March 9, 2021

ವಿಧಿಲಿಖಿತ

ವಿಧಿಲಿಖಿತವನ್ನು ಯಾರೂ ತಪ್ಪಿಸಲಾರರು .ನಿಮ್ಮ ಭಕ್ತಿ , ಧ್ಯಾನ ,ಜಪ ತಪ ನಿಮ್ಮನ್ನು ಸ್ವಲ್ಪ ಮಟ್ಟಿಗೆ  ಕಾಪಾಡಬಹುದಾಗಿರುತ್ತೆ. ಇದನ್ನು ಒಂದು ಉದಾಹರಣೆ ಮೂಲಕ ತಿಳಿಸುತ್ತೇನೆ. 

 ಒಂದು ಊರಿನಲ್ಲಿ ಒಬ್ಬ ಬಡವನಾದ ಭಕ್ತನಿರುತ್ತಾನೆ. ಅವನು ಪ್ರತಿನಿತ್ಯ ಶಿವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿರುತ್ತಾನೆ .
ಆತ ಕಡುಬಡವನಾಗಿದ್ದರೂ ಸಹ ,ಅವನಿಗೆ ಒಬ್ಬ ಶ್ರೀಮಂತ ಸ್ನೇಹಿತನಿರುತ್ತಾನೆ. ಒಂದು ದಿನ ದೇವಾಲಯಕ್ಕೆ ಹೋಗುವಾಗ ಎದುರಿಗೆ ಅವನ ಸಿರಿವಂತ ಸ್ನೇಹಿತ ಸಿಗುತ್ತಾನೆ. ಅವನನ್ನು ದೇವಸ್ಥಾನಕ್ಕೆ ಬಾ ಎಂದು ಕರೆದಾಗ, ಆತ ನಾನು  ಬರುವುದಿಲ್ಲ , ದೇವರು ಇಲ್ಲವೆಂದು ಹೇಳುತ್ತಾ ನೀನು ಹೋಗು ,ನಾನು ಹೊರಗೆ ನಿಲ್ಲುತ್ತೇನೆಂದು ಹೇಳುತ್ತಾನೆ. ಆಗ ಭಕ್ತನು  ಒಬ್ಬನೇ ದೇವಸ್ಥಾನಕ್ಕೆ ಹೋಗಿ , ದೇವರಲ್ಲಿ ಪ್ರಾರ್ಥಿಸುತ್ತಾ  ನನ್ನನ್ನು ಕಾಪಾಡು ಎಂದು ಕೇಳಿಕೊಂಡು ಬರುತ್ತಾನೆ. ಮುಂದೆ ಹೋಗುವಾಗ ಆ ಬಡವನ ಕಾಲಿಗೆ ಮುಳ್ಳು ಚುಚ್ಚಿ , ವಿಪರೀತ ರಕ್ತ ಬರುತ್ತೆ. ಮತ್ತೊಬ್ಬ ಸ್ನೇಹಿತ ನಗುತ್ತಾ ನಿನ್ನ ದೇವರು ಇದೇನಾ ಕೊಟ್ಟಿದ್ದು ಎಂದು ಕಿಚಾಯಿಸುತ್ತಾನೆ. ಮುಂದೆ ಹೋಗುವಾಗ ಶ್ರೀಮಂತ ಸ್ನೇಹಿತನಿಗೆ ಒಂದು ಬೆಳ್ಳಿ ನಾಣ್ಯ ಸಿಗುತ್ತದೆ.ಅದನ್ನು ಕಂಡು ಕುಣಿಯುತ್ತ ಹೇಳುತ್ತಾನೆ, ನೋಡು ದೇವರ ದರ್ಶನ ಮಾಡಿ ಬಂದ ನಿನಗೆ ಮುಳ್ಳು ಚುಚ್ಚಿತು , ದೇವರಿಗೆ ನಮಸ್ಕಾರವನ್ನೂ ಮಾಡದ ನನಗೆ ಬೆಳ್ಳಿ ನಾಣ್ಯ ಸಿಕ್ಕಿತು..ಈಗ ಹೇಳು ,ದೇವರು ಎಲ್ಲಿದ್ದಾನೆ? ಅವನಿಗೇಕೆ ಪೂಜೆಮಾಡಬೇಕು?ನೀನೂ ನನ್ನ ಮಾತು ಕೇಳು , ಇನ್ನು ಮುಂದೆ ದೇವರನ್ನು  ಪೂಜಿಸುವುದು ಬಿಟ್ಟು ಬಿಡು ಎಂದು ಹೇಳುತ್ತಾನೆ. ಇದನ್ನು ಕಂಡ ಶಿವನು ಸನ್ಯಾಸಿಯಾಗಿ ಇವರೆಡೆಗೆ ಬರುತ್ತಾನೆ. ಸನ್ಯಾಸಿಯನ್ನು ಕಂಡ ಇವರು, ದೇವರ ಇರುವಿಕೆಯ ಬಗ್ಗೆ ಇವರಲ್ಲಿ ಕೇಳೋಣ ಎಂದುಕೊಂಡು ಸಾಧುವಿಗೆ ನಮಸ್ಕರಿಸುತ್ತಾರೆ. "ಗುರುಗಳೇ, ನಾನು ಈ ದಿನ ಪೂಜೆ ಸಲ್ಲಿಸಿ ನನ್ನನ್ನು ಕಾಪಾಡು ಎಂದು ಶಿವನಲ್ಲಿ ಬೇಡಿಕೊಂಡೆ. ನನ್ನ ಕಾಲಿಗೆ ಮುಳ್ಳು ಚುಚ್ಚಿತು. ದೇವರನ್ನೇ ನಂಬದ ನನ್ನ ಗೆಳೆಯನಿಗೆ ಇದೇ ದಿನ  ಬೆಳ್ಳಿ ನಾಣ್ಯ ಸಿಕ್ಕಿತು..ಇದೇಕೆ ಹೀಗೆ, ಇದ್ಯಾವ ನ್ಯಾಯ ? ನಿಜವಾಗಿಯೂ ದೇವರಿದ್ದಾನೆಯೇ ತಿಳಿಸಿ "ಎಂದು ಬೇಡುತ್ತಾನೆ. ಸನ್ಯಾಸಿಯು ನಗುತ್ತಾ, "ನೀನೇಳುವುದು ಸತ್ಯ , ವಿಧಿಲಿಖಿತವನ್ನು ಯಾರೂ ಅಳಿಸಲಾರರು. ಈ ದಿನ ವಿಧಿಲಿಖಿತದ ಪ್ರಕಾರ ನಿನಗೆ ಸರ್ಪ ಕಡಿದು ನೀನು ಸಾಯಬೇಕಾಗಿತ್ತು, ನೀನು ಶಿವನನ್ನು ಬೇಡಿ ಕಾಪಾಡು ಎಂದಿದ್ದಕ್ಕೆ ನಿನ್ನನ್ನು ಸರ್ಪದಿಂದ ಕಾಪಾಡಿ ವಿಧಿಲಿಖಿತ ತಪ್ಪಿಸಲಾಗದೆ ಒಂದು ಮುಳ್ಳನ್ನು ಚುಚ್ಚಿ ಅಷ್ಟಕ್ಕೇ ಕಂಟಕವನ್ನು ಮುಗಿಸಲಾಗಿದೆ. ಇನ್ನು ನಿನ್ನ ಸ್ನೇಹಿತನಿಗೆ  ಪೂರ್ವ ಜನ್ಮದ ಪುಣ್ಯಫಲದಿಂದ ಅವನು ದೇವರನ್ನು ನಿಂದಿಸಿದರೂ ಕೆಡಕಾಗುತ್ತಿರಲಿಲ್ಲ. ಈ ದಿನ ಅವನಿಗೆ ಏಳು ಕೊಪ್ಪರಿಗೆ ನಗ ನಾಣ್ಯ ಸಿಕ್ಕಬೇಕಾಗಿತ್ತು. ಅವನ ದುರಹಂಕಾರ, ಸಾಧು ಸಂತರನ್ನು ನಿಂದಿಸಿದ ಪಾಪದಿಂದಾಗಿ ಮತ್ತು ದೈವವನ್ನು ನಿಂದಿಸಿದ್ದಕ್ಕೆ ಏಳು ಕೊಪ್ಪರಿಗೆ  ನಗನಾಣ್ಯ ದೊರೆವ ಯೋಗ  ನಾಶವಾಗಿ ,ವಿಧಿಲಿಖಿತ ತಪ್ಪಿಸಲಾಗದೆ ಒಂದೇ ಒಂದು ಬೆಳ್ಳಿನಾಣ್ಯ ಮಾತ್ರ ನೀಡಲಾಯಿತು" ಎಂದು ಹೇಳಿ ಸನ್ಯಾಸಿ ಅದೃಶ್ಯರಾದರು.

 ಹೀಗೆ, ವಿಧಿಲಿಖಿತವನ್ನು ತಪ್ಪಿಸಲಾಗದು. ಪ್ರತಿಯೊಂದು ಘಟನೆಯನ್ನೂ "ಅವನಿಚ್ಛೆ" ಎಂದು ತಿಳಿದು ದೇವರು, ಮತ್ತು ಗುರುಗಳಲ್ಲಿ ಭಕ್ತಿ ಇಟ್ಟಿರಬೇಕು.

  ಸದ್ವಿಚಾರ ಸಂಗ್ರಹ

No comments:

Post a Comment

If you have any doubts. please let me know...