May 27, 2020

ರುದ್ರನ ಆರಾಧನೆಯಲ್ಲಿ ಮಾ ನೋ ವಧೀಃ ಪಿತರಂ ಮೋ ತ ಮಾತರಂ’ ನನಗೆ ಜನ್ಮಕೊಟ್ಟ ತಂದೆ ತಾಯಿಯರನ್ನೂ ಸಹ ನೀನು ಹಿಂಸಿಸಬೇಡ.

ಮಾ ನಸ್ತೋಕೇ ತನಯೇ . . . . . ರುದ್ರ

ಜಗತ್ತಿನಲ್ಲಿ ನಮ್ಮ ದೇಶಕ್ಕೆ ವಿಶಿಷ್ಟವಾದ ಸ್ಥಾನವಿದೆ. ಭಾರತವನ್ನು ಗುರುತಿಸುವುದೇ ಸನಾತನತೆಯಿಂದ. ಇಲ್ಲಿನ ಪ್ರತಿಯೊಂದು ನಡವಳಿಕೆಗಳೂ ಗಮನಾರ್ಹವಾಗಿರುತ್ತದೆ. ನಮ್ಮಲ್ಲಿ ಯಾವುದನ್ನೂ ವಯಕ್ತಿಕವಾಗಿ ಬಯಸಿದ್ದು ಕಡಿಮೆ. ಎಲ್ಲ ಕಡೆ ಸಮಷ್ಟಿ. ಕೇವಲ ನನಗಾಗಿಯಲ್ಲ ನಮಗಾಗಿ ಕೊಡು, ಕೇವಲ ನಮಗಾಗಿಯಲ್ಲ, ಈ ಪ್ರಪಂಚದ ಎಲ್ಲಾ ವರ್ಗದ ಜೀವಿಗಳಿಗೂ ಕೊಡು ಎನ್ನುವುದು ನಮ್ಮ ಪ್ರಾಚೀನ ಪರಂಪರೆಯಿಂದ ಕಂಡು ಬರುತ್ತದೆ. ಇದಕ್ಕೆ ಮಹತ್ವದ ಪೂರಕ ದಾಖಲೆ ಸಿಗುವುದು ರುದ್ರನ ಆರಾಧನೆಯಲ್ಲಿ. ಅಥವಾ ರುದ್ರಾಧ್ಯಾಯದಲ್ಲಿ.

ಮಾ ನೋ ಮಹಾಂತಮುತ ಮಾ ನೋ ಅರ್ಭಕಂ ಮಾ ನ ಉಕ್ಷಂತಮುತ ಮಾ ನ ಉಕ್ಷಿತಂ |
ಮಾ ನೋ ವಧೀಃ ಪಿತರಂ ಮೋ ತ ಮಾತರಂ ಮಾ ನಃ ಪ್ರಿಯಾ ಸ್ತನ್ವೋ ರುದ್ರ ರೀರಿಷಃ  ||
ಇದು ಅಂಗೀರಸ ವಂಶದ ಕುತ್ಸನ ಸ್ತುತಿಗಳಲ್ಲಿ ಒಂದು ಇಲ್ಲಿ ಹೇ ರುದ್ರದೇವ ನಮ್ಮಲ್ಲಿರುವ ವಯಸ್ಸಿನಲ್ಲಿ ಮತ್ತು ಜ್ಞಾನದಲ್ಲಿ ಹಿರಿಯರಾದವರನ್ನು ಹಿಂಸಿಸಬೇಡ ಎನ್ನುವುದನ್ನು ’ಮಾ ನೋ ಮಹಾಂತಂ’ ಎನ್ನಲಾಗಿದ್ದು, ಅಂಥವರನ್ನು ವಧಿಸಬೇಡ ಎನ್ನಲಾಗಿದೆ. ’ಉತ ಮಾ ನೋ ಅರ್ಭಕಂ’ ಎಂದು ಹೇಳಿರುವುದು ಚಿಕ್ಕ ಚಿಕ್ಕ ಬಾಲಕರನ್ನೂ ಸಹ ನೀನು ಹಿಂಸಿಸಬೇಡ, ’ಮಾ ನ ಉಕ್ಷಂತಂ’ ಅಂದರೆ, ಯುವಕರನ್ನು, ಪ್ರಜೆಗಳನ್ನು ನಮಗೆ ದೊರಕಿಸಿಕೊಡುವವರು ಎನ್ನುವುದನ್ನೆ ಇಲ್ಲಿ ಉಕ್ಷಂತಂ ಎನ್ನಲಾಗಿದ್ದು, ಅವರನ್ನು ಹಿಂಸೆಗೊಳಪಡಿಸದಿರು ಎನ್ನಲಾಗಿದೆ. ’ಉತ ಮಾ ನ ಉಕ್ಷಿತಂ’ ಎಂದರೆ ಪ್ರಜೋತ್ಪತ್ತಿಕಾರಕರಾದ ಯುವಕರನ್ನೂ ಮತ್ತು ಗರ್ಭಸ್ಥವಾದ ಶಿಶುಗಳನ್ನು ಎನ್ನುವುದನ್ನು ’ಮಾ ನ ಉಕ್ಷಂತಮುತ ಮಾ ನ ಉಕ್ಷಿತಂ’ ಎನ್ನಲಾಗಿದೆ. ’ಮಾ ನೋ ವಧೀಃ ಪಿತರಂ ಮೋ ತ ಮಾತರಂ’ ನನಗೆ ಜನ್ಮಕೊಟ್ಟ ತಂದೆ ತಾಯಿಯರನ್ನೂ ಸಹ ನೀನು ಹಿಂಸಿಸಬೇಡ. 
ಇವಿಷ್ಟೇ ಅಲ್ಲ ಈ ಜಗತ್ತಿನಲ್ಲಿ ಶರೀರಹೊತ್ತು ಜನ್ಮ ತಳೆದ ಯಾವ ಪ್ರಜೆಗಳನ್ನೂ ಸಹ ಹಿಂಸೆಗೊಳಪಡಿಸಬೇಡ ಎನ್ನುವುದು ಈ ಋಕ್ಕಿನ ಅಭಿಲಾಷೆ. 

ಮಾ ನಸ್ತೋಕೇ ತನಯೇ ಮಾ ನ ಆಯೌ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ |
ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತಃ ಸದಮಿತ್ತ್ವಾ ಹವಾಮಹೇ || ಇದು ಋಗ್ವೇದದಲ್ಲಿ ಬರುವ ಋಕ್ಕು. 
ಇಲ್ಲಿ ತೋಕೇ ಎನ್ನುವುದು ಮಕ್ಕಳನ್ನು ಕುರಿತಾಗಿ ಹೇಳಿದ್ದಾಗಿದೆ. ನಮ್ಮ ಪುತ್ರರನ್ನು ಹಿಂಸಿಸಬೇಡ. ಮೊಮ್ಮಕ್ಕಳನ್ನು ಹಿಂಸಿಸಬೇಡ. ’ನ ಆಯೌ ಮಾ’ ಎನ್ನುವುದು ಇಲ್ಲಿ ಇತರ ಎಲ್ಲಾ ಪ್ರಜಾವರ್ಗದವರನ್ನೂ ಸಹ ಹಿಂಸಿಸಬೇಡ. ಗೋವುಗಳನ್ನು, ಕುದುರೆಗಳನ್ನು, ನಮ್ಮ ವೀರರನ್ನೂ ಹೇ ರುದ್ರದೇವ ಕ್ರುದ್ಧನಾಗಿ ಹಿಂಸಿಸಬೇಡ. ನಾವು ಯಾವಾಗಲೂ ಸಹ ಹವಿಸ್ಸುಗಳಿಂದ ನಿನ್ನನ್ನು ಆಹ್ವಾನಿಸಿ ಪೂಜಿಸುತ್ತೇವೆ. ಇಲ್ಲಿ ಎಂತಹ ಮಹತ್ವದ ಸಂದೇಶ ಕಾಣಿಸುತ್ತದೆ. ತನ್ನ ಕುರಿತಾಗಿ ಮಾತ್ರವಲ್ಲದೇ ಸಮಸ್ತ ದೇಶದ ಅಭಿವೃದ್ಧಿಯನ್ನು. ಜನಪರ ಕಾಳಜಿ ವ್ಯಕ್ತವಾಗುತ್ತದೆ.
ಇದನ್ನೇ ಯಜುರ್ವೇದದಲ್ಲಿ 

ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ |
ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ ನಮಸಾ ವಿಧೇಮ ತೇ || ಎಂದು ಹೇಳಲ್ಪಟ್ಟಿದೆ. 
ಹೇ ರುದ್ರದೇವ ನಿನ್ನ ಸ್ವಭಾವವೇ ’ಭಾಮಿತ’ ಅಂದರೆ ಕ್ರೋಧ. ನಮ್ಮ ಮಕ್ಕಳನ್ನೂ ಮೊಮ್ಮಕ್ಕಳನ್ನು ನೀನು ಹಿಂಸೆ ಮಾಡುವವನಲ್ಲ. ಆದರೂ ಸ್ವಭಾವತಃ ಹಿಂಸಿಸಬೇಡ. ಅವರ ಆಯುಷ್ಯಕ್ಕೆ ಕುಂದು ತರಬೇಡ. ನಮ್ಮ ಗೋವುಗಳಿಗೆ ಮತ್ತು ಕುದುರೆಗಳಿಗೆ ಹಿಂಸೆ ನಿನ್ನಿಂದ ಅಗದಿರಲಿ, ವೀರರಾದ ನಮ್ಮ ಜನರನ್ನು ಹಿಂಸೆಗೊಳಪಡಿಸಸದೇ ಸಂರಕ್ಷಿಸು. ನಿನ್ನನ್ನು ಹವಿಸ್ಸುಗಳಿಂದ ಸಂತುಷ್ಟಿಗೊಳಿಸಿ ನಿನ್ನ ಕೃಪೆಗೆ ನವು ಪತ್ರರಾಗುವಂತೆ ಮಾಡು. ಎನ್ನುವ ಈ ಆಶಯ ನನು ಎನ್ನುವದನ್ನು ಗೌಣವಾಗಿಸಿ ಸಮಷ್ಟಿಯನ್ನು ಪ್ರತಿನಿಧಿಸುತ್ತದೆ. 

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತೀಃ |
ಯಥಾ ಶಮಸದ್ದ್ವಿಪದೇ ಚತುಷ್ಪದೇ ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಮ್ ||
ನೀನು ಮಹಾ ಬಲಶಾಲಿಯೂ ಜಟಾಜೂಟಧಾರಿಯೂ ಆದ ಹೇ ಪರಶಿವನಾದ ರುದ್ರದೇವನೇ ಎನ್ನುವುದನ್ನೇ ’ತವಸೇ ಕಪರ್ದಿನೇ’ ಎಂದು ಹೇಳಲಾಗಿದೆ. ಯುದ್ಧದಲ್ಲಿ ವೀರರಾದ ಶತ್ರುಗಳನ್ನು ನಾಶಮಾಡುವವನೂ ಮತ್ತು ಸಂಪದ್ಭರಿತರಾದ ಮತ್ತು ವೀರರಾದ ಮರುದ್ದೇವತೆಗಳನ್ನೇ ಪುತರರನ್ನಾಗಿ ಪಡೆದವನು ಎನ್ನುವುದನ್ನು ಧ್ವನಿಸುವುದು ’ಕ್ಷಯದ್ವೀರಾಯ’ ಎನ್ನುವುದು.
ರುದ್ರ ಎನ್ನುವ ಹೆಸರು ಸ್ವಲ್ಪ ಭಯವನ್ನು ಹುಟ್ಟಿಸುವಂತೆ ಮಾಡುವುದು ನವರಸಗಳಿಂದಾಗಿ ಆದರೆ ಇಲ್ಲಿ ರುದ್ರ ಎನ್ನುವುದು ಹಾಗಲ್ಲ. ಸಂಸಾರದ ದುಖಗಳನ್ನು ನಾಶಮಾಡುವವನು ರುದ್ರ, ತಮಸ್ಸನ್ನು ಪರಿಹರಿಸಿ ಇಷ್ಟಾರ್ಥವನ್ನು ಪರಿಹರಿಸುವವನು. ಮೃಗಶಿರಾ ನಕ್ಷತ್ರದ ಕುರಿತಾದ ಕಥೆಯಲ್ಲಿ ಮೃಗವ್ಯಾಧನೆನ್ನಿಸಿಕೊಂಡ ರುದ್ರನು ಅಲ್ಲಿ ಪ್ರಜಾಪತಿಗೆ ಬಾಣದಿಂದ ಹೊಡೆದು ಪಶ್ಚಾತ್ತಾಪದಿಂದ ಅಳುವುದರಿಂದ ರುದ್ರ ಎನ್ನಿಸಿಕೊಂಡ ಎಂದು ಹೇಳುವುದು ಒಂದಾದರೆ. ದೇವತೆಗಳಿಗೂ ಅಸುರರಿಗೂ ಯುದ್ಧವಾದಾಗ ದೇವತೆಗಳು ಕೂಡಿಟ್ಟ ಸಂಪತ್ತನ್ನು ರುದ್ರನು ಅಡಗಿಸಿಟ್ಟುಕೊಳ್ಳುತ್ತಾನೆ. ದೇವತೆಗಳು ಯುದ್ಧದಲ್ಲಿ ಜಯಿಸಿ ಬಂದು ರುದ್ರನಲ್ಲಿದ್ದ ಸಂಪತ್ತು ಮರಳಿ ಪಡೆದುಕೊಂಡಾಗ ಅಳುವುದರಿಂದ ಸಹ ರುದ್ರ ಎನ್ನುವ ಹೆಸರು ಪಡೆದ ಎಂದು ಹೇಳಲಾಗಿದೆ. ಇಂತಹ ರುದ್ರನಿಗೆ ಸ್ತೋತ್ರಗಳಿಂದ ನಮಸ್ಕರಿಸುತ್ತೇನೆ ಎನ್ನಲಾಗುತ್ತಿದೆ. ಈ ರೀತಿ ಸ್ತೋತ್ರಗಳನ್ನು ಅರ್ಪಿಸುವುದರಿಂದ ಎರಡು ಕಾಲುಗಳುಳ್ಳ ಮನುಷ್ಯರಿಗೂ ಮತ್ತು ನಾಲ್ಕು ಕಾಲುಗಳುಳ್ಳ ಗೋವು ಮತ್ತು ಕುದುರೆಗಳೇ ಮೊದಲಾದ ಪ್ರಾಣಿಗಳಿಗೂ ರೋಗವೇ ಮೊದಲಾದ ಉಪದ್ರವರಹಿತವಾದ ಸುಖವು ಉಂಟಾಗಲಿ, ಈ ಗ್ರಾಮದಲ್ಲಿ ಮನುಷ್ಯರು ಮತ್ತು ಎಲ್ಲಾ ಪ್ರಾಣಿವರ್ಗವು ರೋಗರಹಿತರಾಗಿ ಪುಷ್ಟಿಯುಕ್ತರಾಗಲಿ ಎಂದು ಈ ಸ್ತೋತ್ರವನ್ನು ಅರ್ಪಿಸುತ್ತಿದ್ದೇನೆ. ಅಂದರೆ ಇಲ್ಲಿ ನನನಗಾಗಿ ಅಲ್ಲ ಇಡೀ ಗ್ರಾಮಕ್ಕಾಗಿ ಗ್ರಾಮದ ಸಕಲ ಜೀವಿಗಳಿಗಾಗಿ ಪ್ರಾರ್ಥನೆ ಕಂಡುಬರುತ್ತದೆ.
ಮೂಲ:ಸದ್ಯೋಜಾತ ಭಟ್

No comments:

Post a Comment

If you have any doubts. please let me know...