December 27, 2022

ಹಿರಣ್ಯ ಗರ್ಭ

ಕಸ್ಮೈ ದೇವಾಯ ಹವಿಷಾ ವಿಧೇಮ

ಹಿರಣ್ಯಗರ್ಭ ಸೂಕ್ತ ಎಂದೇ ಪ್ರಸಿದ್ಧಿ ಪಡೆದ ಈ ಸೂಕ್ತದ ದ್ರಷ್ಟಾರ ಮಹರ್ಷಿ ಪ್ರಜಾಪತಿಯ ಮಗನಾದ ಹಿರಣ್ಯಗರ್ಭನು. ಇದು ಋಗ್ವೇದದ ಹತ್ತನೇ ಮಂಡಲದ 121ನೇ ಸೂಕ್ತ. 

ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ ||

ಈ ಬ್ರಹ್ಮಾಂಡದ ಸೃಷ್ಟಿಯ ಆದಿಯಲ್ಲಿ ಹಿರಣ್ಯಗರ್ಭ ಎನ್ನುವ ಹೆಸರನ್ನು ಪಡೆದಿದ್ದ ಪ್ರಜಾಪತಿಯು ಒಬ್ಬನೇ ಇದ್ದನು. ಈತನಿಂದಲೇ ಬ್ರಹ್ಮಾಂಡದ ಎಲ್ಲವೂ ಜನ್ಮ ತಳೆದವು. ಈ ಹಿರಣ್ಯಗರ್ಭನು ವಿಶಾಲವಾದ ಭೂಮ್ಯಂತರಿಕ್ಷಗಳೆಲ್ಲವನ್ನೂ ತಾನು ಹೊಂದಿದ್ದಾನೆ. ಅಂದರೆ ಇವನೇ ಎಲ್ಲವಕ್ಕೂ ಮೂಲ. ಇವನ ಮುಖ್ಯ ಗುಣವೇ ಉದಾರತೆ ಅಥವಾ ದಾನ. ಅಂತಹ ಪ್ರಜಾಪತಿಗೆ ಹವಿಸ್ಸುಗಳನ್ನು ಕೊಡೋಣ. ಇಲ್ಲಿ ಕಸ್ಮೈ ಎನ್ನುವುದು ಪ್ರಜಾಪತಿಯನ್ನು ಕುರಿತಾಗಿ.
"ಪ್ರಜಾಪತಿರ್ವೈ ಹಿರಣ್ಯ ಗರ್ಭಃ" ಇದು ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಬರುವ ಮಂತ್ರ. ಈ ಬ್ರಹ್ಮಾಂಡದ ರಚನೆಯ ಆರಂಭದಲ್ಲಿ ಜಗತ್ತು ಒಂದು ಮೊಟ್ಟೆಯ ಆಕಾರದಲ್ಲಿತ್ತು. ಅದೂ ಸಹ ಪ್ರಜಾಪತಿಯ ಹೊಟ್ಟೆಯಲ್ಲಿತ್ತು. ಅದು ಅಲ್ಲಿ ಚಿನ್ನದಂತೆ ಹೊಳೆಯುತ್ತಾ ಪ್ರಕಾಶಮಾನವಾಗಿತ್ತು. ಅಂತಹ ಪ್ರಕಾಶಮಾನವಾದ ಹಿರಣ್ಯಾಂಡವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡದ್ದಕ್ಕಾಗಿ ಪ್ರಜಾಪತಿಯನ್ನು ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ. ಈ ಜಗತ್ತು ಮೊದಲು ಅವ್ಯಕ್ತವಾಗಿತ್ತು, ಅತ್ಯಂತ ಸೂಕ್ಷವಾದ ಕಣವೊಂದರಿಂದ ಆಮೇಲೆ ವ್ಯಕ್ತವಾಯಿತು ಎನ್ನುವ ಅತ್ಯಂತ ದೊಡ್ದ ಅರ್ಥವನ್ನು ಕೊಡುತ್ತದೆ. “ಸೋ ಕಾಮಯತ ಬಹುಸ್ಯಾಂ ಪ್ರಜಾಯಾಯೇತಿ” ಎನ್ನುವ ತೈತ್ತಿರೀಯ ಉಪನಿಷತ್ತಿನ ವಾಕ್ಯವೂ ಸಹ ಇದನ್ನೇ ಹೇಳುತ್ತದೆ. ಪ್ರಜಾಪತಿಯ ಗರ್ಭದಲ್ಲಿ ಅವ್ಯಕ್ತ ಸ್ವರೂಪದಲ್ಲಿದ್ದು, ಚಿನ್ನದಂತೆ ಪ್ರಕಾಶಮಾನವಾಗಿ ಕಾಣಿಸಿಕೊಂಡಿರುವುದು ಈ ಜಗತ್ತು ಆದುದರಿಂದ ಪ್ರಜಾಪತಿಯನ್ನು ಮತ್ತು ಈ ಜಗತ್ತನ್ನು ಹಿರಣ್ಯಗರ್ಭ ಎನ್ನುವುದಾಗಿ ಹೇಳಲಾಗುತ್ತದೆ. ಹೌದು ಇಲ್ಲಿ ಇನ್ನೊಂದು ಜಿಜ್ಞಾಸೆ ನಮ್ಮನ್ನು ಕಾಡುತ್ತದೆ. ಈ ಮೇಲಿನ ಋಕ್ಕಿನ ಮುಂದಿನ ಭಾಗದಲ್ಲಿ ಭೂತಸ್ಯ ಜಾತಃ ಪತಿರೇಕ ಆಸೀತ್’ ಎನ್ನುತ್ತದೆ. ಪತಿ ಎನ್ನುವುದು ಒಡೆಯನಿಗೆ. ವ್ಯಕ್ತವಲ್ಲದ ಸ್ಥಿತಿಯಲ್ಲಿದ್ದ ಜಗತ್ತಿನಲ್ಲಿ ಪ್ರಜಾಪತಿಯೊಬ್ಬನಿದ್ದಾಗ ಆತ ಒಡೆಯನಾಗಲು ಸಾಧ್ಯವೇ ? ಅಂದರೆ ಈ ಹಿರಣ್ಯಗರ್ಭನ ಉದರದಲ್ಲಿ ಬ್ರಹ್ಮಾಂಡದ ಸಕಲ ಚರಾಚರಗಳು ಕುಳಿತಿದ್ದವು ಅವುಗಳನ್ನು ನಿಯಂತ್ರಿಸಿಕೊಂಡಿದ್ದವ ಪ್ರಜಾಪತಿ ಅಥವಾ ಹಿರಣ್ಯಗರ್ಭ. ಆದುದರಿಂದ “ಭೂತಸ್ಯ ಜಾತಃ ಪತಿರೇಕಃ” ‘ಸ ದಾಧಾರ ಪೃಥಿವೀಂ ದ್ಯಾಮುತೇಮಾಂ’ ಈ ಹಿರಣ್ಯಗರ್ಭನಿಂದಲೇ ಅಸ್ತಿತ್ವವನ್ನು ಪಡೆದ ಈ ಭೂಮಿ ಅಂತರಿಕ್ಷ ಮತ್ತು ದೇವಲೋಕಗಳಿಗೆ ಇವನೇ ಆಧಾರವಾಗಿ ಇರುವುದರಿಂದ ಇವನನ್ನೇ ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ. 
___________________________________________________________________
ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ| ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ| ಪೃಥಿವ್ಯಾ ಓಷಧಯಃ| ಓಷಧೀಭ್ಯೋ ಅನ್ನಃ| ಅನ್ನಾತ್ ಪುರುಷಃ|| ತೈತ್ತಿರೀಯ ಉಪನಿಷದ್|| 2:1:2
ಮೂಲ: ಸದ್ಯೋಜಾತರು
#ಕಸ್ಮೈ_ದೇವಾಯ

No comments:

Post a Comment

If you have any doubts. please let me know...