April 18, 2020

ಚಾಣಕ್ಯನೀತಿ

  • ಸರ್ವೌಷಧೀನಾಮಮೃತಾ ಪ್ರಧಾನಾಂ
  • ಸರ್ವೇಷು ಸೌಖ್ಯೇಷ್ವಶನಂ ಪ್ರಧಾನಮ್|
  • ಸರ್ವೇನ್ದ್ರಿಯಾಣಾಂ ನಯನಂ ಪ್ರಧಾನಂ
  • ಸರ್ವೇಷು ಗಾತ್ರೇಷು ಶಿರಃ ಪ್ರಧಾನಮ್||




ಔಷಧಗಳಲೆಲ್ಲ ಶ್ರೇಷ್ಠವಾದುದು ಜೇನು... ಸುಖಗಳಲೆಲ್ಲ ಭೋಜನದಿಂದ ಸಿಗುವ ಸುಖ ಶ್ರೇಷ್ಠ... ಇಂದ್ರಿಯಗಳಲ್ಲೆಲ್ಲ ಶ್ರೇಷ್ಠವಾದುದು ಕಣ್ಣು... ಅಂಗಾಂಗಗಳಲೆಲ್ಲ ಉತ್ತಮಾಂಗ ಶಿರಸ್ಸು...ಎನ್ನುತ್ತದೆ ಚಾಣಕ್ಯನೀತಿಯ ಈ ಸುಂದರವಾದ ಶ್ಲೋಕ...

ಜೇನುನೊಣ ಅನೇಕ ಹೂಗಳಿಂದ ಜೇನನ್ನು ಸಂಗ್ರಹಿಸುತ್ತದೆ. ಅದರಿಂದ ಜೇನಿನ ಮೂಲವಸ್ತು ವಿವಿಧ ಹೂವುಗಳ ಮಕರಂದ... ನಮ್ಮ ಪ್ರಾಚೀನ ಆಯುರ್ವೇದ ಔಷಧ ಪದ್ಧತಿಯಲ್ಲಿ ಔಷಧಗಳ ತಯಾರಿಕೆಯಲ್ಲಿ ಜೇನಿನ ಬಳಕೆ ಪ್ರಧಾನವಾಗಿದೆ. ಅದಕೆಂದೆ ಅವರು ರೋಗಿಗಳಿಗೆ ಕೊಡುವ ಔಷಧಗಳಲ್ಲಿ ಜೇನನ್ನು ಬಳಸಿ ಸೇವಿಸುವ ಔಷಧಗಳೇ ಹೆಚ್ಚು... ಇದಕ್ಕೆಲ್ಲ ಮುಖ್ಯ ಕಾರಣ ಜೇನಿನಲ್ಲಿರುವ ಔಷಧೀಯ ಗುಣ, ಜೇನಿನಲ್ಲಿ ಸೇರಿರುವ ಅನೇಕ ಔಷಧೀಯ ಗುಣಗಳುಳ್ಳ ಗಿಡ-ಮರಗಳ ಹೂವಿನ ಮಕರಂದ.... ನಿತ್ಯ ನಾವು ಸೇವಿಸುವ ಆಹಾರದಲ್ಲಿ ಜೇನನ್ನು ಬಳಸುವುದರಿಂದ ನಮ್ಮ ದೇಹಕ್ಕೆ ರೋಗ ಬರದಂತೆ ತಡೆಯಬಹುದಾಗಿದೆ... ಅದಕೆಂದೆ ದೇವರಿಗೆ ನಿತ್ಯ ಅಭಿಷೇಕ ಮಾಡಲು ಬಳಸುವ ಪದಾರ್ಥಗಳಲ್ಲಿ, ಪಂಚ ಅಮೃತಗಳೆಂದೇ ಕರೆಯಲ್ಪಡುವ ವಸ್ತುಗಳಲ್ಲಿ ಜೇನುತುಪ್ಪವೂ ಒಂದು (ಪಂಚಾಮೃತಗಳು-ಕ್ಷೀರ,ದಧಿ,ಘೃತ,ಮಧು ಮತ್ತು ಶರ್ಕರ)... ಕೇವಲ ಮಧುವನ್ನು ಮಾತ್ರ ಬಳಸಿ ದೇವರಿಗೆ ಅಭಿಷೇಕ ಮಾಡುವ ಕ್ರಮವೂ ಉಂಟು ಅದು "ಮಧುಅಭಿಷೇಕ" ಅಂತಲೇ ಪ್ರಸಿದ್ಧಿ... ಹೀಗೆ ಅಭಿಷೇಕಗೊಂಡ ಜೇನನ್ನು ಪ್ರಸಾದ ರೂಪವಾಗಿ ನಿತ್ಯವೂ ಸೇವಿಸುತ್ತಾರೆ...

ಅಶನದಿಂದ ಸಿಗುವ ಸುಖ ಎಲ್ಲ ಸುಖಕಿಂತಲೂ ಶ್ರೇಷ್ಠವಾದ ಸುಖ ಅನ್ನುತ್ತದೆ ಈ ಸುಭಾಷಿತ. ಹಾಗಾದರೆ ಯಾವ ಆಹಾರ ಸೇವನೆಯಿಂದ ಪರಮ ಸುಖ ? ನಮ್ಮಲ್ಲಿ ಎರಡು ಬಗೆಯ ಹಸಿವಿದೆ. ಒಂದು ಹೊಟ್ಟೆಯ ಹಸಿವು, ಮತ್ತೊಂದು ತಲೆಯ ಹಸಿವು.... ಕೇವಲ ಹೊಟ್ಟೆಯ ಹಸಿವಿದ್ದವರಿಗೆ ಖಂಡಿತವಾಗಿಯೂ ಮೃಷ್ಟಾನ್ನ ಭೋಜನ ಸಾಕು ಹೊಟ್ಟೆ ಹಸಿವನ್ನು ಇಂಗಿಸಿ ಆನಂದವನ್ನು ಕೊಡುಲು, ಆದರೆ ತಲೆಯ ಹಸಿವು ಹೆಚ್ಚಾದವರಿಗೆ ನಾವು ಹೊಟ್ಟೆಗೆ ಹಾಕುವ ಮೃಷ್ಟಾನ್ನ ಭೋಜನ ಅಂತಹ ಖುಷಿಕೊಡುವುದಿಲ್ಲ. ಆ ಹಸಿವನ್ನು ತಣಿಸುವ ಅನ್ನ ಬೇರೆಯೇ ಇದೆ... ತಲೆಯ ಹಸಿವೆಯನ್ನು ಇಂಗಿಸುವ ಆಹಾರ ಉತ್ಕೃಷ್ಟಗ್ರಂಥಗಳ ಅಧ್ಯಯನ, ಅವಲೋಕನ ಪಾಠ-ಪ್ರವಚನಗಳ ಶ್ರವಣ ಎನಿಸಿಕೊಳ್ಳುತ್ತದೆ... ಅದರಲ್ಲೂ ಅಧ್ಯಾತ್ಮ ಗ್ರಂಥಗಳ ಅಧ್ಯಯನದಿಂದ, ಶಾಸ್ತ್ರಗ್ರಂಥಗಳ ಶ್ರವಣದಿಂದ, ಸಿಗುವ ಆತ್ಮ ತೃಪ್ತಿ ಅನ್ಯಾದೃಶ, ಅವರ್ಣನೀಯ... ಯಾವುದೋ ಕೇಳಿರದ ಮಹತ್ವದ ಅಧ್ಯಾತ್ಮ ಸಂಗತಿಗಳನ್ನು ಕೇಳಿ ಅರ್ಥೈಸಿಕೊಂಡಾಗ ಸಿಗುವ ತೃಪ್ತಿ ಅಥವಾ ಯಾವುದೋ ವೈಜ್ಞಾನಿಕ ಅಥವಾ ಆಳವಾದ ಸಂಶೋಧನೆಯಲ್ಲಿ, ಚಿಂತನೆಯಲ್ಲಿ ತೊಡಗಿಕೊಂಡವರಿಗೆ ಉತ್ತರ ರೂಪವಾಗಿ ಅವರ ತಲೆಯಲ್ಲೇ ಹೊಳೆಯುವ ವಿಚಾರಧಾರೆಗಳು ಹಸಿದ ತಲೆಗೆ ರಸದೌತಣವಲ್ಲದೆ ಮತ್ತೇನು ? ಆ ಆನಂದಕ್ಕೆ ಪಾರವೇ ಇಲ್ಲ... 

ನಮ್ಮ ದೇಹದ ದಶೇಂದ್ರಿಯಗಳಲ್ಲಿ (ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯಗಳಲ್ಲಿ) ನಯನವೇ ಪ್ರಧಾನ ಅನ್ನುತ್ತದೆ ಈ ಸುಭಾಷಿತ.... ಅದು ಹೌದು ! ಕಣ್ಣಿಲ್ಲದೆ ಇದ್ದಿದ್ದರೆ ಈ ಸುಂದರವಾದ, ಮನೋಹರವಾದ ಪ್ರಪಂಚವನ್ನು ನಾವು ಕಂಡು ಅನುಭವಿಸುವ, ಈ ಅನುಭವವನ್ನು ಪಡೆಯುವ ಸಾಧ್ಯತೆ ಇತ್ತೆ ?... ಒಂದು ಸಂಗತಿಯ ಬಗೆಗೆ ನಾವು ಎಷ್ಟೇ ಕೇಳಿದರೂ ಅದನ್ನು ಕಣ್ಣಾರೆ ಕಾಣುವ ತನಕ ಆ ಅನುಭವ, ಆ ಸ್ಪಷ್ಟಚಿತ್ರಣ ನಮ್ಮಲ್ಲಿ ಮೂಡುವುದಿಲ್ಲ... ಅದರಿಂದ ಕಾಣುವ ಕಣ್ಣು ಅತ್ಯಂತ ದೊಡ್ಡ ಸಂಪತ್ತು... ಕಣ್ಣಿಗೆ ಇನ್ನೂ ಹಲವು ವಿಶೇಷತೆಗಳಿವೆ. ನಮ್ಮ ದೇಹದ ಎಲ್ಲ ಅಂಗಾಗಗಳು ಕೊಳೆಯಾಗುತ್ತವೆ, ಅದಕೆಂದೆ ನಾವು ನಿತ್ಯ ಸ್ನಾನ ಮಾಡುವುದು, ದೇಹವನ್ನು ಸೋಪು ಹಚ್ಚಿ ತಿಕ್ಕಿ ತೊಳೆಯುವುದು. ಆದರೆ ಎಂದೂ ಕೊಳೆಯಾಗದ ಅಂಗವೇನಾದರೂ ನಮ್ಮ ದೇಹದಲ್ಲಿದ್ದರೆ ಅದು ನಮ್ಮ ಕಣ್ಣು ಮಾತ್ರ. ಒಂದು ಸಣ್ಣ ಧೂಳಿನ ಕಣ ಕಣ್ಣನ್ನು ಹೊಕ್ಕರೂ ಸಾಕು ತಕ್ಷಣ ಕಣ್ಣಿನಲ್ಲಿ ನೀರು ಬಂದು ಸ್ವಚ್ಛಮಾಡಿ ಧೂಳನ್ನು ಹೊರಹಾಕುತ್ತದೆ...  ಅಷ್ಟೇ ಅಲ್ಲ, ಸಂಸ್ಕೃತದಲ್ಲಿ ಕಣ್ಣಿಗಿರುವ ಹೆಸರೆ "ಚಕ್ಷುಸ್" ಅಂತ... ಇದರ ಸಂಸ್ಕೃತ ನಿರ್ವಚನವೇ ಅದ್ಭುತ...  चक्षुः – 'चक्षिड् व्यक्तायां वाचि’ - ಸಂಸ್ಕೃತದಲ್ಲಿ ಕಣ್ಣಿಗಿರುವ ನಿರ್ವಚನ "ಸ್ಪಷ್ಟವಾಗಿ ಮಾತನಾಡುವ ಇಂದ್ರಿಯ" ಅಂತ. ನಾವು ತಿಳಿದುಕೊಂಡಿದ್ದೇವೆ ಬಾಯಿಯಿಂದ ನಾವು ಮಾತನಾಡುವುದು ಎಂದು, ಆದರೆ ನಾವು ಸುಳ್ಳು ಹೇಳುವುದು ಬಾಯಿಯಿಂದಲೇ, ಸತ್ಯವನ್ನು ಮುಚ್ಚಿಡುವುದು ಬಾಯಿಯಿಂದಲೇ... ಆದರೆ ಕಣ್ಣು ಹಾಗಲ್ಲ, ನಾವು ಸುಳ್ಳು ಹೇಳುತ್ತಿದ್ದರೂ ಕಣ್ಣು ಸತ್ಯವನ್ನು ಹೊರಹಾಕುತ್ತಿರುತ್ತದೆ... ಅದನ್ನು ಗುರುತಿಸಿದ ಜನ ಹೇಳುವುದುಂಟು - "ಅವನು ಬಾಯಲ್ಲಿ ಹೇಳಿದ್ದು ಸುಳ್ಳು ಎಂಬುದನ್ನು ಅವನ ಕಣ್ಣು ಹೇಳುತ್ತಿತ್ತು" ಅಂತ...  ಎಷ್ಟೋ ಸಲ ನಾವು ಬಾಯಿಯಿಂದ ಹೇಳಲಾಗದ ಮಾತನ್ನು ಕಣ್ಣಿನಿಂದಲೆ / ಕಣ್ ಸನ್ನೆಯಿಂದಲೇ ಮತ್ತೊಬ್ಬರಿಗೆ ಕಮ್ಯುನಿಕೇಟ್ ಮಾಡುತ್ತೇವೆ... ಕಾಲೇಜಿನ ಹುಡುಗ-ಹುಡುಗಿಯರಿಗಂತೂ ಕಣ್ಣಿನ ಕಲೆ ಕರಗತ... ಅಷ್ಟೇ ಅಲ್ಲ, ಕಣ್ಣು ಒಬ್ಬ ವ್ಯಕ್ತಿಯ ಪರಿಚಯವನ್ನು ನೀಡುವ ಇಂದ್ರಿಯವೂ ಹೌದು. ಪರಿಚಿತನಾದ ಒಬ್ಬ ವ್ಯಕ್ತಿಯ ಮುಖವನ್ನೆಲ್ಲ ಮುಚ್ಚಿ ಕೇವಲ ಕಣ್ಣುಮಾತ್ರ ಕಾಣುವಂತೆ ಮಾಡಿದರೆ, ಆ ಕಣ್ಣುಗಳಿಂದಲೇ ಆ ವ್ಯಕ್ತಿಯನ್ನು ನಾವು ಕಂಡುಹಿಡಿಯಬಹುದು... ಅದೇ ವ್ಯಕ್ತಿಗೆ ಕಣ್ ಪಟ್ಟಿ ಮಾತ್ರ ಕಟ್ಟಿ ಮುಖ ತೆರೆದಿಟ್ಟರೂ ವ್ಯಕ್ತಿ ಯಾರೆಂದು ಗೊತ್ತಾಗುವುದಿಲ್ಲ... ಈ ಎಲ್ಲ ದೃಷ್ಟಿಕೋನಗಳಿಂದ ನೋಡಿದಾಗ ಕಣ್ಣು ಶ್ರೇಷ್ಠವಾದ ಇಂದ್ರಿಯ ಅನ್ನಬಹುದು... 

ದೇಹದ ಎಲ್ಲ ಅಂಗಗಳಲ್ಲೂ ಉತ್ತಮಾಂಗ ಎನಿಸಿದ ಶಿರಸ್ಸು ಶ್ರೇಷ್ಠ... ನಮ್ಮ ಶರೀರದಲ್ಲಿ ಶಿರೋಭಾಗವನ್ನು ಉತ್ತಮಾಂಗ ಅಂತ ಕರೆಯುತ್ತಾರೆ. ಈ ದೇಹದೊಳಗೆ ಬಂಧಿಯಾಗಿರುವ ಜೀವನಿಗೆ ಈ ಪ್ರಪಂಚದ ಅನುಭವವನ್ನು ನೀಡುವ ಎಲ್ಲ ಜ್ಞಾನೇಂದ್ರಿಯಗಳೂ (ಕಣ್ಣು, ಕಿವಿ, ಮೂಗು, ಬಾಯಿ/ನಾಲಿಗೆ) ಆಶ್ರಯ ಪಡೆದಿರುವುದು ನಮ್ಮ ಶಿರಸ್ಸಿನಲ್ಲಿ... ವಸ್ತುತಃ ಎಲ್ಲ ಇಂದ್ರಿಯಗಳ ಕೇಂದ್ರ (Functioning Centre) ಇರುವುದು ನಮ್ಮ ಹೃದಯಭಾಗದಲ್ಲಿಯಾದರೂ ಇಂದ್ರಿಯಗಳು (Magnifying Glassess) ಇರಿಸಲ್ಪಟ್ಟಿರುವುದು ನಮ್ಮ ಶಿರಸ್ಸಿನಲ್ಲಿ. ಹಾಗೆಯೇ ನಮ್ಮ ಮನಸ್ಸು ಕೂಡ (Brain), ಮೆದುಳು ಇರುವುದು ಶಿರಸ್ಸಿನಲ್ಲಿ... ಇವೆಲ್ಲವೂ ಒಂದೊಂದು ಸಂಪತ್ತು....

ಕಾಣುವ ಕಣ್ಣು ಒಂದು ಸಂಪತ್ತು, ಕೇಳುವ ಕಿವಿ ಒಂದು ಸಂಪತ್ತು, ಗಂಧವನ್ನು ಪೂಸುವ / ಗ್ರಹಿಸುವ ಅಥವಾ ಉಸಿರಾಡಿಸುವ ಮೂಗು ಒಂದು ಸಂಪತ್ತು, ಆಡುವ ಬಾಯಿ ಒಂದು ಸಂಪತ್ತು ಅಥವಾ ನೂರಾರು ಬಗೆಯ ರುಚಿಗಳನ್ನು ಬೇರೆ ಬೇರೆಯಾಗಿ ಗ್ರಹಿಸುವ ತನ್ಮೂಲಕ ರಸಜ್ಞಾನವನ್ನು ನಮಗೆ ನೀಡುವ ನಾಲಿಗೆ ಒಂದು ಸಂಪತ್ತು... ಈ ಎಲ್ಲ ಅನುಭವಗಳನ್ನೂ ಜೀವನಿಗೆ ಮುಟ್ಟಿಸುವ ಮನಸ್ಸು ಒಂದು ಸಂಪತ್ತು... ಹೀಗೆ ಮನುಷ್ಯನ ಬೆಳವಣಿಗೆಗೆ ಬೇಕಾದ ಎಲ್ಲವನ್ನೂ ಧರಿಸಿರುವ ಶಿರಸ್ಸು ನಮ್ಮ ದೇಹದ ಎಲ್ಲ ಅಂಗಗಳಿಗಿಂತಲೂ ಶ್ರೇಷ್ಠವಾದ ಅಂಗ...
(ಸಂಗ್ರಹ: ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ..)

1 comment:

If you have any doubts. please let me know...