ಋಗ್ವೇದದ ೮ ನೇ ಮಂಡಲದ ೯೧ನೇ ಸೂಕ್ತದಲ್ಲಿ ೭ ಮಂತ್ರಗಳು ಬರುತ್ತವೆ. ಅದರಲ್ಲಿ ಬರುವ ಪ್ರಸಂಗ
ಕನ್ಯಾವಾರವಾಯತೀ ಸೋಮಮಪಿ ಸೃತಾವಿದತ್ ।
ಅಸ್ತಮ್ ಭರನ್ತ್ಯ ಬ್ರವೀದಿನ್ದ್ರಾಯ ಸುನವೈ ತ್ವಾ ಶಕ್ರಾಯ ಸುನವೈ ತ್ವಾ || 8:91:1 ||
ಇಲ್ಲಿ ಸೋಮರಸವನ್ನು ಅರ್ಪಿಸಿ ಇಂದ್ರನನ್ನು ಒಲಿಸಿಕೊಂಡು ತನಗೆ ಬೇಕಾದ ವರಗಳನ್ನು ಪಡೆದ ಮಹಾ ಸಾಧಕಿ, ಋಷಿಕೆ ಅಪಾಲೆಯ ಬಗ್ಗೆ ಹೇಳಲಾಗಿದೆ.
ಅಪಾಲೆ ಯಾಕೆ ಇಂದ್ರನಿಗೆ ಸೋಮರಸವನ್ನು ಅರ್ಪಿಸಿದಳು? ಅಥವಾ ಆಗಿನ ಕಾಲದಲ್ಲಿ ಯಜ್ಞ ಯಾಗಾದಿಗಳು ಸರ್ವೇಸಾಮಾನ್ಯವಿರುವಾಗ, ಅಪಾಲೆ ಇಂದ್ರನಿಗೆ ಸೋಮದ ಹವಿಸ್ಸು ಅರ್ಪಿಸಿದ್ದರಲ್ಲಿ ವಿಶೇಷವೇನಿದೆ?
ಇದೊಂದು ವಿಶೇಷ ಸ್ವಾರಸ್ಯ ಕಥನ. ವಿಶೇಷ ಸ್ವಾರಸ್ಯ ಅನ್ನುವುದಕ್ಕಿಂತ ಹೆಣ್ಣೊಬ್ಬಳ ಸಂಘರ್ಷದ ಕಥನ.
ತಂದೆಯಿಂದ ಬ್ರಹ್ಮ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದ ಅಪಾಲಾ ಬ್ರಹ್ಮವಾದಿನಿಯಾಗಿ ಜನಮೆಚ್ಚುಗೆ ಪಡೆದಿದ್ದಳು. ಸದಾ ಉತ್ಸಾಹದ ಚಿಲುಮೆಯಾಗಿ ಚಿಮ್ಮುತ್ತಿದ್ದ ಅಪಾಲೆ ಬ್ರಹ್ಮರ್ಷಿಯೂ ಸಪ್ತರ್ಷಿಯೂ ಆದ ತಂದೆಯೊಡನೆಯೂ ಆಡುವಳು. ತಂದೆಗೆ ಕೂದಲಿರುವದಿಲ್ಲ. ಚಿಕ್ಕವಳದಿದ್ದಾಗಲೇ ತಂದೆಯ ಕೂದಲಿಲ್ಲದ ತಲೆಯನ್ನು ಸವರುತ್ತಾ ಇಂದ್ರನನ್ನು ಒಲಿಸಿಕೊಂಡು ಅವನು ತುಂಬುಗೂದಲಿನವನಾಗುವಂತೆ ಮಾಡುವುದಾಗಿ ಹೇಳುವಳು. ಮಗಳ ಈ ನಲ್ಮಾತುಗಳಿಗೆ ತಂದೆ ಹರ್ಷಿಸುವನು. ಮನೆಯವರೆಲ್ಲರೂ ತಂದೆ ಮಗಳ ಈ ವಿನೋದ ಸಲ್ಲಾಪದಲ್ಲಿ ಭಾಗಿಯಾಗುವರು.
ಹೀಗಿರುವಾಗ ಅಪಾಲಾ ಬೆಳೆದು ದೊಡ್ಡವಳಾಗುತ್ತಾಳೆ. ಎಲ್ಲ ಜವಾಬ್ದಾರ ತಂದೆಯಂತೆ ಈ ಋಷಿಯೂ ತನ್ನ ಮಗಳಿಗೆ ಯೋಗ್ಯ ವರನನ್ನು ಹುಡುಕಿ ಮದುವೆ ಮಾಡುತ್ತಾನೆ. ಈಗ ಅಪಾಲೆ ಮೊದಲಿನಂತೆ ಚಂಚಲೆಯಲ್ಲ. ಆಕೆ ಗಂಭೀರ ಗೃಹಿಣಿ. ಅಲ್ಪಾವಧಿಯಲ್ಲಿ ಗಂಡನ ಮನೆಯ ಒಲವು ಗಳಿಸುತ್ತಾಳೆ. ಆದರೆ ಗಂಡನಿಗೆ ಕೊಂಚ ಕೀಳರಿಮೆ. ಅಪಾಲೆ ತಿಳಿದವಳು. ಬ್ರಹ್ಮವಿದ್ಯಾ ಪಾರಂಗತೆ ಬೇರೆ! ಅವನ ಈ ಮತ್ಸರಕ್ಕೆ ಇಂಬು ಕೊಟ್ಟಂತೆ ಅಪಾಲಾ ಗರ್ಭ ಧರಿಸಲು ವಿಫಲಳಾಗುತ್ತಾಳೆ. ಗರ್ಭಾಶಯದ ದೌರ್ಬಲ್ಯ ಅವಳನ್ನು ಮಾತೃಸುಖದಿಂದ ವಂಚಿಸುತ್ತದೆ. ಅದು ತಿಳಿದುಬರುತ್ತಲೇ ಗಂಡನಿಂದಲೂ ಗಂಡನ ಮನೆಯವರಿಂದಲೂ ದೂಷಣೆಗೆ ಒಳಗಾಗುತ್ತಾಳೆ ಅಪಾಲಾ. ಅದಕ್ಕೆ ಕಿರೀಟವಿಟ್ಟಂತೆ ಆಕೆಯ ಕಾಲುಗಳ ಮೇಲೆ ಬಿಳಿಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಹರಡುತ್ತ ಹರಡುತ್ತ ದೇಹದುದ್ದ ಹಬ್ಬಿ ಮುಖವನ್ನೂ ಆವರಿಸಿದಾಗ `ತೊನ್ನು ರೋಗದವಳು’ ಶುಭ ಕಾರ್ಯಗಳಿಗೆ ಮೈಲಿಗೆಯೆಂದೂ ಅಪಶಕುನವೆಂದೂ ಅವಳನ್ನು ಗಂಡ ಮನೆಯಿಂದ ಓಡಿಸುತ್ತಾನೆ. ಅವಳಿಗೆ `ಅಪಾಲಾ’ ಅನ್ನುವ ಹೆಸರು ಬರುವುದು ಅನಂತರದಲ್ಲೇ. ಮೊದಲ ಹೆಸರು ಪಾಲಾ. `ಅ ಪಾಲಾ’ ಅಂದರೆ – `ಪಾಲಕರಿಲ್ಲದವಳು’ ಎಂದರ್ಥ.
ದೂಷಣೆ, ಅಪವಾದ, ಲೋಕನಿಂದನೆಗಳೆಲ್ಲ ಬಂದೆರಗಿದರೂ ತಿರಸ್ಕಾರಕ್ಕೆ ಒಳಗಾದರೂ ಎದೆಗುಂದಲಿಲ್ಲ ಅಪಾಲೆ. ಬ್ರಹ್ಮಜ್ಞಾನಿಯಾಗಿದ್ದುಕೊಂಡೂ ಸಾಂಸಾರಿಕ ಕ್ಲೇಷಗಳಿಗೆ ದುಃಖಿಸಿದರೆ ಅಂತಹ ಜ್ಞಾನದಿಂದ ಪ್ರಯೋಜನವಾದರೂ ಏನು? ಅಪಾಲಾ ಈ ಜನ್ಮವು ಸಂತೃಪ್ತವಾಗಿರಬೇಕೆಂದು ಬಯಸಿದ್ದಳು. ಮುಮುಕ್ಷುವಾದ ಆಕೆಗೆ ಆ ಕಾರಣದಿಂದಲೇ ಸಮಸ್ಯೆಗಳು ಬಗೆಹರಿಯುವುದು ಬೇಕಿತ್ತು. ಆಕೆಗೆ ಜನನ ಮರಣ ಚಕ್ರದಿಂದ ಮುಕ್ತಿ ಬೇಕಿತ್ತು.
ಕಾಡಿನಲ್ಲಿ ಕುಳಿತು ತಪೋನಿರತಳಾದಳು ಅಪಾಲಾ. ಸಾಧಕರಿಗೆ ಸಾವಿರ ಅಡ್ಡಿ ಅನ್ನುವಂತೆ ಕೇಡಿನ ಮಳೆ ಸುರಿಯಿತು. ಸಮೀಪದ ನದಿ ತುಂಬಿ ಹರಿದು ನೆರೆ ಬಿದ್ದಿತು. ಧ್ಯಾನಸ್ಥಳಾಗಿ ಕುಳಿತಿದ್ದ ಅಪಾಲಾಳನ್ನು ಕೊಚ್ಚಿಕೊಂಡು ಹರಿಯತೊಡಗಿತು. ಎಚ್ಚರಗೊಂಡ ಅಪಾಲೆ ಮುಂದಿನ ನಡೆಯನ್ನು ಯೋಚಿಸತೊಡಗಿದಳು. ತಪಸ್ಸಿನ ನಂತರ ಆಕೆ ಸೋಮಯಾಗ ನಡೆಸುವ ನಿಶ್ಚಯ ಮಾಡಿದ್ದಳು. ಆದರೆ ಈಗ ಆಕೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದಾಳೆ! ಸೋಮಯಾಗ ಮಾಡುವುದೆಲ್ಲಿಂದ!? ಇಷ್ಟಕ್ಕೂ ಆಕೆ ಹೊರಗೇ ಸುರಕ್ಷಿತವಿದ್ದರೂ ಸೋಮಯಾಗಕ್ಕೆ ಬೇಕಾದ ಅನುಕೂಲತೆಗಳ್ಯಾವುವೂ ಆಕೆಯಲ್ಲಿರಲಿಲ್ಲ. ಈಗಂತೂ ಪರಿಸ್ಥಿತಿ ಹೀಗಾಗಿದೆ. ಕೊಚ್ಚಿ ಹೋಗುವಾಗ ಒಂದು ಮರದ ಬೊಡ್ಡೆಗೆ ಕಾಲ್ತೊಡರಿ ಅದನ್ನೇ ಆತುಕೊಂಡಳು ಅಪಾಲೆ. ಆ ವೇಳೆಗೆ ಸರಿಯಾಗಿ ಸೋಮಲತೆಯ ಚೂರೊಂದು ಅವಳ ಬಳಿ ತೇಲಿ ಬಂದಿತು. ಅದರಿಂದ ಸೋಮರಸ ತೆಗೆದು ಇಂದ್ರನಿಗೆ ಅರ್ಪಿಸಲು ತೀರ್ಮಾನಿಸಿದಳು. ಹಲ್ಲುಗಳನ್ನೇ ಯಜ್ಞಕಲ್ಲುಗಳನ್ನಾಗಿ ಭಾವಿಸಿ, ತನ್ನ ಶರೀರದಲ್ಲಿರುವುದನ್ನೇ ಸೋಮಯಾಗದ ಸಾಧನೆ, ಸಲಕರಣೆಗಳನ್ನಾಗಿ ಮಾಡಿಕೊಂಡು, ಅವಳು ಹಲ್ಲಿನಿಂದಲೇ ಜಗಿದು ಅದರ ಮಿಶ್ರಣವನ್ನು ತಯಾರು ಮಾಡಿ, `ನನ್ನ ಹಲ್ಲಿನಲ್ಲಿ ಕಚ್ಚಿದ್ದೂ ನನ್ನದಲ್ಲ, ನನಗಲ್ಲ – ಇದಮ್ ನ ಮಮ’ ಎನ್ನುತ್ತ ಸಮರ್ಪಣಾ ಭಾವದಿಂದ ಸೋಮಲತೆಯನ್ನು ಅಗಿಯತೊಡಗಿದಳು.
ಸೋಮವನ್ನು ಕುಟ್ಟುವ ಶಬ್ದ ಕೇಳಿದ ಇಂದ್ರನು ಅಲ್ಲಿಗೆ ಬಂದನು. ಆದರೆ ಅಲ್ಲಿ ಯಜ್ಞದ ಯಾವ ಕುರುಹೂ ಕಾಣಿಸುವುದಿಲ್ಲ . ಇನ್ನೇನು ಮರಳಬೇಕು ಅನ್ನುವಾಗ ಅಪಾಲೆ ಆತನನ್ನು ಸ್ತುತಿಸತೊಡಗಿದಳು. `ನನ್ನ ಬಾಯಲ್ಲಿ ಸೋಮರಸವು ಸಿದ್ಧವಾಗಿದೆ. ದಯಮಾಡಿ ಅದನ್ನು ಸ್ವೀಕರಿಸು’ ಎಂದು ವಿನಂತಿಸಿದಳು. ಅವಳ ಶ್ರದ್ಧೆಯಿಂದ ಸಂತಸಗೊಂಡ ಇಂದ್ರನು ಅವಳ ಸಹಾಯಕ್ಕೆ ಧಾವಿಸಿದನು. ಅವಳ ಸೋಮದ ಹವಿಸ್ಸನ್ನು ಸ್ವೀಕರಿಸಿ ಸಂಪ್ರೀತನಾದನು. ಆಕೆಯನ್ನು ನೀರಿನಿಂದ ಹೊರತಂದು, ವರಗಳನ್ನು ಮೂರು ವರಗಳನ್ನು ಕೇಳುವಂತೆ ಆಗ್ರಹಿಸಿದನು. ಅಪಾಲೆ ಈ ಕ್ಷಣಕ್ಕಾಗಿ ಕಾದಿದ್ದಳು. ಅವಳ ತಪಸ್ಸು ಸಿದ್ಧಿಸುವ ಘಳಿಗೆ ಕಣ್ಣೆದುರಿಗಿತ್ತು. ಸಂಸಾರ ವೈಫಲ್ಯದಿಂದ, ಕಾಯಿಲೆಯಿಂದ, ಮಕ್ಕಳಾಗದ ನೋವಿನಿಂದ ಆಕೆ ದೈನ್ಯಳಾಗಿದ್ದಳು. ಆದರೆ ಅಂಥಾ ಸನ್ನಿವೇಶದಲ್ಲೂ ಅಪಾಲೆ ಕೇಳಿದ ಮೊದಲ ವರ ಏನು ಊಹಿಸಬಲ್ಲಿರಾ? `ನನ್ನ ತಂದೆಯ ತಲೆಯ ಮೇಲೆ ಕೂದಲು ಬೆಳೆಯುವಂತೆ ಮಾಡು’ ಶಿರೋಭಾಗದ ಮೇಲುಗಡೆ ಸೂಕ್ಷ್ಮ ಪ್ರದೇಶದ ಬೆಳವಣಿಗೆಯಾಗಬೇಕು ಎಂದು! ಹೌದು. ಅಪಾಲಾ ಎಷ್ಟೇ ಬ್ರಹ್ಮವಾದಿನಿಯಾಗಿದ್ದರೂ ಗಂಭೀರ ಗೃಹಿಣಿಯಾಗಿದ್ದರೂ ಆಕೆಯ ಮುಗ್ಧತೆ ಹಾಗೆಯೇ ಇತ್ತು. ಆಕೆ ವಯಸ್ಸಿನ ಸೋಂಕುಗಳಿಗೆ, ಕಪಟಕ್ಕೆ ಒಳಗಾಗಿರಲಿಲ್ಲ.
ಆಕೆಯ ಈ ವಿಶಿಷ್ಟ ಕೋರಿಕೆಯನ್ನು ಇಂದ್ರ ಮನ್ನಿಸಿದ. ಶಿರೋಭಾಗದ ಮೇಲಿನ ಪ್ರದೇಶವೆಂದರೆ ನವೀನ ಕಲ್ಪನೆಗಳು , ಅಂತಃಸ್ಫುರಣೆಗಳು ಉಗಮಿಸುವ ಸ್ಥಾನ. ತನ್ನ ತಂದೆಯ ಸೂಕ್ಷ್ಮ ಶರೀರದಲ್ಲಿ ಸಂಕಲ್ಪ ಶಕ್ತಿ, ಮುಂತಾದ ಶಕ್ತಿಗಳು ವರ್ಧಿಸಬೇಕೆಂಬುದು. ನಂತರ ಎರಡನೆಯ ವರವಾಗಿ ಅಪಾಲೆ ತನ್ನ ತೊನ್ನು ರೋಗವನ್ನು ನಿವಾರಿಸಿ ಶರೀರಕ್ಕೆ ಸೌಂದರ್ಯ ಕಾಂತಿಗಳನ್ನು , ಮೂರನೆಯ ವರವಾಗಿ ಮಕ್ಕಳಾಗುವ ಫಲ ಕರುಣಿಸುವಂತೆಯೂ ಕೇಳಿಕೊಂಡಳು.
ಇಂದ್ರಾನುಗ್ರಹದಿಂದ ದಿವ್ಯಶರೀರವನ್ನು ಪಡೆದ ಅಪಾಲಾ ಮರಳಿ ಪತಿಗೃಹ ಸೇರಿದಳು. ಆಕೆಯ ಸಾಧನೆಗೆ ಗಂಡ ನಾಚಿದ. ಕ್ಷಮೆ ಯಾಚಿಸಿ ಗೌರವದಿಂದ ಅವಳನ್ನು ನಡೆಸಿಕೊಳ್ಳತೊಡಗಿದ. ಪತಿಪತ್ನಿಯರಿಬ್ಬರೂ ಧರ್ಮ ಕಾರ್ಯಗಳನ್ನು ನಡೆಸುತ್ತಾ, ಮಕ್ಕಳನ್ನು ಹೊಂದಿ ತುಂಬು ಸಂಸಾರವಂತರಾಗಿ ಬಾಳಿದರು. ಅವಳ ಬಯಕೆಗಳೆಲ್ಲವೂ ನೆರವೇರಿದ ಸಂತೃಪ್ತಿಯನ್ನು ಹೊಂದಿ ಮೋಕ್ಷಮಾರ್ಗಿಯಾದಳು ಅಪಾಲಾ. ಅವಳ ಸಾಧನೆ ಸಮಕಾಲೀನ ಋಷಿ – ಋಷಿಕೆಯರ ಶ್ಲಾಘನೆಗೆ ಒಳಗಾಯಿತು. ಈ ಅಪಾಲೆ ಬೇರೆ ಯಾರೂ ಅಲ್ಲ ...
ಅಪಾಲಾ ಸಪ್ತರ್ಷಿಗಳಲ್ಲಿ ಒಬ್ಬನೂ ಬ್ರಹ್ಮ ಮಾನಸ ಪುತ್ರನೂ ಆದ ಅತ್ರಿ ಮುನಿಯ ಮಗಳು. ಈಕೆ ತಂದೆಯ ಮುದ್ದಿನ ಮಗಳು. ಬುದ್ಧಿವಂತೆಯಾದ ಮಗಳಿಗೆ ಅತ್ರಿ ಮುನಿ ತನ್ನೆಲ್ಲ ಜ್ಞಾನವನ್ನೂ ಧಾರೆ ಎರೆದಿದ್ದಾನೆ. ಸ್ವತಃ ಮಂತ್ರದ್ರಷ್ಟಾರನಾದ ಅತ್ರಿಯು ಅಪಾಲೆಗೆ ಮಂತ್ರೋಪದೇಶವನ್ನೂ ನೀಡಿದ್ದಾನೆ.
ಕೇವಲ ತನ್ನ ಮೈಮೇಲೆ ಬಿಳಿ ಮಚ್ಚೆಗಳು ಬಂದವು ಅನ್ನುವ ಕಾರಣಕ್ಕೆ ಜನರ ಅಸಡ್ಡೆಗೆ ಗುರಿಯಾಗುವ, ಮಕ್ಕಳನ್ನು ಹೆರುವ ಸಾಮರ್ಥ್ಯ ಇಲ್ಲವೆನ್ನುವ ಕಾಲಕ್ಕೆ ಗಂಡನಿಂದ ತ್ಯಜಿಸಲ್ಪಡುವ ಹೆಣ್ಣು ಹಾದು ಹೋಗುವ ಸಂಕಷ್ಟಗಳನ್ನು ನಾವು ಊಹಿಸಬಹುದು. ಈ ಎರಡು ಸಂಗತಿಗಳು ಸಹಸ್ರಮಾನಗಳಾಚೆ ಘಟಿಸಿದ್ದಾದರೂ ನಮಗೆ ಇವತ್ತಿಗೂ ಪ್ರಸ್ತುತವಾಗಿ ತೋರುತ್ತವೆ ಅಲ್ಲವೆ? ಮಹಿಳೆಯರ ಸ್ಥಾನಮಾನಗಳು ಮೇಲ್ನೋಟಕ್ಕೆ ಬದಲಾದಂತೆ ಕಂಡರೂ ಒಳಹರಿವಲ್ಲಿ ಆಕೆಯಿನ್ನೂ ಅಲ್ಲಿಯೇ ಉಳಿದುಹೋಗಿದ್ದಾಳೆ ಅನ್ನುವುದನ್ನು ಇದು ಸೂಚಿಸುತ್ತದೆ. ಹಾಗೆಂದು ನಿರಾಶರಾಗುವ ಕಾರಣವಿಲ್ಲ. ಅಪಾಲೆ, ಘೋಷಾರಂಥ ಹೆಣ್ಣುಮಕ್ಕಳು ಈ ನಿರ್ಲಕ್ಷ್ಯಕ್ಕೆ ಸಡ್ಡು ಹೊಡೆದು, ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಮರಳಿ ಗಳಿಸಿ ಮಾದರಿಯಾಗಿ ಉಳಿದಿದ್ದಾರೆ. ಅಂಥವರ ಸಂತತಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡಿರುವುದು ಸಮಾಧಾನದ ಸಂಗತಿ.
ಋಗ್ವೇದದ ಎಂಟನೇ ಮಂಡಲದ 91ನೇ ಸೂಕ್ತದ 1 ರಿಂದ 7ರವರೆಗಿನ ಋಚೆಗಳು ಅಪಾಲೆಯಿಂದ ಸಂಕಲಿತವಾದವು. ಇವು ಈಕೆ ಇಂದ್ರನಿಂದ ಶುದ್ಧೀಕರಣಗೊಂಡು ದಿವ್ಯದೇಹ ಪಡೆದ ಸನ್ನಿವೇಶವನ್ನು ವಿವರಿಸುತ್ತವೆ.
No comments:
Post a Comment
If you have any doubts. please let me know...