"ಬರೆದಂತೆಯೇ ಉಚ್ಚರಿಸುವುದು, ಉಚ್ಚರಿಸಿದಂತೆಯೇ ಬರೆಯುವುದು ಸಂಸ್ಕೃತ ಮತ್ತು ಕನ್ನಡ ಭಾಷೆ್ಗಳ ಜಾಯಮಾನ". ಹೌದು ತಾನೆ? ಅಂದಮೇಲೆ "ಬ್ರಹ್ಮ"ವನ್ನು "ಬ್ರ ಹ್ ಮ" ಎಂದು, "ಜಾಹ್ನವಿ"ಯನ್ನು "ಜಾ ಹ್ ನ ವಿ" ಎಂದು, "ಮಧ್ಯಾಹ್ನ"ವನ್ನು "ಮ ಧ್ಯಾ ಹ್ ನ" ಎಂದು ಉಚ್ಚರಿಸಿದರೆ ತಪ್ಪಂತೂ ಅಲ್ಲವೇ ಅಲ್ಲ. ನಿಜವಾಗಿಯಾದರೆ ಅದೇ ಸೂಕ್ತ.
ಆದರೆ, ಈ ರೀತಿ ಹ್ ಜೊತೆ ಇನ್ನೊಂದು ವ್ಯಂಜನ ಸೇರಿ ಸಂಯುಕ್ತಾಕ್ಷರವಾದಾಗ ಮೊದಲಿಗೆ ಆ ’ಇನ್ನೊಂದು ವ್ಯಂಜನ’ವನ್ನು ಉಚ್ಚರಿಸಿ ಆಮೇಲೆ ಹ್ ವನ್ನು ಉಚ್ಚರಿಸಬಹುದು ಎಂದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಂಡಿರುವ ಒಂದು ಅನುಕೂಲ ಶಾಸ್ತ್ರ.
ವಿಪರ್ಯಾಸವೇನೆಂದರೆ, ಈ ತಥಾಕಥಿತ ಅನುಕೂಲ ಶಾಸ್ತ್ರದಲ್ಲಿ ಏಕರೂಪತೆ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಪಾದನೆ. ಕೆಲವರು "ಹಿ ನ ಮ ಪರೇ ತತ್ಪರಸ್ಯ ಚ" ಎಂಬ ಒಂದು ಸೂತ್ರವನ್ನು ಪ್ರಸ್ತಾವಿಸಿ, "ಹ್ ಜೊತೆ ಮ್/ನ್ ಇದ್ದರೆ ಮೊದಲಿಗೆ ಮ್/ನ್ ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. "ಹ್ ಜೊತೆ ಣ್ ಬಂದರೆ- ಉದಾಹರಣೆಗೆ ಅಪರಾಹ್ಣ- ಏನು ಮಾಡಬೇಕು?" ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ! "ಹ್ ಜೊತೆ ಯ್/ರ್/ಲ್/ವ್ ಬಂದರೆ- ಉದಾಹರಣೆಗೆ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿ- ಏನು ಮಾಡಬೇಕು?" ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ!
ಇನ್ನು ಕೆಲವರು "ಹ್ ಜೊತೆ ಯಾವುದೇ ಅನುನಾಸಿಕ ಇದ್ದರೆ ಮೊದಲಿಗೆ ಅನುನಾಸಿಕವನ್ನು ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. ಅವರ ವ್ಯಾಖ್ಯೆಯಲ್ಲಿ ಬ್ರಹ್ಮ, ಜಾಹ್ನವಿ, ಅಪರಾಹ್ಣಗಳು ಒಳಗೊಳ್ಳುತ್ತವಾದರೂ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿಗಳ ಉಚ್ಚಾರಕ್ಕೆ ಅವರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ.
ಆದ್ದರಿಂದಲೇ, "ಬರೆದಂತೆಯೇ ಉಚ್ಚರಿಸುವುದು" ಯಾವುದೇ ಗೊಂದಲವಿಲ್ಲದ ಆಯ್ಕೆ. ಬನ್ನಂಜೆ ಗೋವಿಂದಾಚಾರ್ಯರು, ಈಗ ಅವರ ಪುತ್ರಿ ವೀಣಾ ಬನ್ನಂಜೆ ಮುಂತಾದ ಕೆಲವು ವಿದ್ವಾಂಸರು ಇದನ್ನೇ ಆಯ್ದುಕೊಂಡಿದ್ದಾರೆ. ಅವರು "ಬ್ರಹ್ಮ" ಪದವನ್ನು "ಬ್ರ ಹ್ ಮ" ಎಂದೇ ಉಚ್ಚರಿಸುತ್ತಾರೆ, "ಬ್ರ ಮ್ ಹ" ಎಂದು ಅಲ್ಲ.
ಅಷ್ಟಾಗಿ, ‘ಬ್ರಹ್ಮ’ ಪದದ ವ್ಯುತ್ಪತ್ತಿ ಏನು? ಬೃಹ್ + ಮನಿನ್. ‘ಬೃಹ್’ ಆಂದರೆ something that is expanded, or great; ‘ಬೃಹತ್’ ಪದ ಸಹ ಅದೇ ಮೂಲದಿಂದ ಬಂದದ್ದು. ಬೃಹ್ + ಮನಿನ್ ರೀತಿಯಲ್ಲಿ ಬ್ರಹ್ಮ ಪದ ಉಂಟಾದದ್ದು ಅಂದಮೇಲೆ ಆ ದೃಷ್ಟಿಯಿಂದಲೂ ‘ಹ್’ ಉಚ್ಚಾರವೇ ಮೊದಲು. ಬ್ರಮ್ಹ ಎಂದು ಉಚ್ಚರಿಸಿದರೆ ಅಲ್ಲಿ ‘ಬೃಹ್’ ಧಾತುವನ್ನೇ ಕೊಂದಂತಾಗುತ್ತದಲ್ಲ!?
ವಹ್ನಿ ಪದ ಸಹ ಹೀಗೆಯೇ. ವಹ್ + ನಿ. ‘ವಹ್’ ಅಂದರೆ something that carries. ಅಗ್ನಿಯು ದೇವತೆಗಳ ಮತ್ತು ಮನುಷ್ಯರ ನಡುವಿನ ಕೊಡುಕೊಳ್ಳುವಿಕೆಯ ವಾಹಕ. ಆದ್ದರಿಂದ ವಹ್ನಿ ಎಂದು ಹೆಸರು. ಅದನ್ನು ವನ್ಹಿ ಎಂದು ಉಚ್ಚರಿಸಿದರೆ ಅಲ್ಲಿ ‘ವಹ್’ ಧಾತುವಿನಿಂದ ಪಡೆದ ಅರ್ಥವನ್ನೇ ಬೆಂಕಿಗೆ ಹಾಕಿ ನಾಶಮಾಡಿದಾಂತಾಗುತ್ತದೆ.
ಮಧ್ಯಾಹ್ನ, ಅಪರಾಹ್ಣಗಳದೂ ಇದೇ ಕಥೆ. ಮಧ್ಯ + ಅಹ್ + ನ. ‘ಅಹ್’ ಎಂದರೆ ಹಗಲು. ಹಗಲಿನ ಮಧ್ಯಭಾಗವೇ ಮಧ್ಯಾಹ್ನ. ಅದನ್ನು ಮಧ್ಯಾನ್ಹ, ಮಧ್ಯಾನ್ನ, ಮಧ್ಯಾನ, ಮದ್ಯಾನ ಅಂತೆಲ್ಲ ಉಚ್ಚರಿಸಿದರೆ/ಬರೆದರೆ ಹಗಲುದರೋಡೆ (“ಅಹ್ = ಹಗಲು" ಎಂಬ ಅರ್ಥವನ್ನು ದರೋಡೆ ಮಾಡಿದಂತೆ) ಆಗುತ್ತದೆ!
ಇದ್ಯಾವ ಗೊಂದಲ ಪಾಪಪ್ರಜ್ಞೆಯೂ ಬೇಡವೆಂದು ಗೀತಾಪರಿವಾರವು "ಬರೆದಂತೆಯೇ ಉಚ್ಚರಿಸುವುದು" ರೀತಿಯನ್ನು ಆಯ್ದುಕೊಂಡಿದೆ. ಗೀತಾಪರಿವಾರದಲ್ಲಿ ನಾವು "ಬ್ರ ಹ್ ಮ", "ಜಾ ಹ್ ನ ವಿ", "ಮ ಧ್ಯಾ ಹ್ ನ" ಎಂಬಂತೆ ಉಚ್ಚರಿಸುತ್ತೇವೆ.
ಒಟ್ಟಾರೆಯಾಗಿ ಈ ಉಚ್ಚಾರವಿಷಯವನ್ನು ಸರಿ-ತಪ್ಪು ಎಂದು ನಿಷ್ಕರ್ಷೆ ಮಾಡುವುದಕ್ಕಿಂತ "ಎರಡು ವಿಭಿನ್ನ ಚಿಂತನಾ ಶಾಲೆಗಳು" (two different schools of thought) ಎಂದು ಪರಿಗಣಿಸಬಹುದು ಅಷ್ಟೇ. 🙏
- ಶ್ರೀವತ್ಸ ಜೋಶಿ. 24ಫೆಬ್ರವರಿ2026.
= = =
No comments:
Post a Comment
If you have any doubts. please let me know...