March 11, 2021

ನಮಃ ಶಿವಾಯಚ ಶಿವತರಾಯಚ

ಪಶುಪತಿ ಎಂದು ಕರೆಸಿಕೊಳ್ಳುವ ಮೊದಲ ದೇವರೇ ರುದ್ರ ಅಥವಾ ಶಿವ. ಭವ, ಶರ್ವ, ಉಗ್ರ, ರುದ್ರ, ಮಹಾದೇವ, ಈಶಾನ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುತ್ತಾನೆ. ಅದೇನೇ ಇರಲಿ ಶಿವ ನಮಗೆ ಶಂಕರನಾಗಿರುತ್ತಾನೆ. ಒಳ್ಳೆಯದನ್ನೇ ಶಿವರಾತ್ರಿಯಂದು ಮಾಡಲಿ ಎನ್ನುವ ಹಾರೈಕೆ ಶಿವರಾತ್ರಿಯಂದು.    

ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ
ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ |
ಅಯಂ ಮೇ ವಿಶ್ವ ಭೇಷಜೋಯಂ ಶಿವಾಭಿಮರ್ಷನಃ || ಎನ್ನುವ ಈ ಋಕ್ಕಿನಲ್ಲಿ ಮರಣ ಶಯ್ಯೆಯಲ್ಲಿರುವ ಸುಬಂಧುವನ್ನು ನಿನ್ನ ಅಮೂಲ್ಯವಾದ ಹಸ್ತವು ಔಷಧವನ್ನು ನೀಡುವಂತದ್ದಾಗಿದೆ. ಆ ಹಸ್ತದಿಂದ ಬದುಕಿಸಿ ಮಂಗಳವನ್ನು ಉಂಟುಮಾಡು ಎನ್ನುವಲ್ಲಿ ಶಿವ ಎನ್ನುವುದು ಶುಭ ಸೂಚಕವಾಗಿ ಮತ್ತು ದೇವ ವೈದ್ಯನಾಗಿ ನಮಗೆ ಕಾಣಿಸುತ್ತಾನೆ.
ಒಂದನೇ ಮಂಡಲದ ೧೮೭ನೇ ಸೂಕ್ತದಲ್ಲಿಯೂ ಸಹ ಶಿವನನ್ನು ಮಂಗಳಕರ ಎಂದು ಹೇಳಲಾಗಿದೆ. "ಉಪನಃ ಪಿತ ವಾ ಚರ ಶಿವಃ ಶಿವಾಭಿರೂತಿಭಿಃ" ಎನ್ನುವುದು ಇಲ್ಲಿ ಮಂಗಲಕರವಾದದ್ದನ್ನೇ ಸೂಚಿಸುತ್ತದೆ. ಇದು ಹೆಚ್ಚಿನ ಕಡೆ ರುದ್ರನನ್ನು ಕುರಿತಾಗಿಯೇ ಹೇಳಿರುವುದು ವಿಶೇಷ. ಹಾಗಾದರೆ ರುದ್ರನ ಕುರಿತು ಬರೆಯಬೇಕೆಂದರೆ 
ಇಮಾಗ್ಂ ರುದ್ರಾಯ ತವಸೇ ಕಪರ್ಧಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತೀಃ |
. . . . ಇದು ಒಂದನೇ ಮಂಡಲದ ೧೧೪ನೇ ಸೂಕ್ತದ ಮೊದಲ ಋಕ್ಕು. ಮತ್ತು ಇದೇ ಮಂತ್ರ ಯಜುರ್ವೇದದ ರುದ್ರ ನಮಕದಲ್ಲಿಯೂ ಬರುತ್ತದೆ. ರುದ್ರನನ್ನು "ರೌತೀತಿ" ಎನ್ನುವುದರಿಂದ ರೋದನವನ್ನು ಹೇಳಿದ ಯಾಸ್ಕ ಮಹರ್ಷಿಗಳು, ರೌತಿ ಎನ್ನುವುದು ಗುಡುಗಿನಂತೆ ಶಬ್ದಮಾಡುವವನು ಎಂದು ಹೇಳುತ್ತಾ ಎರಡೂ ಅರ್ಥವನ್ನು ಹೇಳಿದ್ದಾರೆ. ಆದರೆ ರುದ್ರ ಅಂಧಕಾರವನ್ನು ಪರಿಹರಿಸಿ ಇಷ್ಟಾರ್ಥಗಳನ್ನು ನೆರವೇರಿಸುವವನು ಎನ್ನುವುದಾಗಿಯೂ ಸ್ತುತಿಯನ್ನು ಹೊಂದಿದ್ದಾನೆ. 
ಒಮ್ಮೆ ದೇವತೆಗಳಿಗೂ ಅಸುರರಿಗೂ ಘೋರ ಯುದ್ಧ ನಡೆಯುತ್ತದೆ. ಈ ಯುದ್ಧ ನಡೆಯುತ್ತಿರಬೇಕಿದ್ದರೆ, ದೇವತೆಗಳಿಂದ ಅಸುರರು ಸಂಪತ್ತುಗಳನ್ನು ದೋಚಿ ಅಡಗಿಸಿಟ್ಟಿರುತ್ತಾರೆ. ಅದನ್ನು ಗಮನಿಸಿದ ರುದ್ರನು ತನ್ನ ಚಾಣಾಕ್ಷತನದಿಂದ ಅಸುರರ ಗಮನ ಬೇರೆಡೆ ಇರುವಾಗ ಅದನ್ನು ತೆಗೆದುಕೊಂಡು ಬಂದು ತನ್ನಲ್ಲಿ ಇಟ್ಟುಕೊಳ್ಳುತ್ತಾನೆ. ದೇವತೆಗಳ ಅಸುರರ ನಡುವಿನ ಯುದ್ಧ ನಡೆಯುತ್ತದೆ. ಕೊನೆಯಲ್ಲಿ ದೇವತೆಗಳಿಗೆ ತಮ್ಮ ಸಂಪತ್ತೆಲ್ಲಾ ಎಲ್ಲಿದೆ ಎನ್ನುವುದು ತಿಳಿಯುತ್ತದೆ. ರುದ್ರನನ್ನು ಹುಡುಕಿ ಸಂಪತ್ತನ್ನು ಅವನಿಂದ ಕಿತ್ತುಕೊಳ್ಳುತ್ತಾರೆ. ಆಗ ರುದ್ರ ರೋದನ ಮಾಡುತ್ತಾನಂತೆ ಅಲ್ಲಿಂದ ರುದ್ರ ಎನ್ನುವುದಾಯಿತು ಎನ್ನುವ ಕಥೆ ಕೆಲವುಕಡೆ ಹೇಳಲಾಗಿದೆ. ಅದೇನೇ ಇರಲಿ, ಇಲ್ಲಿ ಈ ಋಕ್ಕಿನಲ್ಲಿ "ಜಟಾಧಾರಿಯಾದ ಮಹಾ ಶಕ್ತಿವಂತನಾದ ಮರುದ್ದೇವತೆಗಳನ್ನೇ ತನ್ನ ಪುತ್ರರನ್ನಾಗಿ ಪಡೆದ ಶತ್ರುನಾಶಕನಾದ ರುದ್ರ ಎನ್ನುವ ದೇವತೆಗೆ ಈ ಸ್ತೋತ್ರವನ್ನು ಅರ್ಪಿಸುತ್ತಿದ್ದೇವೆ. ಈ ಸ್ತೋತ್ರ ಪಠಿಸುವುದರಿಂದ ಮನುಷ್ಯರು ಹಾಗೂ ಪಶುಗಳಿಗೂ ಯಾವುದೇ ರೋಗಗಳ ಭಯವಿರುವುದಿಲ್ಲ. ಎಲ್ಲರಿಗೂ ಸುಖವುಂಟಾಗುತ್ತದೆ. ನಮ್ಮ ಪರಿಸರದಲ್ಲಿನ ಸಮಸ್ತರಿಗೂ ಒಳಿತಾಗಲಿಕ್ಕಾಗಿ ಈ ಸ್ತೋತ್ರ ಪಠಿತವಾಗಲಿ ಎನ್ನುವುದು ಅಭಿಪ್ರಾಯ. 

ಮುಂದಿನ ಋಕ್ಕಿನಲ್ಲಿಯೂ ರುದ್ರ ಸುಖವನ್ನುಂಟುಮಾಡುವವನು ಎನ್ನುವುದಾಗಿಯೇ ವರ್ಣಿತನಾಗಿದ್ದಾನೆ. 
’ಇದಂ ಪಿತ್ರೇ ಮರುತಾಮುಚ್ಯತೇ’ ಎನ್ನುವ ಋಕ್ಕಿನ ಕುರಿತಾಗಿ ಹೇಳುವುದಾದರೆ ರುದ್ರನು ಮರುತ್ತುಗಳಿಗೆ ತಂದೆ ಎನ್ನಲಾಗಿದೆ. 

ಇಂದ್ರನು ಅಸುರರನ್ನೆಲ್ಲಾ ಜಯಿಸಿದಾಗ ಅಸುರರ ತಾಯಿ ದಿತಿಯು ಇಂದ್ರನನ್ನು ನಿಗ್ರಹಿಸಬೇಕೆಂದು ತಪಸ್ಸನ್ನಾಚರಿಸಿ ಪತಿಯ ಸೇವೆ ಮಾಡಿ ಗರ್ಭವತಿಯಾಗುತ್ತಾಳೆ. ದಿತಿಯ ಗರ್ಭದ ಕಾರಣವನ್ನು ಇಂದ್ರ ತಿಳಿದುಕೊಂಡು ಆಕೆಯ ಸೇವೆ ಮಾಡುವ ನೆಪದಿಂದ ಬಳಿಯಲ್ಲೇ ಇದ್ದು ಸೂಕ್ತ ಸಮಯವನ್ನು ನೋಡಿಕೊಂಡು ಗರ್ಭವನ್ನು ಸೂಕ್ಷ್ಮ ಶರೀರದಿಂದ ಪ್ರವೇಶಿಸಿ ಅದನ್ನು ಏಳು ಭಾಗವನ್ನಾಗಿ ಮಾಡುತ್ತಾನೆ. ಆಭಾಗಗಳನ್ನು ಮತ್ತೆ ಏಳುಭಾಗ ಮಾಡಿದಾಗ ೪೯ ಭಾಗಗಳಾಗಿ ಕೆಳಕ್ಕೆ ಭೂಮಿಗೆ ಬೀಳುತ್ತವೆ. ಪಾರ್ವತೀ ಪರಮೇಶ್ವರರು ಸಂಚರಿಸುತ್ತಿರುವಾಗ ನೋಡುತ್ತಾರೆ. ಮತ್ತು ಅದು ಹಾಳಾಗದಂತೆ ಅವುಗಳಿಗೆ ಜೀವ ತುಂಬುವಂತೆ ಪಾರ್ವತಿ ಶಿವನಲ್ಲಿ ಕೇಳಿಕೊಂಡಾಗ, ಅವುಗಳಿಗೆ ಪರಮೇಶ್ವರನು ಜೀವತುಂಬಿ ಅವುಗಳ ಆಕಾರ ವಯಸ್ಸು ಮತ್ತು ಸಮಾನ ರೂಪ ಅಲಂಕಾರಗಳನ್ನು ಕೊಟ್ಟು ಪಾರ್ವತಿಗೆ ಇವರೆಲ್ಲಾ ನಿನ್ನ ಮಕ್ಕಳು ಎನ್ನುವುದರಿಂದ ಶಿವನು ಮರುದ್ದೇವತೆಗಳಿಗೆ ಸಹ ತಂದೆ ಎನ್ನಿಸಿಕೊಳ್ಳುತ್ತಾನೆ. ಹೀಗೆ ರುದ್ರ ಸೂಕ್ತಗಳಲ್ಲೆಲ್ಲಾ ಮಂಗಲಕಾರಕ ಎನ್ನಿಸಿಕೊಂಡಿದ್ದಾನೆ. 

ತ್ವಾ ದತ್ತೇಭೀ ರುದ್ರ ಶಂತಮೇಭಿಃ ಶತಂ ಹಿಮಾ ಅಶೀಯ ಭೇಷಜೇಭಿಃ ಎನ್ನುವ ಈ ಋಕ್ಕಿನಲ್ಲಿ ಪರಮೇಶ್ವರನನ್ನು ರೋಗನಿವಾರಕನಾದ ವೈದ್ಯ ಎನ್ನುವುದಾಗಿ ವರ್ಣಿಸಲಾಗಿದೆ. ನಮ್ಮ ದೇಹಕ್ಕೆ "ವಿಷೂಚೀಃ" ನಾನಾ ವಿಧವಾದ ರೋಗಗಳು ಅಂಟಿಕೊಳ್ಳುತ್ತವೆ. ನೀನು ಅಂತಹ ರೋಗವನ್ನು ನಮ್ಮಿಂದ ದೂರಮಾಡಿ ನಮ್ಮನ್ನು ನೂರು ಸಂವತ್ಸರಗಳ ತನಕ ಸುಖದಿಂದ ಜೀವಿಸುವಂತೆ ಅನುಗ್ರಹಿಸು ಎನ್ನುವುದು ಈ ಋಕ್ಕಿನ ಅರ್ಥ. 
"ಉನ್ನೋ ವೀರಾಗ್ಂ ಅರ್ಪಯ ಭೇಷಜೇಭಿರ್ಭಿಷಕ್ತಮಂ ತ್ವಾ ಭಿಷಜಾಂ ಶೃಣೋಮಿ" ಎನ್ನುವಲ್ಲಿ, ಮಹಾವೈದ್ಯ ಎನ್ನುವುದಾಗಿ ಕೊಂಡಾಡಲಾಗಿದೆ. ಪ್ರಜೆಗಳೆಲ್ಲರೂ ಒಂದೇ ವಿಧವಾಗಿರುವುದಿಲ್ಲ. ರೋಗಿಷ್ಠರಿರುತ್ತಾರೆ, ಪ್ರಜೆಗಳಲ್ಲಿ ಇನ್ನು ಕೆಲವರು ನಮ್ಮ ಮಾತನ್ನು ಮೀರುವವರಿರುತ್ತಾರೆ. ಹೀಗೆ ನಾನಾವಿಧವಾದ ಜನರು ಇರುವಾಗ ಅವರನ್ನೆಲ್ಲಾ ನಮ್ಮ ಅಂಕೆಯಲ್ಲಿಡುವಂತೆ ಅನುಗ್ರಹಿಸು, ಪ್ರಮುಖವಾಗಿ ವೀರ ಯೋಧರು ಯುದ್ಧಗಳಲ್ಲಿ ಗಾಯಗೊಂಡಿರುತ್ತಾರೆ ಅವರಿಗೆ ನಿನ್ನ ಔಷಧಗಳಿಂದ ಗುಣಪಡಿಸು. ನೀನು ವೈದ್ಯರಿಗೇ ವೈದ್ಯನಾಗಿರು ಎನ್ನಲಾಗಿದೆ. ಮುಂದಿನ ಋಕ್ಕಿನಲ್ಲಿ ನಿನ್ನ ಹಸ್ತ ಸ್ಪರ್ಷದಿಂದಲೇ ರೋಗಗಳು ಗುಣವಾಗುತ್ತವೆ ಅಂತಹ ಹಸ್ತ ಎಲ್ಲಿದೆ ಎಂದು ಕೇಳಲಾಗಿದೆ. 
ಕುಮಾರ್ಶ್ಚಿತ್ಪಿತರಂ ವಂದಮಾನಂ ಪ್ರತಿ ನಾನಾಮ ರುದ್ರೋಪಯಂತಂ |
ಭೂರೇರ್ದಾತಾರಂ ಸತ್ಪತಿಂ ಗೃಣೀಷೇ ಸ್ತುತಸ್ತ್ವಂ ಭೇಷಜಾ ರಾಸ್ಯಸ್ಮೇ ||
ನೂರ್ಕಾಲ ಸುಖವಾಗಿರು ಎಂದು ಆಶೀರ್ವದಿಸುವ ತಂದೆಯೆದುರು ಮಗನು ಹೇಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಳ್ಳುತ್ತಾನೋ ಅಂತೆಯೇ ಸಂಪತ್ತನ್ನು ನೀಡುವ ಮತ್ತು ಸಜ್ಜನ ಪರಿಪಾಲಕನಾದ ವೈದ್ಯನಾದ ನಿನ್ನಲ್ಲಿ ನಾನು ಆಶೀರ್ವಾದವನ್ನು ಬೇಡಿಕೊಳ್ಳುತ್ತಿದ್ದೇನೆ ಎನ್ನುವುದು ಈ ಋಕ್ಕಿನ ಅಭಿಪ್ರಾಯ. 

"ಯಾವೋ ಭೇಷಜಾ ಮತ್ರುತಃ ಶುಚೀನೀ ಎನ್ನುವಲ್ಲಿ ಮರುದ್ದೇವತೆಗಳನ್ನು ಕುರಿತು ಹೇಳಲಾಗಿದೆ. ಔಷಧಗಳು ನಿಮಗೆ ಅತ್ಯಂತ ಹತ್ತಿರದ ಸಂಬಂಧಿಗಳಾಗಿವೆ ಮತ್ತು ಔಷಧಗಳ ಜನಕ ನಿಮ್ಮ ತಂದೆಯು ಯಾವ ಔಷಧಗಳಿಂದ ರೋಗಗಳನ್ನು ಗುಣಪಡಿಸ ಬಲ್ಲನೋ ಅಂತಹ ಶುದ್ಧವಾದ ಔಷದಗಳು ನಮ್ಮ ಆರೋಗ್ಯವನ್ನು ಕಾಪಾಡಲಿ ಎನ್ನಲಾಗಿದೆ. 
ತಮು ಷ್ಟುಹಿ ಯಃ ಸ್ವಿಷುಃ ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ | ಯಕ್ಷ್ವಾ ಮಹೇ ಸೌಮನಸಾಯ ರುದ್ರಂ ನಮೋಭಿರ್ದೇವ ಮಸುರಂ ದುವಸ್ಯ || ರುದ್ರನು ಶ್ರೇಷ್ಠವಾದ ಬಾಣ ಇಟ್ಟುಕೊಂಡಿದ್ದಾನೆ. ಅಂತಹ ಬಾಣಕ್ಕೆ ಸಮನಾದ ಅಷ್ಟೇ ಖ್ಯಾತಿಯನ್ನು ಹೊಂದಿರುವ ಬಿಲ್ಲಿದೆ. ಇಂತಹ ಪರಾಕ್ರಮಿಯಾದ ಮಹಾಬಲನಾದ ಪರಶಿವನು ಜಗತ್ತಿನ ಎಲ್ಲಾ ಪ್ರಕಾರದ ಔಷಧಗಳಿಗೆ ಹಾಗೂ ಮೂಲಿಕೆಗಳಿಗೆ ಒಡೆಯನಾಗಿದ್ದಾನೆ. ಅಂತಹ ರುದ್ರನನ್ನು ನಾನು ಪೂಜ್ಯ ಭಾವನೆಯಿಂದ ಪೂಜಿಸುತ್ತೇನೆ ಎನ್ನಲಾಗಿದೆ. 

"ಯಾತೇ ದಿದ್ಯುದವಸೃಷ್ಟಾ ........... ಸಹಸ್ರಂ ತೇ ಸ್ವಪಿವಾತ ಭೇಷಜಾ" ಎನ್ನುವಲ್ಲಿ ರುದ್ರನಲ್ಲಿ ಅತ್ಯಮೋಘವಾದ ವಿದ್ಯುತ್ ಕಾಂತಿಯಿದೆ ಅದು ಜಗತ್ತನ್ನೆಲ್ಲಾ ವ್ಯಾಪಿಸಿದೆ ಎನ್ನುವುದಲ್ಲದೇ ಸಾವಿರಾರು (ಅಗಣಿತ) ಸಂಖ್ಯೆಯ ಔಷಧಗಳಿವೆ ಅವುಗಳಿಂದ ನಮಗೆ ನಮ್ಮ ಮಕ್ಕಳಿಗೆ ನಮ್ಮ ಮೊಮ್ಮಕ್ಕಳಿಗೂ ಯಾವುದೇ ರೋಗ ಬಾರದಂತಾಗಲಿ ಎಂದು ಪ್ರಾರ್ಥಿಸಲಾಗಿದೆ.

ಸ ಹಿ ಕ್ಷಯೇಣ ಕ್ಷಮ್ಯಸ್ಯ .........ದುರಶ್ಚರಾನಮೀವೋ ರುದ್ರ" ಎನ್ನುವಲ್ಲಿ ಪ್ರಜೆಗಳಿಗೆ ಸುಖವಾದ ಸಮೃದ್ಧವಾದ ಸಂತಾನ ಕರುಣಿಸು. ಹಾಗೂ ಪ್ರಜೆಗಳಲ್ಲಿ ಉಂಟಾಗುವ ರೋಗಗಳಿಗೆ ರೋಗ ಪ್ರತಿಬಂಧಕನಾಗಿರು ಎಂದು ಕೇಳಿಕೊಂಡಿರುವುದು ಪರಮೇಶ್ವರನ ಔನ್ನತ್ಯವನ್ನು ತೋರಿಸಿಕೊಡುತ್ತದೆ.

ಹೀಗೇ ರುದ್ರ ಒಬ್ಬ ವೈದ್ಯಲೋಕದ ಮೊದಲ ವೈದ್ಯನಾಗಿ ಕಾಣಿಸಿಕೊಳ್ಳುತ್ತಾನೆ. ಇದು ಕೇವಲ ವೇದದ ಉಲ್ಲೇಖವಾದರೆ ಮುಂದೆ ದಿವೋದಾಸ ಸಹ ಇದೇ ಪರಮೇಶ್ವರನ ಸಂಬಂಧಿಯೇ, ಆತನೇ ಮುಂದೆ ಧನ್ವಂತರಿಯಾಗಿ ವೈದ್ಯಲೋಕದಲ್ಲಿ ಗುರುತಿಸಿಕೊಳ್ಳುತ್ತಾನೆ. ಹೀಗೇ ಶಿವನಿಗೂ ಕಾಶಿಗೂ ಅವಿನಾಭಾವ ಸಂಬಂಧ ಬೆಳೆದು ಬಿಡುತ್ತದೆ. ಶಿವನ ಕುರಿತಾಗಿ ಹೇಳುತ್ತಾ ಹೋದರೆ ಅದು ಮುಗಿಯದ ಅಧ್ಯಾಯವಾಗುತ್ತದೆ. ಶಿವ, ಸೂರ್ಯನಷ್ಟೇ ಪ್ರಬಲ. ಮಹಾ ಪರಾಕ್ರಮಿ, ಈತ ಪಶುಗಳಿಗೆ ಒಡೆಯನಾಗಿ ಪಶುಪತಿ ಎನ್ನಿಸಿಕೊಳ್ಳುತ್ತಾನೆ. ಈತ ತನ್ನ ಜೊತೆ ಬಿಲ್ಲು ಬಾಣಗಳಿಲ್ಲದೇ ಇದ್ದದ್ದು ಅಪರೂಪ ಅಂತೆ. ಈತ ಸದಾ ಯೌವ್ವನಿ ಎಂದೂ ಹೇಳಲಾಗುತ್ತದೆ. ಅದೇನೇ ಇರಲಿ ಶಿವನಂತೂ ಜಗತ್ತಿನ ಮೊದಲ ದೇವ ವೈದ್ಯ. ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಳ್ಳಲೂ ಸಹ ಈ ಶಿವನೇ ಕಾರಣ. ಹೀಗೆ ಶಿವ ಸಂಗೀತ ಸಾಹಿತ್ಯ ವೈದ್ಯಲೋಕ ಎಲ್ಲಕಡೆ ಸುಂದರನಾಗಿ ಕಾಣಿಸಿಕೊಳ್ಳುತ್ತಾನೆ. ಯೇ ಪ್ರಥಿವ್ಯಾಂ ಯೇ ಅಂತರಿಕ್ಷೆ ಯೇ ದಿವಿ ಎಲ್ಲಾ ಕಡೆ ಇದ್ದಾನೆ.

#ನಮಸ್ತೇ_ಅಸ್ತು_
ಮೂಲ: ಸದ್ಯೋಜಾತರದ್ಸು

No comments:

Post a Comment

If you have any doubts. please let me know...