ಸ್ತೋತ್ರ Stotra ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ತೋತ್ರ Stotra ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಡಿಸೆಂಬರ್ 27, 2022

ಲಲಿತ ದೇವಿಯ ಕಥೆ

ಲಲಿತ ಸಹಸ್ರ ನಾಮ ಪಠಿಸುವ ಉದ್ದೇಶ
ಬ್ರಹ್ಮಾಂಡಪುರಾಣದಲ್ಲಿ ಹಯಗ್ರೀವ ಮುನಿಯು ಅಗಸ್ತ್ಯರಿವವವಲಲಗೆ ಶ್ರೀಲಲಿತೋಪಾಖ್ಯಾನವನ್ನು ಹೇಳಿ ಲಲಿತಾ ಸಹಸ್ರ ನಾಮದಿಂದ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ.

ಲಲಿತಾಸಹಸ್ರನಾಮಕ್ಕೂ ಮುನ್ನ ಬರುವ ಲಲಿತಾಂಬೆಯ ಕಥೆ ಈ ರೀತಿ ಇದೆ :

    ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಪ್ರವೇಶ ವಾಯಿತು,
ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು.
    ರುದ್ರನ ಕೆಂಗಣ್ಣಿನಿಂದ ಸುಡಲ್ಪಟ್ಟ ಬೂದಿಯಿಂದ ಹುಟ್ಟಿದ ಭಂಡನು ರೌದ್ರ ಸ್ವಭಾವವನ್ನ ಹೊಂದಿದ್ದನು, ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವತೆಗಳಿಗೆ ನಾನಾವಿಧವಾದ ತೊಂದರೆಗಳನ್ನು ನೀಡುತ್ತಿದ್ದನು, ನಾರದರ ಉಪದೇಶದಂತೆ ಇಂದ್ರನು ಸಮಸ್ತ ದೇವತೆಗಳೊಂದಿಗೆ ಹಿಮಗಿರಿಯ ತಪ್ಪಲಿಗೆ ಬಂದು ಭಾಗೀರಥೀ ತೀರದಲ್ಲಿ ಪರಾಶಕ್ತಿಯ ಪೂಜೆಯನ್ನು ಯಾಗ ವಿಧಾನದಿಂದ ಮಾಡಿದನು.
    ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರು ವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.

ಲಲಿತಾ ಸಹಸ್ರನಾಮದ ಹಿನ್ನೆಲೆ.

ಯ ಏಕೋsವರ್ಣೋ ಬಹುಧಾಶಕ್ತಿಯೋಗಾದ್ ವರ್ಣಾನನೇಕಾನ್ಹ ನಿಹಿತಾರ್ಥೋ ದಧಾತಿ (ಶ್ವೇತಾಶ್ವತರೋಪನಿಷತ್), ಪರತತ್ತ್ವಕ್ಕೆ ನಾಮರೂಪಗಳಾಗಲಿ ಇಲ್ಲ ಹೀಗಿದ್ದರೂ ವರ್ಣರಹಿತವಾದ ಒಂದೇ ತತ್ತ್ವವು ಶಕ್ತಿ ಯೋಗದಿಂದ ವಿವಿಧ ವರ್ಣಗಳನ್ನುಂಟು ಮಾಡುತ್ತದೆ.
    ಇರುವ ಒಂದೇ ಶಕ್ತಿ ನಾನಾ ರೂಪ ನಾಮ ಗಳಿಂದ ಭಕ್ತರಿಂದ ಉಪಾಸ್ಯವಾಗಿರುವುದೇಕೆ? : ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ (ಭಗವದ್ಗೀತಾ), ಯಾರು ನನ್ನನ್ನು ಹೇಗೆ ಆಶ್ರಯಿಸುವರೋ ಹಾಗೆಯೇ ಅವರನ್ನು ಅನುಗ್ರಹಿಸುತ್ತೇನೆ, ಅದಕ್ಕಾಗಿ ಭಕ್ತರ ಭಾವದಂತೆ ನಾನಾ ನಾಮಗಳಿಂದ, ರೂಪಗಳಿಂದ ಉಪಾಸ್ಯನಾಗಿರುವುದು.
    ಶಬ್ದಾರ್ಥಗಳು ಪರಮಾತ್ಮ ಶಕ್ತಿಯ ಅಭಿವ್ಯಕ್ತಿಯ ರೂಪ, ಪರಮಾತ್ಮ ಶರೀರಿಯಾದರೆ(ಆತ್ಮ), ಶಬ್ದಾರ್ಥಗಳು ಶರೀರವಾಗಿವೆ, ವರ್ಣಗಳಿಂದ ಶಬ್ದಗಳಾಗಿರುವುದರಿಂದ ಪ್ರತಿಯೊಂದು ವರ್ಣದಲ್ಲಿಯೂ ಶಕ್ತಿಯು ಅಂತರ್ಗತವಾಗಿರುವುದು. ಪ್ರತಿಯೊಂದು ವರ್ಣವೂ ಪರಮಾತ್ಮ ಶಕ್ತಿಯ ಪ್ರತೀಕವಾಗಿದೆ, ವರ್ಣಸಮೂಹವಾದ ನಾಮಗಳೆಲ್ಲ ದೇವತಾ ಸ್ವರೂಪವೇ ಆಗಿದೆ ಆದ್ದರಿಂದಲೇ ವೇದಗಳಲ್ಲಿ ದೈವತ್ವವನ್ನು ಕಾಣುವುದು, ನಾಮಪೂಜೆಗೆ ವೈಶಿಷ್ಟ್ಯವಿರುವುದು ಇದರಲ್ಲೆ.
    ಉಪಾಸನೆಯಲ್ಲಿ 1.ದ್ವಾದಶ, 2.ಅಷ್ಟೋತ್ತರ, 3.ತ್ರಿಶತಿ ಹಾಗೂ 4. ಸಹಸ್ರನಾಮ ಪೂಜೆಗಳು ಮಹತ್ವವನ್ನು ಪಡೆದಿವೆ.
ಮಾನವನು ಪರತತ್ತ್ವವನ್ನು ರೂಪ ಗುಣಗಳಿಂದ ಕೂಡಿದುದಾಗಿ ಉಪಾಸಿಸ ಬೇಕಾದರೆ ಮಾತೃಭಾವ ಕ್ಕಿಂತ ಉದಾತ್ತವೂ ಉದಾರವೂ ಹೃದಯಂಗಮವೂ ಆದ ಬೇರೆ ಇನ್ನಾವ ಕಲ್ಪನೆಯಿರುವುದು? ಆದ ಕಾರಣ ಯೋಗಿಗಳೂ ಉಪಾಸಕರೂ ಮಾತೃ ಭಾವದಿಂದಲೆ ಪರಮಾತ್ಮನನ್ನು ಕಾಣುತ್ತಾರೆ, ಆ ಮಾತೃಭಾವವೇ ಶ್ರೀಮಾತಾ ಶ್ರೀಮಹಾರಾಜ್ಞಿಯೆಂದು, ಲಲಿತಾಂಬೆಯೆಂದು ಉಪಾಸಿಸಿರು,
    ಅದಕ್ಕಾಗಿ ಲಲಿತಾ ಸಹಸ್ರನಾಮವನ್ನು ಅರ್ಥಸಹಿತವಾಗಿ ನೀಡುವ ಪ್ರಯತ್ನ ನಮ್ಮದು, ಅರ್ಥಾನುಸಂಧಾನ ಸಹಿತವಾಗಿ ಮಂತ್ರಗಳ ಅನುಷ್ಠಾನ ನಡೆಯುವಂತಾಗಬೇಕು, ನಮ್ಮೀ ಪ್ರಯತ್ನಕ್ಕೆ ಲಲಿತಾಂಬೆಯ ಆಶಿರ್ವಾದವೂ ಲಭಿಸಲೆಂದು ಪ್ರಾರ್ಥಿಸೋಣ.

ಲಲಿತಾ ಸಹಸ್ರನಾಮದ ಹಿನ್ನೆಲೆ – 2 : ಯಜ್ಞಕುಂಡದಲ್ಲಿ ಉತ್ಪನ್ನವಾದ ಚಕ್ರಾಕಾರದ ಮಧ್ಯೆ ಅವತರಿಸಿದ ದೇವಿಯು ದೇವತೆಗಳ ಪ್ರಾರ್ಥನೆಯಂತೆ ಭಂಡಾಸುರನ ನಾಶಕ್ಕೆ ಸಮ್ಮತಿಸಿದಳು, ಶಿವನನ್ನು ವರಿಸಿ ಮಹಾರಾಜ್ಞಿಯಾದಳು. ಅನಂತರ ಪರಬ್ರಹ್ಮ ಸ್ವರೂಪಿಣಿಯು ಭಂಡಾಸುರನನ್ನು ಇತರ ದೈತ್ಯರನ್ನು ಕೊಂದು ಶೋಣಿತಪುರವನ್ನು ನಾಶ ಮಾಡಿದಳು.
    ದೇವತೆಗಳು ದೇವಿಯನ್ನು ಸ್ತುತಿಸಿ ಪತಿ ಮೃತ್ಯುವಿನಿಂದ ನೊಂದಿರುವ ರತಿಯನ್ನು ಅನುಗ್ರಹಿಸ ಬೇಕೆಂದು ಬೇಡಿಕೊಂಡರು, ಕರುಣಾಮಯಿಯಾದ ದೇವಿಯು ರತಿಯ ದುಃಖವನ್ನ ಸಹಿಸಲಾರದೆ ತನ್ನ ಕೃಪಾಕಟಾಕ್ಷದಿಂದ ಮನ್ಮಥನನ್ನು ಪುನಃ ಬದುಕಿಸಿದಳು,
    ಅನಂತರ ವಿಶ್ವಕರ್ಮನು ಮತ್ತು ಮಯನು ಮೇರುಪರ್ವತದ ಮಧ್ಯಶಿಖರದಲ್ಲಿ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿದರು, ಶ್ರೀಪುರದಲ್ಲಿ ಚಿಂತಾಮಣಿಗೃಹ ವೆಂಬ ಅರಮನೆಯಿರುವುದು, ಇದರ ಮಧ್ಯದಲ್ಲಿ ಬಿಂದು ಪೀಠವೆಂದು ಪ್ರಸಿದ್ಧವಾದ ದೇವಿಯ ಪೀಠವಿದೆ.
    ಆ ಮಹಾಪೀಠದಲ್ಲಿ ಶ್ರೀದೇವಿಯ ಮಂಚರತ್ನವು ವಿರಾಜಿಸುತ್ತಿರುವುದು, ಬ್ರಹ್ಮ-ವಿಷ್ಣು-ಈಶ್ವರ-ಮಹೇಶ್ವರರೇ ಇದರ ನಾಲ್ಕು ಕಾಲುಗಳು, ಸದಾಶಿವನೇ ಈ ಮಂಚದ ಹಲಗೆ, ಇದರ ಮೇಲೆ ಪೂರ್ವ ದಿಙ್ಮುಖನಾಗಿ ಭಗವಂತನಾದ ಕಾಮೇಶ್ವರ ನು ಕುಳಿತಿರುವನು, ಆ ಕಾಮೇಶ್ವರನ ಅಂಕದ ಮೇಲೆ ಸದಾ ಷೋಡಶ ವರ್ಷದವಳಾದ ಶ್ರೀಲಲಿತಾಂಬಿಕೆಯು ಕುಳಿತಿರುವಳು.
    ಶ್ರೀಚಕ್ರವು ರೇಖಾಕೃತಿಯಿಂದ ಶ್ರೀಪುರವನ್ನು ರೂಪಿಸಿದೆ, (ಸೌಂದರ್ಯಲಹರಿಯಲ್ಲಿ ಇದೆ ರೀತಿ ಶಂಕರಾಚಾರ್ಯರು ವರ್ಣಿಸಿದ್ದಾರೆ), ಶ್ರೀ ಶಂಕರಾಚಾರ್ಯರು, ಭಗವತಿಯ ಕರುಣಾ ಮೃತವನ್ನು ವರ್ಣಿಸುತ್ತಾ, ಭಕ್ತಿಯಿಂದ ಅಮ್ಮಾ ಎಂದರೆ ಸಾಕು, ಕರುಣೆಯ ವರ್ಷಧಾರೆಯನ್ನು ಸುರಿಸಲು ಭಗವತಿ ಲಲಿತಾ ಮಹಾತ್ರಿಪುರ ಸಂದರಿ ಕಾಯುತ್ತಾ ಇರುತ್ತಾಳಂತೆ, ಶ್ರೀದೇವಿಯ ಅನುಗ್ರಹ ಎಂತಹದ್ದೆಂದರೇ, ಏಕ ಕಾಲದಲ್ಲಿಯೇ ಭೋಗವನ್ನೂ – ಮೋಕ್ಷವನ್ನೂ ಎರಡನ್ನೂ ಕರುಣಿಸುವವಳು.
    ಇಂತಹ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಇರುವ ಮಾರ್ಗಗಳಲ್ಲಿ, ಶ್ರೀವಿದ್ಯಾ ಉಪದೇಶದ ಮೂಲಕ, ಶ್ರೀಚಕ್ರ ವನ್ನು ಅರ್ಚಿಸುವುದು ಒಂದಾದರೆ, ಸೌಂದರ್ಯ ಲಹರೀ ಮತ್ತು ಲಲಿತಾ ಸಹಸ್ರ ನಾಮ ಪಠಿಸುವುದು ಅತ್ಯಂತ ಸುಲಭವೂ ಉತ್ಕೃಷ್ಟವೂ ಆದದ್ದು, ಇಂತಹ ಘನವಾದ ಲಲಿತಾ ಸಹಸ್ರ ನಾಮವನ್ನು ಅರ್ಥಸಹಿತ ತಿಳಿದು ಭಗವತಿಯ ಅನುಗ್ರಹಕ್ಕೆ ಪಾತ್ರರಾಗೋಣ.

ಲಲಿತಾಸಹಸ್ರನಾಮದ ಸಹಸ್ರನಾಮ ಮಹಿಮೆ

    ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ. ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡ ಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾ ತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು.
    ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ.
ಪ್ರತಿದಿನ ಸಹಸ್ರನಾಮದಿಂದ ಮಂತ್ರಿತವಾದ ಬೆಣ್ಣೆಯನ್ನು ಬಂಜೆಯು ಭಕ್ಷಿಸಿದರೆ ಪುತ್ರವತಿಯಾಗುವಳು.

ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||

ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ.

ಮುಹ್ಯನ್ತಿ ಕಾಮವಶಗಾ ಮೃಗಾಕ್ಷ್ಯಸ್ತಸ್ಯ ವೀಕ್ಷಣಾತ್ ।
ಯಃ ಪಠೇನ್ನಾಮಸಾಹಸ್ರಂ ಜನ್ಮಮಧ್ಯೇ ಸಕೃನ್ನರಃ

ಯಾರು ಒಂದು ಪಕ್ಷ ಪಠಿಸುವರೋ ಅಂತಹವರ ವೀಕ್ಷಣಮಾತ್ರದಿಂದ ಮೃಗಾಕ್ಷಿಯರು ವಶರಾಗುತ್ತಾರೆ ಅಂದರೆ ದಾಂಪತ್ಯದಲ್ಲಿ ಅನ್ಯೋನ್ಯತೆಯಿರುತ್ತದೆ.

ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |
ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ.

ಶ್ರೀ ಲಲಿತಾ ಸಹಸ್ರನಾಮ ಮಹಿಮೇ .. 23

ಅಯಮಾಯುಷ್ಕರೋ ನಾಮ ಪ್ರಯೋಗಃ ಕಲ್ಪಚೋದಿತಃ ।
ಜ್ವರಾರ್ತಂ ಶಿರಸಿ ಸ್ಪೃಷ್ಟ್ವಾ ಪಠೇನ್ನಾಮಸಹಸ್ರಕಮ್ ॥ 23॥

ಆಯುಷ್ಕರವೆಂಬ ಹೆಸರುಳ್ಳ ಈ ಪ್ರಯೋಗವು ಕಲ್ಪಗಳಲ್ಲಿ (ಪರಶುರಾಮಕಲ್ಪ) ಹೇಳಲ್ಪಟ್ಟಿದ್ದೇ. ಜ್ವರದಿಂದ ಪೀಡಿತನಾದವನ ತಲೆಯನ್ನು ಮುಟ್ಟಿ ಸಹಸ್ರನಾಮವನ್ನು ಪಠಿಸಬೇಕು.

ತತ್ಕ್ಷಣಾತ್ಪ್ರಶಮಂ ಯಾತಿ ಶಿರಸ್ತೋದೋ ಜ್ವರೋಽಪಿ ಚ ।
ಸರ್ವವ್ಯಾಧಿನಿವೃತ್ತ್ಯರ್ಥಂ ಸ್ಪೃಷ್ಟ್ವಾ ಭಸ್ಮ ಜಪೇದಿದಮ್ ॥ 24॥

ತಕ್ಷಣವೇ ತಲೆನೋವು ಮತ್ತು ಜ್ವರವು ಹೋಗುವುದು. ಸರ್ವವ್ಯಾದಿನಾಶಕ್ಕಾಗಿ ಭಸ್ಮವನ್ನು ಮುತ್ತಿಹೇಳಿ ಹಚ್ಚ ಬೇಕು ಹಣೆಗೆ.

ತಸ್ಯ ಯೇ ಶತ್ರವಸ್ತೇಷಾಂ ನಿಹನ್ತಾ ಶರಭೇಶ್ವರಃ ।
ಯೋ ವಾಽಭಿಚಾರ ಕುರುತೇ ನಾಮಸಾಹಸ್ರಪಾಠಕಮ್ ॥ 34॥

ಸಹಸ್ರನಾಮಪಾಠಕನನ್ನು ಯಾರು ಕ್ರೂಟದೃಷ್ಟಿಯಿಂದ ನೋಡುವರೋ, ಅಂಥವರನ್ನು ಮಾರ್ತಾಂಡಭೈರವನು ಕುರುಡರನ್ನಾಗಿ ಮಾಡುತ್ತಾನೆ. 
ಲಲಿತಾಸಹಸ್ರನಾಮ ಪಠಿಸುವವರ ಮೇಲೆ ವಾಮಾಚಾರದ ಆಟ ನಡೆಯುವದಿಲ್ಲ.

ಶ್ರೇಷ್ಠತೆ

ಬ್ರಹ್ಮಾದಿಗಳ ಇಚ್ಛೆಯಂತೆ ಲಾವಣ್ಯವತಿಯಾದ ದೇವಿಯು ಕಾಮೇಶ್ವರನ ರೂಪದಲ್ಲಿದ್ದು ಶಿವನನ್ನು ವರಿಸಿ ಶಿವ ಕಾಮೇಶ್ವರಾಂಕ ಸ್ಥಾಯಿಯಾದಳು. ಬ್ರಹ್ಮನೇ ಮಾತೆಗೆ ಕಾಮಾಕ್ಷಿಯೆಂದೂ, ಕಾಮೇಶ್ವರಿಯೆಂದೂ ಬಿರುದುಗಳನ್ನು ಸಮರ್ಪಿಸಿದನು.

ಪುರಾಣಾಂ ಶ್ರೀಪುರಮಿವ ಶಕ್ತೀನಾಂ ಲಲಿತಾ ಯಥಾ |
ಶ್ರೀವಿದ್ಯೋಪಾಸಕಾನಾಂ ಚ ಯಥಾ ದೇವೋ ವರಃ ಶಿವಃ ||
ತಥಾ ನಾಮಸಹಸ್ರೇಷು ವರಮೇತತ್ ಪ್ರಕೀರ್ತಿತಮ್ |

ಪುರಗಳಲ್ಲಿ ಶ್ರೀಪುರವು ಹೇಗೆ ಶ್ರೇಷ್ಠವೋ, ಶಕ್ತಿಗಳಲ್ಲಿ ಶ್ರೀ ಲಲಿತಾಂಬಿಕೆಯು ಹೇಗೋ, ಶ್ರೀವಿದ್ಯೋಪಾಸಕರಲ್ಲಿ ಪರಶಿವನು ಹೇಗೋ, ಹಾಗೆಯೇ ಸಹಸ್ರನಾಮಗಳಲ್ಲಿ ಲಲಿತಾಸಹಸ್ರನಾಮವು ಶ್ರೇಷ್ಠ, ಅಷ್ಟೇ ಅಲ್ಲ ಹರಗ್ರೀವರು ಇನ್ನೂ ಮುಂದುವರೆದು ಹೇಳುತ್ತಾರೆ.

ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |
ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ. ಹೀಗಿರುವಾಗ ಶ್ರೀ ಲಲಿತಾಸಹಸ್ರನಾಮದ ಹಿರಿಮೆ ಮತ್ತು ಗರಿಮೆಯ ಬಗ್ಗೆ ಹೇಳುವದೇನಿದೆ?
ಅಂತಹ ಮಾತೆಯು 'ಸಮಾನಾಧಿಕ ವರ್ಜಿತ'ಳಾಗಿರವದು ಯುಕ್ತವಾಗಿಯೇ ಇದೆ.

    ಪ್ರಪಂಚಕ್ಕೂ, ಶ್ರೀದೇವಿಗೂ ಇರುವ ಸಂಬಂಧ, ಸಮಯಾಚಾರ, ಭಕ್ತಿ, ಆತ್ಮವಿದ್ಯೆ, ಮಹಾವಿದ್ಯೆ, ಚಂದ್ರವಿದ್ಯೆ, ಶ್ರೀವಿದ್ಯೆ, ಷೋಡಶಾಕ್ಷರೀವಿದ್ಯೆ, ಮಂತ್ರವಿದ್ಯೆ, ನಂದಿವಿದ್ಯೆ, ಯಂತ್ರವಿದ್ಯೆ, ತಂತ್ರವಿದ್ಯೆ, ಕುಂಡಲಿನೀಯೋಗ ಷಟ್ಟಿಕ್ರಗಳಲ್ಲಿ ಶ್ರೀ ದೇವಿಯ ಆವಾಸ, ನಾದ ಬ್ರಹ್ಮನ ವಿಚಾರ, ನಾಲ್ಕು ವಿಧ ವಾಕ್ಕು, ಅಂತರ್ಯಾಗ, ಮುದ್ರೆಗಳು, ಜೀವನ್ಮುಕ್ತಿ ವಿಚಾರ, ಪ್ರಳಲ, ಶ್ರೀ ಗಾಯಿತ್ರೀ, ಸಂಧ್ಯಾ, ದುರ್ಗಾ, ಲಕ್ಷ್ಮೀ, ಸಾವಿತ್ರೀ, ಸರಸ್ವತೀ, ಭೂದೇವಿ, ದಕ್ಷಿಣಾಮೂರ್ತಿ, ನಟೇಶ್ವರಿ, ಮಹಾಕಾಳಿ ಮತ್ತು ಶ್ರೀ ಬಾಲಾಂಬಿಕೆಯರ ಮಹಿಮೆಗಳು ವರ್ಣಿತವಾಗಿವೆ.

ಶ್ರೀಮಾತಾ ಎಂದು ಆರಂಭವಾಗುವ ಶ್ರೀ ಲಲಿತಾಸಹಸ್ರನಾಮವು ಲಲಿತಾಂಬಿಕಾ - ಎಂದು ಮುಕ್ತಾಯವಾಗುತ್ತದೆ.
ಎರಡನ್ನೂ ಸೇರಿಸಿದರೆ ಶ್ರೀ ಮಾತಾ ಲಲಿತಾಂಬಿಕಾ ಎಂದಾಗುತ್ತದೆ. ಜಗಜ್ಜನನಿ ಎಂದರೆ ಶ್ರೀ ಲಲಿತಾಮಾತೆಯೇ.

ಲಿಲಿತಾ ಎಂಬ ಶಬ್ದಕ್ಕೆ ಲೋಕಾನತೀತ್ಯ ಲಲಿತೆ ಲಲಿತಾ ಅಂದರೆ ಸಕಲಲೋಕಗಳನ್ನೂ ಅತಿಕ್ರಮಿಸಿ ಲೀಲಾಮಾತ್ರಳಾಗಿರುವವಳು ಎಂದು ಪದ್ಮಪುರಾಣದಲ್ಲಿ ಹೇಳಿದೆ.

ಇನ್ನು ಕಡೆಯದಾಗಿ ಫಲಶ್ರುತಿಯ ಕಡೆಗೆ ಸಾಗೋಣ. ಇದು 87 ಶ್ಲೋಕಗಳಿಂದ ಕೂಡಿದ 'ಶ್ರೀ ಲಲಿತಾ ಸಹಸ್ರನಾಮ ಫಲನಿರೂಪಣಮ್' ಎಂಬ ಅಧ್ಯಾಯ

ಫಲ ಶ್ರುತಿ .. 01

ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||

ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ.

ಸರ್ವಾಪಮೃತ್ಯುಶಮನಂ ಕಾಲಮೃತ್ಯುನಿವಾರಣಮ್ ।
ಸರ್ವಜ್ವರಾರ್ತಿಶಮನಂ ದೀರ್ಘಾಯುಷ್ಯಪ್ರದಾಯಕಮ್ ॥ 3॥

ಇದು ಅಪಮೃತ್ಯುವನ್ನು ತಪ್ಪಿಸುವುದು, ಕಾಲ ಮೃತ್ಯುವನ್ನು ನಿವಾರಿಸುವುದು, ಸರ್ವ ಜ್ವರ ವೇದನೆಯನ್ನು ಉಪಶಮನ ಮಾಡುವುದು ಮತ್ತು ದೀರ್ಘಯುಷ್ಯವನ್ನು ಕೊಡುವುದು.

ಪುತ್ರಪ್ರದಮಪುತ್ರಾಣಾಂ ಪುರುಷಾರ್ಥಪ್ರದಾಯಕಮ್ ।
ಇದಂ ವಿಶೇಷಾಚ್ಛ್ರೀದೇವ್ಯಾಃ ಸ್ತೋತ್ರಂ ಪ್ರೀತಿವಿಧಾಯಕಮ್ ॥ 4॥

ಇದು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡುವುದು ಮತ್ತು ಪುರುಷಾರ್ಥವನ್ನು ಕೊಡುವುದು. ಈ ಸ್ತೋತ್ರವು ಶ್ರೀ ದೇವಿಗೆ ವಿಶೇಷವಾಗಿ ಪ್ರೀತಿದಾಯಕ ವಾಗಿರುವುದು.

ಜಪೇನ್ನಿತ್ಯಂ ಪ್ರಯತ್ನೇನ ಲಲಿತೋಪಾಸ್ತಿತತ್ಪರಃ ।
ಪ್ರಾತಃ ಸ್ನಾತ್ವಾ ವಿಧಾನೇನ ಕ್ತ್ವಯಾಕರ್ಮ ಸಮಾಪ್ಯ ಚ ॥ 5॥

ಲಲಿತೋಪಾಸಕರು ಇದನ್ನು ನಿತ್ಯವೂ ಯತ್ನದಿಂದ ಜಪಿಸಬೇಕು. ಪ್ರಾತಃ ಕಾಲದಲ್ಲಿ ಸ್ನಾನವನ್ನು ಮಾಡಿ ಸಂದ್ಯಾಕರ್ಮವನ್ನು ವಿಧಿ ಪ್ರಕಾರ ಮುಗಿಸಬೇಕು.

ಪೂಜಾಗೃಹಂ ತತೋ ಗತ್ವಾ ಚಕ್ರರಾಜಂ ಸಮರ್ಚಯೇತ್ ।
ವಿದ್ಯಾಂ ಜಪೇತ್ ಸಹಸ್ರಂ ವಾ ತ್ರಿಶತಂ ಶತಮೇವ ವಾ ॥ 6

ಪೂಜಾಗೃಹವನ್ನು ಅನಂತರ ಪವೇಶಿಸಿ ಶ್ರೀ ಚಕ್ರವನ್ನು ಪೂಜಿಸಬೇಕು. ಅನಂತರ ಅವನು ಪಂಚದಶೀ ಅಥವಾ ಷೋಡಶಿ ವಿದ್ಯೆಯನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ, ಅಥವಾ ನೂರು ಸಲವಾಗಲಿ ಜಪಿಸಬೇಕು.

ರಹಸ್ಯನಾಮಸಾಹಸ್ರಮಿದಂ ಪಶ್ಚಾತ್ಪಠೇನ್ನರಃ ।
ಜನ್ಮಮಧ್ಯೇ ಸಕೃಚ್ಚಾಪಿ ಯ ಏತತ್ಪಠತೇ ಸುಧೀಃ ॥ 7॥

ರಹಸ್ಯವಾದ ಈ ಸಹಸ್ರ ನಾಮವನ್ನು ಯಾವ ಜ್ಞಾನಿಯು ತನ್ನ ಜೀವನಕಾಲ ದಲ್ಲಿ ಒಂದು ಸಲವಾದರೂ ಪಠಿಸುವರೊ.

ತಸ್ಯ ಪುಣ್ಯಫಲಂ ವಕ್ಷ್ಯೇ ಶೃಣು ತ್ವಂ ಕುಮ್ಭಸಮ್ಭವ ।
ಗಂಗಾದಿ ಸರ್ವತೀರ್ಥೇಷು ಯಃ ಸ್ನಾಯಾತ್ಕೋಟಿಜನ್ಮಸು ॥ 8॥

ಉಪಾಸಕರಿಗೆ ಉಂಟಾಗುವ ಫಲವು ಅಗಸ್ತ್ಯನೆ ಕೇಳು, ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡಿದ ಫಲ.

ಕೋಟಿಲಿಂಗಪ್ರತಿಷ್ಠಾಂ ಚ ಯಃ ಕುರ್ಯಾದವಿಮುಕ್ತಕೇ ।
ಕುರುಕ್ಷೇತ್ರೇ ತು ಯೋ ದದ್ಯಾತ್ಕೋಟಿವಾರಂ ರವಿಗ್ರಹೇ ॥ 9

ಕೋಟಿಂ ಸೌವರ್ಣಭಾರಾಣಾಂ ಶ್ರೋತ್ರಿಯೇಷು ದ್ವಿಜನ್ಮಸು
ಯಃ ಕೋಟಿಂ ಹಯಮೇಧಾನಾಮಾಹರೇದ್ ಗಾತ್ರರೋಧಸಿ ॥ 10॥

ಅವಿಮುಕ್ತಕ್ಷೇತ್ರದಲ್ಲಿ ಕೋಟಿಲಿಂಗ ಪ್ರತಿಷ್ಠೆಯನ್ನು ಮಾಡಿದರೆ, ಕುರು ಕ್ಷೇತ್ರದಲ್ಲಿ ಶ್ರೋತ್ರಿಯರಾದ ಬ್ರಾಹ್ಮಣರಿಗೆ ಕೋಟಿಸಲ ಸುವರ್ಣ ಭಾರಗಳನ್ನು ದಾನಮಾಡಿದರೆ, ಗಂಗಾತಿರದಲ್ಲಿ ಕೋಟಿ ಸಲ ಅಶ್ವಮೇಧಗಳನ್ನು ಮಾಡಿದ ಪುಣ್ಯ ದೊರೆಯುವುದು.

ಆಚರೇತ್ಕೂಪಕೋಟೀರ್ಯೋ ನಿರ್ಜಲೇ ಮರುಭೂತಲೇ ।
ದುರ್ಭಿಕ್ಷೇ ಯಃ ಪ್ರತಿದಿನಂ ಕೋಟಿಬ್ರಾಹ್ಮಣಭೋಜನಮ್ ॥ 11॥

ನೀರಿಲ್ಲದ ಮರುಭೂಮಿಯಲ್ಲಿ ಅನೇಕ ಕೊಳಗಳನ್ನು ತೊಡಿಸಿದರೆ, ದುರ್ಭಿಕ್ಷದಲ್ಲಿ ಕೋಟಿ ಬ್ರಾಹ್ಮಣರಿಗೆ ಪ್ರತಿದಿನ ಭೋಜನ ಹಾಕಿದ ಫಲ.

ಶ್ರದ್ಧಯಾ ಪರಯಾ ಕುರ್ಯಾತ್ಸಹಸ್ರಪರಿವತ್ಸರಾನ್ ।
ತತ್ಪುಣ್ಯಂ ಕೋಟಿಗುಣಿತಂ ಲಭೇತ್ಪುಣ್ಯಮನುತ್ತಮಮ್ ॥ 12॥

ರಹಸ್ಯನಾಮಸಾಹಸ್ರೇ ನಾಮ್ರೋಽಪ್ಯೇಕಸ್ಯ ಕೀರ್ತನಾತ್ ।
ರಹಸ್ಯನಾಮಸಾಹಸ್ರೇ ನಾಮೈಕಮಪಿ ಯಃ ಪಠೇತ್ ॥ 13

ತಸ್ಯ ಪಾಪಾನಿ ನಶ್ಯನ್ತಿ ಮಹಾನ್ತ್ಯಪಿ ನ ಸಂಶಯಃ ।
ನಿತ್ಯಕರ್ಮಾನನುಷ್ಠಾನಾನ್ನಿಷಿದ್ಧಕರಣಾದಪಿ ॥ 14॥

ಈ ಹಿಂದೆ ಹೇಳಿದ ಪುಣ್ಯ ಕಾರ್ಯಗಳನ್ನು ಒಂದು ಸಾವಿರ ವರ್ಷ ಮಾಡಿದರೆ ಉಂಟಾಗುವ ಪುಣ್ಯವನ್ನು ಉಂಟಾಗುವ ಅಣುಮತ್ತಮ ಪುಣ್ಯಕ್ಕೆ ಸಮವಾಗಿರುವುದು. ಯಾರು ತಮ್ಮ ಜೀವನದಲ್ಲಿ ರಹಸ್ಯ ಸಹಸ್ರ ನಾಮದ ಒಂದು ನಾಮವನ್ನಾದ್ರೂ ಪಠಿಸುತ್ತಾನೋ ಅವರ ಮಹಾ ಪಾಪಗಳು ಕೂಡಾ ನಾಶವಾಗುವುವು.

ಫಲಶ್ರುತಿ ಅಥವಾ ಉತ್ತರಭಾಗ

    ಹೀಗೆ ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ ಹಯಗ್ರೀವನು ಅಗಸ್ತ್ಯನನ್ನು ಸಂಬೋಧಿಸುಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ ಮತ್ತು ಇದರಲ್ಲಿ ಯಾವುದೇ ನಾಮವು ಪುನರಾವೃತವಾಗಿಲ್ಲ.

    (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅದರಲ್ಲಿ ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ ಸಹಸ್ರನಾಮವು ಅತ್ಯಂತ ನಿಗೂಢವಾಗಿದ್ದು ಲಲಿತಾಂಬಿಕೆಯು ಈ ಸಹಸ್ರನಾಮದ ಕುರಿತು ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ. ಯಾವುದೇ ಮಂತ್ರವನ್ನು ರಹಸ್ಯಾತ್ಮಕವಾದದ್ದು ಎಂದು ಪರಿಗಣಿಸಲಾಗುತ್ತದೆ; ಅದರೊಳಗೆ ಅಡಕವಾಗಿರುವ ಬೀಜಾಕ್ಷರಗಳಿಂದಾಗಿ. ಲಲಿತಾ ಸಹಸ್ರನಾಮದ ಪ್ರತಿಯೊಂದು ನಾಮದಲ್ಲೂ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ ಎಂದು ಹೇಳಲಾಗುವುದರಿಂದ ಸಂಪೂರ್ಣ ಸಹಸ್ರನಾಮವು ಮಂತ್ರದ ಸ್ಥಾನವನ್ನು ಪಡೆಯುತ್ತದೆ.

ಲಲಿತಾ ಸಹಸ್ರನಾಮವನ್ನು ಉಚ್ಛರಿಸುವುದರಿಂದ ಕೆಳಗಿನ ಫಲಗಳು ದೊರೆಯುತ್ತವೆ:
೧) ಇದು ಸರ್ವರೋಗಗಳನ್ನು ನಾಶ ಮಾಡವುದು ಮತ್ತು ಸರ್ವವಿಧ ಸಂಪತ್ತನ್ನು ಹೆಚ್ಚಿಸುವುದು,
೨) ಇದು ಅಪಮೃತ್ಯುಗಳನ್ನು ತಪ್ಪಿಸುವುದು, ಅಪಘಾತಗಳನ್ನು ನಿವಾರಿಸುವುದು, ಸರ್ವ ಜ್ವರವೇದನೆಯನ್ನು ಉಪಶಮನ ಮಾಡವುದು.
೩) ಇದು ಮಕ್ಕಳಿಲ್ಲದವರಿಗೆ ಉತ್ತಮ ಸಂತಾನವನ್ನು ಕರುಣಿಸುತ್ತದೆ ಮತ್ತು ಪುರುಷಾರ್ಥವನ್ನು ಕೊಡುವುದು.

ವಾಚನದ ವಿಧಾನ:
    ಲಲಿತೋಪಾಸಕನು ಇದನ್ನು ನಿತ್ಯವೂ ಪ್ರಯತ್ನಪೂರ್ವಕವಾಗಿ ಮಾಡಬೇಕು. ಪ್ರಾತಃಕಾಲದಲ್ಲಿ ಸ್ನಾನವನ್ನು ಮಾಡಿ ಸಂಧ್ಯಾದಿಕರ್ಮಗಳನ್ನು ವಿಧಿಪ್ರಕಾರ ಮುಗಿಸಿ, ಶ್ರೀ ಚಕ್ರದ ಅರ್ಚನೆಯನ್ನು ಮಾಡಬೇಕು. ಶ್ರೀ ಚಕ್ರವನ್ನು ಪೂಜಿಸಿದ ನಂತರ ಒಬ್ಬನು ಪಂಚದಶೀ (ಷೋಡಶೀ) ಮಂತ್ರಗಳನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ ಅಥವಾ ನೂರು ಸಲವಾಗಲಿ ಜಪಿಸಬೇಕು. ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಒಬ್ಬನು ಈ ಸಹಸ್ರನಾಮವನ್ನು ಪಠಿಸಬೇಕು. ಸಹಸ್ರನಾಮವು ಸಂಪೂರ್ಣಗೊಂಡ ಮೇಲೆ ಒ‌ಬ್ಬನು ಲಲಿತಾಂಬಿಕೆಗೆ ಪುಷ್ಪಗಳನ್ನು ಸಮರ್ಪಿಸಬೇಕು. ಒಂದು ವೇಳೆ ಒಬ್ಬನು ಮಂತ್ರ ಜಪ ಅಥವಾ ಶ್ರೀ ಚಕ್ರೋಪಾಸನೆಯ ದೀಕ್ಷೆಯನ್ನು ಪಡೆಯದಿದ್ದಲ್ಲಿ ಅವನು ಕೇವಲ ಈ ಸಹಸ್ರನಾಮವೊಂದನ್ನೇ ಪಠಿಸಬಹುದು.

ಒಬ್ಬನು ಜೀವಿತಕಾಲದಲ್ಲಿ ಒಂದೇ ಒಂದು ಬಾರಿ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ಹೀಗಿವೆ:
  1. ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡುವುದರಿಂದ ದೊರೆಯುವ ಫಲಕ್ಕಿಂತ ಅಧಿಕ ಫಲವನ್ನು ಪಡೆಯುತ್ತಾನೆ.
  2. ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾನೆ.
  3. ಕುರುಕ್ಷೇತ್ರದಲ್ಲಿ ಸೂರ್ಯ ಗ್ರಹಣದ ಸಮಯದಲ್ಲಿ ಶ್ರೋತ್ರೀಯರಾದ ಬ್ರಾಹ್ಮಣರಿಗೆ ಕೋಟಿ ಸಲ ಕೋಟಿ ಸುವರ್ಣ ಭಾರಗಳನ್ನು ದಾನ ಮಾಡಿ ಲಭಿಸುವ ಪುಣ್ಯಕ್ಕಿಂತ ಅಧಿಕವಾದ ಪುಣ್ಯವು ದೊರೆಯು‌ತ್ತದೆ.
  4. ಗಂಗೆಯ ತಟದಲ್ಲಿ ಮಾಡುವ ಕೋಟಿ ಅಶ್ವಮೇಧಯಾಗಕ್ಕಿಂತ ಅಧಿಕವಾದ ಪುಣ್ಯವು ಲಭಿಸುತ್ತದೆ.
  5. ಸಹಸ್ರನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಛರಿಸಿದರೂ ಸಹ ಅವನ ಮಹಾಪಾಪಗಳು ನಾಶವಾಗುವುವು.
  6. ಸಹಸ್ರನಾಮದ ಒಂದು ನಾಮಕ್ಕೆ ಪಾತಕ ನಾಶಮಾಡಲು ಇರುವ ಶಕ್ತಿಯನ್ನು ಹದಿನಾಲ್ಕು ಲೋಕಗಳ ಸಮಸ್ತ ಜೀವರಾಶಿಗಳೂ ತಮ್ಮ ಪಾಪಾಚರಣೆಯಿಂದ ನಿವಾರಿಸಲಾರವು.
  7. ಯಾವನು ಪಾಪನಾಶವನ್ನು ಮಾಡಿಕೊಳ್ಳಲು ಸಹಸ್ರನಾಮವನ್ನು ಬಿಟ್ಟು ಇತರೇ ಪ್ರಾಯಶ್ಚಿತ್ತ ಕರ್ಮಗಳನ್ನು ಆಶ್ರಯಿಸುವನೋ ಅವನು ಶೀತವನ್ನು ಹೋಗಲಾಡಿಸಿಕೊಳ್ಳಲು ಹಿಮಾಲಯವನ್ನು ಆಶ್ರಯಿಸಿದ ಮನುಷ್ಯನಂತೆ.
  8. ಒಬ್ಬನು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಿದ್ದರೆ ಲಲಿತಾಂಬಿಕೆಯು ಅವನ ಬಗೆಗೆ ಅತೀವ ಸಂತೋಷವನ್ನು ಹೊಂದಿ ಅವನ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಈ ಸಹಸ್ರನಾಮವನ್ನು ಒಬ್ಬನು ನಿತ್ಯವೂ ಪಠಿಸದೇ ಇದ್ದರೆ ಅವನನ್ನು ಭಕ್ತನೆಂದು ಪರಿಗಣಿಸಲಾಗದು ಎಂದು ಹೇಳಲಾಗುತ್ತದೆ. ಒಬ್ಬನು ಭಕ್ತನೆನಿಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗೆಗೆ ಅವನಿಗೆ ಎಣೆಯಿಲ್ಲದಷ್ಟು ಪ್ರೀತಿ ಇರಬೇಕು. ಈ ಸಹಸ್ರನಾಮವನ್ನು ನಿತ್ಯವೂ ಸಂಪೂರ್ಣವಾಗಿ ಪಠಿಸಿದರೆ ಮಾತ್ರ ಲಲಿತಾಂಬಿಕೆಯು ಅಂತಹ ಭಕ್ತಿಯನ್ನು ಹುಟ್ಟುಹಾಕುತ್ತಾಳೆ.
  9. ಒಬ್ಬನಿಗೆ ಇದನ್ನು ನಿತ್ಯವೂ ಪಠಿಸಲು ಆಗದಿದ್ದರೆ ಅವನು ಇದನ್ನು ಕಡೇಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು. ಮುಖ್ಯವಾದ ದಿವಸಗಳೆಂದರೆ, ಸಂಕ್ರಾಂತಿ ಅಥವಾ ವಿಷುವತ್ಸಂಕ್ರಾಂತಿಯಲ್ಲಿ, ಉತ್ತಾರಾಯಣ ಹಾಗು ದಕ್ಷಿಣಾಯನ ಪುಣ್ಯಕಾಲ, ಮೊದಲಾದವುಗಳು. ಸಹಸ್ರನಾಮವನ್ನು ಪಠಿಸಲು ಇತರೇ ಶುಭದಿನಗಳೆಂದರೆ ಅಷ್ಟಮೀ, ನವಮೀ ಮತ್ತು ಚತುರ್ದಶೀ ತಿಥಿಗಳು ಮತ್ತು ಶುಕ್ರವಾರಗಳು.
  10. ಎಲ್ಲದಕ್ಕಿಂತ ಹೆಚ್ಚು ಪ್ರಶಸ್ತವಾದ ಸಮಯವು ಹುಣ್ಣಿಮೆಯಾಗಿದೆ. ಪೂರ್ಣ ಚಂದ್ರನ ದರ್ಶನವನ್ನು ಪಡೆದ ನಂತರ ಒಬ್ಬರು ಲಲಿತಾಂಬಿಕೆಯನ್ನು ಚಂದ್ರಬಿಂಬದಲ್ಲಿ ಧ್ಯಾನಿಸಿ ಪಂಚೋಪಚಾರಗಳಿಂದ (ಗಂಧ, ಪುಷ್ಪ, ದೀಪ, ಧೂಪ, ನೈವೇದ್ಯ) ಶ್ರೀ ಚಕ್ರವನ್ನು ಪೂಜಿಸಿ ಈ ಸಹಸ್ರನಾಮವನ್ನು ಪಠಿಸಿದಲ್ಲಿ ಅವರ ಸರ್ವರೋಗಗಳು ಪರಿಹಾರವಾಗಿ ಅವರು ದೀರ್ಘಾಯು‌ಷ್ಯವನ್ನು ಪಡೆಯುತ್ತಾರೆ.
  11. ತನ್ನ ಹಾಗು ತನ್ನ ಸಂಗಾತಿಯ ಮತ್ತು ಮಕ್ಕಳ ಜನ್ಮ ನಕ್ಷತ್ರಗಳಿರುವ ದಿನಗಳೂ ಸಹ ಲಲಿತಾ ಸಹಸ್ರನಾಮ ಪಠಣಕ್ಕೆ ಅತ್ಯಂತ ಪ್ರಶಸ್ತ ದಿನಗಳೆಂದು ಪರಿಗಣಿತವಾಗಿವೆ.

ಇತರೇ ಒಳಿತುಗಳು:
  • ಪರಶುರಾಮಕಲ್ಪದಲ್ಲಿ ಹೇಳಿರುವಂತೆ ಸರ್ವರೋಗನಾಶಕ್ಕಾಗಿ ಮತ್ತು ದೀರ್ಘಾಯುಸ್ಸಿಗಾಗಿ ಆಯಷ್ಕರವೆಂಬ ಪೂಜಾ ಪದ್ಧತಿಯಂತೆ, ಜ್ವರದ ತಾಪದಿಂದ ಬಳಲುತ್ತಿರುವವರ ತಲೆಯ ಮೇಲೆ ಕೈಯಿರಿಸಿ ಲಲಿತಾ ಸಹಸ್ರನಾಮದ ಪಠಣವನ್ನು ಕೈಗೊಂಡಲ್ಲಿ ಅವರ ದೇಹದ ಉಷ್ಣತೆಯು ಶಮನಗೊಂಡು ಇತರೇ ವಿಧವಾದ ಬಾಧೆಗಳು ನಾಶವಾಗುತ್ತವೆ.
  • ಭಸ್ಮದ ಮೇಲೆ ಕೈಯಿರಿಸಿ ಈ ಸಹಸ್ರನಾಮವನ್ನು ಪಠಿಸಿದ ನಂತರ ಆ ಪವಿತ್ರ ಭಸ್ಮವನ್ನು ಯಾತನೆಯಿಂದ ನರಳುತ್ತಿರುವವರ ದೇಹಕ್ಕೆ ಲೇಪಿಸಿದಲ್ಲಿ ಅವರ ಯಾತನೆಗಳು ಕಡಿಮೆಯಾಗುತ್ತವೆ.
  • ಒಂದು ವೇಳೆ ಒಬ್ಬನು ಗ್ರಹದೋಷಗಳಿಂದ ಪೀಡಿತನಾಗಿದ್ದರೆ, ಕುಂಭದಲ್ಲಿ ನೀರನ್ನು ಸಹಸ್ರನಾಮದಿಂದ ಸಂಮಂತ್ರಿಸಿ ಪ್ರೋಕ್ಷಿಸಿದಲ್ಲಿ ಬಾಲಗ್ರಹ, ದುಷ್ಟಸ್ಥಾನದಲ್ಲಿರುವ ನವಗ್ರಹಗಳ ದೋಷಗಳು, ಪಿಶಾಚಪೀಡೆಗಳು ದೂರವಾಗುತ್ತವೆ.
  • ಮಕ್ಕಳಿಲ್ಲದವರಿಗೆ, ಈ ಸಹಸ್ರನಾಮದಿಂದ ಪವಿತ್ರಗೊಂಡ ನವನೀತವನ್ನು (ಬೆಣ್ಣೆ) ತಿನ್ನಲು ಕೊಟ್ಟರೆ ಅವರಿಗೆ ಪುತ್ರಲಾಭವಾಗುವುದು.
  • ಭಗವಾನ್ ಶರಭೇಶ್ವರನು, ಯಾರು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಾರೆಯೋ ಅವರ ಶತ್ರುಗಳನ್ನು ಸರ್ವನಾಶ ಮಾಡುತ್ತಾನೆ.
  • ಈ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಉಂಟಾಗುವ ದುಷ್ಟ ಶಕ್ತಿಗಳ ಪೀಡನೆಯನ್ನು ‘ಪ್ರತ್ಯಂಗಿರಾ ದೇವಿ’ಯು ನಾಶಮಾಡುತ್ತಾಳೆ. ಪ್ರತ್ಯಂಗಿರಾ ದೇವಿಯು ಶರಭೇಶ್ವರನ ಸಂಗಾತಿಯಾಗಿದ್ದಾಳೆ.
  • ಈ ಸಹಸ್ರನಾಮವನ್ನು ಪಠಿಸುವವರನ್ನು ಕ್ರೂರದೃಷ್ಟಿಯಿಂದ ನೋಡಿದವರನ್ನು ಮಾರ್ತಾಂಡ ಭೈರವನು (ನಾಮ ೭೮೫) ಕುರುಡನನ್ನಾಗಿಸುತ್ತಾನೆ.
  • ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರ ಸಂಪತ್ತನ್ನು ಯಾರಾದರೂ ಅಪಹರಿಸುವುದಾಗಲಿ ಅಥವಾ ಇತರೇ ವಿಧಾನಗಳ ಮೂಲಕ ಹಾನಿಯುಂಟು ಮಾಡಿದರೆ ಅವರನ್ನು ಕ್ಷೇತ್ರಪಾಲನು (ನಾಮ ೩೪೪) ಸಂಹರಿಸುತ್ತಾನೆ.
  • ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರೊಂದಿಗೆ ಯಾರಾದರೂ ಅನಗತ್ಯವಾದ ವಾದವಿವಾದಕ್ಕಿಳಿದರೆ ನಕುಲೀಶ್ವರೀ ದೇವಿಯು ಅಂತಹ ವ್ಯಕ್ತಿಯ ವಾಕ್ಕನ್ನು (ಮಾತನ್ನು) ನಿಷ್ಪ್ರಯೋಜನಗೊಳಿಸುತ್ತಾಳೆ. ನಕುಲೀಶ್ವರೀ ದೇವಿಯನ್ನು ನವಾವರಣದಲ್ಲೂ ಪೂಜಿಸಲಾಗುತ್ತದೆ ಮತ್ತು ಈಕೆಯು ಮಂತ್ರಿಣೀ ದೇವಿ ಎಂದು ಕರೆಯಲ್ಪಡುವ ಶ್ಯಾಮಲಾ ದೇವಿಯ (ನಾಮ ೬೯, ೭೫) ಸಹಾಯಕಿಯಾಗಿದ್ದಾಳೆ.
  • ಈ ಲಲಿತಾ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಶತ್ರುತ್ವವನ್ನು ಒಬ್ಬ ರಾಜನೇ ತೆಳೆದಿದ್ದರೂ ಸಹ ಅವನ ಸೈನ್ಯವನ್ನು ಲಲಿತಾಂಬಿಕೆಯ ಸೇನಾ ಪ್ರಮುಖಳಾಗಿರುವ ದಂಡಿನೀ ದೇವಿಯೇ (ವಾರಾಹೀ - ನಾಮ ೭೦, ೭೬) ಸ್ವಯಂ ನಾಶಪಡಿಸುತ್ತಾಳೆ; ಈ ವಿಷಯವಾಗಿ ಅವಳಲ್ಲಿ ಭಕ್ತನು ಬೇಡದಿದ್ದರೂ ಸಹ ಮತ್ತು ಅದಕ್ಕೆ ಲಲಿತಾಂಬಿಕೆಯ ಆಜ್ಞೆಯಿಲ್ಲದಿದ್ದರೂ ಸಹ.
  • ಯಾರು ಈ ಸಹಸ್ರನಾಮವನ್ನು ಕನಿಷ್ಠ ಆರು ತಿಂಗಳ ಕಾಲ ನಿತ್ಯವೂ ಪಠಿಸುತ್ತಾರೆಯೋ ಅವರ ಮನೆಯಲ್ಲಿ ಲಕ್ಷ್ಮೀದೇವಿಯು ಚಾಂಚಲ್ಯರಹಿತಳಾಗಿ ಸ್ಥಿರವಾಗಿ ನಿಲ್ಲುತ್ತಾಳೆ.
  • ಯಾರು ಈ ಲಲಿತಾ ಸಹಸ್ರನಾಮವನ್ನು ಒಂದು ತಿಂಗಳ ಕಾಲ ತ್ರಿಕಾಲವೂ ಪಠಿಸುತ್ತಾರೋ ಅಂತಹವರ ನಾಲಿಗೆಯ ಮೇಲೆ ವಾಗ್ದೇವಿಯಾದ ಸರಸ್ವತಿಯು ನಲಿಯುತ್ತಾಳೆ.
  • ಯಾರು ಈ ಸಹಸ್ರನಾಮವನ್ನು ಹದಿನೈದು ರಾತ್ರಿಗಳು ಜಾಗರೂಕರಾಗಿ ಪಠಿಸುತ್ತಾರೋ ಅವರು ಇತರೇ ಲಿಂಗದ ವ್ಯಕ್ತಿಗಳನ್ನು ಮೋಹಪರವಶಗೊಳಿಸುವ ವ್ಯಕ್ತಿತ್ವವನ್ನು ಪಡೆಯುತ್ತಾರೆ.
  • ಈ ಸಹಸ್ರನಾಮವನ್ನು ಒಂದೇ ಒಂದು ಬಾರಿ ಪಠಿಸಿದವರ ದರ್ಶನವನ್ನು ಯಾರು ಮಾಡುತ್ತಾರೋ ಅವರು ಪಾಪಗಳಿಂದ ಮುಕ್ತರಾಗುತ್ತಾರೆ.
  • ಯಾರು ಈ ಸಹಸ್ರನಾಮವನ್ನು ಅರ್ಥಮಾಡಿಕೊಂಡಿರುತ್ತಾರೋ ಅವರಿಗೆ ಕಾಣಿಕೆ ಮತ್ತು ದಾನಗಳನ್ನು ಕೊಡುವುದರಿಂದ ಲಲಿತಾಂಬಿಕೆಯು ಸಂತುಷ್ಟಗೊಳ್ಳುತ್ತಾಳೆ. ಯೋಗ್ಯ ವ್ಯಕ್ತಿಗಳಿಗೆ ದಾನವನ್ನು ಕೊಡುವುದೂ ಸಹ ಒಬ್ಬನ ಪ್ರಮುಖ ಕರ್ತವ್ಯವಾಗಿದೆ. ಅಪಾತ್ರರಿಗೆ ಮಾಡಿದ ದಾನವು ಅಧಿಕವಾದ ಪಾಪಕರ್ಮವನ್ನುಂಟು ಮಾಡುತ್ತದೆ. ದಾನಕ್ಕಿಂತ ದಾನವನ್ನು ಕೊಡಲು ಯೋಗ್ಯ ವ್ಯಕ್ತಿಯನ್ನು ಆರಿಸುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.
  • ಯಾರು ಶ್ರೀ ವಿದ್ಯಾ ದೀಕ್ಷೆಯನ್ನು ಪಡೆದು ಶ್ರೀ ಚಕ್ರದ ಪೂಜೆಯನ್ನು ಕೈಗೊಂಡು ಲಲಿತಾ ಸಹಸ್ರನಾಮದ ಪಠಣವನ್ನು ಮಾಡುತ್ತಾರೋ ಅಂತಹವರು ಅತ್ಯಂತ ಪೂಜನೀಯರು ಎಂದು ಪರಿಗಣಿಸಲ್ಪಡುತ್ತಾರೆ. ಮೂಲ ಶ್ಲೋಕದಲ್ಲಿ ಶ್ರೀ ವಿದ್ಯೆಯನ್ನು ಸೂಚಿಸಲು ’ಮಂತ್ರರಾಜಂ’ ಶಬ್ದವನ್ನು ಬಳಸಲಾಗಿದೆ. (ಲಕ್ಷ್ಮೀನರಸಿಂಹ ಮಂತ್ರವನ್ನೂ ಸಹ ‘ಮಂತ್ರರಾಜಂ’ ಹೆಸರಿನಿಂದ ಕರೆಯುತ್ತಾರೆ).
  • ಈ ಸಹಸ್ರನಾಮದ ಅರ್ಥವನ್ನು ತಿಳಿಯದೇ ಪಠಿಸಿದಲ್ಲಿ ಅದು ಆರಿದ ಬೆಂಕಿಯಲ್ಲಿ ಕಟ್ಟಿಗೆಯ ಕೊರಡನ್ನಿಡುವುದಕ್ಕೆ ಸಮನಾದುದು. ಆದರೆ ನಾಮಗಳ ಅರ್ಥಗಳನ್ನು ತಿಳಿಯದವರೂ ಸಹ ಲಲಿತಾಸಹಸ್ರನಾಮವನ್ನು ಪಠಿಸಬಹುದೆಂದು ಹೇಳಲಾಗಿದೆ. ಇದರ ಒಟ್ಟಾರೆ ಉದ್ದೇಶವೇನೆಂದರೆ ಯಾರು ಸಹಸ್ರನಾಮದ ಅರ್ಥಗಳನ್ನು ತಿಳಿಯಲು ಶಕ್ಯರಾಗಿದ್ದಾರೋ ಅವರು ಅದರ ಅರ್ಥಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾರಿಗೆ ಇದರ ಅರ್ಥಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲವೋ ಅವರಿಗೆ ಮಾತ್ರ ಇದರಿಂದ ವಿನಾಯತಿಯನ್ನು ಕೊಡಲಾಗಿದೆ. ಅವರಿಗೆ ಇದನ್ನು ಅರಿಯಲು ಬೇಕಾಗಿರುವ ಅವಶ್ಯವಾದ ಜ್ಞಾನವು ಮುಂದಿನ ಜನ್ಮದಲ್ಲಿ ದೊರೆಯುತ್ತದೆ.
  • ಯಾರು ಜೀವಿತಕಾಲದಲ್ಲಿ ಒಮ್ಮೆ ಶ್ರೀ ಚಕ್ರದ ಪೂಜೆಯನ್ನು ಸಹಸ್ರನಾಮಪೂರ್ವಕವಾಗಿ ಸುವಾಸನೆಯುಳ್ಳ ಪುಷ್ಟಗಳಿಂದ ಪೂಜಿಸುವರೋ ಅವರಿಗೆ ಉಂಟಾಗುವ ಪುಣ್ಯಫಲವನ್ನು ಶಿವನಿಂದಲೂ ಸಹ ವಿವರಿಸಲು ಸಾಧ್ಯವಿಲ್ಲ. ಇದನ್ನೇ ಅರ್ಚನೆ ಎಂದು ಕರೆಯುತ್ತಾರೆ. ಪ್ರತಿಯೊಂದು ನಾಮದ ಕೊನೆಯಲ್ಲಿ ನಮಃ ಶಬ್ದವನ್ನು ಹೇಳಬೇಕು. ಪದ್ಮ, ತುಲಸೀಪುಷ್ಪ, ಕಲ್ಹಾರ, ಕದಂಬ, ಚಂಪಕ, ಜಾಜಿ, ಮಲ್ಲಿಕಾ, ಕರವೀರ, ಉತ್ಪಲ, ಬಿಲ್ವಪತ್ರ, ಕುಂದ, ಕೇಸರ, ಪಾಟಲ, ಕೇತಕೀ ಮತ್ತು ಮಾಧವೀ ಎಂದು ಹದಿನೈದು ವಿಧವಾದ ಪುಷ್ಟಗಳನ್ನು ಹೆಸರಿಸಲಾಗಿದೆ, ಆದರೆ ಯಾವುದೇ ವಿಧವಾದ ಪರಿಮಳಭರಿತ ಹೂವುಗಳನ್ನು ಅರ್ಚನೆಗೆ ಬಳಸಬಹುದು. ಆದರೆ, ಎಲ್ಲಕ್ಕಿಂತ ಶ್ರೇಷ್ಠವಾದ ಪುಷ್ಪವೆಂದರೆ ಕೇಸರೀ ಹೂವು. (ತುಳಸೀ ಗಿಡದ ಹೂಗುಚ್ಛವನ್ನು ಬಳಸಬೇಕು ದಳಗಳನ್ನಲ್ಲ).
  • ಅರ್ಚನೆ ಎಂದರೆ ಪ್ರತಿ ನಾಮಕ್ಕೂ ‘ಓಂ-ಐಂ-ಹ್ರೀಂ-ಶ್ರೀಂ’ ಮಂತ್ರವನ್ನು ಪೂರ್ವಪ್ರತ್ಯಯವಾಗಿ ಮತ್ತು ’ನಮಃ’ ಎನ್ನುವುದನ್ನು ಉತ್ತರ ಪ್ರತ್ಯಯವಾಗಿ ಜೋಡಿಸಬೇಕು. ಉದಾಹರಣೆಗೆ ಮೊದಲನೇ ನಾಮವನ್ನು ‘ಓಂ-ಐಂ-ಹ್ರೀಂ-ಶ್ರೀಂ-ಶ್ರೀ ಮಾತ್ರೇ ನಮಃ’ ಎಂದು ಉಚ್ಛರಿಸಬೇಕು.
  • ಅರ್ಚನೆಯನ್ನು ಕೈಗೊಳ್ಳುವ ಮುನ್ನ ಒಬ್ಬರು ಸಂಕಲ್ಪವನ್ನು ಮಾಡಬೇಕು, ಅದನ್ನನುಸರಿಸಿ ನ್ಯಾಸ, ಅರ್ಚನೆ ಮತ್ತು ಪುನಃ ‘ಓಂ’ ಎಂದು ಕಡೆಯ ನಾಮದ ಅರ್ಚನೆಯಲ್ಲಿ ಹೇಳಬೇಕು
  • (‘ಓಂ-ಐಂ-ಹ್ರೀಂ-ಶ್ರೀಂ-ಲಲಿತಾಂಬಿಕಾಯೈ ನಮಃ ಓಂ’). ನಾವು ಹೂವುಗಳನ್ನು ಇರಿಸುವ ಕ್ರಮಕ್ಕೂ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಹೂವುಗಳು ಅರಳುವ ವಿಧಾನದಲ್ಲಿಯೇ ಅವುಗಳನ್ನು ಶ್ರೀ ಚಕ್ರದ ಮೇಲೆ ಇರಿಸಬೇಕು, ಅವುಗಳ ದಳಗಳು ಮೇಲ್ಮುಖವಾಗಿರಬೇಕು.
  • ಯಾರು ಮೇಲೆ ತಿಳಿಸಿದ ಪ್ರಕಾರ ಪೂಜೆಯನ್ನು ಹುಣ್ಣಿಮೆಯಂದು ಮಾಡುತ್ತಾರೋ ಅವರು ಲಲಿತಾಂಬಿಕೆಯ ಸ್ವರೂಪವನ್ನು ಪಡೆಯುತ್ತಾರೆ ಒಂದು ವೇಳೆ ಅಂತಹ ವ್ಯಕ್ತಿಗಳನ್ನು ಯಾರು ಲಲಿತಾಂಬಿಕೆಯ ಸ್ವರೂಪವೆಂದು ಭಾವಿಸುವುದಿಲ್ಲವೋ ಅವರು ಪಾಪ ಪೀಡಿತರಾಗುತ್ತಾರೆ.
  • ಯಾರು ಮೇಲೆ ತಿಳಿಸಿದ ಪೂಜೆಯನ್ನು ದಸರೆಯ ಒಂಬತ್ತನೇ ದಿನವಾದ ಮಹಾನವಮಿಯಂದು ಕೈಗೊಳ್ಳುತ್ತಾರೋ ಅವರು ಮುಕ್ತಿಯನ್ನು ಹೊಂದುತ್ತಾರೆ.
  • ಮಹಾನವಮಿಯು ಶಿವ ಮತ್ತು ಶಕ್ತಿಯರ ಸಾಮರಸ್ಯರೂಪವಾಗಿದೆ. ಅಷ್ಟಮಿಯು ರುದ್ರನಿಗೆ ಮತ್ತು ನವಮಿಯು ಶಕ್ತಿಗೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
  • ಇವೆರಡೂ ದಿನಗಳ ಸಂಧಿಕಾಲವಾದ ಮಹಾನವಮಿಯು ಲಲಿತಾಂಬಿಕೆಯನ್ನು ಪೂಜಿಸಲು ಅತ್ಯಂತ ಪ್ರಶಸ್ತ ಸಮಯವೆಂದು ಪರಿಗಣಿಸಲ್ಪಟ್ಟಿದ್ದು ಅಂದು ಪೂಜಿಸಿದವರ ಬೇಡಿಕೆಗಳು ಇಡೇರುತ್ತವೆ. ಅವರು ಸಕಲ ಸೌಭಾಗ್ಯಗಳನ್ನು ಪಡೆದು ಪುತ್ರ-ಪೌತ್ರಾದಿಗಳೊಂದಿಗೆ ಬಹುಕಾಲ ಜೀವಿಸಿ, ಅಂತಿಮವಾಗಿ ಲಲಿತಾಂಬಿಕೆಯ ಪದತಲದಲ್ಲಿ ಸ್ಥಾನ ಪಡೆಯುತ್ತಾರೆ (ನಾಮ ೯೧೨).
  • ಯಾರು ಇಂತಹ ಆಚರಣೆಗಳನ್ನು ಪ್ರತಿ ಶುಕ್ರವಾರಗಳಂದು ಕೈಗೊಳ್ಳುತ್ತಾರೆಯೋ ಅಂತಹವರು ಶ್ರೀ ವಿದ್ಯಾ ಉಪಾಸನೆಯಲ್ಲಿ ಪರಿಣಿತರಾದವರಿಗೆ ಪಾಯಸ-ಅಪೂಷ-ಷಡ್ರಸೋಪೇತವಾದ ಭೋಜನವನ್ನು ಉಣಬಡಿಸಬೇಕು.
  • ಹೀಗೆ ಮಾಡಿದಲ್ಲಿ ಲಲಿತಾಂಬಿಕೆಯು ಅತ್ಯಂತ ಸಂತುಷ್ಟಳಾಗಿ ಅವರು ಬೇಡಿದ ವರಗಳನ್ನೆಲ್ಲಾ ದಯಪಾಲಿಸುತ್ತಾಳೆ. ಅವರು ಸ್ವಯಂ ಲಲಿತಾಂಬಿಕೆಯ ಶಕ್ತಿಗಳನ್ನೇ ಪಡೆಯುವರೆಂದು ಹೇಳಲಾಗುತ್ತದೆ. (ಇದಕ್ಕೆ ಸಂಬಂಧಿಸಿದ ಅನುಷ್ಠಾನ ವಿಧಿಗಳು ಬಹಳ ದೀರ್ಘವಾಗಿವೆ).
  • ಯಾರು ಈ ಲಲಿತಾ ಸಹಸ್ರನಾಮವನ್ನು ಯಾವುದೇ ವಿಧವಾದ ಬಯಕೆಗಳಿಲ್ಲದೆ ಪಠಿಸುತ್ತಾರೋ ಅವರು ಸಂಸಾರ ಬಂಧನದಿಂದ ಮುಕ್ತರಾಗಿ ಅಂತಿಮವಾಗಿ ಆಕೆಯಲ್ಲಿ ಐಕ್ಯರಾಗುತ್ತಾರೆ.
  • ಈ ಸಹಸ್ರನಾಮವು ಭುಕ್ತಿ-ಮುಕ್ತಿ ಪ್ರದಾಯಕವಾಗಿದೆ.
  • ಒಬ್ಬನಿಗೆ ಶ್ರೀ ವಿದ್ಯಾ ದೀಕ್ಷೆಯು ಅವನ ಅಂತಿಮ ಜನ್ಮದಲ್ಲಿ ಕೊಡಮಾಡಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಅವಕಾಶವು ದೊರೆಯಲು ಅವನು ಪೂರ್ವ ಜನ್ಮಗಳಲ್ಲಿ ಅನೇಕ ದೇವ-ದೇವಿಯರನ್ನು ಪೂಜಿಸಿ ಪುಣ್ಯವನ್ನು ಸಂಪಾದಿಸಿರಬೇಕು.
  • ಒಬ್ಬನಿಗೆ ಸಹಸ್ರನಾಮದ ಉಪದೇಶವನ್ನು ಶ್ರೀ ವಿದ್ಯಾ ದೀಕ್ಷೆಯ ಮೊದಲೇ ಕೊಟ್ಟರೆ, ಅವನಿಗೆ ದೀಕ್ಷೆಯನ್ನು ಕೊಟ್ಟವರು ಮತ್ತು ದೀಕ್ಷೆಯನ್ನು ಪಡೆದುಕೊಂಡವರು ಇಬ್ಬರೂ ದೋಷಗ್ರಸ್ತರಾಗುತ್ತಾರೆ. ಅದೇ ವಿಧವಾಗಿ ಯಾರ ಮನಸ್ಸು ಪರಿಶುದ್ಧವಾಗಿಲ್ಲವೋ ಅಂತಹವರಿಗೆ ಶ್ರೀ ವಿದ್ಯಾ ದೀಕ್ಷೆಯನ್ನು ಕೊಟ್ಟರೆ ಆಗಲೂ ಸಹ ಇಬ್ಬರಿಗೂ ದೋಷವುಂಟಾಗುವುದು.
  • ಅಂತಿಮವಾಗಿ ಹಯಗ್ರೀವನು ಈ ರಹಸ್ಯವನ್ನು ಅಗಸ್ತ್ಯನೊಂದಿಗೆ ಹಂಚಿಕೊಂಡದ್ದು ಲಲಿತಾಂಬಿಕೆಯ ಆಜ್ಞೆಯ ಮೇರೆಗೆ ಎಂದು ಹೇಳುತ್ತಾನೆ. ಹಯಗ್ರೀವನು ಅಗಸ್ತ್ಯನಿಗೆ ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವಂತೆ ಹೇಳಿ, ಅದರ ಮೂಲಕ ಅವನು ಬೇಡಿದ್ದನ್ನು ದೇವಿಯು ಕರುಣಿಸುತ್ತಾಳೆ ಎಂದು ತಿಳಿಸುತ್ತಾನೆ.

ಲಲಿತಾ ಸಹಸ್ರಾನಾಮ ದೇವಿ ಲಲಿತಾಂಬಿಕೆಯು ಸರ್ವರಿಗೂ ಮಂಗಳವನ್ನುಂಟು ಮಾಡಲಿ.

ಆಗಸ್ಟ್ 20, 2022

ಪಶುಪತಿ ಅಷ್ಟಕಮ್

ಪಶುಪತಿ ಅಷ್ಟಕವು ಪಶುಪತಿ ದೇವರನ್ನು ಕುರಿತು ಹೇಳುವ ಪ್ರಾರ್ಥನೆ. ನೇಪಾಳ ಮತ್ತು ದಕ್ಷಿಣ ಭಾರತದಲ್ಲಿ ಮಹಾದೇವ ಶಿವನನ್ನು ಪಶುಪತಿನಾಥನ ರೂಪದಲ್ಲಿ ಪೂಜಿಸುತ್ತಾರೆ. ನೇಪಾಳದಲ್ಲಿರುವ ಪಶುಪತಿನಾಥನ ದೇವಾಲಯ ಜಗತ್ತಿನಲ್ಲೇ ಪ್ರಸಿದ್ದವಾದ ಹಿಂದೂ ದೇವಾಲಯ. ಭಕ್ತರು ಪಶುಪತಿ ಅಷ್ಟಕವನ್ನು ತಮ್ಮ ಪಾಪವನ್ನು ನಿವಾರಿಸಿಕೋಳ್ಳಲು ಮತ್ತು ದೇವರ ಕೃಪೆಯಿಂದ ಸಂತೋಷ ಮತ್ತು ಸಂಪತ್ತನ್ನು ಪಡೆಯಲು ಪಠನ ಮಾಡುತ್ತಾರೆ.

ಪಶುಪತಿ ಅಷ್ಟಕದ ಅರ್ಥ ಮತ್ತು ವ್ಯಾಖ್ಯಾನ

ಪಶುಪತೀನ್ದುಪತಿಂ ಧರಣೀಪತಿಂ ಭುಜಗಲೋಕಪತಿಂ ಚ ಸತೀಪತಿಮ್ |
ಪ್ರಣತಭಕ್ತಜನಾರ್ತಿಹರಂ ಪರಂ ಭಜತ ರೇ ಮನುಜಾ ಗಿರಿಜಾಪತಿಮ್ ||೧||
 ೧. ಹೇ ಮನುಜ, ತನ್ನ ನಿಜಭಕ್ತರ ಕಷ್ಟಗಳನ್ನು ನಿವಾರಿಸುವ ಇಂದುಪತಿಯೂ,ಧರಣೀಪತಿಯೂ,ಸಕಲಲೋಕಪತಿಯೂ, ಸತಿಪತಿಯೂ, ಗಿರಿಜಾಪತಿಯೂ ಆದ ಪಶುಪತಿಯನ್ನು ಭಜಿಸು.

ನ ಜನಕೋ ಜನನೀ ನ ಚ ಸೋದರೋ ನ ತನಯೋ ನ ಚ ಭೂರಿಬಲಂ ಕುಲಮ್ | 
ಅವತಿ ಕೋಽಪಿ ನ ಕಾಲವಶಂ ಗತಂ ಭಜತ ರೇ ಮನುಜಾ ಗಿರಿಜಾಪತಿಮ್ ||೨||
೨. ಹೇ ಮನುಜ, ತಂದೆ,ತಾಯಿ,ಸೋದರರು,ಮಕ್ಕಳು ಮತ್ತು ತುಂಬಿದ ಕುಟುಂಬ; ಇವರಾರೂ ನೀನು ಕಾಲವಶವಾಗುವಾಗ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಗಿರಿಜಾಪತಿಯನ್ನು ಭಜಿಸು.

ಮುರಜಡಿಣ್ಡಿಮವಾದ್ಯವಿಲಕ್ಷಣಂ ಮಧುರಪಞ್ಚಮನಾದವಿಶಾರದಮ್ |
ಪ್ರಮಥಭೂತಗಣೈರಪಿ ಸೇವಿತಂ ಭಜತ ರೇ ಮನುಜಾ ಗಿರಿಜಾಪತಿಮ್ ||೩||
೩. ಹೇ ಮನುಜ, ಮುರಜ ಡಿಂಡಿಮಗಳಂಥಾ ವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣನೂ, ಮಧುರವಾದ ಪಂಚಮ ಸ್ವರ ಹಾಡುವುದರಲ್ಲಿ ವಿಶಾರದನೂ ಪ್ರಥಮ ಗಣಗಳಿಂದ ಸೇವಿಸಲ್ಪಡುವವನೂ ಆದ ಗಿರಿಜಾಪತಿಯನ್ನು ಭಜಿಸು.

ಶರಣದಂ ಸುಖದಂ ಶರಣಾನ್ವಿತಂ ಶಿವ ಶಿವೇತಿ ಶಿವೇತಿ ನತಂ ನೃಣಾಮ್ |
ಅಭಯದಂ ಕರುಣಾವರುಣಾಲಯಂ ಭಜತ ರೇ ಮನುಜಾ ಗಿರಿಜಾಪತಿಮ್ ||೪||
 ೪. ಹೇ ಮನುಜ, ಶಿವ-ಶಿವ-ಶಿವ ಎಂದು ಶರಣಾರ್ಥಿಯಾಗಿ ಬಂದ ಜನರಿಗೆ ಆಶ್ರಯ ಮತ್ತು ಸುಖ-ಸಂತೊಷಗಳನ್ನು ಕೊಡುವ ರಕ್ಷಕನೂ, ದಯಾಸಾಗರನೂ ಆದ ಗಿರಿಜಾಪತಿಯನ್ನು ಭಜಿಸು.

ನರಶಿರೋರಚಿತಂ ಮಣಿಕುಣ್ಡಲಂ ಭುಜಗಹಾರಮುದಂ ವೃಷಭಧ್ವಜಮ್ |
ಚಿತಿರಜೋಧವಲೀಕೃತವಿಗ್ರಹಂ ಭಜತ ರೇ ಮನುಜಾ ಗಿರಿಜಾಪತಿಮ್ ||೫||
೫. ಹೇ ಮನುಜ, ನರ ರುಂಡಮಾಲನೂ, ಸರ್ಪ ಕುಂಡಲ ಧಾರಿಯೂ, ಸರ್ಪಹಾರ  ಶೋಭಿತನೂ, ವೃಷಭದ್ವಜನೂ, ಚಿತಾಭಸ್ಮಧರನೂ ಆದ ಗಿರಿಜಾಪತಿಯನ್ನು ಸದಾ ಭಜಿಸು.

ಮಖವಿನಾಶಕರಂ ಶಿಶಿಶೇಖರಂ ಸತತಮಧ್ವರಭಾಜಿಫಲಪ್ರದಮ್ | 
ಪ್ರಳಯದಗ್ಧಸುರಾಸುರಮಾನವಂ ಭಜತ ರೇ ಮನುಜಾ ಗಿರಿಜಾಪತಿಮ್ ||೬||
೬.  ಹೇ ಮನುಜ,ದಕ್ಷಯಘ್ನ ವಿನಾಶಕನೂ, ಚಂದ್ರಶೇಖರನೂ, ಯಘ್ನಕರ್ತ್ರುಗಳಿಗೆ ಸದಾ ವರದಾಯಕನೂ, ಪ್ರಳಯಕಾಲದಲ್ಲಿ ಸುರ ನರ ದಾನವರನ್ನೆಲ್ಲರನ್ನೂ ದಹಿಸುವಂಥಾ   ಗಿರಿಜಾಪತಿಯನ್ನು ಸದಾ ಭಜಿಸು.

ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ ಮರಣಜನ್ಮಜರಾಮಯಪೀಡಿತಮ್ |
ಜಗದುದೀಕ್ಷ್ಯ ಸಮೀಪಭಯಾಕುಲಂ ಭಜತ ರೇ ಮನುಜಾ ಗಿರಿಜಾಪತಿಮ್ ||೭||
 ೭.  ಹೇ ಮನುಜ,ದೀರ್ಘಕಾಲ ಹ್ರದಯದೋಳಗೆ ಕುಳಿತಿದ್ದ ನಿನ್ನ ಮದವು,ಈ ಜಗತ್ತಿನಲ್ಲಾಗುವ ಹುಟ್ಟು,ಮುಪ್ಪು,ಸಾವುಗಳನ್ನು ಹತ್ತಿರದಿಂದ ನೋಡಿ ಭಯಪೀಡಿತನಾಗಿ ಓಡುವ ಸಮಯದಲ್ಲಿ ಗಿರಿಜಾಪತಿಯನ್ನು ಭಜಿಸು.

ಹರಿವಿರಞ್ಚಿಸುರಾಧಿಪಪೂಜಿತಂ ಯಮಜನೇಶಧನೇಶನಮಸ್ಕೄತಮ್ | 
ತ್ರಿನಯನಂ ಭುವನತ್ರಿತಯಾಧಿಪಂ ಭಜತ ರೇ ಮನುಜಾ ಗಿರಿಜಾಪತಿಮ್ ||೮||
೮. ಹೇ ಮನುಜ, ವಿಷ್ನು, ಭ್ರಹ್ಮ, ಇಂದ್ರರಿಂದ ಪೂಜಿಸಲ್ಪಡುವ, ಯಮ, ವರುಣ, ಕುಬೇರರಿಂದ ಸ್ತುತಿಸಲ್ಪಡುವ, ತ್ರಿನೇತ್ರಗಳಿಂದ ಹತ್ತಿರದಲ್ಲಿ ಭಯಾನಕವಾಗಿ ತೊರುವ ಗಿರಿಜಾಪತಿಯನ್ನು ಸದಾ ಭಜಿಸು.

ಪಶುಪತೇರಿದಮಷ್ಟಕಮದ್ಭುತಂ ವಿರಚಿತಂ ಪೃಥಿವೀಪತಿಸೂರಿಣಾ |
ಪಠತಿ ಸಂಶ್ರೃಣುತೇ ಮನುಜಃ ಸದಾ ಶಿವಪುರೀಂ ವಸತೇ ಲಭತೇ ಮುದಮ್ ||೯||
9.ಯಾವ ಮಾನವನು ಮಹಾರಾಜ ಸೂರಿ ರಚಿತವಾದ ಈ ಅದ್ಭುತವಾದ ಪಶುಪತಿ ಅಷ್ಟಕವನ್ನು ಪಠಿಸುವನೋ ಅಥವಾ ಕೆಳುವನೋ ಅವನು, ಸದಾ ಶಿವಪುರಿಯಲ್ಲಿ ವಾಸಿಸುವ ಸೌಭಾಗ್ಯವನ್ನು ಹೊಂದುತ್ತಾನೆ.
ಇತಿ ಶ್ರೀಪಶುಪತ್ಯಷ್ಟಕಮ್ ಸಂಪೂರ್ಣಮ್
ಸಂಗ್ರಹ: ವೇ ಚನ್ನೇಶ ಶಾಸ್ತ್ರಿಗಳು

ಮೇ 5, 2020

ಶಿವ ಸಂಕಲ್ಪ ಸೂಕ್ತ. ಶ್ಲೋಕ ೫, ೬



ಶಿವ ಸಂಕಲ್ಪ ಸೂಕ್ತ. ಶ್ಲೋಕ ೫, ೬
ಶ್ಲೋಕ - 5
ಸಂಸ್ಕೃತದಲ್ಲಿ :

ಯಸ್ಮಿನ್ ಋಚಃ ಸಾಮ ಯಜೂಂಷಿ ಯಸ್ಮಿನ್ ಪ್ರತಿಷ್ಠಿತಾ ರಥನಾಭಾವಿವಾರಾಃ |
ಯಸ್ಮಿಂಶ್ಚಿತ್ತಂ ಸರ್ವಮೋತಂ ಪ್ರಜಾನಾಂ ತನ್ಮೇ ಮನಃ ಶಿವಸಂಕಲ್ಪಮಸ್ತು ||5||


ಕನ್ನಡದಲ್ಲಿ :

ರಥಗಾಲಿಯರೆಗಳೊಲು
ವೇದಗಳೇನನಾಶ್ರಯಿಸಿಹವೊ
ಯಾರ ಚಿತ್ತವೆಲ್ಲರ ಬುದ್ಧಿಯನಾಳ್ವುದೋ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಆ ಮನಸ್ಸು ರಥದ ಚಕ್ರದ ಕೇಂದ್ರ ಹಾಗೂ ಅದರ ಕಡ್ಡಿಗಳೆ ಋಗ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು ಮತ್ತು ಚಕ್ರದ ಅಚ್ಚು ಜ್ಞಾನವನ್ನು ಪ್ರತಿನಿಧಿಸುತ್ತದೆ ಹಾಗೂ ಇಂದ್ರಿಯಗಳೆಂಬ ಅಶ್ವಗಳು ರಥವನ್ನು ಈ ರೀತಿಯಾಗಿ ಎಳೆಯುತ್ತಿದೆ. ಆ ನನ್ನ ಮನಸ್ಸು ಸದಾ ಒಳ್ಳೆಯ ಭಾವನೆಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಯಾವ ಮನಸ್ಸಿನಲ್ಲಿ ಋಗ್ವೇದದ ಶ್ಲಾಘನೆಗಳು, ಸಾಮವೇದದ ಸ್ತೋತ್ರ ಮತ್ತು ಕೀರ್ತನೆಗಳು ಮತ್ತು ಯಜುರ್ವೇದ ಧರ್ಮಾಚರಣೆಗೆ ಸಂಬಂಧಿಸಿದ ಗಾಯನಗಳು ಸ್ಥಾಪಿಸಲ್ಪಟ್ಟಿರುವುದೋ --- ಆ ಮನಸ್ಸಿನ ಸ್ವಾಸ್ಥ್ಯ ಮತ್ತು ಆರೋಗ್ಯದೊಂದಿಗೆ ವೇದಗಳ ಮೂರು ಹಂತದ ಜ್ಞಾನವು ಮತ್ತು ಆ ಮನಸ್ಸಿನಲ್ಲಿ ಸಮಸ್ತ ವಿಶ್ವವೂ ಸ್ಥಾಪಿಸಲ್ಪಟ್ಟಿರುವುದು.

ಛಾಂದೋಗ್ಯೋಪನಿಷತ್ತಿನ ಒಂದು ಮಂತ್ರದ ಪ್ರಕಾರ :
"ಓ ! ಶಾಂತಿ ಹಾಗೂ ಪ್ರೀತಿಯ ಮನಸ್ಸು ಆಹಾರದಿಂದಾಗಿದೆ". 6.1-16

ವೇದಮಂತ್ರಗಳನ್ನು ಪಠಿಸುವ ಶಕ್ತಿಯು ಮನಸ್ಸಿನ ಆರೋಗ್ಯ ಮತ್ತು ಸ್ವಸಾಮರ್ಥ್ಯಗಳಿಂದಾಗಿ ಮಾತ್ರವೆಂದು ವಿವರಿಸಲಾಗಿದೆ.
ಅದು ಹೇಗೆ ಸಾಧ್ಯ ? ಈ ಕೆಳಗಿನ ಒಂದು ದೃಷ್ಟಾಂತವನ್ನು ಗಮನಿಸೋಣ :

ರಥದ ಚಕ್ರದ ಮಧ್ಯಬಾಗದಲ್ಲಿ ಕಡ್ಡಿಗಳನ್ನು ಸ್ಥಾಪಿಸಿರುವಂತೆ, ಪದಗಳ ಜಾಲವೂ ಮನಸ್ಸಿನಲ್ಲಿ ಸ್ಥಾಪಿಸಲ್ಪಟ್ಟಿದೆ.
ಮುಂದುವರೆದು, ವಸ್ತ್ರದಲ್ಲಿ ದಾರಗಳ ಸಮೂಹವನ್ನು ಹೆಣೆದು ನೇಯ್ದಿರುವಂತೆ ಎಲ್ಲ ವಿಷಯಗಳು / ವಸ್ತುಗಳ ಬಗೆಗಿನ ನಿಖರವಾದ ಮತ್ತು ಸುಸಂಗತವಾದ ಜೀವಿಗಳ ಅರಿವಿನ ಬಗೆಗಿನ ಸಂಪೂರ್ಣ ಜ್ಞಾನವು ಮನಸ್ಸಿನಲ್ಲಿ ನಿಖರವಾಗಿ ಹೆಣೆದು ಅದರಲ್ಲೇ ಸ್ಥಳಾಂತರಿಸಲಾಗಿದೆ.

ಜ್ಞಾನವು ಅಂತರಂಗದಿಂದ ಉದಯಿಸುವುದು ಮನಸ್ಸಿನ ಸ್ವಾಸ್ಥ್ಯದ ಸ್ಥಿತಿ ಮತ್ತು ಸ್ವಸ್ಥಿರತೆಯ ಮೇಲೆ ಮಾತ್ರ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಬೇಕು; ಆತಂಕ ಮತ್ತು ಗೊಂದಲದಿಂದ ಕೂಡಿದ ಮನಸ್ಸಿನಲ್ಲಿ ಜ್ಞಾನವು ಇರುವುದಿಲ್ಲ.
ಅಂಥಹ ನನ್ನ ಮನಸ್ಸು ಸದಾ ಶಿವ-ಸಂಕಲ್ಪದಲ್ಲಿ, ಶಮನಗೊಳಿಸಿದ ಕ್ರಿಯೆಗಳಲ್ಲಿ ಹಾಗೂ ಎಲ್ಲ ಕಾರ್ಯಾಚರಣೆಗಳೂ ಶಾಂತಿ ಹಾಗೂ ನೆಮ್ಮದಿಯಿಂದಿರುವುದು.

ವ್ಯಾಖ್ಯಾನ - 2 :

ಋಗ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು ಸ್ಥಿರಗೊಳಿಸಿದ ಮನಸ್ಸು ರಥದ ಚಕ್ರದ ಕೇಂದ್ರದಲ್ಲಿನ ಕಡ್ಡಿಗಳಂತೆ ಎಲ್ಲ ದಿಕ್ಕಿನಿಂದಲೂ ಸ್ಥಿರವಾಗಿದೆ,
ಮನಸ್ಸಿನಲ್ಲಿ ಜೀವಿಗಳ ಬಗೆಯ ಅರಿವು ಎಲ್ಲ ವಿಷಯ / ವಸ್ತುಗಳು ಹೇಗೆ ಕಂಠೀಹಾರದ ದಾರದಲ್ಲಿ ಒಡವೆಗಳು ಹೆಣೆದುಕೊಂಡಿರುವುದೋ ಹಾಗೆ ಹೆಣೆದುಕೊಂಡಿರುವುದು
--- ಅಂಥಹ ನನ್ನ ಮನಸ್ಸು , ವೇದಗಳಂಥ ನೈಜ ಗ್ರಂಥಗಳ ಬಗೆಗೆ ವಿವರಿಸುವ ಧೃಢನಿಶ್ಚಯವು ಸದಾ ತುಂಬಿರಲಿ.

ಓ! ಮಾನವ ಜೀವಿಗಳೆ, ನೀವು ಜ್ಞಾನದಿಂದ ಪರಿಶುದ್ಧರಾಗಿ ಮತ್ತು ಧಾರ್ಮಿಕ ವರ್ತನೆಗಳಾದ ಆಂತರಿಕ ಸಾಧನೆಗಳು, ಮನಸ್ಸುಗಳಿಂದ ವರ್ತಿಸುವುದು ಉತ್ತಮವಾದದ್ದು -
--- ಅವುಗಳ ಸ್ವಾಸ್ಥ್ಯ ಮತ್ತು ಸ್ವಸ್ಥಿರತೆ ಮಾತ್ರವೇ ವೇದಗಳ ಬಗ್ಗೆ ಸ್ಥಾಪಿಸಿ ಮತ್ತು ಸದ್ವರ್ತನೆಯ ವಿಧಾನಗಳ ವಿವೇಕವು ಸೇರಿಕೊಂಡು ಜ್ಞಾನಗಳ ವೈಜ್ಞಾನಿಕ ಅಡಿಪಾಯಗಳಿಗೆ ಕಾರಣವು.

ಶ್ಲೋಕ - 6
ಸಂಸ್ಕೃತದಲ್ಲಿ :

ಸುಷಾರಥಿರಶ್ವಾನಿವ ಯನ್ಮನುಷ್ಯಾನೇನೀಯತೇSಭೀಶುಭಿರ್ವಾಜಿನ ಇವ |
ಹೃತ್ಪ್ರತಿಷ್ಠಂ ಯದಜಿರಂ ಜವಿಷ್ಠಂ ತನ್ಮೇ ಮನಃ ಶಿವಸಂಕಲ್ಪಮಸ್ತು ||6||

ಕನ್ನಡದಲ್ಲಿ :

ಮನುಜರನು ರಥಹಯ ನಿಯಂ-
ತ್ರಿಸುವಸಾರಥಿಯೊಲಾರು ನಿಯ -
ಮಿಪರೋ ಸರ್ವವ್ಯಾಪಿಯಹ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಹೇಗೆ ನುರಿತ ಸಾರಥಿಯು ಅಶ್ವಗಳನ್ನು ತನ್ನ ಆದೇಶದಂತೆ ಓಡಿಸಿ ಅವುಗಳು ತಾನೆಲ್ಲಿಗೆ ಹೋಗಬೇಕೋ ಅಲ್ಲಿಗೇ ಅವುಗಳನ್ನೂ ಕೊಂಡೊಯ್ಯುವಂತೆ ಮನಸ್ಸೂ ಕೂಡಾ ಮನುಷ್ಯನನ್ನು ಅವನ ಆಸೆಗಳೆಡೆಗೆ ಮತ್ತು ಪಶು ಪ್ರವೃತ್ತಿಗಳನ್ನು ನಿರ್ಬಂಧಿಸುವುದರೆಡೆಗೆ ಮಾರ್ಗದರ್ಶನ ಮಾಡಿ ಅದು ಹೃದಯದಲ್ಲಿ ನೆಲೆಸಿ ಅವನ ಅಮರತ್ವ ಮತ್ತು ಪ್ರಕ್ಷುಬ್ದತೆಗಳಿಂದ ಬಿಡುಗಡೆ ಹೊಂದಿದಂಥಹ ನನ್ನ ಮನಸ್ಸು ಸದಾ ಒಳ್ಳೆಯ ಭಾವನೆಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಕೇವಲ ಮನಸ್ಸೇ ಮನುಷ್ಯನನ್ನು (ವ್ಯಾಖ್ಯಾನಕಾರರ ಪ್ರಕಾರ ಮನುಷ್ಯ ಎಂಬುದು ಮೂಲದಲ್ಲಿ ಎಲ್ಲ ಜೀವಿಗಳನ್ನೂ ಒಳಗೊಂಡ ಕೇವಲ ಒಂದು ಸಾಮಾನ್ಯ ಪದ ಮಾತ್ರ ) ಇಲ್ಲಿಂದ ಅಲ್ಲಿಗೆ ಮಿತಿಮೀರಿ ಮನಸ್ಸಿನ ಪ್ರೇರೇಪಣೆಯಂತೆ ನಡೆಸುತ್ತದೆ.
ಅದು ಹೇಗೆ ? ಇಲ್ಲಿದೆ ಒಂದು ಉದಾಹರಣೆ : ನುರಿತ ಸಾರಥಿಯು ಅಶ್ವಗಳನ್ನು ಚಾವಟಿಯ ಮೂಲಕ ನಡೆಸುತ್ತಾನೆ.
ಎರಡನೇ ಉದಾಹರಣೆ : ನುರಿತ ಸಾರಥಿಯು ಅಶ್ವಗಳನ್ನು ಹತೋಟಿಯಲ್ಲಿಟ್ಟುಕೊಂಡು ಲಗಾಮಿನ ಸಹಾಯದಿಂದ ನಡೆಸುವನು.
ಇಲ್ಲಿ ಎರಡು ಉದಾಹರಣೆಗಳಿವೆ. ಮೊದಲನೇ ಉದಾಹರಣೆಯಲ್ಲಿ "ನಡೆಸುವುದು" ಮತ್ತು ಎರಡನೆಯದರಲ್ಲಿ " ಹತೋಟಿಯಲ್ಲಿಟ್ಟುಕೊಳ್ಳುವುದು". ಹೇಗೆ ಸಾರಥಿಯು ಅಶ್ವಗಳನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವನೋ ಅದೇ ರೀತಿ ಮನಸ್ಸು ಕೂಡಾ ಜೀವಿಯನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವುದು.
ಈ ವಿಧದಲ್ಲಿ ವಾಸಿಸಿರುವ ಮನಸ್ಸು, ಹೃದಯದಲ್ಲಿ ಸ್ಥಾಪಿಸಿದೆ. ಏಕೆಂದರೆ ಇದು ಹೃದಯದಲ್ಲಿ ಮಾತ್ರ ಕಂಡುಬರುವುದು ಮತ್ತು ಅರಿವಾಗುವುದು. ( ಇದು ಯೋಗಿಗಳು ವಿಷೇಶವಾದ ಧ್ಯಾನ ಮಾರ್ಗದ ಮೂಲಕ ಮನಸ್ಸನ್ನು ಅರಿತುಕೊಳ್ಳುವರು).
ಈ ಮನಸ್ಸು ಬಾಲ್ಯ, ಯೌವನ ಮತ್ತು ವಾರ್ಧಕ್ಯದ ಸ್ಥಿತಿಗಳಲ್ಲಿಯೂ ಸಹ ಮಾರ್ಪಾಡಾಗದೇ ಇರುವುದರಿಂದ ಅದು ಮುಪ್ಪಾಗದು.
ಈ ಕೆಳಗೆ ವಿವರಿಸಿರುವ ಉಲ್ಲೇಖದಂತೆ ಇದು ಅತ್ಯಂತ ವೇಗದ ಶಕ್ತಿ : -
" ಗಾಳಿಗಿಂತ ತ್ವರಿತವಾದದ್ದು ಬೇರೊಂದಿಲ್ಲ; ಮನಸ್ಸಿಗಿಂತ ವೇಗವಾದದ್ದು ಮತ್ತೊಂದಿಲ್ಲ".

ಆ ವಿಧದ ಸುಂದರವಾದ ಮತ್ತು ದೈವೀ ನಿರ್ಣಯದ ಮನಸ್ಸು ಸದಾ ಶಿವನ ವಿಚಾರಗಳಿಂದ ತುಂಬಿರಲಿ.

ವ್ಯಾಖ್ಯಾನ - 2 :

ಹೇಗೆ ನುರಿತ ಮತ್ತು ಚುರುಕಾದ ಸಾರಥಿಯು ಕಡಿವಾಣದ ಸಹಾಯದಿಂದ ಕುದುರೆಗಳನ್ನು ಎಲ್ಲ ದಿಕ್ಕುಗಳೆಡೆಗೂ ಓಡಿಸುವನೋ ಅದೇ ರೀತಿ ಮನಸ್ಸೂ ಸಹ ಜೀವಿಗಳಾದ ಮನುಷ್ಯರನ್ನು ವೇಗವಾಗಿ ಎಲ್ಲ ದಿಕ್ಕುಗಳೆಡೆಗೂ ಓಡಿಸುವುದು.
ಹೇಗೆ ಸಾರಥಿಯು ವೇಗವಾಗಿ ಚಲಿಸುತ್ತಿರುವ ಕುದುರೆಗಳನ್ನು ಲಗಾಮಿನ ಸಹಾಯದಿಂದ ಹತೋಟಿಯಲ್ಲಿಟ್ಟುಕೊಂಡು ಅವುಗಳನ್ನು ಹತೋಟಿಯಲ್ಲಿಡುವನೋ ಅದೇ ರೀತಿ ಮನಸ್ಸೂ ಸಹ.
ಈ ಮನಸ್ಸು ಹೃದಯದಲ್ಲಿ ಸ್ಥಾಪಿಸಲ್ಪಟ್ಟು, ವಿಷಯಗಳೆಡೆಗೆ / ಗುರಿಗಳೆಡೆಗೆ ವಯಸ್ಸಾದ ಪ್ರಕ್ರಿಯೆಯಂತೆ ಮತ್ತು ಇದು ವೇಗವಾದಂತೆ ಯಾವುದೇ ಶರತ್ತುಗಳಿಲ್ಲದೇ ಪ್ರಚೋದಿಸುವುದು.
ಅಂಥಹ ನನ್ನ ಮನಸ್ಸು ಮಂಗಳಕರಕ್ಕೆ ಸಮಾನವಾದ ಸಂಯಮದಲ್ಲಿ ಒಲವನ್ನು ಕಂಡುಕೊಳ್ಳಲಿ. ಈ ಶ್ಲೋಕದಲ್ಲಿ ಎರಡು ಉಪಮೆಗಳಿವೆ.
ಮನಸ್ಸು ಗತ್ಯಂತರವಿಲ್ಲದೆ ಮನುಷ್ಯನನ್ನು, ಹೇಗೆ ಸಾರಥಿಯು ಕುದುರೆಗಳನ್ನು ಕಡಿವಾಣದ ಸಹಾಯದೊಂದಿಗೆ ಕರೆದೊಯ್ಯುತ್ತಾನೋ, ಹಾಗೆ ಅವನ ಆಸಕ್ತಿಯ ವಿಷಯಗಳೆಡೆಗೆ ಮತ್ತು ಚಟಗಳೆಡೆಗೆ ಮಾರ್ಗದರ್ಶನ ಮಾಡುವುದು. ಮೂರ್ಖರು ಈ ವಿಧದ ಮನಸ್ಸನ್ನು ಅನುಸರಿಸುವರು ಆದರೆ ಬುದ್ಧಿವಂತರು ಅದನ್ನು ತಮ್ಮ ಹತೋಟಿಯಲ್ಲಿಟ್ಟು ಕೊಳ್ಳುವರು.

ಈ ಮನಸ್ಸು -
--- ಪರಿಶುದ್ಧವಾಗಿದ್ದಾಗ ಸುಖ ಹಾಗೂ ಸಂತೋಷಕ್ಕೆ ಕಾರಣವಾಗುತ್ತದೆ ಮತ್ತು ಮಲಿನವಾದಾಗ ದುಃಖಕ್ಕೆ ಕಾರಣವಾಗುವುದು, ಮತ್ತು
--- ಈ ಮನಸ್ಸನ್ನು ಗೆದ್ದಾಗ, ಅದು ಸಾಧನೆ ಮತ್ತು ಸಿದ್ಧಿಗಳನ್ನು ನೀಡುತ್ತದೆ; ಗೆಲ್ಲಲಾಗದಿದ್ದಾಗ ಇದು ವೈಫಲ್ಯಗಳನ್ನು ಉಂಟುಮಾಡುತ್ತದೆ.
ಈ ವಿಧದ ವರ್ತನೆಗಳು ಮನುಷ್ಯನನ್ನು ತನ್ನೆಡೆಗೆ ಸೆಳೆದು ಮತ್ತು ಈ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು.

ಲೇಖನದ ಮೂಲ:
ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ
ಸಂಗ್ರಹ : ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ

ಮೇ 3, 2020

ಶಿವ ಸಂಕಲ್ಪ ಸೂಕ್ತ ಶ್ಲೋಕ ೨.

Mrutyunjaya
ಶಿವ ಸಂಕಲ್ಪ ಸೂಕ್ತ ಶ್ಲೋಕ  ೨.
( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮುಂದುವರೆದು.......

ಶ್ಲೋಕ  - 2 - ಸಂಸ್ಕೃತದಲ್ಲಿ

ಯೇನ ಕರ್ಮಾನ್ಯಪಸೋ ಮನೀಷಿಣೋ
ಯಜ್ಞೇ ಕೃಣ್ವಂತಿ ವಿದತೇಷು ಧೀರಾಃ
ಯದಪೂರ್ವಂ ಯಕ್ಷ್ಮಂತಃ ಪ್ರಜಾನಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು

ಕನ್ನಡದಲ್ಲಿ :

ಯಜ್ಞಯಾಗಾದಿಗಳ ಹವಿ
ಪಂಡಿತರಿಂದಾರ್ಗೆ ಸಲುವುದೊ
ಸರ್ವಜೀವರಲಂತರ್ಯಾಮಿಯಹುದೇನೋ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಇಂದ್ರಿಯಗಳು ಸ್ಥಿರವಾಗಿ ಮತ್ತು ವಿವೇಕವುಳ್ಳ ಹಾಗೂ ಯಜ್ಞ ಕಾರ್ಯಗಳಲ್ಲಿ  ಮತ್ತು ಶಾಸ್ತ್ರಗಳಲ್ಲಿ ವಿವರಿಸಲ್ಪಟ್ಟ ಇತರ ಕರ್ಮಗಳಲ್ಲಿ ನಿಪುಣ ಮತ್ತು ಶ್ರದ್ಧೆಯುಳ್ಳ  ಮತ್ತು ಪೂಜಿಸಲ್ಪಟ್ಟ ಹಾಗೂ ಬಹು ಮುಖ್ಯವಾದ  ಜ್ಞಾನ ಮಾರ್ಗದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು (ಕರ್ಮನಿಷ್ಠ - ಕರ್ಮದಲ್ಲೆ ಸದಾ ಮುಳುಗಿರುವ ) ನನ್ನ ಮನಸ್ಸಿನಲ್ಲಿ ಸದಾ ಸದ್ಭಾವನೆಗಳೇ ತುಂಬಿರಲಿ.

ವ್ಯಾಖ್ಯಾನ :

ಮನಸ್ಸು ಆರೋಗ್ಯವಾಗಿ ಮತ್ತು ಸ್ವಯಂ-ಸ್ಥಿರತೆಯಿಂದಿಲ್ಲವಾದಲ್ಲಿ ( ಸ್ವ-ಸ್ಥ, - ಆರೋಗ್ಯಕ್ಕೆ ಸಾಮಾನ್ಯವಾಗಿ ಉಪಯೋಗಿಸುವ ಪದವು ಸ್ವ-ಸ್ಥಿರವಾದ, ಕ್ರಿಯಾವಂತನಲ್ಲಿ ನೆಲೆಸಿರುವ ನೈಜ ಸ್ವಭಾವ ) ಯಾವ ಕ್ರಿಯೆಗಳೂ ಸಮಗ್ರವಾಗಿರುವುದಿಲ್ಲ ಇಲ್ಲವೇ ಸರಿಯಾದ ಕ್ರಿಯೆಗಳಾಗಿರುವುದಿಲ್ಲ. ದಿವ್ಯ ಮತ್ತು ಪವಿತ್ರ ಕ್ರಿಯೆಗಳನ್ನು ಮನಸ್ಸಿಲ್ಲದೇ ಮಾಡಲಾಗುವುದಿಲ್ಲ, ಮತ್ತು ಈ ಕ್ರಿಯೆಗಳನ್ನು ಜ್ಞಾನವು ಮೊದಲೇ ಉದಯಿಸದೇ ಮಾಡಲಾಗುವುದಿಲ್ಲ.
ಈ ಮನಸ್ಸು ವಿಶಿಷ್ಟವಾದದ್ದು. ಇದು ಇಂದ್ರಿಯಗಳಿಗಿಂತ ಮುಂಚಿತವಾಗಿ ಹಿಂದೆಂದೂ ಕಂಡಿಲ್ಲದ್ದು. ಮನಸ್ಸನ್ನು ಆತ್ಮದರಿವಿನೊಡನೆ ಗುರುತಿಸಬಹುದಾದ್ದರಿಂದ ಇದು ಬಾಹ್ಯವಲ್ಲದ್ದು.
ಕೇವಲ ಈ ಮನಸ್ಸು ಮಾತ್ರ ಸಂಸ್ಕಾರ ಹಾಗೂ ಪವಿತ್ರವಾದದ್ದು. ಇದು ಎಲ್ಲ ಜೀವಿಗಳ ಶರೀರದೊಳಗೂ ನೆಲೆಸಿರುತ್ತದೆ. ಇಂದ್ರಿಯಗಳು ಮಾತ್ರ ಬಾಹ್ಯದಲ್ಲಿ ನೆಲೆಸಿರುವುದು; ಮನಸ್ಸು ಮಾತ್ರವೇ ಅಂತರಂಗದ ಇಂದ್ರಿಯವು.
ಆ ನನ್ನ ಸುಂದರ ಮತ್ತು ದೈವೀ ಮನಸ್ಸು ಸದಾ ಶಿವ-ಸಂಕಲ್ಪದ ಯೋಚನೆಗಳಲ್ಲೇ ತುಂಬಿರಲಿ.

ವ್ಯಾಖ್ಯಾನ - 2

ಸದಾ ಭಗವಂತನ ಮತ್ತು ಸತ್ಪುರುಷರ ಸನ್ನಿದಿಯಲ್ಲೇ ಇರುವುದರಿಂದಾಗಿ, ಯಾರು ಸದಾ ಕರ್ಮನಿರತರಾಗಿರುವ ಇಂಗಿತವುಳ್ಳವರೋ ಅವರ ಮನಸ್ಸು ಹತೋಟಿಯಲ್ಲಿರುವುದು.
ಅವರು ಪ್ರಜ್ಞಾವಂತ ಸಂಪನ್ನ ಧ್ಯಾನಿಗಳು, ಆಜ್ಞಾಪಿಸಿದ ಕ್ರಿಯೆಗಳಾದ ಅಗ್ನಿ ಸಂಸ್ಕಾರ, ಇತರೆ ಧಾರ್ಮಿಕ ಕ್ರಿಯೆಗಳನ್ನು ಮಾಡುತ್ತಾ ಅನುಭವ ಜನ್ಯ ಜ್ಞಾನವನ್ನು ಅನ್ವೇಷಿಸುತ್ತಾ ಅಥವಾ ಯುದ್ಧ ಭೂಮಿಯಲ್ಲಿರುವರು.
ಇಂಥಹ ಕ್ರಿಯೆಗಳಲ್ಲಿ ತೊಡಗಿರುವಾಗ ಮನಸ್ಸು ವಿಶಿಷ್ಟವಾಗಿರುವುದು, ಹಾಗೂ ಅತ್ಯುನ್ನತ ಲಕ್ಷಣಗಳು ಮತ್ತು ಕ್ರಿಯೆಗಳಿಂದ ಆವೃತವಾಗಿರುವುದು. ಇದು ಗೌರವಾತ್ಮಕವಾದದ್ದು, ಎಲ್ಲ ಜೀವಿಗಳ ಹೃದಯದಲ್ಲೂ ಒಗ್ಗೂಡಿರುವುದು. ಚಿಂತನೆಗಳಿಂದ ಕೂಡಿದ ಪ್ರಕ್ರಿಯೆಯೆಂಬುದಾಗಿ ಗುರುತಿಸಲ್ಪಟ್ಟ ನನ್ನ ಮನಸ್ಸು ಸದಾ ಶಿವ-ಸಂಕಲ್ಪದಲ್ಲಿ, ಹಾಗೂ ಸದಾ ಧರ್ಮ ಮಾರ್ಗದೆಡೆಗೆ ಒಲವುಳ್ಳದ್ದಾಗಿರಲಿ.
ಮನುಷ್ಯನಿಗೆ ಈ ವರ್ತನೆಗಳು ವಾಸ್ತವಿಕ ಪೂಜೆಗಳ ( ಉಪಾಸನವು ಅತ್ಯುನ್ನತವಾದದ್ದು ಹಾಗೂ  - (i) ಸ್ತುತಿ, ಸ್ತೋತ್ರಗೀತೆ ಅಥವಾ ಪ್ರಶಂಸೆ, (ii) ಪ್ರಾರ್ಥನೆ ಮತ್ತು (iii) ಉಪಾಸನ - ಇಲ್ಲಿ ಇದನ್ನು ವಾಸ್ತವಿಕ ಪೂಜೆಯೆಂದು ಪರಿಗಣಿಸಲಾದ ಮೂರು ಹಂತದ ಪೂಜೆಗಳ ಪೈಕಿ ಆಳವಾದದ್ದು. ಇದರ ಅಕ್ಷರಷಃ ಅರ್ಥವೆಂದರೆ ಭಕ್ತನು ಪ್ರಜ್ಞಾವಂತ ಸ್ಥಿತಿಯಲ್ಲಿ ದೈವದ ಸಮೀಪದಲ್ಲೇ ಕುಳಿತು ಆ ದೈವದ ಇರವಿನ ನೇರ ಅನುಭವವನ್ನು ಹೊಂದುತ್ತಾ, ಆ ದೈವವೇ ತಾನಾಗಿರುವ ಸಾಕ್ಷಾತ್ಕಾರವನ್ನು ಅನುಭವಿಸುವನು ) ಮೂಲಕ, ಸುಂದರವಾದ ಯೋಚನೆಗಳು ಮತ್ತು ಸತ್ಪುರುಷರ ಸಹವಾಸದಿಂದ ತಮ್ಮ ಮನಸ್ಸನ್ನು ಧಾರ್ಮಿಕವಲ್ಲದ ನಡೆಗಳಿಂದ ಧಾರ್ಮಿಕ ನಡಾವಳಿಕೆಗಳೆಡೆಗೆ ಬದಲಾಯಿಸಲು ಸಹಕಾರಿಯಾಗುವುದು.
ಮುಂದುವರೆಯುವದು........

ಲೇಖನದ ಮೂಲಗಳು :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ.

ಮೇ 1, 2020

ಶಿವ ಸಂಕಲ್ಪ ಸೂಕ್ತ ೧

ಶಿವ ಸಂಕಲ್ಪ ಸೂಕ್ತ 1 ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)



ಪ್ರಸ್ತಾವನೆ :

ಈ ಸೂಕ್ತವು ಒಂದು ದೈವೀ ಗೀತೆ. ಶಿವ ಸಂಕಲ್ಪವೆಂದರೆ (&) - ಸರಿಯಾದ ಉದ್ದೇಶ ಅಥವಾ ಪವಿತ್ರ ನಿರ್ಧಾರವನ್ನು ಹೊಂದುವುದು. ಶಿವ ಸಂಕಲ್ಪಸೂಕ್ತವನ್ನು ವೇದಕಾಲದ ಮಹರ್ಷಿಗಳು ವೇದದಲ್ಲಿ ಸ್ತುತಿಸಿದ್ದಾರೆ. ಇದು ಕೇವಲ ಮನಸ್ಸಿನ ದೈವೀ ಶಕ್ತಿಗೆ ಮಾತ್ರ ಸಂಬಂಧಿಸಿದುದು. ಶಿವ ಸಂಕಲ್ಪ ಸೂಕ್ತವು " ದೈವೀ ಶಕ್ತಿಯಿಂದ ಪರಿಪೂರ್ಣವಾಗಿರುವ ಮನಸ್ಸಿಗೆ ಸಂಬಂಧಿಸಿದ ಸ್ತುತಿ ಮತ್ತು ಅದರ ಉಪಕೃತನು" ಎಂಬುದು ಸರ್ವವಿದಿತ. ಯಜುರ್ವೇದದ ಕಣ್ವ ಪರಿಷ್ಕರಣೆಯಲ್ಲಿನ 33 ನೇ ಅಧ್ಯಾಯದಲ್ಲಿ ಮೊದಲನೇ ಶ್ಲೋಕ ಮಾತ್ರ ಇರುವುದು. ಶಿವ ಸಂಕಲ್ಪ ಸೂಕ್ತದ ಉಳಿದ ಆರು ಶ್ಲೋಕಗಳು ಶುಕ್ಲ ಯಜುರ್ವೇದದ ವಾಜಸನೇಯಿ ಸಂಹಿತೆಯ 34 ನೇ ಅಧ್ಯಾಯದಲ್ಲಿನ ಭಾಗವಾಗಿದೆ. ಇವುಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪ್ರಸಿದ್ದ ಸೂಕ್ತ.  ಇದಲ್ಲದೇ ಸಾಮಾನ್ಯವಾಗಿ ಯಾರಿಗೂ ತಿಳಿಯದೇ ಇರುವ ಸಂಗತಿಯೆಂದರೆ ಋಗ್ವೇದದ ಖಿಲ ಸೂಕ್ತದ 33 ನೇ ಅಧ್ಯಾಯದಲ್ಲಿ ಶಿವ ಸಂಕಲ್ಪ ಸೂಕ್ತದ 26 ಮಂತ್ರಗಳೂ ಇರುವುದು. ಪ್ರಸ್ತುತ ಶಿವ ಸಂಕಲ್ಪ ಸೂಕ್ತದ ಆರು ಶ್ಲೋಕಗಳಿಗೆ ಮಹಾನ್ ಆಚಾರ್ಯರುಗಳಾದ ಸಾಯಣರು, ಉವ್ವತರು, ಮಹೀಧರರು ಹಾಗೂ ಸ್ವಾಮಿ ದಯಾನಂದ ಸರಸ್ವತಿಗಳು ವ್ಯಾಖ್ಯಾನಗಳನ್ನು ರಚಿಸಿದ್ದಾರೆ.

ಈ ಆರು ಶಿವ ಸಂಕಲ್ಪ ಮಂತ್ರಗಳು ರುದ್ರಾಷ್ಟಾಧ್ಯಾಯಿಯ ಮೊದಲನೇ ಅಧ್ಯಾಯದಲ್ಲೂ ವಿವರಿಸಲಾಗಿದೆ. ಈ ಶಿವ ಸಂಕಲ್ಪ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಬಹುದು. ಇದರ ಮೂಲಕ ಮನಸ್ಸಿನ ಉಪಪ್ರಜ್ಞೆಯನ್ನು ( ಚಿತ್ತ ) ಮತ್ತು ಯೋಚನೆಯ ಸಹಜ ಶಕ್ತಿಯನ್ನೂ ಸಹ ಹತೋಟಿಯಲ್ಲಿಟ್ಟುಕೊಳ್ಳುವ ವಿಧಾನ.

ಈ ಕೆಳಗೆ ವಿವರಿಸಿರುವ ಶ್ಲೋಕಗಳಿಗೆ ವಿವರ / ವ್ಯಾಖ್ಯಾನಗಳು ಸಮಗ್ರವಾದದ್ದಲ್ಲ ಬದಲಿಗೆ ಕೇವಲ ವಿವರಣಾತ್ಮಕವಾದದ್ದು ಮಾತ್ರ. ಇದರ ನೈಜ ಅಂತರಾರ್ಥವು ಆಳವಾಗಿ ಧ್ಯಾನದ ಮೂಲಕ ಅವಲೋಕಿಸುವ ಮುನಿಗಳಿಗೆ ಮಾತ್ರ ವೇದ್ಯವಾಗುವುದು. ಧ್ಯಾನ ಕ್ರಿಯೆಯು ತನ್ನ ಅನೇಕ ಹಂತಗಳು ಹಾಗೂ ಸ್ಥಿತಿಗಳ ಮೂಲಕ ಮುಂದುವರೆಯುತ್ತಿದ್ದಂತೆ ಈ ಶ್ಲೋಕಗಳ ಅಂತರಾರ್ಥಗಳು ಅನಾವರಣಗೊಳ್ಳುತ್ತವೆ.

ಯಾವುದೇ ಮಂತ್ರಗಳನ್ನು ಅದಕ್ಕೆ ಸಂಬಂಧಿಸಿದ ಋಷಿ ಮುನಿಗಳನ್ನು ಕಾಲಜ್ಞಾನಿಗಳನ್ನು ಮತ್ತು ಅದರ ದೈವವನ್ನು ಹಾಗೂ ದೈವೀ ಜಾಗ್ರತ ಶಕ್ತಿಗಳನ್ನು ಭಕ್ತಿಪೂರ್ವಕವಾಗಿ ನೆನಸಿಕೊಳ್ಳದೇ ಪಠಿಸಲಾಗುವುದಿಲ್ಲ.  ಅನೇಕ ಸಂದರ್ಭಗಳಲ್ಲಿ ಕೃತಿಯನ್ನು  ರಚಿಸಿದ ನೈಜ ಮುನಿಗಳನ್ನು ಗುರುತಿಸಲಾಗದೇ ಇರಬಹುದು ಏಕೆಂದರೆ ಅವರುಗಳು ತಮ್ಮ ಕೃತಿಯಲ್ಲಿ ಬರುವ ವಿಷಯಗಳನ್ನೇ ಗಣನೆಗೆ ತೆಗೆದುಕೊಂಡಿರುತ್ತಾರೆ. ಹಾಗಾಗಿ ಯಜುರ್ವೇದದ 34ನೇ ಅಧ್ಯಾಯದಲ್ಲಿನ ಶಿವ ಸಂಕಲ್ಪದ ಮೊದಲ ಆರು ಶ್ಲೋಕಗಳನ್ನು ಶಿವ-ಸಂಕಲ್ಪವೆಂದೇ ಹೆಸರಿಸಿ ಅದರ ದೈವವನ್ನು ಮನಸ್ಸೆಂದು ಪರಿಗಣಿಸಲಾಗಿದೆ. ಋಗ್ವೇದದ ಖಿಲ-ಸೂಕ್ತಗಳಲ್ಲಿ ಬರುವ 20 ಶ್ಲೋಕಗಳ ಕರ್ತೃವು ಯಾರೆಂದು ತಿಳಿಯದು.

      ಶಿವ ಸಂಕಲ್ಪ ಸೂಕ್ತ - ವೇದಗಳಲ್ಲಿ ಬರುವ ಶ್ಲೋಕಗಳನ್ನು ಅದರಲ್ಲಿ ಎಷ್ಟು ಮಂತ್ರಗಳಿದ್ದರೂ - ಕೀರ್ತನೆಗಳಲ್ಲಿನ ಚರಣಗಳಂತೆ ಪರಿಗಣಿಸಲಾಗುವುದು. ವೇದಕಾಲಾನಂತರದ ಸ್ತುತಿಪಾಠಗಳಿಗೆ ಸೂಕ್ತ ಎಂಬ ಪದವನ್ನು ಉಪಯೋಗಿಸುವುದಿಲ್ಲ, ಬದಲಾಗಿ ಅವುಗಳನ್ನು ಸ್ತೋತ್ರವೆನ್ನಲಾಗುವುದು. ಮತ್ತೊಂದು ವಿವರಣೆಯೆಂದರೆ ಮಂತ್ರ ರೂಪಿ ಪದ್ಯಗಳನ್ನು ಸೂಕ್ತವೆಂದೂ ನಾಮರೂಪೀ ಪದಗಳಿಂದ ದೈವವನ್ನು ಹೊಗಳುವ / ಸ್ತುತಿಸುವುದಕ್ಕೆ ಸ್ತೋತ್ರಗಳೆಂದೂ ವರ್ಗೀಕರಿಸಬಹುದೆಂಬುದಾಗಿ.

ಶ್ಲೋಕ - 1 - ಸಂಸ್ಕೃತದಲ್ಲಿ

ಯಜ್ಜಾಗ್ರತೋ ದೂರಮುದೈತಿ
ದೈವಂ ತದು ಸುಪ್ತಸ್ಯ ತಥೈವೈತಿ
ದೂರಾಂಗಮಂ ಜ್ಯೋತಿಷಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಂಕಲ್ಪಮಸ್ತು

ಕನ್ನಡದಲ್ಲಿ :

ಎಚ್ಚರದಿ ದೂರ ತನಿನಿದ್ದೆಯಲಿ
ಬಳಿಯಿದ್ದು ಬುದ್ಧಿಮನ ಬೆಳಗುವ
ಜ್ಯೋತಿಗಳೊಂದೆ ಮೂಲ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಎಚ್ಚರ ಸ್ಥಿತಿಯಲ್ಲಿರುವ ಆ ಮನಸ್ಸು ಇಂದ್ರಿಯಗಳ ಮೂಲಕ ಈ ಪ್ರಪಂಚದೊಳಗೆ (1) ಸಂಚರಿಸುತ್ತದೆ, ಮತ್ತು ಅದು ಸ್ವಪ್ನಾವಸ್ಥೆಯಲ್ಲಿ ಅನೇಕ ಪ್ರಪಂಚಗಳಲ್ಲಿ (2) ಸಂಚರಿಸುವುದು ಹಾಗೂ ದೀರ್ಘ ನಿದ್ರಾವಸ್ಥೆಯಲ್ಲಿ ಅದು ತನ್ನ ಸ್ವಸ್ಥಾನಕ್ಕೆ ಮರಳುವುದು (3), ಅಲ್ಲಿಯವರೆಗೂ ಸಂಚರಿಸುವ, ಜ್ಞಾನಜ್ಯೋತಿಯು (4) ನನ್ನ ಮನಸ್ಸೇ, ನಿನಗೆ ಸದಾ ಒಳ್ಳೆಯ ಉದ್ದೇಶವಿರಲಿ (5).
(1) = ಕಣ್ಣುಗಳು ಹಾಗೂ ಕಿವಿಗಳು ಮಾಹಿತಿಯನ್ನು ನಮೂದಿಸಿದರೂ ಕೇವಲ ಮನಸ್ಸು ಮಾತ್ರ ಇವುಗಳಿಗೆ ಅರ್ಥವನ್ನು ನೀಡುತ್ತದೆ.
(2) = ಈ ಪ್ರಪಂಚದಲ್ಲಿ ಎಷ್ಟರ ಮಟ್ಟಿಗೆ ಅಪೂರ್ವವಾದ ಹಾಗೂ ಸುಂದರವಾದ ವಿಷಯಗಳಿರುವುದೋ ಅದಕ್ಕಿಂತ ಸಾವಿರ ಪಟ್ಟು ಕಲ್ಪನೆಯಲ್ಲಿ ಬರಬಹುದು.
(3) = ದೀರ್ಘ ನಿದ್ರೆಯಲ್ಲಿ ಇಂದ್ರಿಯಗಳು ಮನಸಿನೊಳಗೆ ಹಿಂತೆಗೆದುಕೊಳ್ಳುವುದು, ಮತ್ತು ಮನಸ್ಸು ಆತ್ಮನಲ್ಲಿ ಸರಿಯುವುದು ಆಗ ಪರಮಾನಂದ ಮತ್ತು ಬ್ರಹ್ಮನ ಪ್ರಶಾಂತತೆಯನ್ನು ಸ್ವಲ್ಪಮಟ್ಟಿಗೆ ಅನುಭವಿಸಬಹುದು. ಆದರೆ ಉಳಿದವೆರಡು ಸ್ಥಿತಿಗಳಂತೆ ಈ ಪ್ರಶಾಂತತೆಯು ಕ್ಷಣಿಕವಾದದ್ದು ಮತ್ತು ಅಸ್ಥಿರವಾದದ್ದು ಹಾಗಾಗಿ ಈ ಅನುಭವವು ನೈಜಬ್ರಹ್ಮ ಜ್ಞಾನಕ್ಕೆ ತೀರ ಸಾಧಾರಣ ಬದಲಿ ಸ್ಥಿತಿ.
(4) = ಮನಸ್ಸು ಒಂದು ರೀತಿಯ ಬೆಳಕು ಹಾಗೂ ಅದು ಅಜ್ಞಾನದ ಕತ್ತಲನ್ನು ಜ್ಞಾನದ ಮೂಲಕ ಪ್ರಕಾಶಿಸುತ್ತದೆ.
(5) = ಶಿವಸಂಕಲ್ಪ. ಅಲೆದಾಡುವ ಮನಸ್ಸು ಎಲ್ಲ ದುಃಖಗಳಿಗೂ ಕಾರಣ, ಆದರೆ ಅದನ್ನು ಸರಿಯಾದ ಗುರಿಯೆಡೆಗೆ ತಿರುಗಿಸಿದಾಗ ಅದು ಬಂಧನದಿಂದ ಬಿಡುಗಡೆ ಹೊಂದಲು ಕಾರಣವಾಗುವುದು.

ವ್ಯಾಖ್ಯಾನ - 1.

ನಾನು ಆತ್ಮ ಅಂದರೆ ಜ್ಞಾನ.  ನಾನು ಪುರುಷ, ಶರೀರ ಮತ್ತು ಪ್ರಕೃತಿಯಲ್ಲಿ ನೆಲೆಸಿರುವವನು.
ನನಗೆ ಮನಸ್ಸು ಎಂಬುದೊಂದಿದೆ.
ಈ ನನ್ನ ಮನಸ್ಸು ಸೂರ್ಯನಂತೆ ಉದಯಿಸುತ್ತದೆ. ಅದು ನನ್ನ ಇಂದ್ರಿಯಗಳನ್ನು ಮೀರಿ ಅವುಗಳಿಂದ ಬಹು ದೂರ ಪಯಣಿಸುತ್ತದೆ. ನನ್ನ ಎಚ್ಚರ ಸ್ಥಿತಿಯಲ್ಲಿ ಅದು ಸಂಚರಿಸುತ್ತಾ ಇಂದ್ರಿಯಗಳೊಂದಿಗಿನ ಸಂಪರ್ಕದಿಂದ ಬಹುದೂರದ ವಸ್ತುಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.
ಹಾಗೆಯೇ ನನ್ನ ಮನಸ್ಸು ಮರೆಮಾಡಲ್ಪಟ್ಟ, ಭೂತ, ಭವಿಷ್ಯದ, ಹಾಗೂ ವರ್ತಮಾನಗಳ, ತೀರ ಹತ್ತಿರದ, ಅಥವಾ ಅತಿ ದೂರದ, ವಸ್ತುಗಳ ಬಳಿಗೆ ತನ್ನ ಪರಿಧಿಯಲ್ಲೇ ಇರುವಂತೆ ತಲುಪುವುದು.

ಅದೇರೀತಿ ಕನಸು ಕಾಣುತ್ತಿರುವವನ ಮನಸ್ಸು ಕೂಡಾ. ಅದು ದೂರದ ವಸ್ತುಗಳು, ವಸ್ತುಗಳು ಚಿನ್ಹೆಯ ರೂಪ ಮತ್ತು ಮುದ್ರಣಗಳ ರೂಪದಲ್ಲಿ ಅಡಗಿರುವ ವಾಸನಾಮಯ ಪದಾರ್ಥಗಳೆಡೆಗೆ ಪಯಣಿಸುವುದು.
ಹೇಗೆ ಮನಸ್ಸು ನಿದ್ರಾಸ್ಥಿತಿ ಹಾಗೂ ಕನಸಿನ ಸ್ಥಿತಿಯಲ್ಲಿ ಯಾವುದೇ ಮಾರ್ಗದಲ್ಲಿ ಪದಾರ್ಥಗಳೆಡೆಗೆ ಪಯಣಿಸುವುದೋ, ಎಚ್ಚರದ ಸ್ಥಿತಿಗೆ ಬರುವಷ್ಟರಲ್ಲಿ ಅದೇ ಮಾರ್ಗದಲ್ಲಿ ಎಚ್ಚರದ ಸ್ಥಿತಿಯಲ್ಲಿ ಮನಸ್ಸು ಎಲ್ಲಿತ್ತೋ ಅಲ್ಲಿಗೇ ಮರಳುವುದು.
ನಿದ್ರಾ ಸ್ಥಿತಿಯಲ್ಲಿರುವವನ ಮನಸ್ಸು ಸಾಮಾನ್ಯ ಸ್ಥಿತಿಯಲ್ಲಿರುವಂತೆ ಆಧ್ಯಾತ್ಮದ ಜ್ಞಾನ ಅಥವಾ ಆತ್ಮನ್ ಬಳಿಗೆ ಅದು ಸಾಮಾನ್ಯವಾಗಿ ಅತಿ ದೂರದಲ್ಲಿರುವಂತೆ ಯೋಚಿಸಿ ಅಲ್ಲಿಗೆ ತಲುಪಿ ಅದರೊಂದಿಗೆ ಲೀನವಾಗಿ ಒಗ್ಗೂಡುತ್ತದೆ.
ಈ ದೈವೀ ಮನಸ್ಸೇ ಪರಮಾನಂದದೆಡೆಗಿನ ಮಾಧ್ಯಮ.

"ದಿವಶ್ಚೈನಮಾದಿತ್ಯಶ್ಚ ದೈವಂ ಮನ ಆವಿಷತಿ; ತದೈ ದೇವಂ ಮನೊ ಯೇನಾನಂಧೇವ ಭವತಿ, ಅಥೊ ನ ಶೋಚತಿ ||" ಬೃಹದಾರಣ್ಯಕೋಪನಿಷತ್ 1-5-19

ಸ್ವರ್ಗದಿಂದ ದೈವೀ ಮನವು ಮತ್ತು ಸೂರ್ಯನು ಅವನಲ್ಲಿ ಹರಡಿಕೊಳ್ಳುವುದು. ಆ ದೈವೀ ಮನದ ಮೂಲಕ ಅವನು ಸಂತೋಷವನ್ನು ಹೊಂದುತ್ತಾನಲ್ಲದೇ ಎಂದಿಗೂ ದುಃಖಿಸುವುದಿಲ್ಲ.

ಮನುಷ್ಯನಲ್ಲಿರುವ ದೈವತ್ವವೇ ಆತ್ಮದ - ಅರಿವು. ಇದರಲ್ಲಿ ಮನಸ್ಸು ನೆಲಸಿರುವುದು ಮತ್ತು ಈ ಮಾಧ್ಯಮದ ಮೂಲಕ ಆತ್ಮದ ಅರಿವನ್ನು ಗ್ರಹಿಸುವುದು; ಹಾಗಾಗಿ ಇದು ಪ್ರಕಾಶಿಸುವ, ದೇವದೂತ, ದೈವೀ ಮನಸ್ಸು.  ಹೀಗೆಂದು ಈ ಕೆಳಗಿನ ಶ್ಲೋಕದಲ್ಲಿ ವಿವರಿಸಲಾಗಿದೆ:

"ಮನಸೈವಾನುದ್ರಷ್ಟವ್ಯಮ್, ನೇಹ ನಾನಾಸ್ಥಿ ಕಿಂಚನ |
ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾಮೇವ ಪಶ್ಯತಿ ||" ಬೃಹದಾರಣ್ಯಕೋಪನಿಷತ್ 4.4.19

ಮನಸ್ಸಿನ ಮೂಲಕ ಮಾತ್ರ ಇದನ್ನು ಅರಿಯಬೇಕು. ಇದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದರಲ್ಲಿರುವ ವ್ಯತ್ಯಾಸವನ್ನು ಮೃತ್ಯುವಿನಿಂದ ಮೃತ್ಯುವೆಡೆಗೆ ಪಯಣಿಸಿದಾಗ ಅರಿಯುವುದು.

ಬ್ರಹ್ಮನನ್ನು ಅರಿಯುವ ಮಾರ್ಗಗಳನ್ನು ವಿವರಿಸಲಾಗಿದೆ. ಇದನ್ನು ಅರಿಯಬೇಕಾದರೆ ಗುರುವಿನ ಬೋಧನೆಯ ಪ್ರಕಾರ ಮತ್ತು ಪರಮ ಸತ್ಯದ ಜ್ಞಾನದಿಂದ ಪರಿಶುದ್ಧವಾದ ಮನಸ್ಸಿನ ಮೂಲಕ ಮಾತ್ರ ಸಾಧ್ಯ. ಬ್ರಹ್ಮನ್ - ವಸ್ತುವಿನ ಸಾಕ್ಷಾತ್ಕಾರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಅಜ್ಞಾನದಿಂದ ಇವುಗಳು ಅಧ್ಯಾರೋಪಗೊಳ್ಳಬಹುದು.
ಇದನ್ನು ಬೆಳಕೆಂದು ಕರೆಯಬಹುದು ಹಾಗೂ ಇದು ಪ್ರಕಾಶಿಸುವ ಸಾಧನ ಮತ್ತು ಇಂದ್ರಿಯಗಳ ಕಾರ್ಯ ಹಾಗೂ ಇವುಗಳು ಪ್ರತಿಯೊಂದು ಕ್ಷೇತ್ರಗಳ ಅರಿವಿನ ರೀತಿ.
ಇಂದ್ರಿಯಗಳ ಬೆಳಕಿನಲ್ಲಿ ಇದು ಒಂದು ಬೆಳಕು ಹಾಗೂ ಇದು ಅನುಭವದ ಅರಿವು ಮತ್ತು ಜ್ಞಾನದೆಡೆಗೆ ಕೊಂಡೊಯ್ಯುತ್ತದೆ.
ಮುಂದುವರೆದು - ಈ ಇಂದ್ರಿಯಗಳಲ್ಲಿ ಮನಸ್ಸೇ ನಿಜವಾದ ಬೆಳಕು, ಅನೇಕ ಬೆಳಕುಗಳಿಗೆ ಬೆಳಕು, ಪ್ರಕಾಶಿಸುವ, ಆ ಬೆಳಕು ಪ್ರವರ್ತಕಕ್ಕೆ ಪ್ರಚೋದಿಸುತ್ತದೆ.
ಆತ್ಮವು ಮನಸ್ಸಿನೊಂದಿಗೆ ಸೇರುತ್ತದೆ; ಮನಸ್ಸು ಇಂದ್ರಿಯಗಳೊಂದಿಗೆ, ಇಂದ್ರಿಯಗಳು ಅವುಗಳ ವಸ್ತುಗಳೊಂದಿಗೆ ಸೇರುವುದು - ಹೀಗೆ ನ್ಯಾಯ ಶಾಸ್ತ್ರವು ವಿವರಿಸುವುದು. ಮನಸ್ಸಿನೊಡನೆ ಸಂಪರ್ಕವಿಲ್ಲದೆ ಅವುಗಳು ಕಾರ್ಯವಹಿಸುವುದಿಲ್ಲ.

ಜೀವನದ ನಂತರದ ಸ್ವರ್ಗೀಯವಾದ ಫಲಗಳೆಡೆಗೆ ನನ್ನ ಮನವು ನಿರ್ಧರಿಸಲಿ ಮತ್ತು ನೆಮ್ಮದಿ, ಪ್ರಸ್ತುತ ಜೀವನದ ಆಯ್ಕೆಯಾಗಲಿ. ಇದು ಸರಿಯಾದ ರೀತಿಯಲ್ಲಿ ಅಂದರೆ ಸ್ವರ್ಗೀಯ ಮತ್ತು ಪ್ರಾಪಂಚಿಕ ಲಾಭಗಳನ್ನು ಹೊಂದಲು ಸಹಕರಿಸಲಿ.

ಧರ್ಮವನ್ನು ಒಂದು ಗುರಿಯಾಗಿಟ್ಟುಕೊಂಡು, ಅದರ ತೀರ್ಮಾನ ಮತ್ತು ಒಲವು ಸದಾ ಫಲಪ್ರದವಾಗಲಿ.
ನನ್ನ ಮನಸ್ಸಿನಲ್ಲಿ ಸದಾ ಧರ್ಮವೇ ನೆಲೆಸಿರಲಿ ಮತ್ತು ಯಾವುದೇ ಸಂದರ್ಭದಲ್ಲೂ ಪಾಪಪ್ರಜ್ಞೆ ಉಂಟಾಗದಿರಲಿ.
ಆ ಮನಸ್ಸು, ಇಂದ್ರಿಯಗಳಿಗೆ ಏಕರೂಪದ ಕಾರಣಗಳನ್ನು ಅವಲಂಬಿಸದೆ , ನನ್ನ ಕ್ಷೇತ್ರವನ್ನು ಅರಿತ, ಎಲ್ಲ ಕಾರ್ಯಗಳ ಉಪಾಧಿಗಳು ಕೇವಲ ಶಿವ-ಸಂಕಲ್ಪವಾಗಿರಲಿ.
ಇವುಗಳು ಸಂಪೂರ್ಣವಾಗಿ ಸೂಕ್ತದ ಕ್ರಿಯೆಯ ಉದ್ದೇಶವಾಗಿರಲಿ.
ಸಂಕಲ್ಪವೆಂಬುದು ನಮಗಿಷ್ಟವಾದ ಆಕರ್ಷಣೆ - ಉದಾಹರಣೆ - ವಿರುದ್ಧ ಲಿಂಗ; ನನ್ನ ಮನವು ಶಮನಪೂರಿತ ವಿಶ್ರಾಂತಿಯೆಡೆಗೆ ಕೇಂದ್ರೀಕೃತವಾಗಿರಲಿ.
ಅದರಿಂದ - ನನ್ನ ಮನವು, ಏಕಮೇವ ಬ್ರಹ್ಮಾನಂದ, ಪರಮೋಚ್ಛ ಜ್ಞಾನ; ಶಿವನಲ್ಲಿ ಐಕ್ಯವಾಗಲಿ ಹಾಗೂ ಬ್ರಹ್ಮಜ್ಞಾನವನ್ನು ಸ್ಥಾಪಿಸಿ ಅಲ್ಲೇ ನೆಲಸಲಿ.

ಮುಂದುವರೆಯುವದು.............

ಲೇಖನದ ಮೂಲಗಳು :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ.

ಏಪ್ರಿಲ್ 20, 2020

ನವಗ್ರಹ ಸ್ತೋತ್ರಂ

ಶ್ರೀ ವೇದವ್ಯಾಸ ವಿರಚಿತ ನವಗ್ರಹ ಸ್ತೋತ್ರಂ 


ಸೂರ‍್ಯ –  ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ |


ತಮೋಘ್ನಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||


 ಚಂದ್ರ _  ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಂ |


ನಮಾಮಿ ಶಶಿನಂಸೋಮಂ ಶಂಭೋರ್ಮುಕುಟ ಭೂಷಣಂ||


 ಮಂಗಳ_  ಧರಣೀ ಗರ್ಭಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ |


ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ ||


 ಬುಧ _  ಪ್ರಿಯಂಗು ಕಾಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಂ |


ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ ||


 ಗುರು _  ದೇವಾನಾಂಚ ಋಷೀಣಾಂಚ ಗುರುಂ ಕಾಂಚನಸನ್ನಿಭಂ |


ಬುದ್ಧಿಭೂತಂ ತ್ರಿಲೋಕೇಶಂ ತಂ  ನಮಾಮಿ ಬೃಹಸ್ಪತಿಂ||


 ಶುಕ್ರ _  ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ|


ಸರ್ವಶಾಸ್ತಂ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ||


 ಶನಿ _  ನೀಲಾಂಜನ ಸಮಾಭಾಸಂ ರವಿಪುತ್ರ ಯಮಾಗ್ರಜಂ |


ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||


 ರಾಹು _  ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮಧ೯ನಂ


ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ||


 ಕೇತು _  ಪಲಾಶಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ |


ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ||


 ನಮಃ ಸೂರ್ಯಾಯ ಸೋಮಾಯ ಮಂಗಳಾಯ ಬುಧಾಯಚ |


ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||


 ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ಸು ಸಮಾಹಿತಃ |


ದಿವಾ ವಾ ಯ ದಿವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||


ನರನಾರಿ ನೃಪಾಣಾಂಚ ಭವೇತ್ ದುಸ್ವಪ್ನ ನಾಶನಂ |


ಐಶ್ವರ್ಯ ಮತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಂ ||


ಗ್ರಹನಕ್ಷತ್ರಜಾಃ ಪೀಡಾಸ್ತಸ್ಕರಾಗ್ನಿ ಸಮುದ್ಭವಾಃ |


ತಾಂ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನಸಂಶಯಃ||


https://channeshmathad.blogspot.com/2020/04/blog-post_50.html