ತ್ರಿಶಂಕುರ್ಲೋಹಿತಾಂಗಶ್ಚ ಬೃಹಸ್ಪತಿಬುಧಾವಪಿ | ದಾರುಣಾಃ ಸೋಮಮಭ್ಯೇತ್ಯ ಗ್ರಹಾಃ ಸರ್ವೇ ವ್ಯವಸ್ಥಿತಾಃ ಇದು ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಬರುವ ಶ್ಲೋಕ.
ಶ್ರೀರಾಮನು ಅರಣ್ಯಕ್ಕೆ ಹೋಗುತ್ತಾನೆ. ಇತ್ತ ಆಹಿತಾಗ್ನಿಗಳು ಅಗ್ನಿಹೋತ್ರಗಳನ್ನು ಮಾಡಲಿಲ್ಲ. ಗೃಹಸ್ಥರಾದವರು ಪಾಕಯಜ್ಞವನ್ನು ಮಾಡಲಿಲ್ಲ. ಪಾಕಯಜ್ಞ ಅಂದರೆ ಇಲ್ಲಿ ಸಂಸಾರಿಗಳು ಅಡುಗೆಮಾಡಲಿಲ್ಲ ಎಂದು. ಪ್ರಜೆಗಳು ತಮ್ಮ ದೈನಂದಿನಕಾರ್ಯಗಳಲ್ಲಿ ಉದಾಸೀನರಾಗುತ್ತಾರೆ. ಸೂರ್ಯನೂ ಅಸ್ತಂಗತನಾದನು. ಗಜಶಾಲೆಯಲ್ಲಿದ್ದ ಆನೆಗಳು ಮುಂದಿದ್ದ ಆಹಾರವನ್ನು ಮುಟ್ಟಲಿಲ್ಲ. ಶ್ರೀರಾಮನನ್ನು ಆಗಲಿದ ದುಃಖದಿಂದ ಹಸುಗಳು ಕರುಗಳಿಗೆ ಹಾಲುಣಿಸಲಿಲ್ಲ. ಆ ಸಮಯದಲ್ಲಿ ಸ್ತ್ರೀಯರು ಚೊಚ್ಚಲ ಗಂಡುಮಗುವನ್ನು ಪಡೆದರೂ ಸಂತೋಷಗೊಳ್ಳಲಿಲ್ಲ. ಹೀಗೇ ಅಯೋಧ್ಯೆಯ ರಾಜಬೀದಿಗಳು ಬಿಕೋ ಎನ್ನುತ್ತಿದ್ದವು. ಅದೊಂದು ದುಃಖದ ಅಥವಾ ಸೂತಕದ ಊರಾಗಿತ್ತು. ಇವೆಲ್ಲ ಅಲ್ಲಿನ ವಾತಾವರಣವಾಗಿತತ್ತು. ಆದರೆ ನನ್ನ ಗಮನವಿರುವುದು ಮೇಲಿನ ಶ್ಲೋಕದ ಕುರಿತಾಗಿ. ಇಲ್ಲಿ ಈ ಶ್ಲೋಕದಲ್ಲಿ ತ್ರಿಶಂಕು ಎನ್ನುವುದಾಗಿ ಬರುತ್ತದೆ. ತ್ರಿಶಂಕು ಎಂದರೆ ಶನಿಗ್ರಹ. ಹನ್ನೆರಡನೆಯ, ಎಂಟನೆಯ ಮತ್ತು ಜನ್ಮದ ಸ್ಥಾನಗಳಲ್ಲಿ ತ್ರಿಶಂಕುವಿನಂತೆ ಇರುವವನು ಎಂದು ಕೆಲವರ ಅಭಿಪ್ರಾಯ. ಇನ್ನು ಕೆಲವರ ಅಭಿಪ್ರಾಯದಂತೆ ತ್ರಿಶಂಕು ಎಂದರೆ ಕುಜ, ಗುರು ಮತ್ತು ಬುಧ ಗ್ರಹಗಳು ಚಂದ್ರನಿಗೆದುರಾಗಿರುವುದು ಎನ್ನುತ್ತಾರೆ. ಇನ್ನು ಪುರಾಣದ ಕಥೆಯಂತೆ ತ್ರಿಶಂಕುವು ಇಕ್ಷ್ವಾಕುವಂಶದ ಒಬ್ಬ ರಾಜ. ಸತ್ಯವ್ರತ ಅಂತ ಒಬ್ಬ ಸೂರ್ಯವಂಶದ ರಾಜ ಇದ್ದ. ಇಕ್ಷ್ವಾಕು ವಂಶದಲ್ಲಿ ಜನಿಸಿದವನು. ಈ ಸತ್ಯವ್ರತನಿಗೂ ಸಹ ತಾನು ಸಶರೀರನಾಗಿ ದೇವಲೋಕಕ್ಕೆ ಅಂದರೆ ಸ್ವರ್ಗಕ್ಕೆ ಹೋಗಬೇಕು ಎನ್ನುವ ಆಸೆ. ತನ್ನ ಪುರೋಹಿತರಾದ ವಶಿಷ್ಠರಲ್ಲಿ ಕೇಳಿದ. ಅವರು ಧರ್ಮ ಸೂಕ್ಷ್ಮಗಳನ್ನು ತಿಳಿಸಿ ಸಶರೀರನಾಗಿ ಸ್ವರ್ಗಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳಿದರು. ಅವರ ಮಕ್ಕಳಲ್ಲಿ ಕೇಳಿದ ಅವರು ಸಹ ಆಗುವುದಿಲ್ಲ ಮತ್ತು ತಂದೆಯ ಮಾತಿಗೆ ಗೌರವ ಕೊಡದ ನೀನು ಚಾಂಡಾಲನಾಗು ಎಂದು ಶಾಪಕೊಟ್ಟರು. ಆದರೆ ಸತ್ಯವ್ರತ ಛಲಗಾರ ನೇರವಾಗಿ ವಿಶ್ವಾಮಿತ್ರರಲ್ಲಿ ಕೇಳಿಕೊಂಡ. ವಿಶ್ವಾಮಿತ್ರ ಮಹರ್ಷಿ ಅದನ್ನು ಒಂದು ಪಂಥಾಹ್ವಾನವಾಗಿ ಸ್ವೀಕರಿಸಿದರು. ಸತ್ಯವ್ರತನನ್ನು ಸಶರೀರನಾಗಿ ಮೇಲಕ್ಕೆ ಕಳುಹಿಸುತ್ತಾರೆ. ಆದರೆ ಇಂದ್ರ ಆತನಿಗೆ ಪ್ರವೇಶಕೊಡದೇ ಸಶರೀರನಾಗಿ ಬರುವಂತಿಲ್ಲ ಎಂದು ಕೆಳಕ್ಕೆ ದೂಡಿದ ಸತ್ಯವ್ರತ ಅತಂತ್ರನಾಗಿ ಕೆಳಕ್ಕೆ ಬರುವಾಗ ವಿಶ್ವಾಮಿತ್ರ ಸತ್ಯವ್ರತನನ್ನು ತಡೆದು ನಿಲ್ಲಿಸಿ ಪ್ರತಿಸ್ವರ್ಗವನ್ನು ನಿರ್ಮಿಸುತ್ತಾರೆ. ಅಲ್ಲಿಂದ ಮುಂದೆ ಆತನಿಗೆ ತ್ರಿಶಂಕು ಎನ್ನುವ ಹೆಸರಾಗುತ್ತದೆ. ಈತನ ಮಗನೇ ಸತ್ಯಹರಿಶ್ಚಂದ್ರ. ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ವಿಶ್ವಾಮಿತ್ರರು ಸತ್ಯವ್ರತನನ್ನು ನಿಲ್ಲಿಸಿದ್ದು ಸೂರ್ಯನಿಂದಲೂ ಗುರುತ್ವ ಇರದ, ಮತ್ತು ಭೂಮಿಯೂ ತನ್ನೆಡೆಗೆ ಸೆಳೆಯದ ಪ್ರದೇಶದಲ್ಲಿ. ಮುಂದೆ ಈತ ವಿಶ್ವಾಮಿತ್ರರ ಅನುಗ್ರಹದಿಂದ ವಿಶಿಷ್ಟಸ್ವರ್ಗವನ್ನು ಪಡೆದು ನಕ್ಷತ್ರವೊಂದರ ಅಧಿದೇವತೆಯಾಗುತ್ತಾನೆ. ತ್ರಿಶಂಕುವು ಒಂದು ನಕ್ಷತ್ರವೇ ಹೊರತು ಗ್ರಹವಲ್ಲ. ಆದರೆ ಗ್ರಹಗಳ ಮಧ್ಯದಲ್ಲಿ ಸೇರಿರುವುದರಿಂದ ‘ಛತ್ರಿನ್ಯಾಯ’ದಿಂದ ಗ್ರಹವೆಂದು ಕರೆಯಲ್ಪಟ್ಟಿದೆ. ಛತ್ರಿ ಹಿಡಿದುಕೊಂಡಿರುವವರ ಮಧ್ಯದಲ್ಲಿ ಛತ್ರಿ ಹಿಡಿದುಕೊಳ್ಳದೇ ಇರುವವನೂ ಒಬ್ಬನಿದ್ದರೆ ಅವನಿಗೂ ‘ಛತ್ರೀ’ ಅಥವಾ ‘ಛತ್ರಿ ಹಿಡಿದಿರುವವನು’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಈ ಶ್ಲೋಕದಲ್ಲಿ ತ್ರಿಶಂಕು ಎನ್ನುವುದು ಬೇರೆಯೇ ಅರ್ಥದಲ್ಲಿ. ಮಂಗಲಗ್ರಹ, ಗುರು, ಬುಧಗ್ರಹರೂ, ಇತರ ಗ್ರಹಗಳೂ ಕ್ರೂರವಾದ ಕಾಂತಿಯನ್ನು ಹೊಂದಿ ಚಂದ್ರನ ಸಮೀಕ್ಕೆ ಬಂದರು ಎನ್ನುವ ಅರ್ಥದ ಈ ಶ್ಲೋಕವನ್ನು ಗಮನಿಸಿದರೆ, ಪ್ರಾಯಶಃ ಸ್ವಲ್ಪ ತಪ್ಪಿರಬಹುದು ಅನ್ನಿಸುತ್ತದೆ. ’ಅಭ್ಯೇತ್ಯ’ ಎಂದರೆ ಸಮೀಪಿಸಿದೆ ಎಂದಾಗುತ್ತದೆ. ಮಂಗಲ ಗ್ರಹ ಸೂರ್ಯನ ಹತ್ತಿರದಲ್ಲಿತ್ತು. ’ಅವಷ್ಟಬ್ದಂಚ ಮೇ ರಾಮ ನಕ್ಷತ್ರಂ ದಾರುಣ’ ಮುಂತಾದ ಶ್ಲೋಕಗಳು ಇದನ್ನೇ ಹೇಳಿದ್ದು. ಮತ್ತು ಬುಧಗ್ರಹ ಯಾವಾಗಲೂ ಸೂರ್ಯನ ಸಮೀಪವೇ ಇರುವ ಗ್ರಹ. ಆದುದರಿಂದ ಅವುಗಳು ಚಂದ್ರನ ಸಮೀಪಕ್ಕೆ ಹೋಗಲಾರವು. ಸೂರ್ಯನೂ ಸಹ ಪುಷ್ಯಾ ನಕ್ಷತ್ರದಿಂದ ಚೈತ್ರಮಾಸದಲ್ಲಿ ದೂರವೇ ಇರುತ್ತಾನೆ. ತ್ರ್ರಿಶಂಕುವೂ ಸಹ ಗ್ರಹಗಳ ದಾರಿಯಿದ ದೂರವಿರುವುದರಿಂದ ಚಂದ್ರನಿಗೆ ಹತ್ತಿರಬರಲು ಸಾಧ್ಯವಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಚಂದ್ರನಿಗೆ ಎದುರಾಗಿ ಬಂದಿರಬಹುದೇ ಹೊರತು ಹತ್ತಿರ ಬಂದಿರಲಿಕ್ಕಿಲ್ಲ. ಅದೇನೇ ಇರಲಿ ನನಗದು ಅರ್ಥವಾಗುವುದಿಲ್ಲ ಖಗೋಲ ವಿಜ್ಞಾನ ಗೊತ್ತಿರುವವರಿಗೆ ಅರ್ಥವಾಗುತ್ತದೆ. ಆದರೆ ಇಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಾದುದು ಸತ್ಯವ್ರತ ಎನ್ನುವವನು ನಿಜವಾಗಿ ಇದ್ದನೇ ? ಅಥವಾ ವಿಶ್ವಾಮಿತ್ರರೇ ಖಗೋಲ ವಿದ್ಯಮಾನಗಳನ್ನು ತಿಳಿದ ವಿಜ್ಞಾನಿಯಾಗಿದ್ದು ಭೂಮಿಯಿಂದ ಕಕ್ಷೆಗೆ ಸೇರಿಸಿರಬಹುದೇ. ಅಂತೂ ಅರ್ಚನ್ ಎನ್ನುವ ಮಹರ್ಷಿಯೊಬ್ಬ ಗುರುತ್ವದ ಕುರಿತು ಹೇಳಿದ್ದು ಗಮನಿಸಿದರೆ ವಿಶ್ವಾಮಿತ್ರಮಹರ್ಷಿಗಳೂ ಅಸಾಧಾರಣ ವ್ಯಕ್ತಿತ್ವ ಹೊಂದಿದ್ದರು. ಅಂದರೆ ಖಗೋಲ ವಿದ್ಯಮಾನವನ್ನು ಕಥಾರೂಪದಲ್ಲಿ ಹೇಳಲಾಗಿದೆ.
#ತ್ರಿಶಂಕು_ವಿಶ್ವಾಮಿತ್ರ
Sadyojath
No comments:
Post a Comment
If you have any doubts. please let me know...