|*ದಶಾಸಂಧಿ ಕಾಲವು ಯಾವಾಗ ಬರುತ್ತದೆ ?*
ದಕ್ಷಿಣಭಾರತದಲ್ಲಿ ಪ್ರಸಿದ್ಧವಾಗಿರುವುದು ವಿಂಶೋತ್ತರೀ ದಶಾ ಪದ್ಧತಿ. ನಾಕ್ಷತ್ರ ದಶಾ ,ಉಡುದಶಾ ಎಂದರೂ ಇದೇ ದಶಾಪದ್ಧತಿಯೇ ಆಗಿದೆ. ಇದು ಜ್ಯೋತಿಷ ಶಾಸ್ತ್ರದ ಅಷ್ಟಾದಶ ಪ್ರವರ್ತಕರಲ್ಲಿ ಒಬ್ಬರಾದ ಪರಾಶರ ಮಹರ್ಷಿ ಪ್ರೋಕ್ತವಾದದ್ದು. ಇಲ್ಲಿ ರವಿಯಿಂದ ಶುಕ್ರನವರೆಗೆ ಒಂಭತ್ತು ದಶೆಗಳಿದ್ದು ಈ ದಶೆಗಳ ವಿರಾಮಕಾಲವೇ ದಶಾಸಂಧಿ ಕಾಲಗಳಾಗಿವೆ.
🟣 *ಈ ದಶಾಸಂಧಿಕಾಲಗಳು ಅಶುಭಪ್ರದವೇ ? ಈ ಕುರಿತು ಜ್ಯೋತಿಷ ಶಾಸ್ತ್ರದ ಮೂಲಗ್ರಂಥಗಳು ಏನು ಹೇಳುತ್ತವೆ ?*
ಪ್ರಶ್ನಮಾರ್ಗ ಗ್ರಂಥವು ಎಲ್ಲಾ ದಶೆಗಳ ಅಂತ್ಯವು ಅಶುಭವೆಂದೂ, ದೋಷಪ್ರದವಾಗಿದ್ದರೆ ಮತ್ತೂ ಅಶುಭಪ್ರದವೆಂದು ಹೇಳುತ್ತದೆ. ಎರಡು, ಮೂರಕ್ಕಿಂತಲೂ ಅಧಿಕ ದಶಾಪದ್ಧತಿಗಳ ದಶಾಂತ್ಯವೂ ಏಕಕಾಲಕ್ಕೆ ಬಂದರೆ ಕಷ್ಟಪ್ರದವೆಂದು ಹೇಳಿದೆ. ಅನೇಕ ಪ್ರಮಾಣಗ್ರಂಥಗಳಲ್ಲಿ ದಶಾನಾಥಗ್ರಹವು 6 8 12 ರಲ್ಲಿದ್ದರೆ, ಈ ಭಾವಗಳ ಅಧಿಪತಿಗಳ ಜೊತೆಗಿದ್ದರೆ, ಈ ಗ್ರಹವೇ 6 8 12 ರ ಅಧಿಪತಿಯಾಗಿದ್ದರೆ, ನೀಚಕ್ಷೇತ್ರ, ಶತ್ರುಕ್ಷೇತ್ರದಲ್ಲಿದ್ದರೆ, ಪಾಪಗ್ರಹ ಆಗಿದ್ದರೆ.........ಹೀಗೆ ಅನೇಕ ನಿಮಿತ್ತವನ್ನು ಹೇಳಿ ಆ ಸ್ಥಿತಿಯಿದ್ದಾಗ ಆ ದಶೆಯಲ್ಲಿ ವ್ಯಕ್ತಿಗೆ ಅಶುಭ ಫಲಗಳು ಸಂಭವಿಸುತ್ತವೆಯೆಂದು ಹೇಳಿವೆ. ಇವು ಆ ಗ್ರಹನದಶೆಯ ಆರಂಭದಿಂದ ಅಂತ್ಯದವರೆಗೂ ಸಂಭವಿಸಬಹುದಾದ ಅನಿಷ್ಟಗಳಾಗಿವೆ. ಇದರಲ್ಲಿ ದಶಾಸಂಧಿಕಾಲವೂ ಸೇರಿದೆ.
🟣 *ಅನಿಷ್ಟಪ್ರದ ದಶೆಯೆಂದು ಕಂಡುಬಂದಾಗ ಶಾಂತಿ ಮಾಡಬೇಕೇ ? ಯಾವಾಗ ಶಾಂತಿಯನ್ನು ಮಾಡಬೇಕು ?*
ಆಯಾ ಗ್ರಹಸೂಚಿತ ಅನಿಷ್ಟವನ್ನು ವ್ಯಕ್ತಿಯು ಅನುಭವಿಸಬೇಕಾಗಿರುವುದರಿಂದ ಆ ಅನಿಷ್ಟವನ್ನು ಕಡಿಮೆ ಮಾಡಿಕೊಳ್ಳಲು ದಶೆಯ ಆರಂಭದಲ್ಲೇ ಶಾಂತಿಯನ್ನು ಮಾಡಬೇಕು. ಯಾವ ಶಾಂತಿಯನ್ನು ಮಾಡಬೇಕೆಂಬುದರ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವುದು ಸ್ವಲ್ಪ ಮಾತ್ರ. ವೈದಿಕ ಪ್ರಯೋಗ ಗ್ರಂಥಗಳನ್ನು, ತಂತ್ರಶಾಸ್ತ್ರದ ಗ್ರಂಥಗಳನ್ನು ಆಶ್ರಯಿಸಿ ಜ್ಯೋತಿಷಿಯು ಯಾವ ಶಾಂತಿಯೆಂದು ನಿರ್ಧರಿಸಿ ಹೇಳಬೇಕಾಗುತ್ತದೆ. ಶಾಂತಿಯೆಂದರೆ ಜಪ, ಪೂಜೆ, ಹೋಮ, ಸ್ತುತಿ ಇತ್ಯಾದಿ ಯಾವುದೂ ಆಗಬಹುದು. ಈ ಶಾಂತಿಗಳಲ್ಲಿ ನವಗ್ರಹ ಶಾಂತಿ, ಪ್ರತ್ಯೇಕ ಗ್ರಹಶಾಂತಿ, ವೇದ ಮತ್ತು ತಂತ್ರಗಳಲ್ಲಿ ಪ್ರೋಕ್ತವಾದ ಮೃತ್ಯುಂಜಯ ಹೋಮ, ರುದ್ರಹೋಮವೇ ಮುಂತಾದ ತತ್ತದ್ದೇವತಾ ಅನುಷ್ಠಾನಗಳು ಸೇರಿವೆ. ದಶಾಸಂಧಿಯಲ್ಲೂ ಆ ಗ್ರಹನು ಅರಿಷ್ಟಸೂಚಕನಾಗಿದ್ದರೆ ಸಂಧಿಕಾಲಕ್ಕೆ ಮುಂಚಿತವಾಗಿ ಶಾಂತಿಯನ್ನು ಮಾಡಬೇಕು. ಇದು ಎಲ್ಲಾ ಒಂಭತ್ತು ದಶೆಗಳ ಸಂಧಿಕಾಲಕ್ಕೂ ಅನ್ವಯಿಸುತ್ತದೆ.
🟣 *ಇಲ್ಲಿ ಕುಜ -ರಾಹು / ರಾಹು -ಬೃಹಸ್ಪತಿ / ಶುಕ್ರ - ಆದಿತ್ಯ ಗ್ರಹಗಳು ಪರಸ್ಪರ ವಿರೋಧಿಗಳಾದ್ದರಿಂದ ಆ ಕಾಲದಲ್ಲಿ ಮಾತ್ರ ಸಂಧಿಶಾಂತಿ ಹೋಮವನ್ನು ಹೇಳಿದ್ದಾರಲ್ಲವೇ ? ಇದೇ ಸತ್ಯವೆಂದು ಕಾಣುತ್ತದೆ. ಈ ಕುರಿತು ಜ್ಯೋತಿಷ ಗ್ರಂಥಗಳು ಏನು ಹೇಳಿವೆ ?*
ಬೃಹಜ್ಜಾತಕ, ಜಾತಕ ಪಾರಿಜಾತ, ಫಲದೀಪಿಕಾ, ಸಾರಾವಲೀ, ಉತ್ತರ ಕಾಲಾಮೃತ ಮುಂತಾದ ಜ್ಯೋತಿಷದ ಪ್ರಮಾಣ ಗ್ರಂಥಗಳಲ್ಲಿ ಈ ಮೂರು ದಶಾಸಂಧಿಗಳು ಮಾತ್ರ ವಿಶೇಷ ಅನಿಷ್ಟಪ್ರದವೆಂಬ ಉಕ್ತಿಯೇ ಇಲ್ಲ. ವಿಂಶೋತ್ತರೀ ದಶಾಪದ್ಧತಿಯನ್ನು ಹೇಳಿದ ಪರಾಶರ ಹೋರೆಯಲ್ಲಿಯೇ ಈ ಮೂರು ದಶಾಂತ್ಯಗಳು ಮಾತ್ರ ಅಶುಭಪ್ರದವೆಂಬ ಉಲ್ಲೇಖವಿಲ್ಲ. ಅಲ್ಲದೆ ದಶಾನಾಥ, ಭುಕ್ತಿನಾಥರ ಪರಸ್ಪರ ಸಂಬಂಧಗಳಿಂದ ಇಷ್ಟ, ಅನಿಷ್ಟ ಫಲಗಳನ್ನು ಹೇಳಿದ್ದಾರೆಯೇ ಹೊರತು ಎರಡು ದಶಾಧಿಪತಿಗಳ ಪರಸ್ಪರ ಸಂಬಂಧದಿಂದ ಶುಭಾಶುಭ ಫಲಗಳನ್ನು ಪ್ರಮಾಣ ಗ್ರಂಥಗಳು ಹೇಳಿಲ್ಲ! ರಾಹು ಛಾಯಾಗ್ರಹನಾದ್ದರಿಂದ ಆತನ ಶತೃತ್ವ, ಮಿತ್ರತ್ವಗಳೂ ಪ್ರಧಾನವಲ್ಲ. ಬಹುಗ್ರಂಥಗಳು ಸಪ್ತಗ್ರಹಗಳ ಶತೃತ್ವ, ಮಿತ್ರತ್ವಗಳನ್ನು ಮಾತ್ರ ಹೇಳಿವೆ. ಎರಡು ದಶಾನಾಥರ ಪರಸ್ಪರ ಸಂಬಂಧದಿಂದ ಫಲವನ್ನು ಹೇಳಿಲ್ಲವಾದ್ದರಿಂದ ಈ ಮೂರು ದಶಾಸಂಧಿಗಳಿಗೆ ಈ ಶತೃತ್ವ, ಮಿತ್ರತ್ವಗಳು ಅನ್ವಯಿಸುವುದಿಲ್ಲ.
🟣 *ಈ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ಸಂಧಿಶಾಂತಿ ಹೋಮಗಳ ಬಗ್ಗೆ ಪ್ರಾಚೀನ ಗ್ರಂಥಗಳು ಏನು ಹೇಳುತ್ತವೆ ?*
ಶಾಂತಿಯ ಕುರಿತಾದ ಪ್ರಾಚೀನ ಗ್ರಂಥಗಳಾದ ಶಾಂತಿಸಾರ, ಶಾಂತಿರತ್ನ, ಶಾಂತಿ ಮಯೂಖ ಹಾಗೂ ಪ್ರಸಿದ್ಧ ಪ್ರಯೋಗ ಗ್ರಂಥಗಳಾದ ವಿಧಾನ ಪಾರಿಜಾತ, ಪ್ರಯೋಗ ಪಾರಿಜಾತ, ಋಗ್ವೇದೀಯ ಬ್ರಹ್ಮಕರ್ಮಸಮುಚ್ಚಯ, ಹಿರಣ್ಯಕೇಶೀಯ ಬ್ರಹ್ಮಕರ್ಮಸಮುಚ್ಚಯ ಮುಂತಾದ ವುಗಳಲ್ಲಿ ಈಗ ಪ್ರಚಲಿತದಲ್ಲಿರುವ ಸಂಧಿಶಾಂತಿ ಹೋಮಗಳು ಪ್ರೋಕ್ತವಾಗಿಲ್ಲ. ಈ ಗ್ರಂಥಗಳು ನವಗ್ರಹಶಾಂತಿ ಹೋಮವನ್ನು ಹೇಳಿವೆ. ಜ್ಯೋತಿಷದ ಕೆಲವು ಗ್ರಂಥಗಳಲ್ಲಿ, ಶಾಂತಿ ಮತ್ತು ಪ್ರಯೋಗ ಗ್ರಂಥಗಳಲ್ಲಿಯೂ ಸಹ ಗ್ರಹವು ದುಃಸ್ಥವಾಗಿದ್ದಾಗ ಪ್ರತ್ಯೇಕ ಗ್ರಹಶಾಂತಿಯನ್ನು ವಿಧಿಸಿರುವುದು ಕಂಡುಬರುತ್ತದೆ. . "*ಯಶ್ಚ ಯಸ್ಯ ಯದಾ ದುಃಸ್ಥಃ ಸ ತಂ ಯತ್ನೇನ ಪೂಜಯೇತ್*" ಎಂಬ ಯಾಜ್ಞವಲ್ಕ್ಯ ಸ್ಮೃತಿವಾಕ್ಯವೂ ಕೂಡ ಇದನ್ನು ಪುಷ್ಟೀಕರಿಸುತ್ತದೆ. ಈ ಯಾವ ಗ್ರಂಥಗಳೂ ಸುಸ್ಥ ಗ್ರಹನಿಗೆ ಶಾಂತಿಯನ್ನು ಮಾಡಲು ಹೇಳಿಲ್ಲ ಎಂಬುದು ಗಮನಾರ್ಹ. (ನವಗ್ರಹಶಾಂತಿ ಮಾಡಬಹುದು)
ಈ ಪ್ರತ್ಯೇಕ ಗ್ರಹಶಾಂತಿಗಳನ್ನು ಅನಿಷ್ಟಸೂಚಕ ಗ್ರಹದ ದಶೆಯ ಆರಂಭದಲ್ಲೇ ಮಾಡಬೇಕು. ದಶೆಯ ಸಂಧಿಕಾಲದಲ್ಲಿಯೂ ಮುಂಚಿತವಾಗಿ ಮಾಡಬಹುದು. ಇದು ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ದಶಾಸಂಧಿಗಳಿಗೆ ಮಾತ್ರ ಅನ್ವಯವಲ್ಲ. ಎಲ್ಲ ದಶೆಗಳಿಗೂ ಸಮಾನವಾಗಿ ಅನ್ವಯ. ಇನ್ನು ಬೋಧಾಯನ ಗೃಹ್ಯಸೂತ್ರದಲ್ಲಿ ನವಗ್ರಹ ಪೂಜೆ ಮತ್ತು ನವಗ್ರಹಶಾಂತಿಯೂ ಸಹ ಉಕ್ತವಾಗಿದ್ದು ಅಲ್ಲಿ ಒಂದೋ, ಎರಡೋ ಗ್ರಹರು ವಿಷಮಸ್ಥರಾಗಿರುವಾಗ ಆ ಗ್ರಹಗಳನ್ನು ಮಾತ್ರ ಅರ್ಚಿಸುವಂತಿಲ್ಲ. ಎಲ್ಲಾ ಗ್ರಹರನ್ನೂ ಅರ್ಚಿಸಬೇಕು ಎಂಬ ನಿರ್ದೇಶವಿದೆ. ಇಲ್ಲಿ ನವಗ್ರಹಶಾಂತಿಯ ಅನಂತರ ಪುನಃ ಅನಿಷ್ಟಸ್ಥಿತ ಗ್ರಹರನ್ನು ಮಾತ್ರ ಅರ್ಚಿಸುವಂತಿಲ್ಲ. ಆಗಲೂ ಎಲ್ಲ ಗ್ರಹರನ್ನೂ ಅರ್ಚಿಸಬೇಕು. ಆಗ ನವಗ್ರಹಶಾಂತಿ ಪೂರ್ವಕ ನವಗ್ರಹಶಾಂತಿ ಮಾಡಬೇಕಾಗುತ್ತದೆ.
🟣 *ಪ್ರಾಚೀನವಾದ ಶಾಂತಿ ಮತ್ತು ಪ್ರಯೋಗ ಗ್ರಂಥಗಳಲ್ಲಿ ಈ ಮೂರು ಸಂಧಿಶಾಂತಿ ಹೋಮಗಳನ್ನು ಹೇಳದಿದ್ದರೂ ಈಗ ರೂಢಿಯಲ್ಲಿರುವ ಮೂರು ಸಂಧಿಶಾಂತಿ ಹೋಮಗಳು ಶೌನಕ ಮಹರ್ಷಿಯ ವಚನಗಳನ್ನು ಆಧರಿಸಿಯೇ ರೂಪುಗೊಂಡಿವೆಯಲ್ಲವೇ ?*
ಶೌನಕೀಯವಾದ ಮೂಲಗ್ರಂಥಗಳಲ್ಲಿ ಈ ಸಂಧಿಶಾಂತಿ ಹೋಮಗಳ ವಿಧಿ ಇರುವುದು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಪ್ರಸಿದ್ಧ ಮತ್ತು ಬೃಹತ್ ಗ್ರಂಥವಾದ ವಿಧಾನ ಪಾರಿಜಾತದಲ್ಲಿ ಗ್ರಹಯಜ್ಞವು ಬಹು ವಿಸ್ತಾರವಾಗಿ ಉಕ್ತವಾಗಿದ್ದು ಅದರಲ್ಲಿ ನವಗ್ರಹಶಾಂತಿ ಕುರಿತಾದ ಶೌನಕೀಯ ವಚನಗಳು ಲಭ್ಯವಿದೆ. ನಿತ್ಯ, ನೈಮಿತ್ತಿಕ ಮತ್ತು ಕಾಮ್ಯವಾಗಿ ನವಗ್ರಹಶಾಂತಿಯನ್ನು ಶೌನಕ ಮಹರ್ಷಿಗಳು ಹೇಳಿದ್ದು ಗ್ರಹರ ಉಗ್ರಚೇಷ್ಟೆಯಲ್ಲಿ (ಅನಿಷ್ಟಸ್ಥಿತಿಯಲ್ಲಿ) ನವಗ್ರಹಶಾಂತಿಯನ್ನು ಹೇಳಿದ್ದಾರೆ. ಅದೇ ವಿಧಾನಪಾರಿಜಾತದಲ್ಲಿ - ಪುತ್ರಿಯ ವಿವಾಹ ಸಂದರ್ಭದಲ್ಲಿ ಮತ್ತು ಪುತ್ರನ ಉಪನಯನ ಸಮಯದಲ್ಲಿ ಗುರುಬಲ ಹಾಗೂ ರವಿಬಲ ಇಲ್ಲದಿದ್ದರೆ ಕ್ರಮವಾಗಿ ಬೃಹಸ್ಪತಿ ಶಾಂತಿಹೋಮ ಮತ್ತು ರವಿಶಾಂತಿ ಹೋಮಗಳನ್ನು ಶೌನಕ ಋಷಿಪ್ರೋಕ್ತವೆಂದೇ ಉಲ್ಲೇಖಿಸಿದ್ದಾರೆ. ಈ ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿಗಳನ್ನು ಪ್ರಯೋಗ ಪಾರಿಜಾತ ಮತ್ತು ಶಾಂತಿರತ್ನ ಗ್ರಂಥಗಳೂ ಕೂಡ ಶೌನಕಪ್ರಣೀತವೆಂದೇ ಹೇಳಿವೆ. ಪಾಂಡುರಂಗ ವಾಮನ ಕಾಣೆಯವರು "ಧರ್ಮಶಾಸ್ತ್ರದ ಇತಿಹಾಸ" ಗ್ರಂಥದಲ್ಲಿ ಶೌನಕೀಯವಾದ ಕೆಲವು ಗ್ರಂಥಗಳ ಪಟ್ಟಿಯನ್ನು ಕೊಟ್ಟಿದ್ದು ಅವುಗಳಲ್ಲಿ ನವಗ್ರಹಶಾಂತಿ ಮತ್ತು ಬೃಹಸ್ಪತಿ ಶಾಂತಿ ವಿಧಿಗಳು ಉಕ್ತವಾಗಿವೆಯೆಂದು ಬರೆದಿದ್ದಾರೆ. ಈ ಎಲ್ಲ ಆಧಾರಗಳಿಂದ ನವಗ್ರಹಶಾಂತಿ, ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿ ವಿಧಾನಗಳನ್ನು ಶೌನಕರು ಹೇಳಿದ್ದಾರೆಂದು ವಿಶ್ವಾಸವಿಡಬಹುದಾಗಿದೆ. ವಿಧಾನಪಾರಿಜಾತದಲ್ಲಿ ಶೌನಕೋಕ್ತ ಆದಿತ್ಯ ಶಾಂತಿಯ ತುದಿಯಲ್ಲಿ "*ಏವಂ ಯೋ ಯೋ ಗ್ರಹೋ ದುಷ್ಟಸ್ತತ್ತಚ್ಛಾಂತಿಂ ಸಮಾಚರೇತ್*" ಎಂಬ ವಾಕ್ಯವಿದೆ. ಆದಿತ್ಯ ಶಾಂತಿಯ ಕ್ರಮದಲ್ಲಿಯೇ ಯಾವ ಯಾವ ಗ್ರಹರು ದುಷ್ಟರಾಗಿದ್ದಾರೆಯೋ ಆ ಗ್ರಹದ ಶಾಂತಿ ಮಾಡಿರಿ ಎಂದು ನಿರ್ದೇಶನವಿದೆ. ಇಲ್ಲಿ ವಿವಾಹ/ಉಪನಯನಗಳಲ್ಲಿ ಅನಿಷ್ಟಸ್ಥಿತ ಗ್ರಹರಿಗೆ ಶಾಂತಿಯನ್ನು ಹೇಳಿದ್ದು ಇದು ಉಪನಯನ ವಿವಾಹಗಳ ಆರಂಭದಲ್ಲಿ ಮಾಡುವುದಾಗಿದೆ. ಹೀಗೆ ವಿವಾಹ, ಉಪನಯನಗಳಲ್ಲಿ ಗುರುಬಲ, ರವಿಬಲ, ಇತರ ಗ್ರಹಬಲ ಇಲ್ಲದಿದ್ದಾಗ / ದುಷ್ಟಸ್ಥಾನ ಸ್ಥಿತರಾಗಿದ್ದಾಗ ಮಾತ್ರ ಪ್ರತ್ಯೇಕ ಗ್ರಹಶಾಂತಿಯನ್ನು ಹೇಳಿದ ಶೌನಕ ಮಹರ್ಷಿಗಳು ಸೂತ್ರಕಾರರೂ, ಜ್ಯೋತಿಷ ಶಾಸ್ತ್ರ ಪ್ರವರ್ತಕರೂ ಆಗಿ - ಕುಜರಾಹುದಶಾಸಂಧಿಯಲ್ಲಿ ಕುಜ/ಚಂದ್ರ/ರಾಹುಗ್ರಹರ, ರಾಹುಬೃಹಸ್ಪತಿ ದಶಾಸಂಧಿಯಲ್ಲಿ ರಾಹು/ಕುಜ/ಗುರುಗ್ರಹರ, ಶುಕ್ರಾದಿತ್ಯ ದಶಾಸಂಧಿಯಲ್ಲಿ ಶುಕ್ರ/ಕೇತು/ರವಿಗ್ರಹರ ಇಷ್ಟಾನಿಷ್ಟ ಸ್ಥಿತಿ ಎಲ್ಲವನ್ನೂ ಬದಿಗೊತ್ತಿ ಆ ಗ್ರಹರು ಅನಿಷ್ಟಪ್ರದರೆಂದೇ ಪರಿಗಣಿಸಿ ಶಾಂತಿಯೊಂದನ್ನು ಬರೆದಿರಲು ಸಾಧ್ಯವೇ ? ಸಾಧ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ. ಈಗ ನಡೆಯುತ್ತಿರುವ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ
ಸಂಧಿಶಾಂತಿಗಳು ಜಾತಕದಲ್ಲಿ ಆ ಆ ಗ್ರಹರು ಇಷ್ಟಸ್ಥಾನದಲ್ಲಿದ್ದಾರೋ, ಅನಿಷ್ಟ ಸ್ಥಾನದಲ್ಲಿದ್ದಾರೋ ಯಾವುದನ್ನೂ ನೋಡದೆ ಆ ಗ್ರಹರು ಅನಿಷ್ಟಪ್ರದರೆಂದೇ ಪರಿಗಣಿಸಿ ಶಾಂತಿಯನ್ನು ಮಾಡುವುದಾಗಿದೆ. ಜ್ಯೋತಿಷದಲ್ಲಿ ಗ್ರಹರ ಇಷ್ಟಾನಿಷ್ಟ ಸ್ಥಿತಿ ನೋಡಿಯೇ ಪ್ರತ್ಯೇಕ ಗ್ರಹಶಾಂತಿಯನ್ನು ನಿರ್ದೇಶಿಸಬೇಕಾಗುತ್ತದೆ. ಇಲ್ಲಿ ಮೂರೂ ಸಂಧಿಶಾಂತಿಗಳಲ್ಲಿ ಬರುವ ಮೂರು ಮೂರು ಗ್ರಹರಲ್ಲಿ ಯಾರು ಅನಿಷ್ಟಪ್ರದ ಗ್ರಹವೋ ಆ ಗ್ರಹಕ್ಕೆ ಮಾತ್ರ ಶಾಂತಿಯನ್ನು ಮಾಡಬೇಕು. ಅದನ್ನು ಜ್ಯೋತಿಷಿಗಳು ಸೂಚಿಸಬೇಕಾಗುತ್ತದೆ. ಆಗ ಇದನ್ನು ಸಂಧಿಶಾಂತಿ ಹೋಮವೆಂದು ಕರೆಯುವಂತಿಲ್ಲ. ಆಯಾ ಗ್ರಹದಶಾಂತಿಯೆಂದೇ ಕರೆಯಬೇಕು.
ರಾಹುಬೃಹಸ್ಪತಿ ಸಂಧಿಶಾಂತಿ ಪ್ರಯೋಗದಲ್ಲಿ ಲಭಿಸುವ ಶೌನಕೋಕ್ತವೆಂದು ಹೇಳಲಾದ ಶ್ಲೋಕಗಳ ತುದಿಯಲ್ಲಿ ಇತ್ಯಾದಿ ಎಂದು ಇರುವುದರಿಂದ ಮುಂದಿನ ಭಾಗ ಇದೆಯೆಂದೇ ಅರ್ಥ. ಮುಂದೊಂದು ದಿನ ಅದು ಪೂರ್ತಿಯಾಗಿ ಲಭಿಸೀತು. ಲಭಿಸಿದರೂ ಕೂಡ - ಗ್ರಹರು ಅನಿಷ್ಟಸ್ಥಾನದಲ್ಲಿದ್ದರೆ ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿ, ಉಳಿದ ಗ್ರಹಶಾಂತಿಯನ್ನು ವಿಧಿಸಿದ ಶೌನಕ ಮಹರ್ಷಿಯ ವಾಕ್ಯಗಳು ಪ್ರಾಚೀನ ಗ್ರಂಥಗಳಲ್ಲಿ ಲಭಿಸುವುದರಿಂದ/ ಶೌನಕೋಕ್ತವಾದ ಹಲವು ಶಾಂತಿಗಳು ಈ ಗ್ರಂಥಗಳಲ್ಲಿ ಲಭಿಸುವುದರಿಂದ/ ಈ ಮೂರು ಸಂಧಿಶಾಂತಿಗಳು ಆ ಗ್ರಂಥಗಳಲ್ಲಿ. ಎಲ್ಲಿಯೂ ಇಲ್ಲದಿರುವುದರಿಂದ - ಇದು ಆ ವಾಕ್ಯಗಳ ವಿರುದ್ಧವಾಗಿ ಗ್ರಹರ ಇಷ್ಟಾನಿಷ್ಟ ಸ್ಥಿತಿಯನ್ನು ಪರಿಗಣಿಸದೆ ಶಾಂತಿಯನ್ನು ಹೇಳುವ ಶ್ಲೋಕಗಳಾಗುವುದರಿಂದ ಶೌನಕಪ್ರೋಕ್ತವೆಂದು ಹೇಳಲಾಗದು. ಶೌನಕರ ಹೆಸರಿನಲ್ಲಿ ಪಂಡಿತರೊಬ್ಬರು ಶ್ಲೋಕರಚನೆ ಮಾಡಿ ಸೇರಿಸಿದ್ದಾರೆ ಎಂದೇ ಖಚಿತವಾಗಿ ಊಹಿಸಬಹುದಾಗಿದೆ. ಶೌನಕರು ಹೇಳಿಲ್ಲದ ವಾಕ್ಯಗಳನ್ನು ಶೌನಕರದ್ದೆಂದು ನಂಬಿ ಅದಕ್ಕೊಂದು ಪ್ರಯೋಗ ವಿಧಾನ ಸಿದ್ಧವಾಗಿ 75 -100 ವರ್ಷಗಳಿಂದೀಚೆಗೆ ಪ್ರಚಲಿತಕ್ಕೆ ಬಂದಿದೆಯಷ್ಟೆ. ಪ್ರತ್ಯೇಕ ಗ್ರಹಶಾಂತಿ ವಿಧಾನವೆಂದು ಪರಿಗಣಿಸಲಿಕ್ಕೂ ಕೂಡ ಅದರಲ್ಲಿ ಹಲವಾರು ತೊಡಕುಗಳಿವೆ. ಇತ್ತ ಜ್ಯೋತಿಷದ ನಿಯಮಗಳನ್ನು ಅನುಸರಿಸದೆ, ಅತ್ತ ಶೌನಕರ ವಚನಗಳನ್ನೂ ಅನುಸರಿಸದೆ, ಗೃಹ್ಯಸೂತ್ರವನ್ನೂ ಅನುಸರಿಸದೆ ರಚಿಸಿರುವ ಶಾಂತಿಯಾಗಿದೆ. ಶೌನಕ ಮಹರ್ಷಿಗಳು ಗ್ರಹರ ದುಃಸ್ಥಾನ ಸ್ಥಿತಿ, ಸುಸ್ಥಾನಸ್ಥಿತಿ ಯಾವುದನ್ನೂ ಪರಿಗಣಿಸದೆ ಮೂರುಸಂಧಿಶಾಂತಿ ಹೋಮಗಳನ್ನು ರಚಿಸಿರಲಾರರು ಎಂಬುದೇ ನನ್ನ ಅಭಿಪ್ರಾಯವಾಗಿದೆ.
🟣 *ಸಂಧಿಶಾಂತಿ ಹೋಮವನ್ನು ಮಾಡುವ ಉದ್ದೇಶವೇನು ?*
ಸಂಧಿಕಾಲವು ಅಶುಭಪ್ರದವೆಂದು ಶಾಸ್ತ್ರಕಾರರು ಹೇಳಿರುವುದರಿಂದ ಆ ಕಾಲದಲ್ಲಿ ಅಪಮೃತ್ಯುವೋ, ರೋಗಬಾಧೆಯೋ, ಅಪಘಾತವೋ, ಉದ್ಯೋಗದಲ್ಲಿ ಸಂಕಷ್ಟವೋ,. ಕುಟುಂಬದ ಸದಸ್ಯರಿಗೆ ತೊಂದರೆಯೋ ಯಾವುದಾದರೂ ಆಗಬಹುದಾಗಿದೆ. ಈ ಅನಿಷ್ಟಗಳನ್ನು ಕಡಿಮೆ ಮಾಡಿಕೊಳ್ಳುವುದೇ ದಶಾಸಂಧಿಶಾಂತಿಯ ಪ್ರಧಾನ ಉದ್ದೇಶ.
🟣 *ಈ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ದಶಾಸಂಧಿಗಳಲ್ಲಿ ಮಾತ್ರ ಶಾಂತಿಹೋಮವನ್ನು ಮಾಡುವುದು ಬಲವಾಗಿ ಆಚರಣೆಯಲ್ಲಿ ಇರುವುದರಿಂದ ಜ್ಯೋತಿಷಿಗಳು ಹೆಚ್ಚಿನ ಸಂದರ್ಭಗಳಲ್ಲಿ ಶಾಂತಿಹೋಮವನ್ನು ಸೂಚಿಸಲೇಬೇಕಾಗುತ್ತದೆ. ಆಗ ಯಾವ ಶಾಂತಿಯನ್ನು ಮಾಡುವುದುತ್ತಮ?*
ಗ್ರಹರ ವಿಷಮಸ್ಥಿತಿಗೆ ಬೋಧಾಯನ ಗೃಹ್ಯಸೂತ್ರದಲ್ಲಿ ನವಗ್ರಹಾರಾಧನೆ ಹೇಳಿರುವುದರಿಂದ ಮೊದಲಿಗೆ ನವಗ್ರಹಶಾಂತಿಯನ್ನು ಮಾಡುವುದುತ್ತಮ. ಅನಂತರ ದುಃಸ್ಥಗ್ರಹರಿಗೆ ಮಾತ್ರ ಪ್ರತ್ಯೇಕ ಹೋಮ ಮಾಡಬಹುದು. ನವಗ್ರಹಶಾಂತಿಯನ್ನೇ ಮಾಡಿದ ಮೇಲೆ ಪ್ರತ್ಯೇಕ ಗ್ರಹಶಾಂತಿಯನ್ನೋ, ಸಂಧಿಶಾಂತಿ ಹೋಮವನ್ನೋ ಮಾಡುವುದರ ಬದಲು ಬೋಧಾಯನಾಚಾರ್ಯರು ಹೇಳಿರುವ ದೂರ್ವಾಮೃತ್ಯುಂಜಯ ಶಾಂತಿ ಮತ್ತು ಮಹಾಮೃತ್ಯುಂಜಯ ಶಾಂತಿ ಹಾಗೂ ಶಾಂತಿಕಾಮ ಆಯುಷ್ಯಕಾಮಕ್ಕೆ ಹೇಳಿದ ರುದ್ರಜಪ, ರುದ್ರಾಭಿಷೇಕ, ರುದ್ರಹೋಮಗಳು, ಶಂಕರಾಚಾರ್ಯರ ಪ್ರಪಂಚಸಾರ ತಂತ್ರದಲ್ಲಿ ಪ್ರೋಕ್ತವಾದ ತ್ರ್ಯಂಬಕ ಹೋಮ, ಮೃತ್ಯುಂಜಯ ಹೋಮ, ಶತಾಕ್ಷರೀ ಹೋಮ ಮುಂತಾದ ಹೋಮಗಳು , ಅಪಮೃತ್ಯುನಿವಾರಣದ್ವಾರಾ ಆಯುಃಪ್ರದ ಮಂತ್ರಗಳ, ಆಪನ್ನಿವಾರಕ ಮಂತ್ರಗಳ ಅನುಷ್ಠಾನ ಇವೇ ಮುಂತಾದ್ದನ್ನು ಆಚರಿಸುವುದು ವಿಹಿತವೆಂದು ನನ್ನ ಅಭಿಪ್ರಾಯ. ಈ ಶಾಂತಿಗಳಲ್ಲಿ ಪಾಪ, ಅಪಮೃತ್ಯು, ರೋಗ, ಆಪನ್ನಿವಾರಕ ಮಂತ್ರಗಳೂ, ಆಯುಃಪ್ರದ ಮಂತ್ರಗಳೂ ವಿಶೇಷವಾಗಿವೆ. ದೂರ್ವೆ ಇತ್ಯಾದಿ ಆಯುಃಪ್ರದ ದ್ರವ್ಯಗಳ ಹೋಮವೂ ಇದೆ. ಪ್ರಮಾಣಗ್ರಂಥಪ್ರೋಕ್ತವಾದುದೂ ಆಗಿದೆ. ದೋಷಗಳ ಬಲಾಬಲಕ್ಕೆ ಅನುಸಾರವಾಗಿ ಯಾವ ಶಾಂತಿಯೆಂದು ನಿರ್ಧರಿಸುವುದು ಜ್ಯೋತಿಷಿಯ ಕರ್ತವ್ಯವಾಗಿರುತ್ತದೆ.
*ನಮೋಸ್ತು ಪೂರ್ವ ಪ್ರಣೇತೃಭ್ಯಃ*
ರವೀಂದ್ರ ಶರ್ಮಾ.
ಕೋಣನಕಟ್ಟೆ.
No comments:
Post a Comment
If you have any doubts. please let me know...