December 26, 2022

ತಾಯಿ ಋಣ

ತಾಯಿ ಋಣ - ತೀರಿಸಲಾಗದ್ದು

ಒಬ್ಬ ಯುವಕ ತಾಯಿ ಋಣ ತೀರಿಸಬೇಕೆಂಬ ಆಸೆಯಿಂದ ಒಂದು ಲಕ್ಷ ಬಂಗಾರು ನಾಣ್ಯಗಳ ಚೀಲವನ್ನು ತಾಯಿಗೆ ನೀಡುತ್ತಾ, " ಅಮ್ಮಾ, ಈ ನಾಣ್ಯಗಳನ್ನ ತಗೊಂಡು ನಿನಗಿಷ್ಟ ಬಂದಂತೆ ಬಳಸಿಕೋ. ಅದರಿಂದ ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತೆ." ಎಂದ.

ತಾಯಿ ನಕ್ಕು ಸುಮ್ಮನಾದಳು. ಆದರೆ ಆ ಯುವಕ ಅದೇ ಮಾತುಗಳನ್ನು ಮತ್ತೆ ಮತ್ತೆ ಹೇಳಿದಾಗ, ತಾಯಿ ಹೀಗೆಂದಳು .. 'ಮಗು, ನನ್ನ ಋಣ ತೀರಿಸಲು ಈ ಹಣದ ಅವಶ್ಯಕತೆಯಿಲ್ಲ. ನೀನು ಒಂದು ರಾತ್ರಿ ಹಸುಕಂದನಾಗಿ ನನ್ನ ಬಳಿ ಮಲಗು' ಎಂದಳು. ಆ ಮಗ ಸರಿಯೆಂದು ತಾಯಿ ಮಂಚದ ಮೇಲೆ ಅವಳ ಪಕ್ಕದಲ್ಲೇ ಮಲಗಿದ.

ಅವನಿಗೆ ನಿದ್ರೆ ಹತ್ತುತ್ತಿದ್ದಂತೆಯೇ ತಾಯಿ ಎಬ್ಬಿಸಿ, ' ಆಪ್ಪಾ, ದಾಹವಾಗುತ್ತಿದೆ. ನೀರು ಕುಡಿಸು,' ಎಂದಳು. ಮಗ ಸಂತೋಷದಿಂದ ಎದ್ದು ಒಂದು ಲೋಟದಲ್ಲಿ ನೀರಿತ್ತ. ಎರಡು ಗುಟುಕು ಕುಡಿದು, ಲೋಟವನ್ನು ಬೀಳಿಸಿದಳು. ನೀರು ಬಿದ್ದು ಹಾಸಿಗೆ ಒದ್ದೆಯಾಗಿದ್ದನ್ನು ನೋಡಿ, ಏನಮ್ಮಾ, ಇದು?' ಎಂದ ಮಗ. ' ತಪ್ಪಾಗಿಬಿಡ್ತು, ಮಗು,' ಎಂದಳು ತಾಯಿ. ಮಗ ಮೌನವಾಗಿ ಮಲಗಿದ.

ಅವನಿಗೆ ಸ್ವಲ್ಪ ನಿದ್ದೆ ಬರುತ್ತಿದ್ದಂತೆಯೇ, ತಾಯಿ ಮತ್ತೆ ಎಬ್ಬಿಸಿ, ' ಮಗು ಬಾಯಾರಿಕೆ ಆಗ್ತಿದೆ, ನೀರು ಕೊಡು,' ಎಂದಳು. ' ಈಗ ತಾನೇ ಕುಡಿದೆಯಲ್ಲಾ, ಮತ್ತೆ ಬಾಯಾರಿಕೇನಾ? ಹತ್ತಿ ಬೀಜಗಳನ್ನೇನಾದರೂ ತಿಂದೆಯಾ?' ಎಂದು ಅಸಹನೆಯಿಂದೆದ್ದು ನೀರು ಕೊಟ್ಟ. 

ತಾಯಿ ಮೊದಲು ಮಾಡಿದಂತೆಯೇ ಒಂದೆರಡು ಗುಟುಕು ನೀರು ಕುಡಿದು ಉಳಿದಿದ್ದನ್ನು ಹಾಸಿಗೆಯ ಮೇಲೆ ಬೀಳಿಸಿದಳು. ಮಗ ಕೋಪದಿಂದ, ' ಅಮ್ಮಾ, ಏನಿದು ನೀರು ಚೆಲ್ಲಿದೆ. ಹಾಸಿಗೆಯೆಲ್ಲಾ ಒದ್ದೆಯಾಯ್ತು. ಕಣ್ಣು ಕಾಣಿಸೋಲ್ವಾ?' ಎಂದು ಕೇಳಿದ. ' ಅಪ್ಪಾ, ಕತ್ತಲೇಲಿ ಗೊತ್ತಾಗದೆ, ಲೋಟ ಬಿದ್ಹೋಯ್ತು.' ಎಂದಳು. ಅದನ್ನು ಕೇಳಿ ಕೋಪ ತೆಗೆದುಕೊಂಡು ಮಗ ಮತ್ತೆ ನಿದ್ರೆಗೆ ಜಾರಿದ. ಅಷ್ಟರಲ್ಲಿ ತಾಯಿ ಎದ್ದು ಮತ್ತೆ ನೀರು ಕೇಳಿದಾಗ ಕೋಪ ತಡೆದುಕೊಳ್ಳಲಾರದೇ ಹೋದ. ' ಅಮ್ಮಾ, ಏನಿದು, ದಾಹ, ದಾಹ ನನ್ನ ತಲೆ ತಿಂತಾ ಇದೀಯಾ. ನನ್ನನ್ನು ನಿದ್ದೆ ಮಾಡಕ್ಬಿಡ್ತೀಯಾ, ಇಲ್ವಾ?' ಎಂದು ಕೂಗಿ, ನೀರು ತಂದಿತ್ತು, ' ಕುಡಿದು ಸಾಯಿ!' ಎಂದ.

ತಾಯಿ ಪ್ರತಿಸಲದಂತೆ ಒಂದು ಗುಟುಕು ಕುಡಿದು ಮತ್ತೆ ಉಳಿದ ನೀರಿನಿಂದ ಹಾಸಿಗೆ ಒದ್ದೆ ಮಾಡಿದಳು. ಇದನ್ನು ನೋಡಿ ಮಗ, ಇನ್ನು ತಡೆದುಕೊಳ್ಳಲಾಗದೇ, ' ಅಮ್ಮಾ, ಬುದ್ದಿ ಇದೆಯಾ, ಇಲ್ವಾ? ಹೀಗೆ ನನ್ನ ಸತಾಯಿಸಕ್ಕಾಗಿಯೇ ನನ್ನನ್ನು ನಿನ್ನ ಮಂಚದ ಮೇಲೆ ಮಲಗು ಅಂದ್ಯಾ? ಈ ಒದ್ದೆ ಬಟ್ಟೆ ಮೇಲೆ ಹೇಗೆ ಮಲಗೋದು?ನೋಡ್ತಿದ್ರೇ ನಿನಗೆ ತಲೆ ಪೂರ್ತಿ ಕೆಟ್ಟಿರೋ ಹಾಗಿದೆ, ಅದಕ್ಕೇ ಹೀಗೆ ಸಾಯಿಸಿಕೊಂಡು ತಿಂತಿದೀಯ' ಎಂದು ಸಿಟ್ಟಿನಿಂದ ಕೂಗಾಡಿದ.

ಆಗ ತಾಯಿ, ' ಕೂಗೋದನ್ನ ನಿಲ್ಸು, ಮಗು. ನನ್ನ ಋಣ ತೀರಿಸ್ತೀನಿ ಅಂತೀಯಾ, ತಾಯಿ ಋಣ ತೀರಿಸಬಲ್ಲೆಯಾ? ನಿನ್ನ ತಲೇಲಿ ಎಷ್ಟು ಕೂದಲಿದೆಯೋ ಅಷ್ಟು ಜನ್ಮ ತಾಳಿ, ನಿರಂತರ ಸೇವೆ ಮಾಡಿದರೂ ತಾಯಿ ಋಣದಿಂದ ವಿಮುಕ್ತಿ ಹೊಂದಲಾರೆ. ಯಾಕೇಂತೀಯಾ... ನೀನು ಹಸುಕಂದನಾಗಿದ್ದಾಗ ದಿನವೂ ಹಾಸಿಗೆ ಮೇಲೇ ಮಲಮೂತ್ರ ಮಾಡ್ತಿದ್ದೆ.'

' ನಿನ್ನ ಒದ್ದೆ ಬಟ್ಟೆಗಳನ್ನು ಬಿಚ್ಚಿ, ನನ್ನ ಸೆರಗನ್ನು ನಿನಗೆ ಹೊದಿಸುತ್ತಿದ್ದೆ. ಹಾಸಿಗೆಯನ್ನು ನೀನು ಒದ್ದೆ ಮಾಡಿದ ಕಡೆ, ನಾನು ಮಲಗಿ, ಒಣಗಿರೋ ಕಡೆ ನಿನ್ನನೆಮಲಗಿಸಿ ನಿದ್ದೆ ಮಾಡಿಸ್ತಿದ್ದೆ. ಹೀಗೇ, ಒಕದಿನ ಅಲ್ಲ, ಒಂದ್ವಾರ ಅಲ್ಲ, ನೀನೊಬ್ಬನೇ ಬೇರೆ ಮಲಗಲು ಸಾಧ್ಯವಾಗುವವರೆಗೂ ಹಲವಾರು ವರ್ಷಗಳವರೆಗೆ ನಾನು ಪ್ರೀತಿಯಿಂದ ನೋಡ್ಕೊಳ್ತಿದ್ದೆ. ಆದರೆ ನೀನೀಗ ಒಂದೆರಡು ಸಲ ನೀರುರುಳಿಸಿ ಹಾಸಿಗೆ ಒದ್ದೆ ಮಾಡಿದ್ದಕ್ಕೇ ಸಿಟ್ಟು ಮಾಡ್ಕೊಂಡು ಕೂಗಾಡ್ತಿದೀಯಾ. ಒಂದು ರಾತ್ರಿ ನಿದ್ದೆ ಮಾಡದೇ ಇರೋದಕ್ಕೇ ರಂಪ ಮಾಡ್ತಿದೀಯ,' ಎಂದಳು ತಾಯಿ.

ಆ ಮಗ ನಾಚಿಕೆಯಿಂದ ತಾಯಿ ಕಾಲಿಗೆ ಬಿದ್ದು , 
' ಅಮ್ಮಾ, ನನ್ನ ಕಣ್ಣು ತೆರೀತು. ಮಕ್ಕಳನ್ನು ಹೊತ್ತು, ಹೆತ್ತು, ಸಾಕೋದಕ್ಕೆ ತಾಯಿ ಪಡುವ ಶ್ರಮಕ್ಕೆ, ಮಾಡುವ ಸೇವೆಗೆ, ಪಡೋ ಕಷ್ಟಕ್ಕೆ, ಸಹನೆಗೆ, ಬದಲು ಪಾವತಿಸಲು ನೂರಾರು ವರ್ಷಗಳು ಸೇವೆ ಮಾಡಿದರೂ ಅದು ನಡೆಯೋ ಕೆಲಸ ಅಲ್ಲ. ನಿನ್ನ ಋಣ ತೀರಿಸೋದು ಅಸಂಭವ. ನಾನೇ ಅಲ್ಲ, ಜಗತ್ತಿನಲ್ಲಿ ಯಾರೂ ಯಾವಾಗಲೂ ತಾಯಿ ಋಣ ತೀರಿಸಲಾರರು.' ಎಂದ.

ಅದಕ್ಕೆಂದೇ ತಾಯಿಯನ್ನು 'ಮಾತೃದೇವೋಭವ' ಎಂದರು. ತಾಯಿ ದೇವತೆ. ತಾಯಿ ಋಣ ತೀರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಒಂಬತ್ತು ತಿಂಗಳು ತನ್ನ ಮಗುವನ್ನು ಹೊತ್ತು, ಎಷ್ಟೋ ನೋವುಗಳನ್ನು ಸಹಿಸಿಕೊಂಡು, ಮಗುವಿಗೆ ಜನ್ಮ ಕೊಡ್ತಾಳೆ. ಆ ತಾಯಿಗದು ಪುನರ್ಜನ್ಮವೇ!

ದಯವಿಟ್ಟು ತಮ್ಮ ಮಕ್ಕಳಿಗೆ ಇದನ್ನು ಓದಿ ಕೇಳಿಸಿ.

No comments:

Post a Comment

If you have any doubts. please let me know...