತೊಮ್ಮ ಸಾಷ್ಟಾಂಗ ಮಾಡಿದ್ದ ವಿಶ್ವಮಿತ್ರರ ತಲೆ ದಡವಿ ಹೇಳಿದ ಚತುರ್ಮುಖ, " ಇಂದಿನಿಂದ ನೀನು ಬ್ರಹ್ಮರ್ಷಿ. ಬ್ರಹ್ಮರ್ಷಿ ಪಟ್ಟವೆಂದರೆ, ಪರಬ್ರಹ್ಮ ದರ್ಶನಕ್ಕೆ ಅರ್ಹತೆ. ನಿನ್ನಂತೆ ಹಲವು ಬ್ರಹ್ಮರ್ಷಿಗಳಿದ್ದಾರೆ. ಒಂದರ್ಥದಲ್ಲಿ ಆ ಪರಬ್ರಹ್ಮ ಸಾಮ್ರಾಜ್ಯ ದ್ವಾರಪಾಲಕನಂತೆ ನಾನು. ನೀನೀಗ ಆ ದಾರಿಯಲ್ಲಿ ನಡೆಯುವ ಅರ್ಹತೆ ಬಂದಿದೆ ಎಂಬುದನ್ನೊಪ್ಪಿ ಘೋಷಿಸುವುದಷ್ಟೇ ನನ್ನ ಕೆಲಸ. ಇನ್ನು ಮುಂದೆ ನಿನ್ನ ಫಲಾಪೇಕ್ಷ ರಹಿತ ತಪಸ್ಸು, ನಿನ್ನ ಪರೋಪಕಾರ, ನಿನ್ನ ಬದುಕು.... ಇವುಗಳೆಲ್ಲ ನಿನ್ನನ್ನು ಪರಬ್ರಹ್ಮದೆಡೆಗೆ ಒಯ್ಯುವ ಸಾಧನಗಳು. ಒಳ್ಳೆಯದಾಗಲಿ". ಕೊಂಚ ತಡೆದು ಮುಂದುವರಿಸಿದ. " ಒಂದು ಮಾತು ಹೇಳುತ್ತೇನೆ, ಇಂದ್ರನ ಬಗ್ಗೆ ನಿನ್ನ ಮನಸ್ಸಿನಲ್ಲಿ ಕಷಾಯ ಬೇಡ. ಆತ ನಿನ್ನ ತಪೋಭಂಗ ಮಾಡಿದನೆಂಬ ಕೋಪ, ಬೇಸರ ನಿನಗಿದೆ. ಸಹಜವೇ. ಹೌದು, ಇಂದ್ರ ಋಷಿಯಲ್ಲ; ಅವನಲ್ಲಿ ರಾಜಸಾಂಶವೇ ಹೆಚ್ಚು. ಅಲ್ಲದೇ ಆ ಪದವಿಯೇ ಅಂತಹುದು. ಆದರೆ ಹೀಗವನು ಪರೀಕ್ಷಿಸಿಯೇ ಕೊನೆಗೆ ನೀನು ಅವನಿಗೆ ಸೊಪ್ಪು ಹಾಕದಾಗ, ಅವನೇ ಬಂದು ನಿನ್ನ ಬಗ್ಗೆ ಸಿಫಾರುಸು ಮಾಡಿದ. ಆತನಿಗೆ ನಿನ್ನ ಬಗ್ಗೆ ಈಗ ಅಗಾಧವಾದ ಗೌರವ ಇದೆ. ಎಷ್ಟೇ ಆಗಲಿ ಆತ ದೇವರಾಜ. ನೀವು ಮಿತ್ರರಾಗಿರಿ. " ಹೇಳ ಹೇಳುತ್ತಿದ್ದಂತೆಯೇ ಬ್ರಹ್ಮ ಕರಗಿ ಹೋದ.

ಎಲ್ಲ ದೇವತೆಗಳೂ ಬಂದು ವಿಜಯೀ ವಿಶ್ವಮಿತ್ರರನ್ನು ಅಭಿನಂದಿಸಿದರು. ಮಹೇಂದ್ರ ಪಾರಿಜಾತ ಮಾಲೆಯನ್ನು ತೊಡಿಸಿ ಗೌರವಿಸಿದ. ಋಷಿ ಸಂಘವೆಲ್ಲ, " ವಿಶ್ವಮಿತ್ರರಿಗೆ ಜಯವಾಗಲಿ! " ಎಂದು ಘೋಷಿಸಿದರು. ಆಲಿಂಗಿಸಿದ ಮಹೇಂದ್ರ ಹೇಳಿದ, " ಬನ್ನಿ ವಿಶ್ವಮಿತ್ರರೆ; ಎಷ್ಟು ಕಾಲವಾಯಿತು ನೀವು ಊಟ ಮಾಡಿ! ಈ ದೀರ್ಘ ತಪದಂತ್ಯಕ್ಕೆ ಮಾನವ ದುರ್ಲಭ ಭೋಜನವನ್ನು ನನ್ನ ಸಹಪಂಕ್ತಿಯಲ್ಲಿ ಮಾಡಿ. ಅಮೃತ ಸ್ವೀಕಾರಕ್ಕಾಗಿ ಈಗ ಅಮರಾವತಿಗೆ ಬನ್ನಿ. "

ಇಷ್ಟೆಲ್ಲ ನಡೆದರೂ ವಿಶ್ವಮಿತ್ರರ ಮುಖದಲ್ಲಿ ಏಕೋ ಗೆಲುವಿಲ್ಲ. ಗೆದ್ದ ಸಂತೋಷವೂ ಇಲ್ಲ. ಬ್ರಹ್ಮರ್ಷಿಯಾದ ಸಂಭ್ರಮವೂ ಇಲ್ಲ. ಏಕೆ? ಏನಾಗಿದೆ? " ತಮ್ಮ ಮನಸ್ಸೇಕೋ ಪ್ರಸನ್ನವಾಗಿಲ್ಲ?  "ಪ್ರಶ್ನಿಸಿದ ಇಂದ್ರ". ಮನದ ಭಾವವನ್ನು ಉಸುರಿದರು ಬ್ರಹ್ಮರ್ಷಿಗಳು; " ಮಹೇಂದ್ರ, ನಿಮ್ಮ ಸತ್ಕಾರಕ್ಕೆ, ನಿಮ್ಮ ಸ್ವಾಗತಕ್ಕೆ ಅಥವ ನನ್ನ ಪರವಾಗಿ ಚತುರ್ಮುಖನಲ್ಲಿ ಮಾತನಾಡಿದ್ದಕ್ಕೆ ಕೃತಙ್ಞ. ಆದರೆ ಒಂದು ವಿಷಯ ನನ್ನ ಮನಸ್ಸನ್ನು ಚುಚ್ಚುತ್ತಲೇ ಇದೆ" .ಇಂದ್ರನಿಗೆ ಸೋಜಿಗ. ಇಂತಹ ಅಸದೃಶ ಸಂದರ್ಭದಲ್ಲಿ, ಇಂತಹ ಸುಮುಹೂರ್ತದಲ್ಲಿ ಈ ರೀತಿ ಖಿನ್ನತೆಯೇ? " ಏನು ಬ್ರಹ್ಮರ್ಷಿಗಳೇ? ಏನು ನಿಮ್ಮ ಅರಕೆ? " ವಿಶ್ವಮಿತ್ರರು ಹೇಳಿಬಿಟ್ಟರು : " ನನಗೆ ಬ್ರಹ್ಮರ್ಷಿ ಪದವಿ ಸಿಕ್ಕಿರುವುದೇ ಆದರೆ, ಸೃಷ್ಟಿಕರ್ತ ಎಂದಂತೆ ದೀರ್ಘಾಯುಷ್ಯ ಲಭಿಸಿರುವುದೇ ಆದರೆ, ಪ್ರಣವದ ಓಂಕಾರ ಹಾಗೂ ವಷಟ್ಕಾರಗಳು ನನಗೆ ಲಭಿಸಬೇಕು. ಕೇವಲಾ ನಾನು ದರ್ಶಿಸಿದ ವೇದಭಾಗವಷ್ಟೇ ಅಲ್ಲ, ಸಂಪೂರ್ಣ ವೇದವೂ ನನಗೆ ಸಾಕ್ಷಾತ್ಕಾರವಾಗಬೇಕು"

 ಬ್ರಹ್ಮಣ್ಯಂ ಯದಿ ಮೇ ಪ್ರಾಪ್ತಂ ದೀರ್ಘಮಾಯುಃ ತಥೈವಚ

ಓಂಕಾರಶ್ಚ ವಷಟ್ಕಾರೋ ವೇದಾಶ್ಚ ವರಯಂತುಮಾಂ 

ಹೊಸದಾಗಿ ಹೇಳಬೇಕಾದ್ದೇನಿದೆ ಇದರಲ್ಲಿ? ವಿರಿಂಚಿ ವರವಿತ್ತಾಗಲೇ ಇವೆಲ್ಲ ಅವರಿಗೆ ಬಂದಂತಯಿತಲ್ಲ?  "ಸೃಷ್ಠಿಕರ್ತ, ಬ್ರಹ್ಮರ್ಷೇ ಎಂದು ಸಂಬೋಧಿಸಿದಾಗಲೇ ನಿಮಗೆ ಇವೆಲ್ಲ ಲಬ್ಧವಾಯಿತು" .ಇಂದ್ರ ಒಪ್ಪಿಸಲು ಯತ್ನಿಸಿದ. " ಅದಲ್ಲ ಇಂದ್ರ, ನನ್ನ ಮಾತಿನ ಅರ್ಥ ಬೇರೆ. "ವಿಶ್ವಮಿತ್ರರೀಗ ಸ್ಪಷ್ಟ ಪಡಿಸಿದರು. " ಹುಂಬನಾಗಿದ್ದ ನನ್ನನ್ನು, ರಾಜಮದವೇರಿದ್ದ ನನ್ನನ್ನು, ಅವರನ್ನೇ ಸುಡಲು ಹೋದ ನನ್ನನ್ನು ಈ ಮಾರ್ಗಕ್ಕೆ ತಿರುಗಿಸಿದ್ದೇ ಅವರು. ಅವರಿಂದಾಗಿ ನಾನಿಲ್ಲಿ ಹೀಗೆ ನಿಂತಿದ್ದೇನೆ; ಬ್ರಹ್ಮರ್ಷಿಯಾಗಿದ್ದೇನೆ. " ಇದೀಗ ಇಂದ್ರನಿಗೆ ಅರ್ಥವಾಗ ತೊಡಗಿತು ವಿಶ್ವಮಿತ್ರರು ಏನು ಹೇಳುತ್ತಿದ್ದಾರೆಂದು. ಕೊನೆಯ ಮಾತಾಗಿ ಹೇಳಿದರು ಮುನಿಗಳು ; " ಕ್ಷಾತ್ರರಲ್ಲೂ , ಬ್ರಾಹ್ಮಣರಲ್ಲೂ ಶ್ರೇಷ್ಠರೆಂದರೆ ವಸಿಷ್ಠರು ತಾನೇ ? ಬ್ರಹ್ಮನ ಮಕ್ಕಳಾದ ಆ ಬ್ರಹ್ಮರ್ಷಿಗಳು ನನ್ನನ್ನು ಬ್ರಹ್ಮರ್ಷಿಯೆಂದೇ ಕರೆಯಬೇಕು. ಆಗಲೇ ನನಗೆ ಸಮಾಧಾನ. "

   
ಕ್ಷತ್ರವೇದವಿದಾಂ ಶ್ರೇಷ್ಠೋ ಬ್ರಹ್ಮವೇದ ವಿದಾಮಪಿ 

ಬ್ರಹ್ಮಪುತ್ರೋ ವಸಿಷ್ಠೋ ಮಾಂ ಏವಂ ವದತು ದೇವತಾಃ



ಲೇ -ಡಾ.ಪಾವಗಡ ಪ್ರಕಾಶ್ ರಾವ್

ಸಂಗ್ರಹ: ವೇ ಬ್ರ ಶ್ರೀ ಚನ್ನೇ ಶಾಸ್ತ್ರಿಗಳು

ಏಪ್ರಿಲ್ 28, 2020

ಗಣಪತಿ ಹಾಗು ಸರಸ್ವತಿ ಪ್ರಾರ್ಥನ ಘನಾಪಾಠ

ಗಣೇಶಾಯ’ ನಮಃ | ಸರಸ್ವತ್ಯೈ ನಮಃ | ಶ್ರೀ ಗುರುಭ್ಯೋ ನಮಃ |

ಓಂ ಗಣಾನಾ”ಮ್ ತ್ವಾ ಗಣಪ’ತಿಗ್‍ಮ್ ಹವಾಮಹೇ ಕವಿಂ ಕ’ವೀನಾಮ್ ಉಪಮಶ್ರ’ವಸ್ತವಮ್ | ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಸ್ಪತ ಆ ನಃ’ ಶೃಣ್ವನ್ನೂತಿಭಿ’ಸ್ಸೀದ ಸಾದ’ನಮ್ ||

ಪ್ರಣೋ’ ದೇವೀ ಸರ’ಸ್ವತೀ | ವಾಜೇ’ಭಿರ್ ವಾಜಿನೀವತೀ | ಧೀನಾಮ’ವಿತ್ರ್ಯ’ವತು ||


ಹರಃ ಓಂ ||

ಘನಾಪಾಠಃ
ಗಣಾನಾ”ಮ್ ತ್ವಾ ಗಣಾನಾ”ಮ್ ಗಣಾನಾ”ಮ್ ತ್ವಾ ಗಣಪ’ತಿಂ ಗಣಪ’ತಿಂ ತ್ವಾ ಗಣಾನಾಂ” ಗಣಾನಾಂ” ತ್ವಾ ಗಣಪ’ತಿಮ್ ||

ತ್ವಾ ಗಣಪ’ತಿಂ ತ್ವಾತ್ವಾ ಗಣಪ’ತಿಗ್‍ಮ್ ಹವಾಮಹೇ ಹವಾಮಹೇ ಗಣಪ’ತಿಂ ತ್ವಾತ್ವಾ ಗಣಪ’ತಿಗ್‍ಮ್ ಹವಾಮಹೇ | ಗಣಪ’ತಿಗ್‍ಮ್ ಹವಾಮಹೇ ಹವಾಮಹೇ ಗಣಪ’ತಿಂ ಗಣಪ’ತಿಗ್‍ಮ್ ಹವಾಮಹೇ ಕವಿನ್ಕವಿಗ್‍ಮ್ ಹ’ವಾಮಹೇ ಗಣಪ’ತಿಂ ಗಣಪ’ತಿಗ್‍ಮ್ ಹವಾಮಹೇ ಕವಿಮ್ | ಗಣಪ’ತಿಮಿತಿ’ಗಣ-ಪತಿಮ್ ||

ಹವಾಮಹೇ ಕವಿಂ ಕವಿಗ್ಂ ಹ’ವಾಮಹೇ ಹವಾಮಹೇ ಕವಿಂ ಕ’ವೀನಾನ್ಕ’ವೀನಾಂ ಕವಿಗ್ಂ ಹ’ವಾಮಹೇ ಹವಾಮಹೇ ಕವಿನ್ಕ’ವೀನಾಮ್ ||

ಕವಿನ್ಕ’ವೀನಾನ್ಕವೀನಾಂ ಕವಿನ್ಕವಿಂ ಕ’ವೀನಾಮು’ಪಮಶ್ರ’ವಸ್ತಮ ಮುಪಮಶ್ರ’ವಸ್ತಮ ನ್ಕವೀನಾಂ ಕವಿನ್ಕವಿಂ ಕ’ವೀನಾಮು’ಪಮಶ್ರ’ವಸ್ತಮಮ್ ||

ಕವೀನಾಮು’ಪಮಶ್ರ’ವ ಸ್ತಮಮುಪಮಶ್ರ’ವಸ್ತಮಂ ಕವೀನಾ ನ್ಕ’ವೀನಾ ಮು’ಪಮಶ್ರ’ವಸ್ತಮಮ್ | ಉಪಮಶ್ರ’ವಸ್ತಮ ಮಿತ್ಯು’ಪಮಶ್ರ’ವಃ-ತಮಮ್ ||

ಜ್ಯೇಷ್ಟರಾಜಂ ಬ್ರಹ್ಮ’ಣಾಂ ಬ್ರಹ್ಮ’ಣಾಂ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣೋ ಬ್ರಹ್ಮಣೋ ಬ್ರಹ್ಮ’ಣಾಂ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ’ ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಃ | ಜ್ಯೇಷ್ಠರಾಜಮಿತಿ’ಜ್ಯೇಷ್ಠ ರಾಜಮ್” ||

ಬ್ರಹ್ಮ’ಣಾಂ ಬ್ರಹ್ಮಣೋ ಬ್ರಹ್ಮಣೋ ಬ್ರಹ್ಮ’ಣಾಂ ಬ್ರಹ್ಮ’ಣಾಂ ಬ್ರಹ್ಮಣಸ್ಪತೇ ಪತೇಬ್ರಹ್ಮಣೋ ಬ್ರಹ್ಮ’ಣಾಂ ಬ್ರಹ್ಮ’ಣಾಂ ಬ್ರಹ್ಮಣಸ್ಪತೇ ||

ಬ್ರಹ್ಮಣಸ್ಪತೇ ಪತೇ ಬ್ರಹ್ಮಣೋ ಬ್ರಹ್ಮಣಸ್ಪತ ಆಪ’ತೇ ಬ್ರಹ್ಮಣೋ ಬ್ರಹ್ಮಣಸ್ಪತ ಆ | ಪತ ಆ ಪ’ತೇಪತ ಆನೋ’ನ ಆಪ’ತೇ ಪತ ಆನಃ’ ||

ಆನೋ’ನ ಆನ’ಶ್ಶೃಣ್ವನ್ ಛೃಣ್ವನ್ನ ಆನ’ಶ್ಶೃಣ್ವನ್ | ನ ಶ್ಶೃಣ್ವನ್ ಛೃಣ್ವನ್ನೋ’ನ ಶ್ಶೃಣ್ವನ್ನೂತಿಭಿ’ ರೂತಿಭಿಶ್ಶೃಣ್ವನ್ನೋ’ನ ಶ್ಶೃಣ್ವನ್ನೂತಿಭಿಃ’ ||

ಶ್ಶೃಣ್ವನ್ನೂತಿಭಿ’ ರೂತಿಭಿಶ್ಶೃಣ್ವನ್ ಛೃಣ್ವನ್ನೂತಿಭಿ’ಸ್ಸೀದ ಸೀದೋತಿಭಿ’ಶ್ಶೃಣ್ವನ್ ಛೃಣ್ವನ್ನೂತಿಭಿ’ಸ್ಸೀದ ||

ಊತಿಭಿ’ಸ್ಸೀದ ಸೀದೋತಿಭಿ’ ರೂತಿಭಿ’ಸ್ಸೀದ ಸಾದ’ನಗ್ಂ ಸಾದ’ನಗ್ಂ ಸೀದೋತಿಭಿ’ರೂತಿಭಿ’ಸ್ಸೀದ ಸಾದ’ನಮ್ | ಊತಿಭಿ ರಿತ್ಯೂತಿ-ಭಿಃ ||

ಸೀದಸಾದ’ನಗ್ಂ ಸಾದ’ನಗ್ಂ ಸೀದ ಸೀದ ಸಾದ’ನಮ್ | ಸಾದ’ನಮಿತಿ ಸಾದ’ನಮ್ ||

ಪ್ರಣೋ’ ನಃ ಪ್ರಪ್ರಣೋ’ ದೇವೀ ದೇವೀ ನಃ ಪ್ರಪ್ರಣೋ’ ದೇವೀ | ನೋ’ ದೇವೀ ದೇವೀ ನೋ’ನೋ ದೇವೀ ಸರ’ಸ್ವತೀ ಸರ’ಸ್ವತೀ ದೇವೀ ನೋ’ ನೋ ದೇವೀ ಸರ’ಸ್ವತೀ ||

ದೇವೀ ಸರ’ಸ್ವತೀ ಸರ’ಸ್ವತೀ ದೇವೀ ದೇವೀ ಸರ’ಸ್ವತೀ ವಾಜೇಭಿರ್ವಾಜೇ’ಭಿ ಸ್ಸರ’ಸ್ವತೀ ದೇವೀ ದೇವೀ ಸರ’ಸ್ವತೀ ದೇವೀ ಸರಸ್ವತೀ ವಾಜೇ’ಭಿಃ ||

ಸರ’ಸ್ವತೀ ವಾಜೇ’ಭಿ ರ್ವಾಜೇ’ಭಿ ಸ್ಸರ’ಸ್ವತೀ ಸರ’ಸ್ವತೀ ವಾಜೇ’ಭಿ ರ್ವಾಜಿನೀ’ವತೀ ವಾಹಿನೀ’ವತೀ ವಾಜೇ’ಭಿ ಸ್ಸರ’ಸ್ವತೀ ಸರ’ಸ್ವತೀ ವಾಜೇ’ಭಿ ರ್ವಾಜಿನೀ’ವತೀ ||

ವಾಜೇ’ಭಿರ್ವಾಜಿನೀ’ವತೀ ವಾಜಿನೀ’ವತೀ ವಾಜೇ’ಭಿರ್ವಾಜೇ’ಭಿರ್ವಾಜಿನೀ’ವತೀ | ವಾಜಿನೀ’ವತೀತಿ’ ವಾಜಿನೀ’ವತೀ ವಾಜೇ’ಭಿರ್ವಾಜೇ’ಭಿರ್ವಾಜಿನೀ’ವತೀ | ವಾಜಿನೀ’ವತೀತಿ’ ವಾಜಿನೀ’-ವತೀ ||

ಧೀನಾ ಮ’ವಿತ್ರ್ಯ’ವಿತ್ರೀ ಧೀನಾಂ ಧೀನಾಮ’ವಿತ್ರ್ಯ’ ವತ್ವ ವತ್ವವಿತ್ರೀ ಧೀನಾಂ ಧೀನಾಮ’ವಿತ್ರ್ಯ’ವತು | ಅವಿತ್ರ್ಯ’ವತ್ವವ ತ್ವವಿತ್ರ್ಯ’ವಿ ತ್ರ್ಯ’ವತು | ಅವತ್ವಿತ್ಯ’ವತು ||

ಓಂ ಶಾಂತಿ ಶಾಂತಿ ಶಾಂತಿಃ  (ವೈದಿಕ ವಿಜ್ಞಾನಂ)

ಏಪ್ರಿಲ್ 20, 2020

ಸೋಮರಸವನ್ನು ಇಂದ್ರನಿಗೆ ಅರ್ಪಸಿದ "ಅಪಾಲಾ ಋಷಿಕೆ"


ಋಗ್ವೇದದ ೮ ನೇ ಮಂಡಲದ ೯೧ನೇ ಸೂಕ್ತದಲ್ಲಿ ೭ ಮಂತ್ರಗಳು ಬರುತ್ತವೆ. ಅದರಲ್ಲಿ ಬರುವ ಪ್ರಸಂಗ

ಕನ್ಯಾವಾರವಾಯತೀ ಸೋಮಮಪಿ ಸೃತಾವಿದತ್ ।
ಅಸ್ತಮ್ ಭರನ್ತ್ಯ ಬ್ರವೀದಿನ್ದ್ರಾಯ ಸುನವೈ ತ್ವಾ ಶಕ್ರಾಯ ಸುನವೈ ತ್ವಾ || 8:91:1 ||

       ಇಲ್ಲಿ ಸೋಮರಸವನ್ನು ಅರ್ಪಿಸಿ ಇಂದ್ರನನ್ನು ಒಲಿಸಿಕೊಂಡು ತನಗೆ ಬೇಕಾದ ವರಗಳನ್ನು ಪಡೆದ ಮಹಾ ಸಾಧಕಿ, ಋಷಿಕೆ ಅಪಾಲೆಯ ಬಗ್ಗೆ ಹೇಳಲಾಗಿದೆ.
ಅಪಾಲೆ ಯಾಕೆ ಇಂದ್ರನಿಗೆ ಸೋಮರಸವನ್ನು ಅರ್ಪಿಸಿದಳು? ಅಥವಾ ಆಗಿನ ಕಾಲದಲ್ಲಿ ಯಜ್ಞ ಯಾಗಾದಿಗಳು ಸರ್ವೇಸಾಮಾನ್ಯವಿರುವಾಗ, ಅಪಾಲೆ ಇಂದ್ರನಿಗೆ ಸೋಮದ ಹವಿಸ್ಸು ಅರ್ಪಿಸಿದ್ದರಲ್ಲಿ ವಿಶೇಷವೇನಿದೆ?

    ಇದೊಂದು ವಿಶೇಷ ಸ್ವಾರಸ್ಯ ಕಥನ. ವಿಶೇಷ ಸ್ವಾರಸ್ಯ ಅನ್ನುವುದಕ್ಕಿಂತ ಹೆಣ್ಣೊಬ್ಬಳ ಸಂಘರ್ಷದ ಕಥನ.

ತಂದೆಯಿಂದ  ಬ್ರಹ್ಮ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದ ಅಪಾಲಾ ಬ್ರಹ್ಮವಾದಿನಿಯಾಗಿ ಜನಮೆಚ್ಚುಗೆ ಪಡೆದಿದ್ದಳು. ಸದಾ ಉತ್ಸಾಹದ ಚಿಲುಮೆಯಾಗಿ ಚಿಮ್ಮುತ್ತಿದ್ದ ಅಪಾಲೆ ಬ್ರಹ್ಮರ್ಷಿಯೂ ಸಪ್ತರ್ಷಿಯೂ ಆದ ತಂದೆಯೊಡನೆಯೂ ಆಡುವಳು. ತಂದೆಗೆ ಕೂದಲಿರುವದಿಲ್ಲ. ಚಿಕ್ಕವಳದಿದ್ದಾಗಲೇ ತಂದೆಯ ಕೂದಲಿಲ್ಲದ ತಲೆಯನ್ನು ಸವರುತ್ತಾ ಇಂದ್ರನನ್ನು ಒಲಿಸಿಕೊಂಡು ಅವನು ತುಂಬುಗೂದಲಿನವನಾಗುವಂತೆ ಮಾಡುವುದಾಗಿ ಹೇಳುವಳು. ಮಗಳ ಈ ನಲ್ಮಾತುಗಳಿಗೆ ತಂದೆ ಹರ್ಷಿಸುವನು. ಮನೆಯವರೆಲ್ಲರೂ ತಂದೆ ಮಗಳ ಈ ವಿನೋದ ಸಲ್ಲಾಪದಲ್ಲಿ ಭಾಗಿಯಾಗುವರು.
    
    ಹೀಗಿರುವಾಗ ಅಪಾಲಾ ಬೆಳೆದು ದೊಡ್ಡವಳಾಗುತ್ತಾಳೆ.  ಎಲ್ಲ ಜವಾಬ್ದಾರ ತಂದೆಯಂತೆ ಈ ಋಷಿಯೂ ತನ್ನ ಮಗಳಿಗೆ ಯೋಗ್ಯ ವರನನ್ನು ಹುಡುಕಿ ಮದುವೆ ಮಾಡುತ್ತಾನೆ. ಈಗ ಅಪಾಲೆ ಮೊದಲಿನಂತೆ ಚಂಚಲೆಯಲ್ಲ. ಆಕೆ ಗಂಭೀರ ಗೃಹಿಣಿ. ಅಲ್ಪಾವಧಿಯಲ್ಲಿ ಗಂಡನ ಮನೆಯ ಒಲವು ಗಳಿಸುತ್ತಾಳೆ. ಆದರೆ ಗಂಡನಿಗೆ ಕೊಂಚ ಕೀಳರಿಮೆ. ಅಪಾಲೆ ತಿಳಿದವಳು. ಬ್ರಹ್ಮವಿದ್ಯಾ ಪಾರಂಗತೆ ಬೇರೆ! ಅವನ ಈ ಮತ್ಸರಕ್ಕೆ ಇಂಬು ಕೊಟ್ಟಂತೆ ಅಪಾಲಾ ಗರ್ಭ ಧರಿಸಲು ವಿಫಲಳಾಗುತ್ತಾಳೆ. ಗರ್ಭಾಶಯದ ದೌರ್ಬಲ್ಯ ಅವಳನ್ನು ಮಾತೃಸುಖದಿಂದ ವಂಚಿಸುತ್ತದೆ. ಅದು ತಿಳಿದುಬರುತ್ತಲೇ ಗಂಡನಿಂದಲೂ ಗಂಡನ ಮನೆಯವರಿಂದಲೂ ದೂಷಣೆಗೆ ಒಳಗಾಗುತ್ತಾಳೆ ಅಪಾಲಾ. ಅದಕ್ಕೆ ಕಿರೀಟವಿಟ್ಟಂತೆ ಆಕೆಯ ಕಾಲುಗಳ ಮೇಲೆ ಬಿಳಿಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಹರಡುತ್ತ ಹರಡುತ್ತ ದೇಹದುದ್ದ ಹಬ್ಬಿ ಮುಖವನ್ನೂ ಆವರಿಸಿದಾಗ `ತೊನ್ನು ರೋಗದವಳು’ ಶುಭ ಕಾರ್ಯಗಳಿಗೆ ಮೈಲಿಗೆಯೆಂದೂ ಅಪಶಕುನವೆಂದೂ ಅವಳನ್ನು ಗಂಡ ಮನೆಯಿಂದ ಓಡಿಸುತ್ತಾನೆ. ಅವಳಿಗೆ `ಅಪಾಲಾ’ ಅನ್ನುವ ಹೆಸರು ಬರುವುದು ಅನಂತರದಲ್ಲೇ. ಮೊದಲ ಹೆಸರು ಪಾಲಾ.  `ಅ ಪಾಲಾ’ ಅಂದರೆ – `ಪಾಲಕರಿಲ್ಲದವಳು’ ಎಂದರ್ಥ.
ದೂಷಣೆ, ಅಪವಾದ, ಲೋಕನಿಂದನೆಗಳೆಲ್ಲ ಬಂದೆರಗಿದರೂ ತಿರಸ್ಕಾರಕ್ಕೆ ಒಳಗಾದರೂ ಎದೆಗುಂದಲಿಲ್ಲ ಅಪಾಲೆ. ಬ್ರಹ್ಮಜ್ಞಾನಿಯಾಗಿದ್ದುಕೊಂಡೂ ಸಾಂಸಾರಿಕ ಕ್ಲೇಷಗಳಿಗೆ ದುಃಖಿಸಿದರೆ ಅಂತಹ ಜ್ಞಾನದಿಂದ ಪ್ರಯೋಜನವಾದರೂ ಏನು? ಅಪಾಲಾ ಈ ಜನ್ಮವು ಸಂತೃಪ್ತವಾಗಿರಬೇಕೆಂದು ಬಯಸಿದ್ದಳು. ಮುಮುಕ್ಷುವಾದ ಆಕೆಗೆ ಆ ಕಾರಣದಿಂದಲೇ ಸಮಸ್ಯೆಗಳು ಬಗೆಹರಿಯುವುದು ಬೇಕಿತ್ತು. ಆಕೆಗೆ ಜನನ ಮರಣ ಚಕ್ರದಿಂದ ಮುಕ್ತಿ ಬೇಕಿತ್ತು.
    
    ಕಾಡಿನಲ್ಲಿ ಕುಳಿತು ತಪೋನಿರತಳಾದಳು ಅಪಾಲಾ. ಸಾಧಕರಿಗೆ ಸಾವಿರ ಅಡ್ಡಿ ಅನ್ನುವಂತೆ ಕೇಡಿನ ಮಳೆ ಸುರಿಯಿತು. ಸಮೀಪದ ನದಿ ತುಂಬಿ ಹರಿದು ನೆರೆ ಬಿದ್ದಿತು. ಧ್ಯಾನಸ್ಥಳಾಗಿ ಕುಳಿತಿದ್ದ ಅಪಾಲಾಳನ್ನು ಕೊಚ್ಚಿಕೊಂಡು ಹರಿಯತೊಡಗಿತು. ಎಚ್ಚರಗೊಂಡ ಅಪಾಲೆ ಮುಂದಿನ ನಡೆಯನ್ನು ಯೋಚಿಸತೊಡಗಿದಳು. ತಪಸ್ಸಿನ ನಂತರ ಆಕೆ ಸೋಮಯಾಗ ನಡೆಸುವ ನಿಶ್ಚಯ ಮಾಡಿದ್ದಳು. ಆದರೆ ಈಗ ಆಕೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದಾಳೆ! ಸೋಮಯಾಗ ಮಾಡುವುದೆಲ್ಲಿಂದ!? ಇಷ್ಟಕ್ಕೂ ಆಕೆ ಹೊರಗೇ ಸುರಕ್ಷಿತವಿದ್ದರೂ ಸೋಮಯಾಗಕ್ಕೆ ಬೇಕಾದ ಅನುಕೂಲತೆಗಳ್ಯಾವುವೂ ಆಕೆಯಲ್ಲಿರಲಿಲ್ಲ. ಈಗಂತೂ ಪರಿಸ್ಥಿತಿ ಹೀಗಾಗಿದೆ. ಕೊಚ್ಚಿ ಹೋಗುವಾಗ ಒಂದು ಮರದ ಬೊಡ್ಡೆಗೆ ಕಾಲ್ತೊಡರಿ ಅದನ್ನೇ ಆತುಕೊಂಡಳು ಅಪಾಲೆ. ಆ ವೇಳೆಗೆ ಸರಿಯಾಗಿ ಸೋಮಲತೆಯ ಚೂರೊಂದು ಅವಳ ಬಳಿ ತೇಲಿ ಬಂದಿತು. ಅದರಿಂದ ಸೋಮರಸ ತೆಗೆದು ಇಂದ್ರನಿಗೆ ಅರ್ಪಿಸಲು ತೀರ್ಮಾನಿಸಿದಳು. ಹಲ್ಲುಗಳನ್ನೇ ಯಜ್ಞಕಲ್ಲುಗಳನ್ನಾಗಿ ಭಾವಿಸಿ, ತನ್ನ ಶರೀರದಲ್ಲಿರುವುದನ್ನೇ ಸೋಮಯಾಗದ ಸಾಧನೆ, ಸಲಕರಣೆಗಳನ್ನಾಗಿ ಮಾಡಿಕೊಂಡು, ಅವಳು ಹಲ್ಲಿನಿಂದಲೇ ಜಗಿದು ಅದರ ಮಿಶ್ರಣವನ್ನು ತಯಾರು ಮಾಡಿ, `ನನ್ನ ಹಲ್ಲಿನಲ್ಲಿ ಕಚ್ಚಿದ್ದೂ ನನ್ನದಲ್ಲ, ನನಗಲ್ಲ – ಇದಮ್ ನ ಮಮ’ ಎನ್ನುತ್ತ ಸಮರ್ಪಣಾ ಭಾವದಿಂದ ಸೋಮಲತೆಯನ್ನು ಅಗಿಯತೊಡಗಿದಳು.
    
    ಸೋಮವನ್ನು ಕುಟ್ಟುವ ಶಬ್ದ ಕೇಳಿದ ಇಂದ್ರನು ಅಲ್ಲಿಗೆ ಬಂದನು. ಆದರೆ ಅಲ್ಲಿ ಯಜ್ಞದ ಯಾವ ಕುರುಹೂ ಕಾಣಿಸುವುದಿಲ್ಲ . ಇನ್ನೇನು ಮರಳಬೇಕು ಅನ್ನುವಾಗ ಅಪಾಲೆ ಆತನನ್ನು ಸ್ತುತಿಸತೊಡಗಿದಳು. `ನನ್ನ ಬಾಯಲ್ಲಿ ಸೋಮರಸವು ಸಿದ್ಧವಾಗಿದೆ. ದಯಮಾಡಿ ಅದನ್ನು ಸ್ವೀಕರಿಸು’ ಎಂದು ವಿನಂತಿಸಿದಳು. ಅವಳ ಶ್ರದ್ಧೆಯಿಂದ ಸಂತಸಗೊಂಡ ಇಂದ್ರನು ಅವಳ ಸಹಾಯಕ್ಕೆ ಧಾವಿಸಿದನು. ಅವಳ ಸೋಮದ ಹವಿಸ್ಸನ್ನು ಸ್ವೀಕರಿಸಿ ಸಂಪ್ರೀತನಾದನು. ಆಕೆಯನ್ನು ನೀರಿನಿಂದ ಹೊರತಂದು, ವರಗಳನ್ನು ಮೂರು ವರಗಳನ್ನು  ಕೇಳುವಂತೆ ಆಗ್ರಹಿಸಿದನು. ಅಪಾಲೆ ಈ ಕ್ಷಣಕ್ಕಾಗಿ ಕಾದಿದ್ದಳು. ಅವಳ ತಪಸ್ಸು ಸಿದ್ಧಿಸುವ ಘಳಿಗೆ ಕಣ್ಣೆದುರಿಗಿತ್ತು. ಸಂಸಾರ ವೈಫಲ್ಯದಿಂದ, ಕಾಯಿಲೆಯಿಂದ, ಮಕ್ಕಳಾಗದ ನೋವಿನಿಂದ ಆಕೆ ದೈನ್ಯಳಾಗಿದ್ದಳು. ಆದರೆ ಅಂಥಾ ಸನ್ನಿವೇಶದಲ್ಲೂ ಅಪಾಲೆ ಕೇಳಿದ ಮೊದಲ ವರ ಏನು ಊಹಿಸಬಲ್ಲಿರಾ? `ನನ್ನ ತಂದೆಯ ತಲೆಯ ಮೇಲೆ ಕೂದಲು ಬೆಳೆಯುವಂತೆ ಮಾಡು’ ಶಿರೋಭಾಗದ ಮೇಲುಗಡೆ ಸೂಕ್ಷ್ಮ ಪ್ರದೇಶದ ಬೆಳವಣಿಗೆಯಾಗಬೇಕು ಎಂದು! ಹೌದು. ಅಪಾಲಾ ಎಷ್ಟೇ ಬ್ರಹ್ಮವಾದಿನಿಯಾಗಿದ್ದರೂ ಗಂಭೀರ ಗೃಹಿಣಿಯಾಗಿದ್ದರೂ ಆಕೆಯ ಮುಗ್ಧತೆ ಹಾಗೆಯೇ ಇತ್ತು. ಆಕೆ ವಯಸ್ಸಿನ ಸೋಂಕುಗಳಿಗೆ, ಕಪಟಕ್ಕೆ ಒಳಗಾಗಿರಲಿಲ್ಲ. 
    ಆಕೆಯ ಈ ವಿಶಿಷ್ಟ ಕೋರಿಕೆಯನ್ನು ಇಂದ್ರ ಮನ್ನಿಸಿದ. ಶಿರೋಭಾಗದ ಮೇಲಿನ ಪ್ರದೇಶವೆಂದರೆ ನವೀನ ಕಲ್ಪನೆಗಳು , ಅಂತಃಸ್ಫುರಣೆಗಳು ಉಗಮಿಸುವ ಸ್ಥಾನ. ತನ್ನ ತಂದೆಯ ಸೂಕ್ಷ್ಮ ಶರೀರದಲ್ಲಿ ಸಂಕಲ್ಪ ಶಕ್ತಿ, ಮುಂತಾದ ಶಕ್ತಿಗಳು ವರ್ಧಿಸಬೇಕೆಂಬುದು.   ನಂತರ ಎರಡನೆಯ ವರವಾಗಿ ಅಪಾಲೆ ತನ್ನ ತೊನ್ನು ರೋಗವನ್ನು ನಿವಾರಿಸಿ ಶರೀರಕ್ಕೆ ಸೌಂದರ್ಯ ಕಾಂತಿಗಳನ್ನು , ಮೂರನೆಯ ವರವಾಗಿ  ಮಕ್ಕಳಾಗುವ ಫಲ ಕರುಣಿಸುವಂತೆಯೂ ಕೇಳಿಕೊಂಡಳು.
ಇಂದ್ರಾನುಗ್ರಹದಿಂದ ದಿವ್ಯಶರೀರವನ್ನು ಪಡೆದ ಅಪಾಲಾ ಮರಳಿ ಪತಿಗೃಹ ಸೇರಿದಳು. ಆಕೆಯ ಸಾಧನೆಗೆ ಗಂಡ ನಾಚಿದ. ಕ್ಷಮೆ ಯಾಚಿಸಿ ಗೌರವದಿಂದ ಅವಳನ್ನು ನಡೆಸಿಕೊಳ್ಳತೊಡಗಿದ. ಪತಿಪತ್ನಿಯರಿಬ್ಬರೂ ಧರ್ಮ ಕಾರ್ಯಗಳನ್ನು ನಡೆಸುತ್ತಾ, ಮಕ್ಕಳನ್ನು ಹೊಂದಿ ತುಂಬು ಸಂಸಾರವಂತರಾಗಿ ಬಾಳಿದರು. ಅವಳ ಬಯಕೆಗಳೆಲ್ಲವೂ ನೆರವೇರಿದ ಸಂತೃಪ್ತಿಯನ್ನು ಹೊಂದಿ ಮೋಕ್ಷಮಾರ್ಗಿಯಾದಳು ಅಪಾಲಾ. ಅವಳ ಸಾಧನೆ ಸಮಕಾಲೀನ ಋಷಿ – ಋಷಿಕೆಯರ ಶ್ಲಾಘನೆಗೆ ಒಳಗಾಯಿತು. ಈ ಅಪಾಲೆ ಬೇರೆ ಯಾರೂ ಅಲ್ಲ ...
    ಅಪಾಲಾ ಸಪ್ತರ್ಷಿಗಳಲ್ಲಿ ಒಬ್ಬನೂ ಬ್ರಹ್ಮ ಮಾನಸ ಪುತ್ರನೂ ಆದ ಅತ್ರಿ ಮುನಿಯ ಮಗಳು. ಈಕೆ ತಂದೆಯ ಮುದ್ದಿನ ಮಗಳು. ಬುದ್ಧಿವಂತೆಯಾದ ಮಗಳಿಗೆ ಅತ್ರಿ ಮುನಿ ತನ್ನೆಲ್ಲ ಜ್ಞಾನವನ್ನೂ ಧಾರೆ ಎರೆದಿದ್ದಾನೆ.  ಸ್ವತಃ ಮಂತ್ರದ್ರಷ್ಟಾರನಾದ ಅತ್ರಿಯು ಅಪಾಲೆಗೆ ಮಂತ್ರೋಪದೇಶವನ್ನೂ ನೀಡಿದ್ದಾನೆ. 
    ಕೇವಲ ತನ್ನ ಮೈಮೇಲೆ ಬಿಳಿ ಮಚ್ಚೆಗಳು ಬಂದವು ಅನ್ನುವ ಕಾರಣಕ್ಕೆ ಜನರ ಅಸಡ್ಡೆಗೆ ಗುರಿಯಾಗುವ, ಮಕ್ಕಳನ್ನು ಹೆರುವ ಸಾಮರ್ಥ್ಯ ಇಲ್ಲವೆನ್ನುವ ಕಾಲಕ್ಕೆ ಗಂಡನಿಂದ ತ್ಯಜಿಸಲ್ಪಡುವ ಹೆಣ್ಣು ಹಾದು ಹೋಗುವ ಸಂಕಷ್ಟಗಳನ್ನು ನಾವು ಊಹಿಸಬಹುದು. ಈ ಎರಡು ಸಂಗತಿಗಳು ಸಹಸ್ರಮಾನಗಳಾಚೆ ಘಟಿಸಿದ್ದಾದರೂ ನಮಗೆ ಇವತ್ತಿಗೂ ಪ್ರಸ್ತುತವಾಗಿ ತೋರುತ್ತವೆ ಅಲ್ಲವೆ? ಮಹಿಳೆಯರ ಸ್ಥಾನಮಾನಗಳು ಮೇಲ್ನೋಟಕ್ಕೆ ಬದಲಾದಂತೆ ಕಂಡರೂ ಒಳಹರಿವಲ್ಲಿ ಆಕೆಯಿನ್ನೂ ಅಲ್ಲಿಯೇ ಉಳಿದುಹೋಗಿದ್ದಾಳೆ ಅನ್ನುವುದನ್ನು ಇದು ಸೂಚಿಸುತ್ತದೆ. ಹಾಗೆಂದು ನಿರಾಶರಾಗುವ ಕಾರಣವಿಲ್ಲ. ಅಪಾಲೆ, ಘೋಷಾರಂಥ ಹೆಣ್ಣುಮಕ್ಕಳು ಈ ನಿರ್ಲಕ್ಷ್ಯಕ್ಕೆ ಸಡ್ಡು ಹೊಡೆದು, ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಮರಳಿ ಗಳಿಸಿ ಮಾದರಿಯಾಗಿ ಉಳಿದಿದ್ದಾರೆ. ಅಂಥವರ ಸಂತತಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡಿರುವುದು ಸಮಾಧಾನದ ಸಂಗತಿ.
    ಋಗ್ವೇದದ ಎಂಟನೇ ಮಂಡಲದ 91ನೇ ಸೂಕ್ತದ 1 ರಿಂದ 7ರವರೆಗಿನ ಋಚೆಗಳು ಅಪಾಲೆಯಿಂದ ಸಂಕಲಿತವಾದವು. ಇವು ಈಕೆ ಇಂದ್ರನಿಂದ ಶುದ್ಧೀಕರಣಗೊಂಡು ದಿವ್ಯದೇಹ ಪಡೆದ ಸನ್ನಿವೇಶವನ್ನು ವಿವರಿಸುತ್ತವೆ.