January 16, 2025

ವೀರಶೈವ ಸಿದ್ಧಾಂತದ ನೆಲೆ ಹಾಗೂ ಹಿನ್ನೆಲೆ

       ನಮ್ಮ ಭಾರತ ದೇಶದಲ್ಲಿ ವೇದೋಪನಿಷತ್ತುಗಳ ತರುವಾಯ ಪಡ್ಡದರ್ಶನಗಳು ಜನ್ಮ ತಾಳಿದವು. ಸಾಂಖ್ಯವು ಕಪಿಲ ಮುನಿಯಿಂದಲೂ, ಯೋಗವು ಪತಂಜಲಿಯಿಂದಲೂ, ನ್ಯಾಯವು ಗೌತಮನಿಂದಲೂ, ವೈಶೇಷಿಕವು ಕಣಾದ ಮುನಿಯಿಂದಲೂ, ಪೂರ್ವ ಮೀಮಾಂಸೆಯು ಜೈಮಿನಿಯಿಂದಲೂ, ಉತ್ತರ ಮೀಮಾಂಸೆಯು ವ್ಯಾಸ ಮುನಿಯಿಂದಲೂ ರಚಿತವಾದವು. ಇವುಗಳಲ್ಲಿ ಉತ್ತರ ಮೀಮಾಂಸೆಯನ್ನು ಆಧರಿಸಿ ಅನೇಕ ಆಚಾರ್ಯರು ತಮ್ಮ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಶಂಕರಾಚಾರ್ಯರು ಆದ್ವೈತ ಸಿದ್ಧಾಂತವನ್ನೂ, ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತವನ್ನೂ, ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನೂ ಸ್ಥಾಪಿಸಿದ್ದಾರೆ. ಅಂತೆಯೇ, ಈ ಎಲ್ಲ ಆಚಾರ್ಯರಿಗಿಂತಲೂ ಪೂರ್ವದಲ್ಲಿಯೇ ರೇಣುಕಾದಿ ಪಂಚಾಚಾರ್ಯರು ಶಿವಾದ್ವೈತ ಸಿದ್ಧಾಂತವನ್ನು ಸ್ಥಾಪಿಸಿ, ಆ ತತ್ವವನ್ನು ಪ್ರಚಾರ ಮಾಡಲು ಭಾರತದ ನಾನಾ ಭಾಗಗಳಲ್ಲಿ ಅಂದರೆ ಕೇದಾರ, ಕಾಶೀ, ಉಜ್ಜಯನಿ, ಶ್ರೀಶೈಲ, ರಂಭಾಪುರಿ ಸ್ಥಳಗಳಲ್ಲಿ ಪಂಚ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ನಾಸ್ತಿಕ ಮತವನ್ನು ಖಂಡಿಸಿ, ಅಂದಿನ ಜೀವನದಲ್ಲಿ ಆಸ್ತಿಕ ಭಾವನೆಯನ್ನು ನೆಲೆಗೊಳಿಸಿ ಉದ್ಧರಿಸಿದ್ದಾರೆ. ಈ ಪಂಚ ಮಹಾಪೀಠಗಳೂ, ಆ ಪರಂಪರೆಯ ಮಹಾನ್ ಗುರುಗಳೂ ಇಂದಿಗೂ ಇದ್ದಾರೆ.

    ವೀರಶೈವ ಸಿದ್ಧಾಂತಕ್ಕೆ-ಶಿವಾದ್ವೈತ, ಶಾಂಭವ ಮತ, ಶಕ್ತಿ ವಿಶಿಷ್ಟಾದ್ವೈತ, ಭೇದಾ-ಭೇದ ಮತ, ಸಮನ್ವಯ ದರ್ಶನ ಇತ್ಯಾದಿ ಪಾರಿಭಾಷಿಕ ಶಬ್ದಗಳನ್ನು ಪ್ರಯೋಗಿಸುತ್ತಾರೆ. ವೀರಶೈವ ಮತ ಸ್ಥಾಪನಾಚಾರ್ಯರ ಹಾಗೂ ಅವರ ಸಿದ್ಧಾಂತದ ವಿಷಯವು ಆಗಮಗಳಲ್ಲಿಯೇ ನಮಗೆ ದೊರೆಯುತ್ತದೆ.

    ವೀರಶೈವರಿಗೆ ಆಗಮಗಳೇ ಪ್ರಮಾಣ ಗ್ರಂಥಗಳಾಗಿವೆ. ವಾತುಲಾಗಮ, ಸ್ವಯಂಭುವ, ಸುಪ್ರಭೇದ, ಪರಮೇಶ್ವರ, ವೀರಾಗಮಗಳಲ್ಲಿ ವೀರಶೈವ ಮತವು ಹೃದಯಂಗಮವಾಗಿ ಪ್ರತಿಪಾದಿತವಾಗಿದೆ.

    ವಾತುಲಾಗಮದ ಉತ್ತರ ಭಾಗದಲ್ಲಿ ಷಟಸ್ಥಲ ತತ್ವವು ವಿಸ್ತಾರವಾಗಿ ಪ್ರತಿಪಾದಿಸಲ್ಪಟ್ಟಿದೆ. ಆಗಮಗಳ ಪ್ರಕಾರ, ಸಪ್ತ ಶೈವಗಳಲ್ಲಿ ವೀರಶೈವವೂ ಒಂದಾಗಿದೆ. ಪ್ರಾಚೀನ ಕಾಲದಲ್ಲಿ ಶೈವ ಧರ್ಮದ ಪ್ರಭೇದಗಳಾಗಿದ್ದ ಕಾಳಾಮುಖ, ಲಕುಲೀಶ, ಪಾಶುಪತ ಮೊದಲಾದವುಗಳು ಕಾಲಕ್ರಮದಲ್ಲಿ ವೀರಶೈವದಲ್ಲಿಯೇ ವಿಲೀನವಾದವು. ವೀರಶೈವವು ಶೈವಧರ್ಮದ ಪರಿಪೂರ್ಣ ವಿಕಾಸದ ಫಲವಾಗಿದೆ.

    "ಪರಮೇಶ್ವರನು ವೇದಗಳನ್ನು ಬ್ರಹ್ಮನಿಗೂ ಆ ವೇದಾರ್ಥವನ್ನೇ ಆಗಮರೂಪವಾಗಿ ಪಾರ್ವತೀದೇವಿಗೂ ಉಪದೇಶಿಸಿದ್ದಾನೆ” ಎನ್ನುವ ಮಾತಿನ ಅರ್ಥವು ವೇದಗಳ ವ್ಯಾಖ್ಯಾನವೇ ಆಗಮಗಳು ಎಂದಾಗುತ್ತದೆ. ಅಲ್ಲದೆ ವೇದದಷ್ಟೇ ಆಗಮಗಳೂ ಪೂಜ್ಯವಾದವುಗಳಾಗಿವೆ.

    ವೇದಗಳಲ್ಲಿ ಕಂಡು ಬರುವ ಕೆಲವು ವಿಷಯಗಳು ಆಗಮದಲ್ಲಿಯೂ ಕಂಡು ಬರುತ್ತವೆ. ಉದಾಹರಣೆಗಾಗಿ “ಭೂತೈನ ಪ್ರಮದಿತಂ” “ಅಗ್ನಿರಿತಿ ಭಸ್ಮ'' ಇತ್ಯಾದಿ ಯಜುರಥರ್ವಣ, ಶ್ರುತಿಗಳಲ್ಲಿ ಹೇಳಿದ ವಿಭೂತಿ ರುದ್ರಾಕ್ಷ ಧಾರಣವನ್ನು ಆಗಮಗಳೂ ಪ್ರತಿಪಾದಿಸುತ್ತವೆ. ಯಜುರಾರಣ್ಯದೊಳಗಿನ ಸದ್ಯೋಜಾತಾದಿ ಪಂಚ ಬ್ರಹ್ಮ ಮಂತ್ರಗಳನ್ನು ಕೆಲವು ಶಿವಾಗಮಗಳು ನಿರೂಪಿಸುತ್ತವೆ. ವೇದಗಳಲ್ಲಿ ಬರುವ ವರ್ಣ, ಪದ, ಮಂತ್ರ, ಕಲಾ, ಭುವನ, ತತ್ವರೂಪವಾದ ಷಡತ್ತ್ವಗಳನ್ನು ಕೆಲವು ಆಗಮಗಳು ಪ್ರತಿಪಾದಿಸುತ್ತವೆ. ''ಯಾತೇರುದ್ರಶಿವಾ ತನೂ.... ಪವಿತ್ರಂತೆ....” ಇತ್ಯಾದಿ ಶೃತಿಗಳಲ್ಲಿ ಹೇಳಲ್ಪಟ್ಟ ಶಿವಲಿಂಗ ಧಾರಣವನ್ನೂ ಶೃತಿಗಳಲ್ಲಿ ಉಕ್ತವಾದ ಪಶು-ಪತಿ-ಪಾಶ ಎಂಬ ವಿಷಯಗಳನ್ನೂ ಕ್ರಿಯಾ-ಚರ್ಯಾ-ಯೋಗ-ಜ್ಞಾನವೆಂಬ ನಾಲ್ಕು ಪಾದಗಳನ್ನೂ ಶಿವಾಗಮಗಳು ಪ್ರತಿಪಾದಿಸುತ್ತವೆ. ಶಿವಲಿಂಗ ಪ್ರತಿಷ್ಠಾಪನ-ಅಷ್ಟಾವರಣ ಪಂಚಾಚಾರ-ಷಟಸ್ಥಲ, ಲಿಂಗಾಂಗ ಸಾಮರಸ್ಯಾದಿ ವಿಷಯಗಳನ್ನೂ ಆಗಮಗಳಲ್ಲಿ ಕಾಣುತ್ತೇವೆ. ಆದುದರಿಂದ ವೇದಾಗಮಗಳ ವ್ಯವಹಾರ ಸ್ವಲ್ಪು ಹೆಚ್ಚು ಕಡಿಮೆ ಒಂದೇ ಆಗಿದೆ. ಮಹಾನ್ ಸಂಶೋಧಕರೂ ಪಂಡಿತರೂ ಆದ ಶ್ರೀಮಾನ್ ಶಂ. ಬಾ. ಜೋಷಿ ಅವರು ತಮ್ಮ 'ಶಿವರಹಸ್ಯ' ಗ್ರಂಥದಲ್ಲಿ “ವೇದಗಳಲ್ಲಿಯೇ-ವೀರಶೈವ ಧರ್ಮದ ಬೇರುಗಳಿವೆ'' ಎಂದು ಪ್ರತಿಪಾದಿಸಿದ್ದಾರೆ.

    ಹೀಗೆ, ವೇದಾಗಮಗಳ ಹಿನ್ನೆಲೆ ಪಡೆದು ಬಂದ ಸನಾತನ ತತ್ವಗಳನ್ನು ಪಂಚಾಚಾರ್ಯರು ಶಿವಾದ್ವೈತ ಸಿದ್ಧಾಂತದಲ್ಲಿ ನೆಲೆಗೊಳಿಸಿದರು-ಎನ್ನುವ ವಿಷಯವು ನಮಗೆ ದೊರೆತ ಭಾಷ್ಯಗಳಿಂದ ಚನ್ನಾಗಿ ವ್ಯಕ್ತವಾಗುತ್ತದೆ.

    ಶಿವಾದ್ವೈತ ಸಿದ್ಧಾಂತ ಪ್ರತಿಪಾದನೆಗಾಗಿಯೇ ಅಚಾರ್ಯರಿಂದ ಭಾಷ್ಯಗಳು ಬರೆಯಲ್ಪಟ್ಟಿವೆ. 'ರೇಣುಕ ಭಾಷ್ಯ' 'ದಾರುಕ ಭಾಷ್ಯ' 'ಪಂಡಿತಾರಾಧ್ಯ ಭಾಷ್ಯ' 'ವಿಶ್ವಾರಾಧ್ಯ ಭಾಷ್ಯ' 'ವೇದ ಭಾಷ್ಯ' 'ನೀಲಕಂಠ ಭಾಷ್ಯ' 'ಶ್ರೀಕರ ಭಾಷ್ಯ' ಶ್ರುತಿ ಸಾರ ಭಾಷ್ಯಗಳು ಇತ್ಯಾದಿ ಭಾಷ್ಯಗಳಲ್ಲಿ ಶಂಕರ, ಮಧ್ವ, ರಾಮಾನುಜ ಭಾಷ್ಯಗಳಿಗಿಂತ ಪೂರ್ವವೇ ವೀರಶೈವ ಭಾಷ್ಯಗಳು ರಚಿಸಲ್ಪಟ್ಟವು-ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ಪರಮತೀಯರ ದಾಳಿಯಿಂದಲೋ, ನಮ್ಮವರ ಅಸಡ್ಡೆ, ಅಜ್ಞಾನದಿಂದಲೋ, ವೀರಶೈವ ಧರ್ಮದ ದೌರ್ಭಾಗ್ಯದಿಂದಲೋ ಮೇಲ್ಕಂಡ ಎಲ್ಲ ಭಾಷ್ಯಗಳೂ ನಮಗೆ ದೊರೆಯುವದಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ.

    ಶ್ರೀ ಜ. ರೇಣುಕ ಭಗವತ್ಪಾದರಿಂದ ಶಿವಾದ್ವೈತ ಸಿದ್ಧಾಂತದ ಉಪದೇಶವನ್ನು ಪಡೆದವರು ಆಗಸ್ತ್ಯ ಮಹರ್ಷಿಗಳು. ಇವರೇ ಪಟ್ಟದ ಶಿಷ್ಯರು. ಗುರು-ಶಿಷ್ಯರ ಸಂವಾದ ರೂಪದಲ್ಲಿರುವ 'ರೇಣುಕ ಗೀತೆ' ಅಥವಾ 'ಸಿದ್ಧಾಂತ ಶಿಖಾಮಣಿ'ಯು ಶಿವಾದ್ವೈತ ಸಿದ್ಧಾಂತದ ಸಾರ ಸಂಗ್ರಹವಾಗಿದೆ. ಇದು 'ಭಗವದ್ಗೀತೆಗೆ ಸರಿ ಸಮವಾದ ಧರ್ಮ ಗ್ರಂಥವಾಗಿದೆ. ಹಿಂದೂ ಧರ್ಮವನ್ನು ಅರಿಯಲು 'ಭಗವದ್ಗೀತೆ' ಹೇಗೆ ಆಧಾರವೋ ಹಾಗೆ, ವೀರಶೈವ ಧರ್ಮದ ಅಂತರಂಗವನ್ನರಿಯಲು ಸಿದ್ಧಾಂತ ಶಿಖಾಮಣಿ ಒಂದೇ ಸಾಕು. ವೀರಶೈವ ದರ್ಶನವನ್ನು ಕಾವ್ಯರೂಪದಲ್ಲಿ ಕಲಾತ್ಮಕವಾಗಿ ವಿವರಿಸುವ ಏಕೈಕ ಕೃತಿ ಸಿದ್ಧಾಂತ ಶಿಖಾಮಣಿ.

    ಅಗಸ್ಯ ಮಹರ್ಷಿಗಳು ಬ್ರಹ್ಮ ಸೂತ್ರಗಳ ಮೇಲೆ ವೀರಶೈವ ಸಿದ್ಧಾಂತ ಪರವಾಗಿ ವೃತ್ತಿಯನ್ನೂ ಬರೆದಿದ್ದಾರೆ. ಈ ಸೂತ್ರ ವೃತ್ತಿಯು ಕುಂಭಕೋಣದಲ್ಲಿ ಮುದ್ರಣವಾಗಿದೆ. ಈ ಸೂತ್ರ ವೃತ್ತಿಯ ವಿಷಯವಾಗಿ ಶ್ರೀಪತಿ ಪಂಡಿತರು ತಾವು ರಚಿಸಿರುವ ಶ್ರೀಕರ ಭಾಷ್ಯದ ಆರಂಭದಲ್ಲಿ 'ಅಗಸ್ತ್ಯಮುನಿ ಚಂದ್ರೇಣ ಕೃತಾಂ ವೈಯಾಸಿಕೀಂ ಶುಭಾಂ | ಸೂತ್ರ ವೃತ್ತಿಂ ಸಮಾಲೋಕ್ಯ, ಕೃತಂ, ಭಾಷ್ಯಂ ಶಿವಂ ಕರಂ' ಎಂದು ಅಪ್ಪಣೆ ಕೊಡಿಸಿದ್ದಾರೆ. ಅಂದರೆ, ಅಗಸ್ತ್ಯ ಮಹರ್ಷಿಗಳ ಬ್ರಹ್ಮ ಸೂತ್ರ ವೃತ್ತಿಯೇ ತಮ್ಮ ಭಾಷ್ಯಕ್ಕೆ ಆಧಾರವೆಂದು ಅವರ ಅಭಿಪ್ರಾಯ, ಬಸವ ಪಂಡಿತಾರಾಧ್ಯರು ಶಿಕ್ಷಾವಲ್ಲೀ - ಭೃಗುವಲ್ಲೀ ಈ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆಯುವ ಪ್ರಾರಂಭದಲ್ಲಿ "ವೇದವ್ಯಾಸಂ ಸೂತ್ರಕಾರಂ ದೂರ್ವಾಸಂ ವೃತ್ತಿ ಕಾರಕಂ | ಭಾಷ್ಯ ಕೃತ್ ಪಂಡಿತಾರಾಧ್ಯಂ ಪ್ರಪದ್ಯೇ ಪಾಶ ಮುಕ್ತಯೇ ||” ಅಂದರೆ ಬ್ರಹ್ಮ ಸೂತ್ರಗಳನ್ನು ರಚಿಸಿದ ವ್ಯಾಸರನ್ನೂ, ಈ ಸೂತ್ರಗಳಿಗೆ ಭಾಷ್ಯವನ್ನು ಬರೆದ ಪಂಡಿತಾರಾಧ್ಯರನ್ನೂ, ವೃತ್ತಿಯನ್ನು ಬರೆದ ದೂರ್ವಾಸ 'ಮಹರ್ಷಿಗಳನ್ನೂ ಪಾಶಬಂಧ ವಿಮೋಚನೆಗಾಗಿ ಆಶ್ರಯಿಸುತ್ತೇನೆಂದು ಮಂಗಲವನ್ನು ಮಾಡಿದ್ದಾರೆ. ದೂರ್ವಾಸ ಮಹರ್ಷಿಗಳು ವೀರಶೈವ ಸಿದ್ಧಾಂತ ಪರವಾಗಿ ಸೂತ್ರ ವೃತ್ತಿಯನ್ನು ರಚಿಸಿದ್ದಲ್ಲದೆ ಉಪನಿಷತ್ತುಗಳಿಗೂ ಭಾಷ್ಯವನ್ನು ಬರೆದಂತೆ ಕಂಡು ಬರುತ್ತದೆ. ಉಪಮನ್ಯು ಶಿವಾಚಾರ್ಯರು, ಶಿವನ ಡಮರುಗದಿಂದ ಉದಿಸಿದ ಅ. ಇ. ಎಣ್ ಮೊದಲಾದ ಹದಿನಾಲ್ಕು ಸೂತ್ರಗಳ ಮೇಲೆ ಶಿವಾದ್ವೈತ ಸಿದ್ಧಾಂತ ಪರವಾದ ವೃತ್ತಿಯನ್ನು ರಚಿಸಿದ್ದಾರೆ. ಉಪಮನ್ಯು ಶಿವಾಚಾರ್ಯರು "ರಚಿಸಿದ ಶಿವಾದ್ವೈತ ವೃತ್ತಿಗೆ ಶ್ರೀ ನಂದಿಕೇಶ್ವರ ಶಿವಾಚಾರ್ಯರು ಟೀಕೆಯನ್ನು ಬರೆದಿದ್ದಾರೆ. ಈ ಗ್ರಂಥವು 'ನಂದಿಕೇಶ್ವರ ಕಾರಿಕಾ' ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕಾಳಹಸ್ತಿ ಶಿವಾಚಾರ್ಯರು ದಶೋಪನಿಷತ್ತುಗಳ ಮೇಲೆ ಲಿಂಗಧಾರಣ ಪರವಾದ ಭಾಷ್ಯವನ್ನು ರಚಿಸಿದ್ದಾರೆ.

    ಶ್ರೀ ವೆಂಕಟಲಕ್ಷ್ಮಣರಾವ್ ಎಂ.ಎ., ಅವರು ರಚಿಸಿದ 'ಹಿಂದೂದೇಶ ಕಥಾ ಸಂಗ್ರಹ' 'ಹಿಂದೂ ಮಹಾಯುಗ' ಎನ್ನುವ ಗ್ರಂಥದ ೮೨ ನೇ ಪುಟದಲ್ಲಿ ಶಂಕರ, ರಾಮಾನುಜ, ಮಧ್ವರು ರಚಿಸಿದ ಭಾಷ್ಯಗಳಿಗೆ ಪೂರ್ವದಲ್ಲಿ ನೀಲಕಂಠ ಶಿವಾಚಾರ್ಯರು ಹಾಗೂ ವೀರಶೈವ ಪೂರ್ವಾಚಾರರು ಭಾಷ್ಯವನ್ನು ರಚಿಸಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಚತುರ್ವೇದ ಪಾರಂಗತನಾದ ಶಿವಪೂಜಾ ಶಿವಯೋಗೀಂದ್ರರು ಪ್ರಾಚೀನ ವಿದ್ವಾಂಸರು, ತನ್ನ 'ಶ್ರುತಿಸಾರ ಭಾಷ್ಯಂ' ಎಂಬ ಗ್ರಂಥದಲ್ಲಿ ನಾಲ್ಕು ವೇದಗಳಲ್ಲಿನ ೭೫ ಮಹಾಮಂತ್ರಗಳಿಗೆ ವೀರಶೈವ ಸಿದ್ಧಾಂತದ ಪರವಾಗಿ ವ್ಯಾಖ್ಯಾನವನ್ನು ಬರೆದಿದ್ದಾರೆ. ವೀರಶೈವವು ವೇದ ಪ್ರತಿಪಾದಿತವೆಂದೂ ಸಿದ್ಧಮಾಡಿದ್ದಾರೆ. ನಂದಿಕೇಶ್ವರ ಶಿವಾಚಾರ್ಯರು ತಮ್ಮ ಲಿಂಗಧಾರಣ ಚಂದ್ರಿಕೆ'ಯಲ್ಲಿ ವೇದ, ಆಗಮ, ಪುರಾಣ ಸ್ಮೃತಿಗಳಿಂದ ಆಧಾರ ಪಡೆದು ಲಿಂಗಧಾರಣದ ಪ್ರಾಚೀನತೆ ಹಾಗೂ ಅದರ ಹಿರಿಮೆ-ಗರಿಮೆಗಳನ್ನು ಪ್ರತಿಪಾದಿಸುತ್ತಾರೆ. ಹರದತ್ತಾಚಾರನ “ಚತುರ್ವೇದ ಸಾರ ಸಂಗ್ರಹ” 'ವೀರಶೈವಾನಂದ ಚಂದ್ರಿಕೆ' ಇತ್ಯಾದಿ ಗ್ರಂಥಗಳಲ್ಲೂ ವೀರಶೈವದ ಪ್ರಾಚೀನ ಹಿನ್ನೆಲೆಯನ್ನು ಕಾಣುತ್ತೇವೆ. ಗುಬ್ಬಿ ಮಲ್ಲಣಾರ್ಯನ "ವಾತುಲಾಗಮ" ವೀರಶೈವ ವ್ಯಾಖ್ಯಾನವೂ, ವೃಷಭ ಪಂಡಿತನ 'ಮಹಾನಾರಾಯಣೋಪನಿಷತ್' ಭಾಷ್ಯವೂ, ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಅಲ್ಲದೆ ಸಿದ್ಧಾಂತ ಶಿಖೋಪನಿಷತ್, ವೀರಲೈಂಗ್ಯೋಪನಿಷತ್, ಲಿಂಗಧಾರಣೋಪನಿಷತ್ತುಗಳಲ್ಲಿಯೂ ವೀರಶೈವ ಸಿದ್ಧಾಂತವು ಪ್ರತಿ ಪಾದಿತವಾಗಿದೆ.

    ಅಸಂಖ್ಯಾತ ಋಷಿಗಳು ವೀರಶೈವ ದೀಕ್ಷೆಯನ್ನು ಪಡೆದು ಮೋಕ್ಷಗಾಮಿಗಳಾದರು ಎಂದು ವ್ಯಾಸರು ತಮ್ಮ ಪುರಾಣಗಳಲ್ಲಿ ಹೇಳುತ್ತಾರೆ. ವ್ಯಾಸ - ಮಹರ್ಷಿಗಳು ಕಾಶೀ ಜಗದ್ಗುರು ಪೀಠಾಧಿಪತಿಗಳಾಗಿದ್ದ ಘಂಟಾಕರ್ಣ ಶಿವಾಚಾರ್ಯರಿಂದಲೂ ಧರ್ಮೋಪದೇಶವನ್ನು ಹೊಂದಿದ ವಿಷಯ ಕಾಶೀ ಖಂಡದಲ್ಲಿ ವ್ಯಾಸ ಕಾಶಿಯಲ್ಲಿರುವ ಶಿಲಾ ವಿಗ್ರಹಗಳಿಂದ ಸ್ಪಷ್ಟವಾಗುತ್ತದೆ. ಶಂಕರಾಚಾರ್ಯರು ಶ್ರೀ ರೇಣುಕ ಭಗವತ್ಪಾದರಿಂದ ಚಂದ್ರ ಮೌಳೀಶ್ವರ ಲಿಂಗವನ್ನು ಪಡೆದು ಹಿಮಾಚಲಕ್ಕೆ ಹೋಗಿ ನಿಶ್ಚಲ ಮನಸ್ಕರಾಗಿ, ಶಿವಾರ್ಚನೆ ಮಾಡಿ ಶಿವ ಸಾಯುಜ್ಯವನ್ನು ಪಡೆದ ವಿಷಯ 'ಗುರುವಂಶ ಕಾವ್ಯ', 'ನಾದಚಿಂತಾಮಣಿ', 'ಶಂಕರ ವಿಜಯ'ದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಅಲ್ಲದೆ ಶೃಂಗೇರಿ ಮತ್ತು ರಂಭಾಪುರಿಯ ನಡುವಿನ ಪ್ರದೇಶದಲ್ಲಿ ಶ್ರೀ ರೇಣುಕ ಭಗವತ್ಪಾದರು ಶ್ರೀ ಶಂಕರಾಚಾರರಿಗೆ ಚಂದ್ರಮೌಳೀಶ್ವರ ಲಿಂಗವನ್ನಿತ್ತು ತತ್ತ್ವೋಪದೇಶ ಮಾಡಿದ ಪುಣ್ಯಸ್ಥಾನವೆಂದು ಒಂದು ದೇವಾಲಯದಲ್ಲಿ ಶಾಸನವಿದೆಯೆಂದೂ ಗುರು - ಶಿಷ್ಯ ಭಾವವನ್ನು ಸೂಚಿಸುವ ಎರಡು ಶಿಲಾಮೂರ್ತಿಗಳಿವೆ ಎಂದೂ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ವಿದ್ಯಾರಣ್ಯ ಸ್ವಾಮಿಗಳೂ ರೇಣುಕಾಚಾರ್ಯ ಪರಂಪರೆಯ ಗುರುಗಳಿಂದ ಒಂದು ಶಿವಲಿಂಗವನ್ನು ಪಡೆದರೆಂದು 'ಕೆಳದಿ ನೃಪವಿಜಯ'ದಲ್ಲಿ ಹೇಳಿದೆ. ಹೀಗೆ ಪಂಚಾಚಾರ್ಯರಿಂದ ಪ್ರವರ್ತಕವಾದ ಈ ವೀರಶೈವ ಸಿದ್ಧಾಂತವನ್ನು ಅನೇಕ ಅನ್ಯಮತಾಚಾರ್ಯರೂ ಋಷಿಗಳೂ ಶಿವಶರಣರೂ ಅನುಷ್ಠಾನ ಮಾಡಿ ಧನ್ಯರಾಗಿದ್ದಾರೆ.

    ವೀರಶೈವ ತತ್ವದ ಹಿನ್ನೆಲೆಯನ್ನು ಇನ್ನೂ ವಿವಿಧ ಆಧಾರಗಳಿಂದ ಸ್ಪಷ್ಟಪಡಿಸಬಹುದು. ಉದಾಹರಣೆಗಾಗಿ

ಕಿರಣಾಗಮದಲ್ಲಿ
“ಸ್ಥೂಲಾಂಗೇ ತ್ವಿಷ್ಟಲಿಂಗಂತು ಯೋ ನಧಾರಯತೇ ದ್ವಿಜಃ |”

ವಾತುಲಾಗಮದಲ್ಲಿ
“ಯಃ ಪೂಜಯತಿ ಲಿಂಗಾಂಗ ಧ್ಯಾನ್ಯಾಸಕ್ತ ಧಿಯಂ ದ್ವಿಜಂ ।
ಪುನರ್ಭವೋ ನತಸ್ಯಾಪ್ತಿ ಸತ್ಯಂ ಸತ್ಯಂ ಮಯೋದಿತಂ ||"

ಮನುಸ್ಮೃತಿಯಲ್ಲಿ
“ಶಿವಧ್ಯಾನ ರತೋ ಭೂತ್ವಾ ಶಿವಲಿಂಗಾಂಗ ಸಂಯುತಃ !”

ಗೌತಮ ಸ್ಮೃತಿಯಲ್ಲಿ
“ಮುಖೇ ಮಂತ್ರೋಹೃದಿ ಧ್ಯಾನಂ ಮಸ್ತಕೇ ಲಿಂಗಧಾರಣಂ!”

ಪದ್ಮ ಪುರಾಣದಲ್ಲಿ
“ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿಚ "

ಲಿಂಗಪುರಾಣದಲ್ಲಿ
“ಧಾರಯಂತಿ ಅಲಕಾಗ್ರೇಷು ಶಿವಲಿಂಗಮಹರ್ನಿಶಂ |

ಸ್ಕಾಂದ ಪುರಾಣದಲ್ಲಿ
“ಬ್ರಹ್ಮ ವಿಷ್ಣ್ವಾದಯೋ ದೇವಾ ಮುನಯೋ ಗೌತಮಾದಯಃ |
ಧಾರಯಂತಿ ಸದಾಲಿಂಗಮುತ್ತ ಮಾಂಗೇ ವಿಶೇಷತಃ ||”

ಮಹಾಭಾರತದಲ್ಲಿ
“ಕಿಮಾಹ್ರ ಭಕರತ ಶ್ರೇಷ್ಠಾ ವಿಪ್ರಾಃ ಪಾತ್ರಂ ಸನಾತನಂ |
ಲಿಂಗಿನಂ ಬ್ರಾಹ್ಮಣಂ ಚೈವ ಬ್ರಾಹ್ಮಣಂ ಚಾಪ್ಯಲಿಂಗಿನಂ ||"

ಇತ್ಯಾದಿ

    ವೀರಶೈವ ಸಿದ್ಧಾಂತವನ್ನು ವೇದಾಗಮಗಳ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ದರ್ಶನ ಗ್ರಂಥಗಳಲ್ಲಿ ಶ್ರೀಕರ ಭಾಷ್ಯ, ಕ್ರಿಯಾಸಾರ, ಶಿವಾದ್ವೈತ ಮಂಜರೀ, ಸಿದ್ಧಾಂತ ಶಿಖಾಮಣಿ, ಅನುಭವ ಸೂತ್ರಂ, 'ಲಿಂಗಧಾರಣ ಚಂದ್ರಿಕೆ' 'ಶಿವಾಧಿಕ್ಯ ಶಿಖಾಮಣಿ', 'ವೇದಾಂತ ಸಾರ' ವೀರಶೈವ ಚಿಂತಾಮಣಿ, 'ವೀರಶೈವಾನಂದ ಚಂದ್ರಿಕೆ' 'ಶಿವಾದ್ವೈತ ಪರಿಭಾಷಾ' ಕೇನೋಪನಿಷತ್, ಸಿದ್ಧಾಂತ ಶಿಖೋಪನಿಷತ್ (ಶಾಂಕರೀ ವ್ಯಾಖ್ಯಾ), ಕೈವಲ್ಯೋಪನಿಷತ್ (ಸದಾಶಿವಭಾಷ್ಯ), ಶೃತಿಸಾರ ಭಾಷ್ಯ ಇವುಗಳು ಪ್ರಸಿದ್ಧ ಹಾಗೂ ಪ್ರಮಾಣ ಗ್ರಂಥಗಳಾಗಿವೆ. ಈ ಎಲ್ಲ ಧಾರ್ಮಿಕ ಗ್ರಂಥಗಳನ್ನು ಅಭ್ಯಸಿಸಿದಾಗ ವೀರಶೈವ ಸಿದ್ಧಾಂತದ-ನೆಲೆ-ಹಿನ್ನೆಲೆ ಹಾಗೂ ಅದರ ಬೆಲೆ ಅರಿವಾಗುತ್ತದೆ. ಈ ದಿಶೆಯಲ್ಲಿ ಇನ್ನೂ ಪ್ರಾಮಾಣಿಕ ವಿದ್ವಾಂಸರು ಸಾಕಷ್ಟು ಸಂಶೋಧನೆ ನಡೆಸಬೇಕಾಗಿದೆ.

ಮೂಲ: ಪಂ. ವೇ, ಷಣ್ಮುಖಯ್ಯ ಅಕ್ಕೂರಮಠ,

No comments:

Post a Comment

If you have any doubts. please let me know...