ಸಾಯಂಕಾಲ ಎಂಟು ಗಂಟೆಯ ಸಮಯ, ಪಾದರಕ್ಷೆಯ ಅಂಗಡಿಯವ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅಂಗಡಿಯನ್ನು ಮುಚ್ಚಬೇಕು ಎನ್ನುವಾಗ, ಇಪ್ಪತ್ತರ ಹರೆಯದ ಹುಡುಗ ಒಳಗೆ ಬಂದ. ಮಾಲೀಕ ಆತನನ್ನು ಮತ್ತು ಆತನ ಕಾಲನ್ನು ನೋಡಲು ಆತ ಸುಂದರವಾದ ಪಾದರಕ್ಷೆಯನ್ನು ಹಾಕಿಕೊಂಡಿದ್ದ. ನೋಡಲು ಹಳ್ಳಿಯವನಂತೆ ಕಂಡರೂ ಓದು ಬರಹ ಬಲ್ಲವನಂತಿದ್ದ.
ಮಾಲೀಕ "ಸರ್ ಏನಾಗಬೇಕಿತ್ತು" ಎನ್ನಲು, ಆ ಯುವಕ "ನನ್ನ ತಾಯಿಗೆ ಒಂದು ಜೊತೆ ಪಾದರಕ್ಷೆ ಬೇಕಾಗಿತ್ತು."
ಸರಿ ಅವರೆಲ್ಲಿ ಎನ್ನಲು ಆತ ಅವರು ಊರಲ್ಲಿದ್ದಾರೆ ಎಂದ.
ಸರಿ ಹಾಗಾದರೆ ನಿಮಗೆ ಯಾವ ಸೈಜಿನ ಪಾದರಕ್ಷೆ ಬೇಕು ಎನ್ನಲು ಯುವಕನು, ತನ್ನ ಪರ್ಸ್ ತೆಗೆದು ಅದರಿಂದ ಸುಂದರವಾದ ಬಿಳಿ ಹಾಳೆಯನ್ನು ತೆಗೆದು ಮಾಲೀಕನ ಮುಂದೆ ಇಟ್ಟ.
ಅದರಲ್ಲಿ ಎರಡು ಪಾದದ ನಕ್ಷೆ ಇತ್ತು. "ಇದು ನನ್ನ ತಾಯಿಯ ಪಾದದ ನಕ್ಷೆ, ನಾನು ಪಾದರಕ್ಷೆ ಖರೀದಿಸುವುದು ಅವರಿಗೆ ಗೊತ್ತಿಲ್ಲ" ಎಂದ.
ಮಾಲೀಕ ನೋಡಿ, "ಸರಿ ನಿಮಗೆ ಎಷ್ಟು ಬೆಲೆಯ ಪಾದರಕ್ಷೆ ಬೇಕು" ಎನ್ನಲು ಆ ಯುವಕ "ಇದು ನನ್ನ ಮೊದಲನೆಯ ಸಂಬಳ... ನನಗೆ 12 ಸಾವಿರ ಬರುತ್ತದೆ. ಅದರಲ್ಲಿ ಅದು ಇದು ಎಂದು ಹೋಗಿ ಕೈಗೆ 10 ಸಾವಿರ ಬರುತ್ತದೆ. ಅದರಲ್ಲಿ 3 ಸಾವಿರ ಮನೆಗೆ ಕೊಡಬೇಕು... ಈಗ ಒಳ್ಳೆಯ ಪಾದರಕ್ಷೆಯನ್ನು ಕೊಡಿ. ಬೆಲೆ ಒಂದು ವಿಚಾರವೇ ಅಲ್ಲ. ನನ್ನ ತಾಯಿ ಕೂಲಿ ಕೆಲಸ ಮಾಡುತ್ತಾರೆ. ಅವರೆಂದೂ ಪಾದರಕ್ಷೆ ಹಾಕಿದವರಲ್ಲ. ಕಲ್ಲು ಮುಳ್ಳುಗಳಲ್ಲಿ ಬರಿಗಾಲಲ್ಲಿ ನಡೆದು ಕಷ್ಟಪಟ್ಟು ದುಡಿದು ನನ್ನನ್ನು ಓದಿಸಿ ಕೆಲಸ ಸಿಗುವಂತೆ ಮಾಡಿದ ದೇವರು. ಅವರಿಗೆ ಸರಿಯಾಗುವ ಪಾದರಕ್ಷೆ ಕೊಡಿ" ಎಂದನು.
ಮಾಲೀಕ ಒಂದು ಜೊತೆ ಒಳ್ಳೆಯ ಪಾದರಕ್ಷೆಯನ್ನು ಕೊಟ್ಟು ಇದರ ಬೆಲೆ 800 ರೂಪಾಯಿಗಳು ಎನ್ನುತ್ತಲೇ ಗಿರಾಕಿ ಸಂತೋಷದಿಂದ ಅದನ್ನು ಪ್ಯಾಕ್ ಮಾಡಲು ಹೇಳಿ ತನ್ನ ಮೊದಲ ಸಂಬಳದಿಂದ ಅದನ್ನು ಕೊಟ್ಟು ಸಂತಸದಿಂದ ಅಂಗಡಿಯಿಂದ ಹೊರಡಲನುವಾದ.
ಆಗ ಮಾಲೀಕ, "ಅಯ್ಯ ನಿಮಗೆ ಅಭ್ಯಂತರ ಇಲ್ಲವಾದರೆ ನನಗೆ ಆ ಪಾದರಕ್ಷೆಯ ನಕ್ಷೆ ಬರೆದ ಕಾಗದವನ್ನು ಕೊಡಿ" ಎಂದ. ಯುವಕ ಅದನ್ನು ಕೊಡಲು, ಅಂಗಡಿಯ ಮಾಲೀಕ ಮತ್ತೊಂದು ಜೊತೆ ಸುಂದರವಾದ ಪಾದರಕ್ಷೆಯನ್ನು ಕೊಟ್ಟು "ಇದನ್ನು ನಿಮ್ಮ ತಾಯಿಯವರಿಗೆ, ಅಂದರೆ ನನ್ನ ತಂಗಿಗೆ ನನ್ನ ಉಡುಗೊರೆಯಾಗಿ ಕೊಡಿ. ನಿಮ್ಮಂತ ಒಳ್ಳೆಯ ಹುಡುಗನನ್ನು ಹೆತ್ತು ಸರಿದಾರಿಯಲ್ಲಿ ಬೆಳೆಸಿದ ಅವರು ಮಹಾತಾಯಿ." ಎಂದನು.
ಯುವಕನು ಅದನ್ನು ಸಂತಸದಿಂದ ಪಡೆದು ಹೊರಟ ನಂತರ ಅಂಗಡಿಯಲ್ಲಿದ್ದ ಕೆಲಸದ ಹುಡುಗ ಮಾಲೀಕನನ್ನು ಒಂದು ವಿಧವಾಗಿ ನೋಡಿದ.
ಆಗ ಮಾಲೀಕನು, "ನೋಡು ಈ ನಕ್ಷೆಯನ್ನು ನಾವು ದಿನಾಲು ಪೂಜೆ ಮಾಡುವ ದೇವರ ಮೂರ್ತಿಯ ಬಳಿಯಿಡು. ಇದು ಮಹಾಲಕ್ಷ್ಮಿಯ ಪಾದಗಳು. ಇದಕ್ಕೆ ಪೂಜೆ ಮಾಡಿದರೆ ನಮ್ಮ ವ್ಯಾಪಾರ ವ್ಯವಹಾರ ವೃದ್ಧಿಯಾಗಬಹುದು. ಎಷ್ಟು ಜನ ತಾಯಂದಿರು ಮಕ್ಕಳಿಗೆ ಸರಿದಾರಿ ತೋರಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡುತ್ತಾರೋ ಆ ನಾಡು ದೇಶ ಅಭಿವೃದ್ಧಿಯಾಗುತ್ತದೆ" ಎಂದನು.
No comments:
Post a Comment
If you have any doubts. please let me know...