December 13, 2022

ವೇದಗಳಲ್ಲಿ ಗ್ರಾಮದ ಪರಿಕಲ್ಪನೆ

ವಿಶ್ವಂ ಪುಷ್ಟಂ ಗ್ರಾಮೇ 

ನಮ್ಮಲ್ಲಿ ಎಲ್ಲವಕ್ಕೂ ತಪ್ಪು ಹುಡುಕುವ ಅಥವಾ ಎಲ್ಲದರಲ್ಲಿಯೂ ಆಧುನಿಕತೆಯನ್ನು ಹುಡುಕುವ ಪರಿಪಾಠವಿದೆ. ಬಹು ಮುಖ್ಯವಾಗಿ ಪ್ರಾಚೀನತೆ, ನಮಗದು ಅಸಹ್ಯ. ನಾವು ಅಡ್ವಾನ್ಸ್‌ಡ್ ಆಗಬೇಕು. ಅದಕ್ಕಾಗಿ ನಾವು ಹೇಳಿಕೊಳ್ಳುವುದು ಈ ದೇಶದಲ್ಲಿ ಆಡಳಿತ ವ್ಯವಸ್ಥೆ ಆರಂಭವಾದದ್ದೇ ಬ್ರಾಹ್ಮಣಗಳು ಬಂದನಂತರ ಎನ್ನುವುದಾಗಿ. ಜನಪದವಿರಲಿ, ಮಹಾಜನಪದವಿರಲಿ ಅವೆಲ್ಲವೂ ಆಮೇಲಿನ ಅನ್ಯ ದೇಶೀಯರನ್ನು ನೋಡಿ ನಾವು ಕಲಿತದ್ದು ಎನ್ನುವಂತಹ ಧೋರಣೆ ನಮ್ಮಲ್ಲಿದೆ. ಆದರೆ ಗ್ರಾಮ ವ್ಯವಸ್ಥೆ, ಅರಣ್ಯ ರಕ್ಷಣೆ, ಆಡಳಿತವ್ಯವಸ್ಥೆ, ಆರ್ಥಿಕನಿರ್ವಹಣೆ, ರಾಜನಿಗೆ ಹೇಗೆ ಪಟ್ಟಾಭಿಷೇಕ ಮಾಡಬೇಕು ಎನ್ನುವಂಥಹ ವಿಷಯಗಳನ್ನು ನಾವು ಕಂಡು ಕೇಳರಿಯದಷ್ಟು ಪ್ರಾಚೀನದಲ್ಲಿಯೇ ಈ ನೆಲ ರೂಢಿಸಿಕೊಂಡಿತ್ತು. ಸಿಂಧೂ ಸರಸ್ವತೀ ನಾಗರೀಕತೆಯ ಜನ ಸುಸಜ್ಜಿತ ನಗರ ವ್ಯವಸ್ಥೆ ಮಾಡಿಕೊಂಡಿದ್ದರು ಅನ್ನುವುದಕ್ಕೂ ಮೊದಲೇ ಆ ಸುಸಜ್ಜಿತ ವ್ಯವಸ್ಥೆ ನಮ್ಮಲ್ಲಿ ಇತ್ತು. ಆದರೆ ಇತ್ತು ಎನ್ನುವುದನ್ನು ಒಪ್ಪುವ ಮನಸ್ಸು ಬರಡಾಗಿತ್ತು.

ಹಿಂದೆ ಗೃತ್ಸಮದ ಎನ್ನುವ ಋಷಿಯು ಗ್ರಾಮದ ಸ್ವರೂಪವನ್ನು ಮೊದಲಿಗೆ ಕಟ್ಟಿ ಕೊಡುತ್ತಾನೆ. ‘ಯಸ್ಯ ಗಾವೋ ಯಸ್ಯ ಗ್ರಾಮಾ ಯಸ್ಯ ವಿಶ್ವೇ ರಥಾಸಃ’ ಎನ್ನುವುದನ್ನು ಈ ಋಷಿಯು ಇಂದ್ರನನ್ನು ಕುರಿತಾಗಿ ಹೇಳುತ್ತಾ, ಈ ಕುದುರೆಗಳು, ಜನರು, ಗೋವುಗಳು ಮತ್ತು ಗ್ರಾಮಗಳು ನಿನ್ನ ಅಧೀನಕ್ಕೆ ಒಳಪಟ್ಟು ನೀನು ಶಾಸನಕ್ಕೊಳಪಡಿಸಿರುವೆ ಎನ್ನುವುದನ್ನು ಗಮನಿಸಿದರೆ ನಮ್ಮ ಆಡಳಿತ ವ್ಯವಸ್ಥೆಯ ಆರಂಭವಾಗಿದ್ದು ಅತ್ಯಂತ ಪ್ರಾಚೀನ ಕಾಲದಲ್ಲಿ ಎನ್ನುವುದು ನಿಶ್ಚಯ. ಅಂದರೆ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಜನಪದ ಮತ್ತು ಮಹಾಜನಪದಗಳಿರುತ್ತವೆ. ಅವುಗಳಲ್ಲಿ ಗ್ರಾಮ ಸಹ ಮುಖ್ಯವಾಗುತ್ತದೆ. ಗ್ರಾಮಗಳು ಜನವಸತಿ ಮತ್ತು ಕೃಷಿಯೇ ಮುಂತಾದ ಚಟುವಟಿಕೆಯ ಕೇಂದ್ರ ಎನ್ನುವುದು ಋಷಿಯ ಅಭಿಪ್ರಾಯವಾಗಿದ್ದು, ಗ್ರಾಮವೂ ಸಹ ಆಡಳಿತಕ್ಕೆ ಮತ್ತು ರಾಜನ ಅಧೀನದಲ್ಲಿಯೇ ಇರುತ್ತವೆ ಎನ್ನುವುದು ಗೃತ್ಸಮದನ ಅಭಿಪ್ರಾಯ.
ಇನ್ನು ಅಥರ್ವವೇದದ ೪:೭ನೇ ಸೂಕ್ತದಲ್ಲಿ ’ಪರಿಗ್ರಾಮಮಿವಾಚಿತಂ’ ಎಂದು ಜನಸಮೂಹ ಒಟ್ಟಾಗಿ ಜೀವಿಸುವ ಪ್ರದೇಶವನ್ನು ಗ್ರಾಮ ಎಂದು ಕರೆಯಬೇಕು ಎನ್ನುವುದನ್ನು ಹೇಳಲಾಗಿದೆ. ಇನ್ನು ಆಂಗಿರಸ ವಂಶದ ಕುತ್ಸನು ರುದ್ರನನ್ನು ಕುರಿತು ’ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಂ’ ಎನ್ನುವಲ್ಲಿ ಹೇ ರುದ್ರದೇವನೇ ನಾವು ವಾಸಿಸುವ ಗ್ರಾಮದಲ್ಲಿ ಇರುವಂತಹ ಸಮಸ್ತ ಪ್ರಾಣಿಗಳು, ಮನುಷ್ಯರೂ ಸಹ ಯಾವುದೇ ರೋಗಬಾಧೆಯಿಂದ ಬಾಧಿಸಲ್ಪಡದಿರಲಿ ಎನ್ನುವುದು ಋಗ್ವೇದದ 1:114ನೇ ಸೂಕ್ತದಲ್ಲಿ ಇದ್ದರೆ, ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ 1:2:1:1 ರಲ್ಲಿ ಇದೇ ಮಂತ್ರವಿದ್ದು ಅಲ್ಲಿಯೂ ಸಹ ರೋಗದಿಂದ ಮುಕ್ತರನ್ನಾಗಿ ಗ್ರಾಮದಲ್ಲಿರುವ ಸಕಲ ಜೀವಿಗಳನ್ನು ರಕ್ಷಿಸು ಎನ್ನಲಾಗಿದೆ.
ಹಿಂದೆ ಇರಂಮದ ಎನ್ನುವ ಮಹರ್ಷಿಯೊಬ್ಬನಿದ್ದ. ಆತನಿಗೆ ದೇವಮುನಿ ಎನ್ನುವ ಮಗನೊಬ್ಬ ಇದ್ದ. ಈತ ಮಹಾ ತಪಸ್ವಿ ಹಾಗೂ ಮಂತ್ರ ದೃಷ್ಟಾರನಾಗಿದ್ದ. ಯಾಗ ಯಜ್ಞಗಳನ್ನು ನೆರವೇರಿಸಿಕೊಂಡು ಸನ್ಯಾಸ ಜೀವನ ನಡೆಸುತ್ತಿದ್ದ. ಒಮ್ಮೆ ಈತ ಏಕಾಂಗಿಯಾಗಿ ಹೊರಡುತ್ತಾನೆ. ನಡೆಯುತ್ತಾ ನಡೆಯುತ್ತಾ ಒಂದು ಅರಣ್ಯವನ್ನು ಪ್ರವೇಶಿಸಿತ್ತಾನೆ. ಗಹನವಾದ ಅರಣ್ಯದಲ್ಲಿ ಆತ ಅನೇಕ ವಿಧವಾದ ನೈಸರ್ಗಿಕ ವಿಸ್ಮಯಗಳನ್ನು ನೋಡುತ್ತಾನೆ. ಆಗ ಆತ ಕಂಡುಕೊಂಡ ಸ್ತುತಿಯೇ ಋಗ್ವೇದದಲ್ಲಿ ಬರುವ ಪ್ರಸಿದ್ಧವಾದ ಅರಣ್ಯಸೂಕ್ತ. ಈ ಅರಣ್ಯ ಸೂಕ್ತದಲ್ಲಿ ಬರುವ ಇತರೇ ವಿಷಯಗಳ ಕುರಿತಾಗಿ ನಾನು ಇಲ್ಲಿ ಬರೆಯುತ್ತಿಲ್ಲ. ಇಲ್ಲಿ ಆತ ಅರಣ್ಯದ ಭೀಕರ ಸನ್ನಿವೇಶವನ್ನು ನೀರವ ಮೌನವನ್ನು ಹೇಳಿ ಅದರ ಕಲ್ಪನೆಯನ್ನು ಜಾಗ್ರತಗೊಳಿಸುತ್ತಾನೆ. ಕೆಲವು ಸಮೀಕರಣಗಳನ್ನು ಮಾಡುತ್ತಾ ಪಶು, ಪಕ್ಷಿಗಳ ನಿವಾಸ ಸ್ಥಳ ಮತ್ತು ಅವುಗಳ ಕೂಗನ್ನು ಹೇಳುತ್ತಾ ಸಂಗೀತದ ಉಪಕರಣವೊಂದನ್ನು ಋಗ್ವೇದದ 10:146:1ನೇ ಋಕ್ಕಿನಲ್ಲಿ ಹೇಳುತ್ತಾನೆ. ‘ಕಥಾ ಗ್ರಾಮಂ ನ ಪೃಚ್ಛಸಿ’ ಎನ್ನುತ್ತಾ ಅರಣ್ಯಕ್ಕೆ ಅತೀ ಸಮೀಪದಲ್ಲಿರುವುದು ಗ್ರಾಮ ಮತ್ತು ಆ ಗ್ರಾಮಕ್ಕೆ ಹೋಗುವುದು ಹೇಗೆ ಎನ್ನುತ್ತಾನೆ. ಇಡೀ ಸೂಕ್ತದಲ್ಲಿ ಗ್ರಾಮದ ಪರಿಸರ ಮತ್ತು ಅರಣ್ಯದ ಸುಂದರ ವಾತಾವರಣವನ್ನು ಹೇಳುತ್ತನೆ. ಇನ್ನು ‘ಗಾವ ಇವ ಗ್ರಾಮಂ’ ಎಂದು ಅದೇ ಮಂಡಲದ ೧೪೯ನೇ ಸೂಕ್ತದಲ್ಲಿ ಬಂದಿದೆ. ಅಂದರೆ ಸಾಯಣಾಚಾರ್ಯರು ಅದನ್ನು ’ಗಾವ ಇವ ಯಥಾರಣ್ಯೇ ಸಂಚರಂತೋ ಗಾವೋ ಗ್ರಾಮಂ ಶೀಘ್ರಮಭಿಗಚ್ಛಂತಿ’ ಎನ್ನುತ್ತಾರೆ. ಎಂದರೆ ಅರಣ್ಯದಲ್ಲಿ ಮೇಯಲಿಕ್ಕಾಗಿ ಹೋದ ಗೋವುಗಳು ಅರಣ್ಯದಿಂದ ಊರಿಗೆ ಶೀಘ್ರವಾಗಿ ಹಿಂದಿರುಗುವಂತೆ ಎಂದಿರುವುದನ್ನು ಗಮನಿಸಿದರೆ ಅಲ್ಲಿ ಗ್ರಾಮದ ವ್ಯವಸ್ಥೆ ಪ್ರಧಾನವಾಗಿ ಕೃಷಿಯೇ ಮೊದಲಾದ ಚಟುವಟಿಕೆಗಳಿಗೆ ಕಾರಣವಾಗಿದ್ದು ಅಲ್ಲಿ ದೇಶದ ಆರ್ಥಿಕತೆ ನಿಗದಿಯಗುತ್ತಿತ್ತು. ಹೇಗೆ ನಗರದ ನಿರ್ಮಾಣವಾಗಿ ಅಲ್ಲಿ ಗ್ರಾಮ ರಕ್ಷಣೆಗೆ ಮತ್ತು ಸುಸಜ್ಜಿತ ಜೀವನಕ್ಕೆ ಅನುವಾಗುವಂತಹ ಕಾನೂನು ಮತ್ತು ರಕ್ಷಣೆ ನಡೆಯುತ್ತಿತ್ತೋ ಗ್ರಾಮಗಳು ಸಹ ಅದೇ ರೀತಿಯ ವ್ಯವಸ್ಥೆಯನ್ನು ರೂಪಿಸಿಕೊಂಡದ್ದು ತಿಳಿಯುತ್ತದೆ. ಶತಪಥ ಬ್ರಾಹ್ಮಣ 13:2:4:2, ವಾಜಸನೇಯಿ ಸಂಹಿತಾ 3:45, ಐತರೇಯ ಬ್ರಾಹ್ಮಣ 3:44; ಛಾಂದೋಗ್ಯ ಉಪನಿಷತ್ತಿನ 8:6:2ರಲ್ಲಿ ಗ್ರಾಮಗಳ ವ್ಯವಸ್ಥೆಯ ಕುರಿತಾಗಿ ಬಂದಿವೆ.
‘ವಾಯವ್ಯಾನ್ ಅರಣ್ಯಾನ್ ಗ್ರಾಮ್ಯಾಶ್ಚ ಯೇ’ ಎನ್ನುವ ಪುರುಷ ಸೂಕ್ತದಲ್ಲಿ ವಿರಾಟ್ ಪುರುಷನು ಸೃಷ್ಟಿಯ ಆರಂಭದಲ್ಲಿ ಅರಣ್ಯವನ್ನು, ಗಾಳಿಯಲ್ಲಿ ಹಾರಾಡಲು ಸಾಧ್ಯವಾಗುವ ಪಕ್ಷಿಗಳನ್ನು ಮತ್ತು ಗ್ರಾಮಗಳನ್ನು ಸೃಷ್ಟಿಸಿದನು ಅಥವಾ ವ್ಯವಸ್ಥೆಗೊಳಿಸಿದನು ಎಂದಿರುವಲ್ಲಿ ಗ್ರಾಮದ ಕಲ್ಪನೆ ಅದೆಷ್ಟು ಪ್ರಾಚೀನ. 

ಇನ್ನು ಅಥರ್ವವೇದದ 4:22:2 ರ ಅಮಿತ್ರಕ್ಷಯನ ಸೂಕ್ತದಲ್ಲಿ ’ಏಮಂ ಭಜ ಗ್ರಾಮೇ’ ಎನ್ನುವಲ್ಲಿ ಗ್ರಾಮದಲ್ಲಿ ಉಳಿಯಲು ಯೋಗ್ಯವಾದ ಸಾಕುಪ್ರಾಣಿ ಪಕ್ಷಿಗಳನ್ನು ಹೇಳಲಾಗಿದೆ. ಇನ್ನು ಬ್ರಹದಾರಣ್ಯಕ ಉಪನಿಷತ್ತಿನ 6:3:13ರಲ್ಲಿ ಗ್ರಾಮಗಳಲ್ಲಿ ಬೆಳೆದ ಬೆಳೆಗಳನ್ನು ಹೇಗೆ ಸಂಗ್ರಹಿಸಿಡಬೇಕು ಎನ್ನುವುದು ತಿಳಿಸಿಕೊಡಲಾಗಿದೆ. ಇನ್ನು ಗ್ರಾಮ ಎನ್ನುವುದು ಯಾವತ್ತೂ ಮುಕ್ತವಾಗಿರುವುದರಿಂದ ಇದು ಸಾರ್ವಜನಿಕರಿಗೆ ಅನುಕೂಲವಾಗಿಯೇ ಇರುತ್ತಿತ್ತು. ಜೈಮಿನೀಯ ಉಪನಿಷತ್ ಬ್ರಾಹ್ಮಣದಲ್ಲಿ 3:13:4 ರಲ್ಲಿ ಮಹಾಗ್ರಾಮ ಎನ್ನುವ ಉಲ್ಲೇಖ ಸಿಗುತ್ತದೆ. ಹೀಗೇ ಗ್ರಾಮ, ನಗರ ಮತ್ತು ಕೋಟೆಗಳು ಅತ್ಯಂತ ಪ್ರಾಚೀನವಾಗಿದ್ದು ಅಲ್ಲಿ ಜನ ಅವರವರ ಕಸುಬನ್ನು ವ್ಯವಸ್ಥಿತ ರೂಪದಲ್ಲಿ ಮಾಡಿಕೊಂಡು ಬಂದಿದ್ದಾರೆ. ಬಹಳಷ್ಟು ಉದಾಹರಣೆಗಳೊಂದಿಗೆ ಪ್ರಾಚೀನ ಜನರು ನಾಗರೀಕತೆ ಕಟ್ಟಿಕೊಂಡು ಅದನ್ನು ಉಳಿಸಿಕೊಂಡು ಸುವ್ಯವಸ್ಥಿತರಾಗಿ ಬದುಕಿ ಆದರ್ಶ ಮೆರೆದು ’ಕೀರ್ತಿಯಸ್ಯ ಸ ಜೀವತಿ’ ಎಂದವರು. 

#ಅರಣ್ಯಾನ್_ಗ್ರಾಮ್ಯಾಶ್ಚ_ಯೇ
ಸದ್ಯೋಜಾತರು

No comments:

Post a Comment

If you have any doubts. please let me know...