ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ||
ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ
ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ
ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ
ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ
January 28, 2026
January 21, 2026
ರಥಸಪ್ತಮಿ ವಿಶೇಷ
ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯನೇ ಆಗಿರುವುದರಿಂದ, ಈ ದಿನ ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ.
ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.
ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.
ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.
ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.
ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.
ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು.
ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನು ಕೂಡ ಅಗಸ್ತ್ಯರ ಉಪದೇಶದಂತೆ 'ಆದಿತ್ಯ ಹೃದಯ' ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ 'ಶ್ಯಮಂತಕಮಣಿ' ಪಡೆದ ಸತ್ರಾಜಿತ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ 'ಸೂರ್ಯ ಶತಕ'ವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.
ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.
ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ.
ರಥ ಸಪ್ತಮಿಯು ಯಾವಾಗಲೂ ಅರುಣುದೋಯವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಏಳು ಎಕ್ಕದ ಎಲೆಯನ್ನು ತಲೆ, ಹೆಗಲು, ಮೊಣಕಾಲು, ಬೆನ್ನು ಮತ್ತು ಉದರದ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -
ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ ||
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ|| ೩ ||
ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)
ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -
ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನೀಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.
ಸೂರ್ಯಾರ್ಘ್ಯ ಮಂತ್ರ -
ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.
ಸಪ್ತಮೀ ಅರ್ಘ್ಯಮಂತ್ರ -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ|
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||
ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.
ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದವಾಗುತ್ತದೆ.
ಉಡದಾರ (ಸೊಂಟದ ದಾರ) ಕಟ್ಟುವ ಉದ್ದೇಶ
ನಮ್ಮ ಹಿರಿಯರು ಏನೇ ಮಾಡಿದರೂ ಅದರಲ್ಲಿ ಒಂದು ಅರ್ಥವಿರುತ್ತದೆ ಆದರೆ ಹಿಂದೆಲ್ಲ ಅವಿದ್ಯಾವಂತರು ಹೆಚ್ಚಾಗಿ ಇರುತ್ತಿದ್ದರು. ಹಿರಿಯರು ಏನು ಹೇಳಿದರು ಅದನ್ನ ಚಾಚು ತಪ್ಪದೇ ಏನು ಎಂತೆಲ್ಲ ಪ್ರಶ್ನಿಸದೆ ಪಾಲಿಸುತ್ತಿದ್ದರು. ಭಾರತೀಯರಲ್ಲಿ ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ದಾರವನ್ನೇಕೆ ಕಟ್ಟುತ್ತಾರೆ.
ಇದರ ಹಿಂದಿನ ಮಹತ್ವವೇನು:-
ನಮ್ಮ ಪೂರ್ವಜರು ಅಥವ ಹಿರಿಯರು ಏನೇ ಮಾಡಿದರೂ ಅದರಲ್ಲಿ ಒಂದು ಅರ್ಥವಿರುತ್ತದೆ ಆದರೆ ಹಿಂದೆಲ್ಲ ಅವಿದ್ಯಾವಂತರು ಹೆಚ್ಚಾಗಿ ಇರುತ್ತಿದ್ದರು. ಹಿರಿಯರು ಏನು ಹೇಳಿದರು ಅದನ್ನ ಚಾಚು ತಪ್ಪದೇ ಏನೇ ಎಂತೆಲ್ಲ ಪ್ರಶ್ನಿಸದೆ ನಿಮ್ಮ ಬೆಂಬಲವನ್ನು ತೋರಿಸಿ ? ಪಾಲಿಸುತ್ತಿದ್ದರು. ಆದರೆ ನಮ್ಮ ಯುವ ಪೀಳಿಗೆ ವಿದ್ಯಾವಂತರು ನಾಗರೀಕರಾಗಿರುವ ಕಾರಣ ಯಾವುದನ್ನು ಏತ್ತಕ್ಕೆ ಪಾಲಿಸಬೇಕು ಎಂಬ ಪ್ರಶ್ನೆಗಳು ಮೂಡುತ್ತದೆ ಅದರಲ್ಲಿ ಇದು ಕೂಡ ಒಂದು ಎಂದು ಹೇಳಬಹುದು.
ಹಿಂದೂ ಸಂಪ್ರದಾಯದಲ್ಲ ಪುಟ್ಟ ಮಕ್ಕಳಾದರೂ ಸರಿಯೇ ಗಂಡು ಮಕ್ಕಳಿಗೆ ಸೊಂಟಕ್ಕೆ ಕಪ್ಪು ಅಥವಾ ಕೆಂಪು ಬಣ್ಣದ ದಾರಗಳನ್ನು ಕಟ್ಟುತ್ತಾರೆ ಅಥವಾ ಬೆಳ್ಳಿಯ ದಾರ ಚೈನ್ಗಳನದ್ರೂ ಹಾಕಿರುತ್ತಾರೆ. ಸೊಂಟಕ್ಕೆ ಕಟ್ಟುವ ಈ ದಾರವನ್ನ ನಮ್ಮ ಆಡುಭಾಷೆಯಲ್ಲಿ ಉಡದಾರ ವಿಸ್ತಾರವಾಗಿ ನೋಡುವುದಾದರೆ ಉದರದ ದಾರ ಎಂದರೆ ಹೊಟ್ಟೆ ಉದರದ ಕೆಳಗೆ ಕಟ್ಟುವಂತಹ ದಾರ ಇದು ಆಡು ಭಾಷೆಯಾಗಿ ಉಡದಾರ ಎಂದು ಕರೆಯುತ್ತಾರೆ.
ಹಾಗಿದ್ದರೆ ಗಂಡು ಮಕ್ಕಳು ಸೊಂಟಕ್ಕೆ ಕಟ್ಟುವ ದಾರದಿಂದ ಯಾವೆಲ್ಲ ಅನುಕೂಲಗಳಿವೆ ಎಂದು ನೋಡೋಣ.
1) ಗಂಡು ಮಕ್ಕಳು ಸೊಂಟಕ್ಕೆ ದಾರವನ್ನು ಕಟ್ಟುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿಗಳು ಕೆಟ್ಟ ದೃಷ್ಟಿಗಳು ಬೀಳುವುದಿಲ್ಲ ಎಂಬ ನಂಬಿಕೆ ಎಂಬುದು ಇದೆ.
2) ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ದೇಹದ ತೂಕವನ್ನ ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಾಯಕ ಹೇಗೆಂದರೆ ಸೊಂಟಕ್ಕೆ ದಾರ ಕಟ್ಟಿದ ನಂತರ ದಾರ ಸಡಿಲಗೊಂಡರೆ ದೇಹದ ತೂಕ ಕಡಿಮೆಯಾಗಿದೆ ಎಂದರ್ಥ ಸೊಂಟದ ದಾರ ಬಿಗಿಯಾದರೆ ದೇಹದ ತೂಕ ಹೆಚ್ಚಾಗಿದೆ ಎಂದರ್ಥ.
3) ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ಅಥವಾ ಕೆಂಪು ದಾರವನ್ನು ಕಟ್ಟುವುದರಿಂದ ದೇಹದಲ್ಲಿ ವಾತ ಪಿತ್ತ ಮತ್ತು ಕಫವನ್ನು ಸರಿದೂಗಿಸುತ್ತದೆ ದೇಹದ ತೂಕ ಕಳೆದುಕೊಳ್ಳಲು ಯಾವುದೋ ಬೆಲ್ಟ್ ಈ ರೀತಿಯಾ ವಸ್ತುಗಳನ್ನು
ಬಳಸಿಯುವುದಕ್ಕಿಂತಲೂ ಸೊಂಟಕ್ಕೆ ದಾರವನ್ನು ಕಟ್ಟುವುದರಿಂದ ದೇಹದಲ್ಲಿ ಜೀರ್ಣಕ್ರಿಯ ಪ್ರಕ್ರಿಯೆ ಎಂಬುದನ್ನು ವೃದ್ಧಿಸುತ್ತದೆ.
4) ಸೊಂಟಕ್ಕೆ ಕಪ್ಪು ದಾರ ಕಟ್ಟುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ಆಗಲು ಸಹಾಯಕರ ಮತ್ತು ಮೂತ್ರಪಿಂಡ, ಮೂತ್ರನಾಳಗಳಂ ಆರೋಗ್ಯಕ್ಕೂ ಕೂಡ ಉತ್ತಮವಾದದು.
5) ಅದಷ್ಟೇ ಅಲ್ಲದೆ ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ಅರ್ನಿಯ ಎಂದರೆ ಅಂಡವಾಯು ಎಂಬ ಸಮಸ್ಯೆಯಿಂದ ದೂರವಿಡುತ್ತದೆ.
6) ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟುವುದರಿಂದ ಬೆನ್ನು ಮೂಳೆಯ ಆರೋಗ್ಯಕ್ಕೂ ಕೂಡ ಉತ್ತಮ ಸೊಂಟಕ್ಕೆ ಒಂದು ರೀತಿಯ ಭದ್ರತೆಯನ್ನು ನೀಡುತ್ತದೆ.
7) ಅತಿಯಾಗಿ ತಿನ್ನುವುದನ್ನು ಹಿಡಿತದಲ್ಲಿಡುತ್ತದೆ ಎಂದರೆ ಕೆಲವರು ಅತಿಯಾಗಿ ಸೊಂಟಕ್ಕೆ ದಾರವನ್ನ ಕಟ್ಟುವುದರಿಂದ ಇದು ಸಮತೋಲನಕಾರಿಯಾಗಿ ಕಾಪಾಡಿಕೊಳ್ಳಲು ಸಹಾಯಕಾರಿಯಾಗಿರುತ್ತದೆ.
8) ಉದರದ ದಾರ ಕಟ್ಟುವುದರಿಂದ ಫರ್ಟಿಲಿಟಿ ಎಂದರೆ ಫಲವತ್ತತೆಯನ್ನ ಹೆಚ್ಚಿಸುವಲ್ಲಿ ಸಹಾಯಕಾರಿ.
9) ಇತ್ತಿಚ್ಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕಾಲು ಮತ್ತು ಕೈಗಳಲ್ಲಿಗೆ ಕಪ್ಪು ದಾರ ಹಾಕಿಕೊಳ್ಳುತ್ತಾರೆ ಕೆಟ್ಟ ದೃಷ್ಟಿಗಳು ಬಿಳುಬಾರದು ಎಂದು ಹಾಕಿಕೊಳ್ಳುಲಾಗುತ್ತದೆ.
ಇದರಿಂದಲೇ ನಾವು ಅರಿಯಬವುದು ನಮ್ಮ ಹಿರಿಯರು ಪದ್ಧತಿಗಳಿಂದ ಎಷ್ಟೆಲ್ಲಾ ಉಪಯೋಗಗಳಿವೆ ಅವು ಕೇವಲ ಮೂಢನಂಬಿಕೆ ಮಾತ್ರವಲ್ಲ ಅದರ ಸಾಕಷ್ಟು ಆರೋಗ್ಯಕರ ಲಾಭಗಳು ಕೂಡ ಇದೆ ಎಂದು ವೀಕ್ಷಕರೇ ಇಂದಿನ ಮಕ್ಕಳಿಗೆ ತಿಳಿಸಬೇಕಿದೆ.
ಗಂಡು ಮಕ್ಕಳು ಸೊಂಟಕ್ಕೆ ಮುಖ್ಯವಾಗಿ ಕಪ್ಪು ದಾರವನ್ನು ಕಟ್ಟುವುದರ ಹಿಂದಿನ ಮಹತ್ವವನ್ನು ತಿಳಿದುಕೊಂಡಿದ್ದೇವೆ.
January 9, 2026
ಅಷ್ಟಾಂಗ ತೀರ್ಥ
ಆದ್ಯಂ ಕಾಯವಿಶುದ್ಧ್ಯರ್ಥಂ ದ್ವಿತೀಯಂ ಧರ್ಮಸಾಧನಮ್ |
ತೃತೀಯಂ ಮೋಕ್ಷದಂ ಪ್ರೋಕ್ತಮೇವಂ ತೀರ್ಥ೦ ತ್ರಿಧಾಪಿಬೇತ್ ||
[ಮೊದಲನೆಯದು ಶರೀರಶುದ್ಧಿಗೆ,
ಎರಡನೆಯದು ಧರ್ಮಸಾಧನೆಗೆ,
ಮೂರನೆಯದು ಮೋಕ್ಷ ಪಡೆಯಲು - ಹೀಗೆ ಮೂರು ಬಾರಿ ತೀರ್ಥಪ್ರಾಶನ ಮಾಡಬೇಕು.]
ಇಂತಹ ಪವಿತ್ರವಾದ ತೀರ್ಥಕ್ಕೆ 'ಅಷ್ಟಾಂಗತೀರ್ಥ'ವೆನ್ನುತ್ತಾರೆ.
ಶಿಲಾ ತಾಮ್ರಂ ತಥಾ ತೋಯಂ ಶಂಖ: ಪುರುಷಸೂಕ್ತಮ್ |
ಗಂಧೋ ಘಂಟಾ ಚ ತುಲಸೀತ್ಯಷ್ಟಾಂಗಂ ತೀರ್ಥಮುಚ್ಯತೇ ॥
ಶಾಲಿಗ್ರಾಮ, ತಾಮ್ರ ಪಾತ್ರ, ಶಂಖದಲ್ಲಿಟ್ಟ ಸ್ವಚ್ಛ ನೀರು, ಪುರುಷ ಸೂಕ್ತ ಮಂತ್ರದ ಪಾಠ, ಗಂಧ, ಘಂಟಾನಾದ ಮತ್ತು ತುಲಸಿ ಇವುಗಳಿಂದ ಸಿದ್ಧವಾದುದೇ “ಅಷ್ಟಾಂಗತೀರ್ಥವು
ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ
1. ತೀರ್ಥವನ್ನು ಬಲಗೈಯಲ್ಲಿಯೇ ಸ್ವೀಕರಿಸಬೇಕೆಂಬುದು ನಿಯಮ.
2. ಕೈಕೆಳಗೆ ವಸ್ತ್ರವೊಂದನ್ನು ಇಲ್ಲವೇ ಉತ್ತರೀಯವನ್ನು, (ಸ್ತ್ರೀಯರು ತಮ್ಮ ಸೀರೆಯ ಸೆರಗಿನ ತುದಿಯನ್ನು) ಹಿಡಿದಿರಬೇಕು. ಇದರ ಉದ್ದೇಶವೇನೆಂದರೆ, ಸ್ವೀಕರಿಸುವಾಗ ಅಥವಾ ಪ್ರಾಶನ ಮಾಡುವಾಗ ತೀರ್ಥವು ಕೆಳಗೆ ಬೀಳದಂತೆ ಎಚ್ಚರ ವಹಿಸುವುದಾಗಿದೆ.
2. ತೀರ್ಥವನ್ನು ಸ್ವೀಕರಿಸುವಾಗ ನಮ್ಮ ತೋರುಬೆರಳನ್ನು ಹೆಬ್ಬೆರಳಿನ ಅಂತಿಮ ರೇಖೆಗೆ ಮುಟ್ಟುವಂತೆ ಮಡಿಸಿ ಅದರ ಮೇಲೆ ಹೆಬ್ಬೆರಳನ್ನು ಮಡಿಚಿಡಬೇಕು. ಉಳಿದ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಮೇಲಿರುವಂತೆ, ನಂತರ ಉಂಗುರದ ಬೆರಳು ಮತ್ತು ಕೊನೆಯಲ್ಲಿ ಕಿರುಬೆರಳಿರುವಂತೆ ನೇರವಾಗಿ ಚಾಚಿರಬೇಕು.
4. ಪ್ರಪ್ರಥಮವಾಗಿ ತೀರ್ಥವನ್ನು ತಲೆಯಮೇಲೆ ಪ್ರೋಕ್ಷಿಸಿಕೊಳ್ಳಬೇಕು.
5. ಮುಂಜಾನೆ ಸಂಧ್ಯಾವಂದನೆ ;ದೇವರಪೊಜೆ ನಂತರ ಆಹಾರ ಸೇವನೆಗೂ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.(ಸಾತ್ವಿಕ ಆಹಾರ ಇದ್ದಲ್ಲಿ ಅಡ್ಡಿ ಇಲ್ಲ )
6. ಮಹಾಪೂಜೆ ಯಲ್ಲೂ ಸಹ ಊಟದ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು. ಏಕಾದಶಿಯಂದು ಒಂದೇ ಸಲ ತೀರ್ಥ ಪ್ರಾಶನ ಮಾಡಬೇಕು)
7. ತೀರ್ಥಗಳನ್ನು ಪ್ರಾಶನ ಮಾಡಿದ ನಂತರ ಕೈಯಲ್ಲಿ ಉಳಿದಿರುವ ತೇವಾಂಶವೂ ನಷ್ಟವಾಗದಂತೆ ನೆತ್ತಿಯ ಮೇಲೆ ಸವರಿಕೊಳ್ಳಬೇಕು, ಇಲ್ಲವಾದರೆ ಕೈಗಳ ಕೆಳಗೆ ಹಿಡಿದಿದ್ದ ವಸ್ತ್ರದಿಂದ ಅದನ್ನು ಒತ್ತಿಕೊಂಡು ಒರೆಸಿಕೊಳ್ಳಬೇಕು.
8. ತೀರ್ಥವನ್ನು ಸ್ವೀಕರಿಸುವಾಗ ದೇಹವನ್ನು ಬಗ್ಗಿಸಿರಬೇಕು. ಇದು ದೇವರ ಅಭೀಷೇಕದ ತೀರ್ಥಕ್ಕೆ ನಾವು ನೀಡುವ ಗೌರವ ಮತ್ತು ತೋರುವ ಭಕ್ತಿಯ ಸಂಕೇತವಾಗಿರುತ್ತದೆ.
9. ಮೂರು ತೀರ್ಥಗಳ ಸಾಂಕೇತಿಕ ವಿವರಣೆ:
ಪ್ರಥಮಂ ಕಾಯಶುದ್ಧ್ಯರ್ಥಂ
ದ್ವಿತೀಯಂ ಧರ್ಮಸಾಧನಂ
ತೃತೀಯಂ ಮೋಕ್ಷಸಿದ್ಧ್ಯರ್ಥಂ
ಏವಂ ತೀರ್ಥಂ ಪಿಬೇತ್||
ಅರ್ಥ: ಮೊದಲನೆಯದು ಕಾಯ ಅಥವಾ ದೇಹ ಶುದ್ಧಿಗಾಗಿ; ಎರಡನೆಯದು ಧರ್ಮಸಾಧನೆಗಾಗಿ ಮತ್ತು ಮೂರನೆಯದು ಮೋಕ್ಷಸಿದ್ಧಿಗಾಗಿ ಈ ತೀರ್ಥಗಳನ್ನು ಕುಡಿಯಬೇಕು.
ಕೆಲವೆಡೆ ಒಂದೇ ಬಾರಿ ತೀರ್ಥವನ್ನು ನೀಡುವರಾದರೂ ಒಂದರಲ್ಲೇ ಮೂರು ತೀರ್ಥಗಳನ್ನು ಅನುಸಂಧಾನಿಸಿ ಕುಡಿಯಬೇಕು.
10. ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ* :
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸರ್ವ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇವರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
ಸಂಗ್ರಹ
ಪ್ರಶಾಂತ ಭಟ್
January 7, 2026
ಅರುಂಧತಿ ನಕ್ಷತ್ರ
ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಮಾಡುವ ಔಚಿತ್ಯ
ಬ್ರಾಹ್ಮ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರದಾಯವಾಗಿದೆ.
#ವಶಿಷ್ಠ (Mizar) ಹಾಗೂ #ಅರುಂಧತಿ (Alcor) ಅವಳಿ ನಕ್ಷತ್ರಗಳು. ಸಪ್ತರ್ಷಿ ಮಂಡಲದ (Ursa Major) ತುದಿಯಿಂದ ಮರೀಚಿಯ (Alkaid) ನಂತರದ ಎರಡನೆಯ ಸ್ಥಾನ ವಶಿಷ್ಠ ಹಾಗೂ ಅದಕ್ಕೆ ಅಂಟಿಕೊಂಡಂತೆ ಪಕ್ಕದಲ್ಲಿರುವುದೇ ಅರುಂಧತಿ ನಕ್ಷತ್ರ. ಇವೆರಡೂ ಅವಳಿ ನಕ್ಷತ್ರಗಳು.
ಖಗೋಳಶಾಸ್ತ್ರದಲ್ಲಿ ಅವಳಿ ನಕ್ಷತ್ರಗಳೆಂದರೆ ಒಂದು ನಕ್ಷತ್ರವನ್ನು ಇನ್ನೊಂದು ನಕ್ಷತ್ರವು ಸುತ್ತುವುದು. ಆದರೆ ವಶಿಷ್ಠ-ಅರುಂಧತಿಯ ವಿಷಯದಲ್ಲಿ ಈ ನಿಯಮ ಬೇರೆ ಆಯಾಮ ಹೊಂದಿದೆ.
ವಶಿಷ್ಠ-ಅರುಂಧತಿಗಳು ಪರಸ್ಪರ ಒಂದರ ಸುತ್ತು ಇನ್ನೊಂದು ಸುತ್ತುತ್ತವೆ. ಇದು ಖಗೋಳ ಸೋಜಿಗ. ಮತ್ತೆಲ್ಲಿಯೂ ಇಂಥ ಉದಾಹರಣೆಗಳಿಲ್ಲ. ವಶಿಷ್ಠ-ಅರುಂಧತಿ ನಕ್ಷತ್ರಗಳು ಪರಸ್ಪರ ಒಂದರ ಸುತ್ತ ಇನ್ನೊಂದು ಸದಾ ಸುತ್ತುತ್ತಿರುತ್ತವೆಯೆಂಬ ವಿಷಯವನ್ನು ಆಧುನಿಕ ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
ಪೌರಾಣಿಕವಾಗಿ ವಶಿಷ್ಠ-ಅರುಂಧತಿಯರದು ಆದರ್ಶ ಜೋಡಿ. ಅವರು ಪರಸ್ಪರ ಗೌರವ ಕೊಟ್ಟು ಆದರ್ಶ ಬದುಕು ನಡೆಸುತ್ತಾರೆ. ಎಂಥ ಕಠಿಣ ಸಮಯದಲ್ಲಿಯೂ ಲೋಕಕಲ್ಯಾಣಕ್ಕಾಗಿ ಕಂಕಣಬದ್ಧರಾಗಿರುತ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇವರು ಬಾಳುವ ರೀತಿ ನೂತನ ವಧು-ವೃರಿಗೆ ಆದರ್ಶವಾಗಲಿ ಎಂಬುದೇ ಪ್ರಾಚೀನರ ಆಶಯ. ಹಳೆಯ ಕಾಲದಲ್ಲಿ ಅರುಂಧತಿ ದರ್ಶನವನ್ನು ಸಂಧ್ಯಾ ಕಾಲದ ನಂತರ ಮಾಡಿಸಲಾಗುತ್ತಿತ್ತು. ಅದು ಸರಿಯಾದ ಸಮಯ. ಆದರೆ ಈಗ ಸಂಜೆ ಯ ಒಳಗೆ ಗಂಡಿನ ಕಡೆಯವರು ಹೊರಟುಬಿಡುವುದರಿಂದ ಸಂಪ್ರದಾಯವು ಮಾತ್ರ ಉಳಿದಿದೆ ...
ಆದರೂ ವೈದಿಕ ಮದುವೆಗಳು ಅರುಂಧತಿ ದರ್ಶನವಿಲ್ಲದೇ ಪೂರ್ಣಗೊಳ್ಳುವುದಿಲ್ಲ.
ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿ_ಮುನಿಗಳು ಇಂಥ ಗಹನ ವಿಷಯಗಳನ್ನು ಬರಿಗಣ್ಣಿನಿಂದಲೇ ಗುರುತಿಸಿ, ಅದಕ್ಕೊಂದು ಧಾರ್ಮಿಕ, ಕೌಟುಂಬಿಕ ಆಚರಣೆಯನ್ನು ನೀಡಿ ಸಂಪ್ರದಾಯಗಳನ್ನು ಸಶಕ್ತವಾಗಿ ಕಟ್ಟಿರುವುದು ಸೋಜಿಗವೇ ಸರಿ.
ಅನುಪಮ ಸಾಧ್ವಿ ಅರುಂಧತಿ
ಕರ್ದಮ ದೇವಹೂತಿಯರ ಎಂಟನೆಯ ಕನ್ಯೆ ಅರುಂಧತಿ. ಸಪ್ತರ್ಷಿಗಳಲ್ಲಿ ಅಗ್ರಗಣ್ಯನಾದ ವಸಿಷ್ಠನ ಧರ್ಮಪತ್ನಿ.
ವಿದ್ಯಾ ವಿವೇಕಗಳಿಂದ ಋಷಿ ಮಂಡಲದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿದ್ದಳು.
ಸಾವಿತ್ರೀದೇವಿ ಹಾಗೂ ಬಹುಲಾದೇವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅರುಂಧತಿ ಸಕಲಜ್ಞಾನ ಸಂಪನ್ನೆಯಾಗಿದ್ದಳು.
ತನ್ನ ನೂರು ಮಕ್ಕಳನ್ನು ವಿಶ್ವಾಮಿತ್ರ ಶಾಪದಿಂದ ಕೊಂದಾಗಲೂ ಸಹನೆ ಮೀರದೆ ಅವನನ್ನು ಕ್ಷಮಿಸಿದ ಸಾಧ್ವಿ. ಮುಂದೆ ಹುಟ್ಟಿದ ಶಕ್ತಿ ಎಂಬ ಮಗ ವಿಶ್ವಾಮಿತ್ರನ ತಂತ್ರಕ್ಕೆ ಬಲಿಯಾದಾಗಲೂ ಸಹಿಸಿಕೊಂಡಿದ್ದಳು. ಇವಳ ಕೊನೆಯ ಮಗ ಸುಯಜ್ಞ ರಾಮನ ಸಹಪಾಠಿ.
ರಾಮಾಯಣದಲ್ಲಿ ಅರುಂಧತಿ ಸೀತೆಗೆ ದಾಂಪತ್ಯ ಜೀವನದ ಬಗ್ಗೆ ಉಪದೇಶವನ್ನು ನೀಡುತ್ತಾಳೆ. ಇಲ್ಲಿ ಇವಳ ಹಿರಿಮೆಯನ್ನು ಕಾಣಬಹುದು.
ಅಗ್ನಿ ಪತ್ನಿ ಸ್ವಾಹಾಳು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಳೆಯುತ್ತಿದ್ದಳು. ಆದರೆ ಅರುಂಧತಿಯ ರೂಪವನ್ನು ಮಾತ್ರ ತಳೆಯಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅರುಂಧತಿಯ ವಿಶಿಷ್ಟ ವ್ಯಕ್ತಿತ್ವ ಹಾಗೂ ಅಗಾಧ ಪಾಂಡಿತ್ಯ. ಇಂದ್ರಾದಿ ದೇವತೆಗಳಿಗೂ ಅರುಂಧತಿ ಗೃಹಸ್ಥಧರ್ಮದ ಬಗ್ಗೆ ಉಪದೇಶ ನೀಡಿದ್ದಳು.
ವಸಿಷ್ಠ-ಅರುಂಧತಿಯರ ದಾಂಪತ್ಯ ಸಾರ್ವಕಾಲಿಕ ಆದರ್ಶವಾಗಿ ನಿಂತಿದೆ. ವಿವಾಹದಲ್ಲಿ ಅರುಂಧತೀಪೂಜೆ ಹಾಗೂ ಅರುಂಧತೀ ನಕ್ಷತ್ರ ದರ್ಶನ ದಾಂಪತ್ಯಜೀವನದಲ್ಲಿ ಶುಭವನ್ನುಂಟುಮಾಡುತ್ತವೆ.
ಸೃಷ್ಟಿಗೆ ಪ್ರತಿಸೃಷ್ಠಿ ಸೃಷ್ಟಿಯನ್ನೇ ಸೃಷ್ಟಿಸಬಲ್ಲವರಾಗಿದ್ದ ವಿಶ್ವಾಮಿತ್ರ ಮಹರ್ಷಿಯು, ತನ್ನನ್ನು ಬ್ರಹ್ಮರ್ಷಿ ಎನ್ನಲು ಒಪ್ಪದ ವಸಿಷ್ಠರನ್ನು ಬಹಳವಾಗಿ ದ್ವೇಷಿಸುತ್ತಿರುತ್ತಾರೆ.
ಒಮ್ಮೆ ಊಟದ ಸಮಯದಲ್ಲಿ ವಸಿಷ್ಠರನ್ನು ಅವರ ಪತ್ನಿ ಕೇಳುತ್ತಾರೆ; ಸ್ವಾಮಿ ಬ್ರಹ್ಮರ್ಷಿ ಆಗುವ ಅರ್ಹತೆಗಳು ವಿಶ್ವಾಮಿತ್ರರಲ್ಲಿ ಇಲ್ಲವೇ? ನೀವೇಕೆ ಅವರನ್ನು ಬ್ರಹ್ಮರ್ಷಿ ಎಂದು ಒಪ್ಪುತ್ತಿಲ್ಲ!? ಆಗ ವಸಿಷ್ಠ'ರು ಹೇಳುತ್ತಾರೆ;
....."ನಾನು"... ಬದುಕಿರುವ ತನಕ ವಿಶ್ವಾಮಿತ್ರ ಬ್ರಹ್ಮರ್ಷಿ ಆಗಲು ಸಾಧ್ಯವೇ ಇಲ್ಲ ಎಂದುಬಿಡುತ್ತಾರೆ. ಇದೇ ವಿಚಾರವನ್ನು ವಸಿಷ್ಠರಲ್ಲಿ ಕೆದಕಲು ಬಂದಿದ್ದ ವಿಶ್ವಾಮಿತ್ರ ಮಹರ್ಷಿಗೆ ಇದನ್ನು ಕೇಳಿ ಕೋಪ ಉಕ್ಕುತ್ತದೆ. ಹಾಗೋ! ಏ ವಸಿಷ್ಠ, ನಿನ್ನನ್ನು ಕೊಂದಾದರೂ ನಾನು ಬ್ರಹ್ಮರ್ಷಿ ಆಗೇ ತೀರುತ್ತೇನೆ ಎಂದುಕೊಳ್ಳುವ ಹೊತ್ತಿಗೆ ಮುಂದುವರೆದು ಅರುಂಧತಿ ಕೇಳುತ್ತಾರೆ; ಹಾಗೆಂದರೇನು ಸ್ವಾಮಿ? ಆಗ ವಸಿಷ್ಠರು; ಹೌದು ದೇವಿ, ವಿಶ್ವಾಮಿತ್ರ ಮಹರ್ಷಿಗಳು ಎಂದೋ ಬ್ರಹ್ಮರ್ಷಿಯಾಗಿದ್ದಾರೆ. ಆದರೆ ಅವರಲ್ಲಿರುವ ನಾನು ಅವರನ್ನು ಬ್ರಹ್ಮರ್ಷಿ ಘೋಷಣೆಗೆ ಅಡ್ಡಿಯಾಗಿ ನಿಂತಿದೆ. ನಿಜ ಹೇಳಬೇಕೆಂದೇ ಅವರು ನನಗಿಂತ ಶ್ರೇಷ್ಠರು...
ಇದನ್ನು ಕೇಳಿಸಿಕೊಂಡ ವಿಶ್ವಾಮಿತ್ರ ಮಹರ್ಷಿಗಳು ವಸಿಷ್ಠರ ಮುಂದೆ ಕೈಮುಗಿದು ಹೇಳುತ್ತಾರೆ; ವಸಿಷ್ಠ ಮುನಿಗಳೇ ನಿಮ್ಮನ್ನು ಗೆಲ್ಲಲು ಹೊರಟು ನಾನು, ನನ್ನಲ್ಲಿದ್ದ ಅಹಂಕಾರವನ್ನು ಗೆಲ್ಲವುದ ಮರೆತೆ. ಸುಖಾಸುಮ್ಮನೆ ನಿಮ್ಮನ್ನು ಸದಾ ಕಾಡುತ್ತಲೇ ಬಂದೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎನ್ನುತ್ತಾ ಕಾಲಿಗೆರಗಲು ಬಂದಾಗ! ವಸಿಷ್ಠರು ಅವರನ್ನು ತಡೆದು ತಬ್ಬಿಕೊಳ್ಳುತ್ತಾರೆ. ಮುಂದೆ ವಸಿಷ್ಠರ ಮೇಲಿನ ವೈರತ್ವಕ್ಕೆ ಅಂತ್ಯವಾಗುತ್ತದೆ.
ಮುಂದುವರೆಯುವುದು....
ಪ್ರಶಾಂತ ಭಟ್
Subscribe to:
Posts (Atom)