March 31, 2021

ಅಪ್ರದಕ್ಷಿಣ ಮತ್ತು ಪ್ರಾಚೀನಾವೀತಿ



ಒಮ್ಮೆ ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳು ಅವುಗಳ ಸೃಷ್ಟಿಕರ್ತನಾದ ಪ್ರಜಾಪತಿಯ ಬಳಿ ಹೋಗಿ ಕೇಳಿಕೊಳ್ಳುತ್ತವೆ. ನೀನು ಸಕಲ ಸೃಷ್ಟಿಗೆ ಮೂಲ, ಆದರೆ ನಮಗಿನ್ನೂ ಜೀವಿಸುವ ಮಾರ್ಗದರ್ಶನ ದೊರಕಿಲ್ಲ ನಮ್ಮ ನಾವು ಜೀವಿಸುವ ಕ್ರಮವನ್ನು ತಿಳಿಸಿಕೊಡು ಎಂದು ಪ್ರಾರ್ಥಿಸುತ್ತಾರೆ. ಆ ಸಂದರ್ಭದಲ್ಲಿ ದೇವತೆಗಳು, ಪಿತೃಗಳು, ಮಾನವರು ಮತ್ತು ಉಳಿದ ಪ್ರಾಣಿಗಳೆಲ್ಲವೂ ಇದ್ದವು. ಆಗ ದೇವತೆಗಳು ತಮ್ಮ ಮೊಣಕಾಲನ್ನು ನೆಲಕ್ಕೆ ಊರಿ ಪ್ರಜಾಪತಿಯ ಸಮೀಪಕ್ಕೆ ಸಾಗುತ್ತಾರೆ. ಆಗ ಪ್ರಜಾಪತಿ ದೇವತೆಗಳಿಗೆ ಹೇಳುತ್ತಾನೆ. “ನಿಮಗೆ ಯಜ್ಞವೇ ಆಹಾರ, ಅಮೃತವೇ ನಿಮಗೆ ದೊರೆತ ರಸಯುಕ್ತ ಆಹಾರ, ಸೂರ್ಯನೇ ತೇಜಸ್ಸು ಎನ್ನುತ್ತಾನೆ. ಇದನ್ನೇ ಶತಪಥ ಬ್ರಾಹ್ಮಣದಲ್ಲಿ “ಬ್ರವೀದ್ಯಜ್ಞೋವೋನ್ನಮಮೃತತ್ವಂ ವ ಊಗ್ರ್ವಃ ಸೂರ್ಯೋ ವಾ ಜ್ಯೋತಿರಿತಿ” ಎಂದು ಹೇಳಲಾಗಿದೆ. ಇದು ದೇವತೆಗಳ ಕುರಿತಾದರೆ, ಇನ್ನು. . . .  

ಪಿತೃಗಳು ಯಜ್ಞೋಪವೀತವನ್ನು ಬಲದ ಭುಜದಮೇಲೆ ಧರಿಸಿ ಪ್ರಾಚೀನಾವೀತಿಯಂತೆ ತಮ್ಮ ಎಡದ ಮೊಣಕಾಲನ್ನು ನೆಲದ ಮೇಲೆ ಊರಿ ಪ್ರಜಾಪತಿಯ ಸಮೀಪಕ್ಕೆ ತೆರಳುತ್ತಾರೆ. ತಮ್ಮ ಜೀವನದ ಕ್ರಮವನ್ನು, ಜೀವಿಸುವಿಕೆಯನ್ನು ಕೇಳುತ್ತಾರೆ. ಆಗ ಅವರಿಗೆ ಪ್ರಜಾಪತಿ ಹೇಳುತ್ತಾನೆ. ನಿಮಗೆ ಪ್ರತಿ ಮಾಸವೂ ಸಹ ಆಹಾರ ಲಭಿಸುವಂತಾಗಲಿ. ನಿಮಗೆ ಸ್ವಧಾ ಎನ್ನುವ ಹೆಸರಿನಿಂದ ಕರೆಯಲ್ಪಟ್ಟು ಆ ಆಹಾರವೇ ನಿಮ್ಮ ಮನೋವೇಗದ ಮೂಲವಾಗಿರುತ್ತದೆ. ಚಂದ್ರನೇ ನಿಮಗೆ ಜ್ಯೋತಿ ರೂಪನಾಗಿರುತ್ತಾನೆ. ಎಂದು ಕಳುಹಿಸುತ್ತಾನೆ.

ಮಾನವರಿಗೂ ಸಹ ಅವರವರ ಸ್ವರೂಪಕ್ಕನುಗುಣವಾಗಿ ಹೇಳಿ ಕಳುಹಿಸುತ್ತಾನೆ. ಅದನ್ನೇ ಶತಪಥಬ್ರಾಹ್ಮಣದಲ್ಲಿ “ಅಥೈನಂ ಪಿತರಃ | ಪ್ರಾಚೀನಾವೀತಿನಃ” ಎಂದು ಹೇಳಲಾಗಿದೆ.
ಅದಕ್ಕೆ ಪಿಂಡಪ್ರದಾನ ಯಜ್ಞವನ್ನು ಮಾಸಿಕ ಶ್ರಾದ್ಧ ರೂಪದಲ್ಲಿ ಸ್ವಧಾ ರೂಪದಿಂದ ಇಂದಿಗೂ ಕೊಡಲಾಗುತ್ತದೆ. ಇದನ್ನು ಪಿಂಡಪಿತೃಯಜ್ಞ ಎಂದು ಕರೆಯಲಾಗುತ್ತದೆ. ಈ ಯಜ್ಞದ ಸ್ವರೂಪದಲ್ಲಿ ದಕ್ಷಿಣಾಗ್ನಿಯೇ ಪ್ರಧಾನವಾಗಿರುತ್ತದೆ. ಯಜ್ಞೋಪವೀತವು ಪ್ರಾಚೀನಾವೀತಿಯ ರೂಪದಲ್ಲಿರಬೇಕು. ಅಂದರೆ ಬಲಭುಜದ ಮೇಲೆ ಇರಬೇಕು. ಅಪ್ರದಕ್ಷಿಣ ಕ್ರಮದಲ್ಲಿ ಕಾರ್ಯ ನಡೆಯುತ್ತದೆ. ಪಿತೃಗಳ ಜೊತೆಗೆ ಕವ್ಯವಾಹನನಾದ ಅಗ್ನಿಯೂ ಇರುತ್ತಾನೆ. ಸ್ವಧಾರೂಪವಾದ ಹವಿಸ್ಸು ಪಿತೃಗಳಿಗೆ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಬೃಹಸ್ಪತಿ ತಿಳಿಸುತ್ತಾನೆ. ಇವೆಲ್ಲವೂ ಬೃಹಸ್ಪತಿಯ ನಿರ್ದೇಶನದಂತೆ ನಡೆಯಲ್ಪಡುತ್ತದೆ. ಮುಂದೆ ಇದೇ ನಿಯಮವನ್ನು ಯಮನು ಅನುಸರಿಸುತ್ತಾನೆ. ಹೀಗೇ ನಿಯಾಮಕನ ಕುರಿತು ಹೇಳುವ ಮೊದಲು ಯಮ ಪಿತೃನಿಯಾಮಕ ಎನ್ನಿಸಿಕೊಂಡು ಕಾಲಕ್ಕೊಂದು ಸ್ಪಷ್ಟರೂಪವನ್ನು ಕೊಡುತ್ತಾನೆ. ಮನು ಯಮ ಸಮಕಾಲೀನರು ಮನುವು ಮನುಷ್ಯರ ನಿಯಾಮಕನಾಗುತ್ತಾನೆ. ಆದರೆ ಯಮ ಹಾಗಲ್ಲ ಪ್ರಪಂಚದ ಎಲ್ಲಾ ಹಿಡಿತ ಪಡೆದುಕೊಳ್ಳುತ್ತಾನೆ. ಯಮನ ವ್ಯಕ್ತಿತ್ವವೇ ಆಶ್ಚರ್ಯ ಹುಟ್ಟಿಸುತ್ತದೆ. ಯಮ ಒಬ್ಬ ಋಷಿಯಾಗಿಯೂ ಕಾಣಿಸಿಕೊಳ್ಳುತ್ತಾನೆ. ಋಗ್ವೇದದ ಹತ್ತನೇ ಮಂಡಲದ ೧೪ನೇ ಸೂಕ್ತದ ದೃಷ್ಟಾರನಾಗಿ ಒಬ್ಬ ದೊಡ್ಡ ಸಾಧಕನಾಗಿಯೇ ಕಾಣಿಸಿಕೊಳ್ಳುತ್ತಾನೆ.

ಪರೇಯಿವಾಂಸಂ ಪ್ರವತೋ ಮಹೀರನು ಬಹುಭ್ಯಃ ಪಂಥಾಮನುಪಸ್ಪಶಾನಂ|
ವೈವಸ್ವತಂ ಸಂಗಮನಂ ಜನಾನಾಂ ಯಮಂ ರಾಜಾನಂ ಹವಿಷಾ ದುವಸ್ಯ ||
ತನ್ನ ಜೀವಿತಾವಧಿಯಲ್ಲಿ ಮನುಷ್ಯರು ಆಚರಿಸಿದ ಶ್ರೇಷ್ಠವಾದ ಕರ್ಮಗಳನ್ನಾಧರಿಸಿ ಮರಣಾನಂತರ ಅವರನ್ನು ಆಯಾಯ ಪ್ರದೇಶಗಳಿಗೆ ಕರೆದೊಯ್ಯುವ, ಮತ್ತು ಅನೇಕ ಪುಣ್ಯಕಾರ್ಯಗಳನ್ನು ಮಾಡಿದ ಸತ್ಪುರುಷರಿಗೆ ಸ್ವರ್ಗದ ದಾರಿಯನ್ನು ಯಾವುದೇ ಹಿಂಸೆಯಿಲ್ಲದೇ ತೋರಿಸುವವನೂ, ವಿವಸ್ವಂತನ ಮಗನೂ, ಪಾಪಿಗಳಿಗೆ ಅವರ ಕರ್ಮಾನುಸಾರ ಯೋಗ್ಯ ಸ್ಥಾನಕ್ಕೆ ತಲುಪಿಸುವವನೂ, ಪಿತೃಗಳಿಗೆಲ್ಲಾ ಒಡೆಯ ಯಮ. 
ನಿಯಂತೃ ಎನ್ನುವ ಅರ್ಥ ಸೂಕ್ತವೆನ್ನಿಸಿದರೂ, ನಿಯಮಿಸು ಅಥವಾ ಹತೋಟಿಯಲ್ಲಿಡು ಎನ್ನುವ ಯಮ್ ಧಾತುವಿನಿಂದ ಯಮ ಹುಟ್ಟಿಕೊಂಡಿದೆ. ಪಿತೃಗಳ ಲೋಕಕ್ಕೆ ಅಧಿಪತಿಯಾಗಿ, ಪಿತೃ ಲೋಕದ ಪಾಲಕನಾಗಿ, ತನಗೆ ಸೆರಿದ ಪಿತೃಗಳನ್ನು ಅಂಕೆಯಲ್ಲಿ ನಿಯಮಿಸಿ ಇಟ್ಟುಕೊಳ್ಳುವವನು. ನಿಯಮವನ್ನು ಮಾಡುವವನು ಯಮ ಎಂದೆನ್ನಿಸಿಕೊಳ್ಳುವನು. “ಯಚ್ಛತಿ ಉಪರಮಯತಿ ಜೀವಿತಾತ್” ಎಂದು “ಎಲ್ಲಾ ಪ್ರಾಣಿವರ್ಗಗಳ ಜೀವನವನ್ನು ಕೊನೆಗೊಳಿಸುವವನು ಯಮ ಎನ್ನುವುದು ಯಾಸ್ಕ ಮಹರ್ಷಿಗಳ ಅಬಿಪ್ರಾಯ. “ಪರೇಯಿವಾಂಸಂ ಪ್ರವತೋ ಮಹೀರನು ಬಹುಭ್ಯಃ” ಇಲ್ಲಿ ಪ್ರವತಃ ಎನ್ನುವುದು ಮನುಷ್ಯರ ಕುರಿತಾಗಿ. “ಪಂಥಾಮನುಪಸ್ಪಶಾನಂ” ಎನ್ನುವಲ್ಲಿ ಜಗದ ಜೀವಗಳನ್ನು ಹೊತ್ತೊಯ್ಯುವವನು ಎಂದು ಹೇಳಿದ್ದರೆ, “ಜನಾನಾಂ ಯಮಂ ರಾಜಾನಂ” ಎಂದು ಹೇಳಿದ್ದು ಅಲ್ಲಿ ಎಲ್ಲರನ್ನೂ ಪಕ್ಷಪಾತ ಮಾಡದೇ ತನ್ನಲ್ಲಿ ಸೇರಿಸಿಕೊಳ್ಳುವವನು ಎಂದು ಹೇಳಿದ್ದು ಈ ಋಕ್ಕಿನಲ್ಲಿ ಹೇಳಲಾಗಿದೆ.

#ಅಪ್ರದಕ್ಷಿಣ_ಪ್ರದಕ್ಷಿಣ
ಸದ್ಯೋಜಾತರು

No comments:

Post a Comment

If you have any doubts. please let me know...