ನಾನು ಒಬ್ಬ ಕಾರು ಚಾಲಕ. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ವಾರ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಒಬ್ಬ ವಯಸ್ಸಾದ ವ್ಯಕ್ತಿ ನನ್ನ ಟ್ಯಾಕ್ಸಿ ಏರಿದರು. ಬಿಳಿ ಕುರ್ತಾ, ದೋತಿ, ದಣಿದ ಕಣ್ಣುಗಳು—ಆದರೆ ಅವರ ಧ್ವನಿಯಲ್ಲಿ ಒಂದು ವಿಚಿತ್ರವಾದ ದೃಢತೆ ಇತ್ತು. ಅವರು ಕಾರು ಹತ್ತಿದ ತಕ್ಷಣ ಹೀಗೆಂದರು: "ಇಂದು ರಾತ್ರಿ ನೀನು ನನ್ನನ್ನು ಐದು ಸ್ಥಳಗಳಿಗೆ ಕರೆದೊಯ್ಯಬೇಕು. ನಾನು ನಿನಗೆ 5000 ರೂಪಾಯಿ ನಗದು ಕೊಡುತ್ತೇನೆ. ಆದರೆ ಪಯಣ ಮುಗಿಯುವವರೆಗೂ 'ಏಕೆ?' ಎಂದು ಪ್ರಶ್ನಿಸಬಾರದು." ಅವರು ಒಂದು ಚೀಟಿಯನ್ನು ನನ್ನ ಕೈಗಿಟ್ಟರು. ಅದರಲ್ಲಿ ಐದು ವಿಳಾಸಗಳಿದ್ದವು.
ಮೊದಲ ನಿಲ್ದಾಣ
ದಕ್ಷಿಣ ಕೋಲ್ಕತ್ತಾದ ಒಂದು ಹಳೆಯ ಮನೆ. ನಾನು ಕಾರು ನಿಲ್ಲಿಸಿದೆ. ಅವರು ಕೆಳಗಿಳಿಯಲಿಲ್ಲ. ಕಿಟಕಿಯ ಗಾಜು ಇಳಿಸಿ ಸುಮ್ಮನೆ ಆ ಮನೆಯನ್ನು ದಿಟ್ಟಿಸಿ ನೋಡಿದರು. ಹತ್ತು ನಿಮಿಷ ಕಳೆದವು. ಅವರ ಕಣ್ಣುಗಳಿಂದ ನೀರು ಹರಿಯುತ್ತಿತ್ತು, ಆದರೆ ಸದ್ದಿರಲಿಲ್ಲ. "ಹೋಗೋಣ... ಮುಂದಿನ ಜಾಗಕ್ಕೆ," ಎಂದರು.
ಎರಡನೇ ನಿಲ್ದಾಣ
ಒಂದು ಪ್ರಾಥಮಿಕ ಶಾಲೆ. ಗೇಟ್ ಲಾಕ್ ಆಗಿತ್ತು. ಒಳಗೆ ಕತ್ತಲಲ್ಲಿ ಆಟದ ಮೈದಾನವಿತ್ತು. ಅವರು ಕೆಳಗಿಳಿದು ಮೆಲ್ಲನೆ ಅಲ್ಲಿನ ಉಯ್ಯಾಲೆಯ ಬಳಿ ಹೋದರು. ಅದರ ಮೇಲೆ ಕುಳಿತು ಮೃದುವಾಗಿ ತೂಗಿದರು. ಇಪ್ಪತ್ತು ನಿಮಿಷಗಳ ನಂತರ ಮರಳಿ ಬಂದರು. "ನಾನು ಇಲ್ಲಿ 43 ವರ್ಷ ಪಾಠ ಮಾಡಿದ್ದೇನೆ. ಅದು ನನ್ನ ಜೀವನದ ಅತ್ಯುತ್ತಮ ಸಮಯವಾಗಿತ್ತು."
ಮೂರನೇ ನಿಲ್ದಾಣ
ಒಂದು ಸಣ್ಣ ಹಳೆಯ ಕಾಫಿ ಹೌಸ್. ಅವರು ಒಳಗೆ ಹೋಗಿ ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದರು. ಮೂಲೆಯ ಟೇಬಲ್‌ನಲ್ಲಿ ಒಬ್ಬರೇ ಕುಳಿತರು. ಚಹಾವನ್ನು ಮುಟ್ಟಲೇ ಇಲ್ಲ. ಸುಮ್ಮನೆ ಸುತ್ತಲೂ ನೋಡುತ್ತಿದ್ದರು. ಹದಿನೈದು ನಿಮಿಷಗಳ ನಂತರ ಮಂದಸ್ಮಿತರಾಗಿ ಹಿಂತಿರುಗಿದರು. "ನಾನು ಮೊದಲ ಬಾರಿಗೆ ಉಮಾದೇವಿಯನ್ನು ಭೇಟಿಯಾಗಿದ್ದು ಇಲ್ಲೇ. 1969ರಲ್ಲಿ."
ನಾಲ್ಕನೇ ನಿಲ್ದಾಣ
ನಿಮ್ತಾಲ ಚಿತಾಗಾರ. ಅವರು ಕೆಳಗಿಳಿದರು. ಒಂದು ನಾಮಫಲಕದ ಮುಂದೆ ನಿಂತು ಯಾವುದೋ ಮಂತ್ರ ಪಠಿಸಿದಂತೆ ಪಿಸುಗುಟ್ಟುತ್ತಿದ್ದರು. ಅರ್ಧ ಗಂಟೆಯ ನಂತರ ಮರಳಿದಾಗ ಅವರ ಕಣ್ಣುಗಳು ಕೆಂಪಾಗಿದ್ದವು. "ಅವಳು ಹೋಗಿ ಮೂರು ವರ್ಷಗಳಾದವು."
ಐದನೇ ನಿಲ್ದಾಣ
ಒಂದು ದೊಡ್ಡ ಸರ್ಕಾರಿ ಆಸ್ಪತ್ರೆ. ಅವರು ಕಾರನ್ನು ನಿಲ್ಲಿಸಲು ಹೇಳಿದರು. ನಂತರ ನನ್ನನ್ನು ನೋಡಿ ಹೀಗೆಂದರು: "ಈಗ ನಾನು ನಿನಗೆ ಕಾರಣ ಹೇಳುತ್ತೇನೆ. ನನಗೆ ನಾಲ್ಕನೇ ಹಂತದ ಕ್ಯಾನ್ಸರ್ ಇದೆ. ಡಾಕ್ಟರ್ ಹೇಳಿದ್ದಾರೆ ಇನ್ನೇನು ಕೆಲವು ವಾರಗಳು... ಅಥವಾ ಕೆಲವು ದಿನಗಳಷ್ಟೇ ಬಾಕಿ ಅಂತ. ಇಂದು ರಾತ್ರಿ ನನ್ನ ಇಡೀ ಜೀವನವನ್ನು ಕೊನೆಯ ಬಾರಿಗೆ ಒಮ್ಮೆ ನೋಡಬೇಕೆಂದುಕೊಂಡಿದ್ದೆ."
ನಾನು ಸ್ಟೀರಿಂಗ್ ವೀಲ್ ಮೇಲೆ ತಲೆಯಿಟ್ಟು ಅಳಲು ಪ್ರಾರಂಭಿಸಿದೆ.
ಅವರು ಹೇಳಿದರು:
"ಆ ಮನೆ—ನನ್ನ ಮಕ್ಕಳನ್ನು ಬೆಳೆಸಿದ ಜಾಗ.
ಆ ಶಾಲೆ—ನನ್ನ ಜೀವನದ ಉದ್ದೇಶವನ್ನು ಕಂಡುಕೊಂಡ ಜಾಗ.
ಆ ಕಾಫಿ ಹೌಸ್—ನಾನು ಪ್ರೀತಿಯಲ್ಲಿ ಬಿದ್ದ ಜಾಗ.
ಆ ಚಿತಾಗಾರ—ನನ್ನವಳಿಗೆ ಕೊನೆಯ ವಿದಾಯ ಹೇಳಿದ ಜಾಗ ಮತ್ತು
ಈ ಆಸ್ಪತ್ರೆ—ಇಲ್ಲಿ ನಾನು ಇಂದು ದಾಖಲಾಗುತ್ತಿದ್ದೇನೆ. ನಾನು ಮತ್ತೆ ಮನೆಗೆ ಮರಳುವುದಿಲ್ಲ."
ಅವರು 5000 ರೂಪಾಯಿಗಳನ್ನು ಬಲವಂತವಾಗಿ ನನ್ನ ಕೈಗಿಟ್ಟರು. "ಧನ್ಯವಾದಗಳು. ನನ್ನ ಜೀವನವನ್ನು ಮತ್ತೊಮ್ಮೆ ನೋಡಲು ನೀನು ಸಹಾಯ ಮಾಡಿದೆ. ನನ್ನನ್ನು ಪ್ರೀತಿಯಿಂದ ನಡೆಸಿಕೊಂಡ ನನ್ನ ಜೀವನದ ಕೊನೆಯ ಅಪರಿಚಿತ ವ್ಯಕ್ತಿ ನೀನು." ನಾನು ಅದನ್ನು ತೆಗೆದುಕೊಳ್ಳಲು ಇಷ್ಟಪಡಲಿಲ್ಲ. "ಬೇಡ ತಾತಾ, ಇದನ್ನು ನಾನು ಸ್ವೀಕರಿಸಲಾರೆ," ಎಂದೆ. ಅವರು ಹೇಳಿದರು, "ತೆಗೆದುಕೋ. ಇದನ್ನು ಕೊಡಲು ನನಗೆ ಯಾರೂ ಇಲ್ಲ. ನನ್ನ ಮಕ್ಕಳು ನನ್ನ ಜೊತೆ ಮಾತನಾಡುವುದಿಲ್ಲ. ಯಾವ ಸ್ನೇಹಿತರೂ ಉಳಿದಿಲ್ಲ. ನೀನು ನನಗೆ ಮೂರು ಗಂಟೆಗಳ ಕಾಲಾವಕಾಶ ನೀಡಿದ್ದೀಯ. ಮೂರು ಗಂಟೆಗಳ ಮಾನವೀಯತೆ. ಇದು ಹಣಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು." ತಮ್ಮ ಸಣ್ಣ ಸೂಟ್‌ಕೇಸ್ ಹಿಡಿದು ಅವರು ಆಸ್ಪತ್ರೆಯ ಒಳಗೆ ಹೋದರು.
ಮಾರನೇ ದಿನ ನಾನು ಮತ್ತೆ ಆ ಆಸ್ಪತ್ರೆಗೆ ಅವರನ್ನು ನೋಡಲು ಹೂವಿನ ಗುಚ್ಛದೊಂದಿಗೆ ಹೋದೆ. ಅವರು ಮಂದಹಾಸ ಬೀರಿದರು. "ನೀನು ಬಂದೆಯಾ?" ಇಂದು ಕೇಳಿದರು "ನಿಮ್ಮನ್ನು ಹಾಗೆಯೇ ಬಿಟ್ಟು ಬರಲು ಮನಸ್ಸು ಬರಲಿಲ್ಲ." ಎಂದೆ
ನಾವು ಎರಡು ಗಂಟೆಗಳ ಕಾಲ ಮಾತನಾಡಿದೆವು. ಅವರ ಪತ್ನಿ ಉಮಾದೇವಿ, ಅವರ ವಿದ್ಯಾರ್ಥಿಗಳು ಮತ್ತು ದೂರಾದ ಮಕ್ಕಳ ಬಗ್ಗೆ ಹರಟೆ ಹೊಡೆದೆವು.
ನಾನು ಪ್ರತಿದಿನ ಹೋಗಲಾರಂಭಿಸಿದೆ. ಚಹಾ ತೆಗೆದುಕೊಂಡು ಹೋಗುತ್ತಿದ್ದೆ, ಪತ್ರಿಕೆ ಓದಿ ಹೇಳುತ್ತಿದ್ದೆ. ಕೆಲವೊಮ್ಮೆ ಸುಮ್ಮನೆ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ಒಂದು ದಿನ ಅವರು ಹೇಳಿದರು, "ನಾನು ಒಬ್ಬಂಟಿಯಾಗಿ ಸಾಯುತ್ತೇನೆ ಎಂದುಕೊಂಡಿದ್ದೆ. ಆದರೆ ನೀನು ಈಗ ಇಲ್ಲಿದ್ದೀಯ. ಕೊನೆಯಲ್ಲಿ ಒಬ್ಬ ಅಪರಿಚಿತನೇ ಜೊತೆಯಾಗಿ ಕುಟುಂಬದಂತಾದನು—ಇದೇ ನನ್ನ ಸೌಭಾಗ್ಯ." ನಾನು ಅವರ ಕೈ ಹಿಡಿದು ಹೇಳಿದೆ, "ನೀವು ಒಬ್ಬಂಟಿಯಲ್ಲ."
ಮರುದಿನ ಬೆಳಗಿನ ಜಾವ 3:17ಕ್ಕೆ ಅವರು ನಿಧನರಾದರು. ನಾನು ಅಲ್ಲಿಯೇ ಅವರ ಕೈ ಹಿಡಿದು ಕುಳಿತಿದ್ದೆ. ಅವರ ಕೊನೆಯ ಮಾತುಗಳೆಂದರೆ, "ಎಲ್ಲರಿಗೂ ಹೇಳು... ಅಪರಿಚಿತರನ್ನು ಗಮನಿಸಿ ನೋಡಿ ಅಂತ. ನಾವೆಲ್ಲರೂ ಎಲ್ಲೋ ಹೊರಟಿದ್ದೇವೆ. ಕೆಲವರು ವೇಗವಾಗಿ, ಕೆಲವರು ನಿಧಾನವಾಗಿ. ದಾರಿಯುದ್ದಕ್ಕೂ ದಯೆ ತೋರಿಸಿ. ನೀನು ಹಾಗೆಯೇ ಇದ್ದೆ. ನನ್ನ ಕೊನೆಯ ದಿನಗಳನ್ನು ನೀನು ಸುಂದರಗೊಳಿಸಿದೆ."
ಮಾನಿಟರ್‌ನ ಶಬ್ದ ನಿಂತು ನೇರ ಗೆರೆಯಾಯಿತು.
ಅವರ ಅಂತ್ಯಕ್ರಿಯೆಯಲ್ಲಿ ಕೇವಲ ಆರು ಜನರಿದ್ದರು. ನಾನು, ಮೂವರು ದಾದಿಯರು (nurses), ಒಬ್ಬ ವಕೀಲ ಮತ್ತು ಅವರ ಒಬ್ಬ ಹಳೆಯ ವಿದ್ಯಾರ್ಥಿ.
43 ವರ್ಷಗಳ ಬೋಧನೆ.
52 ವರ್ಷಗಳ ದಾಂಪತ್ಯ.
81 ವರ್ಷಗಳ ಜೀವನ. ಕೇವಲ ಆರು ಜನ.
ನಾನು ಅಂದುಕೊಂಡೆ: ಅವರು ನನಗೆ ಕಲಿಸಿದ್ದು—
ಪ್ರತಿಯೊಬ್ಬ ಅಪರಿಚಿತನೂ ಯಾರೋ ಒಬ್ಬರ ಇಡೀ ಪ್ರಪಂಚವಾಗಿರುತ್ತದೆ.
ಪ್ರತಿಯೊಬ್ಬ ಪ್ರಯಾಣಿಕನೂ ಒಂದು ಕಥೆ.
ಪ್ರತಿಯೊಬ್ಬ ವ್ಯಕ್ತಿಯೂ ಬದುಕುತ್ತಿದ್ದಾನೆ, ಸಾಯುತ್ತಿದ್ದಾನೆ, ಯಾರಾದರೂ ತನ್ನನ್ನು ಗಮನಿಸಲಿ ಎಂದು ಕಾಯುತ್ತಿದ್ದಾನೆ.
ಅವರು ತಮ್ಮ ಜೀವನದ ಹಾದಿಯಲ್ಲಿ ನನ್ನನ್ನು ಕರೆದೊಯ್ದಿದ್ದಕ್ಕಾಗಿ 5000 ರೂಪಾಯಿ ನೀಡಿದರು. ಆದರೆ ಅವರು ನನಗೆ ಕಲಿಸಿದ ಪಾಠ ಅದಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು. ಮಾನವೀಯತೆ ಎಂಬುದು ಹೆಚ್ಚುವರಿ ಗುಣವಲ್ಲ, ಅದೇ ಅಸಲಿ ಬದುಕು.
ಇಂದಿಗೂ ನಾನು ಆ 5000 ರೂಪಾಯಿಗಳನ್ನು ಖರ್ಚು ಮಾಡದೆ ನನ್ನ ಕಾರಿನಲ್ಲೇ ಇಟ್ಟಿದ್ದೇನೆ. ಏಕೆಂದರೆ ಪ್ರತಿ ಪ್ರಯಾಣಿಕನೂ ತನ್ನ ಕೊನೆಯ ಪಯಣದಲ್ಲಿರಬಹುದು. ಪ್ರತಿಯೊಬ್ಬ ಅಪರಿಚಿತನೂ ತನ್ನ ಕೊನೆಯ ವಿದಾಯ ಹೇಳುತ್ತಿರಬಹುದು. ಹಾಗಾಗಿ ಈಗ ನಾನು ಚಾಲನೆ ಮಾಡುವ ರೀತಿಯೇ ಬದಲಾಗಿದೆ. ನಾನು ಕೇಳುತ್ತೇನೆ, ಆಲಿಸುತ್ತೇನೆ, ಜನರನ್ನು ಗಮನಿಸುತ್ತೇನೆ. ಒಬ್ಬ ವಯಸ್ಸಾದ ಶಿಕ್ಷಕ ತನಗಾಗಿ ಒಂದು ಸುಂದರವಾದ ಸಂತೋಷದ ರಾತ್ರಿಯನ್ನು ಬಯಸಿದ್ದರು, ಒಬ್ಬ ಅಪರಿಚಿತ ಅದನ್ನು ನೀಡಿದ್ದ.
ನಾವು ಕೂಡ ಅಂತಹ ವ್ಯಕ್ತಿಯಾಗೋಣ. ನಾವು ಭೇಟಿಯಾಗುವ ಯಾರಾದರೂ ತಮ್ಮ ಜೀವನದ ಕೊನೆಯ ಪಯಣದಲ್ಲಿರಬಹುದು. ಅಂತವರ ಜೀವನವನ್ನು ಸುಂದರಗೊಳಿಸೋಣ.
ಮನುಷ್ಯರಾಗಿ ಹುಟ್ಟಿದ ಮೇಲೆ ಮಾನವೀಯತೆ ಮರೆತರೆ ಹೇಗೆ ??
ಇದು ಅದಾವ ಚಾಲಕನ ಸ್ವ ಅನುಭವವೋ ಅಥವಾ ಅದಾವ ಕತೆಗಾರನ ಕಲ್ಪನೆಯೋ ಕಾಣೆ ಇಂಗ್ಲೀಷಿನಲ್ಲಿ ಓದಿದ್ದನ್ನು ಕೊಂಚ ಬದಲಿಸಿ ಸದುದ್ದೇಶದಿಂದ ಒಂದು ಒಳ್ಳೆ ಸಂದೇಶ ಕೊಡುವ ಉದ್ದೇಶದಿಂದ ಇಲ್ಲಿ ಹಂಚಿಕೊಂಡಿರುವೆ
*ಕೃಪೆ : ಫೇಸ್ಬುಕ್*
*ಅನುಪಮ ಅರುಲಿಕೆ ಅವರ ವಾಲ್ ನಿಂದ...
No comments:
Post a Comment
If you have any doubts. please let me know...