ಕುಶಸ್ಥಲ
ಪೊಡವಿಗೋಸುಗ ಬಳಗ ಸಹಿತಲಿ |
ನಡೆಯಬೇಡ ಕೃತಾಂತನಲ್ಲಿಗೆ ||
ಕೊಡು ಕುಶಸ್ಥಳ ವರವೃಕಸ್ಥಳ ವಾರಣಾವತಿಯ ||
ಬಿಡುಬಿಡೆಲವೊ ಆವಂತಿನಗರವ |
ನೊಡನೆ ಶಕ್ರಪ್ರಸ್ಥವನು ಸಹ |
ತಡೆಯದೇ ಧರ್ಮಜಗೆ ಸಾಮದೊಳೆಂದನಸುರಾರಿ ||
ಇದು ಯಕ್ಷಗಾನದ ಕೃಷ್ಣಸಂಧಾನದ ಭಾಮಿನಿ.
ಮೊನ್ನೆ ಇಂದ್ರಪ್ರಸ್ಥ ಮತ್ತು ಹಸ್ತಿನಾವತಿಯ ಕುರಿತು ಬರೆದಾಗ #ಕುಶಸ್ಥಲದ ಕುರಿತಾಗಿ ಬಂದ ಪ್ರತಿಕ್ರಿಯೆಗೆ.
ಪಾಂಡವರು ಕೇಳಿದ ಐದು ಪ್ರದೇಶಗಳು ಅಥವಾ ಗ್ರಾಮಗಳೆಲ್ಲವೂ ಯಮುನೆಯ ಹರಿವಿನ ಸ್ಥಳಗಳೇ. ಮತ್ತು ದೆಹಲಿಯ ಆಸುಪಾಸಿನವು. #ಇಂದ್ರಪ್ರಸ್ಥ, #ಸ್ವರ್ಣಪ್ರಸ್ಥ, #ಪನಪ್ರಸ್ಥ, #ವ್ಯಾಘ್ರಪ್ರಸ್ಥ, #ತಿಲಪ್ರಸ್ಥ. ಈ ಐದು ಗ್ರಾಮಗಳನ್ನು ಪಾಂಡವರು ಕೇಳುವುದು. ಇವೆಲ್ಲವೂ ಇಂದ್ರಪ್ರಸ್ಥದೊಳಗೆ ಇವೆ. ಹಾಗಾದರೆ ಕುಶಸ್ಥಳಿ ಅನ್ನುವುದು ಯಾವುದು ? ರಾಮಾಯಣದಲ್ಲಿ ಹೇಳುವಂತೆ ಶ್ರೀ ರಾಮನ ಹಿರಿಯ ಮಗ ಕುಶನು ರಾಜ್ಯಭಾರಮಾಡುವುದಕ್ಕಾಗಿ ಶ್ರೀ ರಾಮನೇ ನಿರ್ಮಿಸಿದ ಒಂದು ಪಟ್ಟಣವನ್ನು ಕುಶಸ್ಥಳೀ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಶರ್ಯಾತಿ ರಾಜನ ಮೊಮ್ಮಗ ರೇವತನೆಂಬ ರಾಜನು ಇಲ್ಲಿ ಬಹಳ ಕಾಲ ರಾಜ್ಯಭಾರಮಾಡುತ್ತಿದ್ದನು. ಎಮದು ಭಾಗವತದಲ್ಲಿ ಬರುತ್ತದೆ. ಇನ್ನು ಶ್ರೀ ಕೃಷ್ಣ ಹುಟ್ಟಿದ ಮಥುರಾ ನಗರವನ್ನು ಜರಾಸಂಧ ಸುಟ್ಟು ನಾಶಮಾಡುತ್ತಾನೆ. ನಂತರ ಶ್ರೀಕೃಷ್ಣ ವಿಶ್ವಕರ್ಮನಿಂದ ಮಾಡಿಸಿದ ನಗರವನ್ನೂ ಕುಶಸ್ಥಳೀ ಎನ್ನಲಾಗಿದೆ. ಈ ನಗರವೇ ದ್ವಾರಕಾ. ಕೊನೆಗೆ ಕೃಷ್ಣನ ಅವಸಾನದ ನಂತರ ಏಳನೆಯ ದಿನ ಅದೂ ಮುಳುಗಿ ಹೋಗುತ್ತದೆ ಎಂದು ಭಾಗವತದಲ್ಲಿ ಬರುತ್ತದೆ.
ಮಹಾಭಾರತದ ಸಭಾಪರ್ವದ ಹದಿನಾಲ್ಕನೆಯ ಅಧ್ಯಾಯದಲ್ಲಿ ಹೀಗೆ ಬರುತ್ತದೆ. ಜರಾಸಂಧನ ಮಗಳು ತನ್ನ ತಂದೆಯ ಬಳಿಗೆ ಹೋಗಿ ಅಳುತ್ತಾ “ನನ್ನ ಗಂಡನಾದ ಕಂಸನನ್ನು ಕೊಂದ ಶ್ರೀಕೃಷ್ಣನ ಮಡದಿಗೂ ನನ್ನಂತೆಯೇ ದುಃಖ ಬರಬೇಕು. ಆದರೆ ನೀನು ಯಾವುದನ್ನೂ ಯೋಚಿಸದೇ ಕುಳಿತಿರುವೆಯಲ್ಲಾ ನೀನು ಕೃಷ್ಣನನ್ನು ಸಂಹರಿಸುವ ತನಕ ನನಗೆ ನೆಮ್ಮದಿ ಇಲ್ಲ ಎನ್ನುತ್ತಾಳೆ. ಇದನ್ನು ಶ್ರೀ ಕೃಷ್ಣನ ಗೂಢಚಾರರು ಕೇಳಿಸಿಕೊಳ್ಳುತ್ತಾರೆ. ಅವರಿಂದ ಆ ಸುದ್ಧಿಯನ್ನು ತಿಳಿದ ನಾವು ಮುಂದಾಗುವ ಪರಿಣಾಮವನ್ನು ತಿಳಿದು ಚಿಂತಿತರಾಗುತ್ತೇವೆ. ನಮಗೆ ಯಾವುದು ಮುಖ್ಯವೋ, ಅತಿಮುಖ್ಯವೋ ಅವುಗಳನ್ನು ಮಾತ್ರ ಸಂಗ್ರಹಿಸಿಕೊಂಡು ನಮ್ಮ ಬಂಧು ದಾಯಾದರ ಜೆತೆಗೆ ಬಂದು ಬಿಡಬಹುದೆನ್ನುವ ಕಾರಣದಿಂದ ಪಶ್ಚಿಮದಿಕ್ಕಿನ ಕಡೆಗೆ ಹೊರಟುಹೋಗುತ್ತೇವೆ ಅಲ್ಲಿ ರೈವತಕಪರ್ವತದ ತಪ್ಪಲಿನಲ್ಲಿ ಅತಿಸುಂದರವಾದ ಕುಶಸ್ಥಲೀ ಎಂಬ ಪಟ್ಟಣವಿದೆ. ಅಲ್ಲಿಗೆ ಹೋಗಿ ನಾವೆಲ್ಲರೂ ನೆಲೆಸಿದೆವು. ಆ ನಗರದ ಕೋಟೆ ಕೊತ್ತಲಗಳನ್ನು ಭದ್ರವಾಗಿ ಕಟ್ಟಿದೆವು. ದೇವತೆಗಳಿಗೂ ಕೂಡ ಆ ನಗರಿಯನ್ನು ಪ್ರವೇಶಿಸಲು ಸಾಧ್ಯವಿಲ್ಲದಷ್ಟು ಭದ್ರವಾಗಿ ನಿರ್ಮಿಸಿದ್ದೇವೆ. ಆ ಕೋಟೆಯೊಳಗೆ ನಿಂತು ಹೆಂಗಸರು ಕೂಡ ಯುದ್ಧಮಾಡಿ ಶತ್ರುಗಳನ್ನು ಗೆಲ್ಲಬಹುದು. ಎಂದು ಶ್ರೀಕೃಷ್ಣ ಯುಧಿಷ್ಠಿರನಲ್ಲಿ ಹೇಳುತ್ತಾನೆ.
ಶಾಂತಿಪರ್ವದ ೩೩೯ನೇ ಅಧ್ಯಾಯದಲ್ಲಿ ತನ್ನ ಹುಟ್ಟಿನ ಉದ್ದೇಶವನ್ನು ಶ್ರೀಕೃಷ್ಣ ಹೇಳುತ್ತಾ ದ್ವಾಪರಯುಗ ಮತ್ತು ಕಲಿಯುಗಗಳ ಸಂಧಿಕಾಲದಲ್ಲಿ ಅಂದರೆ ದ್ವಾಪರಯುಗದ ಕೊನೆಯಲ್ಲಿ ಕಂಸನನ್ನು ಕೊಲ್ಲಲಿಕ್ಕಾಗಿ ನಾನು ಮಥುರಾಪಟ್ಟಣದಲ್ಲಿ ಹುಟ್ಟುತ್ತೇನೆ.
ತತ್ರಾಹಂ ದಾನವಾನ್ಹತ್ವಾ ಸುಬಹೂನ್ದೇವಕಣ್ಟಕಾನ್ |
ಕುಶಸ್ಥಲೀಂ ಕರಿಷ್ಯಾಮಿ ನಿವೇಶಂ ದ್ವಾರಕಾಂ ಪುರೀಮ್ || ೯೦ || ಆಗ ನಾನು ದೇವತೆಗಳಿಗೆ ತೊಂದರೆಯನ್ನು ಕೊಡುವ ಬಹುಸಂಖ್ಯಾತರಾದ ದಾನವರನ್ನು ಸಂಹರಿಸಿ ‘ಕುಶಸ್ಥಲೀ’ ಎಂಬ ಹೆಸರಿನ ಪಟ್ಟಣವನ್ನು ದ್ವಾರಕಾಪುರಿಯನ್ನಾಗಿ ಪರಿವರ್ತಿಸಿ ಅಲ್ಲಿ ವಾಸಮಾಡಿಕೊಂಡಿರುತ್ತೇನೆ.
ಪ್ರಾಗ್ಜ್ಯೋತಿಷಂ ಪುರಂ ರಮ್ಯಂ ನಾನಾಧನಸಮನ್ವಿತಮ್ |
ಕುಶಸ್ಥಲೀಂ ನಯಿಷ್ಯಾಮಿ ಹತ್ವಾ ವೈ ದಾನವೋತ್ತಮಮ್ || ೬೨ || ದ್ವಾರಕೆಯಲ್ಲಿಯೇ ವಾಸವಾಗಿರುತ್ತಾ ನಾನು, ಅದಿತಿಗೆ ಅಪ್ರಿಯವಾದ ಕಾರ್ಯವನ್ನೇ ಪುನಃ ಪುನಃ ಮಾಡುವ ಅದಿತಿಯ ಕರ್ಣಕುಂಡಲಗಳನ್ನು ಅಪಹರಿಸುವ ಭೂದೇವಿಯ ಮಗನಾದ ನರಕಾಸುರನನ್ನೂ, ಮುರಾಸುರನನ್ನೂ, ಪೀಠನೆಂಬ ದಾನವನನ್ನೂ ಸಂಹರಿಸುತ್ತೇನೆ. ನರಕಾಸುರನನ್ನು ಸಂಹರಿಸಿ ಅವನ ಪಟ್ಟಣವಾದ, ನಾನಾಪ್ರಕಾರವಾದ ಸಮೃದ್ಧವಾದ ಸಂಪತ್ತಿನಿಂದ ಕೂಡಿದ ಪ್ರಾಗ್ಜ್ಯೋತಿಷ ಪಟ್ಟಣವನ್ನೇ ಕುಶಸ್ಥಲಿಗೆ ಅಂದರೆ ದ್ವಾರಕೆಗೆ ತಂದುಬಿಡುತ್ತೇನೆ ಎನ್ನುತ್ತಾನೆ.
ಅಂದರೆ ಇಲ್ಲಿ ಎಲ್ಲವೂ ದ್ವಾರಕೆಯನ್ನೇ ಕುಶಸ್ಥಲೀ ಎಂದಿವೆ. ಅಂದರೆ ಈ ಕುಶಸ್ಥಲಿಯನ್ನು ಪಾಂಡವರು ಕೇಳಿರಲಿಕ್ಕಿಲ್ಲ. ಅದು ಇಂದ್ರಪ್ರಸ್ಥದಿಂದಲೂ ದೂರ ಹಸ್ತಿನಾವತಿಯಿಂದಲೂ ದೂರ. ಯಕ್ಷಗಾನದ ಈ ಸ್ಥಳಗಳು ಪ್ರಾಯಶಃ ಕವಿಯ ಕಲ್ಪನೆಯ ಸ್ಥಳವಾಗಿರಬಹುದು. ಯಾಕೆಂದರೆ ಸಮೀಪದ ಯಾವ ಪ್ರದೇಶವೂ ಇದ್ದಂತಿಲ್ಲ. ಆವಂತಿಯೂ ಸಹ ದೂರದಲ್ಲಿತ್ತು. ಆದರೆ ಕೊನೆಯಲ್ಲಿ ಆವಂತಿಯಲ್ಲಿ ನಕುಲ ರಾಜ್ಯವಾಳಿದ್ದ ಎಂದು ಮಹಾಭಾರತದ ಉಲ್ಲೇಖ ಸಿಗುತ್ತದೆ. ಆದರೆ ಅದು ಐದು ಗ್ರಾಮ ಕೇಳಿದಾಗ ಅಲ್ಲ.
#ಹುಲ್ಲು_ಬೆಳೆವ_ಜಾಗ
Sadyoojath
Ravi Madodi
No comments:
Post a Comment
If you have any doubts. please let me know...