ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು
ತೊಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವನು
ತನಗೆ ಬೇಕೆಂದೆತ್ತಿಕೊಂಡನು.
ಪ್ರಸ್ತುತ ವಚನದಲ್ಲಿ ರೂಪಕಗಳ ಸರಮಾಲೆಯಿದೆ.
ಈ ಮೂಲಕ ಭಕ್ತಿಯ ವಿಕಾಸ ಹಾಗೂ ಸಸ್ಯವೊಂದರ ಬೆಳವಣಿಗೆ ಇವುಗಳ ನಡುವಿನ ಸಮಾನಾಂತರತೆಯೊಂದನ್ನು ವಚನ ಮುಂದಿಡುತ್ತಿದೆ.
ಭಕ್ತಿಯನ್ನು ಸಾಮಾನ್ಯವಾಗಿ ಅದರ ಸ್ಥಗಿತತೆಯಲ್ಲಿ ಗ್ರಹಿಸುವುದು ನಮ್ಮ ರೂಢಿ. ಭಕ್ತಿ ಇರುವುದು ಅಥವಾ ಇಲ್ಲದಿರುವುದು – ಇದು ನಮ್ಮ ಸ್ಥಿತಿ ಅಥವಾ ಆಯ್ಕೆಗಳಲ್ಲಿ ಒಂದು. ಒಮ್ಮೆ ಭಕ್ತರಾದೆವೆಂದರೆ ಆ ಅನಂತರ ನಾವು ಎಂದೆಂದಿಗೂ ಭಕ್ತರೆ. ಹೀಗೆ ಭಕ್ತಿಯೆನ್ನುವುದು ನಮಗೆ ಒಂದು ಕಾಲಘಟ್ಟದಲ್ಲಿ ನೆಲೆಗೊಳ್ಳುವ ಒಂದು ಸಂಗತಿ. ಆದರೆ ವಚನದಲ್ಲಿ ಭಕ್ತಿ ಇದಕ್ಕೆ ವ್ಯತಿರಿಕ್ತವಾದ ಒಂದು ನೆಲೆಯಲ್ಲಿದೆ. ಇಲ್ಲಿ ಅದಕ್ಕೊಂದು ಚಲನಶೀಲತೆಯಿದೆ. ಜತೆಗೆ ಮುಖ್ಯವಾಗಿ ಅದಕ್ಕೊಂದು ಜೈವಿಕ ಸ್ವರೂಪವಿದೆ. ಹಂತದಿಂದ ಹಂತಕ್ಕೆ ಅದು ವಿಕಸನಗೊಳ್ಳುತ್ತ ಹೋಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಮನೋಧರ್ಮವೆಂಬಂತೆ ಕಾಣಲಾಗುವ ಭಕ್ತಿ ಇಲ್ಲಿ ಅಸ್ತಿತ್ವವಾಗಿ ಪರಿವರ್ತಿತವಾಗಿದೆ. ಇಲ್ಲಿ ಭಕ್ತನಲ್ಲಿ ಭಕ್ತಿಯಿಲ್ಲ; ಭಕ್ತನೇ ಭಕ್ತಿಯೂ ಆಗಿದ್ದಾನೆ. ಭಕ್ತಿಯನ್ನು ಜೀವಂತವಾಗಿಸಬೇಕಿಲ್ಲ; ಜೀವಂತಿಕೆಯೇ ಭಕ್ತಿಯಾಗಿದೆ.
ಭಕ್ತಿ ಪೃಥ್ವಿಯಾಗುವುದೆಂದರೆ ಬೆಳವಣಿಗೆಯ ಸಾಧ್ಯತೆಯನ್ನು ಹುದುಗಿಸಿಕೊಂಡಂತೆ. ಇಲ್ಲಿ ಅಂಕುರಿಸುವುದು ಗುರುವೆಂಬ ಬೀಜ. ಗುರು ಬೀಜವಾಗುವುದೆಂದರೆ ಇಲ್ಲಿನ ಬೀಜದ ಹಿಂದೆ ಮತ್ತೊಂದು ಹಣ್ಣಿದೆಯೆಂದರ್ಥ. ಯಾವುದು ಸ್ವತಃ ಹಣ್ಣಾಗಿದೆಯೋ ಅದು ಮಾತ್ರವೇ ಮತ್ತೊಂದು ಹಣ್ಣಿನ ವಿಕಸನಕ್ಕೆ ಅಂಕುರಾರ್ಪಣ ಮಾಡಬಲ್ಲದು. ಇದು ಸಮಷ್ಟಿಯ ಅಸ್ತಿತ್ವವು ವ್ಯಷ್ಟಿಯ ಅಸ್ತಿತ್ವದಲ್ಲಿ ಮೈದಾಳುವ ವಿಧಾನವೂ ಹೌದು. ಹೀಗಾಗಿ ಇಲ್ಲೊಂದು ಜೈವಿಕ ಪರಂಪರೆಯ ಮುಂದುವರಿಕೆಯಿದೆ. ಅಲ್ಲದೆ ಬೀಜ ಅಂಕುರಿಸಬೇಕೆಂದರೆ ಮಣ್ಣು ಅದನ್ನು ತನ್ನೊಳಗೆ ಆಹ್ವಾನಿಸಿಕೊಳ್ಳಬೇಕು. ಹೀಗೆ ಭಕ್ತಿಯ ಮೂಲಭೂತ ಸ್ವರೂಪದಲ್ಲಿಯೇ ಸಮರ್ಪಣೆಯ ಗುಣವಿದೆ. ಯಾವುದು ಸಮರ್ಪಿಸಿಕೊಳ್ಳಬಲ್ಲುದೋ ಅದು ಮಾತ್ರ ವಿಸ್ತರಿಸಿಕೊಳ್ಳಬಲ್ಲುದು.
ಆ ವಿಸ್ತರಣೆಯ ವಿವರಗಳು ವಚನದಲ್ಲಿ ಮುಂದೆ ಕಾಣಿಸಿಕೊಳ್ಳುತ್ತವೆ. ‘ಗುರುವೆಂಬ ಬೀಜವಂಕುರಿಸಿ ಲಿಂಗವೆಂಬ ಎಲೆಯಾಯಿತ್ತು.’ ಒಂದು ಭೂತವಾದರೆ ಮತ್ತೊಂದು ವರ್ತಮಾನ. ಇದು ಇಲ್ಲಿ ‘ಇರಿಸಿದ’ ಲಿಂಗವಲ್ಲ; ‘ವಿಕಸಿಸಿದ’ ಲಿಂಗ, ‘ಬೆಳೆದ’ ಲಿಂಗ. ಭಕ್ತಿ ಅಸ್ತಿತ್ವವಾದಾಗ ದೈವಿಕತೆ ಆಂತರ್ಯದ ಸಂಗತಿಯಾಗುತ್ತದೆ. ‘ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು.’ ಲಿಂಗಕ್ಕೂ ವಿಚಾರಕ್ಕೂ ಇರುವ ಸಂಬಂಧವೆಂದರೆ ಎಲೆಗೂ ಹೂವಿಗೂ ಇರುವ ಸಂಬಂಧ, ಸಹ-ಜ ಸಂಬಂಧ. ಹೀಗಾಗಿ ಇಲ್ಲಿ ವಿಚಾರ ಆರೋಪಿತವಾಗುವುದಿಲ್ಲ, ಲಿಂಗದೊಂದಿಗೆ ‘ಸಹಜ’ವಾಗುತ್ತದೆ. ಇದಲ್ಲದೆ ಲಿಂಗದೊಂದಿಗೆ ಪ್ರಸ್ತಾವವಾದಾಗ ಹೂವಿಗೆ ಒಂದು ಪೂಜೆಯ ಪರಿವೇಷವೂ ಉಂಟಾಗುವುದಷ್ಟೆ. ಪೂಜೆಯನ್ನು ಸಾಮಾನ್ಯವಾಗಿ ಒಂದು ಭಾವಕ ನೆಲೆಯಲ್ಲಿ ಪರಿಭಾವಿಸುವುದು ರೂಢಿ. ಆದರೆ ಇಲ್ಲಿ ವಿಚಾರವು ಹೂವಿನೊಂದಿಗೆ ಸಮೀಕರಣಗೊಂಡಿರುವುದು ಇಡಿಯ ಆರಾಧನೆಯ ಪ್ರಕ್ರಿಯೆಯು ಬೇರೊಂದು ಆಯಾಮದಲ್ಲಿ ವಿಸ್ತರಿಸಿಕೊಳ್ಳುವಂತೆ ಮಾಡುತ್ತದೆ. ಈ ಜೈವಿಕ ಕ್ರಿಯೆಯ ಮುಂದುವರಿಕೆಯಲ್ಲಿ ಹೂ ಕಾಯಾಗುತ್ತದೆ. ಇದಕ್ಕೆ ಸಮಾನಾಂತರವಾಗಿ ವಿಚಾರವು ಆಚಾರವಾಗುತ್ತದೆ. ವಿಚಾರವು ಆಚಾರವಾಗುವುದೆಂದರೆ ಅದು ಆಲೋಚನೆ ಮತ್ತು ಕ್ರಿಯೆಗಳ ನಡುವಿನ ಸಂಬಂಧದ ನೆಲೆಯೂ ಹೌದು. ಇಲ್ಲಿನ ಆಚಾರಕ್ಕೆ ವಿಶಿಷ್ಟ ಹಿಂದು-ಮುಂದುಗಳ ಸನ್ನಿವೇಶವಿದೆ. ಅದರ ಹಿಂದಿನ ತುದಿಯಲ್ಲಿ ವಿಚಾರವಿದ್ದರೆ ಮುಂದಿನ ತುದಿಯಲ್ಲಿ ನಿಷ್ಪತ್ತಿ (= ನಿಲುಗಡೆ, ಮುಕ್ತಿ) ಇದೆ. ಆಚಾರದ ಕ್ರಿಯೆಗಳು ಅದನ್ನು ಬಿಡುಗಡೆಯತ್ತ ಮುನ್ನಡೆಸಿದಾಗ ಮಾತ್ರ ಅದು ನಿಷ್ಪತ್ತಿಯೆಂಬ ಹಣ್ಣಿನಲ್ಲಿ ಪರ್ಯವಸಾನವಾಗಲು ಸಾಧ್ಯ. ವಚನದಲ್ಲಿ ಈ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತದೆ. ‘ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುತ್ತದೆ’. ಇದು ಒಂದೆಡೆಯಿಂದ ತುದಿಯೂ ಹೌದು, ಇನ್ನೊಂದೆಡೆಯಿಂದ ಮೊದಲೂ ಹೌದು. ಒಂದೆಡೆಯಿಂದ ಇಲ್ಲಿ ಪೃಥ್ವಿಯ ಸಂಗದಿಂದ ಬಿಡಿಸಿಕೊಳ್ಳುವುದಿದ್ದರೆ ಇನ್ನೊಂದೆಡೆಯಿಂದ ಮತ್ತೆ ತನ್ನನ್ನು ಪೃಥ್ವಿಯ ಸನ್ನಿಧಿಗೆ ಒಪ್ಪಿಸಿಕೊಳ್ಳುವುದೂ ಇದೆ. ಭಕ್ತಿಯೆಂಬುದು ಬಿಡುಗಡೆಯೋ, ಬಂಧನವೋ? ಇಲ್ಲಿ ಬಿಡುಗಡೆಯಲ್ಲಿನ ಬಂಧನವೂ ಇದೆ, ಬಂಧನದಲ್ಲಿನ ಬಿಡುಗಡೆಯೂ ಇದೆ.
ಇಲ್ಲಿಂದ ಮುಂದೆ ವಚನ ನಮ್ಮನ್ನು ತನ್ನ ಶಿಖರದೆಡೆಗೆ ಕೊಂಡೊಯ್ಯುತ್ತದೆ. ‘ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವನು ತನಗೆ ಬೇಕೆಂದೆತ್ತಿಕೊಂಡನು.’ ಈ ಚಿತ್ರ ಇಲ್ಲಿನ ಇಡೀ ಭಕ್ತಿಯ ಪ್ರಕ್ರಿಯೆಗೆ ಒಂದು ಹೊಸ ತಿರುವನ್ನು ಕೊಡುತ್ತದೆ. ನಾವು ಸಾಮಾನ್ಯವಾಗಿ ಭಕ್ತಿಯನ್ನು ಭಕ್ತನ ಅಗತ್ಯವಾಗಿ ಗ್ರಹಿಸುತ್ತೇವೆ. ಆದರೆ ಇಲ್ಲಿ ಆ ಗ್ರಹಿಕೆ ಪಲ್ಲಟಗೊಂಡಿದೆ. ಇಲ್ಲಿ ಅದು ದೇವನ ಅಗತ್ಯವಾಗಿದೆ. ಸಮರ್ಪಣೆಯೊಂದಿಗೆ ತಳುಕುಹಾಕಿಕೊಂಡಿರುವ ಭಕ್ತಿ ಇಲ್ಲಿ ‘ಒಪ್ಪಿಸಿಕೊಳ್ಳುವಿಕೆ’ಗಿಂತ ಹೆಚ್ಚಾಗಿ ‘ಒಪ್ಪಿಕೊಳ್ಳುವಿಕೆ’ಯಲ್ಲಿ ಅರ್ಥವನ್ನು ಕಂಡುಕೊಳ್ಳುತ್ತಿದೆ. ಏಕೆಂದರೆ ಇಲ್ಲಿ ಯಾವುದೂ ಮಾಡಿದ್ದಲ್ಲ, ಎಲ್ಲವೂ ಆದದ್ದು – ಬೀಜವಂಕುರಿಸಿ ಎಲೆಯಾದಂತೆ, ಹೂವಾದಂತೆ ಕಾಯಾದಂತೆ, ಹಣ್ಣಾದಂತೆ.
No comments:
Post a Comment
If you have any doubts. please let me know...