April 21, 2020

ಶಿವಜ್ಞಾನಿ ಜಂಗಮನ ಆವಸ್ಥೆಗಳು

ಶಿವಜ್ಞಾನ ಪ್ರಾಪ್ತಿಯಿಂದ ಸರ್ವೋತ್ಕೃಷ್ಟನಾದ ಜಂಗಮನು ಮೂರು ಆವಸ್ಥೆಗಳನ್ನು ಹೊಂದುತ್ತಾನೆ. ಸ್ವಯಜಂಗಮ, ಚರಜಂಗಮ, ಪರಜಂಗಮ ಎಂಬ ಮೂರು ಆವಸ್ಥೆಗಳು ಅದರಲ್ಲಿ ಮೊದಲೆಯದು ಸ್ವಯಜಂಗಮ

ಈಶಾವಾಸ್ಯೋಪನಿಷತ್ 6 ನೇ ಶ್ಲೋಕದಲ್ಲಿ

ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ।
 
ಸರ್ವಭೂತೇಷು ಚಾತ್ಮಾನಾಂ ತತೋ ನ ವಿಜುಗುಪ್ಸತೇ॥

ಎಲ್ಲ ಪ್ರಾಣಿಗಳು ತನ್ನ ಆತ್ಮಕ್ಕಿಂತ ಭಿನ್ನವಲ್ಲವೆಂದು, ತನ್ನ ಆತ್ಮವೇ ಎಲ್ಲ ಜೀವಿಗಳಲ್ಲಿರುವ ಆತ್ಮ ಎಂದು ದರ್ಶಿಸುವ ಜ್ಞಾನಿಯು ಆ ದರ್ಶನ ವಿವೇಕದಿಂದ ಯಾವುದನ್ನು ದ್ವೇಷಿಸುದಿಲ್ಲ. ಯಾರು ಎಲ್ಲ ಪ್ರಾಣಿಗಳನ್ನು ತನ್ನ ಆತ್ಮನಲ್ಲಿಯೇ ನೋಡುವನೋ ತನ್ನ ಆತ್ಮವನ್ನು ಎಲ್ಲ ಪ್ರಾಣಿಗಳಲ್ಲಿ ನೋಡುವನೋ ಅವನು ನಂತರದಲ್ಲಿ ಜುಗುಪ್ಸೆಯನ್ನು ಹೊಂದುವದಿಲ್ಲ. ಎಂಬ ಶೃತಿ ವಾಕ್ಯದಂತೆ ಈ ಜಂಗಮನು ಎಲ್ಲೆಡೆಯೂ ತನ್ನಂತೆಯೇ ಕಾಣುತ್ತಾನೆಂದು ಸ್ವಯಜಂಗಮ ಎಂದು ಕರೆಯುವರು. 

ಸ್ವಯಜಂಗಮನ ಲಕ್ಷಣಗಳು?

ಸಿದ್ಧಾಂತ ಶಿಖಾಮಣಿಯ ೧೫ ಅ ೫೨ ನೇ ಶ್ಲೋಕದಲ್ಲಿ 

ಸ್ವಚ್ಛಂದಾಚಾರಸಂತುಷ್ಟೋ ಜ್ಯೋತಿರ್ಲಿಂಗಪರಾಯಣಃ।
 
ಆತ್ಮಸ್ಥಸಕಲಾಕಾರಃ ಸ್ವಾಭಿದೋ ಮುನಿಸತ್ತಮಃ॥
 
ಸ್ವಯಜಂಗಮನು ಸ್ವೇಚ್ಛಾಚಾರ ಸಂತುಷ್ಟನೂ, ಜ್ಯೋತಿರ್ಲಿಂಗ ಪರಾಯಣನೂ, ಸಮಸ್ತ ಪ್ರಪಂಚದ ಸ್ವರೂಪವನ್ನು ತನ್ನಲ್ಲಿರಿಸಿಕೊಂಡವನೂ, ಮುನಿಶ್ರೇಷ್ಠನೂ ಆಗಿರುವನು. 

ಮಮಕಾರ ಅಹಂಕಾರ ಇಲ್ಲದ ಯಾರ ಆಧಿನದಲ್ಲಿಯೂ ಇರದೇ, ಸ್ವೇಚ್ಛೆಯಾಗಿ ಎಲ್ಲಿಯಾದರೂ ವಾಸಮಾಡುತ್ತಾ ತನ್ನ ಇಷ್ಟಲಿಂಗದ ಪೂಜೆಮಾಡುತ್ತಾ ಪ್ರಾಣ ಭಾವಲಿಂಗಗಳೆಂಬ ಜ್ಯೋತಿರ್ಲಿಂಗಗಳ ಅನುಸಂಧಾನ ಪರಾಯಣನಾಗುತ್ತಾನೆ. ಶಿವಜ್ಞಾನ, ಶಿವಧ್ಯಾನ, ಭಿಕ್ಷಾಹಾರ, ಏಕಾಂತವಾಸ ಈ ಮಹಾತ್ಮನ ಪ್ರಧಾನವಾದ ಕರ್ಮಗಳು.

ಈ ಜಗತ್ತಿನಲ್ಲಿ ಸಂಗ ಸಹವಾಸದಿಂದ ಮನುಷ್ಯ ಕೆಡಲೂಬಹುದು ಸುಧಾರಿಸಲೂಬಹುದು. ಒಳ್ಳೆಯವರ ಸಹವಾಸದಿಂದ ತನಗೆ ಗತಿ, ದುರ್ಜನರ ಸಂಗದಿಂದ ದುರ್ಗತಿ ಒದಗುವದು. ಶಿವಧ್ಯಾನ ಶಿವಜ್ಞಾನವನ್ನು ಪಡೆದುಕೊಂಡಿದ್ದರೂ ಒಮ್ಮೊಮ್ಮೆ ಆಚಾರಹೀನನಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಏಕಾಂತವಾಸದ ಬಗ್ಗೆ ಹೆಚ್ಚು ಒತ್ತುಕೊಟ್ಟು ಹೇಳಿದ್ದಾರೆ. ಭಿಕ್ಷಾಟನೆಯಿಂದ ಅಹಂ ತನ್ನಿತಾನೇ ಇಲ್ಲವಾಗಿ ಹೋಗುವದು. ಅಹಂ ಯಾವಾಗ ಇಲ್ಲವಾಗುವದೋ ಜಂಗಮನು ಶಿವಧ್ಯಾನ ಶಿವಜ್ಞಾನಗಳಲ್ಲಿ ಆಸಕ್ತನಾಗುವನು. 
 ಅಂದರೆ ಈತನು ಯಾವುದಾದರೂ ಗ್ರಾಮದಲ್ಲಿ ಅಥವಾ ನಗರದಲ್ಲಿ ಇರುವ ಮಠದಲ್ಲಿ ಅಥವಾ ದೇವಾಲಯದಲ್ಲಿ ವಾಸಮಾಡುತ್ತಾ ಶಿವಧ್ಯಾನ ತತ್ಪರನಾಗಿ ಭಕ್ತರಿಗೆ ಶಿವಜ್ಞಾನವನ್ನು ಉಪದೇಶಿಸುತ್ತಾನೆ. ಶಿವಭಕ್ತರ ಮನೆಗಳಲ್ಲಿಯೇ ಭಿಕ್ಷೆಯನ್ನು ಬೇಡುತ್ತಾ ಅತಿಥಿ ಸತ್ಕಾರ ಮಾಡುತ್ತಾ ತಾನೂ ಸಹ ಊಟ ಮಾಡುತ್ತಾನೆ. ಪಂಡಿತಾಃ ಸಮದರ್ಶಿನಃ ಎಂಬಂತೆ ಜ್ಞಾನಿಗಳು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಎಲ್ಲಡೆಯೂ ಎಲ್ಲವೂ ತನ್ನಂತೆಯೇ ಎಂಬ ಸಮದರ್ಶಿತ್ವವು ಈತನಿಗೆ ಪ್ರಾಪ್ತವಾಗುವದರಿಂದ ಈತನು ಯಾರನ್ನೂ ದ್ವೇಷಿಸುವದಿಲ್ಲ ಅಸೂಯೆಪಡುವದಿಲ್ಲ. 

No comments:

Post a Comment

If you have any doubts. please let me know...