ಹಿರಿಯರ ಕಟ್ಟು ಕಥೆಯೊಳಗೊಂದು ವೈಜ್ಞಾನಿಕ ಗೂಢಾರ್ಥವಿದೆ.
ಈಗಿನ ಕೆಲ ಡಬ್ಬಾ ಸಿನಿಮಾ ಸೀರ್ಯಲ್ ಕಥೆಗಳಂತಲ್ಲ.
ನನ್ನ ತಂದೆಯವರು ಹೇಳಿದ ಕಥೆಯಿದು.ಬಹುಷಃ ಅವರಿಗೆ ಅವರ ಹಿರಿಯರು ಹೇಳಿರಬಹುದು.
ಒಮ್ಮೆ ಬುಧನಿಗೆ ಮತ್ತು ಶುಕ್ರನಿಗೆ ವಿಪರೀತ ಕಲಹವಾಯ್ತಂತೆ. ಅದು ಎಲ್ಲಿಯವರೆಗಿತ್ತು ಎಂದರೆ ಬುಧ ಹೋದಲ್ಲಿ ಶುಕ್ರ ಹೋಗಲಾರದ ಆಣೆ ಪಾಣೆ.ಹನ್ನೆರಡು ವರ್ಷ ಹೀಗೇ ಮುಂದುವರಿಯಿತಂತೆ .ಬುಧ ಶುಕ್ರರು ಮಿಲನವಾಗದೆ ಇದ್ದರೆ ಮಳೆ ಬರುವುದಿಲ್ಲ. ಹೀಗಾಗಿ ಹನ್ನೆರಡು ವರ್ಷ ಮಳೆ ಇಲ್ಲ.ಮಳೆ ಇಲ್ಲದೆ ಬೆಳೆಯೂ ಇಲ್ಲ. ಕೊನೆಗೆ ಪ್ರಜೆಗಳು ಸೂರ್ಯನಿಗೆ ಮೊರೆ ಹೊಕ್ಕರಂತೆ.ಆಗಲಿ,ನಾನು ಸರಿ ಮಾಡುತ್ತೇನೆ ಎಂದು ಸೂರ್ಯನು ತನ್ನ ಮನೆಯಲ್ಲೊಂದು ಕಾರ್ಯಕ್ರಮ ಇಟ್ಕೊಂಡ.ಎಲ್ಲರಿಗೂ ಹೇಳಿಗೆ ಮಾಡ್ತಾ ಬಂದಾಗ ಬುಧನು ಹೇಳಿದಂತೆ. " ಆ ಕಳ್ಳ ಶುಕ್ರ ಬರ್ತಾನಾ? ಅವ ಬಂದಲ್ಲಿಗೆ ನಾನು ಬರೊಲ್ಲ" ಎಂದನಂತೆ.ಶುಕ್ರನಿಗೆ ಹೇಳಿಗೆ ಮಾಡುವಾಗಲೂ ಇದೇ ಡೈಲಾಗು.ಇಬ್ಬರಿಗೂ ರವಿಯು,
"ಎಲ್ಲಾದ್ರೂ ಉಂಟೇನಯ್ಯಾ? ನೀನು ನನ್ನ ಸ್ನೇಹಿತ.ನಿನಗೆ ಅನ್ಯಾಯ ಮಾಡಿದವನ ನೆರಳೂ ನನಗೆ ಬೀಳಬಾರದು.ಹಾಗಾಗಿ ಅವನನ್ನೊಬ್ಬನನ್ನು ಬಿಟ್ಟು ಎಲ್ರಿಗೂ ಹೇಳಿಗೆ ಮಾಡಿದ್ದೇನೆ," ಎಂದು ಇಬ್ರಲ್ಲೂ ಈ ಸೂರ್ಯಣ್ಣ ಹೇಳ್ತಾನೆ.
'ಸರಿ' ಎಂದು ಇಬ್ಬರೂ ಒಪ್ಪಿಕೊಂಡು ರವಿಯಣ್ಣನ ಮನೆ ಊಟಕ್ಕೆ ಹೋಗ್ತಾರೆ. ಮೊದಲು ಬುಧನಿಗೆ ಹೇಳಿಗೆ ಮಾಡಿದ್ರಿಂದ ಬುಧನು ರವಿಯ ಮನೆಗೆ ಬೆಳ್ಳಂ ಬೆಳಗ್ಗೆಯೇ ಹೋಗಿದ್ದ.ಶುಕ್ರ ಬರುವಾಗ ಸ್ವಲ್ಪ ತಡವಾಯ್ತು. ಇನ್ನೇನು ಶುಕ್ರನು ರವಿಯಣ್ಣನ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಗುಡುಗು ಸಿಡಿಲು ಎದ್ದಿತು. ಮನೆಯೊಳಗೆ ಬರುತ್ತಲೇ ಮುಸಲಧಾರೆಯೇ ಸುರಿಯಿತು. ಕುಂಭದ್ರೋಣ ಮಳೆಯೇ ಸುರಿಯಿತು.
ಕೋಪಗೊಂಡ ಶುಕ್ರನು ರವಿಗೆ ,'ಮೋಸಗಾರ ಕಣಯ್ಯ ನೀನು.ಬುಧನಿಗೆ ಹೇಳಿಗೆ ಮಾಡಿ," ನಾನು ಹೇಳಿಗೆಯೇ ಮಾಡಿಲ್ಲ" ಎಂದು ಸುಳ್ಳು ಹೇಳಿದ್ದಿ ನೀನು.ನಾನು ಈಗಲೆ ಹೊರಡುತ್ತೇನೆ' ಎಂದು ಹೊರಡಲು ತಯಾರಾದ. ಆಗ ಎಲ್ಲಾ ಗ್ರಹರು ಬಂದು,"ಅಯ್ಯಾ ಬುಧ ಶುಕ್ರರೇ,ನೀವು ಜತೆಗಿರದೆ ಇದ್ರೆ ಮಳೆ ಬರಲಾರದು ಎಂದು ಗೊತ್ತಿದೆ ನಿಮಗೆ.ಇದರಿಂದ ಪ್ರಜೆಗಳು ನಾಶವಾಗಿ ಹೋದರೆ ನಮಗೆ ಹವಿಸ್ಸು ನೀಡುವವರಾರು? ನಾವಿದ್ದೂ ಪ್ರಯೊಜನ ಉಂಟಾ? ನಿಮ್ಮ ಕಲಹದಿಂದ ರವಿಯಣ್ಣ ಏನಾದರೂ ಮುನಿಸಿಕೊಂಡರೆ ನಿಮ್ಮ ಆಟವೂ ಮುಗಿದಂತೆ. ಎಂದರು. ನಂತರ ಗುರುವು ಈ ಬುಧ ಶುಕ್ರರಿಗೆ 'ಮುಂದೆ ನೀವುಗಳು ರವಿಯಣ್ಣನ ಮನೆಯಿಂದ ನಲವತ್ತು ಅಡಿ(40°) ಗಿಂತ ದೂರ ಹೋದರೆ ನಿಮಗೆ ನಮ್ಮೆಲ್ಲರ ಶಾಪ ಇದೆ.ಈಗಾಗಲೇ ಮಾಡಿದ ತಪ್ಪಿಗೆ ನಿಮಗೆ ವರ್ಷವರ್ಷವೂ ಅಸ್ತರಾಗುವ ಯೋಗವೂ ಬಂದು ಹೋಗಲಿ" ಎಂದು ಗುರುವು ಹೇಳಿದ.ಕೊನೆಗೆ ಎಲ್ಲವೂ ರಾಜಿಯಲ್ಲಿ ಸುಖಾಂತ್ಯವಾಯ್ತಂತೆ.
ಈಗಲೂ ರವಿಯಿಂದ ಹೆಚ್ಚೆಂದರೆ ಎರಡು ಮನೆಯ ದೂರದಲ್ಲಿ ಈ ಗ್ರಹರು ಇರುತ್ತಾರೆ.ಅದಕ್ಕಿಂತ ದೂರ ಹೋಗಲ್ಲ.ವರ್ಷದಲ್ಲಿ ಇವರಿಗೆ ಅಸ್ತರಾಗುವಂತಹ ಯೋಗಗಳೂ ಇವೆ. ಈ ಕಥೆಗಳು ಕೇಳಲು ಕುತೂಹಲವಾಗಿದ್ದರೂ ಇದೊಂದು ವಾಸ್ತವತೆಯ ಸತ್ಯವನ್ನು ತಿಳಿಸುತ್ತದೆ.
ಪ್ರಕಾಶ ಅಮ್ಮಣ್ಣಾಯ
No comments:
Post a Comment
If you have any doubts. please let me know...