ಹಿಂದೂ ಎಂದಾಗ . . . .
ಕೆಲವೊಮ್ಮೆ ಕೆಲವೊಂದು ಶಬ್ದ ಕೇಳಿದಾಗಲೇ ಪುಳಕಿತರಾಗುತ್ತೇವೆ. ಅಂತಹ ಶಬ್ದಗಳಲ್ಲಿ ಒಂದು ಸಿಂಧೂ. ಈ ಸಿಂಧುವಿನ ಶಬ್ದ ಕೇಳಿದಾಗಲೆಲ್ಲ ನಮ್ಮ ಭರತಭೂಮಿಯನ್ನು ಪವಿತ್ರಗೊಳಿಸಿದ ಮತ್ತು ವಿಸ್ತಾರವಾಗಿ ಒಂದು ಕಾಲದಲ್ಲಿ ಹರಿದು ನೀರುಣಿಸಿದ ಮತ್ತು ಅಷ್ಟೇ ಪಾವಿತ್ರ್ಯವನ್ನು ಹೊಂದಿದ್ದ ಸರಸ್ವತಿಯ ನೆನಪೂ ಆಗುತ್ತದೆ. ಇದೇ ಸಿಂದೂ ಮುಂದೇನಾಗುತ್ತದೆ ಒಮ್ಮೆ ಗಮನಿಸುವೆ.
ಉತ್ತರದಲ್ಲಿ ಹಿಮಾಲಯ, ದಕ್ಷಿಣದ ತುದಿ ಹಿಂದೂಮಹಾಸಾಗರ, ಪಶ್ಚಿಮದ ಅರಬ್ಬೀ ಸಮುದ್ರ ಮತ್ತು ಪೂರ್ವದ ಬಂಗಾಳಕೊಲ್ಲಿಯ ನಡುವೆ ವಿಸ್ತಾರವಾಗಿ ಹರಡಿಕೊಂಡಿರುವ ಈ ಭೂ ಪ್ರದೇಶವನ್ನು ನಾನಾ ಹೆಸರುಗಳಿಂದ ಕರೆದುಕೊಂಡು ಬರಲಾಗಿದೆ. ಮೊದಲನೆಯದಾಗಿ ಇದು ಋಗ್ವೇದದಲ್ಲಿ ಬರುವ ಸಪ್ತಸಿಂಧೂ ದೇಶ, ನಂತರದ್ದು ಹಪ್ತಹಿಂದೂ ದೇಶ, ಮುಂದೆ ಅದು ಭರತವರ್ಷ ಅಥವಾ ಭಾರತವರ್ಷ, ಮುಂದೆ ಅದು ಸಿಂಧುಸ್ಥಾನ ಎನ್ನುವ ಸಂಸ್ಕೃತ ಪದ ಪಡೆದುಕೊಂಡರೆ ಅದರ ಮುಂದಿನ ಆವೃತ್ತಿ ಅಂದರೆ ಪ್ರಾಕೃತದ ಹಿಂದುಸ್ಥಾನ ಎಂದಾಯಿತು. ಮುಂದೆ ಅದು ಅಪಭೃಂಶವಾಗಿ ಇಂಡಿಯಾ ಎನ್ನುವ ಹೆಸರನ್ನು ಪಡೆಯಿತು.
ಭಾಷಾ ಶಾಸ್ತ್ರದ ಆಧಾರದಲ್ಲಿ ನಾವು ಗಮನಿಸಿದರೂ ಈ ಸಿಂಧೂ ಎನ್ನುವ ಪದ ಅನಾದಿಯದ್ದು ಋಗ್ವೇದದಲ್ಲಿ ಬಳಕೆಗೊಂಡ ಪದ. ಪೂರ್ವ ಸಾಗರದಿಂದ ಪಶ್ಚಿಮ ಸಾಗರವನ್ನು ಬೆಸೆಯುವ ಪ್ರದೇಶವೇ ಈ ಸಪ್ತಸಿಂಧೂಗಳು. ಏಳು ಪ್ರಮುಖ ನದಿಯ ಹೆಸರೇ ಈ ಸಪ್ತ ಸಿಂಧುಗಳಾದರೂ ಅದು ಈ ಮಣ್ಣಿನ ಜೀವಾಳ ಎನ್ನುವುದೂ ಅಷ್ಟೇ ಸತ್ಯವಾದದು. ಆದರೆ ಇಲ್ಲಿ ಭಾಷಾ ಶಾಸ್ತ್ರದಂತೆ ಸಂಸ್ಕೃತದ ’ಸ’ ಎನ್ನುವ ಅಕ್ಷರ ಪ್ರಾಕೃತದ ’ಹ’ ಆಗುತ್ತದೆ. ಹೀಗಾಗಿಯೇ ಸಪ್ತಸಿಂಧೂ ಎನ್ನುವುದು ಹಪ್ತಹಿಂದುವಾಗಿದೆ. ಇದನ್ನು ಗಮನಿಸಿದರೆ ಹಿಂದು ಪದದ ಮೂಲಕ್ಕೆ ತೆರಳಿದರೂ ಅದು ಪ್ರಾಚೀನತೆಯನ್ನು ಕೊಡುತ್ತದೆ. ನಮ್ಮ ವೇದಗಳಲ್ಲಿ ಮತ್ತು ಪುರಾಣಗಳಲ್ಲಿಯೂ ದಸ್ಯುಗಳು ಎನ್ನುವ ಜನಾಂಗ ಅಥವಾ ಪಂಗಡಗಲ ಉಲ್ಲೇಖ ಸಿಗುತ್ತದೆ. ಈ ದಸ್ಯುಗಳು ಪಶ್ಚಿಮದ ಭೂ ಪ್ರದೇಶಗಳಿಗೆ ವಲಸೆಹೋಗುತ್ತಾರೆ. ಇಲ್ಲಿನ ಸಂಪ್ರದಾಯ, ನಡತೆ ಮತ್ತು ಧಾರ್ಮಿಕ ಆಚರಣೆಗಳನ್ನು ಸ್ವಾಭಾವಿಕವಾಗಿ ಅವರು ಅಲ್ಲಿಯೂ ಅನುಸರಿಸಿದರು. ಹಾಗೂ ಇವರು ಆಕಾಲದಲ್ಲಿ ಉಪಯೋಗಿಸಿದ ಭಾಷೆ ಪ್ರಾಕೃತವಾಗಿತ್ತು. ಪ್ರಾಕೃತದಲ್ಲಿ ಸ ಕಾರಕ್ಕೆ ಹಕಾರ ಸಾಮಾನ್ಯವಾದ ಕಾರಣ ಅದು ಹಪ್ತಹಿಂದುವಾಗಿ ಪರಿವರ್ತನೆಯಾಯಿತು. ಪರ್ಷಿಯಾದಲ್ಲಿ ನೆಲೆಸಿದ ಈ ದಸ್ಯುಗಳು ಮುಂದೆ ಸಂಸ್ಕೃತದ ಅಪಭೃಂಶ ಉಚ್ಚಾರವಾದ ಹಪ್ತಹಿಂದುವನ್ನೇ ಮುನ್ನೆಲೆಗೆ ತಂದರು. ಸಿಂಧು ದೇಶ ಎಂದಿದ್ದದ್ದು ಹಿಂದುಸ್ಥಾನವಾಯಿತು.
ಋಗ್ವೇದದಲ್ಲಿ ಉಲ್ಲೇಖಗೊಂಡ ಏಳು ಸಪ್ತ ಸಿಂಧು ಎನ್ನುವ ಏಳು ನದಿಗಳು ಉತ್ತರದಿಂದ ದಕ್ಷಿಣವನ್ನು ಬೆಸೆಯುತ್ತಾ ಸಮಗ್ರ ದೇಶವನ್ನು ಪ್ರತಿನಿಧಿಸುತ್ತದೆ. ನಮ್ಮ ಸಂಸ್ಕೃತಿಗಳು ಮತ್ತು ನಮ್ಮ ರಾಜಕೀಯ, ಸಾಮಾಜಿಕ, ಸಾಮಸ್ಕೃತಿಕ ನೆಲೆಗಳು ಹುಟ್ಟಿದ್ದು ನದಿಯ ಮೂಲದಿಂದಲೇ ಎನ್ನುವುದು ಇಲ್ಲಿ ಮುಖ್ಯವಾಗುತ್ತವೆ. ಯಾವಾಗ ಪ್ರಾಕೃತವು ಜನರ ಆಡುಭಾಷೆಯಾಗಿ ಬೆಳೆದು ಬಂತೋ ಆಗ ಸಹಜವಾಗಿ ಸಿಂಧುಸ್ಥಾನ ಹಿಂದುಸ್ಥಾನವಾಯಿತು. ಆಮೇಲೆ ಕ್ರಮೇಣ ಹಿಂದುಸ್ಥಾನ್ ಎಂದು ಬಳಕೆಗೆ ಬಂತು.
ಪಾಶ್ಚಿಮಾತ್ಯ ದೇಶದವರು ವಾದಿಸುವಂತೆ, ಈ ಹಿಂದುಸ್ಥಾನ ಎನ್ನುವ ಪದ ಹುಟ್ಟಿದ್ದೇ ಇರಾನ್ ಎನ್ನುವ ದೇಶದಿಂದ ಎನ್ನುವಲ್ಲಿ ಹುರುಳಿಲ್ಲ. ಈ ಪದದ ಮೂಲ ಭಾರತವೇ. ಹಿಂದು ಎನ್ನುವ ಪದದ ಮೂಲ ರೂಪಕ್ಕೆ ವಿದೇಶೀ ಕೆಟ್ಟ ವಾಸನೆಯನ್ನು ಬಳಿದ ಕೀರ್ತಿ ಯಾರಿಗೆ ಸಲ್ಲಬೇಕೋ . . . . .
ಸಿಂಧುಸ್ಥಾನಮಿತಿಜ್ಞೇಯಂ ರಾಷ್ಟ್ರಮಾರ್ಯಸ್ಯಚೋತ್ತಮಂ |
ಮ್ಲೇಚ್ಛಸ್ಥಾನಂ ಪರಂ ಸಿಂಧೋಃ ಕೃತಂ ತೇನ ಮಹಾತ್ಮನಾ|| ಎನ್ನುವ ಭವಿಷ್ಯಪುರಾಣದ ಶ್ಲೋಕದಂತೆ ಈ ರಾಷ್ಟ್ರವನ್ನು ಹಿಂದಿನ ಮಹಾತ್ಮರೆಲ್ಲ ಸಿಂಧುಸ್ಥಾನ ಎಂದೇ ಕರೆದರು. ನಮ್ಮ ಊರುಗಳ ಅನೇಕ ಹೆಸರುಗಳು ನದಿಯ ಹೆಸರಿನಿಂದಲೂ ಗುರುತಿಸಿಕೊಂಡಿದೆ. ಆದರೆ ಈ ದಸ್ಯು ಜನಾಂಗ ಭಾರತದ ನೆಲದಿಂದ ವಲಸೆ ಹೋಗಿ ಮ್ಲೇಚ್ಛಸ್ಥಾನವನ್ನಾಗಿ ಮಾಡಿಕೊಂಡರು. ಮೆಸಪಟೋಮಿಯಾ, ಇರಾನ್, ಅರೇಬಿಯಾ, ಬರ್ಬೆರಾ ಮುಂತಾದ ದೇಶಗಳು ಮ್ಲೇಚ್ಛಸ್ಥಾನಗಳಾದುವು ಎನ್ನಲಾಗುತ್ತದೆ.
ಇನ್ನು ಸಿಂಧುಸ್ಥಾನ ಹಿಂದುಸ್ಥಾನ ಎರಡೂ ಸಹ ಸಂಸ್ಕೃತ ಮತ್ತು ಪ್ರಾಕೃತದ ಕೊಡುಗೆಗಳಾಗಿ ನಮಗೆ ಕೊಡಲ್ಪಟ್ಟಿದ್ದು, ಮೂಲದಲ್ಲಿ ನಮ್ಮವೇ ಎನ್ನುವ ಅಂಶ ಒಂದಾದರೆ, ಭರತವರ್ಷ, ಅಥವಾ ಬಾರತವರ್ಷ ಎನ್ನುವುದು ಸಹ ನಮ್ಮದೇ. ಮನುಷ್ಯನ ಮೂಲದವನಾದ ವೈವಸ್ವತ ಮನುವಿನಿಂದ ಈ ಹೆಸರು ನಮಗೆ ಸಿಕ್ಕಿದೆ. ಯಾಕೆಂದರೆ ವೈವಸ್ವತ ಮನುವಿಗೆ ಇದ್ದ ಇನ್ನೊಂದು ಹೆಸರು ಭರತ ಎನ್ನುವುದಾಗಿ. ಆತನ ಹೆಸರು ಮುಂದೆ ಚಾಲ್ತಿಯಲ್ಲಿ ಬಂದಿದೆ. ದುಷ್ಯಂತನ ಮಗನಿಂದ ಬಂತು ಎನ್ನುವುದು ಇತ್ತೀಚೆಗಿನ ಕಥೆಯಾದರೆ ಮೂಲದಲ್ಲಿ ಮನುವಿನ ಹೆಸರಿನಿಂದ ಇದು ಭಾರತವಾಗಿದೆ. ಅದನ್ನು ಮುಂದೆ ಸಾಧ್ಯವಾದರೆ ಬರೆಯುವೆ.
#ಮನನ_ಮಥನ
ಮೂಲ ಸದ್ಯೋಜಾತರದ್ದು
No comments:
Post a Comment
If you have any doubts. please let me know...