ವೇದಗಳನ್ನು ವಿಂಗಡಿಸಿ ವೇದವ್ಯಾಸರಾದ ಕೃಷ್ಣ ದ್ವೈಪಾಯನರು, ಗಣೇಶನೊಂದಿಗೆ ಬರೆಯಲು ಕುಳಿತಿದ್ದು ಬರಿ ಮಹಾಕಾವ್ಯವಷ್ಟೇ ಅಲ್ಲ, ಕಲಿಯುಗಕ್ಕೂ ಅನ್ವಯಿಸುವಂಥ ಜೀವನ ಪಾಠಗಳನ್ನು.
ಮಹಾಭಾರತದ ಮಹಾಕಾವ್ಯವನ್ನು ಯುಗಗಳ ಹಿಂದೆ ಬರೆಯಲಾಗಿತ್ತಾದರೂ, ನಿರಂತರವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಲೇ ಸಾಗಿ ಇಂದಿನ ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.
ಮಹಾಭಾರತದ ಒಂದೊಂದು ಪಾತ್ರವೂ ಒಂದೊಂದು ಪಾಠ ಕಲಿಸಿದರೆ, ಪ್ರತಿ ಪ್ರಸಂಗದಿಂದ ಕಲಿಯಬೇಕಾದ್ದು ಕೂಡ ಇದೆ. ಕೆಲವು ಪಾತ್ರ-ಸನ್ನಿವೇಶಗಳು ವೈಪರಿತ್ಯಗಳಿಂದ ಕೂಡಿದ್ದಾದರೂ ಅದರಲ್ಲಿ ನಾವು ಕಲಿಯಬೇಕಾದ್ದೇನೆಂಬುದಷ್ಟೇ ಮುಖ್ಯ. ಈ ಮಹಾಕಾವ್ಯದಲ್ಲಡಗಿರುವ ಸಾತ್ವಿಕ-ತಾತ್ವಿಕ ವಿಚಾರಗಳು ನಮಗೆ ಜೀವನ ಪಾಠಗಳೇ.
1. ಪ್ರತೀಕಾರದ ಪ್ರವೃತ್ತಿ ವಿನಾಶಕ್ಕೆ ಕಾರಣ:
ಮಹಾಭಾರತವು ಧರ್ಮ-ಅಧರ್ಮಗಳ ಸುತ್ತ ಸುತ್ತುತ್ತದೆ. ಆದರೆ ಎಲ್ಲರ ನಾಶದ ಹಿಂದಿನ ಪ್ರಮುಖ ಕಾರಣ ಪ್ರತೀಕಾರ ಎಂಬ ಅಂಶ ಎದ್ದು ಕಾಣುತ್ತದೆ. ಪಾಂಡವರನ್ನು ಹಾಳುಮಾಡುವ ಕುರುಡು ಬಯಕೆಯಿಂದ, ಕೌರವರು ಎಲ್ಲವನ್ನೂ ಕಳೆದುಕೊಂಡರು. ದ್ರೌಪದಿಯ ಐದು ಗಂಡು ಮಕ್ಕಳು ಮತ್ತು ಅಭಿಮನ್ಯು ಸೇರಿದಂತೆ ಅಮಾಯಕ ಮಕ್ಕಳನ್ನು ಸಹ ಯುದ್ಧವು ಬಿಡಲಿಲ್ಲ.
2. ಸ್ನೇಹದ ಶಾಶ್ವತ ಬಂಧ :
ಕೃಷ್ಣ ಮತ್ತು ಅರ್ಜುನರ ನಡುವಿನ ಸ್ನೇಹವು ಅತ್ಯಪೂರ್ವವಾದುದು. ಕೃಷ್ಣನ ಪ್ರತಿಫಲಾಪೇಕ್ಷೆಯಿಲ್ಲದ ಬೆಂಬಲ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದಾಗಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಜಯಿಸಿದ್ದರು. ಮತ್ತೊಂದೆಡೆ, ಕರ್ಣ ಮತ್ತು ದುರ್ಯೋಧನರ ನಡುವಿನ ಸ್ನೇಹವು ಕಡಿಮೆ ಸ್ಪೂರ್ತಿದಾಯಕವಲ್ಲ. ಭಾನುಮತಿ-ಕರ್ಣರ ಪಗಡೆಯಾಟದ ಸಂದರ್ಭದಲ್ಲಿ ದುರ್ಯೋಧನ ತನ್ನ ಮಿತ್ರನ ಮೇಲೆ ತೋರಿದ ನಂಬಿಕೆ, ಸ್ನೇಹಕ್ಕೆ ಮತ್ತೊಂದು ಆಯಾಮವನ್ನೇ ನೀಡಿತು.
3. ಧರ್ಮವನ್ನು ಪಾಲಿಸಿ; ಧರ್ಮದ ರಕ್ಷಣೆಗಾಗಿ ಅಗತ್ಯಬಿದ್ದರೆ ನಿಮ್ಮವರೊಂದಿಗೂ ಹೋರಾಡಿ:
ಅರ್ಜುನನು ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ತನ್ನ ಸಂಬಂಧಿಗಳ ವಿರುದ್ಧ ಯುದ್ಧ ಮಾಡಲು ಹಿಂಜರಿಯುತ್ತಿದ್ದನು. ಆದರೆ ಕೃಷ್ಣನು ಅವನಿಗೆ ಕರ್ತವ್ಯ ಎಂದು ನೆನಪಿಸಿದನು. ಆದ್ದರಿಂದ ಅರ್ಜುನನು ಧರ್ಮದ ಮಹಾನ್ ಯೋಧನಾಗಿ ತನ್ನ ಜವಾಬ್ದಾರಿಯನ್ನು ಪೂರೈಸಬೇಕಾಯಿತು.
4. ನಾವು ಧರ್ಮದ ಜೊತೆಗಿದ್ದರೆ, ಪರಮಾತ್ಮನೇ ನಮ್ಮ ಜೊತೆಗಿರುವನು:
ಕೌರವರು ಏನೇ ಷಡ್ಯಂತ್ರ ಮಾಡಿದರೂ ಪಾಂಡವರು ವಿಚಲಿತರಾಗಿ ಧರ್ಮ ಬಿಡಲಿಲ್ಲ. ಚಿಕ್ಕಂದಿನಲ್ಲೇ ಭೀಮನನ್ನು ಕೊಲ್ಲಲು ಮಾಡಿದ ಸಂಚುಗಳು, ಲಕ್ಶ್ಯಾಗೃಹ ಕಟ್ಟಿ ಅದರಲ್ಲಿ ಪಾಂಡವರನ್ನು ಸುಡಲು ನೋಡಿದ್ದು, ದ್ಯೂತದಲ್ಲಿ ಮೋಸದಿಂದ ರಾಜ್ಯ ಕದ್ದು, ತುಂಬಿದ ಸಭೆಯಲ್ಲಿ ಅವಮಾನಮಾಡಿ, ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸಿ, ಪಾಂಡವರನ್ನು ೧೨ ವರ್ಷಗಳ ಕಾಲ ಕಾಡಿಗಟ್ಟಿ, ಅಲ್ಲೂ ಬಿಡದೆ ಹಿಂಬಾಲಿಸಿ ನಾನಾ ಕಷ್ಟಗಳನ್ನು ಕೊಟ್ಟು, ೧೩ ವರ್ಷಗಳ ನಂತರ ನ್ಯಾಯವಾಗಿ ಹಿಂತಿರುಗಿಸಬೇಕಿದ್ದ ರಾಜ್ಯವನ್ನೂ ಕೊಡದೆ ಸತಾಯಿಸಿ, ಕಡೆಗೆ ೫ ಹಳ್ಳಿಗಳನ್ನೂ ಕೊಡದೆ ಯುದ್ಧಕ್ಕೆ ನಿಂತರೂ ಪಾಂಡವರು ಯಾವಾಗಲೂ ಧರ್ಮ ಬಿಡಲಿಲ್ಲ. ಅಂತೆಯೇ ಶ್ರೀಕೃಷ್ಣ ಪರಮಾತ್ಮ ಕೂಡ ಸದಾ ಪಾಂಡವರ ತಲೆಕಾಯ್ದ.
6. ಅರ್ಧ ಜ್ಞಾನವು ಅಪಾಯಕಾರಿ:
ಅರ್ಧ ಜ್ಞಾನವು ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಜುನನ ಮಗ ಅಭಿಮನ್ಯು ನಮಗೆ ಕಲಿಸುತ್ತಾನೆ. ಅಭಿಮನ್ಯುವಿಗೆ ಚಕ್ರವ್ಯೂಹ ಪ್ರವೇಶಿಸುವುದು ಹೇಗೆಂದು ತಿಳಿದಿದ್ದರೂ, ಹೊರಬರುವ ದಾರಿ ತಿಳಿದಿರಲಿಲ್ಲ. ಹೀಗಾಗಿ ಅರ್ಧ ಜ್ಞಾನ ಅಪಾಯಕಾರಿ.
7. ಇತರರು ಎಷ್ಟೇ ಪ್ರೇರೇಪಿಸಿದರೂ ದುರಾಸೆಗೆ ಒಳಗಾಗಬಾರದು:
ಪರರ ಉತ್ತೇಜನಕ್ಕೆ ಕಟ್ಟುಬಿದ್ದು ದುರಾಸೆಗೊಳಗಾದ ಯುಧಿಷ್ಠಿರನಿಗೆ ಸಿಕ್ಕಿದ್ದೇನು? ಶಕುನಿ-ದುರ್ಯೋಧನರ ಮೋಸದಿಂದ ನೀಡಿದ ಉತ್ತೇಜನಕ್ಕೆ ಬಲಿಪಶುವಾಗಿ ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ, ಕಡೆಗೆ ಸಹೋದರರನ್ನೂ, ಪತ್ನಿಯನ್ನೂ ಪಣಕ್ಕಿಟ್ಟು ಸೋತ. ದುರಾಸೆ ಕೆಡುಕಿಗೆ ರಹದಾರಿ.
8. ಜೀವನದುದ್ದಕ್ಕೂ ಕಲಿಯುವುದು ನಿಮಗೆ ನೀವೇ ನೀಡುವ ಅತ್ಯುತ್ತಮ ಕೊಡುಗೆ:
ಅರ್ಜುನ ಶ್ರೇಷ್ಠ ಧನುರ್ಧರನಾದರೂ, ಜೀವನದುದ್ದಕ್ಕೂ ಕಲಿಯುತ್ತಲೇ ಸಾಗಿದ. ಕಲಿಕೆಯ ಬಗ್ಗೆ ಅರ್ಜುನನಿಗಿದ್ದ ಈ ಆಸಕ್ತಿಯಿಂದಲೇ ದ್ರೋಣರ ಆತ್ಮೀಯ ಶಿಷ್ಯನಾದ ಮತ್ತು ಶ್ರೀಕೃಷ್ಣನ ಆಪ್ತನಾದ.
9. ಸುಳ್ಳು ಹೇಳಿ ಸಂಪಾದಿಸಿದ್ದು ಕಡೆಗೆ ದಕ್ಕುವುದಿಲ್ಲ: ಪರಶುರಾಮರಲ್ಲಿ ನಿಜವನ್ನು ಮುಚ್ಚಿಟ್ಟು ಪಡೆದ ಅಸ್ತ್ರಗಳೆಲ್ಲ ಕಡೆಗೆ ಕರ್ಣನಿಗೆ ದಕ್ಕದೇ ಹೋದವು. ಗುರುಗಳ ಕೆಂಗಣ್ಣಿಗೆ ಗುರಿಯಾದ ಕರ್ಣ, ಕೊನೆಗಾಲದಲ್ಲಿ ಅಸ್ತ್ರಗಳ ಮಂತ್ರವೇ ನೆನಪಿಗೆ ಬಾರದಿರುವಂತಾಗಿ, ಅವನ ಅವನತಿಗೆ ಕಾರಣವಾಯಿತು.
10. ಯಾರು ಏನೇ ಕೇಳಿದರೂ ಯೋಚಿಸಿ ನೀಡಬೇಕು: ದಾನಶೂರನೆಂದೇ ಹೆಸರವಾಸಿಯಾಗಿದ್ದ ಕರ್ಣ, ಯಾರು ಏನೇ ಕೇಳಿದರೂ ಹಿಂದೆ ಮುಂದೆ ಯೋಚಿಸದೆ ದಾನ ಮಾಡಿಬಿಡುತ್ತಿದ್ದ, ಕಡೆಗೆ ಇದು ಕರ್ಣನಿಗೇ ಮಾರಕವಾಯಿತು. ಕಡೆಗೆ ಜನ್ಮದಿಂದ ಬಂದಿದ್ದ ಕವಚ-ಕುಂಡಲಗಳನ್ನೂ ಇಂದ್ರನಿಗೆ ದಾನಮಾಡಿ, ಬೇರಾರಿಗೂ ಇಲ್ಲದ ವಿಶೇಷವೊಂದನ್ನು ಕಳೆದುಕೊಂಡ. ಹೀಗೆ ಯಾರೇನೇ ಕೇಳಿದರೂ, ಯಾಚಕರಿಗೆ ಆ ವಸ್ತುವಿನ ಅವಶ್ಯಕತೆ ನಿಜವಾಗಿ ಇದೆಯೇ, ಮತ್ತು ದಾನ ಮಾಡುವುದರಿಂದ ತನಗಾಗುವ ನಷ್ಟವೇನೆಂದು ಎಂದು ಕೂಲಂಕುಷವಾಗಿ ಪರಿಶೀಲಿಸಿ ನಂತರ ನೀಡಬೇಕು.
11. ಪ್ರತಿಜ್ಞೆ, ವಚನಗಳನ್ನು ಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿ ನಡೆಯುವುದು:
ಭೀಷ್ಮ ಪಿತಾಮಹರು, ಮಹಾನ್ ತ್ಯಾಗಿಗಳು. ತಮ್ಮ ಪರಿವಾರ ಮತ್ತು ಇಷ್ಟ ಜನರ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದ ಜೀವ ಮತ್ತು ಕೊಟ್ಟ ಮಾತು, ಮಾಡಿದ ಪ್ರತಿಜ್ಞೆಗೆ ಸದಾ ಬದ್ಧರಾಗಿದ್ದರು. ಕಡೆಗೆ ಈ ಪ್ರತಿಜ್ಞೆ, ವಚನ , ತ್ಯಾಗಗಳೇ ಅವರನ್ನು ಧರ್ಮದ ಮತ್ತು ಪರಮಾತ್ಮನ ವಿರುದ್ಧವೇ ಸೆಣೆಸುವಂತೆ ಮಾಡಿತು. ಯಾವ ಹಸ್ತಿನಾಪುರದ ಪರಿವಾರದ ರಕ್ಷಣೆಗೆ ಪಣತೊಟ್ಟು ನಿಂತಿದ್ದರೋ, ಅದೇ ಪರಿವಾರದ ಅವನತಿ ನೋಡಬೇಕಾಯಿತು.
ನಾವೂ ಕೂಡ ಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ನಮಗೆ ನಾವೇ ಹಾಕಿಕೊಂಡ ನಿಯಮಗಳನ್ನು ಬದಲಾಯಿಸುವ ಅವಶ್ಯಕತೆಯಿದ್ದರೆ, ಅದರಿಂದ ಒಳಿತಾಗಿವುದಾದರೆ ಬದಲಾಯಿಸಿಕೊಂಡು ನಡೆಯಬೇಕು.
12. ಅಡುಗೆ, ಮನೆಕೆಲಸ ಕಲಿತಿರಬೇಕು; ಸಮಯ ಬಂದಾಗ ಉಪಯೋಗವಾಗುತ್ತೆ:
ಪಾಂಡವರು ವನವಾಸದ ನಂತರ, ಅಜ್ಞಾತವಾಸದಲ್ಲಿ ವಿರಾಟರಾಜನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯುಧಿಷ್ಠಿರ ವಿರಾಟನ ಆಪ್ತನಾಗಿಯೂ, ಭೀಮ ಅಡುಗೆಯವನಾಗಿಯೂ, ಅರ್ಜುನ ಉತ್ತರೆಗೆ ನಾಟ್ಯಗುರುವಾಗಿಯೂ, ದ್ರೌಪದಿ ರಾಣಿಯ ದಾಸಿಯಾಗಿಯೂ, ನಕುಲ, ಸಹದೇವರು ಗೋ-ಅಶ್ವಗಳ ಆರೈಕೆ ಮಾಡುವಲ್ಲಿ ನಿರತರಾದರು. ಈ ಕೆಲಸಗಳೆಲ್ಲ ಅವರು ಮೊದಲೇ ಕಲಿತದ್ದರಿಂದ, ನಿರ್ವಹಣೆ ಸುಲಭವಾಯಿತು.
13. ಜೀವನದಲ್ಲಿ ಮಹಿಳೆಯರ ಪ್ರಾಮುಖ್ಯತೆ: ಮಹಾಭಾರತದಲ್ಲಿ ಸ್ತ್ರೀ ಪಾತ್ರಗಳಿಗೆ ತಮ್ಮದೇ ಆದ ಮಹತ್ವವಿದೆ. ಶಂತನುವನ್ನು ವರಿಸಿದ ಗಂಗಾಮಾತೆ ಮತ್ತು ಸತ್ಯವತಿಯರ ಕರ್ತವ್ಯಪ್ರಜ್ಞೆ, ಅಂಬೆಯ ತನಗಾದ ಅನ್ಯಾಯದ ವಿರುದ್ಧ ಪ್ರತೀಕಾರ ಸ್ವಭಾವ, ಅಂಧ ಧೃತರಾಷ್ಟ್ರನನ್ನು ಪತಿಯಾಗಿ ಸ್ವೀಕರಿಸಿದ ಗಾಂಧಾರಿಯ ತ್ಯಾಗ, ಎಂಥಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಧೃತಿಗೆಡದ ಕುಂತಿಯ ಸಹನೆ, ದ್ರೌಪದಿಯ ಛಲ, ಸ್ತ್ರೀ ಸಹಜ ವಿವಿಧ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ಇವೆಲ್ಲಾ ಸ್ತ್ರೀಯರಿಗಿರುವ ಮಹತ್ವದ ಕೈಗನ್ನಡಿ. 'ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ' ಎಂಬುದಕ್ಕೆ ಪೂರಕ ದ್ರೌಪದಿಯ ಪಾತ್ರ. ದ್ರೌಪದಿಗೆ ಅವಮಾನ ಮಾಡಿದ, ಕಿರುಕುಳ ಕೊಟ್ಟ ಎಲ್ಲರೂ ದುರಂತ ಅಂತ್ಯ ಕಂಡಿದ್ದೇ ಇದಕ್ಕೆ ಸಾಕ್ಷಿ. "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ, ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ಮನುಸ್ಮೃತಿ ತಿಳಿಸುತ್ತದೆ.
ಹೀಗೆ, ಅನೇಕ ಜೀವನ ಮೌಲ್ಯಗಳನ್ನು ಇಂದಿಗೂ ಅನ್ವಯಿಸುವಂತೆ ತಿಳಿಸಿಕೊಟ್ಟ ಶ್ರೀ ವೇದವ್ಯಾಸರಿಗೆ ನಮನಗಳು.
💙💙ಕೃಷ್ಣo ವoದೇ ಜಗದ್ಗುರುo💙💙
✍️ಶ್ರೀಕಾಂತ್ ನಾರಾಯಣ್
No comments:
Post a Comment
If you have any doubts. please let me know...