ಶ್ರೀ ಮೃತ್ಯುಂಜಯ ಮಂತ್ರದ ಭಾಷ್ಯ
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ | ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ | ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪತಿವೇದನಮ್ | ಉರ್ವಾರುಕಮಿವ ಬಂಧನಾದಿತೋ ಮುಕ್ಷೀಯ ಮಾಮುತಃ ||
(ಯಜುರ್ವೇದ ಅಧ್ಯಾಯ ೩, ಮಂತ್ರ ೬೦)
ಅನ್ವಯ:- [ತ್ರ್ಯಂಬಕಮ್] ತ್ರಿ ಕಾಲಗಳಲ್ಲೂ ಸಮಾನ ರೂಪವಾದ ಜ್ಞಾನವುಳ್ಳ ರುದ್ರರೂಪಿ ಪರಮೇಶ್ವರನನ್ನು [ಯಜಾಮಹೇ] ನಿತ್ಯವೂ ನಾವು ಪೂಜಿಸುವೆವು. [ಸುಗಂಧಿಮ್] ಶುದ್ಧವಾದ ಗಂಧವು ಯಾವನಿಂದ ಉಂಟಾಗುತ್ತದೆಯೋ ಅಂತಹವನನ್ನು ಅಂದರೆ ಎಲ್ಲವನ್ನೂ ಪರಿಶುದ್ಧಗೊಳಿಸುವವನಾದ ಈಶ್ವರನನ್ನು (ಪುಷ್ಟಿವರ್ಧನಮ್] ಶರೀರ ಮತ್ತು ಆತ್ಮಗಳ ಬಲವನ್ನು ಹೆಚ್ಚಿಸುವವನಾದ ಈಶ್ವರನನ್ನು (ನಾವು ನಿತ್ಯವು ಪೂಜಿಸುವೆವು. ಅವನ ಅನುಗ್ರಹದಿಂದ) [ಉರ್ವಾರುಕಮಿವ] ಸೌತೆಕಾಯಿ ಅಥವಾ ಮೆಕ್ಕೆಕಾಯಿ ಅಥವಾ ಕರಬೂಜದ ಹಣ್ಣಿನಂತೆ (ಈ ಹಣ್ಣು ಪಕ್ವವಾಗಿ ಅಮೃತ ಅಂದರೆ ಅತ್ಯಂತ ಮಧುರವಾಗಿ ಆಗುತ್ತದೆ-ಅದರಂತೆ.) [ಬಂಧನಾತ್] ತೊಟ್ಟಿನಿಂದ (ಲತೆಯ ಬಂಧನದ ದೆಸೆಯಿಂದ ಸುಲಭವಾಗಿ ಬೇರ್ಪಡುವಂತೆ.) [ಮೃತ್ಯೋಃ] ಮೃತ್ಯುವಿನಿಂದ -ಪ್ರಾಣ, ಶರೀರ, ಆತ್ಮಗಳ ವಿಯೋಗದಿಂದ [ಮುಕ್ಷಿಯ] ನಾನು ಮುಕ್ತನಾಗಬೇಕು. [ಮಾ ಅಮೃತಾತ್] ಮೋಕ್ಷ ಸುಖದಿಂದ ನಾನು ಬಿಡುಗಡೆ ಹೊಂದಬಾರದು. (ಮೋಕ್ಷ ಸುಖದ ವಿಷಯದಲ್ಲಿ ನಾನು ಶ್ರದ್ದಾರಹಿತನಾಗುವುದು ಬೇಡ.)
[ತ್ರ್ಯಂಬಕಮ್] ಸರ್ವ ದರ್ಶಿಯೂ ಸರ್ವಾಧ್ಯಕ್ಷನೂ ಆದ ಪರಮೇಶ್ವರನನ್ನು [ಯಜಾಮಹೇ] ನಿತ್ಯವೂ ಪೂಜಿಸುತ್ತೇವೆ. (ಸತ್ಕರಿಸುತ್ತೇವೆ.) [ಸುಗಂಧಿಂ] ಸುಗಂಧವುಳ್ಳ ಅಂದರೆ ಪರಿಶುದ್ಧಗೊಳಿಸುವ ಈಶ್ವರನನ್ನು [ಪತಿವೇದನಮ್] ರಕ್ಷಣೆ ಮಾಡುವ ಸ್ವಾಮಿಯನ್ನು ಉಂಟು ಮಾಡಿಕೊಡುವ ಅಥವಾ ಜ್ಞಾನವನ್ನು ನೀಡುವ ಈಶ್ವರನನ್ನು (ನಾನು ನಿತ್ಯವೂ ಸತ್ಕರಿಸುತ್ತೇವೆ ಅವನ ಅನುಗ್ರಹದಿಂದ) [ಉರ್ವಾರುಕಮಿವ] ಕರಬೂಜ ಫಲದಂತೆ [ಬಂಧನಾತ್ | ತೊಟ್ಟಿನಿಂದ ಅಂದರೆ ಲತೆಯ ಬಂಧನದ ದೆಸೆಯಿಂದ [ಮುಕ್ಷಿಯ] ನಾನು ಬಿಡುಗಡೆ ಹೊಂದಬೇಕು. [ಮಾ ಅಮುತಃ] ಮೋಕ್ಷ ರೂಪವಾದ ಪರಲೋಕದ ದೆಸೆಯಿಂದ ಅಥವಾ ಜನ್ಮಾಂತರ ಸುಖ ರೂಪ ಫಲದ ದೆಸೆಯಿಂದ ಅಥವಾ ಧರ್ಮದ ದೆಸೆಯಿಂದ ನಾನು ಬಿಡುಗಡೆ ಹೊಂದುವುದು ಬೇಡ.
ಈ ಮಂತ್ರದ ವಿಷಯದಲ್ಲಿ ಯಾಸ್ಕ ಮುನಿಯು ನಿರುಕ್ತ ದಲ್ಲಿ ಹೀಗೆ ಹೇಳುತ್ತಾರೆ. “ತ್ಯಂಬಕನಾದ ರುದ್ರನನ್ನು ನಾವು ಪೂಜಿಸುತ್ತೇವೆ. ಆ ದೇವರು ಸುಗಂಧಯುಕ್ತ ವೂ, ಪುಷ್ಟಿಕಾರಕ ವೂ ಆದ ಸವತೇಕಾಯಿಯ (ಕರಬೂಜದ) ಫಲವನ್ನು ತೊಟ್ಟಿನಿಂದ ಹೇಗೋ ಹಾಗೆ ನನ್ನನ್ನು ಮೃತ್ಯುವಿನ ದೆಸೆಯಿಂದ ಬಿಡಲಿ.”
ಈ ಮಂತ್ರದ ವ್ಯಾಖ್ಯಾನ ಶ.ಬ್ರಾ. ೨.೬.೨.೧೨-೧೪ ರಲ್ಲಿ ಇದೆ.
ಉಪಮಾಲಂಕಾರ ವಾಗಿದೆ. ಮನುಷ್ಯರು ಈಶ್ವರನನ್ನು ಬಿಟ್ಟು ಬೇರೆ ಯಾರ ಪೂಜೆಯನ್ನು ಮಾಡಬಹುದು.
ಭಾವಾರ್ಥ- ಇಲ್ಲಿ ಉಪಮಾಲಂಕಾರವಿದೆ. ಮನುಷ್ಯರು ಈಶ್ವರನನ್ನು ಬಿಟ್ಟು ಬೇರೆ ಯಾರ ಪೂಜೆಯನ್ನೂ ಮಾಡಬಾರದು. ಏಕೆಂದರೆ, ಬೇರೆಯವರ ಪೂಜೆ ವೇದ ವಿಹಿತವಾದುದಲ್ಲವಾದ್ದರಿಂದ ದುಃಖ ಫಲವನ್ನು ನೀಡುತ್ತದೆ. ಸವತೆಕಾಯಿ ಫಲವು ಬಳ್ಳಿಯಲ್ಲಿ ಅಂಟಿಕೊಂಡಿದ್ದು ತಾನಾಗಿಯೇ ಪಕ್ವವಾಗಿ ಸಮಯ ಬಂದಾಗ ಬಳ್ಳಿಯ ಬಂಧನದಿಂದ ಬೇರೆಯಾಗಿ ಅತ್ಯಂತ ಮಧುರವಾದ ಆಗುತ್ತದೆ. ಹಾಗೆಯೇ ನಾವು ಪೂರ್ಣಾಯಸ್ಸನ್ನು ಅನುಭವಿಸಿ ಶರೀರವನ್ನು ಬಿಟ್ಟು ಮುಕ್ತಿಯನ್ನು ಹೊಂದಬೇಕು. ಮೋಕ್ಷ ಪ್ರಾಪ್ತಿಗೆ ಬೇಕಾದ ಅನುಷ್ಠಾನ ದಿಂದಾಗಲಿ, ಪರಲೋಕದ ದೆಸೆಯಿಂದಾಗಿ ಜನ್ಮಾಂತರದ ದೆಸೆಯಿಂದಾಗಿ ನಾವು ಎಂದಿಗೂ ವಿರಕ್ತರಾಗಬಾರದು. ನಾಸ್ತಿಕತೆ ಯನ್ನು ಆಶ್ರಯಿಸಿ ಎಂದಿಗೂ ನಾವು ಈಶ್ವರನ ಅನಾದರಣೆಯನ್ನು ಮಾಡಬಾರದು. ವ್ಯಾವಹಾರಿಕ ಸುಖಕ್ಕಾಗಿ ಅನ್ನ-ಜಲಾದಿಗಳನ್ನು ಜನರು ಅಪೇಕ್ಷಿಸುವಂತೆಯೇ ಈಶ್ವರನಲ್ಲಿ, ವೇದಗಳಲ್ಲಿ, ವೇದೋಕ್ತ ಧರ್ಮದಲ್ಲಿ ಮತ್ತು ಮೋಕ್ಷದಲ್ಲಿ ನಾವು ಸದಾ ಶ್ರದ್ಧೆಯುಳ್ಳವರಾಗಿರಬೇಕು. || ೬೦ll
ಆಕರ: ಯಜುರ್ವೇದ ಭಾಷ್ಯ
ಸಂಗ್ರಹ: ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ 9986175616.
No comments:
Post a Comment
If you have any doubts. please let me know...