March 9, 2021

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" 

ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ,ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ಮನುಸ್ಮೃತಿ ತಿಳಿಸುತ್ತದೆ.ಭಾರತೀಯ ಸಂಸ್ಕೃತಿ ಮಹಿಳೆಗೆ ಕೊಟ್ಟ ಪೂಜ್ಯಸ್ಥಾನವನ್ನು ಜಗತ್ತಿನ ಇನ್ಯಾವ ಸಂಸ್ಕೃತಿಯಲ್ಲೂ ನೀಡಿಲ್ಲ.ನಮ್ಮಲ್ಲಿ ಶಕ್ತಿದೇವತೆಗಳೆಂದರೆ ಸ್ತ್ರೀದೇವತೆಗಳೇ.ಉಮಾಮಹೇಶ್ವರ,ಲಕ್ಷ್ಮೀನಾರಾಯಣ,ಸೀತಾರಾಮ,ರಾಧಾಕೃಷ್ಣ ಮುಂತಾದ ದೇವರುಗಳ ಹೆಸರಲ್ಲಿ ಮೊದಲು ರಾರಾಜಿಸುವುದು ಸ್ತ್ರೀನಾಮವೇ..!! 

ಪುರುಷ ಹಾಗೂ ಪ್ರಕೃತಿಯಿಂದಲೇ ಈ ಜಗತ್ತು.ಪ್ರಕೃತಿಯೆಂದರೆ ಮಹಿಳೆ.ಪುರುಷನ ಪೂರಕ ಶಕ್ತಿ ,ಸ್ತ್ರೀಶಕ್ತಿಯಿಲ್ಲದೇ ಪುರುಷನ ಬಾಳು ಅಪೂರ್ಣ. ಈ ಸೃಷ್ಟಿಯನ್ನು ರಚಿಸುವಾಗ ಸೃಷ್ಟಿಕರ್ತ ಹಿರಣ್ಯಗರ್ಭನ ದೇಹವೂ ಸಹ ಅರ್ಧ ನಾರಿ ಹಾಗೂ ಅರ್ಧ ಪುರುಷನದಾಗಿತ್ತೆಂದು ಮನುಸ್ಮೃತಿ ತಿಳಿಸುತ್ತದೆ. 

"ದ್ವಿಧಾ ಕೃತ್ವಾತ್ಮನಸ್ತೇನ ದೇಹಮರ್ಧೇನ ಪುರುಷೋಭವತ್ | ಅರ್ಧೇನ ನಾರೀ ತಸ್ಯಾಂ ಸ ವಿರಾಜಮಸೃಜತ್ಪ್ರಭುಃ : ||" 

ತನ್ನ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುವದರಲ್ಲಿ ಮಹಿಳೆ ಪುರುಷನಿಗಿಂತಲೂ ಒಂದು ಕೈ ಮಿಗಿಲು.ಜೀವನದ ಯಾತ್ರೆಯಲ್ಲಿ ಪುರುಷನಿಗೆ ಸದಾ ಪ್ರೇರಣೆಯನ್ನು ನೀಡುವವಳು.ಮಹಿಳೆಯರ ಮಾತು ಜೇನಿಗಿಂತಲೂ ಸಿಹಿ.ಕರುಣೆ,ಮಮತೆ,ಸರಳತೆಯ ಭಂಡಾರ.ಮಹಿಳೆಯರು ತೆಗೆದುಕೊಳ್ಳುವ ತೀರ್ಮಾನ ವಜ್ರಕ್ಕಿಂತಲೂ ಕಠೋರ.ಮಹಿಳೆಯ ನಗುವಿನಿಂದ ಜೀವನದ ನಿರಾಶೆ ಹಾಗೂ ಕಹಿ ಘಟನೆಗಳು ದೂರ. ಜನ್ಮವನ್ನು ನೀಡುವ ಜನನಿ.ಜಗತ್ತಿನ ಪ್ರತಿಯೊಂದು ಮನುಷ್ಯನೂ ತನ್ನಮ್ಮನ ಮಡಿಲಲ್ಲಿ ಮಲಗಿ,ಆಡವಾಡಿ ದೊಡ್ದವನಾಗುತ್ತಾನೆ.ತನ್ನ ಮಗುವಿಗೆ ನೈತಿಕತೆಯ ಶಿಕ್ಷಣವನ್ನು ನೀಡುವವಳು ಮಹಿಳೆ.ಮಗುವಿಗೆ ಮೊದಲ ಗುರು.ನೋವನ್ನು ತಿಂದೂ ತನ್ನ ಮಕ್ಕಳ ಏಳ್ಗೆಯನ್ನು ಬಯಸುವವಳು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆ ಕೇವಲ ಮನೆಗೆಲಸ ಮಾಡುವವಳಲ್ಲ.ಪ್ರಾಚೀನ ಕಾಲದಿಂದಲೂ ರಾಜನೀತಿ,ಧರ್ಮ,ನ್ಯಾಯ ಮುಂತಾದ ಕ್ಷೇತ್ರಗಳಲ್ಲಿ ಪುರುಷನ ಜೊತೆ ಸರಿಸಮನಾಗಿ ನಡೆದವಳು.ತನ್ನ ತ್ಯಾಗ,ಬಲಿದಾನ,ಸ್ನೇಹ,ಶ್ರದ್ಧೆ,ಧೈರ್ಯ,ಸಹಿಷ್ಣುತೆ ಮುಂತಾದ ಗುಣಗಳಿಂದ ಶ್ರೇಷ್ಟಳಾದವಳು.ತಂದೆತಾಯಿಗಳೆಂದರೆ ಆತ್ಮೀಯತೆ,ಪ್ರೀತಿ,ಒಡಹುಟ್ಟಿದವರಿಗೆ ಮಮತೆ,ಗಂಡನಿಗೆ ಕಾಳಜಿ,ಮಕ್ಕಳಿಗೆ ಮಮತೆಯನ್ನು ಜೀವನಪೂರ್ತಿ ಉಣಬಡಿಸುವವಳು.. 

"ಕಾರ್ಯೇಷು ದಾಸೀ ಕರಣೇಷು ಮಂತ್ರೀ ಭೋಜ್ಯೇಷು ಮಾತಾ ಶಯನೇಷು ರಂಭಾ | ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರೀ ಷಟ್ ಧರ್ಮಯುಕ್ತಾ ಕುಲಧರ್ಮಪತ್ನೀ ||" 

ಕಾರ್ಯದಲ್ಲಿ ದಾಸಿ,ಸಲಹೆ ನೀಡುವ ಮಂತ್ರಿ ,ಊಟದಲ್ಲಿ ಮಾತೆ,ಆನಂದದಲ್ಲಿ ರಂಭೆ,ರೂಪದಲ್ಲಿ ಲಕ್ಷ್ಮೀ ,ಕ್ಷಮೆಯಲ್ಲಿ ಭೂಮಿ ಈ ಎಲ್ಲಾ ಗುಣಗಳನ್ನು ಹೊಂದಿರುವವಳು ಕೇವಲ ಮಹಿಳೆ..!! 

ಋಗ್ವೇದದಲ್ಲಿ ಮಹಿಳೆ ಒಂದು ಪರಿವಾರದ ಸಾಮ್ರಾಜ್ಞಿ ಹಾಗೂ ಯಜಮಾನಿ..ಋಗ್ವೇದದ ಈ ಮಂತ್ರ ವನ್ನು ಗಮನಿಸಿ.. 

"ಸಾಮ್ರಾಜ್ಞಿ ಶ್ವಶುರೇ ಭವ ಸಾಮ್ರಾಜ್ಞೀ ಸ್ವಾಶ್ರ್ವಾಂ ಭವ | ನನಾಂದರೀ ಸಾಮ್ರಾಜ್ಞೀ ಭವ ಸಾಮ್ರಾಜ್ಞೀ ಅಧಿದೇವೃಷು ||" 

ನಮ್ಮ ಹಿಂದಿನ ಋಷಿ-ಮುನಿಗಳು ಸ್ತ್ರೀಗೆ ಯಾವ ಪವಿತ್ರ ಸ್ಥಾನವನ್ನು ನೀಡಿದ್ದರೋ ಅಂತಹ ಪರಮಪೂಜ್ಯ ಸ್ಥಾನವನ್ನೇ ನಾವಿಂದು ಮಹಿಳೆಯರಿಗೆ ನೀಡಬೇಕಿದೆ.ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕಿದೆ.ಆಕೆಯನ್ನು ಅಶಕ್ತಳೆಂದು ಕಾಣದೇ ಪುರುಷನಿಗೆ ಸರಿಸಮವಾದ ಸ್ಥಾನ ನೀಡಬೇಕಿದೆ.ಶಿಕ್ಷಿತ ಸ್ತ್ರೀ ಒಂದು ಶಿಕ್ಷಿತ ಸಮಾಜವನ್ನೇ ಕಟ್ಟುತ್ತಾಳೆ.ಹಾಗಾಗಿ ಸ್ತ್ರೀಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಶ್ರೀರಾಮನ ಜೊತೆ ಸೀತೆಯಿರದಿದ್ದರೆ ರಾಮಾಯಣವೇ ಇರುತ್ತಿರಲಿಲ್ಲ.ದ್ರೌಪದೀ,ಕುಂತಿ,ಗಾಂಧಾರಿ ಮುಂತಾದ ಮಹಿಳೆಯರಿರದಿದ್ದರೆ ಮಹಾಭಾರತವಿರುತ್ತಿರಲಿಲ್ಲ.ಶಿವನ ಜೊತೆ ಪಾರ್ವತಿಯಿರದಿದ್ದರೆ,ಅರ್ಧನಾರಿಶ್ವರನಾಗುತ್ತಿರಲಿಲ್ಲ.ಕೃಷ್ಣನ ಜೊತೆ ರಾಧೆಯಿರದಿದ್ದರೆ ರಾಧಾಕೃಷ್ಣನಿರುತ್ತಿರಲಿಲ್ಲ,ವಿಷ್ಣುವಿನ ಜೊತೆ ಲಕ್ಷ್ಮೀಯಿರದಿದ್ದರೆ ಲಕ್ಷ್ಮೀನಾರಾಯಣನಿರುತ್ತಿರಲಿಲ್ಲ. 

ಪುರುಷ ಹಾಗೂ ಪ್ರಕೃತಿಯಿಂದಲೇ ಜಗತ್ತು.ಅದನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರವಾಗಿರುತ್ತದೆ. ಕೇವಲ ಮಹಿಳಾ ದಿನದಲ್ಲಷ್ಟೇ ಸ್ತ್ರೀಯರಿಗೆ ಗೌರವ ನೀಡಿ ಅಭಿನಂದಿಸುವುದಲ್ಲ. 

ಪ್ರತಿದಿನ,ಪ್ರತಿಕ್ಷಣ ಮಹಿಳೆಯರಿಗೆ ಗೌರವ ನೀಡಬೇಕಿದೆ.ಆಗಲೇ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. 

ಸಹೋದರಿಯರೆಲ್ಲರಿಗೂ ಮಹಿಳಾದಿನದ ಹಾರ್ದಿಕ ಶುಭಕಾಮನೆಗಳು..

No comments:

Post a Comment

If you have any doubts. please let me know...