ನಾವು ಪೌರಾಣಿಕ ಪ್ರಪಂಚದಲ್ಲಿ ವಿಹರಿಸತೊಡಗಿದರೆ ನಮಗೆ ಮುತ್ತು, ರತ್ನಗಳಂಥ ಅಸಂಖ್ಯಾತ ಕಥೆಗಳ ದೊಡ್ಡ ಗಣಿಗಳೇ ಸಿಗುತ್ತವೆ! ಬಗೆಬಗೆಯಾದ, ಸ್ವಾರಸ್ಯಕರ, ನೀತಿಬೋಧಕ, ಮನರಂಜನಾತ್ಮಕ ಕಥೆಗಳು ಹೇರಳವಾಗಿ ಸಿಗುತ್ತವೆ! ಇಂಥವನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು, ವೆಬ್ ಸೀರಿಸ್ ಗಳನ್ನು ಧಾರಾಳವಾಗಿ ಮಾಡಬಹುದು!
ರಾಮಾಯಣದ ಅಂಥ ಒಂದು ಉಪಕಥೆಯನ್ನು ಈಗ ನೋಡೋಣ. ಇದು ತನ್ನ ಹೆಣವನ್ನು ತಾನೇ ತಿನ್ನುತ್ತಿದ್ದ ಒಬ್ಬ ರಾಜನ ವಿಚಿತ್ರ, ವಿಲಕ್ಷಣ, ಬೀಭತ್ಸ ಕಥೆ! ಆದರೆ ಇದರಲ್ಲಿ ಒಂದು ಅದ್ಭುತ ಸಂದೇಶವಿದೆ! ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುತ್ತದೆ. ಶ್ರೀರಾಮನು ಒಮ್ಮೆ ಅಗಸ್ತ್ಯ ಮಹರ್ಷಿಗಳನ್ನು ನೋಡಲು ಹೋದಾಗ, ಅವರು ಅವನಿಗೆ ಒಂದು ದಿವ್ಯಾಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆಶ್ಚರ್ಯಗೊಂಡ ರಾಮನು, ಮುನಿಗಳಾದ ಅವರಿಗೆ ಈ ದಿವ್ಯಾಭರಣವು ಹೇಗೆ ದೊರೆಯಿತೆಂದು ಕುತೂಹಲದಿಂದ ಕೇಳಿದಾಗ, ಅವರು ಅದರ ಹಿಂದಿನ ವಿಚಿತ್ರ ಕಥೆ ಹೇಳುತ್ತಾರೆ.
ಅಗಸ್ತ್ಯರು ಹಿಂದಿನ ತ್ರೇತಾಯುಗದಲ್ಲಿ ಒಂದು ದೊಡ್ಡ ಅರಣ್ಯಕ್ಕೆ ಹೋಗಿದ್ದರು. ನೂರು ಯೋಜನಗಳಷ್ಟು ದೊಡ್ಡದಾಗಿದ್ದರೂ ಅದು ನಿರ್ಜನವಾಗಿದ್ದು ಮೃಗಪಕ್ಷಿಗಳಿಂದಲೂ ರಹಿತವಾಗಿತ್ತು! ಆದರೆ ಅಲ್ಲಿ ಸೊಗಸಾದ ಫಲಮೂಲಗಳಿದ್ದವು! ಆ ಅರಣ್ಯದಲ್ಲಿ ಸಂಚರಿಸುತ್ತಾ ಹೋಗಲು, ಅದರ ಮಧ್ಯದಲ್ಲಿ ಅವರೊಂದು ಸುಂದರ ಸರೋವರವನ್ನು ಕಂಡರು! ಪಾಚಿಯೂ ಇಲ್ಲದ ತಿಳಿನೀರಿನಿಂದ ಕೂಡಿದ್ದ ಆ ಸರೋವರದಲ್ಲಿ ಹಂಸ, ಕಾರಂಡವ, ಚಕ್ರವಾಕ ಪಕ್ಷಿಗಳೂ ಕಮಲ, ನೀಲೋತ್ಪಲ ಪುಷ್ಪಗಳೂ ಇದ್ದವು! ಆ ಸರೋವರದ ತೀರದಲ್ಲಿ ಒಂದು ಹಳೆಯ ಆಶ್ರಮವಿತ್ತು! ಆದರೆ ಅಲ್ಲಿ ಯಾವ ಋಷಿ, ಮುನಿಗಳೂ ಇರಲಿಲ್ಲ! ಆ ಆಶ್ರಮದಲ್ಲಿ ಅವರು ಒಂದು ರಾತ್ರಿ ಕಳೆದು ಬೆಳಗಾಗೆದ್ದು ನೋಡಲು, ಆ ಸರೋವರದ ಬಳಿ ಒಂದು ಹೆಣವಿತ್ತು! ಪುಷ್ಟವಾಗಿಯೂ ಕಾಂತಿಯುಕ್ತವಾಗಿಯೂ ಇದ್ದ ಆ ಹೆಣವನ್ನು ನೋಡಿ ಇದೆಂಥ ವಿಚಿತ್ರ ಎಂದು ಆಶ್ಚರ್ಯಗೊಂಡರು ಅಗಸ್ತ್ಯರು!
ಆಗ ಇನ್ನೊಂದು ಆಶ್ಚರ್ಯ ನಡೆಯಿತು! ಆಕಾಶದಿಂದ ಒಂದು ಅದ್ಭುತವಾದ ದಿವ್ಯ ವಿಮಾನವು ಬರತೊಡಗಿತು! ಆ ವಿಮಾನದಲ್ಲಿ ಸ್ವರ್ಗೀಯ ಪುರುಷನೊಬ್ಬ ಸಿಂಹಾಸನದ ಮೇಲೆ ಕುಳಿತಿದ್ದನು! ಸಾವಿರಾರು ಅಪ್ಸರೆಯರು ಅವನನ್ನು ಸೇವಿಸುತ್ತಿದ್ದರು! ಕೆಲವರು ಗಾಯನ ಮಾಡುತ್ತಲೂ ಕೆಲವರು ವಾದ್ಯಗಳನ್ನು ನುಡಿಸುತ್ತಲೂ ಕೆಲವರು ಅವನಿಗೆ ಚಾಮರ ಬೀಸುತ್ತಲೂ ಇದ್ದರು! ಆಗ ಆ ವಿಮಾನ ಕೆಳಗಿಳಿದಂತೆ ಆ ಸ್ವರ್ಗೀಯ ಪುರುಷನು, ಮೇರು ಪರ್ವತವನ್ನು ಬಿಟ್ಟು ಹೋಗುವ ಸೂರ್ಯನಂತೆ ತನ್ನ ಸಿಂಹಾಸನದಿಂದ ಇಳಿದು ಸರೋವರದ ಬಳಿಗೆ ಬಂದನು. ಅನಂತರ ಅವನು ಮಾಡಿದ್ದೇನು? ಅಲ್ಲಿದ್ದ ಆ ಹೆಣವನ್ನು ಕಿತ್ತು ಕಿತ್ತು ತಿನ್ನತೊಡಗಿದನು! ಅಗಸ್ತ್ಯರಿಗೆ ಪರಮಾಶ್ಚರ್ಯವಾಯಿತು!
ಹಾಗೆ ಶವದ ಮಾಂಸವನ್ನು ಚೆನ್ನಾಗಿ ಭಕ್ಷಿಸಿ, ಆ ಸ್ವರ್ಗೀಯ ಪುರುಷನು ತನ್ನ ಕೈಕಾಲು ಮುಖಗಳನ್ನು ತೊಳೆದುಕೊಂಡು ಆಚಮನ ಮಾಡಿ ಹೊರಡಲನುವಾದನು! ಆಗ ಕುತೂಹಲ ತಡೆಯಲಾಗದೆ ಅಗಸ್ತ್ಯರು ಅವನನ್ನು ತಡೆದು," ಯಾರು ನೀನು? ದೇವತೆಯಂತಿರುವ ನೀನು ಇಂಥ ಕುತ್ಸಿತ, ನಿಂದನೀಯ ಆಹಾರವನ್ನೇಕೆ ಸೇವಿಸಿದೆ? ನಿನ್ನಂಥವನಿಗೆ ಶವಭಕ್ಷಣೆ ಯೋಗ್ಯವಲ್ಲ ಎಂದು ನನ್ನ ಭಾವನೆಯಾಗಿದೆ! ಏಕೆ ಹೀಗೆ ಮಾಡಿದೆ?" ಎಂದು ಕೇಳಿದರು.
ಅದಕ್ಕೆ ಅವನು ಕೈಮುಗಿದುಕೊಂಡು," ಋಷಿವರ್ಯರೇ! ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೇ! ಈ ಕಾರ್ಯವನ್ನು ನಾನು ಬಿಡಲಾಗುತ್ತಿಲ್ಲ! ಇದಕ್ಕೆ ಕಾರಣ ಹೇಳುತ್ತೇನೆ, ಕೇಳಿ!
"ನಾನು ಹಿಂದೆ ಸುದೇವನೆಂಬ ರಾಜನ ಮಗನಾಗಿದ್ದೆ! ವಿದರ್ಭವನ್ನು ಆಳುತ್ತಿದ್ದ ಅವನು ಮಹಾಯಶೋವಂತನೂ ವೀರ್ಯವಂತನೂ ಆಗಿದ್ದು, ಮೂರು ಲೋಕಗಳಲ್ಲೂ ವಿಖ್ಯಾತನಾಗಿದ್ದ! ಅವನಿಗೆ ಇಬ್ಬರು ಪತ್ನಿಯರಿಂದ ಇಬ್ಬರು ಪುತ್ರರು ಜನಿಸಿದರು! ಒಬ್ಬನು ಶ್ವೇತನೆಂಬ ನಾನಾದರೆ, ಇನ್ನೊಬ್ಬನು, ಸುರಥನೆಂಬ ನನ್ನ ತಮ್ಮ! ನನ್ನ ತಂದೆಯು ಸ್ವರ್ಗಸ್ಥನಾದ ಬಳಿಕ, ನಾನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿಕೊಂಡಿದ್ದೆ. ಆಗ ಒಮ್ಮೆ ನನಗೆ ಯಾವುದೋ ಕಾರಣದಿಂದ ನನ್ನ ಆಯುಷ್ಯ ಎಷ್ಟೆಂದು ತಿಳಿದುಹೋಯಿತು! ಆಗ ನನಗೆ ರಾಜ್ಯವಾಳಲು ಮನಸ್ಸು ಬಾರದೇ ನನ್ನ ತಮ್ಮನಿಗೆ ಪಟ್ಟಗಟ್ಟಿ ತಪಸ್ಸು ಮಾಡಲೆಂದು ಮೃಗಪಕ್ಷಿರಹಿತವಾದ ಈ ದುರ್ಗಮ ಅರಣ್ಯಕ್ಕೆ ಬಂದೆ! ಈ ಸರೋವರದ ಬಳಿಯೇ ಆಶ್ರಮ ನಿರ್ಮಿಸಿಕೊಂಡು ಮೂರು ಸಾವಿರ ವರ್ಷಗಳ ಕಾಲ ದುಷ್ಕರ ತಪಸ್ಸು ಮಾಡಿ ಮೃತನಾದ ಬಳಿಕ ಬ್ರಹ್ಮಲೋಕ ಪಡೆದೆ! ಆದರೆ ಅತ್ಯಂತ ಶ್ರೇಷ್ಠವಾದ ಬ್ರಹ್ಮಲೋಕವನ್ನು ಪಡೆದರೂ ನನಗೆ ಹಸಿವು, ಬಾಯಾರಿಕೆಗಳು ಬಾಧಿಸತೊಡಗಿದವು! ಬ್ರಹ್ಮಲೋಕದಲ್ಲಿ ಹೀಗಾಗಬಾರದಲ್ಲ ಎಂದು ಯೋಚಿಸಿ ಪಿತಾಮಹ ಬ್ರಹ್ಮದೇವನ ಬಳಿ ಹೋಗಿ,'ಪಿತಾಮಹ! ಈ ಬ್ರಹ್ಮಲೋಕದಲ್ಲಿ ಕ್ಷುತ್ಪಿಪಾಸೆಗಳು ಕಾಡುವುದಿಲ್ಲ! ಆದರೆ ಅವು ನನ್ನನ್ನು ಕಾಡುತ್ತಿವೆ! ಇದೇಕೆ ಹೀಗೆ? ಈಗ ನನಗೆ ಆಹಾರ ಯಾವುದು?' ಎಂದು ಕೇಳಿದೆ. ಅದಕ್ಕೆ ಅವನು,'ಎಲೈ ಶ್ವೇತನೇ! ನಿನ್ನ ಶವದ ಮಾಂಸವೇ ನಿನಗಿನ್ನು ಆಹಾರ! ನೀನು ಹಿಂದೆ ಭೂಮಿಯ ಮೇಲೆ ತಪಸ್ಸು ಮಾಡುತ್ತಿದ್ದಾಗ ನಿನ್ನ ಶರೀರವನ್ನು ಸ್ವಾದಿಷ್ಟ ಆಹಾರದಿಂದ ಚೆನ್ನಾಗಿ ಪೋಷಿಸಿಕೊಳ್ಳುತ್ತಿದ್ದೆ! ಆದರೆ ಆಗ ನೀನು ಯಾರಿಗೂ ಏನನ್ನೂ ಕೊಡಲಿಲ್ಲ! ಒಂದಿಷ್ಟೂ ದಾನ ಮಾಡಲಿಲ್ಲ! ಕೇವಲ ತಪಸ್ಸು ಮಾಡುತ್ತಿದ್ದೆ ಹಾಗೂ ನೀನು ಮಾತ್ರ ಚೆನ್ನಾಗಿ ತಿನ್ನುತ್ತಿದ್ದೆ! ಯಾರಿಗೂ ಸ್ವಲ್ಪವೂ ಅನ್ನದಾನ ಮಾಡಲಿಲ್ಲ! ಆದ್ದರಿಂದಲೇ ಈಗ ನಿನಗೆ ಹಸಿವು, ತೃಷೆಗಳು ಬಾಧಿಸುತ್ತಿವೆ! ಬೀಜವನ್ನು ಬಿತ್ತದೇ ಸಸ್ಯವು ಬೆಳೆಯುವುದೇ? ಆದ್ದರಿಂದಲೇ ನಿನಗೆ ಹಸಿವಿನ ಸಂಕಷ್ಟ! ಇದಕ್ಕೆ ಪರಿಹಾರವೆಂದರೆ, ನೀನೇ ಬೆಳೆಸಿರುವ ಸ್ವಾದಿಷ್ಟವಾದ ನಿನ್ನ ಶರೀರವನ್ನೇ ತಿನ್ನುವುದು! ಅದು ಇನ್ನೂ ಆ ಸರೋವರದ ಬಳಿಯೇ ಇದೆ! ಒಳ್ಳೆಯ ಆಹಾರಗಳಿಂದ ಪೋಷಿಸಿರುವ ಅದು ರಸಭರಿತವಾಗಿದೆ! ದಿನವೂ ಹೋಗಿ ಅದನ್ನು ತಿನ್ನು! ಅದರಿಂದ ನಿನಗೆ ತೃಪ್ತಿಯಾಗುತ್ತದೆ! ನೀನು ತಿಂದ ಬಳಿಕ ಅದು ಪುನಃ ಮರುದಿವಸಕ್ಕೆ ತುಂಬಿಕೊಳ್ಳುತ್ತದೆ! ಕೊನೆಗೊಂದು ದಿನ, ಅಗಸ್ತ್ಯ ಮಹರ್ಷಿಗಳು ಬಂದಾಗ ನಿನ್ನ ಕಷ್ಟ ಪರಿಹಾರವಾಗುತ್ತದೆ!' ಎಂದನು. ಅದರಂತೆ ನಾನು ಅನೇಕ ವರ್ಷಗಳಿಂದ ನಿಂದ್ಯವಾದ ನನ್ನ ಶವವನ್ನೇ ತಿನ್ನುತ್ತಿದ್ದೇನೆ! ಅದು ಕ್ಷಯಿಸದೇ ಮತ್ತೆ ಮತ್ತೆ ತುಂಬಿಕೊಳ್ಳುತ್ತಲೇ ಇದೆ! ಈಗ ನೀವು ದುರ್ಗಮವಾದ ಈ ಅರಣ್ಯಕ್ಕೆ ಬಂದಿರುವಿರೆಂದರೆ ನೀವು ಅಗಸ್ತ್ಯ ಮಹರ್ಷಿಗಳೇ ಇರಬೇಕು! ನಿಮ್ಮನ್ನು ಬಿಟ್ಟು ಬೇರಾರೂ ಇಲ್ಲಿಗೆ ಬರಲಾರರು! ದಯವಿಟ್ಟು ನನ್ನನ್ನು ಈ ಸಂಕಷ್ಟದಿಂದ ಪಾರುಮಾಡಿ! ನನ್ನ ಈ ಒಂದು ಆಭರಙವನ್ನು ತೆಗೆದುಕೊಂಡು ನನ್ನನ್ನು ಅನುಗ್ರಹಿಸಿ! ಇದು ಸಾಮಾನ್ಯ ಆಭರಣವಾಗಿರದೇ ದಿನವೂ ಅಪಾರ ಚಿನ್ನ, ವಸ್ತ್ರ, ಆಭರಣ, ಭಕ್ಷ್ಯ ಭೋಜ್ಯಗಳನ್ನು ಕೊಡುತ್ತದೆ!"
ಹೀಗೆ ತನ್ನ ಕಥೆ ಹೇಳಿ ಆ ಸ್ವರ್ಗೀಯ ಪುರುಷನು ಅಗಸ್ತ್ಯ ಮಹರ್ಷಿಗಳಿಗೆ ಆ ದಿವ್ಯಾಭರಣವನ್ನು ಕೊಟ್ಟನು. ಅವನನ್ನು ಕಾಪಾಡಲೆಂದು ಅಗಸ್ತ್ಯರೂ ಅದನ್ನು ಸ್ವೀಕರಿಸಿದರು. ಆಗ ಶ್ವೇತನ ಶವವು ಅದೃಶ್ಯವಾಯಿತು! ಶ್ವೇತನು ಸಂತೋಷದಿಂದ ತನ್ನ ವಿಮಾನದಲ್ಲಿ ಕುಳಿತು ಬ್ರಹ್ಮಲೋಕಕ್ಕೆ ತೆರಳಿದನು!
ಇದಿಷ್ಟು ಕಥೆಯನ್ನು ಅಗಸ್ತ್ಯರು ಶ್ರೀರಾಮನಿಗೆ ಹೇಳಿದರು. ಅದನ್ನು ಕೇಳಿ ರಾಮನೂ ಆಶ್ಚರ್ಯಗೊಂಡನು!
ಈ ಕಥೆಯಲ್ಲಿ ಅನ್ನದಾನ ಎಷ್ಟು ಮುಖ್ಯ ಎಂಬ ಸಂದೇಶವಿರುವುದನ್ನು ನೋಡಬಹುದು. ನಾವು ಏನೇ ಒಳ್ಳೆಯ ಕೆಲಸ ಮಾಡಿದರೂ ಕಷ್ಟದಲ್ಲಿರುವ ಇನ್ನೊಬ್ಬರಿಗೂ ಏನಾದರೂ ಕೊಡಬೇಕು. ನಮಗಷ್ಟೇ ಮಾಡಿಕೊಂಡರೆ ಸಾಲದು. ಇತರರಿಗೂ ಅಲ್ಪಸ್ವಲ್ಪ ದಾನ ಮಾಡಬೇಕು. ಆದ್ದರಿಂದಲೇ, ವೈದಿಕ ಸಂಸ್ಕೃತಿಯಲ್ಲಿ ನಾವು ಪ್ರತಿನಿತ್ಯ ಮಾಡುವ ಪಂಚಮಹಾಯಜ್ಞಗಳಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನ್ನದಾನ, ಸೇವೆಗಳು ಸೇರಿವೆ. ಪಂಚಮಹಾಯಜ್ಞಗಳೆಂದರೆ, ಬ್ರಹ್ಮಯಜ್ಞ ( ಪವಿತ್ರ ಗ್ರಂಥಗಳ ಅಧ್ಯಯನದ ಮೂಲಕ ಬ್ರಹ್ಮಪೂಜೆ), ದೇವಯಜ್ಞ (ಪೂಜೆ, ಪುನಸ್ಕಾರಗಳ ಮೂಲಕ ದೇವಪೂಜೆ), ಪಿತೃಯಜ್ಞ ( ತರ್ಪಣಗಳಿಂದ ಪಿತೃಗಳ ಸ್ಮರಣೆ, ಪೂಜೆ), ಭೂತಯಜ್ಞ ( ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳ ಸೇವೆ), ಮತ್ತು ಮನುಷ್ಯಯಜ್ಞ ( ಅತಿಥಿ ಸತ್ಕಾರ, ಕಷ್ಟದಲ್ಲಿರುವ ಮನುಷ್ಯರ ಸೇವೆ ಇತ್ಯಾದಿ ಮನುಷ್ಯರ ಸೇವೆ).
ಭಾರತೀಯ ಕಥೆಗಳ ಒಂದು ಸ್ವಾರಸ್ಯವೆಂದರೆ ಕಥೆಯೊಳಗೆ ಕಥೆಯಿರುವುದು! ಅನೇಕ ಕಥೆಗಳು ಹೀಗಿರುತ್ತವೆ. ಅದನ್ನು ಇಲ್ಲಿಯೂ ನೋಡಬಹುದು. ಮೊದಲನೆಯ ಸ್ತರದಲ್ಲಿ ಅಗಸ್ತ್ಯರು ರಾಮನಿಗೆ ಕಥೆ ಹೇಳುತ್ತಾರೆ. ಎರಡನೆಯ ಸ್ತರದಲ್ಲಿ ಶ್ವೇತನೆಂಬ ಸ್ವರ್ಗೀಯ ಪುರುಷನು ಅಗಸ್ತ್ಯರಿಗೆ ಅವನ ಕಥೆ ಹೇಳಿಕೊಳ್ಳುತ್ತಾನೆ. ಹೀಗೆ ಕಥೆಯೊಳಗೆ ಒಂದು ಕಥೆಯಿರುವ ಸ್ವಾರಸ್ಯವನ್ನು ಇಲ್ಲಿ ನೋಡಬಹುದು.
#ರಾಮಾಯಣದ_ಉಪಕಥೆಗಳು #ಪೌರಾಣಿಕ_ಕಥೆಗಳು #ಪೌರಾಣಿಕ_ಸ್ವಾರಸ್ಯಗಳು
No comments:
Post a Comment
If you have any doubts. please let me know...