March 30, 2021

ಸಂದ್ಯಾವಂದನೆಯಲ್ಲಿ ಮಹೇ ರಣಾಯ ಚಕ್ಷಸೇ

ಮಹೇ ರಣಾಯ ಚಕ್ಷಸೇ ಎನ್ನುತ್ತಾ ಸಂಧ್ಯಾವಂದನೆ.

ಸಂಧ್ಯಾವಂದನೆ ನಿತ್ಯವೂ ಮಾಡುತ್ತೇವೆ. ಆದರೆ ಸಂಧ್ಯಾವಂದನೆಯ ಮಂತ್ರಗಳ ಉಪಯೋಗ ತಿಳಿದಿರುವುದಿಲ್ಲ. ಅಥವಾ ಅದರ ಮಹತ್ವದ ಕಡೆಗೆ ಗಮನ ಹರಿಸುವುದಿಲ್ಲ. ನೀರಿನೊಂದಿಗಿನ ಆಟದಲ್ಲಿ ಮುಗಿಸಿ ಬಿಡುತ್ತೇವೆ. ಅದೊಂದು ಸಂಪ್ರದಾಯವೋ ಕರ್ತವ್ಯವೋ ಅನ್ನುವ ಮಟ್ಟಿಗೆ ಮಾಡಿ ಮುಗಿಸುತ್ತೇವೆ. ಇಲ್ಲಿ ನಾನು ಕೇವಲ ಪ್ರೋಕ್ಷ್ಷಣ್ಯಕ್ಕೆ ಮಾತ್ರ ಬರುವೆ. 

ಇದು ಇಂದ್ರನು ವಿಶ್ವರೂಪಾಚಾರ್ಯ ಎನ್ನುವ ತನ್ನ ಪುರೋಹಿತನನ್ನೇ ಸಂಹಾರ ಮಾಡಿದಾಗ ಬ್ರಹ್ಮಹತ್ಯಾ ದೋಷ ಬರುತ್ತದೆ ಆಗ ಸಿಂಧುದ್ವೀಪ ಎನ್ನುವ ಋಷಿಯನ್ನು ಇಟ್ಟುಕೊಂಡು ತನ್ನ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಸಿಂಧು ದ್ವೀಪ ಋಷಿಯು ಪಾಪ ಪರಿಹಾರಾರ್ಥವಾಗಿ ನೀರನ್ನು ಕುರಿತು ಜಪ ಮಾಡಿ ಪಾಪ ಪರಿಹಾರವನ್ನು ಮಾಡಿಕೊಳ್ಳುತ್ತಾನೆ. ಹಾಗಾದರೆ ಆ ನೀರನ್ನು ಹೇಗೆ ಪ್ರಾರ್ಥಿಸಿದ ಎನ್ನುವುದನ್ನು ಗಮನಿಸೋಣ. ನೀರು, ಗಾಳಿ ಮತ್ತು ಬೆಂಕಿ ಇವು ಮೂರೂ ಮನುಷ್ಯನಿಗೆ ಅತ್ಯವಶ್ಯಕವಾದವು. ಇವುಗಳಲ್ಲಿ ಒಂದರ ಕೊರತೆ ಉಂಟಾದರೂ ಬದುಕು ಅಲ್ಲೋಲ ಕಲ್ಲೋಲ ನಿಶ್ಚಿತ. ಒಂದು ಅಧಿಕವಾದರೂ ಸಂಕಷ್ಟವೇ. ಪ್ರತಿಯೊಂದು ಜೀವಿಯೂ ನೀರಿಗಾಗಿ ಹಾತೊರೆಯುತ್ತದೆ. ಕಶ್ಯಪ ಮಹರ್ಷಿ ಮಳೆಗಾಗಿ ಸ್ತುತಿಸುವಾಗ ಕಪ್ಪೆಯು ನೀರಿಗಾಗಿ ಕೂಗುತ್ತದೆ. ಮೋಡವಾದ ತಕ್ಷಣ ಕೂಗುವುದು ಅದರ ಕರ್ತವ್ಯವೇನೋ ಅನ್ನಿಸಿ ಬಿಡುತ್ತದೆ. ಅಂದರೆ ಪ್ರಕೃತಿಯ ಜೊತೆ ಜೀವಿಯ ಸಂಬಂಧ ಅಗಾಧವಾದದ್ದು. ಹೌದು. ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಈ ಸೂಕ್ತದ ದೃಷ್ಟಾರ ಸಿಂಧುದ್ವೀಪ ಎನ್ನುವ ಋಷಿ. ತ್ರಿಶಿರಾಸ್ತ್ವಾಷ್ಟ್ರ ಎನ್ನುವುದು ಈ ಋಷಿಗಿರುವ ಇನ್ನೊಂದು ಹೆಸರು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.

ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಈ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ ಗಂಗೇಚ ಯಮುನೇ ಚೈವ ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.

ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||
ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ಸಾಯಂಕಾಲ ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಹಗಲಿನಲ್ಲಿ ಗೊತ್ತಾಗದೇ ಘಟಿಸಿದ ಪಾಪ ಕಾರ್ಯದ ಪರಿಮಾರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೋಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.
ಆಪೋ ಹಿ ಷ್ಠಾ ಮಯೋಭುವಸ್ತಾ ನ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || ಎನ್ನುವ ಈ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ ಕೊಡುತ್ತದೆ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು, ಈ ನೀರು ಶುದ್ಧವಾಗಿದ್ದಾಗ ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ನೀರಿನಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೆ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಈ ಋಕ್ಕಿನಲ್ಲಿ ಹೇಳಲಾಗಿದೆ.

ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ಚ ನಃ || ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಾಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ’ಶಂ ನೋ’. . . ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಈ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.
ನೀರಿನ ಕುರಿತಾಗಿ ಇನ್ನೂ ಬರೆಯಲಿಕ್ಕಿದೆ ಆದರೆ ಒಂದಂತೂ ಸತ್ಯ ಬಾಯಾರಿದಾಗ ಒಂದು ಹನಿ ನೀರು ಸಿಕ್ಕಿದರೆ ಸಾಕು ಅನ್ನಿಸುತ್ತದೆ. ನೀರಿನ ಮಹತ್ವ ವೇದಗಳಲ್ಲಿ ಬಹಳ ದೀರ್ಘವಾಗಿ ಹೇಳಲಾಗಿದೆ. ಅದನ್ನು ಸಾಧ್ಯವಾದರೆ ಬರೆಯುವೆ. ನೀರನ್ನು ಶೇಖರಿಸಿ ಮುಂದಿನ ಪೀಳಿಗೆಗೆ ಸಿಗುವಂತೆ ಈಗಲೇ ಜಾಗ್ರತೆ ವಹಿಸಿ ಕಾಪಾಡಿಕೊಳ್ಳಬೇಕಾಗಿದೆ.

#ಆಪೋ_ಹಿ_ಷ್ಠಾ
ಸದ್ಯೋಜಾತರು

No comments:

Post a Comment

If you have any doubts. please let me know...