March 27, 2021

ಅಮಾತ್ಯನೆಂದರೆ.... ಋಗ್ವೇದ

ಅಮಾತ್ಯನೆಂದರೆ . . . . 

ಋಗ್ವೇದದ 10ನೇ ಮಂಡಲದ 39ನೇ ಸೂಕ್ತದ ದೃಷ್ಟಾರೆ ಬ್ರಹ್ಮವಾದಿನಿ ಎನ್ನಿಸಿಕೊಂಡಿದ್ದ ಘೋಷಾ ಎನ್ನುವವಳದ್ದು. ಈಕೆ ಕಕ್ಷೀವಂತ ಎನ್ನುವವನ ಮಗಳು. ಈ ಸೂಕ್ತ ದೃಷ್ಟಾರೆ ತೊನ್ನಿನಂತಹ ಕೆಟ್ಟ ರೋಗದಿಂದಾಗಿ ತನ್ನ ಸಹಜ ರೂಪದಿಂದ ವಿಕೃತಿ ಹೊಂದಿದ್ದಳು. ಈ ಕಾರಣದಿಂದಾಗಿ ಅರವತ್ತು ವರ್ಷ ಕಳೆಯುವ ತನಕವೂ ತನ್ನ ತಂದೆಯ ಮನೆಯಲ್ಲಿಯೇ ಉಳಿಯ ಬೇಕಾಯಿತು. ಕಾಲಾನುಕ್ರಮದಂತೆ ನಡೆಯಬೇಕಾದ ವಿವಾಹ ಸಂಸ್ಕಾರದಿಂದ ವಂಚಿತಳಾಗಿ ಪುತ್ರನನ್ನು ಪಡೆಯಲು ಅಸಮರ್ಥಳಾಗಿ ಉಳಿಯಬೇಕಾಗಿ ಬಂದಾಗ ಆಕೆಗೆ ಸಹಜವಾಗಿ ಜಿಗುಪ್ಸೆ ಕಾಡುತ್ತದೆ. ಘೋಷಾ ಸ್ವಭಾವತಃ ಸಾಧಕರ ವಂಶದಿಂದ ಬಂದವಳು. ತಾನು ಕೂಡ ಸಾಧಕಿಯಾಗಲು ನಿರ್ಧರಿಸುತ್ತಾಳೆ. ತನ್ನ ಅಜ್ಜ, ತನ್ನ ಅಪ್ಪನಂತೆಯೇ ಈಕೆ ಸಹ ಅಶ್ವಿನೀದೇವತೆಗಳ ಸಹಾಯವನ್ನು ಯಾಚಿಸಿಕೊಳ್ಳುತ್ತಾಳೆ ಅದೇ ಅವಳು ಕಂಡುಕೊಂಡ ಸೂಕ್ತಗಳಾಗುತ್ತವೆ. ಸೂಕ್ತ ದೃಷ್ಟಾರಳಾಗುತ್ತಾಳೆ. ಮುಂದೆ ಈಕೆ ತನಗೆ ಬಂದ ತೊನ್ನಿನ ರೋಗದಿಂದಗುಣಮುಖಳಾಗಿ ವಿವಾಹವಾಗಿ ಸುಹಸ್ತ್ಯ ಎನ್ನುವ ಮಗನನ್ನು ಪಡೆಯುತ್ತಾಳೆ. ಈ ರೋಗದ ಕುರಿತಾಗಿ ಮತ್ತು ಮುಪ್ಪಿನಿಂದ ಮರಳಿ ಯೌವನವನ್ನು ಪಡೆಯಬಹುದೆನ್ನುವ ಕುರಿತಾಗಿಯೂ ಸಿಗುವುದು ಇಲ್ಲಿಯೇ. ಅದೇನೇ ಇರಲಿ ನನಗೆ ಇಲ್ಲಿ ಗಮನಸೆಳೆದದ್ದು  ’ಅಮಾಜುರಶ್ಚಿದ್ಭವತೋ’ ಎಂದು ಅದೇ ಸೂಕ್ತದಲ್ಲಿ ಬರುತ್ತದೆ. ಅಂದರೆ ವಿವಾಹವಿಲ್ಲದೇ ತಂದೆಯ ಮನೆಯಲ್ಲಿಯೇ ನಾನು ಉಳಿಯಬೇಕಾಯಿತು ಎನ್ನುವ ಅರ್ಥ. ಇಲ್ಲಿ ಅಮಾ ಎನ್ನುವ ಒಂದೇ ಒಂದು ಪದವನ್ನು ನಾನು ಗಮನಿಸುವುದಾದರೆ ಅಮಾ ಎನ್ನುವುದು ಸಮೀಪಸ್ಥಾನ ಅಥವಾ ಮನೆ ಎನ್ನುವ ಅರ್ಥವನ್ನು ನೀಡುತ್ತದೆ. 
ಇನ್ನು ಬೃಹಸ್ಪತಿಯ ಮಗ ಭರದ್ವಾಜನು ಇಂದ್ರನನ್ನು ಕುರಿತು ಸ್ತುತಿಸುವ ಋಗ್ವೇದದ ಆರನೇ ಮಂಡಲದ ೨೪ನೇ ಸೂಕ್ತದಲ್ಲಿ ’ಅಮಾ ಚೈನಮರಣ್ಯೇ ಪಾಹಿ’ ಎನ್ನುವಲ್ಲಿಯತೂ ಸಹ ಮನೆಯಲ್ಲಾಗಲಿ ಅಥವಾ ಅರಣ್ಯದಲ್ಲಿಯೇ ಇರಲಿ ಕ್ಷುದ್ರಪ್ರಾಣಿಗಳಿಂದ ರಕ್ಷಿಸು ಎನ್ನುವ ಪ್ರಾರ್ಥನೆ ಇದೆ. ಇಲ್ಲಿ ಅಮಾ ಎನ್ನುವುದು ವಾಸಸ್ಥಾನ ಅಥವಾ ಗೃಹವನ್ನು ಕುರಿತಾಗಿ ಹೇಳಲಾಗಿದೆ. ಇನ್ನು ಗೃತ್ಸಮದನೆನ್ನುವ ಋಷಿಯು ಸವಿತೃದೇವತೆಯನ್ನು ಕುರಿತಾಗಿ ಸ್ತುತಿಸುವ ಎರಡನೇ ಮಂಡಲದ 38ನೇ ಸೂಕ್ತದಲ್ಲಿ ’ಕಾಮಶ್ಚರತಾಮಮಾಭೂತ್’ ಎನ್ನುವಲ್ಲಿ ಅಮಾ ದಮ ಇತಿ ಗೃಹನಾಮ ಎಂದು ಭಾಷ್ಯಕಾರರು ಹೇಳುತ್ತಾರೆ. ಅಮಾ ಎಂದರೆ ಮನೆ ಅಥವಾ ವಾಸಸ್ಥಳ. ಯುದ್ಧಕ್ಕೆ ಹೊರಟ ಯೋಧನು ಹಿಂತಿರುಗಿ ಮನೆಯನ್ನು ಸೇರುತ್ತಾನೆ ಎನ್ನವ ಸಂದರ್ಭ ಇದೆ. ಗೃತ್ಸಮದಋಷಿಯು ಇಂದ್ರನನ್ನು ಸ್ತುತಿಸುತ್ತಾ ಎರಡನೇ ಮಂಡಲದ 17ನೇ ಸೂಕ್ತದಲ್ಲಿ ’ಅಮಾಜೂರಿವ ಪಿತ್ರೋಃ ಸಚಾ ಸತೀ’ ಇದಕ್ಕೆ ಭಾಷ್ಯಕಾರರು ಯಾವಜ್ಜೀವಂ ಗೃಹೇ ಏವ ಜೀರ್ಯಂತೀ’ ಎನ್ನುತ್ತಾರೆ. ಅಂದರೆ ವೃದ್ಧಾಪ್ಯದ ತನಕವೂ ತನ್ನ ತಂದೆಯಮನೆಯಲ್ಲಿಯೇ ತಂದೆಯ ಶುಶ್ರೂಷೆಯಲ್ಲಿದ್ದದ್ದನ್ನು ಹೇಳುವುದಾಗಿದೆ. ಸಾಮಾನ್ಯವಾಗಿ ಅಮಾ ಎಂದು ನಾವು ಶಬ್ದವನ್ನು ಕೇಳುವುದು ಆಕಾಶದಲ್ಲಿ ಸೂರ್ಯನಿಲ್ಲದ ದಿನ ಅಂದರೆ ಹುಣ್ಣಿಮೆಯ ನಂತರದ ಹದಿನೈದನೆಯದಿನ. ಅಂದರೆ ಅಲ್ಲಿಯೂ ಅಮಾ ಎನ್ನುವುದು ಸಮೀಪ ಅತವಾ ಜೊತೆಯಗಿರು ಎನ್ನುವ ಅರ್ಥ ಎಂದು ಕೆಲವು ಶಬ್ದಕೋಶಗಳು ಹೇಳುತ್ತವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ೧:೫:೨ ರಲ್ಲಿ ’ಅಮೈವಾಸಾಂ ತದ್ಭವತಿ’ ಎನ್ನುವುದಾಗಿ ಬರುತ್ತದೆ. ಅಲ್ಲಿ ಅದು ಜೊತೆಗೆ, ಹತ್ತಿರದಲ್ಲಿ ಮತ್ತು ಸನಿಹ ಎನ್ನುವ ಅರ್ಥವನ್ನು ನೀಡುತ್ತದೆ.  
ಅಮಾತ್ಯ ಎಂದು ಮಂತ್ರಿಗಳಿಗೆ ಹೇಳಲಾಗುತ್ತದೆ. ಅಂದರೆ ರಾಜನ ಆಡಳಿತದ ಅಧಿಕಾರಿ ವರ್ಗ ಅದು. ಅಲ್ಲಿ ಅಮಾತ್ಯ ಎನ್ನುವುದು ಸಹ ಸದಾಕಾಲ ರಾಜನಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವವರಾಗಿ ಸಮೀಪಸ್ಥರಾಗಿರುವವರು ಅಮಾತ್ಯರು.
ಅಮಾ ಸಹ ಸಮೀಪೇ ಚ ಎಂದು ಅಮರಕೋಶದಲ್ಲಿಯೂ ಬರುತ್ತದೆ. ಅಥರ್ವ ವೇದದಲ್ಲಿ  ಗೌ ಸೂಕ್ತದಲ್ಲಿ ಹಸುವಿಗೆ ಗರ್ಭಪಾತವಾದಾಗ ಯಾವ ಆಹಾರವನ್ನು ಹತ್ತಿರದಲ್ಲಿಡಬೇಕು ಎನ್ನುವುದನ್ನು ಹೇಲಲಾಗುದೆ. ಹೀಗೇ ಅಮಾ ಎನ್ನುವುದು ಸಮೀಪ ಅಥವಾ ವಾಸದ ಸ್ಥಳ ಎನ್ನುವುದು ಸ್ಪಷ್ಟ. ಆದರೂ ಅಮಾತ್ಯ ಮತ್ತಉ ಅಮಾವಾಸ್ಯಾ ನಮಗೆ ಸುಪರಿಚಿತ ಪದಗಳು.

#ಅಮಾ_ಗೃಹ
ಸದ್ಯೋಜಾತರು

No comments:

Post a Comment

If you have any doubts. please let me know...