ಪಾಂಡಿತ್ಯಕ್ಕೆ ಸಿಲುಕಿ ನಲುಗುತ್ತಿರುವ ಶ್ರುತಿಸ್ಮೃತಿ ಶ್ಲೋಕಗಳು : ಭಾಗ -೦2
ಹಿಂದಿನ ಸಂಚಿಕೆಯಲ್ಲಿ "ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ | ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಮ್ || ೦೧ || "
ಎಂಬ ಶ್ಲೋಕವೇ ಸರ್ವರೀತಿಯಲ್ಲೂ ಸರಿಯಾದದ್ದು ಎಂಬುವದನ್ನು ಶಾಸ್ತ್ರರೀತ್ಯಾ ನಿರೂಪಿಸಿದ್ದಾಯಿತು.ಇನ್ನು ಮುಂದೆ ಈ ಕೆಳಗಿನ ಶ್ಲೋಕವನ್ನು ಮತ್ತು ಅದರ ಭಾವಾರ್ಥವನ್ನು ಪರಾಮರ್ಶಿಸೋಣ.
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||೦೨ ||
ಸಂಶಯ :
ಇಲ್ಲಿ ಗಂಗೇ ಆದಮೇಲೆ "ಚ" ಬಂದಿದೆ... ಒಮ್ಮೆ ಚಕಾರ ಬಂದ ಮೇಲೆ ಮತ್ತೆ ಯಾಕೆ ಯಮುನೇ ಆದಮೇಲೆ "ಚೈವ" ಬರಬೇಕು.... ನದಿಯ ಹೆಸರು ಮರೆತ ಯಾರೋ ಪಂಡಿತರು "ಚೈವ" ಸೇರಿಸಿದರು... ಮತ್ತೇ ಮುಂದೆ ಅದೇ ಪ್ರಾಕ್ಟೀಸ್ ಆಯಿತು ತಪ್ಪು ಶ್ಲೋಕವಾಯಿತು... *ಅದು "ಚೈವ" ಅಲ್ಲ "ಕೃಷ್ಣಾ" ನದಿಯ ಹೆಸರು ಬಿಟ್ಟಿದೆ ಸೇರಿಸಿ ಹೇಳಿಕೊಳ್ಳಿ ಆಗ ಶ್ಲೋಕ ಸರಿಯಾಗುತ್ತದೆ . ಇಂಥ ಅಭಿಪ್ರಾಯವನ್ನು ಹೊರಹಾಕಿದ ಪಂಡಿತರ ಪಾಂಡಿತ್ಯಕ್ಕೆ ನಗಬೇಕೋ ಅಳಬೇಕೋ ಗೊತ್ತಿಲ್ಲ.
ಈ ಹಿಂದೆ ಹೇಳಿದಂತೆ ಹೇಳಿದಂತೆ ಇಲ್ಲೂ ಈ ಪಂಡಿತರು ತಮ್ಮ ಸಂಸ್ಕೃತ ಪಾಂಡಿತ್ಯದ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಮನುಷ್ಯಕೃತವಾದ ಸಂಸ್ಕೃತ ವ್ಯಾಕರಣಕ್ಕೂ ಅಪೌರುಷೇಯವಾದ ಶ್ರುತಿಸ್ಮೃತಿಗಳ ವ್ಯಾಕರಣಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಈ ಆಧುನಿಕ ಪಂಡಿತರು ತಮ್ಮ ಸಂಸ್ಕೃತ ವ್ಯಾಕರಣದ ವ್ಯವಸಾಯವನ್ನು ಮುಂದಿಟ್ಟುಕೊಂಡು ಶ್ರುತಿಸ್ಮೃತಿಗಳ ಮಂತ್ರಶ್ಲೋಕಗಳ ಅರ್ಥವನ್ನೂ ತಿದ್ದುವ ಸಾಹಸವನ್ನು ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ತೈತ್ತಿರೀಯ ಸಂಹಿತೆಯಲ್ಲಿ ರುದ್ರಾಧ್ಯಾಯದ ಚಮಕ ಭಾಗದಲ್ಲಿ ಸುಮಾರು ಹನ್ನೊಂದು ಅನುವಾಕಗಳಿದ್ದು ಒಟ್ಟಾರೆ ಒಂದು ಸಾವಿರಕ್ಕೂ ಹೆಚ್ಚು "ಚ" ಕಾರಗಳಿವೆ ಎಂಬುವದು ಈ ಪಂಡಿತರ ಗಮನಕ್ಕೆ ಬರದೇ ಇರುವದು ನಮ್ಮ ಪುಣ್ಯ.
ಮೊದಲಿಗೆ ಈ ಸೂತ್ರವನ್ನು ಪರಿಶೀಲಿಸೋಣಾ.
ಯಾಸ್ಕರ ನಿರುಕ್ತ : ಅಧ್ಯಾಯ -೦೧ ಖಂಡಃ -೦೪
ಅಥಯಸ್ಯಾಗಮಾದರ್ಥ ಪೃಥಕ್ತ್ವಮಹ ವಿಜ್ಞಾಯತೇ ನ ತ್ವೌದ್ದೇಶಿಕಮಿವೆ ವಿಗ್ರಹೇಣ ಪೃಥಕ್ತ್ವಾತ್ಸ ಕರ್ಮೋಪಸಂಗ್ರಹಃ ||
ನಿರ್ವಚನ :
ಇಲ್ಲಿಂದ ಮುಂದೆ ಕರ್ಮೋಪಸಂಗ್ರಹ ಅವ್ಯಯ ಅಥವಾ ಸಂಯೋಜಕ ಅವ್ಯಯಗಳ ಲಕ್ಷಣ ಮತ್ತು ನಿರೂಪಣೆ.
ಸಂಯೋಜಕ ಅಥವಾ ಸಮುಚ್ಚಯಗಳನ್ನು ವಾಕ್ಯದಲ್ಲಿ ಉಪಯೋಗಿಸಿದರೇ , ಅವುಗಳು ತಿಳಿಸುವ ಅರ್ಥವೇನೆಂಬುದನ್ನು ವಿಮರ್ಶಿಸೋಣ.
ಉದಾ:
ದೇವದತ್ತಯಜ್ಞದತ್ತೌ ಪಚೇತೇ = ದೇವದತ್ತನೂ ಯಜ್ಞದತ್ತನೂ ಅಡುಗೆಯನ್ನು ಮಾಡುತ್ತಾರೆ.
ದೇವದತ್ತಯಜ್ಞದತ್ತೌ - ದೇವದತ್ತಶ್ಚ ಯಜ್ಞದತ್ತಶ್ಚ :- ಇಲ್ಲಿ ಮೊದಲನೆಯ ಪ್ರಯೋಗದಲ್ಲಿ ಸಮುಚ್ಚಯಾರ್ಥ ಕೊಡುವ ಅವ್ಯಯವು ಅಧ್ಯಾಹೃತವಾಗಿದೆ.ಎರಡನೆಯ ಪ್ರಯೋಗದಲ್ಲಿ "ಚ" ಎಂಬ ಸಮುಚ್ಚಯಾರ್ಥಕ ಪದವು ಉಪಯೋಗಿಸಲ್ಪಟ್ಟಿದೆ.ಈ ಎರಡು ಪ್ರಯೋಗಗಳಲ್ಲಿಯೂ ,ದೇವದತ್ತ ಮತ್ತು ಯಜ್ಞದತ್ತರೆಂಬ ಎರಡು ಪುರುಷರು ಒಟ್ಟಿಗೇ ಸೇರಿ ಪಚನ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರೂ ,ಇವರಿಬ್ಬರೂ ಪ್ರತ್ಯೇಕವಾಗಿ ಕಾರ್ಯನಿರತರಾಗಿದ್ದಾರೆ ಎಂಬ ಅಭಿಪ್ರಾಯವು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.ಸ್ವರೂಪತಃ ಇಬ್ಬರೂ ಪ್ರತ್ಯೇಕವಾಗಿದ್ದರೂ ಏಕಕರ್ಮದಲ್ಲಿ ಪ್ರಸಕ್ತರಾಗಿದ್ದಾರೆ.ವಾಕ್ಯವನ್ನು ಉಚ್ಚರಿಸಿದವನ ಮನಸ್ಸಿನಲ್ಲಿ ಕಾರ್ಯನಿರತರಾದವರ ಪ್ರತ್ಯೇಕತೆಯನ್ನು ತಿಳಿಸಬೇಕೆಂಬ ಉದ್ದೇಶವಿಲ್ಲದಿದ್ದರೂ ,ಸಮುಚ್ಚಯಾರ್ಥವನ್ನು ಉಪಯೋಗಿಸಿದ್ದರಿಂದ ಪ್ರತ್ಯೇಕತೆಯನ್ನು ಗ್ರಹಿಸಿಯೇ ತೀರುತ್ತೇವೆ.
ವಕ್ತೃವಿನ ಉದ್ದೇಶವಿಲ್ಲದಿದ್ದರೂ , ಕ್ರಿಯಾಪದದಿಂದ ಸೂಚಿತವಾದ ಕಾರ್ಯದಲ್ಲಿ ನಿರತರಾದವರ ಪ್ರತ್ಯೇಕತೆ ತಾನಾಗಿಯೇ ತಿಳಿಯುತ್ತದೋ , ಆ ಪದಕ್ಕೆ ಕರ್ಮೋಪಸಂಗ್ರಹ , ಸಮುಚ್ಚಯ , ಸಂಯೋಜಕ ,ಅವ್ಯಯ ವೆಂಬುದಾಗಿ ಕರೆಯುತ್ತಾರೆ.
ಸೂತ್ರ :
ಚೇತಿ ಸಮುಚ್ಚಯಾರ್ಥ ಉಭಾಭ್ಯಾಂ ಸಂಪ್ರಯುಜ್ಯತೇ " ಅಹಂ ಚ ತ್ವಂಚ ವೃತ್ರಹನ್ " "ಗಂಗೇ ಚ ಯಮುನೇ ಚ " ಇತಿ ||
ಸೂತ್ರಾರ್ಥ :
ವೃತ್ರಹನ್ = ಎಲೈ ವೃತ್ರ ಸಂಹಾರಕನೇ
ಅಹಂ ಚ = ನಾನೂ
ತ್ವಂ ಚ = ನೀನೂ ಇಬ್ಬರೂ ಸೇರಿ ಎಂಬಂತೆ
ಗಂಗೇಚ = ಗಂಗೆಯೂ
ಯಮುನೇ ಚ = ಯಮುನೆಯೂ ......
ಜಲೇಽಸ್ಮಿನ್ = ಈ (ಕಲಶದ) ನೀರಿನಲ್ಲಿ
ಸನ್ನಿಧಿಂ ಕುರು = ಬಂದು ಸೇರುವವರಾಗಲೀ ||
ಸತ್ಯಪ್ರಕಾಶ
No comments:
Post a Comment
If you have any doubts. please let me know...