May 27, 2020

ದಾಸರೋ ನಾವೆಲ್ಲ ಶುನಕನಂದದಿ ಜಗದ । ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥ ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು । ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ

ಶುನಕ ಎಂದರೆ . . . . . . 

ದಾಸರೋ ನಾವೆಲ್ಲ ಶುನಕನಂದದಿ ಜಗದ ।
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು ।
ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ
 ಎನ್ನುವುದಾಗಿ ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳುತ್ತಾರೆ. ಇಲ್ಲಿನ ಶುನಕ ಶಬ್ದ ನಾಯಿಯನ್ನೇ ಸೂಚಿಸುತ್ತದೆ. ಈ ಹಿಂದೆ ನಾನು ಶುನಃಶೇಪನ ಕುರಿತಾಗಿ ಬರೆದಿದ್ದೆ. ಅಲ್ಲಿ ಶುನಃಪುಚ್ಚ, ಶುನಃಶೇಪ, ಮತ್ತು ಶುನಃಲಾಂಗೂಲ ಎನ್ನುವ ಮೂವರಲ್ಲಿ ಶುನಃಶೇಪನ ಬಲಿ ಪ್ರಸಂಗವನ್ನು ಬರೆದಿದ್ದೆ. ಆಗ ಈ ಶಬ್ದದ ಕುರಿತಾಗಿ ಅನೇಕರು ಶುನಃಶೇಪ ಅನ್ನುವುದು ನಾಯಿಯಬಾಲ ಎಂದಾಗುತ್ತದೆ ಎನ್ನುವ ಪ್ರತಿಕ್ರಿಯೆ ಬರೆದಿದ್ದರು. ನಾನು ಅದನ್ನೇ ಇಂದು ಪುನಃ ಬರೆಯುತ್ತಿದ್ದೇನೆ.
ಶುನಕ, ಶ್ವಾ, ಶ್ವಾನ ಇತ್ಯಾದಿ ಪದಗಳು ಬಂದಾಗ ನಮಗೆ ಮೊದಲು ನೆನಪಾಗುವುದೇ ನಾಯಿಯದ್ದು. ಆದರೆ ಇಲ್ಲಿ “ಶುನ” ಎನ್ನುವ ಪದವನ್ನು ಅರಸುತ್ತಾ ನಾವು ಹೋದಾಗ ಅನೇಕ ಅರ್ಥಗಳು ಸಿಗುತ್ತಾ ಹೋಗುತ್ತವೆ.
ಶುನಂ ಹುವೇಮ ಮಘವಾನಮಿಂದ್ರಮಸ್ಮಿನ್ಭರೇ ನೃತಮಂ ವಾಜಸಾತೌ |
ಶೃಣ್ವಂತಮುಗ್ರಮೂತಯೇ ಸಮತ್ಸು ಘ್ನಂತಂ ವೃತ್ರಾಣಿ ಸಂಜಿತಂ ಧನಾನಾಂ || ಇಂದ್ರನನ್ನು ಕುರಿತಾಗಿ ಪ್ರಾರ್ಥಿಸಿಕೊಳ್ಳುವ ಋಕ್ ಇದು. ನಮ್ಮ ಜೀವನಕ್ಕಾಗಿ (ಆಹಾರಕ್ಕಾಗಿ) ನಡೆಯುವ ಯುದ್ಧದಲ್ಲಿ ನಮಗೆ ಸುಖವನ್ನು ಕೊಡುವವನೂ, ಧನವನ್ನು ಹೊಂದಿರುವ ಐಶ್ವರ್ಯ ಹೊಂದಿರುವವನೂ, ನಮ್ಮೆಲರ ನಾಯಕತ್ವವನ್ನು ಹೊಂದಿರುವವನೂ, ನಾವು ಹಾಡಿಹೊಗಳುವ ಸ್ತುತಿಗಳನ್ನು ಆಲಿಸುವವನೂ, ಶತ್ರುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯುಳ್ಳವನೂ, ವೃತ್ರನೇ ಮೊದಲಾದ ಅಸುರರನ್ನು ಎದುರಿಸಿ ಸಂಹಾರಮಾಡಬಲ್ಲವನೂ, ಶತ್ರುಗಳಲ್ಲಿರುವ ನಮ್ಮ ಸಂಪತ್ತು ಪುನಃ ನಮಗೆ ದೊರಕುವಂತೆ ಮಾಡುವವನೂ ಆದ ಇಂದ್ರನೇ ನಿನ್ನನ್ನು ನಮ್ಮ ರಕ್ಷಣೆಗಾಗಿ ಆಹ್ವಾನಿಸುತ್ತಿದ್ದೇನೆ ಎನ್ನುವ ತಾತ್ಪರ್ಯ ಈ ಋಕ್ಕಿನದ್ದು. ಇಲ್ಲಿ ಶುನಂ ಎನ್ನುವುದನ್ನು ವೃದ್ಧಿಯನ್ನು ಹೊಂದತಕ್ಕವನೂ ಸುಖವನ್ನು ಕೊಡುವವನಾದ ಇಂದ್ರನ ಕುರಿತಾಗಿ ಹೇಳಲಾಗಿದೆ. ಶುನ ಎನ್ನುವ ಶಬ್ದವನ್ನು ಅಲ್ಲಲ್ಲಿ ಹೇಳಿರುವುದು ಸುಖ ಮತ್ತು ಸಂತೋಷವನ್ನು ಕುರಿತಾಗಿದ್ದು ಇಲ್ಲಿ ಪ್ರಾಣಿಯನ್ನು ಕುರಿತಾಗಿಯಲ್ಲ.
ಋಗ್ವೇದದ 7ನೇ ಮಂಡಲದ 70ನೇ ಸೂಕ್ತದ ಒಂದನೇ ಋಕ್ಕನ್ನು ಈಗ ಗಮನಿಸೋಣ.
ಆ ವಿಶ್ವವಾರಾಶ್ವಿನಾ ಗತಂ ನಃ ಪ್ರ ತತ್ಸ್ಥಾ ನಮವಾಚಿವಾಂ ಪ್ರಥಿವ್ಯಾಂ |
ಆಶ್ವೋ ನ ವಾಜೀ ಶುನ ಪೃಷ್ಠೋ ಅಸ್ಥಾದಾ ಯತ್ಸೇದಥುರ್ಧ್ರುವಸೇ ನ ಯೋನಿಂ ||
ಜಗತ್ತಿನ ಎಲ್ಲಾ ಜನರ ಗೌರವಾದರಗಳಿಗೆ ಪಾತ್ರರಾದ ಅಶ್ವಿನೀ ದೇವತೆಗಳೇ, ನಮ್ಮ ಯಾಗಶಾಲೆಗೆ ಬನ್ನಿ, ಈ ಜಗತ್ತಿನಲ್ಲಿ ಈ ಯಾಗಶಾಲೆ ನಿಮಗಾಗಿಯೇ ನಿರ್ಮಿಸಲ್ಪಟ್ಟಿದೆ ಎಂದು ಪ್ರಸಿದ್ಧವಾಗಿದೆ. ಶಾಶ್ವತವಾದ ವಾಸಕ್ಕಾಗಿ ಮನೆಯನ್ನು ಆಶ್ರಯಿಸಿರುವಂತೆ, ಯಾವ ಕುದುರೆಯನ್ನು ನೀವು ಹತ್ತಿ ಕುಳಿತುಕೊಳ್ಳುವಿರೋ ಅಂತಹ ಸುಖಕರವಾದ ಪೃಷ್ಠಭಾಗವುಳ್ಳದ್ದು ಹಾಗೂ ವೇಗವಾಗಿ ಸಂಚರಿಸುವ ಕುದುರೆಯು ನಿಮ್ಮ ಸಮೀಪದಲ್ಲಿರಲಿ. ಎಂದು ಹೇಳುತ್ತಾ " ಶುನಪೃಷ್ಠಾ" ಎನ್ನುವುದನ್ನು ಇಲ್ಲಿ ಕುದುರೆಯ ವಿಶಾಲವಾದ ಪೃಷ್ಠ ಭಾಗವನ್ನು ಕುರಿತಾಗಿ ಹೇಳಲಾಗಿದೆ. ಕುದುರೆಯ ಪೃಷ್ಠಭಾಗವು ವಿಸ್ತಾರವಾಗಿದ್ದರೆ ಅದು ಸುಖಕರವಾಗಿರುತ್ತದೆ ಎಂದು ಶುನ ಎನ್ನುವ ಪದವನ್ನು ಇಲ್ಲಿ ಸುಖಕರ ಎನ್ನುವ ಅರ್ಥದಲ್ಲಿ ಬಳಸಲಾಗಿದೆ.
ಇನ್ನು ಋಗ್ವೇದದ ಆರನೇ ಮಂಡಲಕ್ಕೆ ಬಂದರೆ ಅಲ್ಲಿ 33ನೇ ಸೂಕ್ತದ ದೃಷ್ಟಾರ ಋಷಿಯ ಹೆಸರು ಶುನಹೋತ್ರ ಎನ್ನುವುದಾಗಿ.
ಇನ್ನು ಋಗ್ವೇದದ 4ನೇ ಮಂಡಲದ 57ನೇ ಸೂಕ್ತದಲ್ಲಿ
ಶುನಂ ವಾಹಾಃ ಶುನಂ ನರಃ ಶುನಂ ಕೃಷತು ಲಾಂಗಲಂ |
ಶುನಂ ವರತ್ರಾ ಬಧ್ಯಂತಾಂ ಶುನಮಷ್ಟ್ರಾಮುದಿಂಗಯ || ಎನ್ನುವುದಾಗಿ ಬರುತ್ತದೆ. ಭಾರವನ್ನು ಹೊರುವ ಎತ್ತುಗಳು ಸುಖಕರವಾಗಿ ಭಾರವನ್ನು ಹೊತ್ತೊಯ್ಯಲಿ, ಕೃಷಿಕರಾದ ಮನುಷ್ಯರು ತಮ್ಮ ಕೃಷಿ ಕೆಲಸಗಳನ್ನು ಸುಖವಾಗಿ ಮಾಡಲಿ, ಉಳುವ ಸಾಧನವಾದ ನೇಗಿಲು ಸುಖವಾಗಿ ಉಳುವಂತಾಗಲಿ. ಎತ್ತಿಗೆ ಹಾಕಿರುವ ಮೂಗುದಾರಗಳು ಅವುಗಳಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದೇ ಸುಖವಾಗಿರಲಿ. ಇಲ್ಲಿ ಶುನಂ ಎನ್ನುವುದು ಸುಖವನ್ನು ಮತ್ತು ಆರಾಮದಾಯಕವನ್ನು ಸ್ಪಷ್ಟಪಡಿಸುತ್ತದೆ.
ಆಶ್ವಲಾಯನ ಶ್ರೌತ ಸೂತ್ರದಲ್ಲಿ ಶುನಾಸೀರೀಯ ಸವನ ಎನ್ನುವ ಯಾಗವೊಂದರ ಉಲ್ಲೇಖ ಸಿಗುತ್ತದೆ. ಆ ಯಾಗದ ಕೊನೆಯಲ್ಲಿ
ಶುನಂ ನಃ ಫಾಲಾ ವಿ ಕೃಷಂತು ಭೂಮಿಂ ಶುನಂ ಕೀ ನಾಶಾ ಅಭಿಯಂತು ವಾಹೈಃ |
ಶುನಂ ಪರ್ಜನ್ಯೋ ಮಧುನಾ ಪಯೋಭಿಃ ಶುನಾಸೀರಾ ಶುನಮಸ್ಮಾಸು ದತ್ತಂ ||
ನೇಗಿಲು ಮೊದಲಾದ ಉಳುವ ಸಾಧನಗಳು ಸುಖವಾಗಿ ಉಳಲಿ, ರೈತರು ತಮ್ಮ ಎತ್ತುಗಳೊಡನೆ ತಮ್ಮ ಕೆಲಸಗಳಿಗಾಗಿ ಹೊಲಕ್ಕೆ ಹೋಗಿ ಸುಖವಾಗಿ ಕೆಲಸ ಮಾಡಿಕೊಳ್ಳಲಿ, ಪರ್ಜನ್ಯನು ಉತ್ತಮವಾದ ಮಳೆ ಬರುವಂತೆ ಮಾಡಲಿ ಹೀಗೆ ಶುನಾಸೀರ ದೇವತೆಗಳೇ ನಮಗೆ ಸುಖವನ್ನು ಉಂಟುಮಾಡಿರಿ ಎಂದು ಹೇಳುತ್ತಾ ಇಲ್ಲಿ ಶುನ ಎನ್ನುವ ಶನ್ದವನ್ನು ಸುಖ ಎನ್ನುವ ಪದಕ್ಕೆ ಕೊಡಲಾಗಿದೆ.
ಶುನಾಖ್ಯೋ ವಾಯ್ವಿಂದ್ರಯೋರನ್ಯತಮಃ ಎನ್ನುವುದಾಗಿ ಸುಖಕೃದ್ದೇವಃ ಎನ್ನುವುದಾಗಿ ಸಾಯಣಾಚಾರ್ಯರ ಅಭಿಮತ. ವಾಯು ಮತ್ತು ಇಂದ್ರನನ್ನೇ ಶುನ ಎಮ್ದು ಕರೆಯಲಾಗಿದೆ ಎನ್ನುತ್ತಾರೆ.
"ದ್ಯುದೇವಃ ಶುನದೇವತಾ" ಇತಿ ಶೌನಕಃ | ಶುನ ಎಂದರೆ೩ ದೇವಲೋಕದಲ್ಲಿರುವ ಇಂದ್ರ ವಾಯು ಮತ್ತು ಸೂರ್ಯನೂ ಶುನ ಎನ್ನುವ ದೇವತೆಯೇ ಎನ್ನುವುದು ನಿರುಕ್ತದ ಮಾತು.
ಆದರೆ ನಿರುಕ್ತಕ್ಕೆ ವ್ಯತಿರಿಕ್ತವಾಗಿ "ವಾಯುಃ ಶುನಃ ಸೂರ್ಯ ಏವಾತ್ರ ಸೀರಃ" ಎನ್ನುವುದಾಗಿ ಬೃಹದ್ದೇವತಾದಲ್ಲಿದೆ ಅಲ್ಲಿ ವಾಯುವನ್ನು ಮಾತ್ರವೇ ಶುನಃ ಎಂದು ಕರೆಯಲಾಗಿದೆ. ಈ ಶುನಃ ಶಬ್ದವು ಸಂದರ್ಭಕ್ಕನುಸಾರವಾಗಿ ಮಾತ್ರವೇ ಪ್ರಾಣಿಗೆ ಹೇಳಬಹುದೇ ವಿನಃ ಶುನ ಎನ್ನುವುದು ಪ್ರಮುಖವಾಗಿ ಸೌಖ್ಯವನ್ನು ಸಂಪತ್ತನ್ನು ಸುಖವನ್ನು ಸೂಚಿಸುತ್ತದೆ. ತೈತ್ತಿರೀಯ ಸಂಹಿತೆಯಲ್ಲಿಯೂ ಸಹ ಅದೇ ಅರ್ಥವನ್ನಿ ಕೊಟ್ಟು ಶುನಃ ಎನ್ನುವುದು ವಾಯು ಮತ್ತು ಸೀರ ಎನ್ನುವುದು ಇಂದ್ರ ಅಥವಾ ಸೂರ್ಯ ಎನ್ನಲಾಗಿದೆ. ಶುನಃಸೀರೀಯ ಯಾಗವು ಚಾತುರ್ಮಾಸ್ಯದ ಪರಿಪೂರ್ಣತೆಗೆ ಮೊದಲೆಲ್ಲಾ ಮಾಡುವ ಯಾಗವಾಗಿತ್ತು ಎನ್ನಲಾಗಿದೆ.
ಇನ್ನು ನಮ್ಮ ಪ್ರಾದೇಶಿಕ ಕನ್ನಡದಲ್ಲಿಯಂತೂ ಶುನಕ ನಾಯಿಯಾಗಿಯೇ ಸಿಗುತ್ತದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ "ಸ್ವರಾಗ ಸಂತತಿ ಶುನಕಗೋಷ್ಠಿಯೊಳು" ಎನ್ನುವ ಉಲ್ಲೇಖ ಸಿಗುತ್ತದೆ. ಪಾರ್ಶ್ವನಾಥ ಪುರಾಣದಲ್ಲಿ " ನೋಡದಲ್ ಶುನಕಂ ಕೂರ್ತುಂ ಎನ್ನುವುದಾಗಿ ಬರುತ್ತದೆ, ಹೀಗೇ ಸಾಮಾನ್ಯವಾಗಿ ಕನ್ನಡದಲ್ಲಿಯೂ ನಾಯಿಯನ್ನು ಶುನಕ ಎನ್ನುವುದಾಗಿಯೇ ಅನೇಕ ಕಡೆಗಳಲ್ಲಿ ಹೇಳಲಾಗಿದ್ದರೂ ಶುನಕದ ಮೂಲ ಹುಡುಕಿದರೆ ಅದು ಸಂಸ್ಕೃತದಲ್ಲಿ ನಾಯಿ ಮರಿಯನ್ನು ಕುರಿತಾಗಿ ಸಿಗುತ್ತದೆ. ಇನ್ನು ವೇದದಲ್ಲಿ ನಾಯಿಯ ನಿರ್ದೇಶನಕ್ಕೆ ಸರಮೆ ಮತ್ತು ಸಾರಮೇಯ ಪದ ಬಳಕೆ ಕಾಣ ಸಿಗುತ್ತದೆ. ಅದೇನೇ ಇರಲಿ ಶುನ ಅಥವಾ ಶುನಕ ಎನ್ನುವುದು ಸುಖಕರವಾದ ಎನ್ನುವುದೇ ಶುನಃಶೇಪಕ್ಕೆ ಸಮಂಜಸ ಎನ್ನಿಸುತ್ತದೆ.
ಮೂಲ:ಸದ್ಯೋಜಾತರು

No comments:

Post a Comment

If you have any doubts. please let me know...