ಭಾವ ಕಾರಕತ್ವ (Significator) ಮತ್ತು ಭಾವಾಧಿಪತಿ (House Lord).
ಸಪ್ತಮಾಧಿಪತಿ (ಮದುವೆಯ ಸ್ಥಾನದ ಅಧಿಪತಿ) ಉಚ್ಚನಾಗಿದ್ದಾನೆ ಎಂದರೆ, ನಿಮ್ಮ ಜಾತಕದ ವೈವಾಹಿಕ ಜೀವನದ 'ಮೂಲ ಅಡಿಪಾಯ' ಅಥವಾ 'ಫೌಂಡೇಶನ್' ಅತ್ಯಂತ ಗಟ್ಟಿಯಾಗಿದೆ ಎಂದರ್ಥ. ಆದರೆ ಅದರ ಮೇಲೆ ರಾಹು, ಶನಿ ಅಥವಾ ಕುಜನಂತಹ ಪಾಪಗ್ರಹಗಳು ದೃಷ್ಟಿ ಬೀರಿದಾಗ, ಅದು ಕೇವಲ ಒಂದು "ಬಾಹ್ಯ ಆಕ್ರಮಣ" (External Attack / Temporary Affliction) ಮಾತ್ರವಾಗಿರುತ್ತದೆ.
ಮೂಲ ಗಟ್ಟಿಯಾಗಿರುವುದರಿಂದ, ಬಾಹ್ಯವಾಗಿ ಬರುವ ಪಾಪಗ್ರಹಗಳ ನಕಾರಾತ್ಮಕ ತರಂಗಗಳನ್ನು (Negative Rays) ಕದಲಿ ವಿವಾಹದ ಮೂಲಕ ಬಾಳೆಮರಕ್ಕೆ ವರ್ಗಾಯಿಸಿ ಕತ್ತರಿಸಿದ ತಕ್ಷಣ, ಜಾತಕವು ಸಂಪೂರ್ಣ ದೋಷಮುಕ್ತವಾಗುತ್ತದೆ. ಉಚ್ಚನಾಗಿರುವ ಸಪ್ತಮಾಧಿಪತಿಯು ತಕ್ಷಣವೇ ತನ್ನ ಪೂರ್ಣ ಶುಭ ಫಲವನ್ನು ನೀಡಲು ಆರಂಭಿಸುತ್ತಾನೆ. ಅದಕ್ಕಾಗಿಯೇ ಈ ಪರಿಸ್ಥಿತಿಯಲ್ಲಿ ಪರಿಹಾರವು 100% ಯಶಸ್ವಿಯಾಗುತ್ತದೆ.
ಯಾವ ಭಾವದ ಅಧಿಪತಿಯು ನೀಚ ಸ್ಥಾನದಲ್ಲಿದ್ದಾನೋ, ಆ ಭಾವದ ಬಲವು ಮೂಲದಲ್ಲೇ ಕ್ಷೀಣಿಸಿರುತ್ತದೆ ಅಂತಹ ಸಮಯದಲ್ಲಿ ಕೇವಲ ಬಾಹ್ಯವಾಗಿ ಮಾಡುವ ದ್ರವ್ಯ ಕ್ರಿಯೆಗಳು (ಕದಲಿ ವಿವಾಹದಂತಹ ಸಾಂಕೇತಿಕ ಆಚರಣೆಗಳು) ಕೇವಲ ಶ್ರಮದಾಯಕವಾಗುತ್ತವೆಯೇ ಹೊರತು ಫಲ ನೀಡುವುದಿಲ್ಲ.
ಸಪ್ತಮಾಧಿಪತಿಯೇ ನೀಚನಾಗಿದ್ದಾನೆ ಎಂದರೆ, ನಿಮ್ಮ ಮದುವೆಯ ಮನೆಯ ಬುನಾದಿಯೇ ದುರ್ಬಲವಾಗಿದೆ ಎಂದರ್ಥ. ಇಲ್ಲಿ ಕದಲಿ ವಿವಾಹ ಮಾಡಿದರೆ ಅದು ಕೇವಲ ಪಾಪಗ್ರಹಗಳ ದೃಷ್ಟಿಯನ್ನು ತಡೆಯಬಹುದೇ ಹೊರತು, ಮೂಲದಲ್ಲೇ ಶಕ್ತಿ ಕಳೆದುಕೊಂಡಿರುವ ಸಪ್ತಮಾಧಿಪತಿಗೆ ಜೀವ ತುಂಬಲು ಸಾಧ್ಯವಿಲ್ಲ. ರೋಗವು ರಕ್ತದಲ್ಲೇ ಇರುವಾಗ, ಚರ್ಮದ ಮೇಲೆ ಮುಲಾಮು ಹಚ್ಚಿದರೆ ಗುಣವಾಗದಂತೆ, ಮೂಲ ಗ್ರಹವೇ ನೀಚನಾಗಿದ್ದಾಗ ಕದಲಿ ವಿವಾಹದಂತಹ ಬಾಹ್ಯ ಪರಿಹಾರಗಳು ವಿಫಲವಾಗುತ್ತವೆ.
ಮೂಲ ಗ್ರಹವೇ ನೀಚನಾಗಿದ್ದಾಗ ಕೇವಲ ದೋಷ ವರ್ಗಾವಣೆ ಸಾಲದು ಆ ನೀಚ ಗ್ರಹಕ್ಕೆ "ಶಕ್ತಿ ತುಂಬುವ" (Energy Infusion) ಮತ್ತು ಆತನ ಉಚ್ಚ ದೇವತೆಯನ್ನು ಆರಾಧಿಸುವ ಕ್ರಿಯೆಗಳು ಬೇಕಾಗುತ್ತವೆ.
ನೀಚಭಂಗ ರಾಜಯೋಗದ ಸಕ್ರಿಯಗೊಳಿಸುವಿಕೆ (Activating Neechabhanga)ಸಪ್ತಮಾಧಿಪತಿಯು ನೀಚನಾಗಿದ್ದರೂ, ಆತನನ್ನು ನೀಚ ಮುಕ್ತ ಮಾಡುವ ಗ್ರಹದ (ಉದಾಹರಣೆಗೆ ಆ ರಾಶಿಯ ಅಧಿಪತಿ ಅಥವಾ ಉಚ್ಚನಾಗುವ ಗ್ರಹದ) ಆರಾಧನೆ ಮಾಡಬೇಕು.
ಸಪ್ತಮಾಧಿಪತಿ ಯಾವ ಗ್ರಹವೋ (ಉದಾ: ಶುಕ್ರನಾಗಿದ್ದರೆ ಮಹಾಲಕ್ಷ್ಮಿ ಆರಾಧನೆ, ಗುರುವಾಗಿದ್ದರೆ ದಕ್ಷಿಣಾಮೂರ್ತಿ ಆರಾಧನೆ) ಆ ಗ್ರಹದ ಮೂಲ ದೇವತೆಯನ್ನು ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು.
ಯಾವ ಗ್ರಹದ ಮಹಾದಶೆ ನಡೆಯುತ್ತಿದೆ ಎಂಬುದು ಅತ್ಯಂತ ಮುಖ್ಯ. ಬೇರ್ಪಡುವಿಕೆಯನ್ನು ಉಂಟುಮಾಡುವ ಗ್ರಹದ (Maraka or Badhaka) ದಶೆ ನಡೆಯುತ್ತಿದ್ದರೆ, ಪರಿಹಾರಗಳು ದೀರ್ಘಕಾಲದವರೆಗೆ ಫಲ ನೀಡಲು ಸಮಯ ತೆಗೆದುಕೊಳ್ಳುತ್ತವೆ.
ಶುಕ್ರನು ಪತ್ನಿ ಮತ್ತು ದಾಂಪತ್ಯ ಸುಖದ ಕಾರಕ.
ಸ್ತ್ರೀಯರ ಜಾತಕದಲ್ಲಿ ಗುರುವು ಪತಿ ಮತ್ತು ಮಾಂಗಲ್ಯ ಬಲದ ಕಾರಕ.ಸಪ್ತಮಾಧಿಪತಿ ಚೆನ್ನಾಗಿದ್ದರೂ, ಈ ಕಾರಕ ಗ್ರಹಗಳು ರಾಹು-ಕೇತುಗಳ ಮಧ್ಯೆ ಸಿಲುಕಿದ್ದರೆ ದಾಂಪತ್ಯ ಮುರಿಯುತ್ತದೆ. ಆಗ 'ನಾಗಬಲಿ' ಅಥವಾ 'ತ್ರಿಪಿಂಡಿ ಶ್ರಾದ್ಧ'ದಂತಹ ಬೇರೆ ಆರಾಧನೆ ಬೇಕಾಗುತ್ತದೆ.
ಎಲ್ಲಾ ಗ್ರಹಗಳ ಗುಣಲಕ್ಷಣಗಳು ಒಂದೇ ಆಗಿರುವುದಿಲ್ಲ. ಗ್ರಹಗಳ ಸ್ವಭಾವ, ಅವುಗಳ ಕಾರಕತ್ವ ಮತ್ತು ಅವು ಆಳುವ ರಾಶಿಗಳ ಸ್ವಭಾವದ ಮೇಲೆ ದ್ವಿವಿವಾಹ ಯೋಗ ನಿರ್ಧಾರವಾಗುತ್ತದೆ.
ಜಾತಕದ ಸಪ್ತಮ ಭಾವದಲ್ಲಿ ದ್ವಿಸ್ವಭಾವ ರಾಶಿಗಳಾಗಿದ್ದು, ಅಲ್ಲಿ ಪಾಪಗ್ರಹಗಳ ಪ್ರಭಾವವಿದ್ದರೆ ಮಾತ್ರ ದ್ವಿವಿವಾಹ ಯೋಗ ಬರುತ್ತದೆ. ಅದೇ ಸಪ್ತಮ ಭಾವವು 'ಸ್ಥಿರ' ರಾಶಿಯಾಗಿದ್ದು ಅಲ್ಲಿ ಗ್ರಹಗಳಿದ್ದರೆ, ಆ ವ್ಯಕ್ತಿ ಏಕಪತ್ನಿ ವ್ರತಸ್ಥನಾಗಿರುತ್ತಾನೆ (ಒಂದೇ ಮದುವೆ).
ಸೂರ್ಯನು ಆತ್ಮಕಾರಕ ಮತ್ತು ಸ್ಥಿರ ಗ್ರಹ
ಸೂರ್ಯನು ಸಪ್ತಮದಲ್ಲಿದ್ದರೆ ದಾಂಪತ್ಯದಲ್ಲಿ ಅಹಂಕಾರದ ಸಮಸ್ಯೆ ಬರಬಹುದು, ಆದರೆ ಆತ ಸಂಬಂಧವನ್ನು ಮುರಿದು ಮತ್ತೊಂದು ಮದುವೆಗೆ ಪ್ರೇರೇಪಿಸುವುದಿಲ್ಲ. ಸೂರ್ಯನು ಉಷ್ಣ ಗ್ರಹ ಮತ್ತು ರಾಜ ತತ್ವದವನು. ಏಳನೇ ಮನೆ ಎನ್ನುವುದು ದಾಂಪತ್ಯದ ಸೌಮ್ಯ ಭಾವ. ರಾಜನಾದವನು ತಲೆ ಬಾಗಲು ಇಷ್ಟಪಡುವುದಿಲ್ಲ. ಹಾಗಾಗಿ, ಸಪ್ತಮದಲ್ಲಿ ಸೂರ್ಯನಿದ್ದಾಗ ಪತಿ-ಪತ್ನಿಯರ ಮಧ್ಯೆ "ನಾನಾ? ನೀನಾ?" ಎಂಬ ಅಹಂಕಾರದ ಹೋರಾಟ (Ego War) ಶುರುವಾಗುತ್ತದೆ. ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಇದು ಕೇವಲ ಸೌಮ್ಯ ವೈಮನಸ್ಯವೇ ಹೊರತು ಚಾರಿತ್ರ್ಯದ ದೋಷವಲ್ಲ
ರಾಹು ಅಥವಾ ಶುಕ್ರನಂತೆ ಸೂರ್ಯನು ಗುಪ್ತ ಸಂಬಂಧಗಳನ್ನಾಗಲಿ ಅಥವಾ ಸಮಾಜಕ್ಕೆ ಹೆದರದೆ ಮಾಡುವ ತಪ್ಪುಗಳನ್ನಾಗಲಿ ಪ್ರೋತ್ಸಾಹಿಸುವುದಿಲ್ಲ. ಸೂರ್ಯ ಎಂದರೆ ಬೆಳಕು ಅಲ್ಲಿ ಕತ್ತಲೆಯ ಮಾಯಾವಿ ಆಟಗಳು ನಡೆಯುವುದಿಲ್ಲ. ಸಪ್ತಮ ಸೂರ್ಯನು ವ್ಯಕ್ತಿಗೆ ಸಮಾಜದಲ್ಲಿ ತನ್ನ ಗೌರವ ಮತ್ತು ಕೀರ್ತಿ ಕೆಡಬಾರದು ಎಂಬ ತೀವ್ರ ಪ್ರಜ್ಞೆಯನ್ನು ಕೊಡುತ್ತಾನೆ. ಆದ್ದರಿಂದ, ಆತ ವಿಚ್ಛೇದನ ಪಡೆದು ಮತ್ತೊಂದು ಮದುವೆಯಾಗುವ ನಿರ್ಧಾರಕ್ಕೆ ಸುಲಭವಾಗಿ ಬರುವುದಿಲ್ಲ.
ಒಂದು ವೇಳೆ ಆ ಸಪ್ತಮಸ್ಥ ಸೂರ್ಯನಿಗೆ ತುಲಾ ರಾಶಿಯಲ್ಲಿ ನೀಚತ್ವ ಬಂದಿದ್ದರೆ ಅಥವಾ ಆತನ ಜೊತೆ ರಾಹು ಅಥವಾ ಶನಿ ಸೇರಿದರೆ ಆಗ ಸೂರ್ಯನ ನೈತಿಕ ಬಲವು ಕ್ಷೀಣಿಸುತ್ತದೆ
ಅಂತಹ ಸಮಯದಲ್ಲಿ ಅಹಂಕಾರವು ತೀವ್ರ ರೂಪ ಪಡೆದು, ಸಂಬಂಧವು ಕೋರ್ಟ್ ಕಟಕಟೆಯವರೆಗೆ ಹೋಗಿ ಬೇರ್ಪಡುವಿಕೆಗೆ ಕಾರಣವಾಗಬಹುದು. ಆದರೆ ಅಲ್ಲಿಯೂ ಸೂರ್ಯ ಮತ್ತೊಂದು ಮದುವೆಗೆ ಪ್ರೇರೇಪಿಸುವುದಿಲ್ಲ, ಬದಲಿಗೆ ವ್ಯಕ್ತಿಯನ್ನು ಏಕಾಂಗಿಯಾಗಿ (Isolation) ಉಳಿಸಿಬಿಡುತ್ತಾನೆ.
ಶನಿಯು ನಿಧಾನ ಮತ್ತು ಸ್ಥಿರತೆಯ ಗ್ರಹ ಶನಿ ಸಪ್ತಮದಲ್ಲಿದ್ದರೆ ಮದುವೆ ತಡವಾಗಬಹುದು ಅಥವಾ ದಾಂಪತ್ಯ ನೀರಸವಾಗಬಹುದು. ಆದರೆ ಶನಿಯು ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವುದರಿಂದ, ಸಂಬಂಧವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಮತ್ತು ಮತ್ತೊಂದು ಮದುವೆಗೆ ಆತುರಪಡುವುದಿಲ್ಲ.
ಬುಧನನ್ನು ಜ್ಯೋತಿಷ್ಯದಲ್ಲಿ "ದ್ವಂದ್ವ ಗ್ರಹ" (Dual Planet) ಎನ್ನಲಾಗುತ್ತದೆ. ಈತನಿಗೆ ಸ್ವಂತ ನಿರ್ಧಾರಗಳಿಗಿಂತ ಬದಲಾವಣೆ ಇಷ್ಟ. ಬುಧನು ಮಿಥುನ ಮತ್ತು ಕನ್ಯಾ ಎಂಬ ಎರಡು ದ್ವಿಸ್ವಭಾವ ರಾಶಿಗಳ ಅಧಿಪತಿ. ಸಪ್ತಮ ಭಾವದಲ್ಲಿ ಬುಧನ ಪ್ರಭಾವ ತೀವ್ರವಾಗಿದ್ದರೆ, ಆ ವ್ಯಕ್ತಿಗೆ ದಾಂಪತ್ಯದಲ್ಲಿ ಸ್ಥಿರತೆ ಇರುವುದಿಲ್ಲ ಅದು ದ್ವಿವಿವಾಹಕ್ಕೆ ಪ್ರಮುಖ ಕಾರಣವಾಗುತ್ತದೆ.
ಧನುಸ್ಸು ಮತ್ತು ಮೀನ ಎಂಬ ದ್ವಿಸ್ವಭಾವ ರಾಶಿಗಳ ಅಧಿಪತಿಯಾದ ( ಜೀವ )ಗುರು ಗ್ರಹವು ಪಾಪಗ್ರಹಗಳ ಸಂಸರ್ಗದಿಂದ ದೋಷಯುಕ್ತನಾಗಿ ಸಪ್ತಮ ಭಾವದಲ್ಲಿದ್ದರೆ, ಆತ ಖಂಡಿತವಾಗಿಯೂ ಬಹುಪತ್ನಿ ಅಥವಾ ದ್ವಿವಿವಾಹ ಯೋಗವನ್ನು ನೀಡುತ್ತಾನೆ. ಪಾಪಗ್ರಹಗಳ ಒಡನಾಟದಿಂದ ಗುರುವಿನ ನೈಸರ್ಗಿಕ ಶುಭತ್ವವು ಅಲ್ಲಿ ನಾಶವಾಗುತ್ತದೆ.
ಗುರುವು ಆಳುವ ಎರಡು ರಾಶಿಗಳಾದ ಧನುಸ್ಸು ಮತ್ತು ಮೀನ ಎರಡು ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಧನುಸ್ಸಿನ ಸಂಕೇತ ಅರ್ಧ ಕುದುರೆ, ಅರ್ಧ ಮನುಷ್ಯ (ದ್ವಂದ್ವ ಸ್ಥಿತಿ). ಮೀನದ ಸಂಕೇತ ವಿರುದ್ಧ ದಿಕ್ಕಿನಲ್ಲಿ ಈಜುವ ಎರಡು ಮೀನುಗಳು.ಗುರುವು ಈ ದ್ವಂದ್ವ ಶಕ್ತಿಯ ನಾಯಕನಾಗಿ ನಿಮ್ಮ ಜಾತಕದ ಮದುವೆಯ ಸ್ಥಾನವಾದ 7ನೇ ಮನೆಯಲ್ಲಿದ್ದಾಗ ಆ ಭಾವಕ್ಕೆ "ಒಂದಕ್ಕಿಂತ ಹೆಚ್ಚು" (Plurality) ಎಂಬ ತತ್ವವನ್ನು ತಂದುಕೊಡುತ್ತಾನೆ.
ಅತ್ಯಂತ ಶುಭ ಗ್ರಹಗಳಾದ ಗುರು ಅಥವಾ ಬುಧನು ಕೇಂದ್ರ ಸ್ಥಾನಗಳಿಗೆ (1, 4, 7, 10 ನೇ ಮನೆ) ಅಧಿಪತಿಯಾದಾಗ, ಅವು ತಮ್ಮ ನೈಸರ್ಗಿಕ ಶುಭತ್ವವನ್ನು ಕಳೆದುಕೊಳ್ಳುತ್ತವೆ. ಇದನ್ನು 'ಕೇಂದ್ರಾಧಿಪತ್ಯ ದೋಷ' ಎನ್ನಲಾಗುತ್ತದೆ.
ಗುರು ಎಂದರೆ ಬೃಹತ್ (Expansion). ಆತ ಯಾವುದೇ ಭಾವದಲ್ಲಿದ್ದರೂ ಆ ಭಾವದ ವಿಷಯಗಳನ್ನು ವಿಸ್ತರಿಸುತ್ತಾನೆ. ಸಪ್ತಮ ಭಾವದಲ್ಲಿ ಗುರುವು ದೋಷಯುಕ್ತನಾದಾಗ, ಆತ ಸಂಬಂಧಗಳ ಸಂಖ್ಯೆಯನ್ನು ವಿಸ್ತರಿಸುತ್ತಾನೆ (Multiplicity of relations).ಅದೇ ಸ್ಥಾನದಲ್ಲಿ ಶನಿ ಇದ್ದರೆ ಸಂಬಂಧಗಳನ್ನು ಕುಗ್ಗಿಸುತ್ತಾನೆ (Restriction - ಒಂದೇ ಮದುವೆಗೆ ಸೀಮಿತಗೊಳಿಸುತ್ತಾನೆ). ಆದರೆ ಗುರುವು ಪಾಪಗ್ರಹಗಳ ಪ್ರಭಾವದಲ್ಲಿದ್ದಾಗ "ಹಳೆಯದನ್ನು ಬಿಟ್ಟು ಹೊಸ ಜೀವನವನ್ನು ಹುಡುಕಿಕೊಳ್ಳುವ" ಆಸೆಯನ್ನು ವಿಸ್ತರಿಸುತ್ತಾನೆ.
ಶುಕ್ರನು ಭೋಗಕಾರಕ ಮತ್ತು ರಾಹುವು ಅತಿ ಆಸೆಯ ಕಾರಕ. ಇವರಿಬ್ಬರು ಸೇರಿದಾಗ ವ್ಯಕ್ತಿಗೆ ಸಾಂಪ್ರದಾಯಿಕ ಚೌಕಟ್ಟನ್ನು ಮೀರುವ ಆಸೆ ಉಂಟಾಗಿ ಸಪ್ತಮ ಭಾವದಲ್ಲಾಗಲಿ ಅಥವಾ ಪ್ರಮುಖ ಕೇಂದ್ರಗಳಲ್ಲಾಗಲಿ ಸೇರಿದರೆ, ಆ ವ್ಯಕ್ತಿಯು ಕಾಮದ ಆಸೆಗೆ ಒಳಗಾಗಿ ಲೋಕಾಚಾರ ಅಥವಾ ಸಾಮಾಜಿಕ ನಿಯಮಗಳನ್ನು (ಸಾಂಪ್ರದಾಯಿಕ ಚೌಕಟ್ಟನ್ನು) ಗಾಳಿಗೆ ತೂರುತ್ತಾನೆ. ಆತನಿಗೆ ದ್ವಿವಿವಾಹ (ಎರಡು ಮದುವೆ), ಮೂರು ಮದುವೆ ಅಥವಾ ಸಮಾಜ ಒಪ್ಪದ ಬಹುಸಂಬಂಧಗಳ ಯೋಗವು ಉಂಟಾಗುತ್ತದೆ ಹಾಗೂ ಆತ ಕೇವಲ ಭೋಗಮಾರ್ಗದಲ್ಲಿ ಪ್ರವೃತ್ತನಾಗುತ್ತಾನೆ.
ಶುಕ್ರನು ನೈಸರ್ಗಿಕವಾಗಿ ಪ್ರೀತಿ, ಆಕರ್ಷಣೆ, ಸೌಂದರ್ಯ ಮತ್ತು ದಾಂಪತ್ಯ ಸುಖವನ್ನು ಪ್ರತಿನಿಧಿಸುವ ಗ್ರಹ. ರಾಹುವು ಯಾವುದೇ ಗ್ರಹದ ಜೊತೆ ಸೇರಿದರೂ ಆ ಗ್ರಹದ ಗುಣವನ್ನು ನೂರು ಪಟ್ಟು ವರ್ಧಿಸುತ್ತಾನೆ ಶುಕ್ರನ ಜೊತೆ ರಾಹು ಸೇರಿದಾಗ, ಆ ವ್ಯಕ್ತಿಗೆ ಪ್ರೀತಿ ಮತ್ತು ಭೋಗದ ವಿಷಯದಲ್ಲಿ "ಎಷ್ಟಿದ್ದರೂ ಸಾಲದು" ಎಂಬ ತೀವ್ರ ಅತೃಪ್ತಿ ಸೃಷ್ಟಿಯಾಗುತ್ತದೆ. ಇದು ಒಂದು ಸಂಬಂಧ ಮುರಿದು ಮತ್ತೊಂದಕ್ಕೆ ಪ್ರೇರೇಪಿಸುತ್ತದೆ.
ಮೂಲ: ಅರುಣ್ ಕುಮಾರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
If you have any doubts. please let me know...