ನಿಮ್ಮೊಳಗಿರುವ ರಾಕ್ಷಸನ ಪರಿಚಯ ನಿಮಗಿದೆಯೇ?
ಒಬ್ಬ ಮನುಷ್ಯನಲ್ಲಿರುವ ಒಳ್ಳೆಯ ಗುಣಗಳನ್ನು ಹುಡುಕಿ ಒಳ್ಳೆಯ ಮಾತುಗಳನ್ನಾಡಿದಾಗ ನೀವು ಖಂಡಿತ ಮನುಷ್ಯ ಗಣಕ್ಕೆ ಸೇರಿದವರೆಂದು ನಿಮಗೇ ಅರಿವಾಗುತ್ತದೆ.
ಇನ್ನೊಬ್ಬರ ಕಷ್ಟ ಕಂಡು ಅಹಂಕಾರದಿಂದ ಆಡಿಕೊಳ್ಳದೆ, ಕೈಚಾಚಿ ಸಹಾಯ ಹಸ್ತ ನೀಡುವವನೂ ದೇವ ಗಣಕ್ಕೆ ಸೇರಿದವನೆಂದರೆ ತಪ್ಪಾಗಲಾರದು.
ಕೆಲವು ಮನುಷ್ಯರ ಬಾಹ್ಯ ನಡವಳಿಕೆಯಿಂದ ಹಾಗೂ ಅವರ ಅಂತರಂಗದ ಚಿಂತನೆಗಳಿಂದ ಸುಲಭವಾಗಿ ಊಹಿಸಬಹುದು.
ಅಪ್ಪ ಅಮ್ಮನ ಮಡಿಲಿನಲ್ಲಿ ಮೂಲಭೂತ ಸೌಕರ್ಯ ಪಡೆದುಕೊಳ್ಳುತ್ತಿರುವ ಬಾಲ್ಯಾವಸ್ಥೆಯಲ್ಲೂ ನಮ್ಮೊಳಗೊಬ್ಬ “ನಾನು’ ಎಂಬ ಸ್ವಾರ್ಥ ರಾಕ್ಷಸ ಬೆಳೆಯುತ್ತಿರುತ್ತಾನೆ. ಹಾಗೆಯೇ ವಯಸ್ಸಿಗೆ ಅನುಗುಣವಾಗಿ ನಮ್ಮ ಆಸೆ, ದುರಾಸೆಗಳು ಬೆಳೆಯುತ್ತಿರುತ್ತವೆ. ನಾವು ನಮ್ಮೊಳಗೆ ಹಲವು ಬಾರಿ ಲೆಕ್ಕಾಚಾರ ಹಾಕಿಕೊಂಡು ಅನಂತರ ಹೊರಗೆ ತೋರ್ಪಡಿಸಿಕೊಳ್ಳುತ್ತೇವೆ. ನಮ್ಮನ್ನು ನಾವೇ ಗಮನಿಸುತ್ತಾ ಹೋದರೆ, ನಮ್ಮ ಒಳಗಿರುವ ವ್ಯಕ್ತಿಯ ಪರಿಚಯ ನಮಗಾಗುತ್ತದೆ.
ಹೊರಗಿನ ಪ್ರಪಂಚಕ್ಕೆ ಕಾಣುವ ವ್ಯಕ್ತಿಯೇ ಬೇರೆ, ಒಳಗಿರುವ ವ್ಯಕ್ತಿಯೇ ಬೇರೆ. ಅಂದರೆ ಒಂದು ರೀತಿ ಮುಖವಾಡ ಹಾಕಿಕೊಂಡಂತೆ. ಮುಖವಾಡದಲ್ಲಿ ಕಾಣುವ ವ್ಯಕ್ತಿ ಒಬ್ಬನಾದರೆ, ಮುಖವಾಡದ ಒಳಗಿರುವ ವ್ಯಕ್ತಿ ಇನ್ನೊಬ್ಬ. ಮುಖವಾಡದಲ್ಲಿ ಕಾಣುವ ಗುಣ-ಸ್ವಭಾವ ಒಂದಾಗಿದ್ದರೆ, ಮುಖವಾಡದ ಒಳಗೆ ಇನ್ನೊಂದು ಗುಣ-ಸ್ವಭಾವ. ಈ ಒಳಗಿನ ಗುಣ-ಸ್ವಭಾವವವನ್ನು ಅರ್ಥಾತ್ ರಾಕ್ಷಸನನ್ನು ನಾವು ಹೊರಗೆ ತೋರಿಸಿಕೊಳ್ಳುವುದೇ ಇಲ್ಲ.
ರಾಕ್ಷಸ, ಮನುಷ್ಯ, ದೇವ ಗಣಗಳಿರುವ ಹಾಗೆ ಮನುಷ್ಯನಿಗೆ ಮೂರು ಗುಣಗಳು ಇರುತ್ತವೆ. ರಾಜಸಿಕ-ತಾಮಸಿಕ-ಸಾತ್ವಿಕ. ತಾಮಸ ಗುಣದವನು ಅತಿ ಪೊಗರು, ಗರ್ವ, ಅಹಂಕಾರದ ಮದದಿಂದ ಮೆರೆಯುತ್ತಿರುವವನಾದರೆ, ರಾಜಸ ಗುಣದವನು ಅಜ್ಞಾನ, ಸೋಂಬೇರಿ, ನಿರುತ್ಸಾಹಿ. ಎಲ್ಲವನ್ನೂ ಜಿಗುಪ್ಸೆಯಿಂದ ಕಾಣುತ್ತಾನೆ.
ಆದರೆ ಸಾತ್ವಿಕ ಗುಣದವನು ಮಾತ್ರ ಅರಿಷಡ್ವರ್ಗಗಳನ್ನೂ ಹಿಡಿತದಲ್ಲಿಟ್ಟುಕೊಂಡು ಎಲ್ಲವನ್ನೂ ಎಲ್ಲ ಸಂದರ್ಭಗಳಲ್ಲೂ ಸಮತೋಲನದಲ್ಲಿ ಕಾಣುತ್ತಾನೆ. ಸಾತ್ವಿಕ ಗುಣದವನು ಹೊಗಳಿಕೆಗೆ ಹಿಗ್ಗುವುದೂ ಇಲ್ಲ ತೆಗೆಳಿಕೆಗೆ ಕುಗ್ಗುವುದೂ ಇಲ್ಲ. ಚಿತ್ತ ಚಾಂಚಲ್ಯವೂ ಇಲ್ಲ. ಆದ್ದರಿಂದ ಅವನನ್ನು ಅವನೊಳಗಿರುವ ರಾಕ್ಷಸನೂ ಯಾವ ಹೊತ್ತಿನಲ್ಲೂ ಯಾವುದೇ ಅಡ್ಡದಾರಿಗೆ ಕರೆದೊಯ್ಯಲು ಸಾಧ್ಯವಿಲ್ಲ.
ನಮ್ಮಲ್ಲಿ ಕೆಲವರಿದ್ದಾರೆ, ದಿನ ಬೆಳಗಾದರೆ ಬೇರೆಯವರ ತಪ್ಪನ್ನು ಹುಡುಕುವುದೇ ಅವರ ಕೆಲಸ. ಯಾವತ್ತೂ ಇತರರ ಬಗ್ಗೆಯೇ ಅವರಿಗೆ ಚಿಂತೆ. ಯಾವ ಬಗ್ಗೆ, ಯಾವ ರೀತಿಯಲ್ಲಿ ಏನು ಕೆಟ್ಟ ಸುದ್ದಿಗಳನ್ನು ಹರಡುವುದು ಎಂಬುದೇ ಅವರ ಚಿಂತೆ, ಬೇರೆಯವರ ತಲೆಗೆ ಹುಳ ಬಿಟ್ಟು ಅವರ ಚೈತನ್ಯ ಕುಂದಿಸಲು ಹಾತೊರೆಯುವ ಕ್ಷುಲ್ಲಕ ಬುದ್ಧಿ. ಈ ಎಲ್ಲ ಬಾಲಿಶ ಹಾಗೂ ಅಪಾಯಕಾರಿ ಗುಣಗಳು 'ರಾಕ್ಷಸನ ಗಣ' ಕ್ಕೆ ಸೇರಿದವರ ಆಸ್ತಿ.
ಈ ಕೆಟ್ಟ ಗುಣಗಳನ್ನು ಇಟ್ಟುಕೊಂಡು ಮೆರೆಯುವ ವ್ಯಕ್ತಿಗಳು ತಮ್ಮ ಜೀವನವನ್ನು ತಾವೇ ಕೆಳಮಟ್ಟಕ್ಕೆ ಇಳಿಯುತ್ತಿರುತ್ತೇವೆ ಎಂಬುದರ ಅರಿಲ್ಲದಷ್ಟು ಅಲ್ಪಜ್ಞಾನಿಗಳಾಗಿರುತ್ತಾರೆ.
ಯಾವುದಕ್ಕೂ ಪ್ರತಿಕ್ರಿಯಿಸದೆ ತಾಳ್ಮೆಯಿಂದ ಎಲ್ಲವನ್ನೂ ಗೆಲ್ಲಬೇಕು. ಅದು ನಮ್ಮ ಗೆಲುವಿನ ಗುಟ್ಟೂ ಹೌದು. ಆತುರದಿಂದ ಯಾರು ಯಾರಿಗೂ ಬುದ್ಧಿ ಕಲಿಸಲು ಸಾಧ್ಯವಿಲ್ಲ. ನಿಮ್ಮೊಳಗಿರುವ ರಾಕ್ಷಸ ಆತುರದ ನಿರ್ಧಾರ ತೆಗೆದುಕೊಂಡು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಲು ಬಿಡಬೇಡಿ, ನೀವು ಅದರ ತಂಟೆಗೆ ಹೋಗಬೇಡಿ. ಬೇರೆಯವರು ಕ್ರೂರಿಗಳಂತೆ, ರಾಕ್ಷಸರಂತೆ ವರ್ತಿಸಿದರೂ ನೀವು ಅವರಂತೆ ವರ್ತಿಸುವ ಅಗತ್ಯವಿಲ್ಲ. ಅವರಂತೆ ವರ್ತಿಸಿದರೆ, ನಿಮಗೂ ಅವರಿಗೂ ವ್ಯತ್ಯಾಸವೇ ಇರುವುದಿಲ್ಲ ಅಲ್ಲದೆ ಅವರ ಕೆಟ್ಟ ಗುಣಕ್ಕೆ ನೀವೇಕೆ ಪ್ರತಿಕ್ರಿಯೆ ನೀಡಬೇಕು? ನೀವು ನೀವಾಗಿರಬೇಕೇ ಹೊರತು ನೀವು ಅವರಾಗಬಾರದು.
ರಾಕ್ಷಸ ಗುಣದವರು ಎಂದಿಗೂ ಸಾಧನೆಗೆ ಅರ್ಹರಲ್ಲ, ಅವರು ತಮ್ಮ ಕೈಯಲ್ಲಿರುವ ಸಣ್ಣ ಸಾಧನದಿಂದ ಬೇರೆಯವರ ಜೀವನವನ್ನೇ ಹಾಳುಮಾಡುವ ಶಕ್ತಿ ತಮ್ಮಲ್ಲಿದೆ ಎಂಬ ಒಣ ಜಂಭದಲ್ಲಿ ಮೈಮರೆಯುತ್ತಾರೆ. ಇದರಿಂದ ಅವರಿಗೆ ಯಾವತ್ತೂ ಜೀವನದಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಅವರು ಸಾಧನೆಯ ಪಥದಿಂದ ದೂರ ಸರಿಯುತ್ತಿರುತ್ತಾರೆ. ಕೈಯಲ್ಲಿರುವ ಸಾಧನವೇ ಸಾಧನೆ ಎಂದು ಭ್ರಮಿಸುವ ಅವರು, ಸಾಧನ ಸಾಧನೆಯಲ್ಲ ಎಂಬುದನ್ನು ಮರೆತಿರುತ್ತಾರೆ. ಅದು ಅರಿವಾಗುವ ಹೊತ್ತಿಗೆ ಕಾಲ ಕಳೆದು ಹೋಗಿರುತ್ತದೆ. ಮತ್ತೆ ಉಳಿಯೋದು ಪಶ್ಚಾತ್ತಾಪ ಮಾತ್ರವಾಗಿರುತ್ತದೆ.
ನೀವು ಸಾತ್ವಿಕ ಗುಣದವರಾಗಿದ್ದಾಗ ನಿಮಗೆ ಜೀವನದಲ್ಲಿ ಸಾರ್ಥಕತೆಯ ಗೆಲವು ನಿಶ್ಚಿತ. ಯಶಸ್ಸಿನ ಹಾದಿಯಲ್ಲೇ ಮುನ್ನಡೆಯುತ್ತೀರಿ. ರಾಕ್ಷಸನ ಗುಣದವರಿದ್ದಾಗಲೇ ಸಾತ್ವಿಕ ಗುಣದವರಿಗೆ ಒಂದು ಬೆಲೆ ಇರುವುದು. 'ಜೀವನ ಒಂದು' 'ಸುಂದರ ಯದ್ಧಭೂಮಿ'. ಇಲ್ಲಿ ಪ್ರತಿನಿತ್ಯ ಸತ್ಯ, ಧರ್ಮ ಸಂತೋಷಕ್ಕಾಗಿ ಹೋರಾಟ ಮಾಡುವುದು ನಮ್ಮ ಧರ್ಮ. ನಾವು ಗೆದ್ದಾಗ ರಾಕ್ಷಸರು ಖಂಡಿತ ಕೆಳಗೆ ಬಿದ್ದೇ ಬೀಳುತ್ತಾರೆ. ಹಾಗೆ ನಮ್ಮೊಳಗಿರುವ ಮಾನವೀಯತೆ, ಧಾರ್ಮಿಕತೆ ಹೆಚ್ಚಾಗುತ್ತಿದ್ದಂತೆ ರಾಕ್ಷಸತನ ತಾನಾಗೇ ಕಡಿಮೆಯಾಗುತ್ತದೆ.
No comments:
Post a Comment
If you have any doubts. please let me know...