November 6, 2022

ಮಂಗಳಾರತಿ ಮತ್ತು ತೀರ್ಥ....

ಪ್ರಸಾದ ಇಲ್ವೆ....?!! ಎಂದು ಮಾತ್ರ ಕೇಳ್ಬೇಡಿ....... ಇಲ್ಲಿ ಮೇಲಿನೆರೆಡು ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ.....

ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ಸುಮ್ಮನೆ ಕೈನೀಡಿ ತೆಗೆದುಕೊಳ್ಳುವವರೂ ಇದ್ದೇವೆ. ಹಾಗಾದರೆ ಅವುಗಳನ್ನೇಕೆ ತೆಗೆದುಕೊಳ್ಳಬೇಕು? ಮಂಗಳಾರತಿಯೇ ಮೊದಲೇಕೆ ? ತೀರ್ಥ ನಂತರವೇಕೆ ? ಈ ಪ್ರಶ್ನೆಗಳಿಗೆ ಇಲ್ಲಿದೆ ನನ್ನದೊಂದು ವಿಚಾರ...

ದೇವರ ಶಿಲಾ ಮೂರ್ತಿಗೆ (ಅಥವಾ ಲಿಂಗಕ್ಕೆ) ಜಲಾಭಿಷೇಕ ಮಾಡುವುದು ನಿತ್ಯವಿಧಿಗಳಲ್ಲಿ ಒಂದು. ಅಂತಹ ದೇವರ ಮೂರ್ತಿ ಅಥವಾ ಲಿಂಗವನ್ನು ನಿರ್ದಿಷ್ಟ ಶಿಲೆಗಳಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ’ಸಾಲಿಗ್ರಾಮ ಶಿಲೆ’ , ’ಕೃಷ್ಣ ಶಿಲೆ’ ಹಾಗೂ ’ನವರತ್ನ ಶಿಲೆ’ ಗಳಿಂದ ಕೆತ್ತಲ್ಪಟ್ಟ ಮೂರ್ತಿಗಳಿರುತ್ತವೆ. (ಗ್ರಾನೈಟ್, ಬಳಪದ ಕಲ್ಲು, ಇನ್ನಿತರ ಶಿಲೆಗಳು ಶಾಸ್ತ್ರೋಕ್ತ ರೀತಿ ಪೂಜಾರ್ಹವಲ್ಲ!.) ಈ ಶಿಲೆಗಳು ಅಪೂರ್ವವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಶಿಲೆಯ ಮೇಲೆ ಬಿದ್ದ ನೀರು ತನ್ನ ಜೊತೆ ಎಲ್ಲಾ ಸತ್ವಗುಣಗಳನ್ನು ತಂದಿರುತ್ತದೆ. ಅಂತಹ ನೀರನ್ನು ಒಂದು ಪಾತ್ರೆಯಲ್ಲಿ ಹಿಡಿದಿಡಲಾಗುತ್ತದೆ. (ಇಲ್ಲಿ ಹಾಲು, ಮೊಸರು, ಇತ್ಯಾದಿಗಳಿಂದ ಕೂಡಿದ ಪಂಚಾಮೃತವನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅದು ಶುಧ್ಧ ತೀರ್ಥವೇ ಅಲ್ಲ!) ನಂತರ ಅಭಿಷೇಕ ಹಾಗೂ ಮಂಗಳಾರತಿ ಸಮಯಗಳಲ್ಲಿ ಜೋರಾಗಿ ಘಂಟಾನಾದವನ್ನು ಮಾಡಲಾಗುತಿರುತ್ತದೆ. ಆ ನಾದದ ಮಾರ್ದನಿಯೊಂದಿಗೆ ಅದರಿಂದ ’ಅಯಾನಿಕ್’ ತರಂಗಗಳೂ ( Ionic waves ) ಸಹ ಉತ್ಪತ್ತಿಯಾಗುತ್ತದೆ. ಇಂತಹ ಅಯಾನ್ ಗಳು ಗರ್ಭಾಂಗಣದ ತುಂಬೆಲ್ಲಾ ಪ್ರವೇಶಿಸಿ ಹಿಡಿದಿಟ್ಟ ತೀರ್ಥದಲ್ಲೂ ವಿಲೀನವಾಗುತ್ತವೆ. "ಅಯಾನ್" ಗಳಿಗೆ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಶಕ್ತಿಯು ಇದ್ದು ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಸತ್ವಗಳನ್ನು ಒದಗಿಸುತ್ತದೆ. ಇಂತಹ ಅಯಾನ್ ಯುಕ್ತ ಅಥವಾ ಖನಿಜಯುಕ್ತ ತೀರ್ಥಕ್ಕೆ ಅಂತಿಮವಾಗಿ ತುಳಸಿಯನ್ನು ಸೇರಿಸಲಾಗುತ್ತದೆ. ತುಳಸಿಗೆ ಆಯುರ್ವೇದದಲ್ಲಿ ಎಂತಹ ಪ್ರಮುಖ ಸ್ಥಾನವಿದೆ ಎಂಬುದು ತಿಳಿದಿರುವ ವಿಚಾರವೇ. ಇವುಗಳೆಲ್ಲದರಿಂದ ಕೂಡಿದ ಜಲ ಕೇವಲ ಜಲವಾಗದೇ ಔಷಧೀಯ ಗುಣಗಳುಳ್ಳ ತೀರ್ಥವಾಗುತ್ತದೆ. (ಇನ್ನು ಪಚ್ಚಕರ್ಪೂರ, ಕೇಸರಿ ಮುಂತಾದವುಗಳನ್ನು ತೀರ್ಥಕ್ಕೆ ಬೆರೆಸುತ್ತಾರೆ. ಅದೇನು ಅಷ್ಟು ಉಚಿತವಲ್ಲ. ಇಂದು ಉತ್ತಮ ಪಚ್ಚಕರ್ಪೂರ, ಕೇಸರಿ ದೊರೆಯುವುದೇ ದುರ್ಲಭವಾಗಿದೆಯಲ್ಲಾ!).

ಇನ್ನು ಮಂಗಳಾರತಿಯ ವಿಷಯಕ್ಕೆ ಬಂದರೆ ತುಪ್ಪದಲ್ಲಿ ಅದ್ದಿದ(ನೆನೆಸಿದ) ಹತ್ತಿಯಿಂದ ಮಾಡಿದ (ನಿರ್ಧಿಷ್ಟವಾಗಿ ಹೇಳಿದ್ದೇನೆ....ಗಮನಿಸಿ... ’ಕರ್ಪೂರ’ ಇಂದು ಇಂಗಾಲ ಮತ್ತು ವ್ಯಾಕ್ಸ್ ಮಯವಾಗಿಹೋಗಿದೆ.) ಬತ್ತಿಯನ್ನು ಹಚ್ಚಿ ಬೆಳಗುವುದರಿಂದ...... ಆರತಿ ಮಾಡುವುದನ್ನು ನೋಡುವುದರಿಂದ ಏಕಾಗ್ರತೆ ಸಿಧ್ದಿಸುವುದಲ್ಲದೆ ಅಂತಹ ಆರತಿಯ ಮೇಲೆ ನಮ್ಮ ಬಲ ಅಂಗೈಯನ್ನು ಸ್ವಲ್ಪಹೊತ್ತು ಹಿಡಿದರೆ ಶಾಖ ಅಂಗೈ ಮೂಲಕ ಪ್ರವೇಶವಾಗಿ ’ನರವ್ಯೂಹ’ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ. ಈ ರೀತಿ ಶುಧ್ದ ಅಂಗೈನಿಂದ ಮೇಲೆ ಹೇಳಿದ ತೀರ್ಥವನ್ನು ತೆಗೆದುಕೊಂಡು ಕುಡಿದರೆ ನಮ್ಮ ದೇಹಕ್ಕೆ ಆರೋಗ್ಯ ಲಭಿಸುತ್ತದೆಯಲ್ಲವೆ!!? ಇನ್ನು ಮೂರು ಬಾರಿ ತೆಗೆದುಕೊಳ್ಳುವುದು ಒಂದು ಬಾರಿ ತೆಗೆದುಕೊಳ್ಳುವುದೆಲ್ಲಾ ಶಾಸ್ತ್ರಾಧಾರಿತ ವಿಚಾರ. ’ಅಕಾಲ ಮೃತ್ಯುಹರಣಂ’ ಎಂಬ ಸೂಕ್ತ ಹೇಳಿ ತೆಗೆದುಕೊಳ್ಳಲೂ ಬಹುದು. ಸೂಕ್ತ ಹೇಳಿದಾಕ್ಷಣ ಅಕಾಲ ಮೃತ್ಯು ಪರಿಹಾರವಾಗುತ್ತದೆಯೆ? ಆತ್ಮಶುಧ್ದಿಯಿರಬೇಕಷ್ಟೆ !! . ಆದ್ದರಿಂದ ಮೊದಲು ಆರತಿ ನಂತರ ತೀರ್ಥ ಸರಿಯಾದ ಕ್ರಮ. ಇಂದಿನ ದೇವಾಲಯಗಳು ಹೈಟೆಕ್ ( ಟೈಲ್ಸ್, ಎಗ್ಸಾಸ್ಟ್ ಫ಼್ಯಾನ್ , ಇತ್ಯಾದಿ ..!) ವ್ಯವಸ್ಥೆಗಳನ್ನು ಹೊಂದಿರುವುದರಿಂದ ಮೇಲಿನ ಪಾವಿತ್ರ್ಯತೆಯನ್ನು ನೀರಿಕ್ಷಿಸಿವುದು ತಪ್ಪಾಗಬಹುದು....
ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು

No comments:

Post a Comment

If you have any doubts. please let me know...