May 1, 2020

ಶಿವ ಸಂಕಲ್ಪ ಸೂಕ್ತ ೧

ಶಿವ ಸಂಕಲ್ಪ ಸೂಕ್ತ 1 ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)



ಪ್ರಸ್ತಾವನೆ :

ಈ ಸೂಕ್ತವು ಒಂದು ದೈವೀ ಗೀತೆ. ಶಿವ ಸಂಕಲ್ಪವೆಂದರೆ (&) - ಸರಿಯಾದ ಉದ್ದೇಶ ಅಥವಾ ಪವಿತ್ರ ನಿರ್ಧಾರವನ್ನು ಹೊಂದುವುದು. ಶಿವ ಸಂಕಲ್ಪಸೂಕ್ತವನ್ನು ವೇದಕಾಲದ ಮಹರ್ಷಿಗಳು ವೇದದಲ್ಲಿ ಸ್ತುತಿಸಿದ್ದಾರೆ. ಇದು ಕೇವಲ ಮನಸ್ಸಿನ ದೈವೀ ಶಕ್ತಿಗೆ ಮಾತ್ರ ಸಂಬಂಧಿಸಿದುದು. ಶಿವ ಸಂಕಲ್ಪ ಸೂಕ್ತವು " ದೈವೀ ಶಕ್ತಿಯಿಂದ ಪರಿಪೂರ್ಣವಾಗಿರುವ ಮನಸ್ಸಿಗೆ ಸಂಬಂಧಿಸಿದ ಸ್ತುತಿ ಮತ್ತು ಅದರ ಉಪಕೃತನು" ಎಂಬುದು ಸರ್ವವಿದಿತ. ಯಜುರ್ವೇದದ ಕಣ್ವ ಪರಿಷ್ಕರಣೆಯಲ್ಲಿನ 33 ನೇ ಅಧ್ಯಾಯದಲ್ಲಿ ಮೊದಲನೇ ಶ್ಲೋಕ ಮಾತ್ರ ಇರುವುದು. ಶಿವ ಸಂಕಲ್ಪ ಸೂಕ್ತದ ಉಳಿದ ಆರು ಶ್ಲೋಕಗಳು ಶುಕ್ಲ ಯಜುರ್ವೇದದ ವಾಜಸನೇಯಿ ಸಂಹಿತೆಯ 34 ನೇ ಅಧ್ಯಾಯದಲ್ಲಿನ ಭಾಗವಾಗಿದೆ. ಇವುಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪ್ರಸಿದ್ದ ಸೂಕ್ತ.  ಇದಲ್ಲದೇ ಸಾಮಾನ್ಯವಾಗಿ ಯಾರಿಗೂ ತಿಳಿಯದೇ ಇರುವ ಸಂಗತಿಯೆಂದರೆ ಋಗ್ವೇದದ ಖಿಲ ಸೂಕ್ತದ 33 ನೇ ಅಧ್ಯಾಯದಲ್ಲಿ ಶಿವ ಸಂಕಲ್ಪ ಸೂಕ್ತದ 26 ಮಂತ್ರಗಳೂ ಇರುವುದು. ಪ್ರಸ್ತುತ ಶಿವ ಸಂಕಲ್ಪ ಸೂಕ್ತದ ಆರು ಶ್ಲೋಕಗಳಿಗೆ ಮಹಾನ್ ಆಚಾರ್ಯರುಗಳಾದ ಸಾಯಣರು, ಉವ್ವತರು, ಮಹೀಧರರು ಹಾಗೂ ಸ್ವಾಮಿ ದಯಾನಂದ ಸರಸ್ವತಿಗಳು ವ್ಯಾಖ್ಯಾನಗಳನ್ನು ರಚಿಸಿದ್ದಾರೆ.

ಈ ಆರು ಶಿವ ಸಂಕಲ್ಪ ಮಂತ್ರಗಳು ರುದ್ರಾಷ್ಟಾಧ್ಯಾಯಿಯ ಮೊದಲನೇ ಅಧ್ಯಾಯದಲ್ಲೂ ವಿವರಿಸಲಾಗಿದೆ. ಈ ಶಿವ ಸಂಕಲ್ಪ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಬಹುದು. ಇದರ ಮೂಲಕ ಮನಸ್ಸಿನ ಉಪಪ್ರಜ್ಞೆಯನ್ನು ( ಚಿತ್ತ ) ಮತ್ತು ಯೋಚನೆಯ ಸಹಜ ಶಕ್ತಿಯನ್ನೂ ಸಹ ಹತೋಟಿಯಲ್ಲಿಟ್ಟುಕೊಳ್ಳುವ ವಿಧಾನ.

ಈ ಕೆಳಗೆ ವಿವರಿಸಿರುವ ಶ್ಲೋಕಗಳಿಗೆ ವಿವರ / ವ್ಯಾಖ್ಯಾನಗಳು ಸಮಗ್ರವಾದದ್ದಲ್ಲ ಬದಲಿಗೆ ಕೇವಲ ವಿವರಣಾತ್ಮಕವಾದದ್ದು ಮಾತ್ರ. ಇದರ ನೈಜ ಅಂತರಾರ್ಥವು ಆಳವಾಗಿ ಧ್ಯಾನದ ಮೂಲಕ ಅವಲೋಕಿಸುವ ಮುನಿಗಳಿಗೆ ಮಾತ್ರ ವೇದ್ಯವಾಗುವುದು. ಧ್ಯಾನ ಕ್ರಿಯೆಯು ತನ್ನ ಅನೇಕ ಹಂತಗಳು ಹಾಗೂ ಸ್ಥಿತಿಗಳ ಮೂಲಕ ಮುಂದುವರೆಯುತ್ತಿದ್ದಂತೆ ಈ ಶ್ಲೋಕಗಳ ಅಂತರಾರ್ಥಗಳು ಅನಾವರಣಗೊಳ್ಳುತ್ತವೆ.

ಯಾವುದೇ ಮಂತ್ರಗಳನ್ನು ಅದಕ್ಕೆ ಸಂಬಂಧಿಸಿದ ಋಷಿ ಮುನಿಗಳನ್ನು ಕಾಲಜ್ಞಾನಿಗಳನ್ನು ಮತ್ತು ಅದರ ದೈವವನ್ನು ಹಾಗೂ ದೈವೀ ಜಾಗ್ರತ ಶಕ್ತಿಗಳನ್ನು ಭಕ್ತಿಪೂರ್ವಕವಾಗಿ ನೆನಸಿಕೊಳ್ಳದೇ ಪಠಿಸಲಾಗುವುದಿಲ್ಲ.  ಅನೇಕ ಸಂದರ್ಭಗಳಲ್ಲಿ ಕೃತಿಯನ್ನು  ರಚಿಸಿದ ನೈಜ ಮುನಿಗಳನ್ನು ಗುರುತಿಸಲಾಗದೇ ಇರಬಹುದು ಏಕೆಂದರೆ ಅವರುಗಳು ತಮ್ಮ ಕೃತಿಯಲ್ಲಿ ಬರುವ ವಿಷಯಗಳನ್ನೇ ಗಣನೆಗೆ ತೆಗೆದುಕೊಂಡಿರುತ್ತಾರೆ. ಹಾಗಾಗಿ ಯಜುರ್ವೇದದ 34ನೇ ಅಧ್ಯಾಯದಲ್ಲಿನ ಶಿವ ಸಂಕಲ್ಪದ ಮೊದಲ ಆರು ಶ್ಲೋಕಗಳನ್ನು ಶಿವ-ಸಂಕಲ್ಪವೆಂದೇ ಹೆಸರಿಸಿ ಅದರ ದೈವವನ್ನು ಮನಸ್ಸೆಂದು ಪರಿಗಣಿಸಲಾಗಿದೆ. ಋಗ್ವೇದದ ಖಿಲ-ಸೂಕ್ತಗಳಲ್ಲಿ ಬರುವ 20 ಶ್ಲೋಕಗಳ ಕರ್ತೃವು ಯಾರೆಂದು ತಿಳಿಯದು.

      ಶಿವ ಸಂಕಲ್ಪ ಸೂಕ್ತ - ವೇದಗಳಲ್ಲಿ ಬರುವ ಶ್ಲೋಕಗಳನ್ನು ಅದರಲ್ಲಿ ಎಷ್ಟು ಮಂತ್ರಗಳಿದ್ದರೂ - ಕೀರ್ತನೆಗಳಲ್ಲಿನ ಚರಣಗಳಂತೆ ಪರಿಗಣಿಸಲಾಗುವುದು. ವೇದಕಾಲಾನಂತರದ ಸ್ತುತಿಪಾಠಗಳಿಗೆ ಸೂಕ್ತ ಎಂಬ ಪದವನ್ನು ಉಪಯೋಗಿಸುವುದಿಲ್ಲ, ಬದಲಾಗಿ ಅವುಗಳನ್ನು ಸ್ತೋತ್ರವೆನ್ನಲಾಗುವುದು. ಮತ್ತೊಂದು ವಿವರಣೆಯೆಂದರೆ ಮಂತ್ರ ರೂಪಿ ಪದ್ಯಗಳನ್ನು ಸೂಕ್ತವೆಂದೂ ನಾಮರೂಪೀ ಪದಗಳಿಂದ ದೈವವನ್ನು ಹೊಗಳುವ / ಸ್ತುತಿಸುವುದಕ್ಕೆ ಸ್ತೋತ್ರಗಳೆಂದೂ ವರ್ಗೀಕರಿಸಬಹುದೆಂಬುದಾಗಿ.

ಶ್ಲೋಕ - 1 - ಸಂಸ್ಕೃತದಲ್ಲಿ

ಯಜ್ಜಾಗ್ರತೋ ದೂರಮುದೈತಿ
ದೈವಂ ತದು ಸುಪ್ತಸ್ಯ ತಥೈವೈತಿ
ದೂರಾಂಗಮಂ ಜ್ಯೋತಿಷಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಂಕಲ್ಪಮಸ್ತು

ಕನ್ನಡದಲ್ಲಿ :

ಎಚ್ಚರದಿ ದೂರ ತನಿನಿದ್ದೆಯಲಿ
ಬಳಿಯಿದ್ದು ಬುದ್ಧಿಮನ ಬೆಳಗುವ
ಜ್ಯೋತಿಗಳೊಂದೆ ಮೂಲ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಎಚ್ಚರ ಸ್ಥಿತಿಯಲ್ಲಿರುವ ಆ ಮನಸ್ಸು ಇಂದ್ರಿಯಗಳ ಮೂಲಕ ಈ ಪ್ರಪಂಚದೊಳಗೆ (1) ಸಂಚರಿಸುತ್ತದೆ, ಮತ್ತು ಅದು ಸ್ವಪ್ನಾವಸ್ಥೆಯಲ್ಲಿ ಅನೇಕ ಪ್ರಪಂಚಗಳಲ್ಲಿ (2) ಸಂಚರಿಸುವುದು ಹಾಗೂ ದೀರ್ಘ ನಿದ್ರಾವಸ್ಥೆಯಲ್ಲಿ ಅದು ತನ್ನ ಸ್ವಸ್ಥಾನಕ್ಕೆ ಮರಳುವುದು (3), ಅಲ್ಲಿಯವರೆಗೂ ಸಂಚರಿಸುವ, ಜ್ಞಾನಜ್ಯೋತಿಯು (4) ನನ್ನ ಮನಸ್ಸೇ, ನಿನಗೆ ಸದಾ ಒಳ್ಳೆಯ ಉದ್ದೇಶವಿರಲಿ (5).
(1) = ಕಣ್ಣುಗಳು ಹಾಗೂ ಕಿವಿಗಳು ಮಾಹಿತಿಯನ್ನು ನಮೂದಿಸಿದರೂ ಕೇವಲ ಮನಸ್ಸು ಮಾತ್ರ ಇವುಗಳಿಗೆ ಅರ್ಥವನ್ನು ನೀಡುತ್ತದೆ.
(2) = ಈ ಪ್ರಪಂಚದಲ್ಲಿ ಎಷ್ಟರ ಮಟ್ಟಿಗೆ ಅಪೂರ್ವವಾದ ಹಾಗೂ ಸುಂದರವಾದ ವಿಷಯಗಳಿರುವುದೋ ಅದಕ್ಕಿಂತ ಸಾವಿರ ಪಟ್ಟು ಕಲ್ಪನೆಯಲ್ಲಿ ಬರಬಹುದು.
(3) = ದೀರ್ಘ ನಿದ್ರೆಯಲ್ಲಿ ಇಂದ್ರಿಯಗಳು ಮನಸಿನೊಳಗೆ ಹಿಂತೆಗೆದುಕೊಳ್ಳುವುದು, ಮತ್ತು ಮನಸ್ಸು ಆತ್ಮನಲ್ಲಿ ಸರಿಯುವುದು ಆಗ ಪರಮಾನಂದ ಮತ್ತು ಬ್ರಹ್ಮನ ಪ್ರಶಾಂತತೆಯನ್ನು ಸ್ವಲ್ಪಮಟ್ಟಿಗೆ ಅನುಭವಿಸಬಹುದು. ಆದರೆ ಉಳಿದವೆರಡು ಸ್ಥಿತಿಗಳಂತೆ ಈ ಪ್ರಶಾಂತತೆಯು ಕ್ಷಣಿಕವಾದದ್ದು ಮತ್ತು ಅಸ್ಥಿರವಾದದ್ದು ಹಾಗಾಗಿ ಈ ಅನುಭವವು ನೈಜಬ್ರಹ್ಮ ಜ್ಞಾನಕ್ಕೆ ತೀರ ಸಾಧಾರಣ ಬದಲಿ ಸ್ಥಿತಿ.
(4) = ಮನಸ್ಸು ಒಂದು ರೀತಿಯ ಬೆಳಕು ಹಾಗೂ ಅದು ಅಜ್ಞಾನದ ಕತ್ತಲನ್ನು ಜ್ಞಾನದ ಮೂಲಕ ಪ್ರಕಾಶಿಸುತ್ತದೆ.
(5) = ಶಿವಸಂಕಲ್ಪ. ಅಲೆದಾಡುವ ಮನಸ್ಸು ಎಲ್ಲ ದುಃಖಗಳಿಗೂ ಕಾರಣ, ಆದರೆ ಅದನ್ನು ಸರಿಯಾದ ಗುರಿಯೆಡೆಗೆ ತಿರುಗಿಸಿದಾಗ ಅದು ಬಂಧನದಿಂದ ಬಿಡುಗಡೆ ಹೊಂದಲು ಕಾರಣವಾಗುವುದು.

ವ್ಯಾಖ್ಯಾನ - 1.

ನಾನು ಆತ್ಮ ಅಂದರೆ ಜ್ಞಾನ.  ನಾನು ಪುರುಷ, ಶರೀರ ಮತ್ತು ಪ್ರಕೃತಿಯಲ್ಲಿ ನೆಲೆಸಿರುವವನು.
ನನಗೆ ಮನಸ್ಸು ಎಂಬುದೊಂದಿದೆ.
ಈ ನನ್ನ ಮನಸ್ಸು ಸೂರ್ಯನಂತೆ ಉದಯಿಸುತ್ತದೆ. ಅದು ನನ್ನ ಇಂದ್ರಿಯಗಳನ್ನು ಮೀರಿ ಅವುಗಳಿಂದ ಬಹು ದೂರ ಪಯಣಿಸುತ್ತದೆ. ನನ್ನ ಎಚ್ಚರ ಸ್ಥಿತಿಯಲ್ಲಿ ಅದು ಸಂಚರಿಸುತ್ತಾ ಇಂದ್ರಿಯಗಳೊಂದಿಗಿನ ಸಂಪರ್ಕದಿಂದ ಬಹುದೂರದ ವಸ್ತುಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.
ಹಾಗೆಯೇ ನನ್ನ ಮನಸ್ಸು ಮರೆಮಾಡಲ್ಪಟ್ಟ, ಭೂತ, ಭವಿಷ್ಯದ, ಹಾಗೂ ವರ್ತಮಾನಗಳ, ತೀರ ಹತ್ತಿರದ, ಅಥವಾ ಅತಿ ದೂರದ, ವಸ್ತುಗಳ ಬಳಿಗೆ ತನ್ನ ಪರಿಧಿಯಲ್ಲೇ ಇರುವಂತೆ ತಲುಪುವುದು.

ಅದೇರೀತಿ ಕನಸು ಕಾಣುತ್ತಿರುವವನ ಮನಸ್ಸು ಕೂಡಾ. ಅದು ದೂರದ ವಸ್ತುಗಳು, ವಸ್ತುಗಳು ಚಿನ್ಹೆಯ ರೂಪ ಮತ್ತು ಮುದ್ರಣಗಳ ರೂಪದಲ್ಲಿ ಅಡಗಿರುವ ವಾಸನಾಮಯ ಪದಾರ್ಥಗಳೆಡೆಗೆ ಪಯಣಿಸುವುದು.
ಹೇಗೆ ಮನಸ್ಸು ನಿದ್ರಾಸ್ಥಿತಿ ಹಾಗೂ ಕನಸಿನ ಸ್ಥಿತಿಯಲ್ಲಿ ಯಾವುದೇ ಮಾರ್ಗದಲ್ಲಿ ಪದಾರ್ಥಗಳೆಡೆಗೆ ಪಯಣಿಸುವುದೋ, ಎಚ್ಚರದ ಸ್ಥಿತಿಗೆ ಬರುವಷ್ಟರಲ್ಲಿ ಅದೇ ಮಾರ್ಗದಲ್ಲಿ ಎಚ್ಚರದ ಸ್ಥಿತಿಯಲ್ಲಿ ಮನಸ್ಸು ಎಲ್ಲಿತ್ತೋ ಅಲ್ಲಿಗೇ ಮರಳುವುದು.
ನಿದ್ರಾ ಸ್ಥಿತಿಯಲ್ಲಿರುವವನ ಮನಸ್ಸು ಸಾಮಾನ್ಯ ಸ್ಥಿತಿಯಲ್ಲಿರುವಂತೆ ಆಧ್ಯಾತ್ಮದ ಜ್ಞಾನ ಅಥವಾ ಆತ್ಮನ್ ಬಳಿಗೆ ಅದು ಸಾಮಾನ್ಯವಾಗಿ ಅತಿ ದೂರದಲ್ಲಿರುವಂತೆ ಯೋಚಿಸಿ ಅಲ್ಲಿಗೆ ತಲುಪಿ ಅದರೊಂದಿಗೆ ಲೀನವಾಗಿ ಒಗ್ಗೂಡುತ್ತದೆ.
ಈ ದೈವೀ ಮನಸ್ಸೇ ಪರಮಾನಂದದೆಡೆಗಿನ ಮಾಧ್ಯಮ.

"ದಿವಶ್ಚೈನಮಾದಿತ್ಯಶ್ಚ ದೈವಂ ಮನ ಆವಿಷತಿ; ತದೈ ದೇವಂ ಮನೊ ಯೇನಾನಂಧೇವ ಭವತಿ, ಅಥೊ ನ ಶೋಚತಿ ||" ಬೃಹದಾರಣ್ಯಕೋಪನಿಷತ್ 1-5-19

ಸ್ವರ್ಗದಿಂದ ದೈವೀ ಮನವು ಮತ್ತು ಸೂರ್ಯನು ಅವನಲ್ಲಿ ಹರಡಿಕೊಳ್ಳುವುದು. ಆ ದೈವೀ ಮನದ ಮೂಲಕ ಅವನು ಸಂತೋಷವನ್ನು ಹೊಂದುತ್ತಾನಲ್ಲದೇ ಎಂದಿಗೂ ದುಃಖಿಸುವುದಿಲ್ಲ.

ಮನುಷ್ಯನಲ್ಲಿರುವ ದೈವತ್ವವೇ ಆತ್ಮದ - ಅರಿವು. ಇದರಲ್ಲಿ ಮನಸ್ಸು ನೆಲಸಿರುವುದು ಮತ್ತು ಈ ಮಾಧ್ಯಮದ ಮೂಲಕ ಆತ್ಮದ ಅರಿವನ್ನು ಗ್ರಹಿಸುವುದು; ಹಾಗಾಗಿ ಇದು ಪ್ರಕಾಶಿಸುವ, ದೇವದೂತ, ದೈವೀ ಮನಸ್ಸು.  ಹೀಗೆಂದು ಈ ಕೆಳಗಿನ ಶ್ಲೋಕದಲ್ಲಿ ವಿವರಿಸಲಾಗಿದೆ:

"ಮನಸೈವಾನುದ್ರಷ್ಟವ್ಯಮ್, ನೇಹ ನಾನಾಸ್ಥಿ ಕಿಂಚನ |
ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾಮೇವ ಪಶ್ಯತಿ ||" ಬೃಹದಾರಣ್ಯಕೋಪನಿಷತ್ 4.4.19

ಮನಸ್ಸಿನ ಮೂಲಕ ಮಾತ್ರ ಇದನ್ನು ಅರಿಯಬೇಕು. ಇದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದರಲ್ಲಿರುವ ವ್ಯತ್ಯಾಸವನ್ನು ಮೃತ್ಯುವಿನಿಂದ ಮೃತ್ಯುವೆಡೆಗೆ ಪಯಣಿಸಿದಾಗ ಅರಿಯುವುದು.

ಬ್ರಹ್ಮನನ್ನು ಅರಿಯುವ ಮಾರ್ಗಗಳನ್ನು ವಿವರಿಸಲಾಗಿದೆ. ಇದನ್ನು ಅರಿಯಬೇಕಾದರೆ ಗುರುವಿನ ಬೋಧನೆಯ ಪ್ರಕಾರ ಮತ್ತು ಪರಮ ಸತ್ಯದ ಜ್ಞಾನದಿಂದ ಪರಿಶುದ್ಧವಾದ ಮನಸ್ಸಿನ ಮೂಲಕ ಮಾತ್ರ ಸಾಧ್ಯ. ಬ್ರಹ್ಮನ್ - ವಸ್ತುವಿನ ಸಾಕ್ಷಾತ್ಕಾರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಅಜ್ಞಾನದಿಂದ ಇವುಗಳು ಅಧ್ಯಾರೋಪಗೊಳ್ಳಬಹುದು.
ಇದನ್ನು ಬೆಳಕೆಂದು ಕರೆಯಬಹುದು ಹಾಗೂ ಇದು ಪ್ರಕಾಶಿಸುವ ಸಾಧನ ಮತ್ತು ಇಂದ್ರಿಯಗಳ ಕಾರ್ಯ ಹಾಗೂ ಇವುಗಳು ಪ್ರತಿಯೊಂದು ಕ್ಷೇತ್ರಗಳ ಅರಿವಿನ ರೀತಿ.
ಇಂದ್ರಿಯಗಳ ಬೆಳಕಿನಲ್ಲಿ ಇದು ಒಂದು ಬೆಳಕು ಹಾಗೂ ಇದು ಅನುಭವದ ಅರಿವು ಮತ್ತು ಜ್ಞಾನದೆಡೆಗೆ ಕೊಂಡೊಯ್ಯುತ್ತದೆ.
ಮುಂದುವರೆದು - ಈ ಇಂದ್ರಿಯಗಳಲ್ಲಿ ಮನಸ್ಸೇ ನಿಜವಾದ ಬೆಳಕು, ಅನೇಕ ಬೆಳಕುಗಳಿಗೆ ಬೆಳಕು, ಪ್ರಕಾಶಿಸುವ, ಆ ಬೆಳಕು ಪ್ರವರ್ತಕಕ್ಕೆ ಪ್ರಚೋದಿಸುತ್ತದೆ.
ಆತ್ಮವು ಮನಸ್ಸಿನೊಂದಿಗೆ ಸೇರುತ್ತದೆ; ಮನಸ್ಸು ಇಂದ್ರಿಯಗಳೊಂದಿಗೆ, ಇಂದ್ರಿಯಗಳು ಅವುಗಳ ವಸ್ತುಗಳೊಂದಿಗೆ ಸೇರುವುದು - ಹೀಗೆ ನ್ಯಾಯ ಶಾಸ್ತ್ರವು ವಿವರಿಸುವುದು. ಮನಸ್ಸಿನೊಡನೆ ಸಂಪರ್ಕವಿಲ್ಲದೆ ಅವುಗಳು ಕಾರ್ಯವಹಿಸುವುದಿಲ್ಲ.

ಜೀವನದ ನಂತರದ ಸ್ವರ್ಗೀಯವಾದ ಫಲಗಳೆಡೆಗೆ ನನ್ನ ಮನವು ನಿರ್ಧರಿಸಲಿ ಮತ್ತು ನೆಮ್ಮದಿ, ಪ್ರಸ್ತುತ ಜೀವನದ ಆಯ್ಕೆಯಾಗಲಿ. ಇದು ಸರಿಯಾದ ರೀತಿಯಲ್ಲಿ ಅಂದರೆ ಸ್ವರ್ಗೀಯ ಮತ್ತು ಪ್ರಾಪಂಚಿಕ ಲಾಭಗಳನ್ನು ಹೊಂದಲು ಸಹಕರಿಸಲಿ.

ಧರ್ಮವನ್ನು ಒಂದು ಗುರಿಯಾಗಿಟ್ಟುಕೊಂಡು, ಅದರ ತೀರ್ಮಾನ ಮತ್ತು ಒಲವು ಸದಾ ಫಲಪ್ರದವಾಗಲಿ.
ನನ್ನ ಮನಸ್ಸಿನಲ್ಲಿ ಸದಾ ಧರ್ಮವೇ ನೆಲೆಸಿರಲಿ ಮತ್ತು ಯಾವುದೇ ಸಂದರ್ಭದಲ್ಲೂ ಪಾಪಪ್ರಜ್ಞೆ ಉಂಟಾಗದಿರಲಿ.
ಆ ಮನಸ್ಸು, ಇಂದ್ರಿಯಗಳಿಗೆ ಏಕರೂಪದ ಕಾರಣಗಳನ್ನು ಅವಲಂಬಿಸದೆ , ನನ್ನ ಕ್ಷೇತ್ರವನ್ನು ಅರಿತ, ಎಲ್ಲ ಕಾರ್ಯಗಳ ಉಪಾಧಿಗಳು ಕೇವಲ ಶಿವ-ಸಂಕಲ್ಪವಾಗಿರಲಿ.
ಇವುಗಳು ಸಂಪೂರ್ಣವಾಗಿ ಸೂಕ್ತದ ಕ್ರಿಯೆಯ ಉದ್ದೇಶವಾಗಿರಲಿ.
ಸಂಕಲ್ಪವೆಂಬುದು ನಮಗಿಷ್ಟವಾದ ಆಕರ್ಷಣೆ - ಉದಾಹರಣೆ - ವಿರುದ್ಧ ಲಿಂಗ; ನನ್ನ ಮನವು ಶಮನಪೂರಿತ ವಿಶ್ರಾಂತಿಯೆಡೆಗೆ ಕೇಂದ್ರೀಕೃತವಾಗಿರಲಿ.
ಅದರಿಂದ - ನನ್ನ ಮನವು, ಏಕಮೇವ ಬ್ರಹ್ಮಾನಂದ, ಪರಮೋಚ್ಛ ಜ್ಞಾನ; ಶಿವನಲ್ಲಿ ಐಕ್ಯವಾಗಲಿ ಹಾಗೂ ಬ್ರಹ್ಮಜ್ಞಾನವನ್ನು ಸ್ಥಾಪಿಸಿ ಅಲ್ಲೇ ನೆಲಸಲಿ.

ಮುಂದುವರೆಯುವದು.............

ಲೇಖನದ ಮೂಲಗಳು :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ.

5 comments:

  1. ಧನ್ಯವಾದಗಳು ಗುರುಗಳೇ

    ReplyDelete
  2. ಧನ್ಯವಾದಗಳು ಗುರುಗಳೇ

    ReplyDelete
  3. ಧನ್ಯವಾದಗಳು ಗುರುಗಳೇ

    ReplyDelete
  4. ಧನ್ಯವಾದಗಳು ಗುರುಗಳೇ

    ReplyDelete
  5. ಧನ್ಯವಾದಗಳು ಗುರುಗಳೇ

    ReplyDelete

If you have any doubts. please let me know...