March 28, 2021

'ವಿಷ'ಯ


ಒಂದು ದಿನ ಸಾಕ್ರಟಿಸ್ ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ, ‘ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿನಗೆ ಗೊತ್ತಿದೆಯಾ?’ ಎಂದು ಕೇಳಿದ.
ಅದಕ್ಕೆ ಸಾಕ್ರಟಿಸ್, "ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ.
ಅದಕ್ಕೆ ಆತ ಒಪ್ಪಿಕೊಂಡ.
‘ಮೊದಲ ಹಂತ ಅಂದ್ರೆ ಸತ್ಯ. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?’ ಎಂದ ಸಾಕ್ರಟೀಸ್.
ಅದಕ್ಕೆ ಸ್ನೇಹಿತ ‘ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ’ ಎಂದ.
ಅವನ ಮಾತಿಗೆ ಸಾಕ್ರಟಿಸ್, ‘ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.
ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ. ಇದು goodness ಪರೀಕ್ಷೆ.
ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ.
ಅದಕ್ಕೆ ಸ್ನೇಹಿತ, ‘ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ’ ಎಂದ.
‘ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು. ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ. ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್.
ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.
ಸಾಕ್ರಟಿಸ್ ಮುಂದುವರಿಸಿದ ‘ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’
ಅದಕ್ಕೆ ಸ್ನೇಹಿತ, ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.
ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-‘ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ? ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು" ಎಂದು ಹೇಳಿದರು.
ಈ ದೃಷ್ಟಾಂತದ ಮೂಲಕ ಹೇಳಬಯಸುವುದೇನೆಂದರೆ...
ಸ್ನೇಹಿತರೆ,
ಪ್ರತಿ ನಿತ್ಯ ಸಾಕ್ರೆಟಿಸ್‌ನಿಗೆ ಅವನ ಸ್ನೇಹಿತ ಹೇಳಲು ಬಂದಂತೆ ನಮಗೆಲ್ಲರಿಗೂ ನಮ್ಮ ಸ್ನೇಹಿತರು ಹಲವಾರು ವಿಷವಾಗುವ ವಿಷಯವನ್ನು ತರುತ್ತಿರುತ್ತಾರೆ. ಅದು ಎಷ್ಟು ಅವಶ್ಯಕ ಎಂಬುದನ್ನು ಅರಿತು ಆಲಿಸಬೇಕು. ಹಾಗೆಯೇ ನೀವು ಇನ್ನೊಬ್ಬರಿಗೆ ಮುಟ್ಟಿಸಬೇಕೆನ್ನುವ 'ವಿಷ'ಯ 'ವಿಷ'ವಾಗದಿರುವಂತೆ ಎಚ್ಚರ ವಹಿಸಬೇಕು. ಏಕೆಂದರೆ ಸಂಬಂಧಗಳು ಬಹಳ ಮುಖ್ಯ.
✍ ಚನ್ನೇಶಶಾಸ್ತ್ರಿಗಳು

No comments:

Post a Comment

If you have any doubts. please let me know...