March 27, 2021

ಸ್ಪೂರ್ತಿದಾಯಕ ಕಥೆ

ಇಂಥಹ ಸ್ಪೂರ್ತಿದಾಯಕ ಕಥೆಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ...

ಕಾಡಿನ ಗರ್ಭಿಣಿ ಜಿಂಕೆಗೆ ಪ್ರಸವವೇದನೆ.ಅದು ನದಿಯ ದಡದಲ್ಲಿ ಎಲ್ಲಾದರೂ ದಟ್ಟ ಹುಲ್ಲು ಇರುವ ಸ್ಥಳವನ್ನು ಹುಡುಕುವ ಯತ್ನದಲ್ಲಿತ್ತು. ಜಿಂಕೆಯ ಪ್ರಸವಕ್ಕೆ ಅನುಗುಣವಾದ ಸ್ಥಳ ದೊರೆಯಿತು.ಆಗಲೇ ಅದರ ಪ್ರಸವ ವೇದನೆ ಕೂಡ ಹೆಚ್ಚಾಗಿತ್ತು.
ಅದೇ ಕ್ಷಣದಲ್ಲಿ ದಟ್ಟ ಕಾರ್ಮೋಡಗಳು ಆವರಿಸಿ ಕಾಳ್ಗಿಚ್ಚು ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿತ್ತು. ತಬ್ಬಿಬ್ಬಾದ ಜಿಂಕೆ ತನ್ನ ಎಡಗಡೆ ನೋಡಿದಾಗ ಬೇಟೆಗಾರನೊಬ್ಬ ಶಸ್ತ್ರ ಸನ್ನದ್ಧನಾಗಿ ತನ್ನನ್ನು ಗುರಿಯಾಗಿಸಿದ್ದು ಕಂಡುಬಂತು. ಬಲಗಡೆ ನೋಡಿದರೆ ಹಸಿದ ಹುಲಿ ಅದನ್ನೇ ಸಮೀಪಿಸುತ್ತಿತ್ತು.
ಗರ್ಭಿಣಿ ಜಿಂಕೆ ಏನು ತಾನೇ ಮಾಡಲು ಸಾಧ್ಯ? ಅದಕ್ಕಿರುವುದು ಪ್ರಸವ ವೇದನೆ!
ತನ್ನ ಸರ್ವನಾಶಕ್ಕಾಗಿ ಕಾದು ಕುಳಿತ ಬೇಟೆಗಾರನಿಂದ ಅದು ಬದುಕುಳಿಯಲು ಸಾಧ್ಯವೇ?
ಹಬ್ಬುತ್ತಿರುವ ಕಾಳ್ಗಿಚ್ಚಿನ ನಡುವೆ ಅದು ಮಗುವಿಗೆ ಜನ್ಮ ಕೊಟ್ಟೀತೇ?
ಜಿಂಕೆ ಮುಂದೆ ಏನು ಮಾಡಬಹುದು?
ತನಗೆ ಒದಗಿದ ಕಷ್ಟಗಳನ್ನು, ತನ್ನೆದುರಿಗೇ ಕಾದು ಕುಳಿತಿರುವ ಸಾವನ್ನೂ ಲೆಕ್ಕಿಸದ ಜಿಂಕೆ, ಒಂದು ಹೊಸ ಜೀವಕ್ಕೆ ಜನ್ಮನೀಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತು.ಜಿಂಕೆ ಮಗುವಿಗೆ ಜನ್ಮನೀಡುವ ಸಮಯದಲ್ಲಿ... 
– ಮೋಡ ಕವಿದಿದ್ದ ಕಾರಣ ಬೇಟೆಗಾರನ ಗುರಿ ತಪ್ಪಿ ಹೋಯ್ತು
– ಬೇಟೆಗಾರನ ತಪ್ಪಿದ ಗುರಿಗೆ ಹಸಿದ ಹುಲಿ ಬಲಿಯಾಯ್ತು
– ಕವಿದ ಮೋಡ ಹನಿಗಳನ್ನು ಸುರಿಸಿ ಕಾಳ್ಗಿಚ್ಚನ್ನು ಆರಿಸಿತು
ಅಷ್ಟರಲ್ಲಿ ಜಿಂಕೆಯ ಸುಖ ಪ್ರಸವವೂ ಆಗಿತ್ತು.ಜಿಂಕೆಯಂತೆಯೇ ಮನುಷ್ಯನ ಬದುಕಿನಲ್ಲೂ ಅನೇಕ ಕಡೆಗಳಿಂದ ಕಷ್ಟಗಳು,ನಕಾರಾತ್ಮಕ ಆಲೋಚನೆಗಳು ಬರುತ್ತವೆ.ಕೆಲವೊಮ್ಮೆ ಇಂತಹ ಆಲೋಚನೆಗಳು ನಮ್ಮನ್ನೇ ನಾಶ ಮಾಡುವಷ್ಟು ಪ್ರಬಲವಾಗಿರುತ್ತವೆ.
ಜಿಂಕೆಗೆ ಆ ಕ್ಷಣದಲ್ಲಿ ಹೆಚ್ಚಿನ ಆದ್ಯತೆ ಮಗುವಿಗೆ ಜನ್ಮ ನೀಡುವುದಾಗಿತ್ತು.
ಹಾಗಾಗಿ ಅದು ಉಳಿದ ಕಷ್ಟಗಳನ್ನೆಲ್ಲ ಮರೆತು ತನ್ನ ಕರುಳ ಬಳ್ಳಿಗೆ ಜೀವ ಕೊಡುವುದಕ್ಕೆ ಮೊದಲಾಯ್ತು.
ಮಗುವಿಗೆ ಜೀವ ಕೊಡುವುದರ ಹೊರತಾಗಿ ಮತ್ತೇನನ್ನು ಮಾಡಲು ಜಿಂಕೆ ಅಶಕ್ತವಾಗಿತ್ತು.

ಜಿಂಕೆಯಂತೆಯೇ ನಾವು ಕೂಡ ನಮ್ಮ ಕೆಲಸದ ಮೇಲೆ,ಜೀವನದ ಮೇಲೆ ಪ್ರೀತಿ, ಗಮನ,ನಂಬಿಕೆ,ಭರವಸೆಗಳನ್ನಿಟ್ಟಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಆಗ ಎಂತಹುದೇ ಆಘಾತ,ಕಷ್ಟಗಳು ನಮ್ಮನ್ನು ಹತ್ತಿಕ್ಕಲಾರವು.....

No comments:

Post a Comment

If you have any doubts. please let me know...