January 28, 2026

ಮಾತೆ ಪೂಜಕ ನಾನು

ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ||

ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ

ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ

ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ

ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ

No comments:

Post a Comment

If you have any doubts. please let me know...