ಸ್ವಭಾವಂ ನೈವ ಮುಂಚಂತಿ ಸಂತಃ ಸಂಸರ್ಗತೋsಸತಾಮ್ ।
ನ ತ್ಯಜಂತಿ ರುತಂ ಮಂಜು ಕಾಕಸಂಪರ್ಕತಃ ಪಿಕಾಃ ।।
ಇದರ ತಾತ್ಪರ್ಯ ಹೀಗೆ: 'ದುಷ್ಟರ ಸಂಸರ್ಗ ಒದಗಿದರೂ ಸಜ್ಜನರು ತಮ್ಮ ಸ್ವಭಾವವನ್ನು ಬಿಡುವುದಿಲ್ಲ. ಕಾಗೆಗಳ ಸಂಪರ್ಕದಲ್ಲಿದ್ದರೂ ಕೋಗಿಲೆಗಳು ತಮ್ಮ ಮಧುರವಾದ ಸ್ವರವನ್ನು ಬಿಡುವುದಿಲ್ಲ.'
ಸಹವಾಸದಿಂದ ಸನ್ಯಾಸಿ ಕೆಟ್ಟ - ಎಂಬ ಮಾತಿದೆ. ಎಂದರೆ ಎಷ್ಟೋ ಒಳ್ಳೆಯವರಾದರೂ ಕೆಟ್ಟ ಸಹವಾಸದಿಂದ ಅವರೂ ಕೆಟ್ಟವರಾಗಿ ಬದಲಾಗುತ್ತಾರೆ ಎಂಬುದು ಈ ಮಾತಿನ ಅರ್ಥ. ಆದರೆ ಎಂಥ ನೀಚನ ಸ್ನೇಹದಲ್ಲಿದ್ದರೂ ಸಜ್ಜನರು ಮಾತ್ರ ಸ್ವಲ್ಪವೂ ಬದಲಾಗುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡುತ್ತಿದೆ ಈ ಸುಭಾಷಿತ.
ಬಂಗಾರ ಯಾವ ಲೋಹದ ಜೊತೆಯಲ್ಲಿಯೇ ಇದ್ದರೂ ಅದು ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲವಷ್ಟೆ.
ಅಂತೆಯೇ ರತ್ನ ಅದು ಎಲ್ಲಿಯೇ ಇದ್ದರೂ ತನ್ನತನವನ್ನು ಕಳೆದುಕೊಳ್ಳುವುದಿಲ್ಲ, ಅಲ್ಲವೆ?
ಇಲ್ಲಿ ಸುಭಾಷಿತ ಉಪಯೋಗಿಸಿಕೊಂಡಿರುವ ಉದಾಹರಣೆಯೂ ಸೊಗಸಾಗಿದೆ. ಕಾಗೆಯೂ ಕಪ್ಪು, ಕೋಗಿಲೆಯೂ ಕಪ್ಪು; ಕಾಗೆಯ ಜೊತೆ ಕೋಗಿಲೆಯೂ ಇದೆ ಎಂದಿಟ್ಟುಕೊಳ್ಳೋಣ. ಅಷ್ಟು ಮಾತ್ರದಿಂದಲೇ ಕೋಗಿಲೆ ತನ್ನ ಇಂಪಾದ ಕಂಠವನ್ನು ಕಳೆದುಕೊಳ್ಳುತ್ತದೆಯೆ? ಹೀಗೆಯೇ ದುಷ್ಟರ ಸನಿಹದಲ್ಲಿದ್ದ ಮಾತ್ರಕ್ಕೆ ಸಜ್ಜನರು ದುಷ್ಟರು ಆಗುವುದಿಲ್ಲ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ವಿಭೀಷಣ. ಅವನು ರಾವಣಾದಿ ರಾಕ್ಷಸರ ಮಧ್ಯೆ ಇದ್ದರೂ, ಅದೇ ಕುಟುಂಬದಲ್ಲಿ ಜನಿಸಿದ್ದರೂ ತನ್ನ ಸಾತ್ವಿಕಸಂಪತ್ತನ್ನು ಅವನು ಕಳೆದುಕೊಳ್ಳಲಿಲ್ಲವಲ್ಲ!
ಸಜ್ಜನರ ಈ ದೃಢತೆಗೆ ಕಾರಣವೇನು?
ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ।
ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತು ಮರ್ಹತಿ ।।
ಎಂದರೆ 'ಲೋಕೋತ್ತರರಾದವರ ಮನಸ್ಸು ವಜ್ರಕ್ಕಿಂತಲೂ ಕಠಿನವಾಗಿರುವುದು; ಮತ್ತೊಮ್ಮೆ ಹೂವಿಗಿಂತಲೂ ಮೃದುವಾಗಿರುವುದು. ಇಂಥ ಮನಸ್ಸನ್ನು ತಿಳಿಯಬಲ್ಲವರು ಯಾರು ತಾನೆ ಇದ್ದಾರು?'
ಸಜ್ಜನರು ತಮ್ಮ ವ್ಯಕ್ತಿತ್ವನ್ನು ಉಳಿಸಿಕೊಳ್ಳಲು ಎಂಥ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರುತ್ತಾರೆ.
ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು
ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್ ।
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ
ನ್ಯಾಯ್ಯಾತ್ಪಥಃ ಪ್ರವಿಚಲಂತಿ ಪದಂ ನ ಧೀರಾಃ ।।
'ನೀತಿಯನ್ನು ಅರಿತವರು ನಿಂದಿಸಿದರೂ ಸರಿ, ಸ್ತುತಿಸಿದರೂ ಸರಿ; ಸಿರಿ ಬಂದರೂ ಸರಿ, ಅದು ಹೋದರೂ ಸರಿ; ಇಂದೇ ಸಾವು ಸಂಭವಿಸಿದರೂ ಸರಿ, ಯುಗಾಂತರದಲ್ಲಿ ಸಂಭವಿಸಿದರೂ ಸರಿ; ಧೀರರು ನ್ಯಾಯಮಾರ್ಗದಿಂದ ಒಂದೇ ಒಂದು ಹೆಜ್ಜೆಯನ್ನು ಕೂಡ ಚಲಿಸುವುದಿಲ್ಲ.'
No comments:
Post a Comment
If you have any doubts. please let me know...