November 26, 2022

ಅಪ್ಪನೆಂದರೆ!

ಭಾರ್ಗವ ವಂಶದಲ್ಲಿ ಸೋಮಾಹುತಿ ಎನ್ನುವ ಮಹರ್ಷಿ ಇದ್ದದ್ದು ಋಗ್ವೇದದ ಎರಡನೇ ಮಂಡಲದ 5ನೇ ಸೂಕ್ತದಿಂದ ತಿಳಿದು ಬರುತ್ತದೆ. ಈ ಮಹರ್ಷಿ ಸೂಕ್ತದೃಷ್ಟಾರನಾಗಿದ್ದ. ಮರಣದ ನಂತರದ ಪ್ರಜ್ಞಾವಸ್ಥೆಯಿಂದ ಸುಪ್ತಾವಸ್ಥೆಗೆ ಸೇರಿದ ನಂತರದ ಬದುಕಿನ ಕುರಿತು ಈ ಮಹರ್ಷಿ ಸ್ವಲ್ಪ, ಸ್ತುತಿಗಳಲ್ಲಿ ವ್ಯಕ್ತ ಪಡಿಸಿರುವುದು ಸಿಗುತ್ತವೆ. ಸೋಮಾಹುತಿಯ ಸೂಕ್ತವನ್ನು ಗಮನಿಸಿದರೆ ಆತ ತನ್ನ ಅಭಿವೃದ್ಧಿಗೆ, ಅಭ್ಯುದಯಕ್ಕೆ ಪ್ರೇರಕನಾದ ಅಪ್ಪನನ್ನು ಸ್ಮರಿಸುವುದು ಕಾಣಿಸುತ್ತದೆ. . . . 
ಹೋತಾ ಜನಿಷ್ಟ ಚೇತನಃ ಪಿತಾ ಪಿತೃಭ್ಯ ಊತಯೇ |. . . . . ವಾಜಿನೋ ಯಮಂ || ಎನ್ನುತ್ತಾರೆ. 

ಇಲ್ಲಿ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದು ಯಜ್ಞ ಕರ್ಮವಾಗಿರಲಿ ಅಥವಾ ಇನ್ನಾವುದೇ ಇರಲಿ ಅವುಗಳಿಗೆಲ್ಲಾ ಪ್ರೇರಣಾದಾಯಿಯಾಗಿರುವವನು ನಮ್ಮ ಯಜಮಾನ. ಅಂದರೆ ಅದು ತಂದೆಯೂ ಆಗಿರಬಹುದು ಅಥವಾ ನಮ್ಮ ರಾಜನಿರಬಹುದು ದೇವನಿರಬಹುದು ಅವನೇ ಚೇತನ. ಚೇತನವೇ ಪ್ರೇರಣೆ ಕೊಡುವುದು.
ಮುಂದಿನದ್ದು ಪಿತಾ ಪಿತೃಭ್ಯಃ, ಯಾರು ನಮ್ಮನ್ನು ಪಾಲಿಸುತ್ತಾರೋ, ಯಾರು ನಮ್ಮನ್ನು ರಕ್ಷಿಸಿ ಅಭಿವೃದ್ಧಿಯನ್ನು ಬಯಸುತ್ತಾರೋ ಅವನೇ ಅಪ್ಪ ಅಥವಾ ತಂದೆ. ಈ ತಂದೆ ಬದುಕಿದ್ದಾಗ ಚೈತನ್ಯವನ್ನು ತುಂಬುವವನಾಗಿದ್ದರೆ ಬದುಕಿನಾಚೆಗೆ ಸಹ ಅಭ್ಯುದಯವನ್ನೇ ಮಾಡುತ್ತಾನೆ. ಇನ್ನು ಬದುಕಿದ್ದ ಅಪ್ಪ ಪಿತುವಾಗಿದ್ದು ನಮಗೆ ಮಾರ್ಗದರ್ಶಕನಾಗಿ ಇರುತ್ತಾನೆ. ಅದೇ ಅಪ್ಪ ಸತ್ತ ನಂತರ ಪಿತೃವಾಗಬೇಕು ಎನ್ನುವ ಬಯಕೆ ಮಕ್ಕಳಿಗೆ ಇರಬೇಕು. ಅಂದರೆ ಬದುಕಿದ್ದಾಗ ಮಾಡಿದ ಪುಣ್ಯ ಕಾರ್ಯಗಳಿಂದ, ಸತ್ತ ನಂತರ ಪಿತೃವಾಗಿ ಸ್ವರ್ಗದ ಪ್ರವೇಶ ಪಡೆದುಕೊಳ್ಳುತ್ತಾರೆ. ಹೀಗೇ ಬದುಕಿದ್ದಾಗ, ಮನುಷ್ಯ ತಾನು ಬದುಕಬೇಕು ಮತ್ತು ಮಿಕ್ಕವರನ್ನು ಬದುಕಲು ಬಿಡಬೇಕು. ಅಂತಹ ಬಾಳು ಬಾಳಿದರೆ ಪಿತೃವಾಗಿ ಪಿತೃಲೋಕ ಸೇರಿ ಪಿತೃ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.

’ಪಿತರಃ ಆಯುಷ್ಮಂತರಃ’ ಎನ್ನುವ ಯಜುರ್ವೇದದ ಮಂತ್ರದಲ್ಲಿ ಮಕ್ಕಳ ಆಯುಷ್ಯವನ್ನು ತಂದೆ ಬಯಸುತ್ತಾ ತನಗಿಂತಲೂ ಉತ್ತಮನಾಗಲಿ ಎನ್ನುವ ಸದಭಿಲಾಷೆ ಹೊಂದಿರುತ್ತಾನೆ ಎಂದಿರುವುದು ಗಮನಿಸಿದರೆ ತಂದೆಗೆ ಮಗನ ಮೇಲಿರುವ ಕಾಳಜಿಯೋ ಮಮತೆಯೋ ಗೊತ್ತಾಗುತ್ತದೆ.
ಯಾರೇ ಆದರೂ ತಮ್ಮ ಪೂರ್ವಜರನ್ನು ಗುರುತಿಸುವುದು ನಮಗಿಂತ ಮೇಲಿರುವ ಆಕಾಶದಿಂದ. ಅಂದರೆ ಆಕಾಶದಲ್ಲಿ ಮಿನುಗುವ ನಕ್ಷತ್ರಗಳಲ್ಲಿ. ವೇದ ಮಂತ್ರಗಳಲ್ಲಿಯೂ ಹೇಳುವುದು ಸತ್ತ ನಂತರ ಸ್ವರ್ಗಕ್ಕೆ ಸೇರುವುದು ಸೂರ್ಯನ ಸಮೀಪಕ್ಕೆ ಎನ್ನುವಾಗ ನಕ್ಷತ್ರವೇ ಆಗಿರುತ್ತದೆ. ಅದಕ್ಕಾಗಿಯೇ ದಿನಕ್ಕೊಮ್ಮೆ ನಕ್ಷತ್ರ ನೋಡದಿದ್ದರೆ ಯಾಕೋ ಅಸಮಾಧಾನ.

ನನ್ನ ದಿನಚರಿಯಲ್ಲಿ ಅಪ್ಪ ಕಣ್ಮರೆಯಾದ ದಿನದಿಂದ ಇದೊಂದು ಸೇರಿಕೊಂಡಿತು. . . . ಆಕಾಶದಲ್ಲಿನ ನಕ್ಷತ್ರ ನೋಡುವುದು!
ಪಿತುಂ ನು ಸ್ತೋಷಂ ಮಹಾ ಧರ್ಮಾಣಂ ತವಿಷೀಂ | ಎನ್ನುವ ಋಗ್ವೇದದ 1ನೇ ಮಂಡಲದ 187ನೇ ಸೂಕ್ತದ ಋಕ್ಕಿನಲ್ಲಿ ಅಪ್ಪ ಹೇಗಿರುತ್ತಾನೆ, ಮತ್ತು ಏನು ಬಯಸುತ್ತಾನೆ ಎಂದು ಸಿಗುತ್ತದೆ. ಇಲ್ಲಿ ಪಿತುಂ ಎನ್ನುವ ಶಬ್ದದ ವಿವರಣೆ ಸಿಗುತ್ತದೆ. ಪಿತು ಅಥವಾ ತಂದೆಯಾದವನು ನಮ್ಮ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸುವವನು ಎನ್ನುತ್ತದೆ. ’ಪಿತುಂ ಪಾಲಕಮನ್ನಂ’ ಎನ್ನುವಲ್ಲಿ ಹಸಿವಿನ ಬಾಧೆಯನ್ನು ಪರಿಹರಿಸುವವನು ಎಂದರ್ಥವು. ಈ ಪಿತು ಎನ್ನುವ ಶಬ್ದಕ್ಕೆ ಅನೇಕ ಅರ್ಥಗಳಿದ್ದರೂ ಸಹ ಹೆಚ್ಚಿನ ಅರ್ಥವನ್ನು ಕೊಡುವುದು ತನ್ನ ಮುಂದಿನ ಜನಾಂಗಕ್ಕೆ ಅಥವಾ ತನ್ನ ಮಕ್ಕಳಿಗೆ ಉತ್ತರೋತ್ತರ ಅಭಿವೃದ್ಧಿಯಾಗಲೆಂದು ಬಯಸುವವನು ತಂದೆ. "ಪಿತುರಿತ್ಯನ್ನನಾಮ ಪಾತೇರ್ವಾ" ಎನ್ನುವ ನಿರುಕ್ತದ ಅರ್ಥದಲ್ಲಿ ಪಾತೇರ್ವಾ ಎನ್ನುವುದನ್ನು ಹಸಿವಿನಿಂದ ಕಾಪಾಡುವವನು ಎಂದು ಹೇಳಲಾಗಿದೆ. ನಮ್ಮ ಎಲ್ಲಾ ಬಗೆಯ ಹಸಿವೆಗಳಿಂದ ಕಾಪಾಡುವವನು ಪಿತು ಆದುದರಿಂದ ನಮ್ಮ ತಂದೆ ಆ ಎಲ್ಲಾ ಅಭಿವೃದ್ಧಿಗಳನ್ನು ಬಯಸುವವನು. ಇದು ನಮ್ಮ ಭಾರತೀಯ ಚಿಂತನೆಯೂ ಹೌದು. ನಮ್ಮ ಸಂಸ್ಕೃತಿಯೂ ಹೌದು. ಹೌದು ನಮಗೆ ಉದಾತ್ತವಾದ ಸಂಸ್ಕಾರವನ್ನು ಕೊಟ್ಟ ತಂದೆಯ ನೆನಪು ಆಗಾಗ ಬಾಧಿಸುತ್ತದೆ.

#ಪಿತೃ_ನಕ್ಷತ್ರ 
Sadyojath Bhat

No comments:

Post a Comment

If you have any doubts. please let me know...