*ಅಲಬ್ಧಮೀಹೇದ್ಧರ್ಮೇಣ*
*ಲಬ್ಧಂ ಯತ್ನೇನ ಪಾಲಯೇತ್ |*
*ಪಾಲಿತಂ ವರ್ಧಯೇನ್ನಿತ್ಯಂ*
*ವೃದ್ಧಂ ಪಾತ್ರೇಷು ನಿಕ್ಷಿಪೇತ್ ||*
_(ಮಹರ್ಷಿಯಾಜ್ಞವಲ್ಕ್ಯವಚನ)_
_*(ಧರ್ಮೇಣ)* ಧರ್ಮದಿಂದ, *(ಅಲಬ್ಧಮ್)* ಈಗಾಗಲೇ ಲಭಿಸದಿರುವ ಹೊಸದನ್ನು, *(ಈಹೇತ್)* ಸಂಪಾದಿಸಲು ತೊಡಗಬೇಕು. *(ಲಬ್ಧಮ್)* ಸಂಪಾದಿಸಿದ್ದನ್ನು, *(ಯತ್ನೇನ)* ಪ್ರಯತ್ನಪೂರ್ವಕವಾಗಿ, *(ಪಾಲಯೇತ್)* ರಕ್ಷಿಸಬೇಕು. *(ಪಾಲಿತಮ್)* ರಕ್ಷಿಸಿದ್ದನ್ನು, *(ನಿತ್ಯಂ ವರ್ಧಯೇತ್)* ದಿನವೂ / ಯಾವಾಗಲೂ ನ್ಯಾಯಮಾರ್ಗದಲ್ಲಿ ಹೆಚ್ಚಿಸಬೇಕು. *(ವೃದ್ಧಮ್)* ಹಾಗೆ ಹೆಚ್ಚಿಸಿದ್ದನ್ನು, *(ಪಾತ್ರೇಷು)* ಯೋಗ್ಯರಲ್ಲಿ / ಪಾತ್ರರಲ್ಲಿ, *(ನಿಕ್ಷಿಪೇತ್)* ಹಂಚಬೇಕು._
_ಸಂಪಾದನೆಗೆ ಧರ್ಮಮಾರ್ಗವೆಂದರೆ ನ್ಯಾಯವಾದ ದುಡಿತ. ಯಾವುದು ನ್ಯಾಯ, ಯಾವುದು ಅನ್ಯಾಯವೆಂದು ಪ್ರತಿಯೊಬ್ಬನ ಅಂತಃಸಾಕ್ಷಿಗೂ ತಿಳಿದಿರುತ್ತದೆ. ಆದರೆ ಕಾಮ ಕ್ರೋಧಗಳ ಉಲ್ಬಣತೆಯಿಂದ ತಪ್ಪನ್ನೆಸಗುತ್ತಾನೆ. ಒಟ್ಟಿನಲ್ಲಿ ಇನ್ನೊಬ್ಬರ ಹಿತಕ್ಕೆ ಧಕ್ಕೆಯಾಗದಿರುವ ಮಾರ್ಗ ನ್ಯಾಯವೆಂಬುದು ಸಾಮಾನ್ಯ ನಿಯಮ._
_ಸಂಪಾದನೆ, ವರ್ಧನೆ, ವಿನಿಯೋಗ- ಇವಿಷ್ಟು ಧರ್ಮಮೂಲವಾಗಿರಬೇಕು ಎಂಬುದು ನೀತಿಯ ತಿರುಳು. ಮೊದಲನೆಯದಾದ ಸಂಪಾದನೆಯಲ್ಲಿ ಅಧರ್ಮ ಇಣುಕಿತೆಂದರೆ ಉಳಿದವುಗಳಿಗೆ ಅದರ ಅಂಟು ತಪ್ಪಿದ್ದಲ್ಲ. ಸಾಲದ ಸಂಪಾದನೆ ದುಡಿತದಿಂದ ಬಂದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸಾಲ ಅನಿವಾರ್ಯವಾದರೂ ಅದರ ಪಾಲನೆ ಮೊದಲಾದ ಮೂರು ಹೇಗೆ ನಡೆಯುತ್ತವೆ ಎಂಬುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಇದು ವ್ಯಕ್ತಿಗೆ ಅನ್ವಯಿಸುವಂತೆ ರಾಷ್ಟ್ರಕ್ಕೂ ಅನ್ವಯಿಸುತ್ತದೆ. *ಉತ್ತಮಂ ಸ್ವಾರ್ಜಿತಂ ವಿತ್ತಮ್*. ತಾನೇ ನ್ಯಾಯಯುತ ದುಡಿಮೆಯಿಂದ ಸಂಪಾದಿಸಿದ ಹಣವೇ ಉತ್ತಮ._
_ಸಂಪಾದಿಸಿದರೆ ಕರ್ತವ್ಯ ಮುಗಿಯಲಿಲ್ಲ. ಅದನ್ನು ರಕ್ಷಿಸಿ ಬೆಳೆಸಬೇಕು. ಆಮೇಲೆ
*ವೃದ್ಧಂ ಪಾತ್ರೇಷು ನಿಕ್ಷಿಪೇತ್*- "ಯೋಗ್ಯಪಾತ್ರದಲ್ಲಿ ಅದನ್ನು ಹಂಚಬೇಕು." ಸಂಪಾದನೆಗೆ ವಿನಿಯೋಗದಲ್ಲಿ ಮುಕ್ತಾಯ. *ಆದಾನಂ ಹಿ ವಿಸರ್ಗಾಯ* -- ಸಂಪಾದನೆ / ಸ್ವೀಕಾರವು ಕೊಡುವುದಕ್ಕೇ ಆಗಿದೆ. ಇದು ಒಂದು ನಿಯಮ._
_ಮೇಲಿನ ಶ್ಲೋಕದಲ್ಲಿನ ವಿಷಯ, ವಿದ್ಯೆಗೂ ಸಂಬಂಧಿಸುತ್ತದೆ. ವಿದ್ಯೆಯನ್ನು ಸಂಪಾದಿಸಿ, ರಕ್ಷಿಸಿ, ಬೆಳೆಸಿ, ಅರ್ಹನಾದ ಶಿಷ್ಯನಿಗೆ ಬೋಧಿಸಬೇಕು. ಉಪಾಧ್ಯಾಯನಲ್ಲದವನೂ ತನ್ನ ವಿದ್ಯೆಗೆ ಅನುಗುಣವಾಗಿ ಜನೋಪಯುಕ್ತ ಕಾರ್ಯವನ್ನು ಮಾಡಿದರೆ ಸಾಲವನ್ನು / ಋಷಿಋಣವನ್ನು ತೀರಿಸಿದಂತೆ._
_ಹಣವನ್ನು ಬಿಟ್ಟರೆ ಪ್ರಿಯವಾದದ್ದು ಕೀರ್ತಿ. ಧನಪಿಶಾಚಕ್ಕಿಂತ ಕೀರ್ತಿಶನಿಯ ಕಾಟ ಹೆಚ್ಚಿನದು. ಭೃಷ್ಟಾಚಾರದಿಂದ ಹಣವನ್ನು ಸೇರಿಸಿದಂತೆ ದುಷ್ಟಾಚಾರದಿಂದ ಕೀರ್ತಿಯನ್ನು ಗಳಿಸಿದವರೂ ಉಂಟು. ಹಣವನ್ನು ಮನುಷ್ಯನು ಬಚ್ಚಿಡುತ್ತಾನೆ, ಕೀರ್ತಿಯನ್ನು ಮಾತ್ರ ಎಲ್ಲೆಲ್ಲಿಯೂ ಹಂಚಲು ಆಶಿಸುತ್ತಾನೆ. ವಿದ್ಯೆ, ಧನ, ಕೀರ್ತಿ- ಯಾವುದೇ ಆಗಲಿ ಆರ್ಜನೆಯ ಮಾರ್ಗ ಶುದ್ಧವಾದರೆ ಉಳಿದವೂ ಶುದ್ಧವಾಗಿರುತ್ತವೆ._
_ಇಲ್ಲದಿದ್ದರೆ, *"ದಾನಂ ಭೋಗೋ ನಾಶಸ್ತಿಸ್ರೋ, ಗತಯೋ ಭವನ್ತಿ ವಿತ್ತಸ್ಯ | ಯೋ ದದಾತಿ ನ ಭುಙ್ಕ್ತೇ, ತಸ್ಯ ತೃತೀಯಾ ಗತಿರ್ಭವತಿ ||"* — ಅಂದರೆ, ಹಣಕ್ಕೆ ದಾನ, ಭೋಗ, ನಾಶವೆಂದು ೩ ವಿಧದ ಗತಿಯಿರುವುದು. ಯಾರು ಇತರರಿಗೆ ದಾನವೂ ಮಾಡದೆ, ತಾನೂ ಭೋಗಿಸದಿರುವನೋ ಅಂಥವರ ಹಣಕ್ಕೆ ನಾಶವೆಂಬ ೩ನೇ ಗತಿಯಾಗುತ್ತದೆ. ಹಾಗಾಗಿ ಸೋಮಾರಿಯಾಗದೇ, ಧರ್ಮಮಾರ್ಗದಲ್ಲಿ ಹೆಚ್ಚು ಸಂಪಾದಿಸಬೇಕು. ಹಾಗೆ ಸಂಪಾದಿಸಿದ್ದನ್ನು ನ್ಯಾಯಯುತವಾಗಿ, ಜಾಗರೂಕತೆಯಿಂದ ಉಳಿಸಿ ಬೆಳೆಸಬೇಕು. ಬೆಳೆಸಿದ್ದರ ಒಂದು ಭಾಗವನ್ನು ಯೋಗ್ಯರಿಗೆ ಹಂಚಬೇಕು ಎಂಬುದಿದರ ಸಂದೇಶ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
If you have any doubts. please let me know...