ನಿಮಗೂ ತಿಳಿಯಲಿ ಈ ವಿಚಾರ ? ಇಂದು ಒಬ್ಬ ಜ್ಯೋತಿಷಿ ಹೇಗಿರಬೇಕು;
ಹೇಗಿದ್ದರೆ ಚೆನ್ನ ಎಂದು ಬರೆಯಲಿಚ್ಚಿಸುವೆ. ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ. ಆದರೆ ಅದುವೇ ಮಾರ್ಗವಲ್ಲ. ಜ್ಯೋತಿಷ್ಯಶಾಸ್ತ್ರದ ಆಧಾರದಲ್ಲಿ ಫಲವನ್ನು ತಿಳಿಸಿಕೊಡುವವ ಜ್ಯೋತಿಷಿ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ದಾರಿ ಕಾಣದ ಹಾಗೆ ಯಾರಿಗೆ ಆಗಿದೆಯೋ ಅವರು ಜ್ಯೋತಿಷಿಗಳನ್ನು ಕಾಣಲು ಬರುತ್ತಾರೆ.ಜ್ಯೋತಿಷ್ಯ ಶಾಸ್ತ್ರಾಧಾರಿತ ಫಲ ಅಥವಾ ಶಾಸ್ತ್ರಾಧಾರಿತ ಮಾರ್ಗದರ್ಶನಕ್ಕಾಗಿ ಬರುತ್ತಾರೆ. ಆಗ ಜ್ಯೋತಿಷಿಯು ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿ ಸರಿಯಾಗಿ ವಿಮರ್ಶಿಸಿ ಅವರ ಸಮಸ್ಯೆಗಳನ್ನು ಶಾಸ್ತ್ರಾಧಾರಿತವಾಗಿ ಪರಿಹರಿಸುವ ಕೆಲಸವನ್ನು ನಿರ್ವಂಚನೆಯಿಂದ ಮಾಡಬೇಕು. ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಸೂಚಿಸ ಬೇಕಾಗಿರುವುದು ಒಬ್ಬ ಪ್ರಾಮಾಣಿಕ ಜ್ಯೋತಿಷಿಯ ಕರ್ತವ್ಯವಾಗಿರುತ್ತದೆ. ಇಲ್ಲದಿರುವ ದೋಷಗಳನ್ನು ಹೇಳಿ ಬಂದವರನ್ನು ಹೆದರಿಸಿ ಹಣ ಸುಲಿಗೆ ಮಾಡುವುದು ಮಹಾ ಪಾಪ.ಜ್ಯೋತಿಷಿಗೆ ಧನದಾಹಕ್ಕಿಂತ ಮುಖ್ಯ ಶಾಸ್ತ್ರದ ಘನತೆ ಕಾಪಾಡಿಕೊಂಡು ಬರಬೇಕಾದ ಹೊಣೆಗಾರಿಕೆ ಇರಬೇಕು. ಇಲ್ಲದ ಫಲಗಳನ್ನು ಇದೆ ಎಂದು ಹೇಳಿ ; ಅಥವಾ ಸರಿಯಾಗಿ ವಿಮರ್ಶೆ ಮಾಡದೆ ಫಲ ಹೇಳಿ ಅದಕ್ಕೆ ಪರಿಹಾರದ ರೂಪದಲ್ಲಿ ದೊಡ್ಡ ದೊಡ್ಡ ಪರಿಹಾರಗಳ ಪಟ್ಟಿ ಕೊಟ್ಟು ಆ ಜ್ಯೋತಿಷಿಯ ಪೈಕಿಯ ಯಾರಾದರೂ ಒಬ್ಬ ವ್ಯಕ್ತಿಯಲ್ಲಿ ಪರಿಹಾರ ಕಾರ್ಯ ಮಾಡಿಸಲು ಸೂಚನೆ ಕೊಟ್ಟು; ಪರಿಹಾರ ಮಾಡಿದ ತಂತ್ರಜ್ಞರ ಕೈಯಿಂದಲೂ ತಾನು ಅವರಲ್ಲಿಗೆ ಪರಿಹಾರ ಮಾಡಿಸಲು ವ್ಯಕ್ತಿಯನ್ನು ಕಳುಹಿಸಿದ್ದಕ್ಕೆ ಹಣ ತೆಗೆದುಕೊಳ್ಳುವುದು ಸರಿಯಲ್ಲ. ಒಂದು ವೇಳೆ ಪರಿಹಾರ ಕಾರ್ಯದ ಅಗತ್ಯವಿದ್ದಲ್ಲಿ ಪರಿಹಾರವನ್ನು ಆ ವ್ಯಕ್ತಿಯ ಗ್ರಾಮ ದೇವಸ್ಥಾನದ ತಂತ್ರಿಗಳ ಕೈಯಲ್ಲಿ ಅಥವಾ ಆ ವ್ಯಕ್ತಿಯ ಕುಲ ಪುರೋಹಿತರ ಮುಖಾಂತರ ಪರಿಹಾರ ಮಾಡಿಸಲು ಹೇಳುವುದು ಸೂಕ್ತ. ಕೆಲವೊಂದು ದೋಷಗಳನ್ನು ಹೇಳಬೇಕಾದರೆ ಸಾಕಷ್ಟು ವಿಮರ್ಶಿಸಿ ದೋಷಗಳು ಖಚಿತವಾಗಿ ಇವೆ ಎಂಬುದನ್ನು ಶಾಸ್ತ್ರಾಧಾರಿತವಾಗಿ ನಿಶ್ಚಯಮಾಡಿ ನಂತರವೇ ದೋಷಗಳ ಪಟ್ಟಿ ಕೊಡಬೇಕು. ಇಲ್ಲದೆ ಇದ್ದರೆ ಜ್ಯೋತಿಷ್ಯ ಶಾಸ್ತ್ರದ ಅಸ್ಥಿತ್ವಕ್ಕೆ ಹಾನಿಯಾದೀತು.ಅದೊಂದು ಮೂಢನಂಬಿಕೆಯ, ಹೆಡ್ಡರಿಂದ ಹಣ ಕೀಳುವ ಶಾಸ್ತ್ರ ಎನ್ನುವ ಅಪಕೀರ್ತಿಗೆ ಭಾಜನವಾಗಬಹುದು. ಹಾಗಾಗಿ ಯಾವ ಜ್ಯೋತಿಷಿಗೆ ಹಣಕ್ಕಿಂತಲೂ ಶಾಸ್ತ್ರದ ಘನತೆ ಮುಖ್ಯವಾಗಿರುತ್ತದೆಯೋ ಮತ್ತು ಯಾವಾತನಿಗೆ ಸಾಮಾಜಿಕ ಬದ್ದತೆಯಿರುತ್ತದೆಯೋ ಅಂತಹಾ ಜ್ಯೋತಿಷಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು. ಎಲ್ಲರಿಗೂ ನಿಮ್ಮ ಕುಲದೇವರು ಹಾಗೂ ಜಗನ್ನಿಯಾಮಕನಾದ ಪರಮಾತ್ಮ ಸುಖ ಸಂಪದವನ್ನು ಕರುಣಿಸಲಿ ಎಂಬುದು ಈ ಬರಹಗಾರನ ಹೃದಯಾಂತರಾಳದ ಹಾರೈಕೆಗಳು.
ಇಲ್ಲಿ ಒಂದು ವಿಚಾರವನ್ನು ಗಮನದಲ್ಲಿರಿಸಿಕೊಳ್ಳುವ ಅಗತ್ಯವಿದೆ. ಜ್ಯೋತಿಷ್ಯವೇ ಸರ್ವಸ್ವವಲ್ಲ. ಆ ಶಾಸ್ತ್ರದ ಆಧಾರದಲ್ಲಿ ತಿಳಕೊಳ್ಳಬಹುದಾದ ಶುಭ ಫಲಗಳಿಂದ ಹಿಗ್ಗಿ ಅಥವಾ ದುಷ್ಠ ಫಲ / ದೋಷಗಳಿಂದ ಕುಗ್ಗಿ ತಮ್ಮ ನೆಮ್ಮದಿಯನ್ನು ಯಾರೂ ಕೆಡಿಸಿಕೊಳ್ಳಬಾರದು. ಶಾಸ್ತ್ರದಲ್ಲಿ ಹೇಳುವ ನವಗ್ರಹಗಳು ಕೂಡಾ ತಮಗಿಂತಲೂ ಅಧಿಕ ಶಕ್ತಿಯೊಂದರ ಅಧೀನವಾಗಿ , ಆ ಶಕ್ತಿಗೆ ತಲೆಬಾಗಿ ಶುಭಾಶುಭ ಫಲಗಳನ್ನು ಕೊಡುತ್ತವೆ ಎಂಬುದು ಗಮನಾರ್ಹ. ಆದ ಕಾರಣ ಆ ಮಹಾ ಶಕ್ತಿಯ ಮೊರೆ ಹೋಗುವುದೇ ಮಾನವರಿಗೆ ಸರ್ವ ವಿಧದ ರಕ್ಷಣೆಯಾಗಿದೆ. ಈ ಅಂಶ ಮನಸ್ಸಿನಲ್ಲಿರಿಸಿಕೊಂಡು ಗಾಢವಾದ ದೈವ ಭಕ್ತಿ ಒದಗಿ ಬಂದಲ್ಲಿ ಸರ್ವ ವಿಧದ ದೋಷಗಳಿಗೂ ಸುಲಭ ಪರಿಹಾರ ದೊರಕುವುದು ಎಂಬುದು ಶತ ಸಿಧ್ಧ.
ಶುಭಮ್ ಭೂಯಾತ್
✍️👌
ReplyDelete✍️👌
ReplyDelete