March 6, 2021

ಅತ್ರಿ - ಆತ್ರೇಯ

ಒಮ್ಮೆ ಪ್ರಜಾಪತಿಯು ಒಂದು ಯಾಗವನ್ನು ನೆರವೇರಿಸುತ್ತಾನೆ. ಅದು ಮೂರು ಸಂವತ್ಸರಗಳತನಕ ನಡೆಯುವ ಯಾಗ ಅದನ್ನು ಬೃಹದ್ದೇವತಾದಲ್ಲಿ "ತ್ರಿಸಾಂವತ್ಸರಿಕ ಸತ್ತ್ರಂ ಪ್ರಜಾಕಾಮಃ" ಎಂದಿದೆ. ಅಂದರೆ ತಾನು ಪುತ್ರನೊಬ್ಬನನ್ನು ಪಡೆಯಬೇಕು ಎನ್ನುವ ಬಯಕೆ ಉಂಟಾದಾಗ ಈ ಯಾಗವನ್ನು ನೆರವೇರಿಸುತ್ತಾನೆ. ವಿಶ್ವೇದೇವತೆಗಳನ್ನು ಈ ಯಾಗದ ಸಹಾಯಕ್ಕಾಗಿ ಕರೆಸಿಕೊಂಡಿದ್ದ. ಆ ಯಾಗಕ್ಕೆ ವಾಗ್ದೇವತೆಯಾದ ಸರಸ್ವತಿ ಮನುಷ್ಯರೂಪದಲ್ಲಿ ಬಂದಿದ್ದಳಂತೆ, ಅವಳ ಸೌಂದರ್ಯವನ್ನು ನೋಡಿದ ಪ್ರಜಾಪತಿ ಮತ್ತು ವರುಣ ಇಬ್ಬರಿಗೂ ಮನೋವೈಕಲ್ಯ ಉಂಟಾಗಿ ಚಿತ್ತ ಚಾಂಚಲ್ಯರಾಗುತ್ತಾರೆ. ವಾಗ್ದೇವಿಯನ್ನು ನೋಡಿದ ತಕ್ಷಣ ಕಾಮವಿಕಾರಕ್ಕೊಳಗಾಗುತ್ತಾರೆ. ರೇತಸ್ಸು ಜಾರುತ್ತದೆ. ಪ್ರಜಾಪತಿ ಮತ್ತು ವರುಣರು ಸ್ಖಲಿತರಾಗುತ್ತಾರೆ. ಸ್ಖಲಿತವಾದ ರೇತಸ್ಸನ್ನು ವಾಯುವು ಮನಬಂದಂತೆ ಅಗ್ನಿಯಲ್ಲಿ ಚೆಲ್ಲಿ ಬಿಡುತ್ತಾನೆ. ಅಗ್ನಿಯಿಂದ ಭೃಗು ಮತ್ತು ಅಗ್ನಿಯ ಕೆಂಡದಿಂದ ಅಂಗಿರಾ ಹುಟ್ಟುತ್ತಾರೆ. (ಅಂಗಾರ ಎಂದರೆ ಕೆಂಡ). ವಾಗ್ದೇವಿ ಅಂಗಿರಾ ಮತ್ತು ಭೃಗುವಿನ ಜನನವನ್ನು ನೋಡುತ್ತಾಳೆ, ಅದೇ ಸಮಯಕ್ಕೆ ಪ್ರಜಾಪತಿಯೂ ವಾಗ್ದೇವಿಯನ್ನು ನೋಡುತ್ತಾನೆ. ಈ ಇಬ್ಬರು ಪುತ್ರರಿಗಿಂತಲೂ ಮೂರನೆಯ ಪುತ್ರನನ್ನು ಪಡೆಯಬೇಕೆನ್ನುವ ಇಚ್ಚೆಯನ್ನು ವಾಗ್ದೇವಿ ವ್ಯಕ್ತ ಪಡಿಸುತ್ತಾಳೆ. "ಋಷಿರತ್ರಿಸ್ತತೋ ಜಜ್ಞೇ ಸೂರ್ಯಾನಲ ಸಮದ್ಯುತಿಃ" (ಬೃಹದ್ದೇಶಿ) ಈ ಕೋರಿಕೆಯನ್ನು ಪ್ರಜಾಪತಿಯು ಬಹಳ ಸಂತೋಷದಿಂದ ಒಪ್ಪಿಳ್ಳುತ್ತಾನೆ. ಮೂರನೆಯ ಪುತ್ರನಾಗಿ ಅತ್ರಿಯ ಜನನ ವಾಗ್ದೇವಿಯಿಂದಾಗುತ್ತದೆ. ಸೂರ್ಯನ ಪ್ರಭೆಯಂತೆ ಇವನ ತೇಜಸ್ಸು ಮತ್ತು ಅಗ್ನಿಯಂತೆ ಪ್ರಭೆಯನ್ನು ಹೊಂದಿದ್ದನಂತೆ. ಅಂಗಿರಾ ಮತ್ತು ಭೃಗುವಿನ ಜನದ ಕುರಿತು ಶತಪಥ ಬ್ರಾಹ್ಮಣದಲ್ಲಿ ಹೀಗೆ ಹೇಳಲ್ಪಟ್ಟಿದೆ "ಮನಸ್ಸಿಗೂ ಮತ್ತು ಮಾತಿಗೂ ತಮ್ಮ ತಮ್ಮ ವಯಕ್ತಿಕವಾದ ವೈಶಿಷ್ಟ್ಯವಾದ ವೈಶಮ್ಯ ಉಂಟಾದಾಗ ಪ್ರಜಾಪತಿ ಮನಸ್ಸಿಗೆ ಹೆಚ್ಚು ಮಹತ್ವಕೊಟ್ಟು ಮನಸ್ಸಿನ ಪರವಾಗಿ ನಿಂತನಂತೆ" ಇದರಿಂದ ಮಾತು ಅಥವಾ ವಾಕ್ ಗೆ ಬೇಸರವಾಯಿತಂತೆ. ಇಲ್ಲಿ ನಾವು ಗಮನಿಸಬೇಕಾದದ್ದು ಹಾಗಾದರೆ ವಾಗ್ದೇವಿಯನ್ನು ಗಮನಿಸಿದ ಪ್ರಜಾಪತಿಗೆ ಅನುರಾಗ ಹುಟ್ಟಿದ್ದು ನಿಜವೇ ? ಸ್ಖಲನವಾಗಿದ್ದು ? ಇವೆಲ್ಲಾ ಸಾಂಕೇತಿಕ ಅರ್ಥವನ್ನು ನೀಡುತ್ತವೆ. ಅದೇನೇ ಇರಲಿ, ಪ್ರಜಾಪತಿಯಿಂದ ವಾಗ್ದೇವಿಯಲ್ಲಿ ಅತ್ರಿಯ ಜನನವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅತ್ರಿ ವಾಗ್ದೇವಿಯ ಪುತ್ರನೂ ಹೌದು ಪ್ರಜಾಪತಿಯ ಮಗನೂ ಹೌದು. "ಆತ್ರೇಯಾಯ ಹಿರಣ್ಯಂ ದದಾತಿ ಯತ್ರ ವಾ ಅದಃ ...." ಎನ್ನುವಲ್ಲಿ, ಒಮ್ಮೆ ವಾತಾವರಣ ನಿಶ್ಶಬ್ದವಾಗಿತ್ತು ಮಂತ್ರಘೋಷಗಳು ಮೊಳಗುತ್ತಿದ್ದವು, ಯಜ್ಞವೇದಿಯ ಮುಂಭಾಗದಲ್ಲಿ ಋತ್ವಿಜರು ಪ್ರಾತರನುವಾಕವನ್ನು ಸ್ಪಷ್ಟವಾದ ಧ್ವನಿಯಲ್ಲಿ ಉಚ್ಚರಿಸುತ್ತಿದ್ದರು, ಆ ಸಮಯಕ್ಕೆ ಅತ್ರಿಯು ಹೋತೃವಾಗಿದ್ದನು, ಅಂತಹ ಸಮಯದಲ್ಲಿ ಆ ಪ್ರದೇಶವನ್ನು ಆಸುರೀ ಶಕ್ತಿಯೊಂದು ಕಗ್ಗತ್ತಲಿನಿಂದ ಆವರಿಸಿತು. ಆಗ ಉಳಿದ ಋಷಿಗಳೆಲ್ಲಾ ಅತ್ರಿಯನ್ನು ಕಗ್ಗತ್ತಲೆಯನ್ನು ಪರಿಹರಿಸುವಂತೆ ಪ್ರಾರ್ಥಿಸುತ್ತಾರೆ. ಅತ್ರಿಯು ಬಂದು ಕಗ್ಗತ್ತಲೆಯನ್ನು ನಿವಾರಿಸುತ್ತಾನೆ. ಅದನ್ನೇ ಶತಪಥ ಬ್ರಾಹ್ಮಣದಲ್ಲಿ "ತತ್ತೇಜಸಾ ವೀರ್ಯೇಣ ........ ಏತೇನೈಮೈತಜ್ಜ್ಯೋತಿಷಾ ತಮೋಪಹಂತಿ ತಸ್ಮಾದಾತ್ರೇಯಯ ಹಿರಣ್ಯಂ ದಧಾತಿ. ಎನ್ನಲಾಗಿದೆ. ಅತ್ರಿಯು ಜ್ಯೋತಿಯ ಸ್ವರೂಪನಾಗಿದ್ದನು ಅವನ ಪ್ರಭೆಯಿಂದ ಕಗ್ಗತ್ತಲಿನ ನಿವಾರಣೆಯಾಯಿತು ಎನ್ನಲಾಗಿದೆ.
( ಮೂಲ ಶ್ರೀ ಸದ್ಯೋಜಾತರು )

No comments:

Post a Comment

If you have any doubts. please let me know...